ನಿನ್ನ ಪ್ರೀತಿಯಲ್ಲಿ ಯಾವಾಗ ಮುಳುಗಿ ಹೋದೆನೋ ಗೊತ್ತೇ ಆಗಲಿಲ್ಲ: ದಿನೇಶ್‌ ಉಡಪಿ

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ

ನಲ್ಮೆಯ ಗೆಳೆಯ,
ಸುಮಾರು ದಿನಗಳಿಂದ ಹಗಲು ರಾತ್ರಿಗಳ ಪರಿವೆಯಿಲ್ಲದೇ, ಹೇಳಬೇಕೋ ಬೇಡವೋ? ಎಂಬ ತೊಳಲಾಟದಲ್ಲಿ ಬಳಲಿ, ಹೇಳಲೇಬೇಕಾದದ್ದು ಏನಾದರೂ ಇದೆಯಾ? ಹೇಳಲೇ ಬೇಕಾ? ಹೇಳಿದರೆ ಏನಾಗಬಹುದು? ಹೇಳದೆ ಇದ್ದರೆ ಏನಾಗಬಹುದು? ನಾನೀಗ ಹೇಳಬೇಕಾಗಿದೆಯಾ? ಅಥವಾ ಕೇಳಬೇಕಾಗಿದೆಯಾ? ಎಂಬ ಉತ್ತರವೇ ಇಲ್ಲದ ಪ್ರಶ್ನೆಗಳ ಕಾಡಲ್ಲಿ ಸಿಲುಕಿ, ದಿಕ್ಕು ತಪ್ಪಿ ಕೊನೆಗೆ ಏನಾದರೂ ಆಗಲಿ, ಆಗದೆ ಆದರೂ ಇರಲಿ ಎಂಬ ನಿರ್ಧಾರಕ್ಕೆ ಬಂದು, ನಡುಗುವ ಕೈಗಳಿಂದ ಈ ಪತ್ರ ಬರೆಯುತ್ತಿದ್ದೇನೆ.

ನಮ್ಮಿಬ್ಬರ ಭೇಟಿ ಮೊದಲು ಆಗಿದ್ದು ಎಲ್ಲಿ? ಕಾಲೇಜಿನ ಅಡ್ಮಿಶನ್‌ ಸಮಯದಲ್ಲಾ? ಲೈಬ್ರರಿಯಲ್ಲಾ? ಕಾಲೇಜಿನ ಕ್ಯಾಂಟೀನಿನಲ್ಲಾ? ಬಹಳ ಸಾರಿ ನೆಪಿಸಿಕೊಳ್ಳಲು ಪ್ರಯತ್ನಿಸಿ ಸೋತಿದ್ದೇನೆ. ಆದರೆ ಮೊದಲ ಬಾರಿ ನಿನ್ನನ್ನು ಗಮನಿಸಿದ್ದು ಮಾತ್ರ ಸ್ಫುಟವಾಗಿ ನೆನಪಿದೆ. ಡಿಗ್ರಿಯ ಎರಡನೆ ವರ್ಷದ ಪ್ರಾರಂಭದಲ್ಲೇ ಕಾಲೇಜಿನಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ.

ಎರಡನೇ ವರ್ಷದಲ್ಲಿ ವಲಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು, 12 ಜನರ ತಂಡ ಕಾಲೇಜಿನಿಂದ ಒಂದೇ ವ್ಯಾನಿನಲ್ಲಿ ಕಾರವಾರಕ್ಕೆ ಹೋಗಿದ್ದು, ಆ ದಿನ ರಾತ್ರಿ ಮರೈನ್‌ ಇನ್ಸಟಿಟ್ಯೂಟ ಹಿಂದಿನ ಸಮುದ್ರ ತೀರದಲ್ಲಿ ಕ್ಯಾಂಪ್‌ ಫೈರ್‌ ಹಾಕಿಕೊಂಡು ಎಲ್ಲರೂ ಹರಟೆ, ನಗು ಹಾಡಿನಲ್ಲಿ ಮುಳುಗಿದ ಸಮಯ. ತುಂಬು ಬೆಳದಿಂಗಳಿನ ಆ ರಾತ್ರಿಯಲ್ಲಿ ನೀನು ಮಾತ್ರ ತೆರೆಗಳಿಗೆ ಎದುರಾಗಿ ಸ್ವಲ್ಪ ದೂರದಲ್ಲಿ ಒಬ್ಬನೇ ಕೂತಿದ್ದೆ. ನನ್ನ ಜೀವನದಲ್ಲಿಯೇ ಅತ್ಯಂತ ಧೈರ್ಯದ ಕೆಲಸ ಮಾಡಿ ನೀನು ಕೂತಲ್ಲಿ ಬಂದು ನಿನ್ನನ್ನು ಮೊಟ್ಟ ಮೊದಲ ಬಾರಿಗೆ ಮಾತನಾಡಿಸಿದ್ದೆ. ಎರಡಡಿ ದೂರದಲ್ಲಿ ಅಲೆಗಳನ್ನೇ ನೋಡುತ್ತಾ ಕೂತಾಗ ಮಾತುಗಳು ಶುರುವಾದದ್ದು, ಸಾಹಿತ್ಯ, ಸಂಗೀತ, ಸಿನಿಮಾ, ಅಡುಗೆ, ಅಮ್ಮ, ಅಪ್ಪ, ತಂಗಿ, ನಮ್ಮೂರು, ನಿಮ್ಮೂರು, ಅಜ್ಜಿ ಮನೆ, ನಿನ್ನ ವಿಜ್ಞಾನ, ನನ್ನ ಇತಿಹಾಸ ಏನೇನೆಲ್ಲ ಮಾತನಾಡಿದೆವೋ. ಸಾಗರದಾಳದ ಜೀವ ಜಗತ್ತು, ಮರಿಯಾನಾ ಟ್ರೆಂಚ್‌ ಅಂತ ನೀನು ಏನೇನೋ ಹೇಳುತ್ತಾ ಇದ್ದಾಗ ʼʼಇಸ್‌ ರಾತ್‌ ಕಿ ಸುಬಹ ನಹೀʼ ಅಂತ ಮನ ಗುನುಗುಡುತ್ತಿತ್ತು. ಅಂದು ಬೆಳದಿಂಗಳ ರಾತ್ರಿಯಲ್ಲಿ ನಿನ್ನೊಂದಿಗೆ ಕುಳಿತು ಅಲೆಗಳನ್ನು ನೋಡುತ್ತಾ ಕಳೆದ ಆ ಘಳಿಗೆ, That was the best moment of my life.

ಅಂದಿನಿಂದ ಪ್ರತಿದಿನ ಕಾಲೇಜಿಗೆ ಬರುತ್ತಿದ್ದುದೇ ನಿನ್ನನ್ನು ನೋಡಲು. ನನ್ನ ಕ್ಲಾಸಗಳೆಲ್ಲವೂ ಬೇಗನೇ ಮುಗಿದರೂ, ನಿನ್‌ ಕೆಮಿಸ್ಟ್ರಿ, ಫಿಸಿಕ್ಸ ಲ್ಯಾಬ್‌ ಮುಗಿಯುವವರೆಗೂ ಕಾಯಲು ನೆಪ ಬೇಕಾಗುತ್ತಿತ್ತು. ಲೈಬ್ರರಿಯಲ್ಲಿ ಕೂಡಲು ಶುರು ಮಾಡಿದೆ, ನಿನ್ನ ಸಹವಾಸ ದೋಷದಿಂದ ಯಂಡಮೂರಿ, ಕೆ.ಟಿ.ಗಟ್ಟಿಯಿಂದ ಶುರು ಮಾಡಿ, ಭೈರಪ್ಪ, ಶಿವರಾಮ ಕಾರಂತ, ಕುವೆಂಪುರವರನ್ನ ಓದಿದ್ದಾಗಿತ್ತು. ಮಲೆಗಳಲ್ಲಿ ಮದುಮಗಳು ಕಾದಂಬರಿಯ ಚಿನ್ನಮ್ಮ ನಾನು, ಮುಕುಂದಯ್ಯ ನೀನು ಎಂದು ಕನಸು ಕಾಣುತ್ತಾ ಕೂಡುವುದೇ ಒಂದು ಗೀಳಾಗಿ ಹೋಗಿತ್ತು.
ನಿನ್ನ ಪ್ರೀತಿಯಲ್ಲಿ ಯಾವಾಗ ಮುಳುಗಿ ಹೋದೆನೋ ಗೊತ್ತೇ ಆಗಲಿಲ್ಲ. ಯಾವ ಕಾರಣಕ್ಕಾಗಿ ನಿನ್ನನ್ನು ಇಷ್ಟೊಂದು ಹಚ್ಚಿಕೊಂಡೆ? ಎಂದು ಬಹಳ ಸಲ ತಲೆ ಕೆಡಿಸಿಕೊಂಡಿದ್ದೇನೆ. ಇಷ್ಟ ಪಡದೇ ಇರಲು ನಿನ್ನಲ್ಲಿ ಯಾವ ಕಾರಣಗಳೂ ಇಲ್ಲ ಎಂಬುದೇ ಸತ್ಯ.

ಅದರ ಮುಂದಿನ ವರ್ಷ ನನ್ನ ಪಾಲಿಗೆ ಸುಂದರ ಮತ್ತು ಭೀಕರ. ಪ್ರತಿದಿನ ನಿನ್ನನ್ನು ನೋಡಲೇ ಬೇಕು, ಮಾತಾಡಲೇ ಬೇಕು. ಭೇಟಿಯಾದ ಗಳಿಗೆಗಳು ಕ್ಷಣದಂತೆ ಕಳೆದು ಹೋಗುತ್ತಿತ್ತು. ಸಂಜೆ, ರಾತ್ರಿಗಳ ಅಸಮಾಧಾನ, ಚಡಪಡಿಕೆ ಅಸಹನೀಯವಾಗುತ್ತಿತ್ತು. ಹಗಲು ರಾತ್ರಿ ಮನದಲ್ಲಿ ನೀನೆ ತುಂಬಿದ್ದರೂ, ಬಹಳಷ್ಟು ರಾತ್ರಿಯ ಕನಸುಗಳಲ್ಲಿ ನಿನ್ನೊಂದಿಗೆ ಕಿತ್ತಾಟ, ಬೆಳಿಗ್ಗೆ ಎದ್ದಾಗ ಮನಸ್ಸು ವ್ಯಾಕುಲವಾಗಿರುತ್ತಿತ್ತು. ನಿನ್ನನ್ನು ಕಂಡಕೂಡಲೇ ಅವೆಲ್ಲವೂ ಮಾಯ. ಸಂತೋಷಕ್ಕೆ ಕಾರಣ ಪ್ರೀತಿಯಾದರೆ, ಸಂಕಟಕ್ಕೆ ಕಾರಣ possessiveness, ಆದರೆ ಈ ಪೊಸೆಸಿವನೆಸ್ಸ ಇಲ್ಲದ ಪ್ರೀತಿ ಅದೆಂತಹ ಪ್ರೀತಿ?

ಕೆಲದಿನಗಳಿಂದ ನೀನಿಲ್ಲದ ಸಮಯದಲ್ಲಿ ಬಹಳಷ್ಟು ವಿಷಯಗಳು ಅರಿವಿಗೆ ಬರುತ್ತಿವೆ, ನನ್ನ ಪ್ರತಿ ಹಾಡನ್ನೂ ಕಣ್ಣು ಮುಚ್ಚಿ ನೀನು ಆನಂದಿಸುತ್ತಾ ಇದ್ದುದು, ಪ್ರತಿ ಸಂಜೆ ನನಗಾಗಿ ನೀನು ಕಾಯುತ್ತಾ ಇದ್ದುದು, ಸಂಜೆ ಗಂಟೆಗಟ್ಟಲೆ ನನ್ನೊಂದಿಗೆ ಹರಟುತ್ತಾ ಕುಳಿತು, ತಡವಾಗಿ ರಾತ್ರಿ ಬಸ್ಸಿಗೆ ನೀನು ಊರಿಗೆ ಹೋಗುತ್ತಾ ಇದ್ದದ್ದು. ಇಷ್ಟೆಲ್ಲಾ ಕಥೆ ಈ ಪತ್ರದಲ್ಲಿ ಏಕೆ? ಎಂದು ನಿನಗೆ ಅನಿಸಬಹುದು, ಕಾರಣ ಇಷ್ಟೆ, ನಿನ್ನೊಂದಿಗೆ ಸಾವಿರ ಸಾವಿರ ಗಂಟೆಗಳಷ್ಟು ಮಾತಾಡಿದ್ದೇನೆ, ಆದರೂ ಯಾವತ್ತೂ ಈ ವಿಷಯಗಳನ್ನು ಹಂಚಿಕೊಡಿರಲಿಲ್ಲ. ನೀನೂ ನನ್ನನ್ನ ಪ್ರೀತಿಸಿದೆಯಾ? ಕೇಳಲೇ ಇಲ್ಲ, ಕೇಳ ಬೇಕೆನಿಸಿಲಿಲ್ಲ, ಈಗ ಕೇಳಬೇಕಾಗಿಯೂ ಇಲ್ಲ.

ನಿನಗೆ ಜೀವನದಲ್ಲಿ ನಿನ್ನದೇ ಆದ ಕನಸುಗಳು ಮತ್ತು ಗುರಿಗಳಿವೆ, ನಿನ್ನದೇ ಆದ ಪರಿಮಿತಿಗಳಿವೆ, ನನ್ನ ಮನಸು ಮತ್ತು ಕನಸುಗಳಲ್ಲಿ ತುಂಬಿರುವುದು ನೀನು ಮಾತ್ರ, ನೀನಿಲ್ಲದ ನಾನು ಮತ್ತು ನನ್ನ ಜೀವನವನ್ನು ಕಲ್ಪಿಸಿಕೊಳ್ಳಲೂ ನನಗೆ ಆಗುತ್ತಿಲ್ಲ. ಆಗುವುದೂ ಇಲ್ಲ, ಈ ಹಂತದಲ್ಲಿ ನಾನಾಗಲೀ, ನೀನಾಗಲೀ ಇದಕ್ಕೆ ಸಂಬಂಧಿಸಿದಂತೆ ಎನೂ ಮಾಡಲು ಆಗುವುದಿಲ್ಲ. ಜೀವನದ ಸ್ಥಿರತೆಯ ಹಂತ ತಲುಪುವವರೆಗೂ ನೀನು ಪಥ ಬದಲಿಸುವುದಿಲ್ಲ. ಕಾಯುವುದು ಮಾತ್ರ ಉಳಿದಿರುವ ಆಯ್ಕೆ, ಕಾಲದ ಪರೀಕ್ಷೆಯ ನಂತರವೂ ಹಾಗೆಯೇ ಉಳಿಯುವ ಭಾವ ನನ್ನದು ಎಂಬ ನಂಬಿಕೆಯಿಂದ, ನನ್ನ ಭಾವನೆಗಳ, ಕನಸುಗಳ, ಪ್ರೀತಿಯ ನೈಜತೆಯನ್ನ ಸಮಯದ ಒರೆಗೆ ಹಚ್ಚುವ ಗಟ್ಟಿ ಮನಸು ಮಾಡಿದ್ದೇನೆ.

ಈ ಪತ್ರ ಬರೆಯುತ್ತಿರುವುದು ನಿನಗೆ ಹೇಳಲೋ? ಅಥವಾ ನನಗೇ ನನ್ನನ್ನು ಸ್ಪಷ್ಟಪಡಿಸಿಕೊಳ್ಳಲೋ? ಗೊತ್ತಿಲ್ಲ. ನೀನು ಎಂದಿಗೂ ನನ್ನವನೇ ಎಂಬ ನಂಬಿಕೆಯಿಂದ, ನಾನು ಹೇಳಬೇಕಾಗಿರುವುದು ಇಷ್ಟೆ, ನಿನಗಾಗಿ ಕಾದಿದ್ದೇನೆ, ಕಾಯುತ್ತಿದ್ದೇನೆ ಮತ್ತು ಕಾಯುತ್ತಾ ಇರುತ್ತೇನೆ. ಅಲ್ಲಿಯವರೆಗೂ ನಾನು ಮತ್ತು ನೀನು ಮಾತ್ರ ಇರುವ ಕನಸುಗಳ ಲೋಕದಲ್ಲಿ ಜೀವಿಸುತ್ತಾ ಕಾಲ ಕಳೆಯುತ್ತೇನೆ. ನಿನ್ನ ಉತ್ತರದ ಬದಲು ನಿನಗಾಗಿಯೇ ಕಾಯುತ್ತಾ ಇರಲಿರುವ,
ಇಂತಿ ನಿನ್ನ ಪ್ರೀತಿಯ…….


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x