ನಿಮ್ಮ ನೋಡಲೆಂದೇ ನಾನು ಚರಂಡಿಗೆ ಬಿದ್ದಿದ್ದು ರೀ..: ನರೇಂದ್ರ ಎಸ್ ಗಂಗೊಳ್ಳಿ.

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ

ನಮಸ್ತೆ ಪ್ರತೀಕ್ಷಾ ಮೇಡಂ,
ನನ್ನ ಪರಿಚಯ ಖಂಡಿತಾ ನಿಮಗೆ ನೆನಪಿರಬಹುದೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಜೀವಮಾನದಲ್ಲಂತೂ ನಿಮ್ಮ ನೆನಪನ್ನು ಬಿಡಲು ಖಂಡಿತಾ ಸಾಧ್ಯವಿಲ್ಲ. ಹಾಗಾಗಿಯೇ ಇದು ನಿಮಗೂ ಗೊತ್ತಿರಲಿ ಅಂತಂದುಕೊಂಡು ಈ ಪ್ರೀತಿಯ ಪತ್ರ ಬರೆಯುತ್ತಿದ್ದೇನೆ. ಅಸಲಿಗೆ ಮೂರು ಕತ್ತೆ ವಯಸ್ಸು ಅಂತಾರಲ್ಲಾ ಅಷ್ಟಾಗುತ್ತಾ ಬಂದರೂ ಮದುವೆ ಅಂದರೆ ದೂರವೇ ನಿಲ್ಲುತ್ತಿದ್ದವನು ನಾನು. ಅದೇಕೋ ಏನೋ ಹೊಸದೊಂದು ಜವಾಬ್ದಾರಿ ಯಾಕೆ ತಗೋ ಬೇಕು? ಈಗಿರುವ ಅದ್ಭುತ ಸ್ವಾತಂತ್ರ್ಯವನ್ನು ಸುಮ್ಮನೆ ಯಾಕೆ ಹಾಳು ಮಾಡಿಕೋಬೇಕು ಎಂದೆಲ್ಲಾ ಅಂದುಕೊಂಡವನು ನಾನು. ಹಾಗಾಗಿಯೇ ಈ ಹಿಂದೆ ಐದಾರು ಹುಡುಗಿಯರು ಸುತ್ತಿ ಬಳಸಿ ನನ್ನ ಹತ್ತಿರ ಬರುವ ಪ್ರಯತ್ನ ಮಾಡಿದ್ದರೂ, ಒಂದಿಬ್ಬರು ನೇರವಾಗಿಯೇ ಆಸಕ್ತಿ ತೋರಿಸಿದ್ದರೂ ಕೂಡ ನಾನು ಬಹುತೇಕ ಅದೆಲ್ಲವನ್ನೂ ವಾರೆಗಣ್ಣಲ್ಲೇ ದೂರ ತಳ್ಳಿ ಬಿಟ್ಟಿದ್ದೆ. ಒಂದಿಬ್ಬರಂತೂ ಸಿಕ್ಕಾಪಟ್ಟೆ ಚಂದ ಇದ್ದಿದ್ದರು. ಮತ್ತು ನನ್ನ ರೇಂಜಿಗೆ ಸ್ವಲ್ಪ ಜಾಸ್ತೀನೇ ಆಯ್ತು ಅಂತ ಕೂಡ ಅನ್ನಿಸಿತ್ತು. ನಿಮಗ್ಗೊತ್ತಾ ಅಂಥವರನ್ನು ನಾನು ಎಷ್ಟು ಬೇಕೋ ಅಷ್ಟೇ ಎನ್ನುವಂತೆ ಮಾತನಾಡಿಸಿ ಏನೋ ಒಂಥರಾ ಗೆಲುವು ಸಿಕ್ಕ ಸಂಭ್ರಮದಲ್ಲಿ ಬೀಗಿದ್ದೆ.

ಇರಲಿ ವಿಷಯಕ್ಕೆ ಬರ್ತೀನಿ. ಎರಡು ವರುಷದ ಹಿಂದೆ ಆವತ್ತು ಮೇ 16 ನೇ ತಾರೀಖು. ಪಕ್ಕದೂರಿನಲ್ಲಿ ಅಂದರೆ ನಿಮ್ಮದೇ ಊರಿನಲ್ಲಿ ಮದುವೆ ಇದ್ದಿತ್ತು. ಅದು ನನ್ನ ಪರಿಚಯದ ಹುಡುಗಿ ನಿಶಿತಾಳ ಮನೆಯಾಗಿತ್ತು. ವೃತ್ತಿ ಬೇರೆಯಾದರೂ ನಾನು ಮದುವೆ ಮನೆಗಳಲ್ಲಿ ಸಂಗೀತ ವಾದ್ಯ ನುಡಿಸಲು ಹೋಗುತ್ತಿದ್ದೆ. ನಮ್ಮ ವಾದ್ಯ ತಂಡದಲ್ಲಿ ನಾನು ಟ್ರಂಪೆಟ್ ಬಾರಿಸುವವನು. ಆವತ್ತು ಮದುವೆ ಮನೆಗೆ ಎಂದಿನಂತೆ ಬೆಳಿಗ್ಗೆ ಏಳೂವರೆಗೆ ನಮ್ಮ ತಂಡದ ಜೊತೆ ಹಾಜರಾದೆ. ನಿಶಿತಾ ಓಡಿ ಬಂದು ಮಾತನಾಡಿಸಿದ್ದಳು. ಖುಷಿಯಾಗಿತ್ತು. ಟ್ರಂಪೆಟ್‍ನಲ್ಲಿ ಒಂದೆರಡು ದೇವರ ಗೀತೆಗಳನ್ನು ನುಡಿಸಿಯಾಗಿತ್ತು. ಮದುವೆ ಮನೆಯಲ್ಲಿ ತುಂಬಾ ಜನ ಅಂತೇನೂ ಇದ್ದಿರಲಿಲ್ಲ. ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಬಂದು ಕೇಳಿದ್ದರು `ಚಾ ಕೊಡುದಾ ಇಡ್ಲಿ ಚಟ್ನಿ ಉಂಟು.’ ಅಂತ. ಅದೆಲ್ಲವೂ ನಮಗೆ ಮಾಮೂಲಿ. ‘ಹೂಂ’ ಅಂತಂದೆವು. ಪಕ್ಕದ ಟೇಬಲ್ಲಿನ ಬಳಿ ಹೋಗಿ ಕುಳಿತ ನಮಗೆ ಒಬ್ಬರು ಪ್ಲೇಟಿನಲ್ಲಿ ಇಡ್ಲಿ ತಂದುಕೊಟ್ಟಿದ್ದರು. ಅಚೀಚೆ ಮಾತನಾಡುತ್ತಿರುವಾಗಲೇ ‘ಚಟ್ನಿ’ ಎನ್ನುವ ಸುಂದರ ಸ್ವರ ಕೇಳಿದಂತಾಗಿ ತಲೆ ಎತ್ತಿ ನೋಡಿದ್ದೆ. ನಿಮ್ಮ ಕೋಲ್ಮಿಂಚಿನ ಕಣ್ಣುಳ್ಳ ಸ್ನಿಗ್ಧ ನಗುವಿದ್ದ ಮುಖ ಕಂಡಿತ್ತು.

ಅದೇಕೋ ಗೊತ್ತಿಲ್ಲ ರೀ. ನೀವು ತಕ್ಷಣ ಇಷ್ಟ ಆಗ್ಬಿಟ್ರಿ. ನಿಮ್ಮ ಅಗಲವಾದ ಕಣ್ಣುಗಳು, ಎತ್ತರದ ನಿಲುವು. ನೀಳವಾದ ಕೈ, ಇಳಿಬಿಟ್ಟ ಕೂದಲು ನೀವು ಧರಿಸಿದ್ದ ಮಾಸಲು ಹಸಿರು ಬಣ್ಣದ ಮಾಮೂಲಿ ಚೂಡಿದಾರ ಎಲ್ಲವೂ ಒಂದೇಟಿಗೆ ಇಷ್ಟವಾಗಿಬಿಟ್ಟಿತ್ತು. ನೀವು ಅಷ್ಟರಲ್ಲಾಗಲೇ ಚಟ್ನಿ ತಟ್ಟೆಗೆ ಹಾಕಿ ಮನೆಯೊಳಗೆ ಹೊರಟಾಗಿತ್ತು. ನೀವು ಮತ್ತೊಮ್ಮೆ ಹೊರಬರಬಹುದು ಎನ್ನುವ ನಿರೀಕ್ಷೆಯಲ್ಲಿ ಬಾಗಿಲ ಕಡೆ ನೊಡುತ್ತಾ ಇಡ್ಲಿ ತಿನ್ನಲಾರಂಭಿಸಿದೆ ಪುಟ್ಟ ಹುಡುಗಿಯೊಬ್ಬಳು ಬಂದು ‘ಅಂಕಲ್ ನೀರು’ ಎಂದು ಚೊಂಬಿನಲ್ಲಿ ನೀರು ಕೊಟ್ಟು ಹೋದಾಗ ನೀನಾದರೂ ಬರಬಾರದಾಗಿತ್ತಾ ನೀರು ಕೊಡಲು ಅಂತಂದುಕೊಂಡೆ. ಚಟ್ನಿ ಅಷ್ಟೇನೂ ಇಷ್ಟವಾಗಿರದಿದ್ದರೂ ಚಟ್ನಿ ಬಡಿಸಲು ನೀನೇ ಬರುತ್ತೀಯ ಎನ್ನುವ ನಿರೀಕ್ಷೆಯಲ್ಲಿ ಸ್ವಲ್ಪ ಚಟ್ನಿ ಬೇಕಿತ್ತು ಅಂತ ಅಲ್ಲೇ ಇದ್ದವರನ್ನು ಕೇಳಿದೆ. ಆದರೆ ಚಟ್ನಿ ತಗೊಂಡು ಬಂದಿದ್ದು ಒಂದು ಅಜ್ಜಿ. ‘ಅವರಜ್ಜಿ’ ಅಂತ ಮನಸೊಳಗೆ ಬಯ್ದುಕೊಂಡರೂ ಅವರ ಕಾಳಜಿಯ ಧ್ವನಿ ಇಷ್ಟವಾಗಿತ್ತು ಕಣ್ರೀ. ಎಷ್ಟಾದರೂ ನಿಮ್ಮ ಅಜ್ಜಿ ಅಲ್ವಾ!

ಮತ್ತೆ ನಮ್ಮ ವಾದ್ಯ ಶುರುವಾಗಿತ್ತು. ಬೆಳಗಿನ ಹೊತ್ತಲ್ಲಿ ಭಕ್ತಿಗೀತೆ ನುಡಿಸುವುದು ಮಾಮೂಲಿ. ನಿನಗೆ ಕೇಳಿಸಲಿ ಹಾಡು ಇಷ್ಟವಾಗಲಿ ಅಂತನ್ನುವ ಕಾರಣಕ್ಕೆ ಬಹಳ ಆಲಾಪನೆಗಳಿದ್ದ ಚಂದದ ಹಾಡನ್ನೇ ನುಡಿಸುತ್ತಿದ್ದೆ. ಅಷ್ಟೂ ಹೊತ್ತು ನೀನು ಬರುತ್ತಿ ಎನ್ನುವ ನಿರೀಕ್ಷೆಯಲ್ಲಿ ಕಣ್ಣುಗಳು ಬಾಗಿಲೆಡೆಗೆ ಪದೇ ಪದೇ ನೋಡುತ್ತಿದ್ದವು. ನಿನಗೆಷ್ಟು ಕೇಳಿಸಿತ್ತೋ ಗೊತ್ತಿಲ್ಲ. ಇನ್ನೇನು ಎರಡನೇ ಪದ್ಯವೂ ಮುಗಿಯುತ್ತಾ ಬರಬೇಕು ಎನ್ನುವಷ್ಟರಲ್ಲಿ ಪುಟ್ಟ ಹುಡುಗಿಯೊಬ್ಬಳ ಕೈ ಹಿಡಿದುಕೊಂಡು ನೀನು ಬಾಗಿಲಿಂದ ಹೊರಬಂದಿದ್ದೆ. ಆ ಕ್ಷಣಕ್ಕೆ ಅನ್ನಿಸಿದ್ದು ಇಷ್ಟೆ. ಆ ಕೈಯಲ್ಲಿ ನನ್ನ ಕೈಯನ್ನಾದರೂ ಹಿಡಿದುಕೊಳ್ಳಬಾರದಿತ್ತಾ ಎಂದು. ನೀನು ಬಂದು ಅಲ್ಲೇ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಕುಳಿತು ಪುಟ್ಟ ಹುಡುಗಿಯ ತಲೆ ಬಾಚಲಾರಂಬಿಸಿದ್ದೆ.

ಅದೆಲ್ಲಿತ್ತೋ ಹುಮ್ಮಸ್ಸು! ನುಡಿಸುತ್ತಿದ್ದ ಭಕ್ತಿ ಗೀತೆಯನ್ನು ಅಲ್ಲಿಗೆ ನಿಲ್ಲಿಸಿದವನು ಇದ್ದಕ್ಕಿದ್ದಂತೆ ಯಾರೇ ನೀನು ಸುಂದರ ಚೆಲುವೆ ಒಬ್ಬಳೆ ನಿಂತಿರುವೆ. ಹಸಿರು ಸೀರೆ ಮಲ್ಲಿಗೆ ಮುಡಿದು ಯಾರನು ಕಾದಿರುವೆ’ ಎನ್ನುವ ಹಾಡನ್ನು ನುಡಿಸತೊಡಗಿದೆ. ನಮ್ಮ ಗುಂಪಿನವರಿಗೋ ಅಚ್ಚರಿ. ಅಷ್ಟಾದರೂ ನೀನು ತಲೆಯೆತ್ತಿ ಒಮ್ಮೆಯೂ ನನ್ನೆಡೆ ನೋಡಲಿಲ್ಲ. ನಾನು ನಿನ್ನ ನೋಡುವುದು ಬಿಡಲಿಲ್ಲ. ಆದರೆ ಮಧ್ಯದಲ್ಲೊಮ್ಮೆ ನಿನ್ನ ತುಟಿಗಳು ಹಾಡನ್ನು ಗುನುಗುನಿಸಿದ್ದು ಗೊತ್ತಾಗಿತ್ತು. ನನ್ನ ಮುಖದಲ್ಲಿ ಸಹಸ್ರ ಮಲ್ಲಿಗೆಯ ಹೊಳಪು. ಈ ನಡುವೆ ಅಲ್ಯಾರೊ ನಿನಗೆ ಬಂದು ಏನೋ ಹೇಳಿದ್ದು ನೀನು ಅದಕ್ಕೆ ಕಣ್ಣು ಬಿಟ್ಟಿದ್ದು ನಡೆದು ಹೋಗಿತ್ತು, ಆಗಲೇ ಮತ್ತೆ ಮತ್ತೆ ನೆನಪಾಗಿದ್ದು..ಸುಂದರ ಸರೋವರಗಳು ನಿನ್ನ ಎರಡು ಕಣ್ಣೂ ಅದರಲಿ ವಿರಹವೇ ತುಂಬಿದೆ…..’

ಮತ್ತೆ ಒಳಕ್ಕೆ ಹೋದವಳು ನೀನು ಬಹಳ ಹೊತ್ತು ಕಾಣಲೇ ಇಲ್ಲ. ಪ್ರೇಮ ಗೀತೆಗಳು ನನ್ನ ಟ್ರಂಪೆಟ್‍ನಲ್ಲಿ ಒಂದರ ಹಿಂದೊಂದು ಬರುತ್ತಿದ್ದವು. ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು…. ದಿಬ್ಬಣ ಹೊರಡುವ ಹೊತ್ತಿಗೆ ನೀನು ಹೊರಗಡೆ ಬಂದಿದ್ದೆ. ಅಬ್ಬಾ! ಅದೆಂತಹ ಸರಳತೆ ನಿನ್ನದು ಸಿಂಪಲ್ಲಾಗಿ ಒಂದು ಕಡು ನೀಲಿ ಬಣ್ಣದ ಚೂಡೀದಾರ ಅದಕ್ಕೊಂದು ಶಾಲು. ಇಳಿಬಿಟ್ಟ ಕೂದಲು. ಹೌದೋ ಅಲ್ಲವೋ ಎನ್ನುವಂತೆ ಒಂದು ಸಣ್ಣ ಮೇಕಪ್. ವಾವ್! ನೀವು ಮೊದಲಿಗಿಂತ ಹೆಚ್ಚು ಇಷ್ಟ ಆದ್ರಿ. ಮದುವೆ ಆದರೆ ನಿನ್ನನ್ನೇ ಅಂತ ಫಿಕ್ಸ್ ಅಂದುಕೊಂಡು ಒಳಗೊಳಗೆ ನಕ್ಕಿದ್ದೆ. ಆ ಬಳಿಕ ನೀನು ದಿಬ್ಬಣದ ಕಾರಲ್ಲಿ. ನಾನು ಬಸ್ಸಲ್ಲಿ. ಪಯಣ ನೀರಸ. ಮದುವೆ ಮನೆಗೆ ಬಂದ ನಂತರ ನೀನು ಅದೆಲ್ಲಿ ಹೋದೆಯೋ ತಿಳಿಯಲಿಲ್ಲ. ಮಧ್ಯದಲ್ಲೊಮ್ಮೆ ನೀನು ವೇದಿಕೆಯಿಂದಿಳಿದು ಬಂದದ್ದು ನೋಡಿದ್ದೆ. ನಿನ್ನ ಹಿಂದೆ ಬರುವ ಆಸೆ ಇದ್ದರೂ, ಹೆಣ್ಣುಮಕ್ಕಳ ಗುಂಪಿನಲ್ಲೆಲ್ಲೋ ಕುಳಿತಿರಬಹುದೆಂದು ನೋಡುವ ಎಂದೆನ್ನಿಸಿದರೂ ಬಂದ ಕೆಲಸ ಮರೆಯುವ ಹಾಗಿರಲಿಲ್ಲವಲ್ಲ. ಅದಕ್ಕಿಂತ ಹೆಚ್ಚಾಗಿ ಗೌರವದ ಪ್ರಶ್ನೆ ಬೇರೆ. ಹಾಗೆ ಸುಖಾಸುಮ್ಮನೆ ಹೆಣ್ಣುಮಕ್ಕಳ ಕಡೆ ನೋಡುವಂತಿಲ್ಲವಲ್ಲ.

ಅಂತೂ ನಿನ್ನ ಕಾಣದೆ ಮಧ್ಯಾಹ್ನ ನನ್ನ ಊಟವೂ ಅಗಿತ್ತು ಅದು ನಮಗೆ ಬಿಡುವಿನ ಸಮಯ. ನೀನೆಲ್ಲಿದ್ದಿ ಅಂತ ಹುಡುಕಲೆಂದೇ ಹಾಲ್‍ನ ಹೊರಗಡೆ ಬಂದಿದ್ದೆ. ನೀನು ಬಾಗಿಲಿನ ಹೊರಬದಿಯಲ್ಲೇ ಹೊರಗಡೆ ಖುರ್ಚಿಯಲ್ಲಿ ಕುಳಿತು ಇಬ್ಬರು ಹುಡುಗಿಯರೊಂದಿಗೆ ಹರಟುತ್ತಿದ್ದೆ. ನನ್ನ ಕಣ್ಣಿಗೆ ನಿನ್ನ ಬೆನ್ನಿನ ಭಾಗವಷ್ಟೇ ಕಾಣಿಸುತಿತ್ತು. ನಿನ್ನನ್ನು ಎದುರುಗಡೆಯಿಂದ ನೋಡಬೇಕು ನೀನು ನನ್ನನ್ನು ಒಂದು ಸಲವಾದರೂ ಗಮನಿಸಬೇಕು. ನನ್ನ ಕಾತರ ನಿನಗೆ ಅರ್ಥವಾಗಬೇಕು. ಎನ್ನುವ ಆಸೆಯೊಂದಿಗೆ ಹಾಲ್‍ನ ಮತ್ತೊಂದು ಬದಿಯಲ್ಲಿದ್ದ ಬಾಗಿಲಿನಿಂದ ನಿನ್ನ ನೋಡಲೆಂದೇ ಹೊರಗೆ ಬಂದಿದ್ದೆ.

ಅಲ್ಲಿಯೇ ಪಕ್ಕದಲ್ಲಿ ನೀರು ಹರಿದು ಹೋಗಲು ಸಣ್ಣ ಚರಂಡಿ ಮಾಡಿದ್ದರು. ಒಂದು ಫೀಟು ಅಗಲದ ಆ ಚರಂಡಿಯ ಮೇಲೆ ಕಬ್ಬಿಣದ ಗ್ರಿಲ್ಸನ್ನು ಹಾಕಿದ್ದರು. ಎಷ್ಟಾದರೂ ನಿನ್ನನ್ನು ನೇರವಾಗಿ ನೋಡುವ ಧೈರ್ಯ ಇರಬೇಕಲ್ಲ. ಹಾಗಾಗಿಯೇ ಯಾರನ್ನೋ ಹುಡುಕಿದಂತೆ ಆಚೀಚೆ ನೋಡುತ್ತಾ ಕಬ್ಬಿಣದ ಗ್ರಿಲ್‍ಗಳ ಮೇಲೆ ನಡೆಯತೊಡಗಿದ್ದೆ. ಹತ್ತಿಪ್ಪತ್ತು ಹೆಜ್ಜೆಯನ್ನಷ್ಟೇ ಇಟ್ಟಿರಬಹುದು. ನಿನ್ನೆದುರು ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿದ್ದಳಲ್ಲ ಅವಳ ಮುಖ ತೋರಿತ್ತು. ಯಸ್. ಐದಾರು ಹೆಜ್ಜೆ ಮುಂದೆ ಹೋದರೆ ನಿನ್ನ ಮುಖವೂ ಕಾಣಿಸುತ್ತದೆ ಎನ್ನುವ ಎಣಿಕೆಯಲ್ಲಿ ಹೆಜ್ಜೆ ಮುಂದೆ ಇಟ್ಟಿದ್ದೆನಷ್ಟೇ. ಪುಣ್ಯಾತ್ಮ ಯಾರು ಮಾಡಿದ್ದೋ ಕಾಮಗಾರಿ! ಗ್ರಿಲ್ಸ್ ಅಲ್ಲಿಗೆ ಕೊನೆಯಾಗಿತ್ತು. ನಾನು ಗಮನಿಸಯೇ ಇರಲಿಲ್ಲ. ನೇರವಾಗಿ ಚರಂಡಿಯೊಳಗೆ ನನ್ನ ಒಂದು ಕಾಲು ಇಟ್ಟಿದ್ದೆ. ಚರಂಡಿಯ ಮೇಲ್ಗಡೆ ಇನ್ನೊಂದು ಕಾಲಿತ್ತು . ಬಿದ್ದ ಹೊಡೆತಕ್ಕೆ ಯಾರೋ ಬೆನ್ನನ್ನು ಕಳಕ್ಕನೆ ಎಳೆದು ಜಗ್ಗಿದಂತಾದ ಅಸಾಧ್ಯ ನೋವು.

ಆ ಕ್ಷಣದಲ್ಲೇ ನಿನ್ನ ಸ್ನೇಹಿತೆ ‘ಅಯ್ಯಯ್ಯೋ..’ ಎಂದು ಕೂಗಿದ್ದಳು. ಅದೆಲ್ಲಿತ್ತೋ ಧೈರ್ಯ ನೀನು ಆ ಪರಿಸ್ಥಿತಿಯಲ್ಲಿ ನನ್ನನ್ನು ನೋಡಲೇಬಾರದೆಂಬ ಅದೊಂದೇ ಕಾರಣದಿಂದ ಬಿದ್ದಷ್ಟೇ ವೇಗವಾಗಿ ಚರಂಡಿಯಿಂದ ಕಾಲ್ತೆಗೆದು ಎದ್ದು ನಿಂತು ಮತ್ತೆ ನೇರವಾಗಿ ನಡೆದು ಹೋಗಿ ಕೂಗಿದವಳ ಬಳಿ ಹೋಗಿ ಕೇಳಿದ್ದೆ. `ಏನಾಯ್ತು ಮೇಡಂ, ಜಸ್ಟ್ ಕೂಲ್. ನಥಿಂಗ್ ಹ್ಯಾಪನ್ಡ್. ಇದೆಲ್ಲಾ ಮಾಮೂಲಿ. ಡೋಂಟ್ ವರಿ.’ ಎಂದಿದ್ದೆ. ನೀವು ಅವಳ ಪಕ್ಕದಲ್ಲೆ ಏನಾಯ್ತು? ಎನ್ನುವ ಪ್ರಶ್ನಾರ್ಥಕ ಚಿಹ್ನೆಯನ್ನು ಮುಖದಲ್ಲಿ ಧರಿಸಿ ನನ್ನತ್ತ ನೋಡಿದ್ದಿರಿ. ಚರಂಡಿಯಲ್ಲಿ ಬಿದ್ದಿದ್ದೆ ಎನ್ನುವ ಬದಲು ಲವ್ವಲ್ಲಿ ಬಿದ್ದೆ ಎಂದು ಹೇಳಬೇಕೆನ್ನಿಸಿತು. ಸುಮ್ಮನೆ ನಕ್ಕು ಹೊರಟಿದ್ದೆ. ನೀವು ಇದ್ಯಾವ ಪೆಕರಾ ಎನ್ನುವಂತೆ ನನ್ನತ್ತ ನೋಡಿದ್ದು ಒಂದ್ ಸ್ವಲ್ಪ ಬೇಜಾರಾಯ್ತು ಮರಾಯ್ರೆ.

ನಿಜ ಹೇಳ್ಬೇಕು ಅಂದ್ರೆ ಚರಂಡಿಯಲ್ಲಿ ಬಿದ್ದ ಹೊಡೆತಕ್ಕೆ ನನ್ನ ಪ್ಯಾಂಟು ಕೆಳಗಡೆ ಹರಿದಿತ್ತು ಮತ್ತೊಂದು ಕಡೆ ಒಳಗಿಂದಲೇ ಕಲ್ಲು ಪರಚಿದ ಪರಿಣಾಮ ರಕ್ತ ಸಣ್ಣಗೆ ಜಿನುಗತೊಡಗಿತ್ತು. ನಾಲ್ಕು ಕಡೆ ಗಾಯವಾಗಿತ್ತು. ಚಪ್ಪಲಿಯೆಲ್ಲಾ ರಕ್ತಮಯ .ಪುಣ್ಯಕ್ಕೆ ನನ್ನ ವಾದ್ಯದ ಬ್ಯಾಗಲ್ಲಿ ಒಂದು ಬಟ್ಟೆಯಿದ್ದಿತ್ತು. ಅದನ್ನೇ ಬಿಗಿದು ಕಟ್ಟಿದ್ದೆ. ನೀವು ಬಂದು ನೋಡುತ್ತೀರಿ ಎನ್ನುವ ನಿರೀಕ್ಷೆಯೇನೂ ಇರಲಿಲ್ಲ. ಆದರೂ ನಿಮ್ಮ ಸ್ನೇಹಿತೆ ಹೇಳಿದ್ದಕ್ಕೆ ನೀವು ನನ್ನನ್ನು ಒಮ್ಮೆ ನೋಡಬೇಕಿತ್ತು ಅಂತ ಸ್ವಲ್ಪ ಸ್ವಲ್ಪ ಈಗ ಅನ್ನಿಸ್ತಿದೆ. ಆವತ್ತಿಡೀ ಮತ್ತೆ ನಿಮ್ಮ ಮುಖ ನೋಡುವ ಧೈರ್ಯ ಆಗಲಿಲ್ಲ. ಸ್ನೇಹಿತೆ ನಾನು ಬಿದ್ದದ್ದನ್ನು ನಿಮಗೆ ಹೇಳಿಯೇ ಹೇಳಿರ್ತಾಳಲ್ಲ! ಒಂಥರಾ ನಾಚಿಕೆ ಆಗಿತ್ತು ಮರಾಯ್ರೆ.

ಆ ದಿನ ಮನೆಗೆ ಬಂದರೂ ಮತ್ತದೇ ನಿಮ್ಮ ಮುದ್ದಾದ ಗಂಭೀರ ಮುಖ ಮನಸ್ಸನ್ನು ಜಗ್ಗತೊಡಗಿತ್ತು. ಅದೆಲ್ಲಿತ್ತೋ ಧೈರ್ಯ! ಕೇಳುವುದರಲ್ಲಿ ತಪ್ಪೇನಿದೆ ಅಂದುಕೊಂಡವನೇ ನಿಶಿತಾಗೆ ಕಾಲ್ ಮಾಡಿ ನಿಮ್ಮ ಬಗೆಗೆ ವಿಚಾರಿಸಲು ಹೇಳಿದ್ದೆ, ಅವಳಂತೂ ತುಂಬಾ ಒಳ್ಳೆಯ ಹುಡುಗಿ. ಅಪ್ಪನ ಮೂಲಕ ಕೇಳಿ ಪೂರ್ತಿ ಮಾಹಿತಿ ನೀಡಿದ್ದಳು. ನೀವೊಂದು ಪ್ರೈಮರಿ ಶಾಲೆಯಲ್ಲಿ ಪಿಟಿ ಟೀಚರ್. ಮೂರು ಜನ ಅಣ್ಣಂದಿರು. ಅವರಲ್ಲಿ ಒಬ್ಬನಿಗೆ ಮದುವೆಯಾದ ಬಳಿಕವಷ್ಟೇ ನಿಮ್ಮ ಮದುವೆ ಪ್ಲಾನ್ ಅಂತೆ. ಸದ್ಯ ಎಷ್ಟೇ ಒಳ್ಳೆಯ ಸಂಬಂಧ ಬಂದರೂ ಇನ್ನೆರಡು ವರುಷ ಹುಡುಗಿ ಕೊಡೋದಿಲ್ಲ ಅಂತೆಲ್ಲಾ ಹೇಳಿ. ಸಾರಿ ಸರ್. ಅಂದಿದ್ದಳು. ನಿಜಕ್ಕೂ ಬೇಸರವಾಗಿತ್ತು ರೀ.

ಅಷ್ಟೇ ಮೇಡಂ, ನೀವು ನನಗೆ ಸಿಗೋದಿಲ್ಲ ಅಂತ ಗೊತ್ತಾಯ್ತು. ಅಯ್ಯೋ ಎರಡು ವರುಷ ಕಾಯಬಹುದಿತ್ತಲ್ಲ ಎನ್ನುವಿರಾ!. ಊಹುಂ. ನಂಗೆ ಸ್ವಲ್ಪ ಕೊಬ್ಬು. ಒಮ್ಮೆ ಬೇಡ ಅಂದ್ರೆ ಮುಗೀತು ಮತ್ತೆ ಕೇಳುವುದು ಸರಿಯಲ್ಲ ಅಂತಾನೇ ನನ್ನ ಭಾವನೆ. ಅದಾದ ಬಳಿಕವೂ ತುಂಬಾ ದಿನ ನಿಮ್ಮ ನೆನಪು ಪದೇ ಪದೇ ಬರುತಿತ್ತು. ಇವತ್ತಿಗೂ ಯಾವುದಾದರೂ ಶಾಲೆಯಲ್ಲಿ ಪಿಟಿ ಟೀಚರನ್ನು ನೋಡಿದ ತಕ್ಷಣ ನೆನಪಾಗುವುದೇ ನೀವು. ನಿಜ ಹೇಳಲಾ. ಇದೆಲ್ಲಾ ಆಗಿ ಐದಾರು ವರುಷಗಳೇ ಕಳೆದಿರಬಹುದು. ಈ ಹೊತ್ತಿಗೆ ನೀವು ಎಲ್ಲಿದ್ದೀರೋ ಗೊತ್ತಿಲ್ಲಾ ಆದರೆ ನಿಮ್ಮನ್ನು ಒಂದು ಸಲವಾದರೂ ಮಾತಾಡಿಸಬೇಕು. ನಿಮ್ಮ ಜೊತೆ ಒಂದು ಹೋಟೆಲಲ್ಲಿ ಎಲ್ಲರೆದುರಿಗೆ ಮಧ್ಯ ಬೆಂಚಿನಲ್ಲಿ ಕೂತು ಕಾಫಿ ಕುಡಿಯುವ ಆಸೆ ಮಾತ್ರ ಈ ಹೊತ್ತಿಗೂ ಹೋಗಿಲ್ಲ. ಪ್ಲೀಸ್ ರೀ ಒಂದ್ಸಲ ಭೇಟಿಯಾಗಿ. ಒಂದು ಬಿಸಿ ಕಾಫಿ ಒಂದಷ್ಟು ಹೊತ್ತು ಮಾತು. ಮತ್ತೇನೂ ಕೇಳಲ್ಲ. ಸಣ್ಣ ಮನಸು ಮಾಡಿ ಮೇಡಂ.ಪ್ಲೀಸ್…

ಇತಿ ಚರಂಡಿಗೆ ಬಿದ್ದ ಹುಡುಗ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x