ಪ್ರೇಮ ಪತ್ರಗಳು

ಮುಂದಿನ ಬೆಂಚಿನಿಂದ ಹಿಡಿದು ಕೊನೆ ಬೆಂಚಿನವರೆಗೂ ಎಷ್ಟೊಂದು ಹುಡುಗಿಯರಿದ್ದರೂ: ಕಪಿಲ ಪಿ ಹುಮನಾಬಾದೆ

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ

ಲಾಸ್ಟ್ ಬೆಂಚ್ ಹುಡುಗಿಗೆ,

ನಿನ್ನ ನಿರಾಕರಣೆಯ ನೋಟದಲ್ಲಿಯೂ ಸಹ ಪ್ರೀತಿಗೆ ಚಡಪಡಿಸುತ್ತಿರುವ ಜೀವವೊಂದರ ಮಾತುಗಳಿವು. ನೀನು ಕೂತೆದ್ದು ಹೋದ ಬೆಂಚಿನ ಮೇಲೆ, ಕ್ಲಾಸ್ ರೂಮ್ ಪೂರ್ತಿ ಖಾಲಿ ಆಗಿದ್ದಾಗ ನಾನು ಹೋಗಿ ಕೂತು ಬೆಚ್ಚನೆಯ ಸ್ಪರ್ಶವೊಂದು ಅನುಭವಿಸಿದ್ದೇನೆ. ಮೊನ್ನೆ ಮುಂಜಾನೆ ಯುನಿವರ್ಸಿಟಿಯ ಮೇನ್ ಗೇಟಿನ್ ರಸ್ತೆಯಲ್ಲಿ ನೀನು ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದೆ, ಗರಿ ಬಿಚ್ಚಿ ನಿಂತ ಆ ನಿನ್ನ ಹಸಿ ಕೂದಲುಗಳಲ್ಲೊಮ್ಮೆ ನನ್ನುಸಿರು ಸುಳಿದಾಡಿ ಬಂದಂತೆ ಆಯ್ತು. ಯಾಕೋ ಈಗೀಗ ಕಿಡಿಗೇಡಿ ಹೃದಯ ನಿನಗೆ ನೋಡಿದ ತಕ್ಷಣ ವಿಪರೀತ ಬಡಿದುಕೊಂಡು, ಮೈತುಂಬಾ ಬೆವರು ಬರುವಂತೆ ಮಾಡುತ್ತದೆ. ನಿನ್ನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಲಾಗದ ನನ್ನ ನಾಚಿಕೆಗೆ ನೀನು ಬೈದಿದ್ದು ನನ್ನ ಮನಸಿಗೆ ಹಲವು ಸಲ ಕೇಳಿಸಿದೆ. ಆದರೂ ನಾನು ಈ ಪ್ರೀತಿಯ ವಿಷಯದಲ್ಲಿ ಚೂರು ಹೇಡಿ. ಈ ಪತ್ರ ಬರೆಯುವಾಗ ಅಂಗೈ ಯಾಕೋ ಬೆವರುತ್ತಿತ್ತು, ಪೆನ್ನು ಪದೇ ಪದೇ ಕುಸಿದು ಪತ್ರದ ಮೇಲೆ ಬಿದ್ದು ಏನು ಬರಿಯಲಾಗದೆ ಚಡಪಡಿಸುತ್ತಿತ್ತು. ಕೊನೆಗೂ ಹೇಗೊ ಧೈರ್ಯ ಮಾಡಿ ಈ ಪತ್ರ ಬರೆಯುತ್ತಿದ್ದೇನೆ.

ನೀನು ಈ ಪ್ರೇಮ ಪತ್ರ ಓದಬಹುದೆಂಬ ಒಂದು ಸಣ್ಣ ಗರಕಿ ಆಸೆಯೆ ಮನಸ್ಸಿನೊಳಗೆ ಪ್ರೀತಿಯ ಆಲದ ಮರ ನೆಟ್ಟಿದೆ. ನಿಜ ಹೇಳಬೇಕೆಂದರೆ ಕ್ಲಾಸಿನಲ್ಲಿ ಮುಂದಿನ ಬೆಂಚಿನಿಂದ ಹಿಡಿದು ಕೊನೆ ಬೆಂಚಿನವರೆಗೂ ಎಷ್ಟೊಂದು ಹುಡುಗಿಯರಿದ್ದರೂ, ಅದು ಹೇಗೊ, ಯಾಕೋ ಗೊತ್ತಿಲ್ಲ, ಒಟ್ಟಿನಲ್ಲಿ ಇಷ್ಟವಾದೆ. ಈ ನನ್ನಿಷ್ಟ ನಿನ್ನೆ ಮೊನ್ನೆಯದಲ್ಲ ಹಲವು ದಿನಗಳಿಂದ ಬೆನ್ನಿನ ಮೇಲೆ ಭಾರ ಹೊತ್ತು, ಓಡಾಡಿದ ಪ್ರೀತಿಯ ಮೂಟೆ ಇದು. ಈ ದೊಡ್ಡ ಭಾರವೆಲ್ಲ ಇದೊಂದು ಪ್ರತದಲ್ಲಿ ಇಡುವ ಧೈರ್ಯ ಮಾಡಿದ್ದೇನೆ.
ಕಾಲೇಜಿನ ವೆಲಕಮ್ ಪಾರ್ಟಿಯಲ್ಲಿ ನೀನು ಉಟ್ಟಿದ್ದ ಆ ಕೆಂಪು ಸಿಲ್ಕ್ ಸೀರೆ ನನ್ನ ಹಲವು ನಿದ್ದೆಗಳಿಗೆ ಚಿವುಟಿ ಹಾಕಿದೆ. ಆವತ್ತು ನಿನ್ನ ನಡಿಗೆಯಲ್ಲಿದ್ದ ನಾಜೂಕು ಹೆಜ್ಜೆಗಳು ನನ್ನ ಕಣ್ಣುಗಳಿಗೆ ಪ್ರೀತಿಯ ಬಣ್ಣ ತುಂಬಿವೆ. ಫಸ್ಟ್ ಟೈಮ್ ನೀನು ನನಗೆ ಪರೀಕ್ಷೆ ಟೈಮಲ್ಲಿ ಮಾತಾಡಿಸಿದ್ದು ಇನ್ನೂ ನನ್ನ ಕಿವಿಗಳಲ್ಲಿ ಭದ್ರವಾಗಿದೆ. ಆ ಟ್ಯೂನ್ ಈಗಲೂ ರಿಪೀಟ್ ಮಾಡಿಕೊಂಡು ಕೇಳುತ್ತಿರುತ್ತೇನೆ, “ಕಪಿಲ, 5ನೇ ಪ್ರಶ್ನೆಗೆ ಆನ್ಸರ ಏನು?” ಆವತ್ತು ನಾ ಆನ್ಸರ ಹೇಳಿದ್ದು, ಆಮೇಲೆ ನೀ ಹೊರಗಡೆ ಬಂದು, ಆ ನಿನ್ನ ಕಿರುತುಟಿಗಳಲ್ಲಿ ಮಧುರವಾಗಿ “ಥ್ಯಾಂಕ್ಸ್” ಅಂದಿದ್ದು ಈಗಲೂ ಎದೆಯಲ್ಲಿ ಭದ್ರವಾಗಿದೆ. ಇಲ್ಲಿಂದ ಶುರುವಾದ ನನ್ನೆದಯ ಪ್ರೀತಿ ಬಡಿತ ನಿನ್ನ ಕುರಿತು ಯೋಚಿಸುವಾಗಲೆಲ್ಲ ಜೋರಾಗಿ ಹೊಡೆದುಕೊಂಡು ತೊಂದರೆ ಕೊಡುತ್ತದೆ.

ನೀ ಕೇಳಬಹುದು “ಏನೋ ಒಂದೇ ಆನ್ಸರಗೆ ಲವ್ವ್ ?” ಅಂತ. ನನಗೂ ಸ್ಪಷ್ಟವಾಗಿ ಗೊತ್ತಿಲ್ಲ. ಯಾವಾಗ ನಿನ್ನ ಮೇಲೆ ಪ್ರೀತಿ ಆಯ್ತು ಅಂತ. ಕರೆಕ್ಟ್ ಆಗಿ ಟೈಂ ಹೇಳೊಕೆ ಆಗಲ್ಲ, ಆದ್ರೆ ಈ ಭೂಮಿ ಮೇಲೆ ನನ್ನ ಉಸಿರಿನ ಟೈಂ ಇರೋವರೆಗೂ ನಿನಗೆ ಪ್ರೀತಿಸ್ತೀನಿ. ಲಾಸ್ಟ್ ಬೆಂಚಿನ ತುದಿಗೆ ನಿನ್ನ ಸಲುವಾಗಿಯೇ ಕೂತಿರುತ್ತಿದ್ದೆ. ಚೂರು ತಿರುಗಿ ನೋಡಿದರು ಆ ನಿನ್ನ ಮಾತುಗಳು, ನಗು, ಸೈಲೆಂಟ್ ಆಗಿ ನೀ ಕೂತಿರುವ ಸ್ಟೈಲ್ ಎಲ್ಲವೂ ಗಮನಿಸುತ್ತಿದ್ದೆ. ನೀನು ನನ್ನ ಪ್ರೀತಿ ಒಪ್ಪಬಹುದು ಅಥವಾ ಬಿಡಬಹುದು ಆದರೆ ಕ್ಲಾಸ್ ರೂಮಿನ ಆ ನಮ್ಮಿಬ್ಬರ ತುದಿ ಬೆಂಚಿನ ನೋಟಗಳು ಪರಸ್ಪರ ಎಷ್ಟು ಸಲ ಡಿಕ್ಕಿ ಹೊಡೆದಿಲ್ಲ ಹೇಳು? ಕೆಲವೊಮ್ಮೆ ನಾನು ನೋಡುವುದು ಬಿಟ್ಟರೆ ನೀನೆ ತಿರುಗಿ ನೋಡುತ್ತಿದೆ. ಸಡನ್ ಆಗಿ ನನ್ನ ಕಣ್ಣುಗಳಿಗೆ ನೀ ಸಿಕ್ಕಿ ಬಿದ್ದಾಗ, ನೀ ಒಳಗೊಳಗೆ ಚಡಪಡಿಸಿದ್ದು ಸುಳ್ಳು ಅಂತ ಸಾಬೀತು ಮಾಡೋಕೆ ಅಂತು ಸಾಧ್ಯ ಇಲ್ಲ.

ನಿನ್ನ ಕಣ್ಣುಗಳಲ್ಲಿಯೂ ಸಹ ನನ್ನ ಕುರಿತು ಸಣ್ಣ ಕಣದಷ್ಟು ಆದರೂ ಪ್ರೀತಿ ಈಗಾಗಲೇ ಇರಬಹುದೆಂಬ ನಂಬಿಕೆಯೇ ನನ್ನ ಕೈಯಿಂದ ನಿನಗೆ ಈ ಪತ್ರ ಬರೆಸಿದ. ದಯವಿಟ್ಟು ಒಂದು ವೇಳೆ ನಾ ನಿನಗ ಇಷ್ಟವಿಲ್ಲದಿದ್ದರೆ ಈ ಪತ್ರ ಯಾವುದೋ ಕಸದ ಬುಟ್ಟಿಯಲ್ಲಿ ಅಥವಾ ಖಾಲಿ ರಸ್ತೆ ಮೇಲೆ ಬೀಸಾಕಿ ಹೊಗಬೇಡ. ಈ ಪತ್ರ ನಿನ್ನ ಯಾವುದೋ ಒಂದು ನೊಟಬುಕ್ಕಿನೊಳಗೆ ಸುಮ್ಮನೆ ಇಟ್ಟುಕೊಂಡು ಬಿಡು. ನನ್ನ ಭಾವನೆಗಳು ನಿನ್ನ ಹತ್ತಿರ ಭದ್ರವಾಗಿವೆ ಎಂಬ ನೆಮ್ಮದಿ ನನಗೆ ಹೆಚ್ಚು ಆಪ್ತವಾಗುತ್ತದೆ.

ಪ್ರತಿದಿನವೂ ನಿನ್ನ ಇಳಿಬಿಟ್ಟ ಜಡೆಯ ಹಿಂದೆ ಆರಾಮಾಗಿ ಕೂತಿರುವ ಗುಲಾಬಿ ಹೂಗಳು ಎಷ್ಟೊಂದು ಪುಣ್ಯ ಮಾಡಿರಬೇಕು ಹೇಳು, ಸದಾ ಆ ನಿನ್ನ ಕೋಮಲ ಕೂದಲುಗಳಲ್ಲಿ ತಂಗಾಳಿ ಸವಿಯುತ್ತವೆ. ನನ್ನ ಮನೆಯ ಅಂಗಳದಲ್ಲಿಯೂ ನಾಲ್ಕೈದು ಗುಲಾಬಿ ಗಿಡಗಳಿವೆ, ನೀನು ಇಷ್ಟವಾದ ದಿನದಿಂದ ಪ್ರತಿಯೊಂದು ಗುಲಾಬಿ ಹೂ ಬಿಟ್ಟಾಗ ಬ್ಯಾಗಿನಲ್ಲಿ ಇಟ್ಟುಕೊಂಡು ಬರುತ್ತಿದ್ದೆ. ಇವತ್ತಾದರೂ ಕೊಡೋಣವೆಂದು ಕೊನೆಗೂ ಆ ದಿನ ಬರಲೇ ಇಲ್ಲ. ನಿನಗೆ ಇದು ಸುಳ್ಳೆನಿಸಿದರೆ, ನನ್ನ ಮನೆಗೆ ಬಂದು, ಅಂಗಳ ನೋಡು. ಹೂಗಳು ನಿನ್ನ ಸ್ವಾಗತಕ್ಕೆ ನಿಂತಿರುತ್ತವೆ. ಮನೆಯೊಳಗೆ ಬರುವಾಗ ಬಲಗಾಲು ಇಟ್ಟಿಯೇ ಬರಬೇಕು. ಇದು ನನ್ನಮ್ಮನ ನಿಯಮ. ಇವತ್ತು ಈ ಪತ್ರ ನೀನು ಓದಿದ ಕೂಡಲೇ, ನಿನಗೆ ನನ್ನ ಪ್ರೀತಿ ಒಪ್ಪಿಗೆಯಿದರೆ, ದಯವಿಟ್ಟು ನನ್ನಲ್ಲಿ ಬಂದು ಗುಲಾಬಿ ಕೇಳು. ನಾಳೆ ಬ್ಯಾಗಿನಲ್ಲಿ ಹೂ ಇಟ್ಟುಕೊಂಡು ಬಂದಿರುತ್ತೇನೆ.

ಎಲ್ಲಕ್ಕಿಂತಲೂ ಹೆಚ್ಚಾಗಿ, ಆ ನಿನ್ನ ಮೌನ ನನಗೆ ತುಂಬಾ ಇಷ್ಟ ಹುಡುಗಿ. ಕನಿಷ್ಠ, ಆ ನಿನ್ನ ಏಕಾಂತದ ಮನೆಯೊಳಗೆ ಕಾವಲುಗಾರನಾಗಿ ಇರಲು ಅವಕಾಶ ಕೊಡು ಹುಡುಗಿ. ತೀವ್ರವಾಗಿ ಬದುಕುವ ಆಸೆಗಣ್ಣಿನ ಹುಡುಗಿ ನೀನು, ಅಷ್ಟೇ ತೀವ್ರವಾಗಿ ನಿನ್ನೊಳಗೆ ಬೆರೆತು ಹೋಗಲು ಕಾಯುತ್ತಿರುವ ಆತ್ಮ ನಾನು. ಈ ಪತ್ರದ ತುಂಬಾ ಸುಳ್ಳು ಭರವಸೆಗಳು ಸುರಿಯಲಾರೆ. ನೀನು ಇಲ್ಲಿ ಓದಲಾಗದ್ದು ನನ್ನ ಕಣ್ಣೊಳಗಿದೆ. ಬಿಡುವಾದಾಗ ತಿಳಿಸು, ಪ್ರೀತಿ ಒಪ್ಪಿಸುವೆ. ಲಾಸ್ಟ್ ಬುಧುವಾರ ನೀ ಬ್ಲ್ಯಾಕ್ ಚೂಡಿದಾರ್, ವೈಟ್ ಕಲರ್ ವೆಲ್ ಹಾಕೊಂಡು ಕ್ಲಾಸಿಗಿ ಬಂದಿದ್ದಿ. ಆ ಡ್ರೆಸ್ ಮೇಲೆ ಹಲವು ತಿಳಿ ಹಳದಿ, ಬಿಳಿ ಚಿಟ್ಟೆಗಳಿದ್ದವು, ಆ ಚಿಟ್ಟೆಗಳು ಹಿಡಿದು ನಿನ್ನ ಅಂಗೈಯೊಳಗೆ ಇಡಲು ಒಂದು ಅವಕಾಶ ಕೊಡುವೆಯಾ ಹುಡುಗಿ ?

ಲಾಸ್ಟ್ ಬೆಂಚ್ ಹುಡುಗನಿಂದ.


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *