ನಿನ್ನ ಜೋಳಿಗೆಯಲ್ಲಿ ಪ್ರೇಮದ ಬುತ್ತಿ ಸದಾ ತುಂಬಿರುತ್ತೆ: ಸುಜಾತಾ ಲಕ್ಮನೆ

ಹಾಯ್ ದೊರೆ,

ಎಲ್ಲಿಂದ ಶುರು ಮಾಡಲಿ? ಅದೇ ನೀ ಸಿಕ್ಕ ದಿನ ಕಣ್ಣ ಚುಂಗಲ್ಲಿ ನೀ ಎಸೆದ ಒಲವ ನೋಟವ ಪೋಣಿಸಿ ಎದುರಿಡಲೇ ಅಥವಾ ಕಳೆದ ಸವಿ ಕ್ಷಣಗಳ ನೆನಪ ನೇಯಲೇ? ಸುಂದರ, ಸಂತಸಮಯ ಕ್ಷಣಗಳು ದಿನದುದ್ದಕ್ಕೂ ಕಾಡಿ ಕಚಗುಳಿಯಿಡುವಾಗ ಮೈ ರೋಮಾಂಚನಗೊಳ್ಳುವ ಆ ಭಾವವನ್ನು ವರ್ಣಿಸೋದು ಹೇಗೆ? ಆ ದಿನಗಳಲ್ಲಿ ಭಾವಗಳು ತುಂಬಿ ತುಳುಕಿತ್ತು! ಎಲ್ಲ ಪೂರ್ಣವೂ ಚಂದ ನೋಡು. ಪೂರ್ಣ ಚಂದಿರ, ಆಡಿ ಮುಗಿವ ಮಾತಿನ ನಂತರದ ತುಂಬು ಮೌನ, ಕಣ್ತುಂಬುವ ನೋಟ; ಬೀಸಿ ಬರುವ ತುಂಬು ಕುಳಿರ್ಗಾಳಿ…ಉಕ್ಕಿ ಹರಿವ ಮಹಾನದಿ, ಹೀಗೆ! ಅರ್ಧಂಬರ್ಧದಲ್ಲಿ ಎಂಥ ಇದೆ ಮಣ್ಣಂಗಟ್ಟಿ? ಅಂದು ಹುಣ್ಣಿಮೆ. ನನ್ನ ಬದುಕಲ್ಲೂ ಪೂರ್ಣ ಚಂದಿರ ಮೂಡಿದ ದಿನ! ಬೆಳಕು ಚೆಲ್ಲಲು ಹುಣ್ಣಿಮೆಯೇ ಆಗಬೇಕೆಂದೇನೂ ಇಲ್ಲ; ಯಾವ ದಿನದಲ್ಲಿ ಬೇಕಾದರೂ ಲಕಲಕ ಕುಣಿಯುವ ಹುಣ್ಣಿಮೆ ಎದುರಾಗಿಬಿಡಬಹುದು. ನೀನು ನನ್ನವನಾಗಿ ಇಂದಿಗೆ ವರುಷವೇ ಕಳೆಯಿತು. ನೆನಪುಂಟಾ? ಚಂದ್ರಮ ಈ ದಿನವೂ ಕಿಲಕಿಲ ನಗುತ್ತಿದ್ದಾನೆ.

ಈ ಸಂಜೆ, ಈ ಸೊಬಗು, ಈ ಕಡಲು, ಈ ದಿಗಂತ, ಈ ಸೂರ್ಯಾಸ್ತ, ಈ ತಂಬೆಲರು ನಮ್ಮ ಅನುಕ್ಷಣವನ್ನೆಲ್ಲ ರಂಗು ರಂಗಾಗಿಸಿ ಮರುಳು ಮಾಡಿದ್ದು ನೆನಪುಂಟಾ? ಇಂದು ಅದೇ ಕಡಲ ಕಿನಾರೆಯ ಮೇಲೆ ಭಾರವಾದ ಹಜ್ಜೆ ಹಾಕುತ್ತಿದ್ದೇನೆ. ಅಂದು, ನೆರಿಗೆ ಚಿಮ್ಮಿಸುತ್ತಾ ಎನ್ನ ಚಿತ್ತಾರದ ಸೆರಗ ಮುಗಿಲೆತ್ತರಕ್ಕೆ ಹಾರಿಸುತ್ತಾ ನಿನ್ನ ಭುಜಕಾತು ಇಲ್ಲೇ ಉಕ್ಕುವ ಅಲೆಗಳ ಸದ್ದಿನಲಿ ಕಳೆದುಹೋದ ನೆನಪು. ಈಗಿಲ್ಲಿ ನಾನು ಒಬ್ಬಂಟಿ! ನನ್ನ ಗೆಜ್ಜೆ ಧನಿಯು ಈ ರಕ್ಕಸ ಅಲೆಗಳ ನಡುವೆ ಕಳೆದುಹೋಗುತ್ತಿದ್ದರೂ ನಿನ್ನ ಸವಿದನಿ ಹಿಂಬಾಲಿಸಿದಂತೆ ಭಾಸ. ಹೋಗಲಿ, ಯಾವಾಗ ಬರುತ್ತೀಯ? ಕಣ್ಣ ತುಂಬಾ ಬರೀ ನಿರೀಕ್ಷೆಗಳೇ ತುಂಬಿ ಹೋಗಿವೆ. ದಿನಗಳು ಯುಗಗಳಾಗುತ್ತಿವೆ. ಶರದೃತುವಿನ ಆಹ್ಲಾದ ವಾತಾವರಣ! ಚುಮು ಚುಮು ಚಳಿ ಕಾಲಿಡತೊಡಗಿದೆ ಇಲ್ಲಿ. ಕಣ್ಣೆವೆ ಮುಚ್ಚಿದರೆ ನೀನೇ ಕಾಡುತ್ತೀಯ. ತೆರೆದರೆ ದಶ ದಿಕ್ಕುಗಳಲೂ ನೀನೇ ನಿಂತಂತೆ. ಕಂಪನಿ ವಹಿಸಿದ ಕೆಲಸದ ಮೇಲೆ ನೀನು ದೂರದ ಅಮೇರಿಕಕ್ಕೆ ಹೋಗಿ ಇಂದಿಗೆ ಪೂರ್ತಿ ತಿಂಗಳೊಂದು ಉರುಳಿತು. ಇಂದೇಕೋ ನಿನ್ನ ನೆನಪು ಇನ್ನಿಲ್ಲದಂತೆ ಬೆನ್ನು ಬಿದ್ದಿದೆ. ವಾಟ್ಸಾಪ್, ಎಫ್ ಬಿ ಮೆಸೆಂಜರ್, ಇನ್ಸ್ಟಾಗ್ರಾಂ, ಸ್ಕೈಪ್ ಎಲ್ಲ ಇವೆ ನಿಜ. ಆದರೆ, ಪತ್ರದಲ್ಲಿ ಭಾವ ಬಿಂಬಿಸಿದಂತೆ ಇದ್ಯಾವುದರಲ್ಲೂ ಮನದಾಳ ತೆರೆದಿಡಲು ನನಗೆ ಸಾಧ್ಯವಾಗುತ್ತಿಲ್ಲ. ನೀ ಎದುರು ಬಂದರಂತೂ ಹೇಳಲಿಕ್ಕಿರುವುದೆಲ್ಲ ಮರೆತೇ ಹೋಗುತ್ತೆ ಕಣೋ. ಹಾಗಾಗಿ ಈ ಪತ್ರ. ಪ್ರೇಮ ಪತ್ರ ನೋಡಿ ನಿನಗೆ ಅಚ್ಚರಿಯಾಗಬಹುದು. ನಗ್ತಾ ಇದೀಯಾ?

ಹೌದು, ಮಾತಿನ ಜಗುಲಿಯಿಂದ ನೀನು ಎದ್ದು ನನ್ನೆದೆ ಕದ ತಟ್ಟಿದ್ದು ನನಗಿನ್ನೂ ನೆನಪಿದೆ. ಅಂದೂ ಸಹ ಇದೇ ರೀತಿಯಲ್ಲಿ ಬಾನಗಲದಲ್ಲಿ ತೆರೆದುಕೊಂಡಿದ್ದ ಚಂದ್ರಮ ತನ್ನ ಬೆಳಕನ್ನು ಬುವಿಯ ಮಡಿಲೊಳಗೆ ಪಸರಿಸಿ ನಗುತ್ತಿದ್ದ. ನಿನ್ನ ಕಣ್ಣಲ್ಲಿ ಪ್ರೇಮದ ಹೊಳೆ ಉಕ್ಕಿ ಹರಿಯುತ್ತಿತ್ತು. ನಾನೋ ನಾಚಿ ನೀರಾಗಿದ್ದೆ. ಮುಸ್ಸಂಜೆಯ ಕೆಂಪನ್ನೆಲ್ಲ ನಾನೇ ಬಾಚಿಕೊಂಡು ನಿನ್ನೆದುರು ಸಿಂಗಾರಗೊಂಡು ನಿಂತಿದ್ದೇನೆ ಎಂಬ ನಿನ್ನ ಮಾತು ನನ್ನೊಳಗೆ ಕಚಗುಳಿಯ ಪರ್ವವನ್ನೇ ಎಬ್ಬಿಸಿತ್ತು. ನಮ್ಮ ಮನೆಯ ಗುಲ್ಮೊಹರ್ ರಸ್ತೆಯ ತಿರುವಿನಲ್ಲಿರುವ ಕಲ್ಲು ಬೆಂಚೇ ನಿನ್ನ ಪ್ರೇಮ ನಿವೇದನೆಗೆ ವೇದಿಕೆ ! ಎಲ್ಲರಂತೆ ನೀನು –‘ಐ ಲವ್ ಯೂ’ ಎನ್ನಲಿಲ್ಲ; ಸಹ್ಯವಲ್ಲದಂತೆ- ‘ನನಗೆ ನೀನು ಬೇಕು’ ಎನ್ನಲಿಲ್ಲ; ‘ಬಾಳ ಸಂಗಾತಿಯಾಗಿ ಬರುವೆಯಾ’ ಎನ್ನಲಿಲ್ಲ. ಕಣ್ಣಲ್ಲಿ ಕಣ್ಣಿಟ್ಟೆ, ಕೈಯಲ್ಲಿ ಕೈಯಿತ್ತು- ಮೃದುವಾಗಿ ಗಲ್ಲ ತಟ್ಟಿ –“ನೀನೆಂದೆಂದೂ ನನ್ನವಳು ಸುಜೂ” ಎಂದೆ. ನಾನು ನವಿಲಾದೆ, ಮುಗಿಲಾದೆ, ಮುಂಬನಿಯಾದೆ, ನದಿಯಾದೆ, ನಿನಾದವಾದೆ, ಮೈಮರೆತೆ. ನಿನ್ನೆದೆಗೆ ಅದು ಯಾವಾಗ ಒರಗಿದೆನೋ?! ತಿಳಿಯಲೇ ಇಲ್ಲ. ಈ ಹೊತ್ತು ಅನಂತವಾಗಬಾರದೇ ಎನ್ನಿಸಿತ್ತು. ನೀನೋ ಎನ್ನ ದಾವಣಿ ಲಂಗದ ನೆರಿಗೆಗಳ ಎಣಿಸುತ್ತ ಎಲ್ಲೋ ಕಳೆದುಹೋಗಿದ್ದೆ. ತದನಂತರದ ದಿನಗಳಲ್ಲಿ ನನ್ನ ನಿನ್ನ ಎದೆಬಡಿತದ ಏರು ಪೇರುಗಳು ಯಾವ ಗ್ರ್ಯಾಫ್ನಲ್ಲೂ ತೋರಿಸಲು ಬರದಂತೆ ಅಡ್ಡಾದಿಡ್ಡಿಯಾಗಿ ಓಡುತ್ತಿದ್ದವು. ನನ್ನ ಕಣ್ಣಾಲಿ ಒಮ್ಮೆಯೂ ತುಂಬದಂತೆ ನೋಡಿಕೊಂಡೆ ನೀನು. ನಮ್ಮೆದುರು ಯಾವ ಪ್ರೇಮಿಗಳು ಸಾಟಿಯಾದಾರು? ಯಮುನೆ ನಕ್ಕಳೋ, ರಾಧೆ ಮುನಿಸಿಕೊಂಡಳೋ, ಕೃಷ್ಣ ಮರೆಯಲಿ ನಿಂತು ಪರಿಹಾಸ್ಯ ಮಾಡಿದನೋ..ಊಹೂಂ, ನಮಗೆ ಅರಿವು-ಪರಿವೆ ಇರಲಿಲ್ಲ. ನೀನಂತೂ ಚಿಗರೆಯಂತಾದೆ. ನಾನು ಚಿಗುರಿದೆ!! ಚಿಗುರುತ್ತಲೇ ಹೋದೆ! ಇದೆನ್ನೆಲ್ಲ ಮತ್ತೆ ಮತ್ತೆ ನೆನಪಿಸಿಕೊಳ್ತೇನೆ. ಈ ಊರಲ್ಲಿ ನೀನಿಲ್ಲದ ಈ ದಿನಗಳಲಿ ನಿನ್ನ ನೆನಪೇ ನನಗೀಗ ಆಧಾರ. ನಿನ್ನ ಸವಿನೆನಪೆ ಮನದಲ್ಲಿ… ಆರಾಧನೆ…!

ಬಾನಂಚಲಿ ಚಾಚುವ ಬೆಳ್ಮುಗಿಲ ರಾಶಿ ಕಂಡಾಗ, ಮುಂಬೆಳಗಲ್ಲಿ ಇಬ್ಬನಿಯ ಎದೆ ಕರಗತೊಡಗುವುದನ್ನು ನೋಡಿದಾಗ ನನ್ನ ಕಣ್ಣ ಕಾಡೊಳಗೆ ನಿನ್ನ ಬಿಂಬ ಮೂಡಿ ಮೂಡಿ ವಿರಹ ಕಾಡತೊಡಗಿ ಹೈರಾಣಾಗುತ್ತೇನೆ. ಹಲವೊಮ್ಮೆ ಮನಸು ತಣ್ಣಗೆ ಕುಳಿತುಬಿಡುತ್ತೆ. ಹಗಲಿರುಳಿನಲಿ ಬೆರಗು, ಬೆಡಗೇ ಇಲ್ಲ ಎನಿಸುತ್ತೆ. ಕನ್ನಡಿ ಎದುರು ನಿಂತು ನಿನ್ನ ನೆನಪಿಸಿಕೊಂಡು ನನ್ನ ಕದಪ ನಾನೇ ಸವರಿಕೊಳ್ಳುತ್ತೇನೆ. “ಛಿ! ತುಂಟಿ ಎನ್ನುವೆಯಾ?” ಅದೆಷ್ಟು ಬಾರಿ ನನ್ನೀ ನುಣುಪು ಕೆನ್ನೆಯ ಸವರಿ, ಮುಂಗುರುಳ ನೇವರಿಸಿ ಪಿಸುನುಡಿಯಲಿಲ್ಲ ನೀನು ‘ಯೂ ಆರ್ ಮೈ ಹಾರ್ಟ್ ಬೀಟ್’ ಅಂತ. ಹೇಗಿದ್ದೀಯ? ‘ನನ್ನ ನೆನಪು ಕಾಡುತ್ತಾ’ ಎಂದು ನಾನು ಕೇಳಲಾರೆ. ‘ಮರೆತರೆ ತಾನೇ ನೆನಪಾಗೋದು’ ಅಂತ ಕೀಟಲೆ ಉತ್ತರ ಬರುತ್ತೆ ಅಂತ ಗೊತ್ತು ನನಗೆ.

ಹೊರಡುವಾಗ ನನ್ನ ಕಿವಿಯಲ್ಲಿ ನೀ ಪಿಸುನುಡಿದ “ಯೂ ಆರ್ ಮೈ ವಂಡರ್” ಎಂಬ ಮಾತು ಈಗಲೂ ಅನುರಣಿಸುತ್ತಿದೆ. ನನ್ನ ಜೀಕುವ ಭಾವಗಳಿಗೆ, ಬೀಗುವ ಲಜ್ಜೆಗಳಿಗೆ, ಕೊರೆವ ನೋವುಗಳಿಗೆ, ಬಿಕ್ಕುವ ತಲ್ಲಣಗಳಿಗೆ, ಮೀಟುವ ಕನಸುಗಳಿಗೆ, ಪಲುಕಿ ಅಂಟುವ ಆಸೆಗಳಿಗೆ, ಎಲ್ಲವಕ್ಕೂ ನೀನೇ ಬೇಕು. ಹೀಗೆಲ್ಲ ನಿನ್ನ ನೆನಪಿಸಿಕೊಂಡಾಗ ಕಣ್ಣಾಲಿ ತುಂಬುತ್ತದೆ. ಈ ವಿರಹ ಕಡಲಾಗಿದೇ… ಅಂತ ಗುನುಗಿಕೊಂಡು ಕಣ್ಣೀರ ಒರೆಸಿಕೊಳ್ಳುತ್ತೇನೆ. ಹೋಗು ನೀನು, ನನ್ನನ್ನು ಬಿಟ್ಟು ಹೋಗಲು ಮನಸಾದರೂ ಹೇಗೆ ಬಂತು ಅಭಿ?

ಇನ್ನೇನು, ನಮ್ಮ ನಿಶ್ಚಿತಾರ್ಥದ ದಿನ ಹತ್ತಿರ ಬಂತು. ನಿನ್ನ ಬರುವಿನ ಹಾದಿಯನ್ನೇ ಕಾಯುತ್ತಿದ್ದೇನೆ. ಬರುವಾಗ ಎದೆಗೂಡಲ್ಲಿ ಇನ್ನಷ್ಟು, ಮತ್ತಷ್ಟು ಒಲವ ಮೂಟೆ ಹೊತ್ತು ಬಾ. ನನಗೆ ನಿನ್ನ ಹೊರತು ಇನ್ನೇನೂ ಬೇಡ. ಏನು ತರಲಿ ಎಂದು ಪದೇ ಪದೇ ಕೇಳ್ತೀಯ. ನಿನಗೇ ಗೊತ್ತು- ನನಗೇನು ಬೇಕು ಎಂದು. ಬರಿಗೈಯ ಫಕೀರ ಕಣೇ ಅಂತ ನಗೋದು ಬೇರೆ ನೀನು. ನಿನ್ನ ಜೋಳಿಗೆಯಲ್ಲಿ ಪ್ರೇಮದ ಬುತ್ತಿ ಸದಾ ತುಂಬಿರುತ್ತೆ; ಅದಷ್ಟೇ ಸಾಕೆನಗೆ! ನಿನ್ನದೊಂದು ಪ್ರೀತಿಯ ನೋಟಕ್ಕೆ, ನಿನ್ನ ಸಾನ್ನಿಧ್ಯಕ್ಕೆ ಚಾತಕ ಪಕ್ಷಿಯಂತೆ ಕಾಯ್ತಾ ಇದ್ದೇನೆ. ನಿನ್ನನ್ನು “ನನಗಿಂತ” ಜಾಸ್ತಿ ಹಚ್ಚಿಕೊಂಡಿದ್ದೇನೆ ಕಣೋ!! ನೀ ಬರುವ ದಿನ ಹಗಲಿಗೆ ತಂಪಾಗಿರಬೇಕೆಂದು, ಬೇಲಿ ಮೇಲಿನ ಹೂಗಳಿಗೆ ನಗುತ್ತಿರಬೇಕು ಎಂದು ತಾಕೀತು ಮಾಡಿದ್ದೇನೆ. ಮನೆಯಂಗಳದ ಗುಲಾಬಿ ಅಂದೇ ಅರಳುತ್ತಂತೆ ಬಿಡು! ಮಲ್ಲಿಗೆ ಈಗಲೇ ಮುಸಿ ಮುಸಿ ನಗುತ್ತಿದೆ. ಕೀಟಲೆ ಮಾಡುವ ಅಣ್ಣನಿಗೆ ಗಂಭೀರವಾಗಿರು ಎಂದಿದ್ದೇನೆ. ಅಮ್ಮಳ ಸಡಗರವಂತೂ ಹೇಳತೀರದು. ಬೇಗ ಬಂದುಬಿಡು. ನನ್ನ ಮನಸಿಗೆ ಸುಮ್ಮನಿರು ಎಂದಂತೆಲ್ಲ ಸಂಭ್ರಮದಲ್ಲಿ ತೇಲಿ ತೇಲಿ ಕಳೆದುಹೋಗುತ್ತಿದೆ. ಅದೇ ನಮ್ಮ ಪ್ರೇಮಾಂಕುರವಾದ ಆ ಕಲ್ಲು ಬೆಂಚಿನ ಮೇಲೆ ನೀ ಬಂದ ಮಾರನೇ ದಿನ ಒಂದರ್ಧ ಗಂಟೆ ಕಳೆಯುವ. ಓಕೆನಾ? ಹೆಚ್ಚು ಬೋರ್ ಹೊಡೆಸಲಾರೆ. ಒಂದಷ್ಟು ಮಾತು, ಮೌನ, ಲಜ್ಜೆ, ಕನಸು ಎಲ್ಲವನ್ನೂ ಜೊತೆ ಕೂತು ಆಗಸದ ತಾರೆಗಳ ಎಣಿಸುತ್ತಾ ಹಂಚಿಕೊಳ್ಳೋಣ. ಏನಂತೀ? ಮುಂದಿನ ಮಹೋತ್ಸವದ ಕನಸು ನನಸಾಗುವುದನ್ನೇ ಕಾಯೋಣ. ದೊರೆ, ಬೈ ಕಣೋ..
ಸೀ ಯೂ. ವಿತ್ ಲಾಟ್ಸ್ ಆಫ್ ಲವ್.. ಅಭಿ..

ಲವ್ ಈಸ್ ಫುಲ್ ಆಫ್ ಎಮೊಷನ್ಸ್ ಅಂತೆ ಹೌದಾ? ಹಾಗನ್ನಿಸಿತಾ ನನ್ನೀ ಪತ್ರ ನೋಡಿ ?!
ಮೈ ಮನದ ತುಂಬೆಲ್ಲ ನೀನೇ.. ..ಸಿಕ್ಕಾಪಟ್ಟೆ ಪ್ರೀತಿಯೊಂದಿಗೆ…
“ನಿನ್ನ ಸುಜೂ….”


ಲೇಖಕರ ಪರಿಚಯ:

ಸುಜಾತಾ ಲಕ್ಮನೆ, ವಾಸ ಬೆಂಗಳೂರು. ಮೂಲ ಊರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು. ವೃತ್ತಿ ಕೇಂದ್ರ ಸರ್ಕಾರೀ ಉದ್ಯೋಗಿ, ಪ್ರವೃತ್ತಿ -ಕವನ, ಲೇಖನ ಹಾಗೂ ಗಜಲ್ ಗಳನ್ನು ಬರೆಯುವುದು. ಹಲವಾರು ಪತ್ರಿಕೆಗಳಲ್ಲಿ ಕವನ ಹಾಗೂ ಗಜಲ್ ಗಳು ಪ್ರಕಟವಾಗಿವೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x