ನಿನಗೆ ನನ್ನ ಮೇಲೆ ಒಲವಿದ್ದರೆ: ಪರಮೇಶ್ವರಿ ಭಟ್

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ

ಪ್ರಿಯ ಮಧುರಾ,

ನಿನಗೆ ಯಾರಿವನು ಅಂತ ಆಶ್ಚರ್ಯ ವಾಗಬಹುದು. ನಾನು ನಿನ್ನನ್ನು ಮೆಚ್ಚಿದ ಒಬ್ಬ ಸುಸಂಸ್ಕೃತ ಹುಡುಗ. ಹೆದರಬೇಡ. ಪತ್ರವನ್ನು ಪೂರ್ತಿ ಓದು. ನಾನು ಒಬ್ಬ ಸಂಶೋಧನ ವಿದ್ಯಾರ್ಥಿ. ನೀನು ಕೂಡ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವಿ ಎಂದು ತಿಳಿದುಕೊಂಡೆ. ನನ್ನ ನಿನ್ನ ಆಕಸ್ಮಿಕ ಭೇಟಿ ನಾನು ಮರೆತಿಲ್ಲ. ಈ ಪತ್ರ ಬರೆಯಲು ಅದುವೇ ನಾಂದಿಯಾಯಿತು ಗೊತ್ತಾ? ಹೇಗೆ ಅಂತೀಯಾ.. ಒಂದು ದಿನ ಲೈಬ್ರರಿಯಲ್ಲಿ ಕೌಂಟರಿನಲ್ಲಿ ನೀನು ಪುಸ್ತಕ ತೆಗೆದುಕೊಳ್ಳುತ್ತಿದ್ದೆ. ‌ನಾನೂ ಅಲ್ಲಿದ್ದೆ. ನನ್ನ ಪೆನ್ನು ಕೈಜಾರಿ ನಿನ್ನ ಕಾಲಬುಡಕ್ಕೆ ಬಿತ್ತು. ‌ನೀನು ನಸುನಗುತ್ತಾ ಅದನ್ನು ಎತ್ತಿಕೊಟ್ಟೆ ನೋಡು. ನೆನಪಾಯಿತಾ. ಆಗಲೇ ನಾನು ನಿನ್ನಲ್ಲಿ ಆಕರ್ಷಿತನಾದೆ. ದಿನಾಲೂ ಲೈಬ್ರರಿಗೆ ಬಂದರೂ ನೀನೆಂದೂ ನನ್ನತ್ತ ನೋಡೇ ಇಲ್ಲ. ನಿನಗೆ ಓದುವ ಹುಚ್ಚಿದೆ ಅಂತ ಗೊತ್ತಾಯಿತು. ಅಷ್ಟೇ ಅಲ್ಲ ಅದೆಷ್ಟು ರೆಫರೆನ್ಸ್ ಪುಸ್ತಕಗಳನ್ನು ಹಿಡಿದು ಕುಳಿತುಕೊಳ್ಳುತ್ತೀ ನೀನು ?. ನಿನಗೆ ಜ್ಞಾನದ ಹಸಿವು ತುಂಬಾ ಇದೆ. ಇದು ಸಂತೋಷದ ವಿಷಯ. ನೀನು ಬುದ್ಧಿವಂತೆ. ಹಾಗಾಗಿಯೇ ನಾನು ನಿನ್ನಲ್ಲಿ ಆಕರ್ಷಿತನಾದೆ ಎಂದು ಹೇಳಬಲ್ಲೆ.

ನನಗೆ ಆಶ್ಚರ್ಯವಾಗುವುದೇನೆಂದರೆ ಎಷ್ಟೊಂದು ಸಲ ನಾನು ಲೈಬ್ರರಿಯಲ್ಲಿ ನಿನ್ನ ಎದುರು ಕುಳಿತುಕೊಂಡಿದ್ದರೂ ಒಮ್ಮೆಯೂ ನೀನು‌ ಕಣ್ಣೆತ್ತಿ ನನ್ನನ್ನು ನೋಡಲೇ ಇಲ್ಲವಲ್ಲಾ. ನನ್ನನ್ನಷ್ಟೇ ಅಲ್ಲ ಬೇರೆ ಯಾರನ್ನೂ ನೀನು ನೋಡುವುದಿಲ್ಲ. ನಿನಗೂ ತುಂಬಾ ಗೆಳೆಯ ಗೆಳತಿಯರಿಲ್ಲ ಅಲ್ಲವೇ. ನಿನ್ನ ಜೊತೆ ಹೆಚ್ಚಾಗಿ ಒಬ್ಬ ಹುಡುಗಿಯನ್ನು ಮಾತ್ರ ನೋಡಿರುವೆ. ಹೆಚ್ಚು ಮಿತ್ರರಿದ್ದಷ್ಟೂ ಸಮಯ ಹಾಳು ಎಂದು ತಿಳಿದುಕೊಂಡೆಯೇನು? ನಾನು ಎಲ್ಲರಂತೆ ನಿನ್ನ ಅಂದ ಚಂದವನ್ನು ವರ್ಣಿಸಿ, ಹೊಗಳಿ ಬುಟ್ಟಿಗೆ ಹಾಕುತ್ತೇನೆಂದು ಖಂಡಿತಾ ತಿಳಿಯಬೇಡ. ದೈಹಿಕ ಆಕರ್ಷಣೆಗಿಂತಲೂ ಭಾವನಾತ್ಮಕ ಆಕರ್ಷಣೆ ಮುಖ್ಯ ಎಂದು ನಂಬಿದವನು ನಾನು. ಆದರೂ ನಿನ್ನ ಅಂದ ಚಂದವನ್ನು ನೋಡುವುದಿಲ್ಲ ಎಂದು ಸುಳ್ಳು ಹೇಳಲಾರೆ ಮಧುರಾ. ನಿನ್ನ ಹೆಸರಿನಷ್ಟೇ ಮಾಧುರ್ಯ ನಿನ್ನ ನಡೆಯಲ್ಲಿದೆ. ನಿನ್ನ ನುಡಿಯನ್ನಿನ್ನೂ ನನಗೆ ಕೇಳುವ ಅವಕಾಶ ಸಿಕ್ಕಿಲ್ಲ. ಅದೂ ಮಧುರವಾಗಿಯೇ ಇರಬಹುದು. ಹೇಗೆ ಇದ್ದರೂ ನನಗೆ ಇಷ್ಟವೇ ಎಂದು ತಿಳಿ. ಲೈಬ್ರರಿಯಲ್ಲಿ ನೀನು ಪೆನ್ನು ಹೆಕ್ಕಿ ಕೊಟ್ಟಾಗಲಿಂದ ನನಗೆ ನಿನ್ನದೇ ಕನಸು. ಏನೇ ಕೆಲಸ ಮಾಡಿದರೂ ಸುಪ್ತ ಮನಸ್ಸಿನಲ್ಲಿ ನೀನೇ ತುಂಬಿದ್ದೀ. ಹುಡುಗಿಯರೆಂದರೆ ದೂರ ಸುರಿಯುತ್ತಿದ್ದ ನಾನು ಅವರ ಉಡುಪುಗಳ ಹೇಗೆ ಗಮನ ಕೊಡಲಿ? ಆದರೆ ನೀನು ನನ್ನ ಮನಸನ್ನು ಬದಲಿಸಿ ಬಟ್ಟೆ. ನೀನು ಯಾವ ಬಣ್ಣದ ಚೂಡೀದಾರ ಹಾಕುತ್ತೀ ಎಂದು ನಾನು ಗಮನಿಸುತ್ತಿರುತ್ತೇನೆ ನೋಡು. ಮೊನ್ನೆ ನೀನು ತೊಟ್ಟುಕೊಂಡ ಹಳದಿ ಚೂಡೀದಾರ ಎಷ್ಟು ಚೆನ್ನಾಗಿ ನಿನಗೆ ಒಪ್ಪುತ್ತಿತ್ತು ಗೊತ್ತಾ?

ಕಳೆದ ವಾರ ಎರಡು ದಿನ‌‌ ನನ್ನ ನೆಮ್ಮದಿ ಕೆಟ್ಟಿತು. ಕಾರಣ ಗೊತ್ತಾ.. ಕ್ಯಾಂಟೀನಿನಲ್ಲಿ ನಿನ್ನ ಜೊತೆ ಒಬ್ಬ ಸುಂದರ ತರುಣ ಇದ್ದ. ‌ಇಬ್ಬರೂ ಮಸಾಲೆ ದೋಸೆ ತಿನ್ನುತ್ತಿದ್ದಿರಿ‌. ಅದೆಷ್ಟು ಖುಶಿಯಾಗಿ ಮಾತಾಡುತ್ತಿದ್ದೆ ಅವನಲ್ಲಿ. ನಿನ್ನ ಪ್ರಿಯಕರನೇನೋ ಅಂತ ಎಷ್ಟು ಆತಂಕವಾಗಿತ್ತು ಗೊತ್ತಾ. ಆ ಯುವಕ ಯಾರು ಅಂತ ತಿಳಿಯಬೇಕಿತ್ತು. ಹಾಗಾಗಿ ನೀನು ಕ್ಯಾಂಟೀನಿಗೆ ಹೋಗುವಾಗ ನಾನು ಒಂದು ಕಾಫಿಯನ್ನು ಅರ್ಧ ಗಂಟೆ ಕುಡಿಯುತ್ತಾ ನಿನಗಾಗಿ ಕಾಯುತ್ತಿದ್ದೆ. ನೀನು ನಿನ್ನ ಗೆಳತಿಯೊಂದಿಗೆ ಬಂದಾಗ ಎಷ್ಟು ಖುಶಿಪಟ್ಟೆ ಗೊತ್ತಾ. ನಿಮ್ಮ ಮಾತುಕತೆಗೆ ಗಮನ ಹರಿಸಿದೆ. ಆಗ ಗೊತ್ತಾಯಿತು ನಿನ್ನ ಜೊತೆ ಇದ್ದವನು ನಿನ್ನ ಅಣ್ಣ ಅಂತ. ಸ್ವಲ್ಪ ಮಟ್ಟಿಗೆ ಆತಂಕ ಕಡಿಮೆಯಾದರೂ ಮತ್ತೊಂದು ಚಿಂತೆ ಹುಟ್ಟಿಕೊಂಡಿದೆ. ಅಣ್ಣನೇನಾದರೂ ನಿನ್ನ ಮದುವೆಯ ವಿಷಯ ಮಾತಾಡಲು ಬಂದಿದ್ದರೆ ಅಂತ.. ಹಾಗಾಗಿ ನನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಿದ್ದೇನೆ. ನೀನು ಕೀಟ್ಸ್ ನಂತ ಪ್ರೇಮ ಕವಿಗಳ ಕವನಗಳನ್ನು ಓದುವಾಗ ಪ್ರೀತಿಯ ಭಾವನೆ ಹುಟ್ಟಲೇ ಇಲ್ಲವೇ. ಅಥವಾ ಅದನ್ನು ಕಲ್ಪನೆಯಲ್ಲೇ ಅನುಭವಿಸುತ್ತಿದ್ದೀಯಾ.

ಅದೇನೇ ಇರಲಿ, ನೀನು ನನ್ನ ಶಾಕುಂತಲೆ. ನಿನ್ನ ಕಪ್ಪು, ನೀಳ ಕೂದಲರಾಶಿಗೆ ಮರುಳಾಗಿದ್ದೇನೆ. ಮತ್ತು ನಿನ್ನ ಬೆಳ್ಳಗಿನ ದಂತಪಂಕ್ತಿ ನಕ್ಕಾಗ ಮಿಂಚಿನಂತೆ ಹೊಳೆಯುತ್ತದೆ ನೋಡು. ಅದು ನಿನ್ನ‌ ನಗುವಿನ‌ ಅಂದವನ್ನು ಹೆಚ್ಚಿಸುತ್ತವೆ. ಇದು ಖಂಡಿತ ಅತಿಶಯೋಕ್ತಿಯಲ್ಲ. ಇವೆಲ್ಲಕ್ಕಿಂತ ಹೆಚ್ಚು ನಿನ್ನ ಗಾಂಭೀರ್ಯದ ನಡಿಗೆ. ಆ ನಡಿಗೆಯಲ್ಲಿ ಒಂದು ಮೋಡಿಯಿದೆ. ಒಂದು ದಿನ ನಿನ್ನನ್ನು ನೋಡದಿದ್ದರೆ ನನಗೆ‌ ಕಸಿವಿಸಿಯಾಗುತ್ತದೆ. ಅಧ್ಯಯನ ಮಾಡಲು ಮನಸ್ಸಿಲ್ಲ ಮಧುರಾ. ನನ್ನ ತನು ಮನಸ್ಸಿನಲ್ಲೆಲ್ಲಾ ನೀನೇ ಆವರಿಸಿರುವೆ. ನನ್ನ ಕಲ್ಪನಾ ಲೋಕದಲ್ಲಿ ಯಾವಾಗಲೂ ನೀನಿರುವೆ. ಅಂದ ಹಾಗೆ ಮಧುರಾ ನಿನ್ನ ಮುಡಿಯಲ್ಲಿ ದಿನಾ ಕೆಂಪು ಗುಲಾಬಿ ಇರುತ್ತಿತ್ತಲ್ಲ.. ಅದನ್ನು ನೋಡಿ ಆಶ್ಚರ್ಯ ಪಟ್ಟಿದ್ದೆ. ಇವಳಿಗೆ ಒಂದೇ ರೀತಿಯ ಗುಲಾಬೀ ಹೂವು ಎಲ್ಲಿಂದ‌ ಸಿಗುತ್ತದೆ ಅಂತ. ಮೊನ್ನೆ ನಿನ್ನನ್ನು ಸಮೀಪದಿಂದ‌ ನೋಡಿದಾಗ ಅದು ಕೃತಕ ಹೂವು ಎಂದು ತಿಳಿಯಿತು. ಕೃತಕವೇಕೆ ನೈಜ ಹೂವನ್ನೇ ತಂದುಕೊಡುವೆ. ನಮ್ಮ ಮನೆ ಕೈತೋಟದಲ್ಲಿ ಗುಲಾಬಿ ಹೂಗಳು ತುಂಬಿವೆ. ನೀನು ಅದಕ್ಕೆ ಅವಕಾಶ ಮಾಡಿಕೊಡುವೆಯಾ?

ಅಂದ ಹಾಗೆ ನನ್ನ ಬಗೆ ತಿಳಿಯಲು ನಿನಗೂ ಕುತೂಹಲ ಇರಬಹುದಲ್ಲವೇ. ನಾನು ಮಧುಕರ. ತಂದೆ ತಾಯಿಯ ಏಕೈಕ ಮಗ. ಯಾವ ದುರಭ್ಯಾಸವೂ ಇಲ್ಲ. ಇತ್ತೀಚೆಗೆ ಮಾತ್ರ ನಶೆಯಲ್ಲಿ ಬಿದ್ದಿದ್ದೇನೆ. ಅದು ನಿನ್ನ ನಶೆ. ನಿನ್ನ ಸರಳತೆಯಿಂದಲೇ ನನ್ನ ಹೃದಯವನ್ನು ಕದ್ದಿದ್ದೀಯಾ. ಆದರೆ ನನ್ನ ಹೃದಯದಲ್ಲಿ ನಿನ್ನನ್ನೇ ಬಚ್ಚಿಟ್ಟಿದ್ದೀನಿ ಮಧುರ. ಆಹಾ ಮಧುರ ಅಂತ ಹೇಳುವಾಗ ಎಂತಾ ನವಿರು ಭಾವನೆ. ನಾನು ಕೆಲವು ಸಲ ಮಧುರ ಮಧುರ ಅಂತ ಒಬ್ಬನೇ ಇರುವಾಗ ಹೇಳಿಕೊಳ್ಳುತ್ತೇನೆ‌. ಅಷ್ಟರ ಮಟ್ಟಿಗೆ ನೀನು ನನ್ನನ್ನು ಕಾಡಿದ್ದಿ ಮಧುರಾ. ನೀನೊಪ್ಪಿದರೆ ನಿನ್ನ ಸುಕೋಮಲ ಕೈಗಳನ್ನು ನನ್ನ ಕೈಯಲ್ಲಿ ಬೆಸೆದುಕೊಳ್ಳಲಾ. ನಿನ್ನ ಮುಂಗುರುಳನ್ನು ಸರಿಸಿ ನನ್ನ ಪ್ರೀತಿಯ ಮೊಹರನ್ನು ಹಣೆಯಲ್ಲಿ ಅಚ್ಚೊತ್ತುವ ಆಸೆ ಮಧುರಾ‌. ನಿನ್ನ ನೋವು ನಲಿವುಗಳಲ್ಲಿ ಭಾಗಿಯಾಗುವ ಆಸೆ. ಆ ಆಸೆ ಈಡೇರಿಸುವಿಯಾ ಮಧೂ… ನಿನಗೆ ನನ್ನ ಮೇಲೆ ಒಲವಿದ್ದರೆ ನಾಳೆ ಹಳದಿ ಚೂಡಿದಾರ್ ಹಾಕಿಕೊಂಡು ಕ್ಯಾಂಟಿನಿನ ಹತ್ತಿರ ಬಾ. ಇಬ್ಬರೂ ಮಸಾಲಾದೋಸೆ ತಿನ್ನೋಣ. ನಿನಗೂ ಮಸಾಲೆ ದೋಸೆ ಇಷ್ಟ. ಈ ಪತ್ರ ಸಿಕ್ಕಿದ ನಂತರ ಎಂದಿನ ಸಮಯಕ್ಕೇ ಲೈಬ್ರರಿಗೆ ಬಾ. ನಾನು ಅಲ್ಲಿ ಇರುತ್ತೇನೆ. ಈ ಪತ್ರ ಓದಿದ್ದೀ ಅನ್ನುವುದಕ್ಕೆ ಒಮ್ಮೆ ನನ್ನತ್ತ ನೋಡು. ಅಂದ ಹಾಗೆ ನನ್ನನ್ನು ಹೇಗೆ ಗುರುತಿಸುವುದು ಅಂತೀಯಾ. ನಾಳೆ ತೆಳು ನೀಲಿ ಬಣ್ಣದ ತುಂಬುತೋಳಿದ ಶರ್ಟ್ ಹಾಕುತ್ತೇನೆ. ನೀನು ದಿನಾ ಕುಳಿತುಕೊಳ್ಳುವ ಜಾಗದ ಹತ್ತಿರವೇ ಕುಳಿತಿರುತ್ತೇನೆ‌ ಆಯ್ತಾ. ಪತ್ರವನ್ನು ಓದಿ ನನ್ನಲ್ಲಿ ಒಮ್ಮೆ ಮಾತಾಡು. ಬಾಕಿ ಮುಖತಾ. ಸಕಾರಾತ್ಮಕ ವಾಗಿ ಸ್ಪಂದಿಸುವಿಯೆಂದು ಭಾವಿಸುತ್ತೇನೆ.

ಪ್ರೀತಿಯೊಂದಿಗೆ,
ನಿನ್ನ ಆರಾಧಕ ಮಧುಕರ


ಲೇಖಕರ ಪರಿಚಯ:

ಶ್ರೀಮತಿ ಪರಮೇಶ್ವರಿ ಭಟ್‌ ರವರು ನಿವೃತ್ತ ಮುಖ್ಯೋಪಾಧ್ಯಾಯಿನಿ. ಕೇಂದ್ರೀಯ ವಿದ್ಯಾಲಯಗಳಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿ ಪ್ರವೃತ್ತಿಯಾದ ಬರವಣಿಗೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಂತರ್ಜಾಲ ಬಳಗಗಳಲ್ಲಿ ಕಥೆ ಕವನಗಳಲ್ಲಿ ಬಹುಮಾನ ಬಂದಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಶಿಶುಗೀತೆ ಸ್ಪರ್ಧೆ ಯಲ್ಲೂ ಅತ್ಯುತ್ತಮ ಪ್ರಶಸ್ತಿ ಬಂದಿರುತ್ತದೆ. ಹೆಚ್. ಜಿ . ರಾಧಾದೇವಿಯ ಸ್ಮರಣಾರ್ಥ ನಡೆಸಿದ ಕಥಾ ಸ್ಪರ್ಧೆ ಗಳಲ್ಲಿ ಎರಡು ಸಲ ಬಹುಮಾನ ಬಂದಿವೆ. ಇತ್ತೀಚೆಗೆ ಚೆಂಗದಿರು ಅಂತರ್ಜಾಲ ಪತ್ರಿಕೆ ನಡೆಸಿದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಬಂದಿರುತ್ತದೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x