ನನ್ನ ಆತ್ಮದಂಥವನೇ…….
ನಾ ನಿನ್ನೊಳಗಿನ ಅಂತರಾತ್ಮದಲ್ಲಿ ಹುದುಗಲು ಈ ಜನಮದಲ್ಲಿ ಸಾಧ್ಯವಾಗಲಿಲ್ಲ, ಕ್ಷಮಿಸೆಂದು ಕೇಳಲು ಒಳಮನಸ್ಸಿನ ಮುಖವಿಲ್ಲ. ಅರಿವಿರದ ಅವಧಿಯಲ್ಲಿ ನೀ ನನ್ನೊಳಗಿದ್ದಾಗ ನಾ ಅದನ್ನು ಅರಿಯದೇ ಅನಾಥಳಾದೆ. ನೀ ನನ್ನೊಳಗೆ ಅಂತರಂಗ ಬೆಳಗುವ ಆತ್ಮ ಶಕ್ತಿ. ನೀ ಪ್ರತಿಕ್ಷಣದಲ್ಲೂ ಆವಿರ್ಭವಿಸುವ ಬೆಳಕು. ನಿನ್ನ ಬೆಳಕಲ್ಲಿ ಹುಟ್ಟಿದ ಒಂದು ಪುಟ್ಟ ಕಿಡಿ ನಾನು. ನಿನ್ನನ್ನು ನಾ ಅಪ್ಪಿಯಾಗಿ ನನ್ನ ಮನಸ್ಸಿನಲ್ಲಿ ನಿನ್ನಂತೆ ಹಸಿರಿನ ಜಾಗ ಕೊಟ್ಟಿದ್ದೇನೆ. ಇಂದಿನ ಆಗು -ಹೋಗುಗಳ ವಾಸ್ತವಿಕತೆಯ ನೆಲೆಗಟ್ಟನ್ನು ಅರೆಕ್ಷಣ ಮರೆವಿನ ಗುಳಿಗೆಯಂತೆ ನುಂಗಿಬಿಡೋಣ. ಒಂದು ಸಂಭವಿಸಿದ ದಿನದಂದು ನಾನು ನಿನ್ನ ಬಿಟ್ಟು ದೂರ ಹೋಗುತ್ತೇನೆ, ಮತ್ತೆಂದೂ ಸಂಧಿಸದಿರುವ ದಿನಗಳ ಹುಡುಕುತ್ತಾ ಹೊರಡುತ್ತೇನೆ. ಆದರೆ ನೀನು ನನ್ನನ್ನು ನಾ ಬಯಸಿದಂತೆ ಬೀಳ್ಕೊಡಬೇಕು. ಅಂದಿನ ದಿನದಂದು ನಾ ನಿನಗೆ ಕೊಟ್ಟ ಒಲವಿನ ಉಡುಗೆಯಾದ ಪ್ರೀತಿಯನ್ನು ಮನಸ್ಸು ಮತ್ತು ಕಣ್ಣುಗಳಲ್ಲಿ ತುಂಬಿಸಿಕೋ, ನಿನ್ನ ಮುತ್ತುಗಳೆಂಬ ಹಿತವಚನ ನನ್ನನೀಗಾಗಲೇ ಅಲಂಕರಿಸಿರುವುದರಿಂದ ಬಿದಿರು, ಬೊಂಬು, ಹೂ, ಹಣ್ಣುಗಳಿಂದ ನನ್ನನ್ನು ಅಲಂಕರಿಸುವುದು ಬೇಡ, ನಿನ್ನ ಪರಿಸರ ಕಾಳಜಿಗೆ ನಾ ಕೊಡುವ ಕೊನೆಯ ಉಡುಗೊರೆ, ಇವೆಲ್ಲವುಗಳನ್ನು ತ್ಯಜಿಸುವಿಕೆ.
ಅಪ್ಪಿ… ನನ್ನಪ್ಪಿ.. ನೆನಪಿಟ್ಟುಕೋ ಗೋರಿಯನ್ನು ನೀನು ಮಾತ್ರ ಕಟ್ಟಬೇಕು. ಗೋರಿಯು ನಿನ್ನ ನಡವಳಿಕೆ, ವ್ಯಕ್ತಿತ್ವಗಳಂತೆ ಸರಳವಾಗಿರಲಿ. ಅದಕ್ಕೆ ನೀ ಒಂದು ಗಾಜಿನ ಗೋಪುರವನ್ನು ಕಳಶವಾಗಿಸು, ಅದರಲ್ಲಿ ನನ್ನ ಉಸಿರು ನಿನ್ನನ್ನು ಶತ -ಶತಮಾನಗಳವರೆಗೆ ತಲುಪುತಿರಲಿ, ನನ್ನಲ್ಲಿಯ ನಿನ್ನ ಪ್ರೀತಿಯಂತೆ. ಗೋರಿಯ ಸುತ್ತ ಯಾವುದೇ ರಜ ಅಂಟದಂತೆ ಜಾಗೃತಗೊಳಿಸು, ನಿನ್ನಲ್ಲಿ ಸದಾ ಉಸಿರಾಡುತ್ತಿರುವ ತತ್ವ, ಆದರ್ಶಗಳಂತೆ. ನೆನಪಿಡು ಅಪ್ಪಿ… ನಿನ್ನಿಂದ ಒಂದು ಹನಿಯೂ ಜಾರದಿರಲಿ, ನಿನ್ನ ಮೇಲಿನ ಮೋಹದ ದಣಿವಾರಿಸಲು.ಗೋರಿಯೊಳಗೆ ನನ್ನನಿಡುವಾಗ ನನ್ನ -ನಿನ್ನೊಂದಿಗಿನ ಕ್ಷಮಿಸಿ-ಕ್ಷಮಿಸಲಸಾಧ್ಯವಾದ ನೆನಪುಗಳನ್ನೊಮ್ಮೆ ನೆನೆದು ಅವುಗಳಿಗೆ ಮರೆವಿನ ತಿಲಾಂಜಲಿಯ ಷರಾ ಲೇಪಿಸಿ ಕೊಂದುಬಿಡು.
ನಿನ್ನೊಳಗಿನ ಗಾಂಧಿ, ಬುದ್ಧನ್ನು ನನ್ನಲ್ಲಿರುವ ಮಣ್ಣಿನೊಂದಿಗೆ ನಗು ನಗುತ್ತಾ ಬೆರೆಸು ಅಪ್ಪಿ ಮತ್ತೆ ಮೊಳಕೆಯೊಡೆಯುತ್ತೇನೆ ನಿನ್ನ ಅಂಶವಾಗಿ.ಇಂದು ನೀ ನನ್ನಲ್ಲಿ ಉತ್ತು, ಬಿತ್ತಿರುವ ಆಶಾಭಾವಗಳನ್ನು ನೀ ಬಯಸಿದಂತೆ ನೆರಳಾಗಿ ಎಲ್ಲೆಡೆ ಹಬ್ಬಿಸಿ, ನಿನ್ನಂತೆ ಎಲ್ಲರಿಗೂ ಮಾದರಿಯ ಹೆಮ್ಮರವಾಗಿ ಸೆಟೆದು ನಿಲ್ಲುತ್ತೇನೆ. ಆದರೆ ಅಪ್ಪಿ…. ನೀ ನನ್ನೊಂದಿಗೆ ಸದಾ ಪ್ರೀತಿಯಿಂದ ನೇವರಿಸುತ್ತಿದ್ದರೆ ಮಾತ್ರ. ನೀನಿಲ್ಲದೆ ಅರೆ ನಿಮಿಷವೂ ನಾನು ಇರಲಾರೆ, ಇದನ್ನು ನೀನು ಉಯಿಲು ಬರೆದಿಟ್ಟುಕೋ. ಭಾವನೆಗಳಿಗೆ ಸ್ವಾರ್ಥ ದ ಬಣ್ಣ ಹಚ್ಚಿ ಮೆತ್ತಾಡುವ ಈ ಜನ ಬಾಂಧವರ ನಡುವೆ ನೀ ತೋರಿದ ಆತ್ಮೀಯತೆ, ಮಮತೆಗೆ ನಾ ನಿನಗೆ ಋಣಿ ಎಂಬ ಪಟ್ಟ ಹಚ್ಚಿಕೊಳ್ಳುತ್ತೇನೆ.ನೀ ಅಮ್ಮನಾಗಿ, ಅಪ್ಪನಾಗಿ, ಸ್ನೇಹಿತನಾಗಿ ಹಂಚಿದ ಒಲವಿನ ಕಂಪು ನನ್ನನ್ನು ಗೋರಿಯೊಳಗೆ ಒಂಟಿಯಾಗಿಸದಿರಲೆಂದು, ಅಂದು ನಾ ಬೇಡಿ ಕಾಡಿದ ಆ ಹೂವನ್ನು ನಿನ್ನ ತಿಳಿ ಮನಸ್ಸಿನಿಂದ ನನ್ನ ಜೊತೆಗಿಡುವುದನ್ನು ಮರೆಯ ಬೇಡ. ನಿನ್ನ ಜೀವಾಳವಾಗಿರುವ ಅದ್ಭುತ ಕವಿತ್ವ ಜ್ಞಾನದಿಂದ ಒಂದು ಪ್ರೇಮ ಪತ್ರ ಬರೆದು, ಅದಕ್ಕೆ ಸಂಬಂಧಿಸಿದಂತೆ, ನೀ ನನ್ನನ್ನು ವಿಶೇಷವಾಗಿ ಬೀಳ್ಕೊಟ್ಟ ಆತ್ಮೀಯತೆಯ ಅನುರಾಗವನ್ನು, ನಿನ್ನ ಕಣ್ ಚಳಕದಿಂದ ಅದ್ಭುತವಾಗಿ ತೆಗೆದ ಚಿತ್ರಪಟ ಅಂಟಿಸಿ, ಪಕ್ಕದಲ್ಲಿ ಒಂದು ಶಾಸನವಾಗಿಸು, ಅದು ಎಲ್ಲರಿಗೂ ಮಾದರಿಯಾಗಿರಲಿ.
ಅದೊಂದು ದಿನ ನನ್ನ -ನಿನ್ನ ಆಕಸ್ಮಿಕ ಭೇಟಿಯಾದ ಸುಂದರ ದಿನದ ಸಂಜೆಯಲ್ಲಿ, ಭೂಮಿಯನ್ನು ಸಂಧಿಸಲು ಹಾತೊರೆಯುತ್ತಿರುವ ಜಗದೊಡಯನನ್ನು ತೋರಿಸುತ್ತಾ, ನಿನ್ನ ಪದ್ಮಾಸನಯುಕ್ತ ಕಾಲುಗಳ ಮೇಲೆ ನನ್ನ ಕೂರಿಸಿಕೊಂಡು, ನನ್ನ ತಲೆ ಸವರುತ್ತ ನೀ ಹೇಳಿದ, ನನ್ನ -ನಿನ್ನ ಈ ಸಮಾಜದಲ್ಲಿ ಹಲವೆಂಬ ಜಾತಿ ಬೇರುಗಳನ್ನು ಬುಡ ಸಮೇತ ಕೀಳುವ ಲೇಖನಿಯ ಬಗ್ಗೆ ನೀ ಸರಾಗವಾಗಿ ಮಾತನಾಡಿದ್ದೆ, ಆ ಮಾತುಗಳೆಲ್ಲವು ಇಂದೂ, ನನ್ನ ಕಿವಿಯಲ್ಲಿ ಗುಯ್ ಗುಡುತ್ತಾ ಆಳವಾದ ಕಂದಕಗಳನ್ನೇ ಸೃಷ್ಟಿಸಿಬಿಟ್ಟಿವೆಯಾದ್ದರಿಂದ, ಅಪ್ಪಿ….. ನನ್ನ ಗೋರಿಯನ್ನು ಸಹ ನೀನು ಯಾವ ಜಾತಿ, ಮತ, ಧರ್ಮಗಳು ಅನುಕರಣೆಯಾಗದ ರೀತಿಯಲ್ಲಿ ನಿನ್ನಲ್ಲಿ ಅಗಾಧವಾಗಿರುವ ಕ್ರಿಯಾಶೀಲ ಸೃಜನಶೀಲತೆಯನ್ನು ಬಳಸಿ ರಚಿಸುವ ಮಾರ್ಪಾಡು ಮಾಡು.ಅದರಲ್ಲೂ ಸಹ ನನ್ನಪ್ಪಿ ಎಲ್ಲರಲ್ಲು ಭಿನ್ನತೆ ಮೆರೆಯಲಿ. ನನ್ನ ಗೋರಿಯ ಸುತ್ತಾ, ಕವಿ ಆಚಾರ್ಯ ಕುವೆಂಪುರವರ ವಿಶ್ವಮಾನವ ಸಂದೇಶಗಳನ್ನು ಬರೆದು ಅಲಂಕರಿಸು ನಿನ್ನ ಮುದ್ದಾದ ವರ್ಣ ರಂಜಿತ ಅಕ್ಷರಗಳಿಂದ. ಆದರೆ ಗಮನವಹಿಸು, ಆ ಅಕ್ಷರಗಳು ಎಂದಿಗೂ ಮಾಸಬಾರದು, ಅವುಗಳ ಹೊಳಪು ಕಳೆದುಕೊಳ್ಳ ಬಾರದು. ನಿನ್ನಂತೆ ಸದಾ ಎಲ್ಲರನ್ನು, ತನ್ನೆಡೆಗೆ ನಗು, ನಗುತ್ತಾ ಆಕರ್ಷಿವ ರೀತಿಯಲ್ಲಿ ನೀನು ಕೆತ್ತಬೇಕು. ಹಾ… ! ಅಪ್ಪಿ… ದಯಮಾಡಿ, ನನ್ನ ಗೋರಿಯ ತೇರು ಸಾಗುವಾಗ, ಬೇರೆಯಾರನ್ನು ನೀನಲ್ಲಿ ಸೇರಿಸಬೇಡ. ನನ್ನ ಪ್ರೀತಿಯೆಂಬ ನಿಷ್ಕಲ್ಮಶ ತೇರಿಗೆ, ಯಾರ ಉಸಿರು ತಾಕಿ ಅಪವಿತ್ರವಾಗುವುದನ್ನು ನಾನು ಸಹಿಸಲಾರೆ. ನೀನು ಮಾತ್ರ ನನ್ನನ್ನು ನಿನ್ನ ಶಕ್ತಿಭರಿತ, ಆಕರ್ಷಕ ತೋಳುಗಳಿಂದ ಆಲಂಗಿಸಿ ಬಾಚಿ ತಬ್ಬಿಕೊಂಡು ಹೊತ್ತುತಂದು ಗೋರಿಯೊಳಗೆ ಮಲಗಿಸಿಬಿಡು.
ಕೊನೆಗೆ, ಕೊನೆ ಎಂಬಂತೆ ನಿನ್ನ ಜ್ಞಾನ ತುಂಬಿದ ಕಡಲ ಎರಡೂ ಹಸ್ತಗಳಿಂದ ನನ್ನ ನಿರಾಸೆ ಮುಖವನ್ನೊಮ್ಮೆ ನಯವಾಗಿ ಮಾತೃ ಕೈಗಳಿಂದ ಸವರು, ಆದರೆ ಅಪ್ಪಿ… ಯಾವ ಕ್ಷಣಕ್ಕೂ ನೀ, ನನ್ನ ನೊಂದು ನೋಡ ಬೇಡ, ನುಡಿಯ ಬೇಡ ಏಕೆಂದರೆ ನಿನ್ನಲ್ಲಿಯ ಆ ಯಾತನೆಯನ್ನು ಅರೆ ಘಳಿಗೆಯೂ ನಾನು ಸಹಿಸಲಾರೆ. ಮರೆಯಬೇಡ……ನನ್ನ ಕಣ್ಣುಗಳಲ್ಲಿ ನಿನ್ನ ಪ್ರತಿಬಿಂಬ ಅಚ್ಚಾಗಿರಬೇಕು, ನಿನ್ನ ನಾ ಹಿಂಬಾಲಿಸಿದ ರೀತಿಯಂತೆ. ಸ್ಪರ್ಶಿಸಿರದ ನಿನ್ನ ಅಧ್ಯಾತ್ಮ ಶುದ್ಧ ಅಧರಗಳಿಂದ ನನ್ನ ಹಣೆಗೊಂದು ಹಿಂದಿರುಗಿಸಲಾಗದ ಮುತ್ತನಿಟ್ಟು ನುಡಿ… ನನ್ನಂಶವಾಗಿ ಆವಿರ್ಭವಿಸು ಮಗಳೇ ಎಂದು. ಅಪ್ಪಿ… ಇವೆಲ್ಲವೂ ನಿನ್ನಿಂದಾಗಲಿಲ್ಲವೆಂದರೆ ಮರುಗಬೇಡ, ನಿನ್ನ ವಿಶಾಲ ಮನಸ್ಸಿನ ಆಲಯದಲ್ಲಿ ನನಗೊಬ್ಬಳು ಅಪ್ಪಿ ಇದ್ದಳೆಂಬ ಜೀವಂತಿಕೆಗೆ ಶಾಶ್ವತವಾಗಿ ಗೋರಿ ಕಟ್ಟಿ ಬಚ್ಚಿಡು. ಹಾಗೆ ಮನಸ್ಸಿನಲ್ಲಿ ಸ್ಮಾರಕ ಕಟ್ಟು ನಿನ್ನ ಉಸಿರಿನಿಂದ ಹೆಸರಿಡು, ವಾಕ್ಯ ಕಾಣಿಸು ” ನನ್ನ ಕನಸಿನ ಮಗು ಗೋರಿಯಲ್ಲಿ ಚಿರನಿದ್ರೆ ಅರಸಿದೆ… ಅದು ಆವಿರ್ಭವಿಸುವ ನೀರಿಕ್ಷೆಯಲ್ಲಿ ನಾ…” ಎಂದು.
”ಪ್ರಕೃತಿಯಂತೆ ಪ್ರೇಮ
ಹಸಿರಾಗಿರುವವರೆಗೆ ‘
ಇಂತಿ ,
ನಿನ್ನಾತ್ಮದ ಒಂದಂಶ