ಬೆಳದಿಂಗಳ ನಗುವಿನ ಹುಡುಗಿಯೇ,
ಮೊನ್ನೆ ನಿನ್ನನ್ನು ಭೇಟಿಯಾದ ನಂತರ ನಾನು ನಾನಾಗಿ ಉಳಿದಿಲ್ಲ. ನಿನ್ನ ನೆನಪುಗಳನ್ನು ಎಷ್ಟೇ ಕೊಡವಿಕೊಂಡು ಎದ್ದರೂ ಮತ್ತೆ ಮತ್ತೆ ನಿನ್ನೆಡೆಗೇ ವಾಲುತ್ತಿದ್ದೇನೆ. ಮೊದಲಿಗೆ ಇದು ನಿನ್ನೆಡೆಗಿನ ಆಕರ್ಷಣೆಯಷ್ಟೇ ಅಂದುಕೊಂಡಿದ್ದೆ. ಹೆಚ್ಚೆಂದರೆ ಯಾವುದೋ ಗಳಿಗೆಯಲ್ಲಿ ಹುಟ್ಟಿ ಕೆಲವು ದಿನಗಳವರೆಗೆ ಕಾಡಬಹುದಾದ ಮೋಹವೆಂದುಕೊಂಡೆ. ಉಹುಂ.. ನನ್ನೆಣಿಕೆ ತಪ್ಪಾಯಿತು. ನೀನು ನನ್ನನ್ನು ಆವರಿಸಿಕೊಂಡ ಪರಿಗೆ ಬೆರಗಾಗುತ್ತಿರುವಾಗಲೇ ನಿನ್ನ ನೆನಪುಗಳ ಬಂಧದಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದೇನೆ.
ಯಾರೋ ಗೀಚಿದ ಕವಿತೆಯ ಸಾಲುಗಳಲ್ಲಿ, ಓದಲು ಕೈಗೆತ್ತಿಕೊಂಡ ಕಥೆಯಲ್ಲಿ, ರಫಿಯ ಸಂಗೀತದ ಅಮಲಿನಲ್ಲಿ… ಅಷ್ಟೇ ಏಕೆ? ಅಚಾನಕ್ಕಾಗಿ ಎದುರಾಗುವ ಪುಟ್ಟ ಮಗುವಿನ ನಗುವಿನಲ್ಲೂ ನೀನಷ್ಟೇ ಕಾಣುತ್ತಿ! ಅರೆ ಬಿರಿದ ಮಲ್ಲಿಗೆಯ ಮೊಗ್ಗಿಗೂ ನಿನ್ನದೇ ಘಮ. ದೇವರ ಪೂಜೆಗೆಂದು ಅಮ್ಮ ಕೊಯ್ದು ತಂದಿಟ್ಟ ಗುಲಾಬಿಯ ಪಕಳೆಗಳು ನಿನ್ನ ಮೈಯಷ್ಟೇ ಕೋಮಲ. ದೇವರ ಮನೆಯಲ್ಲಿ ಕಣ್ಮುಚ್ಚಿ ಕೂತಾಗ ಹಿಂದೆಲ್ಲಾ ಕಾಣುತ್ತಿದ್ದ ದೇವರ ಚಿತ್ರಗಳೆಲ್ಲಾ ಮಾಯವಾಗಿ ನಿನ್ನ ಮುಖವೊಂದೇ ಕಾಣಿಸಿ ಒಳಗೊಳಗೇ ಅಳುಕಾಗುತ್ತದೆ ಎಂಬುದನ್ನು ದೇವರಲ್ಲೂ ಹೇಳಲಾರೆ! ಈಗೀಗ ಅವನಿಗಾಗಿ ಉರಿಸುವ ಅಗರಬತ್ತಿಯ ಸುವಾಸನೆಗಿಂತಲೂ ನೀನು ಬಳಸುವ ಲ್ಯಾವೆಂಡರ್ ಪರ್ಫ್ಯೂಮಿನ ಪರಿಮಳವೇ ಹೆಚ್ಚು ಹಿತವಾಗುತ್ತಿದೆಯೆಂಬುದು ಬಹುಶಃ ಅವನಿಗೀಗಾಗಲೇ ಗೊತ್ತಾಗಿರಬಹುದು!
ನಿಂಗೆ ಗೊತ್ತೇನೇ ಹುಡುಗಿ? ಮೊದಲೆಲ್ಲಾ ದಿನಕ್ಕೆ ಇಪ್ಪತ್ತು ಪುಟಗಳಷ್ಟನ್ನಾದರೂ ಓದದೇ ಹೋದರೆ ದೇಹಕ್ಕೆ ಎಷ್ಟೇ ಆಯಾಸವಾಗಿದ್ದರೂ ನಿದ್ದೆ ಬಾರದೆ ಹೊರಳಾಡುತ್ತಿದ್ದ ಹುಡುಗ ನಾನು. ಈಗ ಪುಸ್ತಕ ಕೈಗೆತ್ತಿಕೊಂಡರೆ ಒಂದು ಪುಟವೂ ಸರಿಯಾಗಿ ಓದಲಾಗುತ್ತಿಲ್ಲ. ಓದಿದ ಸಾಲುಗಳು ಮೆದುಳಿಗೇನು ತಲೆಯೊಳಗೂ ಇಳಿಯುತ್ತಿಲ್ಲ. ಆಗೆಲ್ಲಾ ನಿನ್ನ ವಾಟ್ಸಾಪು ಡಿಪಿಯನ್ನಷ್ಟೇ ನೋಡುತ್ತಾ ಇದ್ದು ಬಿಡುತ್ತೇನೆ. ನಿನ್ನ ನಗುವೊಂದೇ ನನ್ನ ಹೃದಯದೊಳಗೂ ಇಳಿದು ಹೋದಂತಾಗಿ ಎಷ್ಟೋ ಹೊತ್ತಿನ ಬಳಿಕ ನಿದ್ರೆ ಆವರಿಸಿಕೊಳ್ಳುತ್ತದೆ. ಮತ್ತೆ ಕನಸಿನಲ್ಲೂ ನಿನ್ನದೇ ಕಲರವ. ಬರುತ್ತಿ.. ನಗುತ್ತಿ.. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿ.. ಕೈಯನ್ನು ಮೆಲುವಾಗಿ ಒತ್ತಿ ಹಿಡಿದು ಕಿವಿಯಲ್ಲಿ ಅದೇನೋ ಹೇಳುತ್ತಿ. ಅದೊಂದೇ ಕನಸು ಮತ್ತೆ ಪುನರಾವರ್ತನೆಯಾದರೂ ನೀನು ಹೇಳುವುದೇನೆಂದು ನಂಗೆ ಗೊತ್ತೇ ಆಗುವುದಿಲ್ಲ. ಇನ್ನೊಮ್ಮೆ ಸಿಗುವಾಗಲಾದರೂ ಹೇಳೇ ಮಹರಾಯ್ತಿ.
ನನ್ನ ವಯಸ್ಸಿನ ಹುಡುಗರೆಲ್ಲರೂ ಪ್ರೀತಿ ಪ್ರೇಮವೆಂದು ಒದ್ದಾಡುತ್ತಾ ಇದ್ದಾಗ ಅವರಿಗೆಲ್ಲಾ ಬರೇ ಮರುಳು ಎಂದು ನಕ್ಕು ಬಿಟ್ಟವನು ನಾನು. ಈಗ ಅವರು ಅದನ್ನೆಲ್ಲಾ ಮರೆತು ಅಪ್ಪ ಅಮ್ಮ ತೋರಿಸಿದ ಹುಡುಗಿಯನ್ನು ಮದುವೆಯಾಗಿ ಹೊಸ ಇನ್ನಿಂಗ್ಸ್ ಶುರು ಮಾಡಿರುವ ಹೊತ್ತಲ್ಲಿ ನಾನು ಬಿದ್ದಿದ್ದೇನೆ ಪ್ರೀತಿಯಲ್ಲಿ ಮೇಲೇಳಲೇ ಆಗದಂತೆ! ವರ್ಷದ ಹಿಂದೆ ಅಚಾನಕ್ಕಾಗಿ ಸಿಕ್ಕವಳು ನನ್ನನ್ನು ಈ ಪರಿ ಕಾಡಬಹುದೆಂಬ ಕಲ್ಪನೆಯೂ ಇರಲಿಲ್ಲ ತೀರಾ ಇತ್ತೀಚಿನವರೆಗೆ. ನನ್ನ ಅಶ್ವ ರಾಯಲ್ ಎನ್ಫೀಲ್ಡನ್ನು ಹತ್ತಿ ಹೊರಟೆಯೆಂದರೆ ಎಷ್ಟು ಗಾವುದ ದೂರವಾದರೂ ಒಬ್ಬನೇ ಹೋಗಿ ಸೂರ್ಯ ಮುಳುಗುವ ಮುನ್ನ ಮನೆಗೆ ವಾಪಸ್ಸಾಗುತ್ತಿದ್ದ ಹುಂಬ ನಾನು. ಇವತ್ತು ಮನೆಯಿಂದ ಅರ್ಧ ಫರ್ಲಾಂಗು ದೂರ ಹೋಗುವಾಗಲೂ ಜೊತೆಯಲ್ಲಿ ನೀನಿರಬೇಕಿತ್ತು ಅಂತ ಅನ್ನಿಸುವಂತೆ ಮಾಡಿಬಿಟ್ಯಲ್ಲವೇ ಹುಡುಗಿ.. ಈ ಇಂದ್ರಜಾಲದ ವಿದ್ಯೆಯನ್ನು ಎಲ್ಲಿಂದ ಕಲಿತು ಬಂದೆ?
ನಿನ್ನ ಕಣ್ಣ ರೆಪ್ಪೆಯ ಒಳಗೆ
ಹುದುಗಿ ಕುಳಿತಿರುವ ಆಸೆ
ನಿನ್ನ ಕಣ್ಣಲ್ಲಿ ಚಲಿಸದ ಚಿತ್ರ
ನಾನಾಗುವ ಆಸೆ
ಅಷ್ಟಕ್ಕೂ ನಾನು ಸೋತದ್ದು ನಿನ್ನ ಬೆಳದಿಂಗಳಂಥಾ ನಗುವಿಗಾ? ಬಲಗೆನ್ನೆ ಮೇಲೆ ಇಳಿಬಿಟ್ಟ ಮುಂಗುರುಳಿಗಾ? ಎಲ್ಲವನ್ನೂ ಬಲ್ಲೆ ಎಂದು ಹೇಳುವ ಮೋಹಕ ಕಂಗಳಿಗಾ? ಎದುರಿಗಿಲ್ಲದಿದ್ದರೂ ಕಾಡುವ ನಿನ್ನ ಜೇನ ದನಿಗಾ? ಅಲ್ಲ.. ಗುಂಪಲ್ಲಿದ್ದರೂ ವಿಭಿನ್ನವಾಗಿ ನಿಲ್ಲುವ ನಿನ್ನ ವ್ಯಕ್ತಿತ್ವಕ್ಕಾ? ಪದೇ ಪದೇ ನನ್ನನ್ನೇ ಕೇಳಿಕೊಳ್ಳುತ್ತೇನೆ. ಉತ್ತರ ಸಿಗುವುದಿಲ್ಲ. ನನ್ನ ಹೃದಯದಲ್ಲಿ ನಗಾರಿ ಬಾರಿಸಿ, ಎಲ್ಲ ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸುವ ತುಂಟ ಹುಡುಗಿಯೇ ನಿನ್ನಲ್ಲಿದೆಯೇನೆ ಉತ್ತರ? ನಿನ್ನ ಬಿಳೀ ಕೊರಳಿಗೆ ಇಳಿಬಿಟ್ಟ ಬಂಗಾರದ ಸರವನ್ನು ತಬ್ಬಿ ಹಿಡಿದಿರುವ ಪುಟ್ಟ ಹೃದಯದ ಲಾಕೆಟ್ಟಿಗೆ ಗೊತ್ತಿರಬಹುದೇನೋ ಕೇಳು !
ನೀನು ಮೊನ್ನೆ ತಿಳಿ ಗುಲಾಬಿ ವರ್ಣದ ಸೀರೆಯುಟ್ಟು ಅತೀ ನಾಜೂಕಿನಿಂದ ನನ್ನೆಡೆಗೆ ನಡೆದು ಬರುತ್ತಿದ್ದಾಗ ನನ್ನ ಎದೆ ಸೆಕೆಂಡಿಗೆ ಇಪ್ಪತ್ತು ಬಾರಿ ಹೊಡೆದುಕೊಂಡದ್ದು ನಿಂಗೆ ಗೊತ್ತಾಗದಿರಲೆಂದು ಸುಮ್ಮನೇ ಹಾರ್ನು ಹೊಡೆದದ್ದು ನಿಜಕ್ಕೂ ನಿನಗೆ ಗೊತ್ತಾಗಲಿಲ್ಲವೇನೇ ಹುಡುಗಿ? ನೀನು ತುಟಿಗೆ ಹಚ್ಚಿದ್ದ ಪಿಂಕು ಲಿಪ್ಸ್ಟಿಕ್ಕೂ ಗೊತ್ತಾಗಿದೆಯೆಂಬಂತೆ ನಕ್ಕಂತಾಗಿ ನಾನು ಪೂರಾ ಬೆವೆತಿದ್ದೆ! ನೀವು ಹುಡುಗಿಯರು ಸೀರೆಯಲ್ಲೇ ಅತ್ಯಂತ ಸುಂದರವಾಗಿ ಕಾಣುತ್ತೀರೆಂದು ಗೊತ್ತಿದ್ದೂ ಆ ಸುಡುಗಾಡು ಕುರ್ತ, ಜೀನ್ಸು, ಸ್ಕರ್ಟುಗಳನ್ನೆಲ್ಲಾ ಧರಿಸುವುದು ನಮ್ಮಂಥಾ ಬಡಪಾಯಿ ಹುಡುಗರಿಗೆ ಮಾಡುವ ಮೋಸವಲ್ಲವಾ ಎಂದು ಮೊದಲ ಬಾರಿಗೆ ಗೊಂದಲಕ್ಕೆ ಬಿದ್ದೆ. ಸುಖಾಸುಮ್ಮನೆ ನಿನ್ನನ್ನು ಹೊಗಳಿ ಉಬ್ಬಿಸಲು ಹೇಳುತ್ತಿಲ್ಲ ಕಣೇ. ನೀನು ಆ ದಿನ ಪುಟ್ಟ ದೇವತೆಯಂತೆಯೇ ಕಾಣುತ್ತಿದ್ದಿ. ನಿನ್ನ ಹಣೆಗೆ ಒಂದೇ ಒಂದು ಹೂ ಮುತ್ತನ್ನು ನೀಡಬೇಕೆಂಬ ಆಸೆ ಉಕ್ಕುಕ್ಕಿ ಬಂದರೂ ಹೇಗೋ ಸಾವರಿಸಿಕೊಂಡೆ! ಮುನಿಸಿಕೊಳ್ಳಬೇಡವೇ ಹುಡುಗಿ…ನಿನ್ನಪ್ಪಣೆಯಿಲ್ಲದೇ ನಿನ್ನನ್ನು ಯಾವತ್ತೂ ಸ್ಪರ್ಶಿಸಲಾರೆ.
ನೀನೇ ನನ್ನ ಹೃದಯದ ಬಡಿತ..ನೀನೇ ನನ್ನ ಉಸಿರು..ನೀನಿಲ್ಲದೆ ನಾನು ಬದುಕಲಾರೆ ಅಂತೆಲ್ಲ ಹದಿಹರೆಯದ ಹುಡುಗರಂತೆ ಬಡಬಡಿಸಲಾರೆ. ನಿನ್ನನ್ನು ಕಂಡಾಗಲೆಲ್ಲ ಹೃದಯ ಬಡಿತ ಏರುಪೇರಾಗುವುದು ಹೌದು. ನನ್ನ ಉಸಿರಲ್ಲಿ ನಿನ್ನ ಹೆಸರು ಬೆರೆತಿರುವುದೂ ಹೌದು. ನೀನು ಜೊತೆಯಾದರೆ ಈ ಬದುಕೇ ಒಂದು ಸಂಭ್ರಮವಾಗುವುದಂತೂ ಹೌದೇ ಹೌದು. ಹಿಂದೊಮ್ಮೆ ನೀನು ಅಂದಿದ್ದೆ ನಿನ್ನ ಬೊಗಸೆ ಕಂಗಳಲ್ಲಿ ಕನಸು ತುಂಬಿಕೊಂಡು-‘ ನನ್ನ ಹುಡುಗ ನನ್ನನ್ನು ಮುಗಿಲೆತ್ತರದಷ್ಟು ಪ್ರೀತಿಸಬೇಕೆಂದು’. ಕೂಡಲೇ ನಿನ್ನ ತಲೆಗೊಂದು ಮೊಟಕಿ ಹೇಳಬೇಕೆಂದಿದ್ದೆ-‘ ಹುಚ್ಚು ಹುಡುಗಿ, ಪ್ರೀತಿಯನ್ನು ಅಳೆಯಲು ಅಳತೆಗೋಲಿಲ್ಲ’ ಎಂದು. ಅದಕ್ಕೇ, ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ, ಪ್ರೀತಿಸಬಲ್ಲೆ ಎಂದೆಲ್ಲಾ ಹೇಳಲಾರೆ. ಬದುಕಿಡೀ ನಿನ್ನನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ ಎಂದಷ್ಟೇ ಹೇಳಬಲ್ಲೆ. ನಿನ್ನ ಕೆಳತುಟಿಯ ಪಕ್ಕ ಇರುವ ಮಚ್ಚೆಯ ಮೇಲಾಣೆ..ನನ್ನ ಒಲವ ಬಟ್ಟಲು ಯಾವತ್ತಿಗೂ ಖಾಲಿಯಾಗದು.
ಅದ್ಯಾಕೋ, ಕಾಫಿ ಡೇಯಲ್ಲೋ, ಪೋಲಾರ್ ಬೇರ್ ನಲ್ಲೋ ಲೋಕದ ಪರಿವೆಯೇ ಇಲ್ಲದಂತೆ ಕೂತ ಜೋಡಿಗಳನ್ನು ಕಂಡಾಗಲೆಲ್ಲ ಮರುಕ ಹುಟ್ಟುತ್ತದೆ. ಈ ಜನಸಾಗರದಿಂದ ದೂರವಾಗಿ ನಮ್ಮೂರಿನ ಗುಡ್ಡ ಹತ್ತಿ ನನ್ನ ಹುಡುಗಿಯ ಜೊತೆ ಕೂತು ಸೂರ್ಯಾಸ್ತಮಾನವನ್ನು ಕಣ್ಣುತುಂಬಿಕೊಳ್ಳಬೇಕೆಂಬ ಬಯಕೆಯೊಂದು ಹುಚ್ಚೆದ್ದು ಕುಣಿಯುತ್ತದೆ.
ಕಳೆಯ ಬೇಕಿದೆ ಒಂದು ಮಧುರ ಸಂಜೆ
ನಿನ್ನ ಜೊತೆ
ಕಳೆದುಕೊಳ್ಳಬೇಕಿದೆ ನನ್ನನ್ನು ನಾನು
ಮತ್ತೆ ಮತ್ತೆ
ಹಂಚಿಕೊಳ್ಳಬೇಕಿದೆ ನಿನ್ನೊಂದಿಗೆ ನೂರೆಂಟು ಮಾತುಗಳನ್ನು…ಹರವಿ ಇಡಬೇಕಿದೆ ನನ್ನೆಲ್ಲ ಗುಟ್ಟುಗಳನ್ನು ನಿನ್ನ ಅಂಗೈಯೊಳಗೆ…ಕನಸಬೇಕಿದೆ ನಮ್ಮ ಚೆಂದದ ನಾಳೆಗಳ ಬಗ್ಗೆ…ಸಾಗಬೇಕಿದೆ ಬಹಳಷ್ಟು ದೂರ…ಕಾಣಬೇಕಿದೆ ಹೊಸದೊಂದು ತೀರ.. ಜೊತೆಗೆ ಹೆಜ್ಜೆ ಹಾಕಲು ಬರುತ್ತೀಯಲ್ಲಾ?
ಹೂಂ ಅನ್ನಲಾದರೂ ಬಾ…
ಇಂತಿ
ನಿನ್ನವನಾಗಲು ಕಾಯುತ್ತಿರುವ ನಾನು