ಬದುಕು ಬರೀ ಇವೇ ಅಲ್ಲ ಎಂದು ನಾ ಬಲ್ಲೆ: ಸಹನಾ ಪ್ರಸಾದ್

ನನ್ನ ನಲ್ಲ, ಪ್ರಿಯತಮ, ಇನಿಯ, ಪ್ರಾಣಸ್ನೇಹಿತ, ಗೆಳೆಯ, ನನ್ನೊಲವೇ, ಜೀವವೇ, ಸ್ಪೂರ್ತಿಯೇ, ಮನದಲ್ಲಿ ಭದ್ರವಾಗಿ ತಳವೂರಿರುವ ಮೂರ್ತಿಯೇ…ಲವ್ ಯೂ…ತುಂಬಾ ತುಂಬಾ…

ಉಮ್ಮ್…ನಿನ್ನ ಪ್ರೀತಿಯಲ್ಲಿ ಕೊಚ್ಚಿ ಹೋಗುತ್ತಿರುವ ನಿಮ್ಮ ಮನದನ್ನೆಯ ಪತ್ರ ಬರೀ ಪದಗಳ ಜೋಡನೆಯಲ್ಲ. ಹೃದಯದ ತಂತಿಗಳ ಮಿಡಿತ, ಧಮನಿಗಳಲ್ಲಿ ಸೇರಿ ಹೋಗಿರುವ ನಿಮ್ಮ ಪ್ರೀತಿಯ ತುಡಿತ,ಮನಸ್ಸಿನಲ್ಲಿ ಉಕ್ಕುತ್ತಿರುವ ಭಾವೆನೆಗಳನ್ನು ಪದಪುಂಜದಲ್ಲಿ ಹಿಡಿಯಲು ಮಾಡುತ್ತಿರುವ ಪ್ರಯತ್ನ! ಜೀವನದ ಸೆಲೆ ನೀವು, ಆಮ್ಲಜನಕದ ತರಹ ಅತ್ಯಾವಶ್ಯಕ ನನಗೆ. ನಿಮ್ಮ ಇರುವಿಕೆ ಬಹಳ ಮುಖ್ಯ. ಎದೆಬಡಿತ ನಿಮ್ಮದೇ ರಾಗ, ನಿಮ್ಮದೇ ತಾಳ, ಧ್ಯಾನ…

ಶ್ರೀಕೃಷ್ಣನ ನೆನೆದು ಗೋಪಿಕೆಯರು ತಾವು ಮಾಡುತ್ತಿದ್ದನ್ನು ಬಿಟ್ಟು ಅವನೆಡೆ ಧಾವಿಸುತ್ತಿದ್ದರಂತೆ. ಹಾಲೂಡಿಸುತ್ತಿದ್ದ ಮಗು, ಉಣ್ಣಲಿಕ್ಕಿದ್ದ ಕೈಹಿಡಿದವನು, ಅರ್ಧ ಪೂರೈಸಿದ ಮನೆ ಕೆಲಸ, ಅಷ್ಟೇಕೆ ಅರೆಬರೆ ಧರಿಸಿದ ವಸ್ತ್ರದಲ್ಲೇ ಅವನ ಕೊಳಲನಾದವನ್ನು ಅನುಸರಿಸಿ ಮಧ್ಯರಾತ್ರಿಯಲ್ಲೂ ಹೋಗುತ್ತಿದ್ದರಂತೆ. ಅರ್ಥ ಆಗುತ್ತೆ ನನಗೆ. ಸದಾ ಮನಸ್ಸೆಲ್ಲಾ ನಿಮ್ಮ ಹತ್ತಿರವೇ. ಪ್ರತಿ ಉಸಿರಲ್ಲಿ ನಿಮ್ಮ ಹೆಸರು, ನಿಮ್ಮ ನೆನಪು. ಮುರಳಿಯ ವೇಣುವಾದನ ನೀವು, ಅದನ್ನನುಸರಿಸಿ ಬಂದ ಗೋಪಿಕೆ ನಾನು!

ಹಾ, ಏಕೆ ಇಷ್ಟು ಪ್ರೀತಿ ಎನ್ನುವಿರಾ? ಗೊತ್ತಿಲ್ಲ ಚಿನ್ನ. ಹೂವು ಸುಂದರವಾಗಿ ಅರಳುವುದಕ್ಕೆ, ಗಾಳಿ ತಣ್ಣಗೆ ಬೀಸುವುದಕ್ಕೆ, ಮನಸ್ಸು ಇನಿಯನನ್ನು ನೆನೆದು ಹೂವಾಗಿ, ಹಾಡಾಗಿ, ಹಕ್ಕಿಯಾಗಿ ವಿಹರಿಸುವುದಕ್ಕೆ ಕಾರಣ ಬೇಕೇ? ಅದು ಪ್ರಕೃತಿ ನಿಯಮವಲ್ಲವೇ? ಈ ಭೂಮಿಯಲ್ಲಿ ಎಷ್ಟು ಜನರಿದ್ದಾರೆ? ಸುಮಾರು ೭.೮ಬಿಲ್ಲಿಯನ್ ಎಂದು ಓದಿದೆ. ಅದರಲ್ಲಿ ನೀವು ನನಗೆ ಸಿಗುವ ಸಾಧ್ಯತೆ ೧/೭.೮ಬಿಲ್ಲಿಯನ್. ಇಷ್ಟ ಆಗುವ, ಪ್ರೀತಿ ಹುಟ್ಟುವ ಸಾಧ್ಯತೆ ಇನ್ನೊ ಕಡಿಮೆ. ಆದರೂ ಇಷ್ಟ ಆದಿರಿ, ಹತ್ತಿರ ಬಂದಿರಿ, ಮನಸ್ಸನ್ನು, ಭಾವನೆಗಳನ್ನು, ಹೃದಯವನ್ನು ಆವರಿಸಿದಿರಿ..ಇದಲ್ಲವೇ ಜಾದೂ. ಯಾರನ್ನಾದರೂ ನಾ ಇಷ್ಟ ಪಡಬಹುದಿತ್ತು. ಆದರೆ ನಿಮ್ಮಲ್ಲಿ ಮನಸ್ಸನ್ನು ನೆಟ್ಟೆ, ಎದೆಯಾಳದಿಂದ ಪ್ರೀತಿಸಿದೆ. ಜೀವನವಿಡೀ ನಿಮ್ಮ ಜತೆಗೆ ಹೆಜ್ಜೆ ಹಾಕುವ ನಿರ್ಧಾರ ಮಾಡಿದೆ. ನನ್ನನ್ನು ನೀವು ಮೆಚ್ಚಿದಿರಿ, ಎದೆಯಲ್ಲಿ ಬಚ್ಚಿಟ್ಟು, ಹೃದಯದಲ್ಲಿ ಸ್ಥಾನ ಕೊಟ್ಟು, ನಿಮ್ಮವಳನ್ನಾಗಿಸಿಕೊಂಡಿರಿ. ಇನ್ನೇನು ಬೇಕು? ನಿಮ್ಮೊಂದಿಗೆ ನನ್ನ ಪ್ರತಿಯೊಂದು ವಿಷಯವನ್ನು ಹಂಚಿಕೊಂಡು, ಸುಖ-ದುಃಖ, ನೋವು-ನಲಿವು,ಸಮ್ಮಾನ- ಅವಮಾನ ಹೇಳಿಕೊಂಡರೇ ಸಾರ್ಥಕತೆ. ನನ್ನ ಸಾಧನೆಗಳನ್ನು ನೀವು ಮೆಚ್ಚಬೇಕು, ಮುತ್ತು, ಅಪ್ಪುಗೆ ಕೊಟ್ಟು ಉತ್ತೇಜಿಸಬೇಕು, ನಿಮ್ಮ ತೋಳಲ್ಲಿ ಇಡೀ ಪ್ರಪಂಚದ ಸುಖ ನಾ ಕಾಣಬೇಕು. ನಾ ನೊಂದಾಗ ನಿಮ್ಮೆದೆಯಲ್ಲಿ ಮುಖ ಹುದುಗಿಸಿ ನಿಮ್ಮ ಎದೆಬಡಿತದ ಶಾಖದಿಂದ ನನ್ನ ಕಷ್ಟಗಳನ್ನು ಮರೆಯಬೇಕು.

ಆ ಹಾಡು ಕೇಳಿದಿರಲ್ಲಾ ” ನೀನು ನನ್ನ , ನಾನು ನಿನ್ನ ಎಲ್ಲಾದರೂ ಅಡಗಿಸೋಣ” ಎಂದು? ಹಾ, ಹೌದು, ಅಡಗಿಸಿ ನನ್ನನ್ನು, ನಿಮ್ಮೆದೆಯಲ್ಲಿ, ತೋಳಲ್ಲಿ. ತುಟಿಗೆ ತುಟಿ ಬೆಸೆದು ಮನಸ್ಸನ್ನು, ಮೈಯನ್ನು ಹಗುರಾಗಿಸಿ! ಈ ಪ್ರಪಂಚದ ಗೊಡವೆ ಬೇಡವೇ ಬೇಡಾ. ಎಲ್ಲದರೂ ನಮ್ಮ ಪ್ರಪಂಚವನ್ನು ಸ್ಥಾಪಿಸೋಣ. ಏನು, ಆಗಲೇ ನಮ್ಮದೇ ಪ್ರಪಂಚ, ಬದುಕು ರೂಪಿಸಿಕೊಂಡಿದೀವಿ ಅಂತೀರಾ? ಅದೂ ನಿಜ, ನಮ್ಮಿಬ್ಬರ ಲೋಕ ಬೇರೆನೇ. ಅಲ್ಲಿ ಬರೀ ಪ್ರೀತಿ, ಪ್ರೇಮ, ಅಪ್ಪುಗೆ , ಮುತ್ತು, ಪಿಸುನುಡಿ, ಇಷ್ಟೇ!

ಬದುಕು ಬರೀ ಇವೇ ಅಲ್ಲ ಎಂದು ನಾ ಬಲ್ಲೆ. ನಿಮ್ಮ ಕೆಲಸ, ಕೃತಿಗಳಲ್ಲಿ ನಾನು, ನನ್ನ ಪ್ರತಿಯೊಂದು ಕವನ, ಕತೆಗಳಲ್ಲೊ ನೀವು! ನಿಮ್ಮ ಸನಿಹ, ಇರುವಿಕೆ, ಸಾಂಗತ್ಯ ಮನಸ್ಸನ್ನು ಉಲ್ಲಸಿತವಾಗಿ, ಮತ್ತೊ ಸಾಧನೆಯನ್ನು ಮಾಡಬೇಕೆಂಬ ಆಸೆ ಹುಟ್ಟಿಸುತ್ತಿದೆ. ನಿಮ್ಮ ಜತೆ ಜತೆಯಾಗಿ ಇನ್ನೂ ಬಹಳ ದೂರ ನಡೆಯುವ ಆಸೆ, ನಿಮ್ಮ ಎಲ್ಲಾ ಕೆಲಸಗಳಿಗೆ ಸ್ಪೂರ್ತಿ, ಬೆಂಬಲ ನೀಡುವ ಬಯಕೆ!
ಪ್ರೀತಿ, ಪ್ರಣಯ ಎಲ್ಲವೂ ನೀರ ಮೇಲಿನ ಗುಳ್ಳೆ, ಜಾಸ್ತಿ ದಿನ ನಿಲ್ಲುವುದಿಲ್ಲ ಅನ್ನುತ್ತಾರೆ. ನನಗೆ ಹಾಗನಿಸುವುದೇ ಇಲ್ಲ. ನಾವಿಬ್ಬರೂ ಬಹಳ ಸಮಯದಿಂದ ಪ್ರೇಮಿಗಳು. ಈಗಲೂ ನಿಮ್ಮ ನೆನಪಿನಿಂದ ಮನಸ್ಸು ಹಸಿಯಾಗುತ್ತದೆ, ಮೈ ಬಿಗಿಯಾಗುತ್ತೆ, ಹೃದಯ ಹಕ್ಕಿಯಾಗಿ ಸುಂದರ ಸ್ವರಗಳನ್ನು ಗುನುಗುತ್ತದೆ. ನಾನು ಹಣ್ಣು ಹಣ್ಣು ಮುದುಕಿಯಾದರೂ ನಿಮ್ಮ ಮೇಲಿನ ಪ್ರೀತಿಯಂತೂ ಕಡಿಮೆ ಆಗುವುದಿಲ್ಲ, ಅದು ಖಾತ್ರಿಯಾಗಿದೆ. ನಿಮ್ಮ ಜತೆ ಕಳೆದ ಮಧುರ ಕ್ಷಣಗಳು, ನಮ್ಮ ಪ್ರೀತಿಯ ಸಂಭಾಷಣೆಗಳು, ಹುಸಿಮುನಿಸುಗಳು, ರಮಿಸುವಿಕೆಗಳು, ನಿಮ್ಮ ಬಿಸಿ ಉಸಿರು, ಆ ಕೈಲಿರುವ ಭರವಸೆಯ ಹಿಡಿತ, ಅಪ್ಪುಗೆಯಲ್ಲಿ ಇರುವ ಬೆಚ್ಚನೆಯ ಭಾವ ಸದಾ ನನ್ನದಾಗಿರಲಿ ಎಂದು ದಿನ ನಿತ್ಯ ಪ್ರಾರ್ಥಿಸುವೆ. ನನ್ನ ಹೆಸರಲ್ಲಿ ಬೆರೆತ ನಿಮ್ಮ ಹೆಸರು, ನಿಮ್ಮವಳೆಂದು ಹೇಳಿಕೊಳ್ಳಲು ಹೆಮ್ಮೆ. ನೀವು ನನ್ನ ಜೀವ, ಪ್ರಾಣ, ಬದುಕು, ಸಂಗಾತಿ…ಉಫ಼್ಫ಼್.. ಹೇಳುತ್ತಾ ಹೇಳುತ್ತ ಕಣ್ಣಲ್ಲಿ ಆನಂದ ಭಾಷ್ಪ, ಮನಸ್ಸು ಹಸಿ, ಮೈ ಹಿತ….

ಹಾ, ಬಹಳ ಮುಖ್ಯ ವಿಷಯ, ನಮ್ಮಿಬ್ಬರ ಮಧ್ಯೆ ಇರುವ ನಂಬಿಕೆ, ವಿಶ್ವಾಸ. ಕಂಡ ತಕ್ಷಣವೇ ನಾನು ನಿರ್ಧರಿಸಿಬಿಟ್ಟೆ- ಬದುಕಿನ ಕೊನೆಯವರೆಗೂ ಜತೆಗೆ ಇರುವ ಸಖ ನೀವು. ನಿಮ್ಮ ಹಿಂದೆ, ಅಲ್ಲಲ್ಲ ಜತೆ ಜತೆಗೆ ಹೆಜ್ಜೆ ಹಾಕುವೆ ನಾನು. ದೇವರ ಮೇಲೆ ಎಷ್ಟು ಭರವಸೆ ಇಟ್ಟಿರುವೆನೋ ನಿಮ್ಮ ಮೇಲೂ ಅಷ್ಟೆ. ನನ್ನವರ ಮೇಲೆ ನನಗೆ ಅಪಾರ ಭರವಸೆ ನನಗೆ. ನೀವು ಹೇಳಿಲ್ಲ ಅದರೆ ನನಗೆ ಗೊತ್ತು ನನ್ನ ಕಣ್ಣಲ್ಲಿ ನೀರು ಬರುವುದಕ್ಕೆ ಬಿಡೊಲ್ಲ ನೀವು. ನನ್ನೆಲ್ಲ ನೋವು ಮರೆಸಿರುವ ದೇವರಂತೆ ನೀವು. ಹಾಗೆ ನಿಮ್ಮ ಜೀವನದಲ್ಲೂ ನಾನು ತಂಗಾಳಿಯಾಗಿರಬೇಕು, ಬಿರುಗಾಳಿಯಲ್ಲ. ಮೆಲ್ಲಗೆ ಹಿತವಾಗಿರುವ ಹಿನ್ನಲೆ ಸಂಗೀತವಾಗಿ, ಕರ್ಕಶವಿಲ್ಲದ ವಾದನವಾಗುವೆ.

ಬಾಳಲ್ಲಿ ನೀವಿರಬೇಕು, ನಿಮ್ಮ ಸಾಂಗತ್ಯ, ಸನಿಹ ಈ ಜೀವಕ್ಕೆ, ಜೀವನಕ್ಕೆ ಅತ್ಯಗತ್ಯ! ದೇವರೇ ನನ್ನ ಕೊನೆ ಉಸಿರಿರುವವರೆಗೆ ಈ ಬಂಧನ ಮುರಿಯದಿರಲಿ, ಈ ಪ್ರೀತಿ ಬತ್ತದಿರಲಿ, ಈ ಜೋಡಿ ಹೀಗೆಯೇ ಇರಲಿ!!


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x