ನಿನ್ನ ಕಣ್ಣುಗಳಲ್ಲಿನ ಉತ್ಸಾಹದ ಜಲಪಾತವ ಕಾಣುವಾಸೆಯೆನಗೆ: ಕೆ. ಎನ್‌ ಶ್ರೀವಲ್ಲಿ

ನನ್ನೊಲವಿನ ಇನಿಯಾ,

ಸವಿನೆನಪೆಂಬ ರೇಷಿಮೆ ದಾರದಿಂದ ಕನಸೆಂಬ ಹೊನ್ನಿನ ಬಟ್ಟೆಯ ನೇಯ್ದಂತೆ ನನ್ನ ಮನದಲಿ ನಿನ್ನದೇ ರೂಪ ಅಚ್ಚೊತ್ತಿದೆ. ಪಿಸುಮಾತಿನ ಸಮಾಗಮದ ಕಲೆಯನ್ನು ನನ್ನಲ್ಲಿ ಅರಳಿಸಿದ್ದು ನೀನಲ್ಲವೆ. ನನ್ನ ಕಡೆಗಣ್ಣಿನ ಮಿಂಚಿನ ನೋಟ, ಚೆಂದುಟಿಯ ಮುಗುಳುನಗೆ, ಕಿರುಬೆರಳ ಸ್ಪರ್ಶ, ನನ್ನ ಮನದ ಭಾವನೆಯನ್ನು ನಿನಗೆ ತಿಳಿಸಿಲ್ಲವೆ. ನನ್ನ ಅನಿಸಿಕೆಗಳು ನಿನಗೇಕೆ ಅರಿವಾಗಲೇ ಇಲ್ಲ. ಮೋಡದ ಮುಸುಕಿನಲಿ ಪೂರ್ಣಚಂದ್ರ ಮರೆಯಾದ ಆ ಬೆಳದಿಂಗಳ ರಾತ್ರಿಯಲಿ, ನಿನ್ನ ಕಣ್ಣೋಟದ ಬೆಳ್ಳಿ ಬೆಳಕಿಗೆ ನಾ ಸೋತು ಕಣ್ಮುಚ್ಚಿದ್ದು ನಿನಗೇಕೆ ಅರಿವಾಗಲೇ ಇಲ್ಲ !

ಮರುಭೂಮಿಯಲ್ಲೂ ಸಿಹಿನೀರೊರತೆಯಂತಿದ್ದ ನಿನ್ನ ಮುಗುಳು ನಗೆಗೆ ನಾ ಕಳೆದು ಹೋಗಿದ್ದು, ನಿನಗೇಕೆ ಅರಿವಾಗಲೇ ಇಲ್ಲ. ನಿನ್ನ ಮೃದು, ಮಧುರ ಮಾತಿನಲೆಗಳೇ, ಮುದ ನೀಡುವ ಕಾವ್ಯದಂತೆ ನನ್ನ ಮತ್ತೇರಿಸಿ ಮೂಕವಾಗಿಸಿದ್ದು ನಿನಗೇಕೆ ಅರಿವಾಗಲೇ ಇಲ್ಲ.! ನಿನ್ನ ತೋಳೆನ್ನ ತಲೆ ದಿಂಬಾಗಿ, ಇಹಪರವ ಮರೆಯುತ್ತ ನಾ ನಿನ್ನವಳಾದುದು ಇನ್ನೂ ನಿನಗೇಕೆ ಅರಿವಾಗಿಲ್ಲ.

ನಿನ್ನ ಮೊದಲ ಸಲ ನಾ ನೋಡಿದ್ದು ಆ ನದಿಯ ತೀರದಲ್ಲಿ. ನಾನು ನಿನಗೆ ಹೇಳಬೇಕೆಂದಿದ್ದ ಮಾತನ್ನು ಆ ನದಿಯೇ ಹೇಳಿತ್ತೆಂದು, ಎಷ್ಟು ಚೆನ್ನಾಗಿ ಸುಳ್ಳನ್ನು ಹೇಳಿದ್ದೆ ನೀನು. ಈ ವಿರಹವೂ ಮಧುರವಾಗಿದೆ, ನಿನ್ನ ನೆನಪಿನ ನೋವೂ ಹಿತಕರವಾಗಿದೆ. ಗೆಳೆಯಾ, ಕಡಲಿನ ಅಲೆಗಳಂತೆ ನನ್ನ ಮನವೂ ಭೋರ್ಗರೆಯುತಿದೆ. ನೀನೊಮ್ಮೆ ಬಂದು ಬಿಡು. ನನ್ನೊಲವಿನಲಿ ನಿನ್ನ ಪಾದಗಳ ತೋಯಿಸಿಬಿಡುವೆ. ನನ್ನ ಕನಸಿನ ಬಣ್ಣಗಳೆಲ್ಲಾ ಮಾಸಿಹೋಗಿದೆ. ಒಮ್ಮೆ ನೀ ಬಂದು ಬಣ್ಣಗಳ ಸವರಿಬಿಡು. ನಾನೇ ಕಾಮನಬಿಲ್ಲಾಗಿ ಅರಳಿಬಿಡುವೆ.

ಮರುಭೂಮಿಯಂತಿದ್ದ ನನ್ನ ಬಾಳಿಗೆ ಅಪರೂಪದ ಸಿಹಿನೀರಿನ ತಣ್ಣೀರ ಬುಗ್ಗೆ ನೀನು. ಬಿರುಬೇಸಿಗೆಯ ಬಾಯಾರಿಕೆಗೆ ಆ ಮುಗಿಲು ಹರಿಸಿದ ಮಳೆಯ ಸಿಂಚನ ನೀನು. ಬೋಳಾದ ಮರಕ್ಕೆ ನವ ವಸಂತನು ಉಡುಗೊರೆಯಿತ್ತ ಹಸಿರೆಲೆ ನೀನು. ಕಾರ್ಗತ್ತಲೆಯ ಒಡಲನ್ನು ಸೀಳಿ ಮನವನ್ನು ಅರಳಿಸುವವ ಕಿರು ತಾರೆ ನೀನು. ನನ್ನ ಬರಡಾದ ಬದುಕಿಗೆ ಅಮೃತ ಸಿಂಚನ ನೀಡಿ ಮನೆಮನಗಳ ಬೆಳದಿಂಗಳು ನೀನು. ಜಲಪಾತದ ಸಮ್ಮುಖದಲ್ಲಿ ಕುಳಿತು ನಿನ್ನ ಮೊಗದಿ ಪ್ರತಿಫಲಿಸುವ ಆ ಮಳೆಬಿಲ್ಲಿನ ಬಣ್ಣವ ಕಾಣುವಾಸೆ ನನಗೆ. ಹರಿಯುವ ನೀರಲಿ ನೀರಾಗಿ, ಮಿಂಚಿ ಮರೆಯಾಗುವ ಮೀನಾಗಿ ಈಜುವ ನಿನ್ನ ಕಾಣುವ ಆಸೆಯೆನಗೆ ; ಜಲಪಾತದುತ್ತುಂಗಕೆ ನಿನ್ನೊಡನೆ ನಡೆದು, ನಿನ್ನ ಕಣ್ಣುಗಳಲ್ಲಿನ ಉತ್ಸಾಹದ ಜಲಪಾತವ ಕಾಣುವಾಸೆಯೆನಗೆ . ಅದೆಷ್ಟು ಆಸೆಗಳಿದೆ ನನ್ನಲ್ಲಿ.

ಪ್ರಿಯ ಸಖನೇ, ಏನು ಹೇಳಲಿ ನೀನುಡಿಯದಿದ್ದರೂ ನಿನ್ನ ಈ ಮೌನದಲ್ಲೇ ನನ್ನನ್ನು ಸೆರೆ ಹಿಡಿದಿರುವೆ. ಕತ್ತಲು ಕರಗಿ ಬೆಳಕು ಹೊನ್ನ ಎಳೆಯಂತೆ ಆಗಸದಲ್ಲಿ ಮೂಡಿದಾಗ ಅಲ್ಲಿ ನಿನ್ನ ದನಿಯನ್ನೇ ಕೇಳಿದಂತಾಗುತ್ತದೆ. ಹಕ್ಕಿಗಳ ಎದೆಯಗೂಡಿಂದ ಹೊರಟ ದನಿಯಲ್ಲಿ ನಿನ್ನ ದನಿಯ ಕಲರವವನ್ನೇ ಕೇಳಿದಂತಾಗುತ್ತದೆ. ನಿನ್ನ ಇನಿದನಿಯನ್ನು ಆಲಿಸಿದ ಈ ಬುವಿಯಮರಗಳು, ಮೌನದಲ್ಲೇ ಹೂವುಗಳನ್ನು ಅರಳಿಸುತ್ತಿದೆ ಎನಿಸುವಂತಿದೆ.

ಜೀವಾತ್ಮ ಬಂಧು, ನೀನೆಂದರೆ ನಸುಕಿನ ಹೊಂಗನಸು, ಸಂಧ್ಯೆಯ ಮೇಘಮಾಲೆ, ಇರುಳಿನ ಸವಿಗನಸು. ನನ್ನ ಈ ತುಂಬು ಬಾಳಿನ ಬಾನಂಗಳವನ್ನು ತುಂಬಿರುವ ಚಿತ್ತಾರ. ನನ್ನ ಸವಿಗನಸಿನಾಳದ ಬಿಸುಪು, ನನ್ನ ಮನದಲ್ಲಿ ಅಚ್ಚಾದ ಅಚ್ಚಳಿಯದ ಸುಂದರ ಚಿತ್ರ.ಏನು ಹೇಳಲಿ ನೀನೆಂದರೆ ನನ್ನ ಈ ದೇಹದುಸಿರು !!

ಗೆಳೆಯಾ, ನಾ ನಿನ್ನೆಡೆಗೆ ಬಂದು ವಿದಾಯ ಹೇಳಿದಾಗ, ಫಕ್ಕನೆ ಮಿಂಚಂತೆ ಬೆಳಗಿ ಮರೆಯಾದ ನಿನ್ನ ಮುಗುಳುನಗೆಯೇ ನನಗೆ ತಿಳಿಸಿತು ನಿನಗರಿವಿದೆಯೆಂದು ಮತ್ತೆ ಹಿಂತಿರುಗಿ ನಿನ್ನೆಡೆಗೆ ನಾ ಬಂದೇ ಬರುವೆನೆಂಬುದು. ಚೈತ್ರವು ಬಂದಾಗ ಹಸಿರು ಚಿಗುರುವಂತೆ, ಮತ್ತೆ ಬರುವ ಚಂದ್ರಮ ಚಂದ್ರಿಕೆಯ ಸುರಿವಂತೆ, ಮೊಗ್ಗರಳಿ ಗಂಧವ ಪಸರಿಸುವಂತೆ, ನನ್ನ ಸೆಳೆಯುವ ನಿನ್ನ ಕಂಗಳ ಹಿಂದಡಗಿದೆ ಮಾಂತ್ರಿಕ ಜಾಲದಲದ್ದಿದ, ನಿನ್ನ ಮುಗ್ದ ಮುಗುಳುನಗೆ!

ಮೌನದ ಸೆರಗಲ್ಲಿ ಮಾತುಗಳು ಅಡಗಿ ನಿನ್ನ ಮನದ ಮಾತುಗಳನ್ನೆಲ್ಲಾ ನಿನ್ನ ಕಂಗಳೇ ಅರಹುವಂತಿದೆ ! ಮೌನದರಮನೆಯ ಅರಸ ನೀನು ಮಾತನಾಡದೆಯೆ ನನಗೆ ಗಿಳಿಮಾತನ್ನು ಕಲಿಸಿದೆ.ಗುಪ್ತಗಾಮಿನಿಯಂತೆ ಸುಪ್ತವಾಗಿ, ಬಲು ಆಪ್ತವಾಗಿದ್ದ ಮನದೊಲವು, ಜಲಪಾತದಂತೆ ಭೋರ್ಗರೆದು ಮನಕ್ಕೆ ಹರ್ಷದ ತುಂತುರನೆರಚಲಿ. ಬಂದೊದಗುವ ಎಲ್ಲ ಅಡೆತಡೆಗಳನ್ನು ತೊಡೆದು ಮನಗಳನ್ನು ಒಗ್ಗೂಡಿಸಲಿ. ಸೌಮ್ಯ ಭಾವದಿ ಹರಿಯುವ ನದಿಯಂತೆ ನಮ್ಮ ತುಂಬೊಲವು ಸದಾ ಹೀಗೇ ಇರಲಿ

ಹಿಮಾಲಯದೆತ್ತರದ ನಿನ್ನ ಸ್ನೇಹ, ಆಗಸದಂತೆ ಅನಂತವಾಗಿರುವ ನಿನ್ನ ನಿಷ್ಕಲ್ಮಶ ಪ್ರೀತಿಯನ್ನು ನನಗೆ ಕೊಟ್ಟು, ಶಾಂತವಾದ ಕಡಲಿನಂತಿರುವ ನಿನ್ನ ಬಾಳಿಗೆ ನನ್ನ ಸೇರಿಸಿಕೋ, ನಿನ್ನಲ್ಲೇ ನಾ ಐಕ್ಯವಾಗುವೆ.

ಗೆಳೆಯಾ, ಮಲ್ಲಿಗೆಯ ಕಂಪನ್ನು, ಚಂದ್ರನ ಬೆಳ್ಳಿ ಬೆಳಕನ್ನು ಬಚ್ಚಿಡಲಾದೀತೆ ಹಾಗೆಯೇ ನಿನ್ನ ಕಣ್ಣುಗಳು ನನ್ನೆಡೆಗೆ ತೋರುವ ಪ್ರೀತಿಯನ್ನು ನೀನು ಮರೆಮಾಚಲು ಸಾಧ್ಯವೆ. ನೀ ಏನನ್ನು ಹೇಳದಿದ್ದರೂ ನಿನ್ನ ಕಣ್ಗಳೇ ಎಲ್ಲವನ್ನೂ ಹೇಳಿದೆ.

ನನ್ನ ಕೈಯಲ್ಲಿ ನಿನ್ನ ಕೈಯಿಟ್ಟು, ನನ್ನ ಮನದಲ್ಲಿ ನಿನ್ನ ಮನನೆಟ್ಟು; ದಣಿದ ನನ್ನೀ ದೇಹಕ್ಕೆ ನಿನ್ನ ಭುಜದ ಆಸರೆಯಿರಲಿ. ತರಗೆಲೆಯ ಹಾದಿಯು ನಿನ್ನಿಂದ ಹೂಮೆತ್ತೆಯಾಗಲಿ. ಸುಡುವ ಬಿರುಬಿಸಿಲು ನಿನ್ನಿಂದ ತಂಪಿನಾ ಬೆಳುದಿಂಗಳಾಗಲಿ; ಉದುರುತ್ತಿರುವ ಹಣ್ಣೆಲೆಯು ಶುಭದ ಅಕ್ಷತೆಯಾಗಲಿ. ಹಕ್ಕಿ ಕೂಜನವು ಮಂಗಳದ ನುಡಿಯಾಗಲಿ. ಕಾಡುತ್ತಿರುವ ನೋವೆಲ್ಲ ಹಾಡಾಗಿ ಬದಲಾಗಲಿ. ಭರವಸೆಯ ಭಾವದಲಿಂದ ಮನವು ಹಗುರವಾಗಿರಲಿ.

ಚಿನ್ನೂ, ಹೇಗಿದೆ ನನ್ನ ಕಾವ್ಯಾತ್ಮಕ ಪ್ರೇಮಪತ್ರ. ನಿನ್ನ ಸಹವಾಸ ದೋಷದಿಂದ ! ನನಗೂ ಕಾವ್ಯಮಯ ಭಾಷೆ ಮೈಗೂಡಿದೆ. ಅಯ್ಯೋ ಇದಾವುದೂ ನನ್ನದಲ್ಲ. ನೀನು ನನಗಾಗಿ ಬರೆದ ಕವನಗಳನ್ನು ಕೂಡಿಸಿ ನಾ ಪತ್ರ ಬರೆದಿರುವೆ.

ಮದುವೆಯೆಂದರೆ ಚಂದಮಾಮದ ಕತೆಯಲ್ಲ; ತ್ಯಾಗ, ಸಹನೆಯೊಡನೆ ಪ್ರೀತಿ ಎಂಬುದರ ಅರಿವು ನಮಗಿಬ್ಬರಿಗೂ ಇದೆ.ಸಂಗಾತಿಗೆ ನಿರ್ಮಲ ಸ್ನೇಹವನಿತ್ತು; ಒಲವಿನಾಸರೆಯಾಗಿ ಮುನ್ನಡೆಸುವ ಛಲ ನಮ್ಮಿಬ್ಬರಲ್ಲಿದೆ. ದೇಹವೆರಡಾದರೂ ಆತ್ಮವೊಂದಾಗಿ, ಕೊಡು ಕೊಳ್ಳುತ್ತಾ,ಬೆಳೆಸಿ-ಬೆಳೆವ ಆತ್ಮಸಾಂಗತ್ಯ ನಮ್ಮಲ್ಲಿದೆ.

ನಿನ್ನ ನೋಡದೆ ಎಷ್ಟು ದಿನಗಳಾದವು. ನಿನ್ನ ಮಾತಿಗೆ ನಾ ಕಿವಿಯಾಗಬೇಕು, ನಿನ್ನ ಮನದ ದನಿ ನಾನಾಗಬೇಕು. ನೀನೆಂದು ಬರುವೆ, ನಿನ್ನದೇ ದಾರಿ ಕಾಯುತಿರುವ ನಿನ್ನ ಪ್ರೀತಿಯ ಶ್ರೀ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x