ನಿನ್ನ ಮಧುರ ಮಾತುಗಳ ಅಮಲಲ್ಲಿ: ಮನೋಹರ್‌ ಜನ್ನು

ಪ್ರಿಯೆ,

ಬೆಳ್ಳಿ ಮೋಡದ ಮರೆಯಲ್ಲಿ ಹಪಹಪಿಸೋ ಚೆಂದ್ರಮನ ಹಾಗೆ, ಆ ನೀಳ ಗಗನದಲ್ಲಿ ಹೊಳೆವ ಚೆಂದ್ರನ ಹಾಗೆ ನಿನ್ನ ಹಣೆಯ ಕೆಂಪುಬಿಂದು ಮೈ ಪುಳಕಿತ ಗೊಳಿಸುತ್ತಿದೆ. ಮನ ಮಿಂಚುವ ಕೋಲ್-ಮಿಂಚಿನ ಥರ ಸದ್ದು ಮೊಳಗಿಸುತ್ತಿದೆ. ನಿನ್ನ ನಗುವಿನ ನೆನಪಲ್ಲಿ ಹಲ್ಲುಗಳ ಹೊಳಪು ಮನಸ್ಸನ್ನು ಉತ್ತೇಜಿಸುತ್ತಿದೆ. ಅಗಲಿಕೆ ಜೀವ ಹಿಂಡುತ್ತಿದೆ. ಅಂದು ಮೊದಲಸಲ ತುಂಬಿದ ಜಾತ್ರೆಯಲ್ಲಿ ನೀನು ನನ್ನ ಕಂಡು ಮಿಂಚುಳ್ಳಿಯಂತೆ ಮರೆಯಾದಾಗ ಹೃದಯ ರೋಧನದಲ್ಲಿ ನರಳಿತ್ತು ಗೆಳತಿ! ಮತ್ತೆ ಮತ್ತೆ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಅದು ನೀನೆ ಅಗಿದ್ದೆ. ಘಾಯಗೊಂಡ ಹಾವಿನಂತೆ ಕಂಡವರನ್ನು ಬುಸುಗುಟ್ಟಿದೆ. ಕಾರಣ ನಿಗರ್ಥವಾಗಿತ್ತು. ಆದರೆ ನಿನ್ನ ಮುಖ ಕೋಪದಲ್ಲಿ ಮತ್ತೆ ಗೋಚರವಾಗಲೇ ಇಲ್ಲ!

ಆದರೆ ಮರೆಯಲಾಗದ ಮರಳು ದಿಬ್ಬದ ಮೇಲೆ ಮರಳು ಬುದ್ಧಿಯು ನಿನ್ನ ನಗುವಿನಲ್ಲಿ ಬೀರಿದ ತುಟಿಗಳ ಮುಗುಳು ಮೊಗ್ಗೆ ಅರಳಿದ ನೋಟ ಮತ್ತೆ ಮತ್ತೆ ಬೇಕೆನ್ನುತ್ತಿತ್ತು ಮನ. ಮರಳಿ ಮರಳಿ ನೋಡುತ್ತ ಆ ತೇರಿನ ಚಕ್ರಕ್ಕೆ ಬಡಿದದ್ದು ನಾಚಿಕೆ ತರಿಸಿತ್ತು ನೀನು ದೂರದಿಂದಲೆ ಮೋಜು ಅನುಭವಿಸುತ್ತಿದ್ದೆ. ಮರಣೀ, ,ಆದಿನದ ಸಹವಾಸ ಮನಸ್ಸು ಬಯಸುತ್ತಲೆ ಇತ್ತು. ಮತ್ತೇ ಕನಸುಗಳು ಬೀಳುತ್ತಲೆ ಇತ್ತು. ಒಮ್ಮೆ ಬೆಟ್ಟದ ತುದಿಯಲ್ಲಿ, ಮತ್ತೊಮ್ಮೆ ಸಾಗರದ ಮಗುದೊಮ್ಮೆ ತಟದಲ್ಲಿ ನೇಸರನ ನೆರಳಲ್ಲಿ ಕಂಗೊಳಿಸುವ ಆಶೆ ಆಸೆಯಾಗಿಯೇ ಉಳಿದಿತ್ತು. ಆದರೆ ಮತ್ತೆ ನೀ ವರ್ಷದ ವರೆಗೆ ತರಬೇತಿಗಾಗಿ ಪರದೇಶಕ್ಕೆ ಸಾಗುವಬಗ್ಗೆ ಮಂದಿರದಲ್ಲಿ ಹೇಳಿದಾಗ ನಿನ್ನ ಮಾತಿನಲ್ಲಿ ನಂಬಿಗೆ ಹುಟ್ಟಿತು. ನೆರಳೇ ಕಾಣದ ನೇಸರನು ಉರಿಯನ್ನಷ್ಟೆ ಪ್ರಕಾಶಿಸುತ್ತಿದ್ದ.ಆದರೆ ಸ್ಥಬ್ದವಾದ ಹೃದಯದಲ್ಲಿ ತರಂಗಗಳು ಏಳ ಲಾರಂಭಿಸಿದವು.ದೇಹದಲ್ಲಿ ನವ ಚೈತನ್ಯ ಒಕ್ಕರಿಸಿತು. ಸಾಗರದ ಅಲೆಗಳು ದಡಕ್ಕೆ ಬಡಿದು ಅಪ್ಪಿ ಅಪ್ಪಳಿಸಿ ಲೀನವಾದಂತೆ ಉರುಳುವ ಹೊಯ್ಗೆಯ ಕಣಗಳು ಮನ, ಕಣ್ಣುಗಳಲ್ಲಿ ಕ್ಷಣಕ್ಷಣವೂ ಘಾಸಿ ಗೊಳಿಸುತ್ತ್ತಿತ್ತು. ಬಾನಲ್ಲಿ ಶಶಿ ಇರುಳು ಹಾಸಿಗೆ ಕಂಡು ನಿದ್ರೆ ಬಾರದೇ ಕಿಟಕಿಯಲ್ಲಿ ಇಣುಕಿ ನಗುವಾಗ ತಡೆಯದ ಕೀಳರಿಮೆಯಲ್ಲಿ ಹೊಯ್ಗೆಯ ಹಾಗೆ ಒದ್ದಾಡಿತು ಆತ್ಮ.

ಸಖೀ, ಹೆಪ್ಪು ಗಟ್ಟಿದ ನನ್ನ ಚೇತನ ನಿನ್ನ ಮಿದು ಮಾತುಗಳ ಸೆರಗಲ್ಲಿ ಸ್ವರ್ಗ ಏರುವ ಕನಸು ಹುಸಿಯಾಗದಿರಲೆಂದು ‘ಹಿಮತಾಪಸನಲ್ಲಿʼ ಬೇಡುತ್ತಿದ್ದೇನೆ. ದಿವ್ಯ ಪ್ರಭೆಯಂತೆ ನಿನ್ನ ಶೋಭಿತ ಶ್ರೋಣಿಯಲ್ಲಿ ಪರ್ವತ ಶ್ರೇಣಿಯ ಹರಿವ ಪ್ರೇಮ ಗಂಗೆ, ನಿನ್ನ ಹೃದಯ ಕುಂಭಗಳಿಂದ ಜಿನುಗಿದ ಸಿಹಿ ಹನಿಗಳಾಗಿ, ಜಿಗಿದ ಜಲಪಾತದಲ್ಲಿ ಈಗಾಗಲೆ ಮುಚ್ಚಲಾರದ ಗುಂಡಿ ಹಡ್ಡಿದೆ. ಅದರಲ್ಲಿ ಕಳೆದು ಹೋಗುವ ಭ್ರಮೆ ನನಗಿಲ್ಲ ಪ್ರಿಯೆ!

ಬರುವ ತಾಪಗಳಲ್ಲಿ ಬೆಂದು ಬದುಕಿನ ಪಾಕ ಅನುಭವಿಸುವ ಹೆಬ್ಬಯಕೆ ಅಲ್ಲ. ಗಟ್ಟಿ ಮನಸ್ಸು ನಿನಗಾಗಿ ಮೀಸಲಿಟ್ಟಿದ್ದೇನೆ. ಗೆಳತಿ. ಆದಿನ ನಿನ್ನ ಪ್ರಥಮ ಸಂದರ್ಶವಾಗಿರಲಿಲ್ಲ. ಅದು ದರ್ಶನವೂ ಅಲ್ಲ. ಆಕರ್ಷಣೆಯ ಗಾಳಿ ಅಲೆಅಲೆಯಾಗಿ ಮನಸ್ಸು ಕದಡಿದಮೇಲೆ ಮತ್ತೆ ಮತ್ತೆ ಕಾಣುವ ಹಂಬಲ ಭಯಾನಕ ಸ್ಪೋಟವನ್ನೆ ಮಾಡಿ ಬಿಟ್ಟಿತು. ಸಾವಿರ ಕೇಜಿ ತೂಕದ ಸ್ಪೋಟಕಗಳು ರಸಾಯನಿಕಗಳು ಅಂದು ಸದ್ದುಮಾಡಿ ನನ್ನ ಒದ್ದೆಮಾಡಿ ಬಿಟ್ಟಿತು. ಆತಂಕ ಸೃಷ್ಟಿಸಿತು. ಆದರೂ ನಿನ್ನ ಮಧುರ ಮಾತುಗಳ ಅಮಲಲ್ಲಿ ಗಡದ್ದಾಗಿ ನಿದ್ದೆಮಾಡಲು ಸಾಧ್ಯವಾಗಲೆ ಇಲ್ಲ.

ಘಟನೆ ನಡೆದು ತಿಂಗಳುಗಳೇ ಕಳೆದವು. ನಿನ್ನದೊಂದು ಪತ್ರ ಪತ್ರೊಡೆಯಾಗಿ ನನ್ನ ಜೀವನದಲ್ಲಿ ಊಟ ಸವಿಯಲು ಸಾಧ್ಯವಾದೀತಿತೆಂದು ಕಾದು ಕುಳಿತಿದ್ದೇನೆ. ಅದರ ವಾಸನೆ ನನಗೆ ನೆಮ್ಮದಿ ಕೊಡುತ್ತಿದೆ ಗೆಳತಿ. ನನಗರ್ಥವಾಗುತ್ತಿಲ್ಲ; ಜಗತ್ತು ಇಪ್ಪತೊಂದನೆ ಶತಮಾನದಲ್ಲಿ ಸಾಗುತ್ತಿದೆ, ಉಪಗ್ರಗಳ ತಾಕಲಾಟದ ಕಾಲದಲ್ಲಿ ನಿನ್ನ ಸಂಚಾರಿ ದೂರವಾಣಿ ಕರೆಗಾಗಿ ಕಾದು ಕಾದು ಮೈಎಲ್ಲ ಕೆಂಪಾಗಿ ಬಿಟ್ಟಿದೆ. ಅದರಕಾವು ತಣಿಸುವೆಯಾ? ಕೊನೆ ಪಕ್ಷ ಸಂದೆಶವನ್ನಾದರೂ ಕಳಿಸಬಾರದೇ? ನಲ್ಲೆ!

ಇನ್ನು ಬೇಸಿಗೆ ಕುಳಿರ್ಗಾಳಿ ಕಳೆದು ಮಳೆಗಾಲದ ಬಿರುಗಾಳಿಯ ಸಂಧರ್ಭ, ಸುತ್ತಲಿನ ವನ ಚಿಗುರಿ ಕಾನನದ ಮನತಣಿಯೆ ಹಸಿರನ್ನು ಬಿತ್ತರಿಸಿದೆ. ಮಳೆಗಾಲದ ಝಿಂಗುಡುವ ಜೀರುಂಡೆಗಳ ಭಯದಲ್ಲಿ ಮನವೆಲ್ಲ ಸಂಗಾತಿಗಾಗಿ ಪರಿತಪಿಸುತ್ತಿದೆ ಗೆಳತಿ! ಸುಕೋಮಲವಾದ ಚಿಗುರುಗಳು ಮನಸ್ಸನ್ನು ಅರಳಿಸುತ್ತಿದೆ. ಸುತ್ತಲಿನ ತೋಟ ಗದ್ದೆಗಳು, ಬಿರುಮಳೆಯ ತೊರೆಯಿಂದ ಅಲ್ಲಿಲ್ಲಿ ಜುಳುಜುಳು ಹರಿವು,ಮೀನು ಮರಿಗಳ ಚೆನ್ನಾಟ ಮನಸ್ಸುಉಲ್ಲಾಸ ಗೊಳಿಸುವ ಹೊತ್ತು ನಿನ್ನ ನೆನಪು ಮರುಕಳಿಸುತ್ತಿದೆ. ಯೌವನವನ್ನು ಮತ್ತೆ ಬಾಲ್ಯದೆಡೆ ಹೊತ್ತೊಯ್ಯತ್ತಿದೆಯಲ್ಲ! ಇರುಳಿನ ಧೋಧೋ ಅಬ್ಬರದ ತಂಪಿನಲ್ಲಿ ಹಾಸಿಗೆಯ ಬೆಸುಗೆಯನ್ನು ದೇವ ಪೆಂಪನ್ನಾಗಿಸಿದ್ದು ಇದಕ್ಕೇ ಇರಬೇಕಲ್ಲವೇ? ಆಹಾ! ನೀನು ಅಂದು ಬೇಸಿಗೆಯ ಹುಣ್ಣಿಮೆಯಲ್ಲಿ ಗಿರಿಯಮೇಲಿನ ಮಂದಿರಕ್ಕೆ ಹೊರಡುವ ಹಠ ಹಿಡಿದಾಗ ಅರ್ಧದಾರಿಯಲ್ಲಿ ಬಸವಳಿದ ಚಿತ್ರಣ ಇಂದಿಗೆ ಗರಿಗೆದರಿತು ತೊರೆಯ ನೀರಲ್ಲಿ ದಾಹ ದೂರ ಆದ ಅನುಭವ ಮರೆತೆಏನು ಗೆಳತಿ? ನೋಡು ಅಂದಿನ ಸುತ್ತಲ ಬಾನಂಗಳದ ಭಾನು ಕೆಂಡ ಕೆಂಪಡರಿದ ಬಾನಲ್ಲಿ ತೆಂಕಣದ ರವಿಯ ಅವಸಾನದ ಹೊತ್ತು ಕೋಗಿಲೆಯ ಇಂಪಲ್ಲಿ ಬಂಡೆಯ ಮರೆಯಲ್ಲಿ ಏನೆಲ್ಲ ಗುಟ್ಟುಗಳನ್ನು ಬಿಚ್ಚಿಟ್ಟಿತ್ತಲ್ಲವೆ? ನಿನಗೆ ಇಷ್ಟವಾದ ಆ ಬೋರೆ ಹಣ್ಣಿನ ಮರ ಈಗ ಮತ್ತೆ ಚಿಗುರುತ್ತಿದೆ. ಅಲ್ಲಿ ಅಂದು ಕಟ್ಟಿದ ಜೇನು ಮಧು ಜಿನುಗಿದ್ದು ನನಗೂ ತಿಳಿಯದು. ಈಗ ಎತ್ತಲೋ ಮರೆಯಾಗಿ ಬಿಟ್ಟಿವೆ.. ಗಿಳಿಗಳ ಚಿಲಿಲಿಪಿ ಮುಂಗಟ್ಟೆಯ ತುರಾಯಿಯ ಚೆಂದ ಪೃಕೃತಿ ಪ್ರೀತಿಸುವ ಪ್ರೇಮ ಜೀವನಕ್ಕೊಂದು ಜವಾಬು ವೆಂದಿದ್ದೆ! ನೆನಪಿದೆಯೇ? ಆಕರ್ಷಣೆಯ ಕೊಳಾಯಿಯಲ್ಲಿ ಹರಿವ ಬಿಸಿರಕ್ತ ಮತ್ತೇ ಮತ್ತೆ ಆಮೋದವನ್ನೆ ಸೃಷ್ಟಿಸುತ್ತೆ ಎನ್ನುವದು ನಿಜವಲ್ಲವೇ?

ಎಷ್ಟೊಂದು ಸುಂದರ, ಈ ಹರೆಯ ಬಯಕೆಯ ನಿಶ್ಚಲ ಮನಸ್ಸನ್ನು ಒಂದಾಗಿಸಿ ಬೆಸೆದು ಪೃಕೃತಿಯನ್ನು ಶಾಶ್ವತ ಕ್ರಿಯೆಗೆ ಅಣಿಗೊಳಿಸುವ ಈ ಪ್ರಕ್ರಿಯೆ ಎಷ್ಟೊಂದು ಸೋಜಿಗವಲ್ಲವೆ? ಅದನ್ನು ಕಾಪಾಡಿ ಕೊಳ್ಳಲಾರದ ಮಾನವ ವಿನಾಶವನ್ನೇ ಅಭಿವೃದ್ಧಿ ಎಂದು ಭಾವಿದ್ದನ್ನು ಕಂಡರೆ ಮನಸ್ಸು ತಲ್ಲಣ ಗೊಳ್ಳುತ್ತಿದೆ. ಆದರೂ ಪ್ರೀಯೆ ಸಾಗರದ ಸೊಗಸಿನ ಅಲೆಗಳು ಪ್ರೆಮದಲೆಗಳಂತೆ ಎಷ್ಟು ಕೋಮಲ. ದಡವನ್ನನಪ್ಪಿ ಅಲ್ಲಿ ಲೀನವಾದಾಗ ಆವರಿಸುವ ಮೌನ ಜೀವನವನ್ನು ಸಂಘರ್ಷಕ್ಕೆ ಅಣಿಗೊಳಿಸಿ ಕೊನೆಯಲ್ಲಿ ಶಾಂತಿ ಅನಾವರಣ ಗೊಳಿಸುತ್ತದೆಂಬ ತತ್ವವನ್ನು ತಿಳಿಸುತ್ತಲ್ಲವೆ? ಇದುವೇ ನಿಜವಾದ ಅಪ್ಪುಗೆ ಎಂದೆಂದೂ ಮರೆಯದ ಒಬ್ಬರನೊಬ್ಬರು ಅಗಲದ ಹುಮ್ಮಸ್ಸಿನ ಹುಮ್ಮಸದ ಹೊನಲು?

ಶರತ್ ಋತುವಿನ ಮಾಗಿದ ಚಳಿಯಲ್ಲಿ ಬೀಳುವ ಮುಂಜಾನೆ ಮಂಜು ಮನಸ್ಸಿನಲ್ಲಿ ತಳಮಳ ಎಬ್ಬಿಸುತ್ತಿದೆ ನಲ್ಲೆ! ಇನ್ನು ನಾಲ್ಕು ತಿಂಗಳು ಕಳೆದರೆ ನೀ ನನ್ನಿಂದ ದೂರವಾಗಿ ಒಂದು ವರ್ಷ ಕಳೆಯುತ್ತಿದೆ. ನೀನು ಸಂಚಾರಿ ವಾಣಿಯಲ್ಲಿ ಮಾತುವಾಡುವಾಗ ಏನನ್ನಸಿತೊ ಗೊತ್ತಿಲ್ಲ. ಬಸ್ಸಿನಲ್ಲಿ, ಗಾರ್ಡನ್‍ನಲ್ಲಿ ಹೊಟೇಲ್ಲಿನಲ್ಲಿ ಮಾತನಾಡುವ ಚುಟುಕು ಮಾತುಗಳು ಎಲ್ಲ ಮನಸ್ಸಿನ ಭಾವನೆಗಳನ್ನು ಸಮರ್ಥವಾಗಿ ತಿಳಿಸಲಾಗುತ್ತಿಲ.್ಲ ಅದಕ್ಕಾಗಿ ನಿನ್ನ ಬರವಿಕೆಗಾಗಿ ಕಾಯುತ್ತಿದ್ದೇನೆ. ಒಂದುವರ್ಷದ ವಿರಹ ಮುಗಿಯುಕಾಲ ಸಮೀಪಿಸುತ್ತಿದೆ .ಮನಸ್ಸು ಅದನ್ನು ನೆನೆದೇ ಹಗುರವಾಗುತ್ತಿದೆ. ಇನ್ನು ಶಾಶ್ವತವಾಗಿ ನನ್ನಲ್ಲೇ ಇರುತ್ತಿ ಎಂಬ ಯೋಚನೆಯೇ ಹೃದಯವನ್ನು ಆಲ್ಹಾದ ಸರೋವರದಲ್ಲಿ ತೇಲಿಸಿ ಬಿಡುತ್ತದೆ. ಹೂವಿನ ಹಾಸಿಗೆಯಲ್ಲಿ ಘಮಘಮಿಸುತ್ತಿದೆ ಸುಗಂಧ ನಲ್ಲೆ!

ದೇವರಲ್ಲಿ ಪ್ರಾರ್ಥಿಸುತ್ತೇನೆ. ಆ ದಿನ ಬೇಗ ಬರಲೆಂದು! ನಮ್ಮಿಬ್ಬರ ಒಂದಾಗುವ ಕಾಲಕಾಗ್ಕಿ ಮತ್ತೆ ವಸಂತ ಕಾಯುತ್ತಿದೆ, ನೇಪಥ್ಯಕ್ಕೆ ಸರಿಯಲಾರದ ನೆನಪುಗಳು ಕೆದರಿ ನೆತ್ತರು ಹನಿಸುತ್ತಿದೆ., ಮಿಲನದ ಕಾಮನ ಬಿಲ್ಲು ಸಂಜೆಯ ಹನಿಯ ಜಿನುಗಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆತುರ ಹೆಚ್ಚುತ್ತಿದೆ ಕಾಪಿಟ್ಟ ಮುತ್ತುಗಳು ಸರದಿಂದ ಉದುರದ ಹಾಗೆ, ಸಂರಕ್ಷಿಸಿದ್ದೆನೆ ಬಾ ನಲ್ಲೆ ಬಾ!

ಬರುವಾಗ ನನಗಾಗಿ ಒಂದು ಮುತ್ತಿನ ಹಾರತಗೊಂಡು ಬಾ.. ! ಮುಂದಿನ ಬಾಳಿನ ದಾರಿ ನಿರ್ಧಸುವದು ನೀನು ಬಂದಮೇಲೆ ತಾನೆ?! ಮಧು ಚೆಂದ್ರನ ಕೀಟಲೆಯ ಕಾಟಕ್ಕೆ ಗಗನದಲ್ಲಿ ತಾರೆಗಳು ನಾಚುತ್ತಿವೆ. ಗಿರಿ ಕಂಡು ನಗುತ್ತಿದೆ, ಇಷ್ಟು ಹೇಳಿ ಭಾವನೆಗೆ ಪೂರ್ಣವಿರಾಮಹಾಕುತ್ತೇನೆ. ಉಳಿದದ್ದು ನೀನು ಬಂದಮೇಲೆ. ನಿನಗಾಗಿ ಶೃದ್ಧೆಯಿಂದ ಕಾಯುವ ನಿನ್ನ ಬದುಕಿನ ಭಾವಿ ಸಂಗಾತಿಯ ಬಾವಿ ತುಂಬದ ನೀರೀಕ್ಷೆಯಲ್ಲಿ!


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x