ಕಾವ್ಯದ ಹುಟ್ಟು ಒಂದು
ವಿಚಿತ್ರವಾದ ಸೃಷ್ಟಿ ಕ್ರಿಯೆ
ಹುಟ್ಟು ಮತ್ತು ಸಾವಿನಂತೆ
ಯಾವುದೇ ಸಮಯದಲ್ಲಿ
ಹುಟ್ಟಬಹುದು ಹಾಗೇ
ಸಾಯಲೂ ಬಹುದು
ಆದರೆ ಅದರಾತ್ಮ
ಅಮರವಾಗಬಹುದು
ಅಥವಾ
ಹೇಳು ಹೆಸರಿಲ್ಲದಂತೆ
ಅಳಿದೂ ಹೋಗಬಹುದು
ಅದೊಂದು ರಾತ್ರಿ
ದಟ್ಟ ಕತ್ತಲೆಯಲ್ಲಿ
ವೈಬ್ರೇಟ ಆಗಿ
ಬೆಳಗಿದ ಮೊಬೈಲ್
ಪರದೆಯ ಮೇಲೆ
ಎಲ್ಲಿಂದಲೋ ಹಾರಿ
ಬಂದು ಬಂದು ಕುಳಿತ
ಕೀಟಕ್ಕೇನು ಗೊತ್ತು
ಅರಿಸಿ ಬಂದ ಬೆಳಕಿನಲ್ಲೆ
ಜವರಾಯ ಇರುವ ಸತ್ಯ
ಸಾಯಬೇಡ ಹೋಗು
ಹೋಗೆಂದರು ಕೇಳದು
ಎಷ್ಟು ಊದಿದರೂ
ಹಾರಿ ಹೋಗದು
ಮತ್ತೆ ಮತ್ತೆ ಅದೇ
ಬೆಳಕಿನ ತೆರೆಗೆ ಡಿಕ್ಕಿ
ಹೊಡೆಯುವುದು
ಮೋಜಿನಾಟ ಅವಿರತ
ಪ್ರೇಮಿ ತನ್ನ
ಪ್ರೇಯಸಿಯನು
ಮತ್ತೆ ಮತ್ತೆ
ತಬ್ಕೊಳ್ಳುವಂತೆ
ಮತ್ತೆ ಮತ್ತೆ
ಮುತ್ತಿಕ್ಕುವುದು
………………..
ಈ ಚೆಲ್ಲಾಟದಿಂದ
ಮೊಬೈಲಿಗೇನು
ಬೇಜಾರಿಲ್ಲ
ಆದರೆ ಮೊಬೈಲ
ನೋಡುವ
ಕಂಗಳಿಗೆ ಸ್ವಲ್ಪ ಕಿರಿಕಿರಿ
ಮನದ ಅಣತಿಯಂತೆ
ಮೈ- ಕಡವಿ ನಿಂತ
ಘಟೋದ್ಗಜ ಹೆಬ್ಬರಳು
ಬೆಳಕಿಗೆ ಮುತ್ತಿಡುತ್ತಿದ್ದ
ಕೀಟವನ್ನು ಸ್ಕ್ರೀನಿಗೆ
ಒತ್ತಿ ಒರೆಸಿ ಹಾಕಿದೆ
ಬೆಳಕನು ಪ್ರೀತಿಸಲು
ಹೋದ ಪ್ರೇಮಿ
ಅನ್ಯಾಯವಾಗಿ
ಬೆರಳು ತುದಿಗೆ ಸಿಕ್ಕು
ಬಲಿಯಾಗಿದೆ
ಕಾವ್ಯದ ಆಕಸ್ಮಿಕ
ಆದಿ ಮತ್ತು
ಅಂತ್ಯದಂತೆ…!
-ಅಶ್ಫಾಕ್ ಪೀರಜಾದೆ.