ಕಾವ್ಯಧಾರೆ

ಧಾರವಾಡ ಎನ್ನುವ ಶಹರದೊಳಗೆ ಹಳೆ ಹುಡುಗಿಯ ನೆನೆಪಿನ ಜಾತ್ರೆ: ವೃಶ್ಚಿಕ ಮುನಿ

ಧಾರವಾಡ ಸವಿ ನೆನಪುಗಳು
ಕಾಡಕತ್ತವಾ
ಧಾರವಾಡ ಮಳೆಯಂಗ
ಆದರೇನು ಮಾಡುವುದೂ
ಮಳೆಗಾಲಕ್ಕೆ ಇನ್ನೂ ಎರಡು ತಿಂಗಳ ಬಾಕಿ ಅದ
ಅಲ್ಲಿವರೆಗೂ
ಹಾಳಾದ ಈ ಬಿಸಿಲಿನ ಕಾಟಕ್ಕೆ
ನಡುನಡುವೆ ನೆನಪುಗಳ
ಬೆವರಿನ ಜಳಕ…!

ಹೀಗಿತ್ತು ಧಾರವಾಡದ ಬದುಕು
ಬೇಕಾಗಿದ್ದು ಎಲ್ಲ ಇತ್ತು
ಹಸಿವು ಇತ್ತು, ಓದಿನ ಖುಷಿ ಇತ್ತು
ಹಣದ ಕೊರತೆ ಇತ್ತು
ಬದುಕಿನ ಚಿಂತಿ ಇತ್ತು
ಆದರೂ ಏನಾದರೂ ಮಾಡಬೇಕು ಎನ್ನುವ ಛಲ ಇತ್ತು
ಒಳ್ಳೆಯ ಗೆಳೆಯರು ಬಳಗ ಇತ್ತು
ಚಿಂತನೆ ಇತ್ತು ಚಿಂತಿಸುವ
ಜೀವಗಳಿದ್ದವು
ರಾತ್ರಿ ಕನಸುಗಳಿಗೆ ಜೊತೆಯಾಗುವ ನನಸಿನ ಸರಮಾಲೆ ಇತ್ತು…!

ಧಾರವಾಡ ಬಿಟ್ಟ ಬಂದ ನಂತರವೂ ಬಿಡದೆ ಕಾಡುವ ಮೋಹವಿತ್ತು
ಧಾರವಾಡ ಹಳೆ ಗೆಳತಿಯಂಗ ಕಾಡಾತ್ತೀತು
ಆಕಿ ನಗು, ಹುಡುಗಾಟ, ಹುಡುಕಾಟವಿತ್ತು ತಿರುಗಾಟ ಅವಳ ಜೊತಿಗೀನ
ನಾಟಕ ಮಜಲುನ ಮಜವಿತ್ತು ಬದುಕಿಗೆ ಬೇಕಾದ ವಿಚಾರ
ಸಂಕೀರ್ಣವಿತ್ತು ಜೊತೆಗೆ ಅವಳು ಸಂಕೀರಣವಾಗಿದ್ದಳು
ದಾರಿಗೆ ಚೆಲ್ಲಿದ ಹೂನಗೆ
ಚೈತ್ರದ ಚಿರುಗು ಇತ್ತು
ಶಿಶಿರಕ್ಕೆ ಎಲೆ ಉದುರಿಸೋ ಮುನಿಸಿತ್ತು
ಮೌನವಿತ್ತು ಜೊತೆಗೆ ಚಿಲಿಪಿಲಿ ಕಲರವವಿತ್ತು…!

ಖಾಲಿ ತಲೆಯಲ್ಲಿ ಸಿದ್ದಾಂತದ ನೆಲೆಯೂರಿತ್ತು ಎಡ ಬಲ
ವಿಚಾರದ ಹುಚ್ಚಾಟದಾಗ
ಕ್ರಾಂತಿಯ ಕಿಡಿಯ ಬೆಳಕಿತ್ತು
ಜೊತೆಗೆ ಸಾಂಸ್ಕ್ರತಿಯ ಸವಿತ್ತು
ಬದುಕಿಗೆ ಎನಬೇಕಾಗಿತ್ತು ಅದು ಇತ್ತು ಇದು ಇತ್ತು ನಾವು ಪಡಕೂಂಡುವಿ
ಧಾರವಾಡನ ನಾವು ಕಳಕೊಂಡವಿ ಬಿಟ್ಟವಿ
ಜೀವನ ಬೆನ್ನಹತ್ತಿ ಸಂಸಾರದಾ ಬಿದ್ದಿವಿ…!

ನಾನು ಮುದುಕನಾದೆ
ಧಾರವಾಡಕ್ಕೆ ಮಾತ್ರ ಇನ್ನು ಹರೆಯ ನಿತ್ಯ ಬರುವ ಜೀವಗಳಿಗೆ
ತನ್ನ ಮಡಿಲೂಳಗೆ
ಬರಮಾಡಿಕೊಂಡು
ತನ್ನಲ್ಲಿ ಇರುವದನ್ನು ಹಂಚಿಬಿಡುವ ನಿಸ್ವಾರ್ಥ
ಗುಣವಿದೆ ಈ ಮಣ್ಣಿಗೆ
ಇನ್ನು ಹರೆಯ ಬೆಳಯುತಲಿದೆ
ವಸಂತಕ್ಕೆ ಮೈನೇರದ ವಧುವಿನಂತೆ…!

( ಧಾರವಾಡ ಶಹರವನ್ನು ಇಷ್ಟು ಪದಗಳಲ್ಲಿ ಬಂಧಿಸಿಡಲು ಅಸಾಧ್ಯವೆ ಇದು ಆದಾವ ಮೂಲೆಗೂ ಸಾಲದು..)

-ವೃಶ್ಚಿಕ ಮುನಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *