ನಿಲುವಂಗಿಯ ಕನಸು (ಅಧ್ಯಾಯ ೧-೩): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧: ಮೊಳಕೆಯೊಡೆಯಿತು

ಎರಡೊಂದ್ಲ ಎರಡು…ಎರಡೇಡ್ರ್ಳ ನಾಲ್ಕು…
ಊರ ಪ್ರಾಥಮಿಕ ಶಾಲೆಯ ಕಡೆಯಿಂದ ಸಮೂಹಗಾನದಂತೆ ರಾಗವಾಗಿ ಹೊರಟ ಮಕ್ಕಳ ಧ್ವನಿ ಪಶ್ಚಿಮದ ಕಾಡಲ್ಲಿ ಕ್ಷಣಕಾಲ ಅನುರಣಿಸಿ ಹಿಂತಿರುಗಿ ಸೀತೆಯ ಕಿವಿಯಲ್ಲಿಳಿದು ಹೃದಯದಲ್ಲಿ ದಾಖಲಾಗತೊಡಗಿತು. ಅದರಲ್ಲಿ ತನ್ನ ಮಗಳು ಪುಟ್ಟಿಯ ಧ್ವನಿಯೂ ಸೇರಿದಂತೆ ಕಲ್ಪಿಸಿಕೊಂಡು ಕ್ಷಣಕಾಲ ಪುಳಕಿತಳಾದಳು.
ಪುಟ್ಟಿಗೆ ಈಗಾಗಲೇ ನಾಲ್ಕು ವರ್ಷ ತುಂಬಿದೆ. ಬರುವ ವರ್ಷ ಈ ದಿನಕ್ಕೆ ಅವಳೂ ಅಲ್ಲಿ ನಿಂತು ಮಕ್ಕಳೊಂದಿಗೆ ಮಗ್ಗಿ ಹೇಳುವಂತಾಗುತ್ತಾಳೆ. ‘ಅವ್ವನ ಮನೆಯಿಂದ ಅವಳನ್ನು ಕರೆತಂದು ಇದೇ ಶಾಲೆಗೆ ಸೇರಿಸಬೇಕು. ಹಳ್ಳಿಯ ಮಡಿಲ ಈ ಶಾಲೆಯಲ್ಲಿ ಅವಳ ಮನಸ್ಸು ವಿಕಾಸಗೊಳ್ಳುವುದನ್ನು ಕಾಣಬೇಕು’ ಎಂದು ಯೋಚಿಸುವಾಗ ಅವಳಿಗೆ ಶಾಲೆಯ ಬಗೆಗೆ ಗೌರವ ಭಾವ ಹೆಚ್ಚತೊಡಗಿತು. ಹಿಂತಿರುಗಿ ಶಾಲೆಯ ಕಡೆ ಮುಖಮಾಡಿ ನಿಂತು ದೇವರ ಗುಡಿಗೆಂಬಂತೆ ಕೈಮುಗಿದಳು.
ಬೆಳಗಿನಿಂದ ಕೆಲಸದಲ್ಲಿ ತಲ್ಲೀನಳಾಗಿದ್ದ ಸೀತೆಗೆ ಹೊತ್ತು ಹೋದದ್ದೇ ತಿಳಿದಿರಲಿಲ್ಲ. ಮಧ್ಯಾಹ್ನ ಊಟ ಮುಗಿಸಿ ಮೆಣಸಿನ ಮಡಿ ಮಾಡುವ ಕೆಲಸದಲ್ಲಿ ತೊಡಗಿದ್ದಳು. ಬಗ್ಗಿಸಿದ ಸೊಂಟ ಎತ್ತಿರಲಿಲ್ಲ. ಈಗ ಶಾಲೆಯ ಮಕ್ಕಳ ಧ್ವನಿ ಕೇಳಿ ಸೊಂಟ ಎತ್ತಿ ನಿಂತಿದ್ದಳು. ಪಶ್ಚಿಮದ ಕಡೆಯ ಕಾಡಿನ ನೆರಳು ಗದ್ದೆಯ ಬಯಲಿನ ಮೇಲೆಲ್ಲಾ ಮಬ್ಬು ಬೆಳಕನ್ನು ಹರಡಿತ್ತು.

ಇನ್ನು ತಡ ಮಾಡುವಂತಿಲ್ಲ, ಮೆಣಸಿನ ಮಡಿಯ ಕೊನೆಯ ಹಂತದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಬೇಕು. ನಾಳೆಯೂ ಗಂಡ ದನಗಳ ಬಾರಿ ಕಾಯಲು ಹೋಗಬೇಕು. ಅಷ್ಟರಲ್ಲಿ ಬೆಳಗ್ಗೆಯೇ ಅವನ ಕೈಯಲ್ಲಿ ಮಡಿಗೆ ಬೀಜ ಹಾಕಿಸಬೇಕು. ಅದೇನು ದೊಡ್ಡ ಕೆಲಸವಲ್ಲ. ಆದರೆ ಗಂಡಸೇ ಭೂಮಿಗೆ ಬೀಜ ಬಿತ್ತಬೇಕೆಂಬುದು ನಿಯಮವಲ್ಲವೇ!
ಮದುವೆಯಾಗಿ ಬಂದು ಐದಾರು ವರ್ಷದಿಂದ ಈ ಜಮೀನಿನಲ್ಲಿ ವ್ಯವಸಾಯದಲ್ಲಿ ಎಡೆಬಿಡದೆ ತೊಡಗಿಕೊಂಡಿದ್ದರೂ ಇದುವರೆಗೂ ಒಂದು ರೂಪಾಯಿಯನ್ನೂ ಉಳಿಸಲಾಗಿರಲಿಲ್ಲ. ಎಲ್ಲಾ ‘ಹೊಟ್ಟೆಗೆ ಬಟ್ಟೆಗೆ ನೇರ’ ಎನ್ನುತ್ತಾರಲ್ಲ ಹಾಗಾಗಿತ್ತು. ಸೀತೆ ತನ್ನ ಗಂಡ ಚಿನ್ನಪ್ಪನನ್ನು ಒತ್ತಾಸೆಯಾಗಿಟ್ಟುಕೊಂಡು ಕೃಷಿಯಲ್ಲಿ ಲಾಭ ಮಾಡಲೇಬೇಕೆಂಬ ಹಠದಿಂದ ಹಲವಾರು ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಳು. ಇರುವ ಒಂದು ಎಕರೆ ಗದ್ದೆ ಚಿನ್ನಪ್ಪ ಹಾಗೂ ಅವನ ತಮ್ಮ ಬಸಪ್ಪನಿಗೆ ತಲಾ ಅರ್ಧ ಎಕರೆ ಪಾಲಾಗಿದೆ. ಹಾಸನದಲ್ಲಿ ನೌಕರಿಯಲ್ಲಿರುವ ಬಸಪ್ಪನಿಗೆ ವರ್ಷಕ್ಕೆ ಎರಡು ಹೇರು ಭತ್ತ ಕೊಡುವುದೆಂದು ಮಾತಾಡಿ ಅವನ ಗದ್ದೆಯನ್ನು ಗುತ್ತಿಗೆ ಮಾಡುತ್ತಿದ್ದಾನೆ.

ಮಳೆಗಾಲದ ಭತ್ತದ ಬೆಳೆ ವರ್ಷದ ಊಟಕ್ಕೆ ಆಯಿತು. ಇನ್ನು ಕೈಯಲ್ಲಿ ನಾಲ್ಕು ಕಾಸು ನೋಡಬೇಕೆಂದರೆ ಬೇಸಿಗೆಯಿಡೀ ಹೋರಾಟ. ಮಳೆಯಾಧಾರಿತ ನೀರಿನ ಕೊಲ್ಲಿಯನ್ನು ನಚ್ಚಿಕೊಂಡು ಕೋಡೆ ಭತ್ತ, ಬೀನ್ಸು, ಗೆಣಸು, ಮೆಣಸಿನಕಾಯಿ ಹೀಗೆ ಹಲವಾರು ಬೆಳೆಗಳ ಪ್ರಯೊಗ ನಡೆಸಿದ್ದಾಯಿತು. ಒಮ್ಮೆಯೂ ಕೈಹಿಡಿದಿಲ್ಲ. ಅದೊಂದು ಬಗೆಯ ಜೂಜಾಟ. ಒಂದಿಲ್ಲೊಂದು ಕಾರಣಕ್ಕೆ ಸೋಲು. ಮಳೆಯ ಅಭಾವದ ಕಾರಣಕ್ಕೆ ನೀರಿನ ಕೊಲ್ಲಿ ಬತ್ತಿದ್ದು ಒಮ್ಮೆಯಾದರೆ, ಇಳುವರಿ ನೆಲಕಚ್ಚಿದ್ದು ಇನ್ನೊಮ್ಮೆ, ಇಳುವರಿಯಾದರೂ ಬೆಲೆ ಬಾರದೆ ಹೋದದ್ದು ಮತ್ತೊಮ್ಮೆ, ಹೀಗೆ!

ಇಂಥ ಜೂಜಾಟದಲ್ಲಿ ಪಳಗಿದ ಪಂಟರಾಗಿದ್ದ ದಂಪತಿಗಳು ಈ ಬಾರಿ ಭಾರೀ ಪಣಕ್ಕೇ ಅಣಿಯಾಗಿದ್ದರು. ಬಸಪ್ಪನ ಪಾಲಿನ ಗದ್ದೆಯನ್ನು ಸೇರಿಸಿ ಪೂರ್ತಿ ಒಂದು ಎಕರೆಗೆ ಮೆಣಸಿನ ಗಿಡ ಹಾಕುವುದು!
ಕೆಲಸ ಮುಗಿಸಿದ ಸೀತೆ ಒಮ್ಮೆ ಆಸೆಯಿಂದ ಮಡಿಗಳೆಡೆಗೊಮ್ಮೆ ನೋಡಿದಳು. ನಾಲ್ಕು ಮಡಿಗಳು. ಹುಡಿ ಹುಡಿಯಾದ ಮಣ್ಣು. ಒಂದೂ ಹೆಂಟೆಯಿಲ್ಲದಂತೆ ಸಣ್ಣ ಕೊಡತಿಯಿಂದ ಹೊಡೆದು ಹುಡಿಗೊಬ್ಬರ ಹಾಕಿ ಗುದ್ದಲಿಯಿಂದ ಕುಬುಕಿ ಹದವಾಗಿ ಬೆರೆಸಲಾಗಿದೆ. ಮೇಲಿನ ಕೊಲ್ಲಿಯಿಂದ ನೀರನ್ನು ಹೊತ್ತುತಂದು ಮಡಿಯನ್ನು ಚೆನ್ನಾಗಿ ನೆನಸಿಯೂ ಆಗಿದೆ. ಇನ್ನು ಬೀಜ ಮೊಳೆತಿದ್ದರೆ ಬೆಳಿಗ್ಗೆ ಹಾಕುವುದೊಂದೇ ಬಾಕಿ. ಸೀತೆಗೆ ತೃಪ್ತಿಯೆನಿಸಿತ್ತು. ತಲೆಯ ಬಟ್ಟೆಯನ್ನು ತೆಗೆದು ಮುಖದ ಬೆವರನ್ನು ಒರೆಸಿಕೊಂಡಳು.


ಸಸಿಗಳು ಬರುವುದಕ್ಕೆ ಇನ್ನು ಒಂದು ತಿಂಗಳು ಬೇಕು. ಅಷ್ಟರಲ್ಲಿ ಗಂಡನನ್ನು ಕಟ್ಟಿಕೊಂಡು ಪಾತಿ ಮಾಡಿ ಗೊಬ್ಬರ ಹಾಕಿಕೊಳ್ಳಬೇಕು. ಕೊಲ್ಲಿಯಿಂದ ಗದ್ದೆಯೊಳಕ್ಕೆ ತಿರುಗಿಸಿಕೊಂಡ ನೀರು ನಿಲ್ಲಲು ಮಾರಿಗೊಂದರಂತೆ ಗುಂಡಿ ತೋಡಬೇಕು. ಗುಂಡಿ ಹತ್ತಿರ ಹತ್ತಿರ ಇದ್ದಷ್ಟು ಪಾತಿಗಳಿಗೆ ನೀರು ಹುಯ್ಯಲು ಸುಲಭ ಎಂದುಕೊಳ್ಳುತ್ತಾ ಎಲ್ಲಾ ಸಲಕರಣೆಗಳನ್ನು ಬದುವಿನಲ್ಲಿನ ಗುತ್ತಿಯ ಬಳಿ ಅಡಗಿಸಿಟ್ಟಳು.

‘ಕಣ್ಣಿಗೆ ಕತ್ತಲೆಯಾಗುವ ಮೊದಲೇ ಮನೆ ಸೇರಬೇಕು’ ಎಂದು ಅವಸರಿಸುತ್ತಾ ಮೊದಲೇ ಕಡಿದಿಟ್ಟಿದ್ದ ಸೌದೆ ಹೊರೆಯನ್ನು ತಲೆಯ ಮೇಲಿಟ್ಟುಕೊಂಡು ಏರು ಹಾದಿಯಲ್ಲಿ ಮನೆಯ ಕಡೆ ಹೆಜ್ಜೆ ಹಾಕತೊಡಗಿದಳು.
ಮನೆ ತಲುಪುವ ವೇಳೆಗಾಗಲೇ ಎಲ್ಲರ ಮನೆಯಲ್ಲೂ ದೀಪಗಳು ಬೆಳಗುತ್ತಿದ್ದವು. ‘ದನದ ಬಾರಿಗೆ ಹೋಗಿದ್ದ ಗಂಡ ಇಷ್ಟರಲ್ಲಾಗಲೇ ಬಂದು ಬೆಂಕಿ ಉರುಬಿ ಕಾಪಿ ಕಾಯಿಸಿರಬಹುದು’ ಎಂದುಕೊಳ್ಳುತ್ತಾ ಸೌದೆ ಹೊರೆಯನ್ನು ಹಟ್ಟಿಯಲ್ಲಿ ದೊಪ್ಪನೆ ಕೆಡವಿ ಮನೆಯ ಕಡೆ ನೋಡಿದಳು. ದೀಪವಿರಲಿಲ್ಲ; ನಿರಾಶೆಯಾಯಿತು.
ಅಲ್ಲಲ್ಲಿ ಕತ್ತಲಲ್ಲಿ ತೂಕಡಿಸುತ್ತಾ ಕುಳಿತಿದ್ದ ಹೇಂಟೆ, ಹುಂಜ, ಕಡತ, ಪಿಳ್ಳೆಗಳು ಸೌದೆ ಹೊರೆಯ ಸದ್ದಿಗೆ ಎಚ್ಚೆತ್ತು ಮನೆಯೊಡತಿಯ ಆಗಮನವನ್ನು ಗ್ರಹಿಸಿ ಸೀತೆಯ ಸುತ್ತ ನೆರೆದವು.

ಕೋಳಿಗಳನ್ನು ಅಲ್ಲಿಯೇ ಬಿಟ್ಟು ಮನೆ ಬಾಗಿಲು ತೆರೆದು ಮೊದಲಿಗೆ ದೀಪ ಹಾಕಿದಳು. ನಂತರ ಈಚೆಗೆ ಬಂದು ಮೀಯುವ ಮನೆಯ ಬಾಗಿಲು ತೆಗೆಯಲು ಚಿಲಕಕ್ಕೆ ಕೈ ಹಾಕಿದಳು. ಬಾಗಿಲು ತೆಗೆಯುವುದಕ್ಕೂ ಅವಕಾಶ ಕೊಡದೆ ಕೋಳಿಗಳು ಒಂದರೊಡನೊಂದು ಪೈಪೋಟಿಗೆ ಬಿದ್ದಂತೆ ಮುಚ್ಚಿದ ಬಾಗಿಲ ಮೇಲೆಯೇ ನೆಗೆದು ಹಿಂದೆ ಬೀಳತೊಡಗಿದವು.
‘ಇವ್ರ ಹಡೆ ಹಾಳಾಗ’ ಎನ್ನುತ್ತಾ ಪ್ರೀತಿಯಿಂದಲೇ ಬೈಯುತ್ತಾ ಸೀತೆ ಅವುಗಳ ಅಡಚಣೆಯ ಮಧ್ಯೆಯೂ ಬಾಗಿಲು ನೂಕಿ ದೀಪಹಾಕಿದ್ದೇ ತಡ ಎಲ್ಲವೂ ತಂತಮ್ಮ ಸ್ಥಾನದಲ್ಲಿ ಕುಳಿತು ಮತ್ತೆ ನೆಮ್ಮದಿಯಿಂದ ತೂಕಡಿಸತೊಡಗಿದವು. ಕೋಳಿಗಳ ಸದ್ದಡಗುತ್ತಲೂ ಸ್ವಲ್ಪ ಬಿಡುವಾದಂತೆನಿಸಿ ಬಚ್ಚಲ ಮೇಲಿನ ಹಲಗೆಯ ಮೇಲೆ ಆಸೆಯಿಂದ ಕಣ್ಣಾಡಿಸಿದಳು. ಬಟ್ಟೆಯ ಆ ಗಂಟು ಸುರಕ್ಷಿತವಾಗಿ ಅಲ್ಲಿಯೇ ಕುಳಿತಿತ್ತು.

ನಿಧಾನಕ್ಕೆ ಕೈಹಾಕಿ ತೊಟ್ಟಿಲಿನಿಂದ ಮಗುವನ್ನಿಳಿಸಿಕೊಳ್ಳುವಂತೆ ಪ್ರೀತಿಯಿಂದ ಇಳಿಸಿಕೊಂಡಳು. ಹಳೆಯ ಲುಂಗಿಯಲ್ಲಿ ಕಟ್ಟಿಟ್ಟಿದ್ದ ಆ ಗಂಟನ್ನು ನೆಲದ ಮೇಲಿಟ್ಟು ಸಾವಕಾಶವಾಗಿ ಬಿಚ್ಚಿದಳು. ಕಪ್ಪುಬಣ್ಣದ ಹುಡಿಗೊಬ್ಬರದ ಮಧ್ಯೆ ಅಲ್ಲಲ್ಲಿ ಬಿಳಿಯ ಕಣಗಳು! ಮೂರು ದಿನದ ಹಿಂದೆ ಮೊಳಕೆ ಕಟ್ಟಿ ಇಟ್ಟಿದ್ದ ಪುಟ್ಟ ಪುಟ್ಟ ಮೆಣಸಿನ ಬೀಜಗಳು ಸಣ್ಣ ಸಣ್ಣ ಮೊಳಕೆಗಳನ್ನು ಹೊರಡಿಸಿದ್ದವು. ಆ ದೃಶ್ಯ ಕಂಡು ಪುಳಕಿತಳಾದ ಸೀತೆ ಈಡೇರದೆ ಉಳಿದ ತನ್ನ ಕನಸುಗಳು ಈ ಬಾರಿ ಸಾಕಾರಗೊಳ್ಳುವುದು ನಿಶ್ಚಯ ಅಂದುಕೊಂಡು ಕ್ಷಣ ಕಣ್ಮುಚ್ಚಿದಳು. ಬಣ್ಣಬಣ್ಣದ ರಾತ್ರಿಯ ನಿಲುವಂಗಿಯೊಂದು ಅವಳ ಕಣ್ಮುಂದೆ ಕನಸಿನೋಪಾದಿಯಲ್ಲಿ ತೇಲಿಹೋಯಿತು.

ಅಧ್ಯಾಯ ೨: ಕಾಳಮ್ಮನ ವಹಿವಾಟು

ಮೀಯುವ ಮನೆ ಹಂಡೆಗೆ ಕೈ ಅದ್ದಿ ನೋಡಿದಳು. ನೀರು ತುಂಬಾ ಇದೆ. ಬೆಳಿಗ್ಗೆ ತುಂಬಿಸಿ ಹೋದದ್ದಲ್ಲವೆ!
ಒಲೆಗೆ ಸಣ್ಣಸಣ್ಣ ಪುಳ್ಳೆಗಳನ್ನು ತುಂಬಿ ಉರಿಮಾಡಿದ ನಂತರ ಹಿಂದಿನ ದಿನ ಉರಿದು ಉಳಿದಿದ್ದ ಕೊರಡನ್ನು ನೂಕಿ ಮತ್ತೆ ಹೊತ್ತಿಕೊಳ್ಳುವಂತೆ ಮಾಡಿದಳು. ‘ಇಷ್ಟು ಉರಿ ಸಾಕು ಇಬ್ಬರಿಗೆ ಸಾಕಾಗುವಷ್ಟು ಹಬೆಯಾಡುವ ನೀರು ಕಾಯಲು. ಬೆಳಿಗ್ಗೆಯಿಂದ ಭೂಮಿಯೊಂದಿಗೆ ಹೋರಾಡಿ ದಣಿದಿರುವ ದೇಹಕ್ಕೆ ಅರ್ಧ ಹಂಡೆ ನೀರು ಸಾಕು ಮರುಚೇತನ ಪಡೆಯಲು!’.
ನಂತರ ಊಟಮಾಡಿ ಚಾಪೆಯ ಮೇಲೆ ಕಾಲು ನೀಡಿದರೆ ಆಯಿತು; ಸುಖ ನಿದ್ರೆ!. ಅಷ್ಟು ಬೇಗ ಎಲ್ಲಿ ನಿದ್ದೆಯ ಮಾತು! ಪಕ್ಕದಲ್ಲಿ ಮಲಗಿದ ಚಿನ್ನಪ್ಪನಿಗೆ ನಿದ್ರೆ ಬರುವವರೆಗೂ! ಮೈಯ ಪ್ರತಿಯೊಂದು ಸ್ನಾಯುವನ್ನೂ ಮಿದ್ದುಬಿಡುತ್ತಾನೆ; ಅವಕ್ಕೆ ಹೊಸ ಜೀವ ತುಂಬುವವನಂತೆ! ಪ್ರತಿಯೊಂದು ನರನರವನ್ನೂ ಮೀಟಿ ನಾದ ಹೊರಡಿಸಲು ಶ್ರಮಿಸುತ್ತಾನೆ ಅಪ್ರತಿಮ ವಾದ್ಯಗಾರನಂತೆ!
ಅದೊಂದು ಹದ ವಾದ್ಯ! ಯಾವಾಗ ಮುಗಿಯುತ್ತೋ ಯಾವಾಗ ನಿದ್ದೆ ಮುಸುಕುತ್ತೋ ಒಂದೂ ತಿಳಿಯದು!
ಸೀತೆ ತನ್ನ ಯೋಚನಾ ಲಹರಿಗೆ ತಾನೇ ನಾಚಿಕೊಂಡಿದ್ದಳು. ಒಲೆಯೊಳಗಿನ ಕೊರಡು ಚೆನ್ನಾಗಿ ಹೊತ್ತಿಕೊಂಡು ಧಗಧಗನೆ ಉರಿಯುತ್ತಿತ್ತು. ಅದರ ಝಳ ಎದುರಿಗೆ ಕುಳಿತ ಸೀತೆಯ ಮುಖದ ಮೇಲೆ ಲಾಸ್ಯವಾಡುತ್ತಾ ವಿಶೇಷ ಮೆರಗು ನೀಡತೊಡಗಿತ್ತು.

‘ನನಗೇನಾಗಿದೆ ಈವತ್ತು. ಅಪಾರ ಹೊತ್ತು ಕೂತ್ಬುಟ್ಟೆ’ ಎನ್ನುತ್ತಾ, ಸೀರೆ ಕೊಡವುತ್ತಾ ಒಲೆಯ ಮುಂದಿನಿಂದೆದ್ದಳು.
ಸೀತೆ ಉರಿಯುತ್ತಿದ್ದ ಒಂದೆರಡು ಪುಳ್ಳೆಗಳನ್ನು ತಂದು ಮನೆಯೊಳಗಿನ ಕೋಣೆಯ ಒಲೆ ಹೊತ್ತಿಸಿದಳು. ಚೆನ್ನಾಗಿ ಒಣಗಿದ್ದ ಕೆಲವು ಹೊಸ ಸೌದೆಗಳು ಅದರೊಂದಿಗೆ ಸೇರಿ ಕವರಿಕೊಳ್ಳತೊಡಗಿದವು. ಒಲೆಯ ಮೇಲೆ ಅನ್ನಕ್ಕೆ ಯಸರಿಟ್ಟು ಮನೆಯನ್ನೆಲ್ಲಾ ಚೊಕ್ಕಟಗೊಳಿಸಿದಳು. ಅಷ್ಟರಲ್ಲಿ ಒಲೆಯ ಬೆಂಕಿ ಧಗಧಗಿಸತೊಡಗಿತ್ತು. ಅನ್ನಕ್ಕಿಟ್ಟ ಯಸರು ಕೊತಕೊತ ಎನ್ನುತ್ತಿತ್ತು. ಹೋಗೊಲೆಯಲ್ಲಿ ಜ್ವಾಲೆ ನುಗ್ಗಿ ಬರುತ್ತಿತ್ತು. ಅದರ ಮೇಲೆ ಒಂದು ಸಣ್ಣ ಕುಡಿಕೆಯನ್ನಿಟ್ಟು ಬರಗಾಪಿಗೆಂದು ಎರಡು ಗ್ಲಾಸ್ ನೀರಿಟ್ಟಳು. ನೀರು ಕುದಿಯುತ್ತಿದ್ದ ಅನ್ನದ ಪಾತ್ರೆಗೆ ಅಕ್ಕಿ ತೊಳೆದುಹಾಕಿದಳು. ಸಾರಿನ ಪಾಸಲೆಯ ಮುಚ್ಚಳ ತೆಗೆದು ನೋಡಿದಳು. ಮಧ್ಯಾಹ್ನಕ್ಕೆಂದು ಮಾಡಿದ್ದ ಸಾರು ಇನ್ನೂ ಮಿಕ್ಕಿತ್ತು. ಒಲೆಯೊಳಗಿನಿಂದ ಒಲೆಗುಂಡಿಗೆ ಸ್ವಲ್ಪ ಕೆಂಡವನ್ನೆಳೆದು ಅದರ ಮೇಲೆ ಸಾರು ಬಿಸಿಗಿಟ್ಟಳು.

‘ಅಲ್ಲಾ ಹೊತ್ತಾರೆ ಕಾಡಿಗೆ ಬಾರಿ ದನ ಹೊಡ್ಕಂಡ್ ಹೋದವ್ನು ಇಷ್ಟು ಕಣ್ಣಿಗೆ ಕತ್ಲೆ ಆದ್ರೂ ಎಲ್ಲಿಗೆ ಹೋದ’ ಚಿನ್ನಪ್ಪನ ಕುರಿತು ಯೋಚಿಸಿದ ಸೀತೆಗೆ ಗಾಬರಿಯಾಗತೊಡಗಿತು.
‘ಆಗ್ಲೇ ಬಂದು ದನ ಕಟ್ಟಿಹಾಕಿ ಎಲ್ಲಾದರೂ ಹೋಗಿರಬಹುದಾ?’ ಎನ್ನುತ್ತಾ ದೀಪ ಹಿಡಿದು ಮನೆಯ ಹಿಂದಿನ ಹಿತ್ತಲಿಗೆ ಹೋದಳು. ದನದ ಗುಡಿಸಲಿನ ಬಾಗಿಲು ಹಾಕಿತ್ತು. ಚಿಲಕ ತೆಗೆದು ಬಾಗಿಲು ನೂಕಿ ದೀಪ ಹಿಡಿದಳು.
ಒಂದು ಮುದಿ ಎತ್ತು, ಒಂದು ಗೊಡ್ಡು ಎಮ್ಮೆ, ಇನ್ನೆರಡು ಸಣ್ಣ ಕಡಸುಗಳು ಮೆಲುಕುಹಾಕುತ್ತಾ ನಿಂತಿವೆ.
‘ಅವ್ನು ಎಲ್ಲಿಗೆ ಹೋಗಿರಬಹುದು’ ಗೊಣಗಾಡಿಕೊಳ್ಳುತ್ತಲೇ ಅನ್ನ ಬಸಿದಳು. ಹೊಟ್ಟೆ ಚುರುಗುಡುತ್ತಿತ್ತು. ಮಧ್ಯಾಹ್ನದಿಂದ ಹೊಟ್ಟೆಗೆ ಏನೂ ಬಿದ್ದಿಲ್ಲ ಎನಿಸಿ ಒಂದು ಲೋಟ ಬರಗಾಪಿ ಬಗ್ಗಿಸಿಕೊಂಡಳು. ಪೂರ್ತಿ ಕುಡಿಯಬೇಕೆನಿಸಲಿಲ್ಲ. ತಳಮಳ ಹೆಚ್ಚಾಯಿತು.
‘ಇನ್ನೆಲ್ಲಿಗೆ ಹೋಗಿದ್ದಾನು? ಆ ಕಾಳಮ್ಮನ ಮನೆ ಒಂದು ಐತಲ್ಲ!… ಇಷ್ಟ್ ಹೊತ್‍ಗಂಟ ಏನ್ಮಾಡ್ತಾನೆ ಅಲ್ಲಿ? ಕಾಳಮ್ಮ ಏನಾದ್ರೂ ಅವ್ನನ್ನ ಒಳಗೆ ಮಾಡಿಕೊಂಡು ಬಿಟ್ಟಿದ್ದಾಳಾ?… ಸ್ತ್ರೀ ಸಹಜ ಸಂಶಯ ಮನಸ್ಸಿನಲ್ಲಿ ಕ್ಷಣ ಇಣುಕಿಹಾಕಿತು. ‘ಛೇ!ಛೇ! ಸಾಧ್ಯ ಇಲ್ಲ. ಚಿನ್ನಪ್ಪ ಅಂತಾವ್ನಲ್ಲ. ಅವ್ಳ ಹತ್ರ ಏನ್ ಕಂಡು ಹೋದಾನು’ ಸೀತೆ ತನಗೆ ತಾನೇ ಸಮಾಧಾನ ಹೇಳಿಕೊಂಡಳು. ಆದರೂ ಅವಳ ಮನಸ್ಸು ತಡೆಯಲಿಲ್ಲ.

‘ಯಾರನ್ನ ಹ್ಯಾಗೆ ನಂಬದು…ಅಷ್ಟಿಲ್ಲದೆ ಅಂಗೈ ಅಗಲ ಭೂಮಿ ಇಟ್ಟುಗೊಂಡಿರೋ ಅವಳು ದುಡ್ಡುಕಾಸು ಹಿಂಗೆ ಓಡಾಡಿಸ್ತಾಳೆ ಅಂದ್ರೆ ಹೆಂಗೆ? ಬರೀ ಬಟ್ಟಿ ಸಾರಾಯಿ ಕಾಯ್ಸಿ ಮಾರಾದ್ರಿಂದ ಇದೆಲ್ಲಾ ಆಗುತ್ತಾ…
ಸೀತೆಯ ಮನಸ್ಸು ಎತ್ತೆತ್ತಲೋ ಓಡತೊಡಗಿತು.
ನಮ್ಮ ಮದುವೆಯಾದ ವರ್ಷವೇ ಅವಳೂ ಮದುವೆಯಾಗಿ ಈ ಊರಿಗೆ ಬಂದಿದ್ದು. ಹೊಸದರಲ್ಲಿ ಊರ ಗಂಡಸರೆಲ್ಲಾ ‘ಕರಿ ಕಾಳಿ’ ‘ಕರಿ ಕಾಳಿ’ ಅಂತಾ ಅವಳೆದುರೇ ಹೀಯಾಳಿಸುತ್ತಿದ್ದುದೇನು ಸುಳ್ಳೆ!
ಅವಳ ಗಂಡ ಪುಟ್ಲಿಂಗ ಪೀಚು ಆಳು. ‘ನೇಗಿಲು ನೊಗ ಹೊತ್ತು ಇಲ್ಲಿಂದ ಗದ್ದೆವರೆಗೂ ಹೋಗಾಕಾಗಾದಿಲ್ಲ ಇವ್ನಿಗೆ. ಇವ್ನು ಹೆಂಗೆ ಅವ್ಳನ್ನ ನಿಭಾಯಿಸ್ತಾನೆ’ ಎಂದು ಕುಹಕವಾಡುತ್ತಿದ್ದುದನ್ನು ನಾವೆಲ್ಲಾ ಕೇಳಿದ್ದೆವಲ್ಲ.
ಆದರೆ ಇದೊಂದು ವಿದ್ಯೆ ಕರಗತವಾಗಿದ್ದರಿಂದ ಅವಳ ಬದುಕಿನ ದಾರಿ ಎಷ್ಟು ಬೇಗ ಬದಲಾಗಿಹೋಯಿತು. ಬರೀ ಭಟ್ಟಿ ಕಾಯ್ಸಿ ಮಾರಿ ಮಾರಿಯೇ ದುಡ್ಡು ಕಾಸಿನಲ್ಲಿ ನಮ್ಮ ಕಣ್ಣೆದುರಲ್ಲೇ ಮೇಲೆ ಬಂದು ನಿಂತಿದಾರಲ್ಲ.
ಇದೇನು ಪವಾಡವೇ!
ಗಂಡ ಹೆಂಡ್ತಿ ಇಬ್ರು ಮನೆ ಮೆಟ್ಲು ಬಿಟ್ಟು ಇಳಿಯಂಗಿಲ್ಲ… ದನ ಕರ ಮೇಯಿಸಂಗಿಲ್ಲ…ಗದ್ದೆ ತ್ವಾಟ ತಿರಗಂಗಿಲ್ಲ…ಮಳೆ ಬಿಸ್ಲೂ ಅನ್ನಂಗಿಲ್ಲ…ಗದ್ದೆ ಕೆಸರು ತುಣಿಯಾಂಗಿಲ್ಲ…

ಗಂಡ ಪುಟ್ಟಲಿಂಗನಿಗೆ ಓಣಿ ಕಡೆ ಗೋಡೆ ಒಡೆಸಿ ಬಾಗಿಲು ಇಡಿಸಿ ಸಣ್ಣ ಅಂಗಡಿ ಮಾಡಿಕೊಟ್ಟಿದ್ದಾಳೆ. ಪುಟ್ಲಿಂಗ ಹಗಲುಹೊತ್ತು ದೊಡ್ಡೂರಿಗೆ ಹೋಗಿ ಬೆಲ್ಲ ಮುಂತಾದ ಪದಾರ್ಥಗಳನ್ನು ತಂದು ಭಟ್ಟಿ ಕರಗಲು ತಯಾರು ಮಾಡಲು ಅಣಿಮಾಡುತ್ತಾ, ಕಾಳಮ್ಮ ಹೇಳುವ ಇತರ ಕೆಲಸಗಳನ್ನು ಮಾಡುತ್ತಾ ಕಾಲ ಕಳೆದರೆ, ಸಂಜೆ ಹೊತ್ತು ಅಂಗಡಿ ಬಾಗಿಲು ತೆಗೆದು ಬೀಡಿ ಬೆಂಕಿಪೊಟ್ಟಣ, ಕಡ್ಲೆಬೀಜ ಮುಂತಾದವನ್ನು ಮಾರುತ್ತಾನೆ!
ಕರಿಕಾಳಿ ಕಾಳಕ್ಕನಾಗಿದ್ದಾಳೆ! ಕಾಳಮ್ಮನಾಗಿದ್ದಾಳೆ!
ಪುಟ್ಟಲಿಂಗ ಈಗ ಪುಟ್ಲಿಂಗಣ್ಣ!
ದೊಡ್ಡೂರಿನ ಆಕ್ಸ್‍ಫರ್ಡ್ ಇಂಗ್ಲಿಷ್ ಕಾನ್ವೆಂಟಿಗೆ ಈ ಊರಿನಿಂದ ಕಾಳಮ್ಮನ ಮಗನೇ ಮೊದಲ ವಿದ್ಯಾರ್ಥಿ! ಡುಮ್ಮ ಡುಮ್ಮನಾಗಿರುವ ಈ ಹುಡುಗನ ಎರಡೂ ಕೌಳ ಬಾತುಕೊಂಡಂತಿದ್ದು ಸ್ಕೂಲ್‍ಡೇನಲ್ಲಿ ಆಂಜನೇಯನ ಏಕಪಾತ್ರಾಭಿನಯಕ್ಕೆ ಅವನನ್ನು ಸೆಲೆಕ್ಟ್ ಮಾಡಿದ್ದರಂತೆ! ಇನ್ನು ಕೊಬ್ಬಿದಂತಿರುವ ಅವನ ಎರಡು ಅಂಡುಗಳೂ ನಡೆಯುವಾಗ ಅತ್ತಿತ್ತ ಹೊರಳಾಡುವುದನ್ನು ನೋಡಿದರೆ ಅವನ ಶಾಲೆಯ ಮಕ್ಕಳು ಅವನನ್ನು ‘ಮೊಟ್ಟೆ ಹೇಂಟೆ’ ಎಂದು ಕರೆಯುವುದು ಸರಿಯೆನಿಸುತ್ತದೆ.

ಎರಡು ವರ್ಷದಿಂದ ಎಲ್‍ಕೆಜಿ, ಯುಕೆಜಿ ಎಂದು ಹೋಗುತ್ತಿದ್ದರೂ ಇನ್ನೂ ಎಬಿಸಿಡಿ ದೊಡ್ಡಕ್ಷರವನ್ನೂ ಕಲಿಯಲಾಗಿಲ್ಲ.
ಸಂಜೆ ಅವರ ಮನೆಯ ಬಳಿ ಎಡತಾಕುವ ಜನರ ಓಲೈಸುವ ಪರಿ ನೋಡಬೇಕು!
ಆ ಹುಡುಗನ ಉಬ್ಬಿದಂತಹ ಕೆನ್ನೆಯನ್ನು ತಮ್ಮ ಬಲಗೈನ ಎಲ್ಲ ಬೆರಳುಗಳ ತುದಿಯಿಂದ ಮುಟ್ಟಿ, ಆ ಬೆರಳುಗಳನ್ನು ಹಾಗೆಯೇ ತಮ್ಮ ತುಟಿಯ ಬಳಿ ತಂದು ‘ಊಂ’ ಎಂದು ಮುತ್ತಿಕ್ಕುತ್ತಾ, ‘ಕಾಳಕ್ಕನ ಮಗ ಏನು ಮುದ್ದಾಗಿದ್ದಾನೆ, ಎಷ್ಟ್ ಚೂಟಿಯಾಗಿದ್ದಾನೆ’ ಎನ್ನುವಾಗ ಪಾಪ ಆ ಹುಡುಗ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತಿರುತ್ತಾನೆ.
‘ಹಿಂಗೇ ನಡೆದರೆ ಕಾಳಮ್ಮ ‘ಕಾಳಮ್ಮನವರು’ ಆಗಬಹುದು. ಮುಂದಿನ ಎಲೆಕ್ಷನ್‍ನಲ್ಲಿ ಪಂಚಾಯ್ತಿ ಮೆಂಬರೂ ಆಗಬಹುದು’ ಎಂದು ಅಲ್ಲಲ್ಲಿ ನಲ್ಲಿಯ ಹತ್ತಿರ ನೀರು ಹಿಡಿಯುವ ಹೆಂಗಸರು ಮಾತಾಡಿಕೊಳ್ಳುವವರೆಗೂ ನಡೆದಿದೆ.
ಊರ ಜನರೆಲ್ಲಾ ಕಾಳಮ್ಮನ ಏಳಿಗೆಯ ಬಗ್ಗೆ ಲಘುವಾಗಿ ಮಾತನಾಡಿಕೊಂಡರೂ, ವ್ಯವಸಾಯದ ಬದುಕೆಂಬ ಬಲೆಯಲ್ಲಿ ಸಿಲುಕಿ ವರ್ಷವಿಡೀ ದುಡಿದರೂ ಕಾಳಮ್ಮನಂತಹಾ ಸಫಲ ಹಣಕಾಸಿನ ಬದುಕು ನಮಗಿಲ್ಲವಲ್ಲಾ ಎಂಬ ಸಣ್ಣದೊಂದು ಈರ್ಷೆ ತುಂಬಿದ ಆಸೆ ಎಲ್ಲರಲ್ಲೂ ಇರುವುದು ಸೀತೆಗೂ ಅರಿವಿಗೆ ಬಂದಿತ್ತು.

ಅಧ್ಯಾಯ ೩: ಅವ್ಳು ಎತ್ತಿಕೊಂಡ್ ಕೂತಿರ್ಬೌದು..!

ಕಾಳಮ್ಮ ಹಾಗೂ ಚಿನ್ನಪ್ಪನ ಬಗ್ಗೆ ಇಲ್ಲಸಲ್ಲದ ಸಂಬಂಧ ಕಲ್ಪಿಸಿಕೊಂಡು ತಲೆ ಕೆಡಿಸಿಕೊಂಡಿದ್ದ ಸೀತೆಗೆ, ಮುಂದಿನ ಬಾಗಿಲು ತಟ್ಟಿದ ಶಬ್ದ ಕೇಳಿ ಸಿಟ್ಟು ಒಮ್ಮೆಗೇ ನೆತ್ತಿಗೆ ನುಗ್ಗಿತು. ‘ಇವತ್ತು ಅವನಿಗೆ ಗಾಳಿ ಬಿಡುಸ್ತೀನಿ’ ಎಂದುಕೊಳ್ಳುತ್ತಾ ಬರ್ರನೆ ಬಾಗಿಲ ಕಡೆ ನಡೆದಳು. ಹೊರಗಿದ್ದವನನ್ನು ಒಳಗೆ ಬಿಟ್ಟುಕೊಂಡು ಮಾತನಾಡಿಸುವಷ್ಟು ವ್ಯವದಾನವಿರಲಿಲ್ಲ ಅವಳಿಗೆ.
‘ಯಾವ ಹಾದರಗಿತ್ತಿ ಮನೇಲಿದ್ದೆ ಇಷ್ಟ್ ಹೊತ್ತೂವೆ’ ಕೂಗಾಡುತ್ತಲೇ ಬಾಗಿಲು ತೆರೆದಳು. ಆದರೆ ಒಳಬಂದವನು ಚಿನ್ನಪ್ಪನಾಗಿರಲಿಲ್ಲ.
ಸುಬ್ಬಪ್ಪ! ಅವಳ ತಮ್ಮ! ಗಲಿಬಿಲಿಗೊಳಗಾದ ಸುಬ್ಬಪ್ಪ ಅಕ್ಕನ ಮುಖವನ್ನೇ ಕುತೂಹಲದಿಂದ ನೊಡುತ್ತಾ ಕ್ಷಣಕಾಲ ನಿಂತ. ನಂತರ ಸುಧಾರಿಸಿಕೊಂಡು ‘ನಾನ್ ಯಾವ ಹಾದರಗಿತ್ತಿ ಮನೆಗೆ ಹೋಗಿದ್ನೆ ಅಕ್ಕ…ನಿಂಗೇನಾಗಿದೆ ಇವತ್ತು? ನಾನು ಊರಿಂದ ಹೊರಟವನು ಸೀದಾ ಅಕ್ಕನ ಮನೆಗೇ ಬರ್ತಾ ಇದ್ದೀನಿ’ ಎಂದ, ಅವನ ಮಾಮೂಲಿ ವ್ಯಂಗ್ಯದ ನಗೆ ಬೀರುತ್ತಾ.

‘ಇರ್ಲಿ ಬಾ ಹೇಳ್ತೀನಿ’ ಎನ್ನುತ್ತಾ ತಮ್ಮನನ್ನು ಕೈಹಿಡಿದು ಬಚ್ಚಲಿಗೆ ಕರೆದೊಯ್ದು ಕಾಲು ತೊಳೆಯಲು ನೀರು ಕೊಟ್ಟಳು. ಅವಳ ಪ್ರಕ್ಷುಬ್ದ ಮನಸ್ಸು ತಿಳಿಗೊಂಡಿತ್ತು. ಇದ್ದಕ್ಕಿದ್ದಂತೆ ತೌರೂರಿನಿಂದ ಬಂದ ತಮ್ಮನ ಆಗಮನದಿಂದ ಖುಷಿ ಉಕ್ಕಿಬಂದಿತ್ತು.
‘ಬಾ ಕೂತ್ಕೋ’ ಎನ್ನುತ್ತಾ ಅವನೆಡೆಗೆ ಮಣೆಯೊಂದನ್ನು ನೂಕಿ ಒಲೆಗುಂಡಿಯಲ್ಲಿದ್ದ ಕಾಪಿ ಕುಡಿಕೆಗೆ ಕೈ ಹಾಕಿದಳು.
‘ಅವ್ವ, ಪುಟ್ಟಿ ಎಲ್ಲಾ ಹೆಂಗಿದಾರಪ್ಪ?’ ಎನ್ನುತ್ತಾ ತಮ್ಮನ ಕೈಮುಟ್ಟಿ ಕಾಪಿ ಲೋಟ ನೀಡಿದಳು.

ಒಂದು ಗುಟುಕು ಕುಡಿದ ಸುಬ್ಬಪ್ಪ ‘ಇದೇನಕ್ಕ ಗಂಡ ಹೆಂಡ್ತಿ ಇಷ್ಟ್ ಜಿಪುಣ್ರಾದ್ರೆ ಹೆಂಗೆ! ಯಾವಾಗ್ ಬಂದ್ರೂ ಬರಗಾಪಿನೇ ಕುಡಿಸ್ತೀರಲ್ಲ! ಸಣ್ಣದೊಂದು ಹಸ ತಗಳ್ಳದಲ್ವ?’ ಎಂದು ಕುಟುಕಿದ.
‘ನೀನೊಬ್ಬ ಹಾಸ್ಯಾಗಾರನಾದೆ. ನಮ್ಮ ಪಾಡು ಗೊತ್ತಿಲ್ವೇನಾ ನಿಂಗೆ…ಇರಲಿ ಬಿಡು ನಿನ್ನ ಬಾಯ ಹರಕೆಯಂತೇ ಆಗ್ಲಿ. ದೇವ್ರು ಒಳ್ಳೇದು ಮಾಡಿದ್ರೆ ಮುಂದೆ ಈ ದಿನಕ್ಕೆ ಒಂದು ಹಸ ತಂದು ಕಟ್ಟನಂತೆ. ಹೆಂಗೂ ಬರೋ ವರ್ಷ ಪುಟ್ಟಿಯ ಕರ್ಕಬಂದು ಇಲ್ಲೇ ಸ್ಕೂಲಿಗೆ ಸೇರಿಸ್ಬೇಕಲ್ಲ. ಅವಳಿಗಾದ್ರೂ ಮನೇಲಿ ಕರಾವು ಇರಲೇಬೇಕಲ್ಲ’.
‘ಅದು ಸರಿ ಕನಕ್ಕ. ಪುಟ್ಟಿ ಸ್ಕೂಲಿಗೆ ಸೇರ್ಸಕೆ ದುಡ್ಡು ಕಾಸು ಎಲ್ಲಾ ಹೊಂದಿಸ್ಗಂಡಿರಾ?’ ಎಂದ.
‘ದುಡ್ಡು ಏನ್ ಮಹಾ ಬೇಕು. ಮನೆ ಮುಂದ್ಲ ಸರ್ಕಾರಿ ಶಾಲೆಗೆ ಸೇರ್ಸಕೆ’ ಸೀತೆಯ ವಾದ.

‘ನಿಮಗೆ ಕತ್ತೆ ಗೇದಂಗೆ ಗೇಯದು ಒಂದು ಗೊತ್ತು. ಪ್ರಪಂಚಜ್ಞಾನ ಕಮ್ಮಿ’ ಎಂದ.
‘ಈ ವರ್ಷನೇ ಲಾಸ್ಟು. ಈ ಊರಿನ ಸರ್ಕಾರಿ ಶಾಲೆ ಬಾಗ್ಲ್ ಹಾಕ್ತಾರೆ. ಈಗ ಒಂದರಿಂದ ಮೂರರವರೆಗೂ ಮಕ್ಳೇ ಇಲ್ವಂತೆ. ನಾಕನೇ ಕ್ಲಾಸಲಿ ಮಾತ್ರ ಒಂದ್ ಹತ್ತು ಹುಡುಗ್ರು ಇದಾರಂತೆ. ಅವ್ರೂ ಪಾಸಾಗಿ ಹೋದ್ಮೇಲೆ ಬರೀ ಗೋಡೆಗೆ ಪಾಠ ಮಾಡ್ತಾರಾ? ನಿನ್ನ ಮಗಳಿಗೂ ದೊಡ್ಡೂರಿನ ಕಾನ್ವೆಂಟಲಿ ಸೀಟ್ ಹುಡುಕೋದೆ’ ಸೀತೆಯ ಮೇಲೆ ಬಾಂಬ್ ಎಸೆದಂತೆ ಆಯಿತು.


‘ನಮಗೆಂತಾ ಕಾಲ್ಮೆಂಟಾ? ಅಲ್ಲಿ ಪೀಜ್ ಹೊಂದ್ಸದ್ ಇರ್ಲಿ ನೀಲಿಪಾರಂ ಹೊಲ್ಸೋ ಶಕ್ತಿನೂ ಇಲ್ವಲ್ಲ ನಮಗೆ’.
ಸುಬ್ಬಪ್ಪನಿಗೆ ಸೀತೆಯ ಮಾತಿನಿಂದ ಅವಳ ಮನಸ್ಸಿನ ಮೇಲಾಗಿರುವ ಪರಿಣಾಮ ಅರ್ಥವಾಗಿತ್ತು. ಬೇರೆ ಸಂದರ್ಭದಲ್ಲಾಗಿದ್ದರೆ ‘ಕಾಲ್ಮೆಂಟ್ಟೂ ಅಲ್ಲ, ನೀಲಿ ಪಾರಮ್ಮೂ ಅಲ್ಲ! ಕಾನ್ವೆಂಟು, ಯೂನಿಪಾರಮ್ಮು, ಪುಟ್ಟಿಗಿಂತಾ ನಿನ್ನನ್ನೇ ಇಂಗ್ಲಿಷ್ ಕಾನ್ವೆಂಟಿಗೆ ಕಳಿಸ್ಬೇಕು’ ಎಂದು ಹಾಸ್ಯ ಚಟಾಕಿ ಹಾರಿಸಿ ವಾತಾವರಣದಲ್ಲಿ ನಗೆ ತೇಲಿಸಿ ಬಿಡುತ್ತಿದ್ದ. ಇರಲಿ ಬಿಡಕ್ಕ, ಅದೇನ್ ಆಗ್ಲೇ ಭಾವನ ಮೇಲೆ ಗರಂ ಆಗಿದ್ಯಲ್ಲ’ ಸುಬ್ಬಪ್ಪ ಸಂಭಾಷಣೆಯ ಜಾಡು ಬದಲಿಸಿದ. ‘ಅದೇ ಕಣ ನಿಮ್ಮ ಭಾವ ನಾನ್ ಗದ್ದೆಯಿಂದ ಬರೋಕೆ ಮೊದ್ಲೆ ಬಂದು ದನಾ ಕಟ್ಟಾಕಿ ಎಲ್ಲೋ ಹೋಗ್ಯರೆ, ಇನ್ನೂ ಬಂದಿಲ್ಲ ನೋಡು’ ಎಂದು ಮುನಿಸು ವ್ಯಕ್ತಪಡಿಸಿದಳು.

‘ಇನ್ನೆಲ್ಲಿಗೆ ಹೋಗಿರ್ತಾರಕ್ಕ…ಕಾಳಮ್ಮನ ಮನೇಲಿ ಇರ್ತಾರೆ…ಇನ್ನೇನ್ ಬರ್ತಾರೆ ಬಿಡು ಯಾಕ್ ತಲೆ ಬಿಸಿ’ ಎಂದು ಅಕ್ಕನನ್ನು ಸಮಾಧಾನ ಮಾಡಲು ಯತ್ನಿಸಿದ.
‘ಏನ್ ಇಷ್ಟ್ ಹೊತ್ತಾ? ಏನ್ಮಾಡ್ತಿರ್ತಾರೆ’ ಎಂಬ ಅಕ್ಕನ ಮಾತು ಕೇಳಿದ ಸುಬ್ಬಪ್ಪನಿಗೆ ಅವಳನ್ನು ಕೆಣಕಬೇಕೆನಿಸಿತು.

‘ಇನ್ನೇನ್ ಮಾಡ್ತರೆ, ಅವ್ಳು ಎತ್ತಿಗಂಡ್ ಕೂತಿರ್ತಾಳೆ. ಇವ್ರು ಬಗ್ಗಿ ನೋಡ್ತಾ ಇರ್ತಾರೆ’ ಎಂದ.
‘ಥೂ ಹಕ್ಳೆ ಸೂಳೆ ಮಗನೇ’ ಎನ್ನುತ್ತಾ ಒಲೆಯ ಕೊಳ್ಳಿಯೊಂದನ್ನೆಳೆದುಕೊಂಡು ತಮ್ಮನನ್ನು ಹೊಡೆಯುವವಳಂತೆ ನಟಿಸುತ್ತಾ ಅವನೆಡೆಗೆ ಧಾವಿಸಿದಳು.
ಬಾಗಿಲು ದಾಟಿ ನಿಂತ ಸುಬ್ಬಪ್ಪ ‘ಭಾವ ಬಟ್ಟಿ ಮಡಕೆನೇ ಬಗ್ ನೋಡ್ತಾ ಕೂತ್ಕ ಬುಡ್ತಾರೆ…ನಾ ಹೋಗಿ ಕರ್ಕಂಡ್ ಬರ್ತೀನಿ. ನೀನು ಉಪ್‍ಮೀನೋ ಎಂತದೋ ಇದ್ರೆ ಹುಳ್ಳಗೆ ಸಾರ್ ಮಾಡಿರು. ಹೆಂಗೂ ಕಾಳಮ್ಮನ ಮನೆಗೆ ಹೋದ್ರೆ ನಂಗೂ ಒಂದು ಕ್ವಾರ್ಟರ್ ಸಿಕ್ಕುತ್ತೆ’ ಎನ್ನುತ್ತಾ ಕಾಳಮ್ಮನ ಮನೆ ಓಣಿಯ ಕಡೆ ದಾಪುಗಾಲು ಹಾಕತೊಡಗಿದ.
ಇತ್ತಕಡೆ ಒಲೆಯ ಬಳಿ ಕುಸಿದು ಕುಳಿತ ಸೀತೆ ಮುಚ್ಚಲಿರುವ ಕನ್ನಡ ಶಾಲೆಯ ಕುರಿತು ಚಿಂತಿತಳಾದಳು.
ಮುಂದಿನ ವರ್ಷದಿಂದ ಮಗಳನ್ನು ತನ್ನ ಬಳಿ ಕೂರಿಸಿಕೊಂಡು ತಲೆ ಸವರುತ್ತಾ ‘ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ ಎಲ್ಲಿಗೆ ಹೋಗಿದ್ದೆ’ ಎಂದು ಹೇಳಿಕೊಡಬೇಕೆಂದು ಕನಸಿದ್ದನ್ನು ಯೋಚಿಸುತ್ತಾ ತಲೆಬಾಗಿ ಕುಳಿತಳು. ಅವಳ ಕಣ್ಣಿಂದ ಇಳಿದ ಕಣ್ಣೀರು ಚರ್ ಚರ್ ಶಬ್ದ ಮಾಡುತ್ತಾ ಒಲೆಯ ಕೆಂಡದ ಮೇಲೆ ಬೀಳತೊಡಗಿತು.


ಸಂಜೆ ದನ ಹೊಡೆದುಕೊಂಡು ಬಂದ ಚಿನ್ನಪ್ಪ ಅವುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿದ. ಮನೆಗೆ ಬೀಗ ಹಾಕಿತ್ತು.
‘ಸೀತೆ ಬರಲು ಇನ್ನೂ ಸ್ವಲ್ಪ ತಡವಾಗಬಹುದು. ಅದುವರೆವಿಗೂ ಒಬ್ಬನೇ ಕುಳಿತು ಏನು ಮಾಡುವುದು. ಹಾಗೆಯೇ ಹೋಗಿ ಒಂದು ಕ್ವಾರ್ಟರ್ ಕುಡಿದು ಬೇಗ ಬಂದುಬಿಡೋಣ’ ಎಂದು ಕಾಳಮ್ಮನ ಮನೆ ಕಡೆ ಹೆಜ್ಜೆ ಹಾಕಿದ್ದ.
ಮುಂದಿನ ಬಾಗಿಲು ಹಾಕಿದ್ದು ನೋಡಿ ಅಚ್ಚರಿಯಾಯಿತು. ಮೆಲ್ಲನೆ ತಟ್ಟಿದ. ಒಳಗಿನಿಂದ ಬಂದ ಕಾಳಮ್ಮ ಕಿಟಕಿಯಲ್ಲಿ ಇಣುಕಿನೋಡಿ ಬಾಗಿಲು ತೆಗೆದು ಮತ್ತೆ ಒಳಗಿನಿಂದ ಹಾದು ಒಪ್ಪಾರು ಕಡೆ ಹೋದಳು. ಚಿನ್ನಪ್ಪ ಅವಳ ಹಿಂದೆಯೇ ಸ್ವಲ್ಪ ದೂರ ಹೋಗಿ ಒಪ್ಪಾರು ಇಣುಕಿ ನೋಡಿದ. ಸರಾಯಿ ತಯಾರಿಗೆಂದೇ ವಿಶೇಷವಾಗಿ ನಿರ್ಮಿಸಿದ್ದ ಒಲೆಗೆ ಬೆಂಕಿಮಾಡುತ್ತಿದ್ದಳು ಕಾಳಮ್ಮ. ಸರಾಯಿ ಮಡಕೆಯನ್ನು ಅದರ ಮೇಲೆ ಎತ್ತಿಡಲು ಸಿದ್ದತೆ ನಡೆದಿತ್ತು. ಕೆಳಮನೆಗೆ ಯಾರೋ ಅಪಾರ ಜನ ನೆಂಟರು ಬಂದಿದಾರಂತೆ. ‘ಇದ್ದಿದ್ದೆಲ್ಲಾ ಅವರೇ ತಗಂಡು ಹೋಗಿಬಿಟ್ರು. ಈವತ್ತು ರಾತ್ರಿ ಕಾಯಿಸಬೇಕೆಂದು ಮಾಡಿದ್ದ ಕರಗಲು ರೆಡಿ ಐತೆ. ಬೇಗ ಮಾಡಿಬಿಡುತ್ತೇನೆ’ ಎನ್ನುತ್ತಾ ಉರಿಯುತ್ತಿದ್ದ ಒಲೆಯ ಮೇಲೆ ಇಡಲು ಮಣ್ಣಿನ ಪಾತ್ರೆಗಳನ್ನು ಒಂದೊಂದಾಗಿ ತಂದು ಇಡತೊಡಗಿದಳು. ಮೊದಲೆಲ್ಲಾ ಕಡುಬಿನ ಕಳಸಿಗೆಯನ್ನೇ ಉಪಯೋಗಿಸುತ್ತಿದ್ದ ಅವಳು ವ್ಯಾಪಾರ ವೃದ್ಧಿಯಾದಂತೆ ಕುಂಬಾರಗೇರಿಯವರನ್ನು ಕರೆಸಿ ವಿವರಣೆ ಕೊಟ್ಟು ಭಟ್ಟಿ ಇಳಿಸಲೆಂದೇ ವಿಶೇಷವಾದ ಮಣ್ಣಿನ ಪಾತ್ರೆಗಳನ್ನು ಮಾಡಿಸಿಕೊಂಡಿದ್ದಳು.

ಒಲೆಯ ಮೇಲೆ ಮೊದಲಿಗೆ ಒಂದು ದೊಡ್ಡ ಪಾತ್ರೆಗೆ ಕೊಳೆತು ಹದವಾಗಿ ಮಾಗಿದ್ದ ಕರಗಲನ್ನು ಕೊಡದಲ್ಲಿ ತಂದು ಸುರುವಿ ಒಲೆಯ ಮೇಲಿಟ್ಟಳು. ಅದರ ಮೇಲಕ್ಕೆ ತಳದಲ್ಲಿ ಕಿಟಕಿಯಂತೆ ಉದ್ದುದ್ದ ರಂಧ್ರಗಳಿರುವ ಒಂದು ಮಡಕೆ. ಅದರ ಮಧ್ಯದಲ್ಲಿ ಆವಿ ಮೇಲೆ ಹೋಗಲು ಅವಕಾಶವಿರುವ ಅಟ್ಟ. ಆ ಅಟ್ಟದ ಮೇಲೊಂದು ಅಗಲ ಬಾಯಿನ ಪಾತ್ರೆ. ಆ ಪಾತ್ರೆಯ ತಳಭಾಗದಿಂದ ಹೊರಟ ಒಂದು ಕೊಳವೆ. ಮಧ್ಯದ ಪಾತ್ರೆಯಲ್ಲಿ ಒಂದೆಡೆ ಇರುವ ರಂಧ್ರದಿಂದ ಹೊರಕ್ಕೆ ಹೊರಟಿದೆ. ಆ ಮಧ್ಯದ ಪಾತ್ರೆಯ ಮೇಲೆ ಇನ್ನೊಂದು ಅಗಲ ಬಾಯಿನ ಪಾತ್ರೆ. ತುಂಬಾ ತಣ್ಣೀರು ತುಂಬಿದ ನಂತರ ಪ್ರತಿ ಮಡಕೆ ಕೂಡುವ ಸ್ಥಳದಲ್ಲಿ ಆವಿ ಕಡೆಯದಂತೆ ಬಟ್ಟೆಯಿಂದ ಬಂದೋಬಸ್ತ್ ಮಾಡಲಾಯಿತು. ಮಧ್ಯದ ಮಡಕೆಯಿಂದ ಹೊರಗಿಣುಕಿದ ಕೊಳವೆಗೆ ಒಂದು ಮಾರುದ್ದದ ವಾಟೆಯ ಕೊಳವೆ ಜೋಡಿಸಲಾಯಿತು. ಆ ಮುಖಾಂತರದಿಂದ ಬಂದ ದ್ರವ ಸಂಗ್ರಹಣೆಗೆ ಒಂದು ಪಾತ್ರೆ ಇಡಲಾಯಿತು. ಕೆಳಗಿನ ಮಡಕೆಯಲ್ಲಿದ್ದ ಕರಗಲು ಕೊತ ಕೊತ ಕುದಿಯುವುದು ಕೇಳಿಬರತೊಡಗಿತು.

ಮೇಲಿನ ಹೊರಮಡಕೆಯಲ್ಲಿ ತುಂಬಿದ್ದ ನೀರಿಗೆ ಕಾಳಮ್ಮ ಕೈ ಅದ್ದಿ ನೋಡಿದಳು. ಕೊಂಚ ಉಗುರು ಬೆಚ್ಚಗಾಗಿದೆ ಎನಿಸಿದ್ದೇ ಆ ನೀರನ್ನು ಮೊಗೆ ಮೊಗೆದು ಬಚ್ಚಲಿಗೆ ಚೆಲ್ಲತೊಡಗಿದಳು. ಖಾಲಿಯಾದ ಪಾತ್ರೆಗೆ ಕೊಡದಲ್ಲಿ ಸಿದ್ಧವಾಗಿದ್ದ ತಣ್ಣೀರು ಸುರಿಯತೊಡಗಿದಳು. ಆ ನೀರು ಮತ್ತೆ ಬೆಚ್ಚಗಾದೊಡನೆ ಅದೇ ಕ್ರಿಯೆ ಪುನರಾವರ್ತನೆ. ಕೆಳಗಿನ ಪಾತ್ರೆಯ ಕರಗಲು ಕೊತಕೊತ ಕುದಿಯತೊಡಗಿದಂತೆ ಅದರಿಂದ ಬಿಡುಗಡೆಯಾದ ರಸ ಆವಿಯ ರೂಪದಲ್ಲಿ ಮೇಲ್ಮುಖವಾಗಿ ಮಧ್ಯದ ಪಾತ್ರೆ ದಾಟಿ ತಣ್ಣೀರು ತುಂಬಿದ್ದ ಮೇಲಿನ ಪಾತ್ರೆಯ ತಳಕ್ಕೆ ತಾಗಿದೊಡನೆ ತಣ್ಣೀರಿನ ಶೈತ್ಯಕ್ಕೆ ದ್ರವರೂಪ ತಾಳಿ ಮಧ್ಯದಲ್ಲಿಟ್ಟ ಅಗಲ ಬಾಯಿಯ ಪಾತ್ರೆಗೆ ಬಿದ್ದು, ಸಾರಾಯಿ ರೂಪ ತಾಳಿ ಕೊಳವೆಯ ಮುಖೇನ ಹೊರಬಂದು ಕೊಳವೆಯ ದೂರದ ತುದಿಯಲ್ಲಿಟ್ಟಿದ್ದ ಪಾತ್ರೆಯಲ್ಲಿ ಶೇಖರವಾಗತೊಡಗಿತ್ತು. ಆಕರ್ಷಕವಾದ ಗಡಸು ವಾಸನೆ ಮನೆಯೆಲ್ಲಾ ಹರಡಿ ಈ ವಿಸ್ಮಯದ ಕ್ರಿಯೆಯನ್ನು ನೋಡುತ್ತಾ ಕುಳಿತಿದ್ದ ಚಿನ್ನಪ್ಪನ ಮೂಗರಳಿಸುವಂತೆ ಮಾಡಿತ್ತು. ಅಷ್ಟರಲ್ಲಿ ಹೊರಜಗುಲಿಯಲ್ಲಿ ಕಾಳಮ್ಮನ ಮಗ ‘ಅಮ್ಮಾ ಹೋಮ್‍ವರ್ಕು, ಮಿಸ್ ಹೊಡೀತಾರೆ’ ಎಂದು ರಂಪ ಮಾಡತೊಡಗಿತು.

‘ಬಾವ, ಒಂಚೂರು ನೋಡಿಕೊಳ್ತಾ ಇರಿ. ಇನ್ನೇನಿಲ್ಲ ಈ ನೀರು ಸ್ವಲ್ಪ ಬಿಸಿಯಾದಂಗೆ ಕಂಡ್ರೆ ತೆಗೆದು ಚೆಲ್ಲಿ ತಣ್ಣೀರು ಹುಯ್ಯಿರಿ…ಆ ಹುಡುಗನದೊಂದು ರಂಪ ದಿನಾ’ ಎಂದು ನೀರಿನ ಮಗ್ಗನ್ನು ಚಿನ್ನಪ್ಪನ ಕೈಗೆ ಹಿಡಿಸಿ ಹೊರಜಗುಲಿಗೆ ದಾವಿಸಿ ಬಂದಳು.
ಹುಡುಗ ‘ಅಮ್ಮಾ ಹೋಂವರ್ಕು’ ಎಂದು ಪುಸ್ತಕ ಮುಂದೆ ಹಿಡಿಯಿತು. ಕಾಳಮ್ಮ ಜನ್ಮದಲ್ಲಿ ಇಂಗ್ಲಿಷ್ ಅಕ್ಷರ ಕಂಡಿದ್ದರೆ ತಾನೇ! ಮಗನಿಗೆ ಹೋಂವರ್ಕ್ ಮಾಡಿಸಿಕೊಡಲು!
ಆ ಹುಡುಗನನ್ನೆತ್ತಿ ತನ್ನ ಬಲ ಸೊಂಟದ ಮೇಲೆ ದೊಪ್ಪನೆ ಕುಕ್ಕಿಕೊಂಡಳು. ಎಡಗೈಲಿ ಪುಸ್ತಕದ ಬ್ಯಾಗ್ ಹಿಡಿದು ಓಟದ ನಡಿಗೆಯಲ್ಲಿ ಮಾಮೂಲಿ ಹೋಗುತ್ತಿದ್ದ ಕರಿಯಣ್ಣನ ಮನೆಯ ದಾರಿ ಹಿಡಿದಳು. ಕರಿಯಣ್ಣನ ಹೈಸ್ಕೂಲ್ ಓದುವ ಹುಡುಗ ಆಲ್‍ಜೀಬ್ರಾದ ಪ್ರಶ್ನೆ ಬಿಡಿಸಲು ದಾರಿಕಾಣದೆ ತಿಣುಕಾಡುತ್ತಿದ್ದ. ಅವನ ಮುಂದೆ ಹುಡುಗನನ್ನು ಕುಕ್ಕರಿಸಿ ಪಕ್ಕಕ್ಕೆ ಬ್ಯಾಗ್ ಇಟ್ಟು ಹಿಂದಿರುಗಿದಳು. ಅಷ್ಟರಲ್ಲಿ ಕಾಳಮ್ಮನ ಮನೆಗೆ ಬಂದ ಸುಬ್ಬಪ್ಪ ಒಪ್ಪಾರಿನಲ್ಲಿ ಒಲೆಯ ಮುಂದೆ ನೀರಿನ ಮಗ್ ಹಿಡಿದು ನಿಂತಿದ್ದ ಚಿನ್ನಪ್ಪನಿಗೆ ‘ಭಾವ ಇದ್ಯಾವಾಗಿನಿಂದ ಈ ಕೆಲ್ಸ’ ಎಂದು ಕೆಣಕಿದ.

ಹಾಡ್ಲಹಳ್ಳಿ ನಾಗರಾಜ್

ಮುಂದುವರೆಯುವುದು…

ಓದುಗರಿಗೆ ವಿಶೇಷ ಸೂಚನೆ:
ನಿಲುವಂಗಿಯ ಕನಸು… ಈಗ ಪಂಜು ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗುತ್ತಿದೆ. ಖ್ಯಾತ ಸಾಹಿತಿಗಳಾದ ಹಾಡ್ಲಹಳ್ಳಿ ನಾಗರಾಜ್ ಅವರ ಈ ಕಾದಂಬರಿ ಬಹಳಷ್ಟು ಕಾರಣಕ್ಕಾಗಿ ಮುಖ್ಯವಾದುದು. ಇದನ್ನು ವಾರವಾರ ಓದುತ್ತಾ ಹೋದಂತೆ ನಿಮಗೆ ತಿಳಿಯುತ್ತಾ ಹೋಗುತ್ತದೆ. ಇಲ್ಲಿ ಒಂದು ಸಂಗತಿಯಿದೆ. ಕಾದಂಬರಿ ಮುಗಿದ ಮೇಲೆ ಕಾದಂಬರಿಯ ಬಗ್ಗೆ ಅಭಿಪ್ರಾಯಗಳನ್ನು ಓದುಗರಿಂದ ಕೇಳಲಾಗುವುದು. ಓದುಗರಿಂದ ಬಂದ ಅತ್ಯುತ್ತಮ ಅಭಿಪ್ರಾಯಗಳಿಗೆ ಪುಸ್ತಕ ರೂಪದ ಬಹುಮಾನಗಳನ್ನು ನೀಡಲಾಗುವುದು. ಇನ್ ಯಾಕೆ ತಡ… ಒಂದೊಳ್ಳೆ ಕೃತಿ ಓದಿದ ಅನುಭವದ ಜತೆ ಒಂದೊಳ್ಳೆ ಅಭಿಪ್ರಾಯ, ಚರ್ಚೆ… ಜೊತೆಗೆ ಬಹಳಷ್ಟು ಪುಸ್ತಕಗಳ ಬಹುಮಾನ. ಅಭಿಪ್ರಾಯಗಳ ಜತೆ ನಡೆಯೋಣ ಬನ್ನಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x