ಕಾಲಕೋಶ ಎನ್ನುವ ಕಳೆದುಹೋದ ಕಾಲದ ಕನ್ನಡಿ: ಸತೀಶ್ ಶೆಟ್ಟಿ ವಕ್ವಾಡಿ

ಶಶಿಧರ ಹಾಲಾಡಿಯವರ ಕಾಲಕೋಶ ಕೈಸೇರುವ ಸಮಯದಲ್ಲಿ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾದ ಗ್ರಹಣವೆನ್ನುವ ವೆಬ್ ಸೀರೀಸ್ ಅನ್ನು ನೋಡಿ ಒಂದೆರಡು ದಿನವಾಗಿತ್ತಸ್ಟೆ. ಈ ಗ್ರಹಣ ಬಂದು 1984ರ ಇಂದಿರಾ ಗಾಂಧಿ ಹತ್ಯೆಯ ನಂತರ ನೆಡೆದ ಸಿಖ್ಖರ ಮೇಲಿನ ದಾಳಿಯ ಕುರಿತಾದ ವಸ್ತುವನ್ನು ಒಳಗೊಂಡ ವೆಬ್ ಸೀರೀಸ್ . ಕಾಲಕೋಶದಲ್ಲೂ ಸಹ ಅದೇ ವಸ್ತು ಇದೆ ಅನ್ನೋ ಅಂಶ ಪುಸ್ತಕದ ಬಗ್ಗೆ ಬಂದ ವಿಮರ್ಶೆಯಲ್ಲಿ ಓದಿದ್ದರಿಂದ ಪುಸ್ತಕವನ್ನು ಓದಲು ಆರಂಭಿಸಿದಾಗ ಅದೇ ವಿಷಯ ಪುನಃ ಇಲ್ಲಿ ಮತ್ತೆ ಮರುಕಳಿಸಿ ಓದಿನಲ್ಲಿ ಏಕತಾನತೆ ಬರಬಹುದು ಅನ್ನೋ ಒಂದು ಸಣ್ಣ ಅಳಕು ನನ್ನಲ್ಲಿ ಇತ್ತು. ಆದರೆ ಕಾದಂಬರಿಯ ಒಂದು ಅಧ್ಯಯ ಓದುವುದರಸ್ಟರಲ್ಲಿ ಒಳಗೆ ಆ ಅಳಕು ಅದೆಲ್ಲಿ ಮಾಯವಾಗಿತ್ತೋ ಗೊತ್ತಿಲ್ಲ, ಅಷ್ಟೊಂದು ವಿಭಿನ್ನ ನಿರೂಪಣೆ ಅಲ್ಲಿತ್ತು.

ಕಾದಂಬರಿಯಂಥ ಸುದೀರ್ಘ ಓದಿನ ಧ್ಯಾನಸ್ಥ ಸ್ಥಿತಿಗೆ ತಲುಪುವ ದಾವಂತದಲ್ಲಿ ಒಬ್ಬ ಓದುಗ ನಿರೀಕ್ಷಿಸುವುದು ಸುಲಲಿತವಾದಂತ ಸರಳ ಓದು . ಅದರಲ್ಲೂ ನನ್ನಂತ ಕಾರ್ಪೊರೇಟ್ ಮನಸ್ಥಿಯ ಓದುಗರಿಗೆ ಇದು ಅನಿವಾರ್ಯ ಸಹ. ಯಾಕೆಂದರೆ ಓದಿನ ನಡುವೆ ಈ ಸುಲಲಿತ ಸರಳ ಓದಿಗೆ ಕಾದಂಬರಿಯ ನಿರೂಪಣೆಯಲ್ಲಿ ಸಣ್ಣ ಹಂಪ್ಸ್ ಬಂದ್ರು ಆ ಓದು ಅಲ್ಲಿಗೆ ನಿಲ್ಲುವ ಸಾಧ್ಯತೆ ಜೊತೆಗೆ ಅಪಾಯವಿದೆ. ಈ ಹಿನ್ನಲೆಯಲ್ಲೇ ಎಷ್ಟೋ ಜನ ಪುಸ್ತಕದ ಓದನ್ನು ಅರ್ಧಕ್ಕೆ ನಿಲ್ಲಿಸಿದ ನಿರ್ದಶನಗಳು ಸಾಕಷ್ಟಿದೆ . ಆದ್ದರಿಂದ ಪುಸ್ತಕ ಅದರಲ್ಲೂ ಕಾದಂಬರಿ ಒಬ್ಬ ಓದುಗನನ್ನು ಕಟ್ಟಿಹಾಕಲು ನೇರವಾದ ಸರಳವಾದ ನಿರೂಪಣೆ ಅಗತ್ಯ ಅನ್ನೋದು ಒಬ್ಬ ಬರಹಗಾರನಾಗಿ ನನ್ನ ಅಭಿಪ್ರಾಯ . ಕಾಲಕೋಶ ನನ್ನ ಈ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ.

1947 ರಿಂದ 1984ರ ತನಕ 37 ವರ್ಷಗಳ ನಡುವೆ ಈ ದೇಶದಲ್ಲಿ ನೆಡೆದ ಒಂದಷ್ಟು ರಾಷ್ಟ್ರೀಯ ತಲ್ಲಣಗಳನ್ನು ಮತ್ತು ಅದರ ಹಿಂದಿನ ಕ್ರೌರ್ಯದ ರೌದ್ರತೆಯನ್ನು ಒಂದು ಎಲ್ಲೆಯ ಒಳಗೆ ಸೂಕ್ಷ್ಮವಾಗಿ ನಿರೂಪಿಸಿದೆ ಕಾಲಕೋಶ. ದೇಶ ವಿಭಜನೆಯ ನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನೆಡೆದ ಸಾಮೂಹಿಕ ವಲಸೆ, ಮಹಾತ್ಮ ಗಾಂಧಿಯ ಹತ್ಯೆಯ ನಂತರ ಮಹಾರಾಷ್ಟ್ರದಲ್ಲಿ ಗೋಡ್ಸೆ ಸಮುದಾಯದವರ ಮೇಲೆ ನೆಡೆದ ಹಲ್ಲೆ ಮತ್ತು ಇಂದಿರಾ ಹತ್ಯೆಯ ನಂತರ ನೆಡೆದ ಸಿಕ್ಖ್ ಗಲಭೆಯಲ್ಲಿ ನೊಂದವರ ಅಂತರಂಗದ ಬೇಗುದಿಗೆ ಈ ಕಾದಂಬರಿ ಧ್ವನಿಯಾಗಿದೆ . ಜೊತೆಗೆ ಚಾಮರಾಜನಗರದ ಕಾಡುಗಳ್ಳರ ಅಟ್ಟಹಾಸ ಹೇಗೆ ಒಂದು ಊರ ಜಮೀನುದಾರ ಗುಳೆಗೆ ಕಾರಣವಾಯ್ತು ಅನ್ನೋದನ್ನು ಸಹ ಈ ಕಾದಂಬರಿ ಚಿತ್ರಿಸಿ ಕೊಟ್ಟಿದ್ದೆ. ಒಟ್ಟಾರೆ ಕಾದಂಬರಿಯುದ್ದಕ್ಕೂ ಅನ್ಯಾಯ ಮತ್ತು ತುಳಿತಕ್ಕೊಳಗಾಗಿ ತಮ್ಮ ಅಸ್ತಿತ್ವವನ್ನೇ ಬದಲಾಯಿಸಿಕೊಂಡ ನತದೃಷ್ಟರ ಬದುಕಿನ ಚಿತ್ರಣ ನಮ್ಮ ವ್ಯವಸ್ಥೆಯನ್ನು ಚುಚ್ಚುವಂತೆ ನಿರೂಪಿಸಲಾಗಿದೆ .

ಈ ಕಾದಂಬರಿಯ ನಾಯಕ (ನನ್ನ ದೃಷ್ಟಿಯಲ್ಲಿ ನಿರೂಪಕ) ಮೇಲೆ ವಿವರಿಸಿದ ಮೂರೂ ಕಾಲಘಟ್ಟದ ರೌದ್ರತೆಗೆ ಒಳಗಾದವರ ಜೊತೆಗಿನ ಒಡನಾಟದ ಸಮಯದಲ್ಲಿ ಅವರಿಂದ ಕೇಳಿಸಿಕೊಂಡ ಅವರ ಕತೆಗಳನ್ನು ಒಂದಕ್ಕೊಂದು ಕೊಂಡಿಯಾಗಿಸಿ ಜೊತೆಗೆ ತನ್ನ ನೋವಿನ ಕತೆಯನ್ನೂ ಸೇರಿಸಿ ಹಣೆದ ನಿರೂಪಣೆ ಇಡೀ ಕಾದಂಬರಿಯನ್ನು ಓದುಗ ಒಂದೇ ಉಸಿರಿಗೆ ಓದುವವಂತೇ ಮಾಡಿದೆ. ಕಾದಂಬರಿಯ ಉದ್ದಕ್ಕೂ ಈ ನಾಲ್ಕು ಆಯಾಮದ ಕ್ರೌರ್ಯದ ರಿಲೇಯ ಓಟ ಓದುಗನನ್ನು ಕಟ್ಟಿ ಹಾಕುವುದರಲ್ಲಿ ಯಶ ಕಂಡಿದೆ .

ಬ್ಯಾಂಕ್ ಕೆಲಸಕ್ಕೆ ಸೇರಿಕೊಂಡ ಕೆಲವೇ ತಿಂಗಳಲ್ಲಿ ಅಗತ್ಯಕ್ಕಿಂದ ಜಾಸ್ತಿ ರಜೆ ಪಡೆದುದಕ್ಕಾಗಿ ಪನಿಷಮೆಂಟ್ ಟ್ರಾನ್ಸ್ಫರ್ ಆಗಿ ಬೆಂಗಳೂರಿನಿಂದ ದೆಹಲಿಗೆ ಬರುವ ನಾಯಕ, ಅಮರ್ ಸಿಂಗ್ ಅನ್ನೋ ಸಿಖ್ಖರ ಮನೆಯಲ್ಲಿ ಬಾಡಿಗೆಗೆ ಇರುತ್ತಾನೆ. ಈ ನಾಯಕನ ದೊಡ್ಡಪ್ಪನನ್ನು ಪೊಲೀಸ್ ಇನ್ಫಾರ್ಮರ್ ಅಂದುಕೊಂಡು ಊರ ಕಾಡಲ್ಲಿದ್ದ ದೊಡ್ಡ ಕಾಡುಗಳ್ಳನೊಬ್ಬ (ದಪ್ಪ ಮೀಸೆಯ ಅನ್ನೋ ಪದ ನಮಗೆ 80 ಮತ್ತು 90 ರ ದಶಕದ ಆ ದೊಡ್ಡ ಕಾಡುಗಳ್ಳನ ಹೆಸರು ನೆನಪಿಸುತ್ತದೆ ) ಕೊಲೆ ಮಾಡುತ್ತಾನೆ. ಈ ಕೊಲೆಯ ನಂತರ ಮನೆಯರು ಊರು ಬಿಡಲು ನಿರ್ಧರಿಸಿದ್ದರಿಸಿ, ಅದೇ ಕಾಡುಗಳ್ಳನ ಕಡೆಯವರಿಗೆ ಕಡಿಮೆ ದುಡ್ಡಿಗೆ ತಮ್ಮೆಲ್ಲ ಅಸ್ತಿ ಮಾರಿ ಊರು ಬಿಡಬೇಕಾದ ಪ್ರಸಂಗ ಬರುತ್ತೆ. ಅದರ ಪರಿಣಾಮ ಸುಧೀರ್ಘ ರಜೆಯಾದ್ದರಿಂದ ದೆಹಲಿಗೆ ವರ್ಗವಾಗುವ ಅನಿವಾರ್ಯತೆ ನಾಯಕನಿಗೆ. ಈ ಕಾಡುಗಳ್ಳನಿಂದ ಆ ಸುತ್ತಮುತ್ತಲ ಊರ ಜನ ಕ್ರಮೇಣವಾಗಿ ತಮ್ಮ ಜಮೀನುಗಳನ್ನು ಮಾರಿ ಬೆಂಗಳೂರು ಮತ್ತು ಮೈಸೂರಿಗೆ ವಲಸೆ ಬರಬೇಕಾದ ಸ್ಥಿತಿ ಬರುತ್ತೆ .

ಇತ್ತ ಅಮರ್ ಸಿಂಗ್ ದೇಶವಿಭಜನೆಯ ಸಮಯ ಲಾಹೋರಿಂದ ದೆಹಲಿಗೆ ವಲಸೆ ಬಂದ ಲಕ್ಷಾಂತರ ವಲಸಿಗ ಪ್ರತಿನಿಧಿಯಾಗಿ ಆ ಮಹಾವಲಸೆಯ ಭಯಾನಕತೆಯನ್ನು ಬಿಚ್ಸಿಡುತ್ತಾನೆ. ಕೋಟ್ಯಾಧೀಶ್ವರನಾಗಿದ್ದ ಆತ ತನ್ನೆಲ್ಲ ಸಂಪತ್ತು ಮತ್ತು ತನ್ನವರನ್ನು ಕಳೆದುಕೊಂಡು ದೆಹಲಿಗೆ ಹೇಗೆ ಬಿಕಾರಿಯಂತೆ ಬರಬೇಕಾಯಿತು ಮತ್ತು ಬಂದ ನಂತರ ಈತನ ಸಹಿತ ಸಿಖ್ ವಲಸಿಗರು ಹೇಗೆ ಬದುಕನ್ನು ಕಟ್ಟಿಕೊಳ್ಳಬೇಕಾಯಿತು ಮತ್ತು ಪುನಸ್ಚೇತನಗೊಂಡ ಆ ಬದುಕು ಒಂದು ಹಂತಕ್ಕೆ ಬಂದಾಗ ಮತ್ತೆ ಇಂದಿರಾ ಹತ್ಯೆಯ ನಂತರ ಹೇಗೆ ನುಚ್ಚುನೂರಾಯಿತು ಅನ್ನೋ ಚಿತ್ರಣ ಅಮರ್ ಸಿಂಗ್ ಮೂಲಕ ಕಾದಂಬರಿಯಲ್ಲಿ ಅದ್ಭುತವಾಗಿ ಕಟ್ಟಿ ಕೊಡಲಾಗಿದೆ .

ಈ ಕಥಾನಾಯಕನ ಬ್ಯಾಂಕಿನ ಸಹೋದ್ಯೋಗಿ ಆಪ್ಟೆ ಮನೆಯವರ ಜೊತಿಗಿನ ಒಡನಾಟ ಕಾದಂಬರಿ ಇತಿಹಾಸ ಸೇರಿದ ಇನ್ನೊಂದು ಮಗ್ಗುಲ ವ್ಯಥೆಯನ್ನು ಚಿತ್ರಿಸುತ್ತದೆ . ಮಹಾತ್ಮ ಗಾಂಧಿಯನ್ನು ಗೋಡ್ಸೆ ಕೊಂಡಾಗ ಗೋಡ್ಸೆ ಉಪನಾಮದ ಸಮುದಾಯದವರು ಎದುರಿಸಿದ ಸಂಕಟ , ಜೊತೆಗೆ ರತ್ನಗಿರಿಯನ್ನೇ ಬಿಟ್ಟು ದೆಹಲಿಗೆ ವಲಸೆ ಬಂದು ಹೆಸರು ಬದಲಾಯಿಸಿಕೊಂಡು ಬದುಕು ಅರಳಿಸಿ ಕೊಂಡ ಪರಿಯ ನಿರೂಪಣೆ ಸೊಗಸ್ಸಾಗಿ ಮೂಡಿದೆ .

ಒಟ್ಟಾರೆ 1984ನ್ನು ವರ್ತಮಾನವಾಗಿಸಿಕೊಂಡಿರುವ ಇಡೀ ಕಾದಂಬರಿ ಒಂದು ಸಂಸಾರ ಅಥವ ಒಂದು ಸಮುದಾಯ ತನ್ನದಲ್ಲದ ತಪ್ಪಿಗೆ ತನ್ನ ನೆಲೆಯನ್ನು ಕಳೆದುಕೊಂಡು ಇನ್ನೆಲ್ಲಿಗೋ ವಲಸೆ ಹೋಗಿ ಬದುಕು ಕಟ್ಟಿಕೊಳ್ಳುವ ನೋವಿನ ಕತೆಯನ್ನು ಲೇಖಕರು ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ . ಈ ವಲಸೆಯ ಸಮಯದಲ್ಲಿ ನೆಡೆಯುವ ಸಾವು ನೋವು , ತನ್ನ ಸಂಪತ್ತು ಮತ್ತು ತನ್ನವರನ್ನು ಕಳೆದುಕೊಳ್ಳುವ ನರಕಸದೃಶ ಸನ್ನಿವೇಶಗಳು ಕಾದಂಬರಿಯಲ್ಲಿ ಓದುಗನನ್ನು ತುಂಬಾ ಬಾವುಕನಾಗಿಸುವುದರಲ್ಲಿ ಸಂಶಯವಿಲ್ಲ. ಕಾದಂಬರಿಯ ಕೊನೆಯಲ್ಲಿ ಜ್ಯೋತಿಷಿಯ ಗುಜರಾತ ಗಲಭೆಯ ಕುರಿತ ಭವಿಷ್ಯದ ನುಡಿಗಳು ಕಾಲಕೋಶದಲ್ಲಿ ಜನಸಾಮನ್ಯರ ಆಕ್ರಂದನ ಎಂದಿಗೂ ನಿಲ್ಲೋಲ್ಲ ಅನ್ನೋದರ ಸೂಕ್ಷ್ಮ ಎಳೆಯೊಂದನ್ನು ಲೇಖಕರು ಬಿಚ್ಸಿಟ್ಟಿದ್ದರೆ .
ತನ್ನ ಮೊದಲ ಕಾದಂಬರಿಯಲ್ಲಿ ಲೇಖಕ ಪತ್ರಕರ್ತ ರಾಗಿರುವ ಶಶಿಧರ ಹಾಲಾಡಿ ಗೆದ್ದಿದ್ದಾರೆ .

ಸತೀಶ್ ಶೆಟ್ಟಿ ವಕ್ವಾಡಿ …


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x