ಪಂಜು-ವಿಶೇಷ

ಗಟ್ಟಿಗಿತ್ತಿ: ಡಾ. ದೋ. ನಾ. ಲೋಕೇಶ್

2016 ಅಥವಾ 2017 ನೇ ಇಸವಿಯ ಮಳೆಗಾಲದ ಒಂದು ದಿನ, ನಮ್ಮ ಇಲಾಖೆಯ ಅರೆತಾಂತ್ರಿಕ ಸಿಬ್ಬಂದ್ಧಿಯೊಬ್ಬರು ಎಮ್ಮೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮಗೆ ತೋರಿಸಲು ಹೇಳಿದ್ದಾರೆ ಬನ್ನಿ ಸರ್ ಎಂದು ಅವರ ವಿಳಾಸ ಹೆಸರು ಎಲ್ಲ ಹೇಳಿದರು. ಅದು ನಾನು ಕೆಲಸ ಮಾಡುವ ಸ್ಥಳದಿಂದ ಬೇರೊಂದು ದಿಕ್ಕಿಗಿದ್ದು ನಮ್ಮ ಮನೆಯಿಂದ 6-7 ಕಿ. ಮೀ. ದೂರವಿದ್ದದ್ದರಿಂದ, ನಾನು ಸಂಜೆ ಕೆಲಸ ಮುಗಿಸಿ ಬಂದು ನಿಮ್ಮ ಎಮ್ಮೆಯನ್ನು ನೋಡುತ್ತೇನೆ ಎಂದು ಹೇಳಿದೆ.

ಅದರಂತೆ ಸಂಜೆ ಸುಮಾರು 5.30 ಅಥವಾ 5.45 ಗಂಟೆಗೆ ಅವರ ಮನೆಗೆ ಹೋಗಿ ಎಮ್ಮೆಯ ಚಿಕಿತ್ಸೆ ಮುಗಿಸಿದೆ. ಇನ್ನೇನು ಅಲ್ಲಿಂದ ಹೊರಡಬೇಕೆನ್ನುವಾಗ ಮಳೆ ಆರಂಭವಾಯಿತು. ನಮ್ಮ ಬಯಲು ಸೀಮೆಯಲ್ಲಿ ಮಳೆಗಾಲದಲ್ಲೂ ಮಳೆ ಅಪರೂಪವಾದದ್ದರಿಂದ ಹಾಗೂ ಬಂದರೂ ಬೇಗ ನಿಲ್ಲುವುದರಿಂದ, ನಾನು ಯಾವುದೇ ರಕ್ಷಣಾ ಸಾಮಗ್ರಿಗಳನ್ನು ಇಟ್ಟುಕೊಂಡಿರುವುದಿಲ್ಲ. ಆದದ್ದರಿಂದ ಮಳೆ ನಿಲ್ಲುವವರೆಗೂ ಅವರ ಮನೆಯಲ್ಲೇ ಉಳಿಯುವುದು ಅನಿವಾರ್ಯವಾಯ್ತು.

ಚಳಿಗೆ ಬಿಸಿ ಕಾಫಿಯ ಸೇವಾರ್ಥ ನಡೆಯಿತು, ಮನೆಯಲ್ಲಿ ಇದ್ದ ಸುಮಾರು 55- 60 ವರ್ಷಗಳ ಅಜ್ಜಿಯೊಂದು ನನ್ನನ್ನು ಮಾತಿಗೆಳೆಯುತ್ತಾ ನನ್ನ ಊರಾವುದು, ಯಾರ ಮಗ ಅಂತೆಲ್ಲ ವಿಚಾರಿಸಿ ಅಲ್ಲಿ ನಮ್ಮ ನಂಟರಿದ್ದಾರೆ, ಪಕ್ಕದಲ್ಲೇ ನಮ್ಮ ಮಗಳನ್ನು ಕೊಟ್ಟಿದ್ದೀವಿ ಅಂತೆಲ್ಲ ಮಾತಿಗೆಳೆಯಿತು. ಎಲ್ಲಾದರೂ ಹೊಸ ಊರುಗಳಿಗೆ ಹೋದಾಗ ವಯಸ್ಸಾದ ಅಜ್ಜಿ, ತಾತಂದಿರ ಜೊತೆ ಮಾತನಾಡುವುದು ಎಂದರೆ ನನಗೆ ಅಚ್ಚುಮೆಚ್ಚು. ಅದರಿಂದ ಘತಕಾಲದ ಜೀವನ ಪದ್ದತಿ, ಆಹಾರ ಪದ್ಧತಿ, ಕೃಷಿ ಪದ್ಧತಿಗಳ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಕೆದಕಿ ತೆಗೆಯುವುದು ನನ್ನ ಹವ್ಯಾಸ.

ಹೊರಗೆ ಸುರಿಯುವ ಮಳೆಯಂತೆ ನಮ್ಮ ಮಾತಿನ ಸರಣಿಯೂ ಮುಂದುವರಿದಿತ್ತು. ಆಗ ಅಜ್ಜಿ, ‘ನೋಡಪ್ಪ ನಮ್ಮ ಕಾಲದಾಗೆ ಒಂದು ಒಳ್ಳೆ ಮನೇನೂ ಕಟ್ಟಕ್ಕೆ ಆಗಲಿಲ್ಲ. ಬರೀ ಮಕ್ಕಳನ್ನು ಸಾಕೋದು ಮದುವೆ ಮಾಡೋದು ಇಷ್ಟರಲ್ಲೇ ಮುಗಿದೋಯ್ತು ಜೀವನ’ ಅಂತು.

‘ಎಷ್ಟು ಮಕ್ಕಳಜ್ಜಿ ನಿನಗೆ’ ಎಂದೆ

ಮೂರು ಗಂಡು, ಮೂರು ಹೆಣ್ಣು.

ಅಷ್ಟೊಂದು ಯಾಕ್ ಮಾಡ್ಕೊಳ್ಳೊಕೆ ಹೋಗಿದ್ದೆ ಮಕ್ಕಳಾಗದಂಗೆ ಆಪರೇಷನ್ ಮಾಡಿಸ್ಕೊಳ್ಳೋದಲ್ವಾ?

“ಅಯ್ಯೋ ಇಲ್ಲಿದ್ದಾನಲ್ಲ ಈ ನನ್ಮಗ ಹುಟ್ಟೋಕೆ ಮುಂಚೆನೇ ಆಪರೇಷನ್ ಮಾಡಿಸ್ಕೊಳ್ಳೋಕೆ ಆಸ್ಪತ್ರೆಗೆ ಹೋಗಿದ್ದೆ. ನನ್ನ ಗಂಡನಿಗೆ ಗೊತ್ತಾಗಿ ಆಸ್ಪತ್ರೆಯಿಂದ ಮನೆವರೆಗೂ ಹೊಡೆದುಕೊಂಡೇ ಬಂದ್ರು” ಎಂದರು ತನ್ನ ಕೊನೇ ಮಗನ ಕಡೆ ಕೈ ತೋರುತ್ತಾ.

ಯಾಕಂತೆ ಐದು ಮಕ್ಕಳು ಸಾಕಾಗಿರಲಿಲ್ಲವಂತಾ ನಿಮ್ಮ ಪತಿರಾಯನಿಗೆ?

ಅಯ್ಯೋ ಐವತ್ತಾದರೂ ಸಾಕಾಗ್ತಿರ್ಲಿಲ್ಲ ನನ್ನ ಗಂಡನಿಗೆ; ಹೆರೋರ ಕಷ್ಟ ಅವರಿಗೇನು ಗೊತ್ತಾಗುತ್ತೆ. ಇವನು ಹುಟ್ಟಿದಾಗ ‘ ಗೆದಾಕೋ ಮಗ ಹುಟ್ದ, ಅನ್ಯಾಯವಾಗಿ ಹಾಳ್ ಮಾದ್ಬುಡ್ತಿದ್ದಲ್ಲ’ ಅಂತ ನನ್ನೇ ಬೈದ್ರು. ಅವಾಗೆಲ್ಲ ಮಕ್ಳು ಸಾಕೊದು ಹೊರೆ ಅನ್ನುಸ್ಥಿರಲಿಲ್ಲ, ಜಾಸ್ತಿ ಮಕ್ಳು ಆದ್ರೆ ಒಕ್ಕಲುತನಕ್ಕೆ ಜಾಸ್ತಿ ಜನ ಸಿಕ್ಕುದ್ರು ಅಂಡ್ಕೊಳ್ಳೊವು. ಎಳೆ ಮಕ್ಳು ನೋಡ್ಕೊಳ್ಳೊಕೆ ಮನೇಲಿ ಮುದ್ಕಿ ಇರ್ತೀದ್ಲು. ಇಷ್ಟ ಇದ್ದಿದ್ರೆ ಇಸ್ಕೂಲ್ಗೆ ಹೋಗವು, ಅಲ್ಲೇನು ದುಡ್ಡು ಕಟ್ಟೋಹಂಗೇ ಇರ್ಲಿಲ್ಲ. ಇಲ್ಲಾ ಅಂದ್ರೆ ದನ-ಎಮ್ಮೆ ಕಾಯಕ್ಕೋ, ಹೊಲ ಊಳಕ್ಕೋ ಹೋಗೋರು. ಇವಾಗಲಂಗೆ ಹುಟ್ಟೋಕೆ ಲಕ್ಷ, ಓದುಸೋಕೆ ಲಕ್ಷ ಬೇಕಾಗಿರ್ಲಿಲ್ಲ. ಅಂದ್ರು ಅಜ್ಜಿ.

ಮತ್ತೆ ಐವತ್ತು ಕೇಳಿತಿದ್ದ ಗಂಡನಿಗೆ ಆರು ಮಕ್ಕಳಿಗೇ ನಿಲ್ಲಿಸೋಕೆ ಹೆಂಗೆ ಒಪ್ಪಿಸಿದ್ರಿ?

ಅಯ್ಯೋ ಅವ್ರುನ್ನ ಒಪ್ಸಕ್ಕೆ ಹೋಗಿದ್ರೆ! ಹೆರ್ತ, ಹೆರ್ತಾನೇ ಸತ್ತೋಗ್ತಿದ್ದೆ ನಾನು. ಒಂದಿನ ಮಾಗ್ಡಿ(ಮಾಗಡಿ) ಆಸ್ಪತ್ರೆಲಿ ಆಪ್ಲೆಶೇನ್ ಕ್ಯಾಂಪಿತ್ತು, ನಮ್ಮಪ್ಪನ ಮನೆಗೆ ಹೋಗ್ ಬತ್ತೀನಿ ಅಂತ ಸುಳ್ಳೇಳಿ ಮಾಗ್ಡಿ ಆಸ್ಪತ್ರೇಲಿ ಆಪ್ಲೆಶೇನ್ ಮಾಡಿಸ್ಕೊಂಡು ವಾಪಸ್ ಬಂದು, ನನ್ನ ಗಂಡ ಹೊಲ್ತಾವಿಂದ ಮನೆಗೆ ಬರೋವಷ್ಟರಲ್ಲಿ ತಲೆತುಂಬ ಸೆರಗ್ ಮುಚ್ಕೊಂಡು ನೋವೆಲ್ಲ ಸಹಿಸಿಕೊಂಡು ಎಮ್ಮೆಲಿ ಹಾಲ್ ಕರೀತಿದ್ದೆ; ಅಂದ್ರು ಅಜ್ಜಿ.

ನಾನು ಅವಕ್ಕಾದೆ. ಯಾರಿಗಾದ್ರೂ ಶಸ್ತ್ರ ಚಿಕಿತ್ಸೆಯಾದ್ರೆ ವಾರಗಟ್ಟಲೆ ಹಾಸಿಗೆ ಮೇಲೆ ವಿಶ್ರಾಂತಿ ನೀಡುವುದು ಸಾಮಾನ್ಯ. ಅದರಲ್ಲೂ ಹೊಟ್ಟೆ ಕೊಯ್ದು ಮಾಡುವ ಇಂತಾ ಕ್ಲಿಷ್ಟ ಶಸ್ತ್ರ ಚಿಕಿತ್ಸೆಯಲ್ಲಂತೂ ಕನಿಷ್ಠ ಒಂದು ವಾರ ವಿಶ್ರಾಂತಿ ಪಡೆಯಬೇಕು. ಆದರೆ ಈ ಮುದುಕಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ದಿನವೇ ಇಂತಾ ಪ್ರಯಾಸದ ಕೆಲಸಕ್ಕೆ ಕೈಹಾಕಿದ್ದು ಆಶ್ಚರ್ಯವನ್ನುಂಟುಮಾಡಿತ್ತು. ಎಂತಹಾ ದೊಡ್ಡ ಶಸ್ತ್ರ ಚಿಕಿತ್ಸೆ ಆದರೂ ರೋಗಿಯನ್ನು ಅವತ್ತೇ ಎಬ್ಬಿಸಿ ನಡೆಸುವುದು ನಮ್ಮ ಪಶುವೈದ್ಯಕೀಯ ವೃತ್ತಿಯಲ್ಲಿ ಮಾತ್ರ ಅಂದುಕೊಂದಿದ್ದ ನನಗೆ ಈ ಅಜ್ಜಿ ಅಪವಾದದಂತಿದ್ದಳು.

ಮಳೆ ನಿಂತಿತ್ತು. ನಿನ್ನಂತಾ ಗಟ್ಟಿಗಿತ್ತಿಯನ್ನು ನಾನೆಲ್ಲೂ ಕಾಣೆ ಎಂದು ಮನದಲ್ಲೇ ಅಜ್ಜಿಗೆ ವಂದಿಸಿ ಅಲ್ಲಿಂದ ಮನೆಯ ದಾರಿ ಹಿಡಿದೆ. ಮಳೆ ನಿಂತರೂ ಮರದ ಹನಿ ನಿಲ್ಲದು, ಎಂಬಂತೆ ಸುಮಾರು ವರ್ಷಗಳಾದರೂ ಅಜ್ಜಿಯ ಸಾಹಸ ನನ್ನ ಮನದಲ್ಲಿ ಹಸಿರಾಗಿದೆ.

-ಡಾ. ದೋ. ನಾ. ಲೋಕೇಶ್


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *