ನೀನೇ ನನ್ನವಳಾದ ಮೇಲೆ ನಿನ್ನ ಸಿಹಿ ಕಹಿಗಳು ಇನ್ನೂ ನನ್ನದೇ: ಆರ್‌ ಸುನಿಲ್‌, ತರೀಕೆರೆ

ಗೆಳತಿ ಈ ಪ್ರೀತಿಯೆಂದರೇನು. . !?
ಅಕ್ಷರಶಃ ಮೂಕ ನಾ. . ! ನಿನ್ನ ನೋಡಿ ಬಂದಾಗಿನಿಂದ ನಿಜಕ್ಕೂ ಮಾತುಗಳೆಲ್ಲಾ ಕಳೆದುಹೋಗಿದ್ದವು. ಅಕ್ಷರಗಳು ಮುನಿಸಿಕೊಂಡಿದ್ದವು. ನಿನ್ನೊಲವ ದಾಳಿಯಲ್ಲಿ ನನಗಾಗ ರಕ್ಷಣೆಯೇ ಇರಲಿಲ್ಲವಲ್ಲೇ. ಮದುವೆಯೆಂದರೆ ಮಾರುದೂರ ಓಡುತ್ತಿದ್ದವನಿಗೆ ಅಯಸ್ಕಾಂತದಂತೆ ಸೆಳೆದವಳು ನೀನು. ಆದರೆ ಒಂದಂತೂ ನಿಜ ನಾನು ನಿನಗೆ ಸಂಪೂರ್ಣ ಶರಣಾಗಿಹೋಗಿದ್ದೆ. ಎಲ್ಲೋ ಏನೋ ಕಳೆದುಕೊಂಡತಿದ್ದ ನನಗೆ ಸದಾ ನಿನ್ನ ನೆನಪುಗಳೇ ನನಗೆ ಹುರುಪು ತುಂಬುತ್ತಿದ್ದವು. ಹೊಸ ಕನಸುಗಳಿಗೆ ನಾಂದಿ ಹಾಡುತಿದ್ದ್ತವು. ಅದೇನೋ ಹೊಸ ಹುರುಪು ಹೊಸ ಮುದ. . !

“ಬಹುಷಃ ಈ ಪ್ರೇಮವೆಂದರೇ ಹೀಗೆಯೇನೋ
ಹಳೆಯ ಸೂರ್ಯ ಚಂದ್ರ ಭೂಮಿ ಆಕಾಶಗಳೆಲ್ಲಾ ಹೊಸದಾಗಿ ಕಾಣುತ್ತಿವೆ
ನವಚೈತನ್ಯ ಆನಂದಲಹರಿ ತುಂಬಿ ಹರಿಯುತ್ತಿದೆ. . !”

ಅದೆಂತಹ ಸೆಳೆತವೇ ಈ ಪ್ರೀತಿಯಲ್ಲಿ ಅನುಕ್ಷಣವೂ ನಿನ್ನ ನೋಡುವ ಬಯಕೆ. ಅದೆಂತಹ ನೋವೇ ಈ ವಿರಹ. ಇರಿದರೂ ನಿನ್ನ ಮಡಿಲಲ್ಲೇ ಸಾಯುವ ತವಕ.

“ಹೃದಯದಲ್ಲಿ ಏನೋ ನೋವು
ನಿಜಕ್ಕೂ ಮೊದಮೊದಲು ಇವೆಲ್ಲಾ ಬಲು ತಮಾಷೆಯೆನಿಸಿತು
ಬರಬರುತ್ತಾ ಹೆಚ್ಚಾಗತೊಡಗಿದಾಗಲೇ ತಿಳಿಯಿತು
ಅದು ನಿನ್ನ ನೋಡದಿರುವ ಪರಸ್ಥಿತಿಗೆಂದು. . !”

ಹದಿಯಹರೆಯದ ಕಾಮನೆಗಳನ್ನು ಎದೆಯಲ್ಲೇ ತಡೆಹಿಡಿದು ನಾ ಮದುವೆಯಾಗುವ ಕನ್ಯೆಯೇ ನನ್ನ ಮೊದಲ ಪ್ರೇಮವೆಂಬ ಗುಂಗು ಹಿಡಿಸಿಕೊಂಡ ನನಗೆ ಸಪ್ತಪದಿಯ ತುಳಿಯಲು ನಿನ್ನ ನೋಡಿ ಒಪ್ಪಿ ಬಂದಾಗಿನಿಂದ ಆ ಅಣೆಕಟ್ಟಿಗೊಂದು ಒಡ್ಡು ಕಟ್ಟಲಾಗಿರಲಿಲ್ಲ. . !ನಿಜಕ್ಕೂ ಈ ಪ್ರೀತಿಯೆಂಬುದು ಅದೆಂತಹ ಮಧುರ ಸಂಗೀತವೇ. . ?ಕೇಳುತಲಿದ್ದರೆ ಎದೆಯ ಒಳಗೆ ಸಾವಿರ ಲಹರಿ. . ! ನೋಡು ಇಷ್ಟೆಲ್ಲಾ ಅದಾವ ಮಾಯೆಯಲ್ಲಿ ಆಗಿ ಹೋಯಿತು. ಕಣ್ಣಲ್ಲೇ ಮಾತಾಯಿತು. ಧ್ವನಿಯಿಲ್ಲದೇ ತುಟಿಗಳು ಭಾವನೆಗಳ ವಿನಿಮಯ ಮಾಡಿಕೊಂಡವು. ದೂರದಿಂದಲೇ ಹತ್ತಿರವಾಗಿಹೋಗಿದ್ದೆವು. ಅಬ್ಬಾ. . ಮಾತಿಗೆ ಸ್ಪರ್ಶಕ್ಕೆ ನಾಚಿಕೆಯ ಪರದೆ. . ! ಈಗ ನನ್ನ ಪಕ್ಕದಲ್ಲಿ ಮಧುವಣಗಿತ್ತಿ ನೀನು. ಚೂರು ಭಯ ಹಿಡಿಯಷ್ಟು ಲಜ್ಜೆ ತುಂಬಿ ಕೆಂಪಾದ ನಿನ್ನ ಕೆನ್ನೆಯ ಮೇಲೆ ಅಕ್ಷತೆಯ ಬಣ್ಣದಂತೆ ಕಣ್ಣ ಹನಿಗಳು ದಾರಿಮಾಡಿಕೊಂಡಿವೆ. ಹೆದರಬೇಡ ಗೆಳತಿ ಜೊತೆಯಲ್ಲಿ ನಾನಿಲ್ಲವೇನು. . !

“ಹಸಿರ ಸೀರೆಯ ಧರಿಸಿ ಮಲ್ಲಿಗೆಯ ಮುಡಿದವಳೆ
ಹಸಿರ ಚಪ್ಪರದ ಕೆಳಗೆ ನಸುನಾಚಿ ನಿಂತವಳೆ
ನಗುವ ಅಕ್ಷತೆ ಚೆಲ್ಲಿ ಬಾ ಎನ್ನ ಮನದೊಳಗೆ
ಪಟ್ಟದರಸಿಯು ನೀನು ಈ ಮನದ ಮಹಲೊಳಗೆ. . !”

ಸ್ವಾಗತ ಗೆಳತಿ ಸ್ವಾಗತ ಬಾ ಈ ಮನದ ಅರಮನೆಗೆ ಬಡವನ ಗುಡಿಸಲಿಗೆ ಬಲಗಾಲಿಟ್ಟು ಒಳಗೆ ಬಾ. . !

“ಅಳಬೇಡ ಓ ನಲ್ಲೆ ನಿನ್ನವರ ನೀ ನೆನೆದು
ನಾನಿರುವೆ ಜೊತೆಯಾಗಿ ನಿನ್ನ ಅಳು ನಗುವು ಇನ್ನು ಕೇವಲ ನನ್ನದು
ಈ ಸುಖ ದುಃಖ ಏನಾದರೂ ಜೊತೆಯಾಗಿ ಒಟ್ಟಾಗಿ.
ಹೂಡುವ ಸಂಸಾರದ ಬಂಡಿ ಬದುಕುವ ಬಾ ನಾವೊಂದು ಗುಟ್ಟಾಗಿ. . !”

ನಿನ್ನವರನ್ನೆಲ್ಲಾ ಬಿಟ್ಟು ಬಂದ ನೀನು ಏಕಾಂಗಿಯಲ್ಲಾ ಗೆಳತಿ. ಒರೆಸಿಕೋ ಈ ಕಂಬನಿಯ. ದೂರಮಾಡು ನಿನ್ನ ದುಗುಡವಾ. ನೀನೇ ನನ್ನವಳಾದ ಮೇಲೆ ನಿನ್ನ ಸಿಹಿ ಕಹಿಗಳು ಇನ್ನೂ ನನ್ನದೇ. ನಿನ್ನ ಸುಖದಲ್ಲಿ ಒಂದು ಪಾಲು ದುಃಖದಲ್ಲಿ ಇನ್ನು ಅದರ ಸರ್ವ ಪಾಲು ನನ್ನದೇ. . !ನನ್ನ ಪ್ರೀತಿಯಲ್ಲಿ ನೀನು ಎಲ್ಲವನ್ನೂ ಮರೆತುಬಿಡು. ನಿನ್ನವರನ್ನೆಲ್ಲಾ ಬಿಟ್ಟು ಬಂದೆ ಎನ್ನುವ ದುಃಖವನ್ನು ದೂರಮಾಡುವಷ್ಟು ನನ್ನ ಪ್ರೀತಿ ಬಲಹೀನವಲ್ಲ ಚಿಂತೆ ಬಿಡು.

“ಅಂಬಲಿಯ ನಾವ್ ಕುಡಿದು ತಂಬೆಲರ ಬೀಸೋಣ
ಪ್ರೀತಿಯೇ ಹೊನ್ನ ಕಣಜವು ನಮಗೆ ಕಷ್ಟದಲೂ ಬಾ ನಗುವೇ ಸೂಸೋಣ
ಬಿಸಿಲಿರಲಿ ನೆರಳಿರಲಿ ಒಂದಾಗಿ ನೆನೆಯೋಣ
ಆ ಬಿರುಗಾಳಿಯೇ ಬೀಸಲಿ ಬಾ ಅದರೆದುರು ಕೈ ಹಿಡಿದು ನಿಲ್ಲೋಣ. . !”

ಇರುವಷ್ಟು ದಿನ ಅಂಬಲಿಯೋ ಹೋಳಿಗೆಯೋ ಬಾ ಸಮವಾಗಿ ಸವಿಯೋಣ. ಎಂಥಾ ಕಷ್ಟವನ್ನೂ ಬಾ ಧೈರ್ಯವಾಗಿ ಎದುರಿಸೋಣ. ಈ ಕೈಗಳಿರುವುದೇ ಕಷ್ಟಗಳಲ್ಲಿ ನಿನ್ನ ಬಿಗಿದಪ್ಪಿಕೊಳ್ಳಲು. ಬರುವ ಅಡೆತಡೆಗಳನ್ನು ಪಾರು ಮಾಡಲು.

“ಸಪ್ತಪದಿಯ ತುಳಿದು ಹೆಜ್ಜೆಯಲಿ ಜೊತೆಯಾಗು
ಪ್ರೇಮ ಕಾವ್ಯವ ಬರೆದು ಈ ಬದುಕಿನ ಕಥೆಯಾಗು
ಬಾಳ ಮಂತ್ರವ ಪಠಿಸಿ ಈ ಮನಕೆ ಬೆಳಕಾಗು
ಕತ್ತಲ ತುಂಬಿದ ಮನಕೆ ನೀ ಸದಾ ಹೊಳಪಾಗು. . !”

ಸಂಸಾರ ಸಾಗರದಲಿ ಕಷ್ಟಗಳು ಬವಣೆಗಳು ಇದ್ದದ್ದೇ. ಕತ್ತಲಿದ್ದರೆ ಅಲ್ಲವೇ ಬೆಳಕಿಗೊಂದು ಬೆಲೆ. ಬಾ ಹುಡುಕುವ ಆ ಕಷ್ಟ ಸುಖಗಳನ್ನೂ ಮೀರುವ ನೆಲೆ. ಬರೀ ಸುಖವನ್ನೇ ನೀಡುವೆನೆಂದು ಭರವಸೆ ಮಾತ್ರ ನಾ ನೀಡಲಾರೆ. ಕಷ್ಟಗಳಿಗೆ ಹೆದರಿ ನಾನೆಂದು ಓಡಲಾರೆ. ಬಾಳಿನಲ್ಲಿ ಏನೇ ಬರಲಿ ಪರಸ್ಪರ ಪ್ರೀತಿ ನಂಬಿಕೆಯಿಂದ ಅದನ್ನು ಎದುರಿಸುವ. ಆ ಸಾವಲ್ಲೂ ಒಂದಾಗಿ ನಿಲ್ಲುವ ಬಾ.

“ಗೆಳತಿ ಈ ಲೋಕಕೆ ಒಂದೇ ಭೂಮಿ ಒಂದೇ ಬಾನು
ಭೂಮಿ ನೀನು
ನಿನ್ನ ಆವರಿಸುವ ಬಾನು ನಾನು. . !”

ಇದಕ್ಕಿಂತ ಅಭಯ ನಾ ನೀಡಲಾರೆ. ಸುಖಾ ಸುಮ್ಮನೆ ಹುಸಿ ಭರವಸೆಗಳ ನಾ ನೀಡಲಾರೆ. ಬಾನಿನಿಂದ ಆ ಚಂದ್ರನನ್ನು ನಾ ಕಿತ್ತು ತರಲಾರೆ. ಆ ನಕ್ಷತ್ರಗಳ ನಿನ್ನ ಮಡಿಲಲ್ಲಿ ರಾಶಿ ಹಾಕಲಾರೆ. ಆದರೆ ಗೆಳತಿ ಒಂದಂತೂ ಸತ್ಯ ನೀನಿಲ್ಲದೆ ಒಂದು ಕ್ಷಣವೂ ನಾ ಎಂದೆಂದೂ ಇರಲಾರೆ. . ಎಂದೆಂದೂ ಇರಲಾರೆ. . !

ಅದು ಬೇಕು ಇದು ಬೇಕು ಎಂದು ಎಂದೂ ಬೇಡಿದವನು ನಾನಲ್ಲ. . ಮುಂದೆ ಬೇಡುವವನೂ ನಾನಲ್ಲ. . !
“ಎದುರಲ್ಲಿ ಇದ್ದರೆ ಸಾಕು ಕಣೇ
ಈ ಪ್ರೀತಿಯ
ಕಂಗಳು. . ,
ಮೃಷ್ಟಾನ್ನವೇ ಸರಿ ಗೆಳತಿ ರಾತ್ರಿಯ
ತಂಗಳು. . !”
ಸ್ವಾಗತ ಗೆಳತಿ ಸ್ವಾಗತ ಹೊಸ ಬದುಕಿಗೆ, , ಬಲಗಾಲಿಟ್ಟು ಒಳಗೆ ಬಾ. . !

ಇಂತಿ ನಿನ್ನವ………. ,

-ಆರ್‌ ಸುನಿಲ್‌, ತರೀಕೆರೆ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x