ಅಧ್ಯಾಯ ೮: ತೋಟ ಹಾಳಾಗುವ ಕಾಲಕ್ಕೆ…
‘ನಿಮ್ಮತ್ತೆ ನಿನ್ನ ಗಂಡನ್ನ ಏಳನೇ ಕ್ಲಾಸಿಗೇ ಬಿಡಿಸುವ ಬದಲು ಇನ್ನಷ್ಟು ಓದಿಸಬೇಕಾಗಿತ್ತು ಕಣಕ್ಕ. ಒಳ್ಳೆಯ ಸಾಹಿತ್ಯಗಾರ ಆಗಿಬಿಡೋರು’ ಸುಬ್ಬಪ್ಪ ಅಕ್ಕನನ್ನು ಕಿಚಾಯಿಸಿದ. ಸೀತೆ ನಾಚಿ ತಲೆ ತಗ್ಗಿಸಿದಳು.
‘ನೋಡು ಹೇಗೆ ಈಗ ಇಲ್ಲೇ ನಡೆದ ಹಂಗೆ ಹೇಳಿಬಿಟ್ರು!… ಬಹಳ ಇಂಟರೆಸ್ಟ್ ಆಗಿಬಿಡ್ತು’ ಎನ್ನುತ್ತಾ ಭಾವನ ಕಡೆ ತಿರುಗಿ ‘ಮುಂದೇನಾಯ್ತು ಹೇಳಿಬಿಡಿ… ಈ ಜಾಗನೂ ಒಳ್ಳೆ ಚಂದಾಗೈತೆ. ಇಲ್ಲೇ ಇನ್ನೊಂದು ಗಂಟೆ ಇದ್ದು ಹೋಗಣ’ ಎಂದ.
ಆ ಕಡೆ ಮರಳಿನ ದಂಡೆ ಕಡೆ ನೋಡಿ, ದನಗಳು ಆಗಲೇ ಬೆಟ್ಟದ ಓರೇಲಿ ಮೇಯ್ತಾ ಇದಾವೆ. ನಾವ್ ಇಲ್ಲೇ ಕೂತ್ಕಂಡ್ರೆ ಬೆಟ್ಟದ ನೆತ್ತಿ ಮುಟ್ಟಿದ ಮೇಲೆ ಬೇರೆ ಯಾವ ಕಡೆಗಾದ್ರೂ ತಿರುಗಿಬಿಟ್ಟಾವು. ನಡಿರಿ, ನಾವು ಅವಕ್ಕಿಂತ ಮುಂಚೆ ಬೆಟ್ಟಹತ್ತಿ ನೆತ್ತಿಲಿ ಒಂದು ಕಡೆ ಕೂತು ಮಾತಾಡಣ’ ಎಂದ ಚಿನ್ನಪ್ಪ.
ಮೇಯುವ ದನಗಳನ್ನು ಹಿಂದೆಬಿಟ್ಟ ಅವರು ಬೆಟ್ಟದ ನೆತ್ತಿ ತಲುಪಿ ಒಂದು ಸಡ್ಲೆ ಮರದ ನೆರಳಿನಲ್ಲಿ ಕುಳಿತರು. ಅಲ್ಲಿಂದ ತಗ್ಗಿನಲ್ಲಿ ಅವರ ಪಾಳುಬಿದ್ದ ತೋಟ, ಹೊಳೆ, ಅಬ್ಬಿ ಎಲ್ಲ ಸ್ಪಷ್ಟವಾಗಿ ಕಾಣುತ್ತಿದ್ದವು.
‘ಇಲ್ಲಿ ಕಾಣುತ್ತಿರುವ ಮರ ಕಡಿದ ಕಾಡೆಲ್ಲಾ ನಿಮಗೇ ಸೇರುತ್ತಾ ಭಾವ’ ಆ ಜಾಗದ ವಿಸ್ತಾರ ಕಂಡು ಸುಬ್ಬಪ್ಪ ಕುತೂಹಲಗೊಂಡಿದ್ದ.
‘ಅಯ್ಯೋ ಎಲ್ಲಿ ಮಾರಾಯ. ನಮ್ಮದು ಏನಿದ್ರೂ ನಾವು ಮೇಲೆ ಕೂತಿದ್ದ ಅಬ್ಬಿಯಿಂದ ಇಲ್ಲೊಂದು ಸಣ್ಣ ಅಬ್ಬಿ ಕಾಣುತ್ತಲ್ಲ ಅಲ್ಲಿಯವರೆಗೂ ಈ ಬೆಟ್ಟದ ತಗ್ಗಿನ ಜಾಗ ಅಷ್ಟೇ, ಮಿಕ್ಕ ಮರ ಕಡಿದಿರುವ ಜಾಗ ಸರ್ಕಾರಿ ಕಾಡು. ನಮ್ಮದರ ಹತ್ತರಷ್ಟು ಇದೆ. ಅದರ ಬಗ್ಗೆ ಬೇಕಾದರೆ ಆಮೇಲೆ ಹೇಳ್ತೀನಿ. ಈಗ ನಮ್ಮ ತೋಟದ ವಿಚಾರ ಕೇಳಿ’ ಎನ್ನುತ್ತಾ ಅಕ್ಕ ತಮ್ಮನನ್ನು ಕೇಳಲು ಸಜ್ಜುಗೊಳಿಸಿದ.
‘ತೋಟ ಹಾಳಾಗುವ ಕಾಲಕ್ಕೆ ಓತಿ ಮೋರೆಯ ಕಾಯಿ ಹಿಡಿಯಿತು’ ಅಂತಾರಲ್ಲ ಹಾಗಾಯ್ತು. ಮನೆಯಲ್ಲಿ ಮಕ್ಕಳೋ, ಚಿಕ್ಕಮ್ಮಂದಿರ ಮಕ್ಕಳೋ ತಪ್ಪುದಾರಿ ತುಳಿದಾಗ ಅವ್ವ ಬೇಸರಪಟ್ಟುಕೊಂಡು ಹೇಳುತ್ತಿದ್ದಳು. ಮಕ್ಕಳು ಕೆಟ್ಟ ಬುದ್ಧಿ ಕಲಿತರೆ ಮನೆ ಹಾಳಾಗುತ್ತೆ ಎಂಬುದು ಅದರ ಅರ್ಥ.
ಆ ಗಾದೆಯ ಮಾತು ಅಷ್ಟು ಬೇಗ ಅವ್ವ ಪ್ರೀತಿಯಿಂದ ಅಭಿವೃದ್ಧಿಪಡಿಸಿದ ಈ ತೋಟಕ್ಕೆ ಅನ್ವಯವಾಗುತ್ತದೆ ಎಂದು ತಿಳಿದಿರಲಿಲ್ಲ.
ಅವ್ವನ ಆರೈಕೆಯಲ್ಲಿ ಆಳೆತ್ತರ ಬೆಳೆದು ನಿಂತಿದ್ದ ಕಡು ಹಸಿರು ಬಣ್ಣದ ಏಲಕ್ಕಿ ಗಿಡಗಳು ಇದ್ದಕ್ಕಿದ್ದಂತೆ ಆರೋಗ್ಯ ಕಳೆದುಕೊಂಡು ಹಳದಿ ಬಣ್ಣಕ್ಕೆ ತಿರುಗಿ ಪೇಲವವಾಗಿ ಕಾಣತೊಡಗಿದವು.
ಏನೋ ವಾತಾವರಣದಲ್ಲಿ ಮಳೆಯದೋ ಬಿಸಿಲಿನದೋ ವ್ಯತ್ಯಾಸ ಇರಬಹುದು. ಮುಂದೆ ಸರಿಯಾದೀತು ಎಂದು ಸಮಾಧಾನ ಹೇಳಿಕೊಳ್ಳುವಷ್ಟರಲ್ಲಿ ಅದರ ಗೆಡ್ಡೆಯಿಂದ ಹೊರಟ ಕಂದುಗಳೂ ಅದೇ ರೀತಿ ಬಂದು ಮನೆಯವರ ಧೈರ್ಯಗುಂದಿತು. ಇಳುವರಿಯು ನೆಲಕಚ್ಚಿ ದಿಕ್ಕೇ ತೋಚದಂತಾಯಿತು. ಆ ರೋಗ ಅಕ್ಕಪಕ್ಕದ ತೋಟಗಳಿಗೂ ಹರಡಿತ್ತು.
ಕುತೂಹಲದಿಂದ ಬಂದು ನೋಡಿದ ಅವರಿವರಿಗೂ ಅದರ ತಲೆಬುಡ ತಿಳಿಯದಾಯಿತು.
ದೋಣಿಗಾಲ್‍ನಲ್ಲಿ ಏಲಕ್ಕಿ ಸಂಶೋಧನಾ ಕೇಂದ್ರ ಅಂತ ಇದೆ. ಅಲ್ಲಿ ದೊಡ್ಡ ದೊಡ್ಡ ವಿಜ್ಞಾನಿಗಳಿದ್ದಾರೆ. ಅವರನ್ನೊಮ್ಮೆ ಕರೆತಂದು ತೋರಿಸಿ ಎಂದು ಸಲಹೆ ಬಂದಿತು. ಏನೂ ತಿಳಿಯದೆ ನಿಂತಿದ್ದ ಅವ್ವ ಅಪ್ಪನನ್ನು ಅಲ್ಲಿಗೆ ಓಡಿಸಿದಳು.
ಸಿದ್ದಲಿಂಗಸ್ವಾಮಿ ಎಂಬ ವಿಜ್ಞಾನಿ ಬಹಳ ಹುರುಪಿನಿಂದ ಬಂದು ನೋಡಿದ. ಅಕ್ಕಪಕ್ಕದ ತೋಟಗಳವರೂ ಅವನಿಗೆ ಇದೇ ರೀತಿ ದೂರು ತಂದರು. ಪಾಪ! ಎಷ್ಟು ತಿಣುಕಿದರೂ ಆ ಸರ್ಕಾರಿ ವಿಜ್ಞಾನಿಗೂ ಆ ರೋಗದ ಗುಟ್ಟು ತಿಳಿಯಲಿಲ್ಲ. ಪುಸ್ತಕದ ಬದನೆಕಾಯಿ ಉಪಯೋಗಕ್ಕೆ ಬರಲಿಲ್ಲ.
ಒಂದೆರಡು ಗಿಡ ಕಡಿದುಕೊಂಡು ಹೋಗಿ ಸಂಶೋಧನೆ ನಡೆಸುತ್ತೇನೆ ಎಂದ.
ಹದಿನೈದು ದಿನ ಕಳೆದು ವಿಜ್ಞಾನಿಯ ಸರ್ಕಾರಿ ಜೀಪು ಮತ್ತೆ ಧಾವಿಸಿ ಬಂದಿತು. ಆಸೆ ಹೊತ್ತ ಬೆಳೆಗಾರರು ವಿಜ್ಞಾನಿಯನ್ನು ಮುತ್ತಿದರು.
ಗಿಡದೊಳಗೆ ಹರಿಯುವ ರಸದಲ್ಲಿ ರೋಗ ಹರಡುವ ಬ್ಯಾಕ್ಟೀರಿಯಾ ಇದೆ ಎಂದ. ಅದಕ್ಕೆ ‘ಕಟ್ಟೆರೋಗ’ ಎಂದು ಹೆಸರಿಟ್ಟ. ಆದರೆ ರೋಗ ವಾಸಿಯಾಗಿ ಮತ್ತೆ ತೋಟ ಮೊದಲಿನಂತಾಗುವುದೆಂದುಕೊಂಡಿದ್ದ ರೈತರಿಗೆ ನಿರಾಶೆಯಾಯಿತು.
ರೋಗಕ್ಕೆ ಸರ್ಕಾರಿ ವಿಜ್ಞಾನಿಯ ಬಳಿ ಔಶಧಿ ಇರಲಿಲ್ಲ!
ಕೇರಳದಲ್ಲಿ ದೊಡ್ಡ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ಕೈಗೊಂಡಿದ್ದಾರೆ. ಆದಷ್ಟು ಬೇಗ ಔಷಧಿ ಕಂಡುಹಿಡಿಯುತ್ತಾರೆ ಎಂದು ಭರವಸೆ ನೀಡಿದ.
‘ಅದುವರೆಗೂ ನಾವೇನು ಮಾಡುವುದು’ ಎಂದು ಹಲುಬಿದರು ರೈತರು.
ಇರುವ ಎಲ್ಲಾ ರೋಗದ ಗಿಡಗಳನ್ನು ಕಿತ್ತುಬಿಸಾಡಿ ಹೊಸಗಿಡ ಹಾಕಿ, ಸೀಮೆಗೊಬ್ಬರ ಕೊಡಿ ಬೆಳೆ ಸುಧಾರಿಸಬಹುದು ಎಂದ. ಕೆಲವರು ಅದನ್ನು ಮಾಡಿ ನೋಡಿದರು. ಉಪಯೋಗವಾಗಲಿಲ್ಲ. ಹಾಕಿದ ಹೊಸ ಗಿಡಗಳಲ್ಲೂ ಕುಬ್ಜ ಕಂದುಗಳು ಹುಟ್ಟಿಬಂದು ನೆಲಮಟ್ಟದಲ್ಲೇ ಎಲೆಯೊಡೆಯತೊಡಗಿದವು. ಅಂತಹ ಓತಿಮೋರೆಯ ಗಿಡದಲ್ಲಿ ಫಸಲಿನ ಆಸೆ ಇನ್ನೆಲ್ಲಿ!
ಮೊದಲಿನ ಕಟ್ಟೆ ರೋಗ ನಿವಾರಣೆಗೆ ಔಷಧಿ ಕಂಡುಹಿಡಿಯಲು ದೊಡ್ಡ ದೊಡ್ಡ ವಿಜ್ಞಾನಿಗಳು ತಿಣುಕುತ್ತಲೇ ಇದ್ದಾರೆ ಎಂದು ರೈತರು ಮಾತಾಡಿಕೊಳ್ಳುತ್ತಿರುವಾಗಲೇ ಇನ್ನೊಂದು ಭೀಕರ ರೋಗ ಹರಡಿದ್ದು ರೈತರ ದಿಕ್ಕುಗೆಡಿಸಿತ್ತು.
ಸಿದ್ಧಲಿಂಗಸ್ವಾಮಿ ತಲೆ ತಪ್ಪಿಸಿ ತಿರುಗಾಡತೊಡಗಿದ. ಈ ಬಾರಿ ರೈತರೇ ರೋಗಕ್ಕೆ ‘ಕೊಕ್ಕೆ ಕಂದು’ ಎಂದು ಹೆಸರಿಟ್ಟರು.
ಮೂಡುವ ಪ್ರತಿ ಕಂದೂ ಕೊಕ್ಕೆ ಕಂದೇ!
ಹೇಗಾದರೂ ಮಾಡಿ ತೋಟ ಉಳಿಸಿಕೊಳ್ಳಬೇಕೆಂದು ಹೆಣಗಾಡುತ್ತಿದ್ದ ಅವ್ವ ಇದನ್ನು ಕಂಡು ಹೌಹಾರಿದ್ದಳು. ಅಪ್ಪನನ್ನು ಬಲವಂತವಾಗಿ ಮತ್ತೊಮ್ಮೆ ದೋಣಿಗಾಲಿಗೆ ಅಟ್ಟಿದಳು.
ಅಪ್ಪ ಕೇಂದ್ರದ ಒಳಬರುವುದನ್ನು ಗಮನಿಸಿದ ಸಿದ್ದಲಿಂಗಸ್ವಾಮಿ ಜವಾನನ್ನು ಕರೆದು ‘ಇಲ್ಲಾ ಅಂತ ಹೇಳಿ ಕಳಿಸು’ ಎಂದು ಹೇಳಿ ಟಾಯ್‍ಲೆಟ್ ಒಳಹೋಗಿ ಬಾಗಿಲು ಹಾಕಿಕೊಂಡ.
ಜವಾನ ‘ಯಾರು ಬೇಕಾಗಿತ್ತು’ ಎಂದ ಏನೂ ತಿಳಿಯದವನಂತೆ.
ಅಪ್ಪ ‘ಸಿದ್ದಲಿಂಗಸ್ವಾಮಿಯವರು’ ಎಂದು ಉತ್ತರ ಕೊಟ್ಟಿದ್ದರು.
‘ಅವರಿಲ್ಲ’
‘ಎಲ್ಲಿಗೆ ಹೋಗಿದ್ದಾರೆ’
ಜವಾನನ ಬಳಿ ಉತ್ತರ ಸಿದ್ಧವಾಗಿರಲಿಲ್ಲ
‘ಕೊಕ್ಕೆ ಕಂದಿಗೆ ಔಷಧಿ ಕಂಡುಹಿಡಿಯಲು ಹೋಗಿದ್ದಾರೆ’ ಎಂದು ನಗುತ್ತಾ ಒಳಹೋದ.
ಸರ್ಕಾರಿ ವಿಜ್ಞಾನಿಗಳನ್ನು ನಚ್ಚಿ ಕೂರುವುದರಿಂದ ಉಪಯೋಗವಿಲ್ಲ ಎಂಬುದು ಖಾತ್ರಿಯಾಗಿತ್ತು.
ಬದುಕಿಗೆ ಆಧಾರವಾದ ತೋಟವೇ ಮೊಗಚಿಕೊಂಡಿದೆ. ಮನೆತುಂಬಾ ಇರುವ ಒಂಬತ್ತು ಮಕ್ಕಳ ಹೊಟ್ಟೆಯ ಪಾಡೇನು? ಊರ ತುಂಬಾ ಇನ್ನೂ ಉಳಿದಿರುವ ಕೈಸಾಲಕ್ಕೇನು? ಸುಸ್ತಿಯಾಗಿರುವ ಸೊಸೈಟಿಯ ಸಾಲಕ್ಕೆ ಏನು ದಾರಿ?
ಬಸ್ಸಲ್ಲಿ ಕುಳಿತ ಅಪ್ಪನಿಗೆ ಎಷ್ಟು ತಲೆಕೆರೆದುಕೊಂಡರೂ ದಾರಿ ಹೊಳೆದಿರಲಿಲ್ಲ.
ತೋಟದ ಮರ ಮಾರಿದರೆ? ಈಗಾಗಲೇ ಒಂದಿಬ್ಬರು ವ್ಯಾಪಾರಿಗಳು ದುಂಬಾಲು ಬಿದ್ದಿದ್ದಾರಲ್ಲ! ಆದರೆ ಇದಕ್ಕೆ ಹೆಂಡತಿಯನ್ನು ಒಪ್ಪಿಸಲು ಸಾಧ್ಯವೆ?
ಮನೆ ತಲುಪುವಷ್ಟರಲ್ಲಿ ತಲೆಕೆಟ್ಟು ಗೊಬ್ಬರವಾಗಿತ್ತು.
ಧೈರ್ಯ ತಂದುಕೊಂಡು ಮರ ಮಾರುವ ವಿಚಾರ ಬಾಯಿಬಿಟ್ಟ.
‘ಎಷ್ಟ್ ಸಲ ಹೇಳದು. ಆ ವಿಚಾರ ಎತ್‍ಬ್ಯಾಡ ಅಂತ. ಇನ್ನೊಂದ್ ಸಲ ಹೋರಾಟ ಮಾಡಿ ತೋಟ ಏಳಿಸಿ ನಿಲ್ಲಿಸಿಕೊಳ್ಳೋಣ. ಅದು ನಮ್ಮನ್ನ ಕಾಪಾಡುತ್ತೆ. ಮಕ್ಕಳೂ ನಮ್ಮ ಕೈಗೆ ಬಂದಿದ್ದಾರೆ. ತೋಟ ಒಂದು ಬಂದ್ರೆ ಈ ಸಾಲ ಸೋಲದ್ದೆಲ್ಲಾ ಯಾವ ಲೆಕ್ಕ’ ಅವ್ವ ಖಚಿತವಾಗಿ ಹೇಳಿದಳು.
‘ನೀನ್ಹೇಳದು ಸರಿ ಮಾರಾಯ್ತಿ. ಮೇಲಿಂದ ಮೇಲೆ ಬರುವ ಈ ಕಷ್ಟವ ಹೆಂಗೆ ನಿಬಾಯ್ಸದು’ ಅಪ್ಪ ಹಲುಬಿದ.
‘ಇಷ್ಟೆಲ್ಲಾ ಕಷ್ಟ ನಷ್ಟ ನೋಡಿದ್ರೆ ಏನೋ ಕಾಟ ಇರಬಹುದು. ನಾಳೆ ಹೊತಾರೆನೆ ಹೋಗಿ ನೋಡಿಸಿಕೊಂಡು ಬನ್ನಿ’ ಎಂದು ಅವ್ವ ಮಾತು ಮುಗಿಸಿದ್ದಳು.
‘ಇರಲಿ ಬಿಡು ಚಿನ್ನಪ್ಪನನ್ನು ಕಾಡುಗದ್ದೆಗೆ ಕಳುಸ್ತೀನಿ. ಸ್ಕೂಲ್‍ಗೆ ಹೋಗೋದ್ರೊಳಗೆ ಹೋಗಿ ನೋಡಿಸಿಕೊಂಡು ಬರಲಿ’ ಎಂದು ಅಪ್ಪ ನನ್ನ ಮೇಲೆ ಜವಾಬ್ದಾರಿ ಹಾಕಿದ್ದ.
ಅಧ್ಯಾಯ ೯: ದಯ್ಯದ ಕಾಟ
ದೊಡ್ಡೂರಿನಂತಹ ದೊಡ್ಡ ಊರು ಹಾಗೂ ಸುತ್ತಮುತ್ತಲಿನ ಕೆಲ ಹಳ್ಳಿಗಳಿಗೆ ದಾನದ ಮಂಜಯ್ಯ ಒಬ್ಬನೇ ಪುರೋಹಿತ. ದೊಡ್ಡೂರು ಈಶ್ವರ ದೇವಸ್ಥಾನದ ಅರ್ಚಕನ ಕೆಲಸವೂ ಆತನದೇ. ಸಂಸ್ಕೃತ ಶ್ಲೋಕಗಳನ್ನು ಪಟಪಟನೆ ಉದುರಿಸುತ್ತಿದ್ದ ಆತನಿಗೆ ಹಳ್ಳಿಯ ರೈತರು ಭಯಮಿಶ್ರಿತ ಗೌರವ ಅರ್ಪಿಸುವುದು ನಿಯಮವೆಂಬಂತೆ ನಡೆದುಕೊಳ್ಳುತ್ತಿದ್ದರು. ತಮ್ಮೆಲ್ಲ ಕಷ್ಟ ನಷ್ಟಗಳ ಪರಿಹಾರಕ್ಕೆ ಆತನನ್ನೇ ಸಂಪರ್ಕಿಸಲು ಇಚ್ಛಿಸುತ್ತಿದ್ದರು ಜನ. ಆತ ಸೂಚಿಸುತ್ತಿದ್ದ ಪರಿಹಾರ ವಿಧಾನಗಳ ದುಬಾರಿತನಕ್ಕೆ ಹಿಂಜರಿಯುತ್ತಿದ್ದರು. ಯಾವುದೇ ಪರಿಹಾರದ ಮಾರ್ಗವಿರಲಿ ಅದು ಸಂಪೂರ್ಣವಾಗುತ್ತಿದ್ದುದು ‘ಬ್ರಾಹ್ಮಣರಿಗೆ ದಾನ’ ಕೊಡುವ ಕಾರ್ಯದಿಂದ. ಆ ದಾನ ತನಗೇ ದಕ್ಕುತ್ತಿದ್ದುದರಿಂದ. ಅದು ದುಬಾರಿಯಾಗಿರುತ್ತಿದ್ದುದು ಸಹಜವೇ ಆಗಿತ್ತು.
ಅಂತಹಾ ಮಂಜಯ್ಯನನ್ನು ಬಿಟ್ಟು ಈ ಕಾಡುಗದ್ದೆಯಂತಹಾ ಕುಗ್ರಾಮದಲ್ಲಿ ಯಾವುದೇ ಹುಟ್ಟುವಳಿಯಿಲ್ಲದ ಸಣ್ಣ ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು, ಅದಕ್ಕೆ ಸೇರಿದ ಒಂದೆಕರೆ ಗದ್ದೆ ಉತ್ತುಕೊಂಡು ಹೊಟ್ಟೆ ಹೊರೆಯುತ್ತಿದ್ದ ದಗಡಯ್ಯನ ಬಳಿ ಪರಿಹಾರ ಕೇಳಲು ಅಪ್ಪ ನನ್ನನ್ನು ಕಳಿಸಿದ ಬಗ್ಗೆ ಯೋಚಿಸುತ್ತಾ ದಿಣ್ಣೆ ಇಳಿಯುತ್ತಿದ್ದೆ.
ಕೆಳಗಿನ ಗದ್ದೆಯಲ್ಲಿ ಹೂಡಿದ ಆರು ನಿಂತಿರುವುದು ಕಾಣಿಸಿತು. ಪಕ್ಕದ ಬದುವಿನ ಮೇಲೆ ಕುಳಿತು ಬೀಡಿಯೆಳೆದು ಬುಸುಬುಸು ಹೊಗೆ ಬಿಡುತ್ತಿದ್ದ ವ್ಯಕ್ತಿ ದಗಡಯ್ಯನೇ ಇರಬಹುದೇ ಎಂದುಕೊಳ್ಳುವಷ್ಟರಲ್ಲಿ ಆ ವ್ಯಕ್ತಿ ಬೀಡಿ ಎಸೆದು ಅವಸರಿಸಿ ಬಂದು ಮೇಣಿಗೆ ಕೈಹಾಕಿತು.
‘ಯಾವುದೋ ಮಿಕ ಬಂತು’ ಎಂದು ಮನದಲ್ಲೇ ಅಂದುಕೊಳ್ಳುತ್ತ ಒಂದೆರಡು ಸುತ್ತು ಉಳುವಷ್ಟರಲ್ಲಿ ನಾನು ಆತನ ಬಳಿ ಸಮೀಪಿಸಿದೆ.
‘ಶಾಂತೇಗೌಡನ ಮಗ ಅಲ್ವೇನಾ?’ ದಗಡಯ್ಯ ಆರು ನಡೆಸುತ್ತಲೇ ನನ್ನೊಂದಿಗೆ ಮಾತಿಗೆ ಇಳಿದ. ನಾನು ಅವನನ್ನು ಹಿಂಬಾಲಿಸುತ್ತಲೇ ‘ಹೌದು’ ಎಂದೆ.
‘ಹೂಂ ಬಂದ ವಿಚಾರ ಹೇಳು’ ಎಂದ ಆತ. ಆತ ನನ್ನ ಕಣ್ಣಿಗೆ ಪುರೋಹಿತನಂತೆ ಕಾಣಲಿಲ್ಲ.
ಆತನೊಂದಿಗೆ ನಡೆಯುತ್ತಲೇ ವಿಷಯ ಅರಿಕೆ ಮಾಡಿಕೊಂಡೆ. ಸಮಸ್ಯೆಗೆ ಸಂಬಂಧಿಸಿದಂತೆ ಪೂರಕವಾಗಿ ಹಲವಾರು ವಿಷಯಗಳನ್ನು ಆತ ಕೇಳಿ ತಿಳಿದುಕೊಂಡ.
‘ಹೂ, ಹಿಡಿ ಹಿಂಗೇ ಆರು ನಡುಸ್ತಾ ಇರು. ಮನೆಗೆ ಹೋಗಿ ಶಾಸ್ತ್ರ ಗ್ರಂಥ ನೋಡಿ ಬರ್ತೀನಿ’ ಎನ್ನುತ್ತಾ ನೇಗಿಲು ಮೇಣಿ ನನ್ನ ಕೈಗೆ ದಾಟಿಸಿ ಎದುರು ದಿಬ್ಬದ ಹಿತ್ತಲಿನೊಳಗಿದ್ದ ತನ್ನ ಮನೆಯ ಕಡೆಗೆ ನಡೆದುಹೋದ.
ಅಪ್ಪನ ಜೊತೆ ಗದ್ದೆಗೆ ಹೋಗಿ ಅಷ್ಟಿಷ್ಟು ಆರಂಭದ ಅನುಭವ ಪಡೆದುಕೊಂಡಿದ್ದ ನಾನು ಉಳುಮೆ ಮುಂದುವರಿಸಿದೆ.
ಇನ್ನೇನು ಪರಿಹಾರದೊಂದಿಗೆ ದಗಡಯ್ಯ ಬಂದುಬಿಡಬಹುದೆಂದು ನಿರೀಕ್ಷಿಸುತ್ತಿದ್ದ ನನಗೆ ಸುಸ್ತಾಗತೊಡಗಿತು. ನನ್ನ ಎಳೆಯ ಕೈಗಳು ನೋಯತೊಡಗಿದವು. ಎಷ್ಟು ಹೊತ್ತಾದರೂ ಆತನ ಸುಳಿವು ಕಾಣಲಿಲ್ಲ. ಮನೆಯ ಕಡೆ ನೋಡಿ ನೋಡಿ ಕುತ್ತಿಗೆಯೂ ನೋಯತೊಡಗಿತು.
ಶಾಲೆಯ ವೇಳೆ ಮೀರಿಹೋಗಿತ್ತು.
‘ಏಳನೇ ಕ್ಲಾಸು ಪಬ್ಲಿಕ್ ಪರೀಕ್ಷೆ. ಯಾರಾದ್ರೂ ಕ್ಲಾಸಿಗೆ ತಪ್ಪಿಸಿಕೊಂಡ್ರೆ ಬೆನ್ನುಮೂಳೆ ಮುರಿತೀನಿ’ ಎನ್ನುವ ಜವರೇಗೌಡ ಮಾಸ್ಟ್ರು ಬೆತ್ತ ಆಡಿಸಿದ್ದು ಕಣ್ಣಮುಂದೆ ಬಂದು ಭಯವಾಯಿತು.
ಹೊಟ್ಟೆಯಲ್ಲಿ ಚುರುಚುರು ಹಸಿವು, ಮೇಲೆ ಏರುತ್ತಿದ್ದ ಸೂರ್ಯನ ಚುರುಕು ಬಿಸಿಲು. ಮುಕ್ಕಾಲು ಭಾಗ ಉತ್ತು ಆಗಿತ್ತು. ಇನ್ನು ಮುಂದೆ ಸಾಗಲಿಲ್ಲ. ಆರು ನಿಲ್ಲಿಸಿದೆ. ಹಾಗೆಯೇ ಮುಂದಕ್ಕೆ ಬಾಗಿ ಮೇಣಿಗೆ ಒರಗಿಕೊಂಡೆ.
‘ಏನೋ ಆರು ನಿಲ್ಲಿಸಿಬಿಟ್ಟಿದ್ದೀಯ’ ದಗಡಯ್ಯನ ಆಪಾದನೆಯ ಸ್ವರ ಕೇಳಿ ತಲೆಯೆತ್ತಿದೆ.
‘ಸುಸ್ತಾಗಿಹೋಯ್ತು ಅಯ್ನೋರೆ. ಸ್ಕೂಲಿಗೆ ಬೇರೆ ಲೇಟಾಗಿ ಹೋಯ್ತು…ಇಷ್ಟೊತ್ತು ಮಾಡಿಬಿಟ್ರಲ್ಲ!’ ಎಂದೆ.
‘ಏ ಶೂದ್ರ ಮುಂಡೇ ಮಕ್ಳ, ನಿಮಿಗೇನ್ರೋ ಅರ್ಥವಾಗುತ್ತೆ. ಸ್ನಾನ ಮಡಿಯಿಲ್ಲದೆ ಶಾಸ್ತ್ರ ಗ್ರಂಥ ಮುಟ್ಟೋದುಂಟೇನೋ’ ಎಂದು ಅಬ್ಬರಿಸುವಂತೆ ಹೇಳಿದ. ಅವನ ತೊಡೆಯಲ್ಲಿ ಕೆಸರಿನ ಅಂಟು ಹಾಗೆಯೇ ಇತ್ತು!
‘ಹೋಗು ನಿಮ್ಮ ಅಪ್ಪನಿಗೆ ಹೇಳು, ನಿಮ್ಮ ತೋಟದಲ್ಲಿ ಪೂಜಿಸುವ ಮಾಟದ ದಯ್ಯಕ್ಕೆ ನೀವು ಸರಿಯಾಗಿ ನಡ್ಕಂಡಿಲ್ಲ. ಅದು ನಿಮ್ಮ ಮೇಲೆ ಮುನಿದಿದೆ. ಹಾಗಾಗಿ ಇದೆಲ್ಲಾ ಕಷ್ಟ ನಷ್ಟ’.
‘ಸರಿಯಾಗಿ ಕೇಳಿಸಿಕೋ ಮಡ್ಡ ಸಾಂಬ್ರಾಣಿ. ಈ ಬಾರಿ ನಾಲ್ಕು ಕಾಲು ಬೇಟೆಯೊಂದನ್ನು ಹಿಡಿದು ತೋಟದ ಸುತ್ತ ತಿರುಗಿಸಬೇಕು. ಮನೆಯ ಯಜಮಾನ ಅದು ನಡೆದಂತೆಲ್ಲಾ ಅದು ಜೋರಗಿ ಕಿರುಚುವಂತೆ ಅದರ ತಿಕಕ್ಕೆ ಸುಡುತ್ತಾ ಬರಬೇಕು. ಕೊನೆಯಲ್ಲಿ ಆ ಮಿಕವನ್ನು ದಯ್ಯದ ಬನಕ್ಕೆ ಕರೆತಂದು ಬಲಿಕೊಟ್ಟು ಎಡೆಮಾಡಿ ಊರವರು ನೆಂಟರಿಷ್ಟರಿಗೆಲ್ಲಾ ಊಟಹಾಕಬೇಕು…ಆರ್ಥ ಆಯ್ತೇನೋ. ಒಂಚೂರು ವ್ಯತ್ಯಾಸ ಆಗಬಾರದು’ ದಗಡಯ್ಯ ಅನ್ನುತ್ತಿದ್ದಂತೆ ಅವ್ವ ಸಾಕಿದ್ದ ಇಪ್ಪತ್ತು ಕೆಜಿ ತೂಗುವ ಊರುಹಂದಿ ಕಣ್ಮುಂದೆ ಬಂದಿತು. ಗೌರಿ ಹಬ್ಬದ ವೇಳೆಗೆ ಅದನ್ನು ಮಾರಿ ಮನೆ ಮಕ್ಕಳಿಗೆಲ್ಲಾ ಬಟ್ಟೆ ಹೊಲೆಸುವುದಾಗಿ ಅವ್ವ ಆಶ್ವಾಸನೆ ಕೊಟ್ಟಿದ್ದಳು.
ಆಸೆಯೆಲ್ಲಾ ಮಣ್ಣುಗೂಡುವುದೆಂದು ತಿಳಿದು ದುಃಖ ಒತ್ತರಿಸಿ ಬಂದಿತ್ತು.
‘ಬೇಟೆ ಕೊಡೋ ಕಾರ್ಯಕ್ರಮದಲ್ಲಿ ಊರವರೆಲ್ಲಾ ಸಂಭ್ರಮದಿಂದ ಭಾಗವಹಿಸಿದರು ಅನ್ನಿ…ಮುಂದೇನಾಯ್ತು?’ ಭಾವನ ಮಾತಿಗೆ ಕುತೂಹಲದಿಂದ ಕಿವಿಗೊಟ್ಟು ಕುಳಿತಿದ್ದ ಸುಬ್ಬಪ್ಪ ಪ್ರಶ್ನೆ ಹಾಕಿದ.
‘ಮುಂದೇನಾಗುತ್ತೆ? ತೋಟ ಪೂರ್ತಿ ಹಾಳುಬಿತ್ತು’ ಚಿನ್ನಪ್ಪ ವಿಷಾದದಿಂದ ಹೇಳಿದ. ಸೀತೆ ಮೂಕಳಂತೆ ಕುಳಿತಿದ್ದಳು.
ಬದುಕಿನಲ್ಲಿ ಮೇಲೇರುವುದೆಂದರೆ ಅದೊಂದು ಹಂತ ಹಂತವಾಗಿ ನಡೆಯುವ ಪ್ರಕ್ರಿಯೆ. ಮಧ್ಯದಲ್ಲಿ ದಣಿವಾದರೆ ಯಾವುದಾದರೂ ಹಂತದಲ್ಲಿ ನಿಂತು, ಹೊಸ ಶಕ್ತಿ ತುಂಬಿಕೊಂಡು ಮುಂದಿನ ಮೆಟ್ಟಿಲು ಏರಬಹುದು. ಆದರೆ ಬದುಕಿನಲ್ಲಿ ಹಿಡಿತ ತಪ್ಪಿ ಇಳಿಮುಖ ಚಲನೆ ಶುರುವಾಯಿತೆಂದರೆ ಅದೊಂದು ಮಾದರಿ ಜಾರುಗುಪ್ಪೆ. ದಿಣ್ಣೆಯ ನೆತ್ತಿಯಿಂದ ಜಾರಿದರೆ ಬುಡ ಮುಟ್ಟಿಯೇ ಸೈ. ನಮ್ಮ ಮನೆಯ ವಿಚಾರದಲ್ಲಿ ಹಾಗೆಯೇ ಆಯ್ತು. ಶುರುವಾದ ಬದುಕಿನ ಇಳಿಮುಖ ಚಲನೆ ವೇಗ ಹೆಚ್ಚಿಸಿಕೊಳ್ಳುತ್ತಾ ತನ್ನ ತಾರ್ಕಿಕ ಅಂತ್ಯದ ಕಡೆಗೆ ನಡೆಯತೊಡಗಿತು.
ತಮಗೆ ನಿಯಮಿತವಾಗಿ ಸಿಗುತ್ತಿದ್ದ ಬಡ್ಡಿಯೂ ಸಿಗದಾದಾಗ ಕೈ ಸಾಲ ಕೊಟ್ಟ ಸಾಲಿಗರು ನಮ್ಮ ಮನೆಯ ಮುಂದೆ ನಿಂತು ತಮ್ಮ ಮಾತಿನ ಶೂಲ ಪ್ರಯೋಗಿಸತೊಡಗಿದಾಗ ಮನೆಯವರೆಲ್ಲಾ ಅವಮಾನದಿಂದ ಕುಗ್ಗಿಹೋಗತೊಡಗಿದೆವು. ಅದೂ ಸಾಲದೆಂಬಂತೆ ಸುಸ್ತಿಯಾಗಿದ್ದ ಸೊಸೈಟಿ ಸಾಲ ವಸೂಲು ಮಾಡಲು ಮನೆ ಜಪ್ತಿ ಮಾಡುವುದಾಗಿ ನೋಟೀಸ್ ಬಂದಿತ್ತು.
ಸರೀಕರೊಂದಿಗೆ ತಲೆಯೆತ್ತಿ ನಿಂತು ಹಟಕ್ಕೆ ಬಿದ್ದು ಹೋರಾಡಿ ಮನೆಯ ವ್ಯವಹಾರವನ್ನು ಒಂದು ಹಂತಕ್ಕೆ ತಂದಿದ್ದ ಅವ್ವ ಅವಮಾನ ತಾಳದೆ ಮನೆಯ ಮೂಲೆ ಸೇರಿಕೊಂಡಳು.
‘ಜಪ್ತಿ ಮಾಡಿ ತಗೊಂಡು ಹೋಗಕೆ ನಮ್ಮನೇಲಿ ಏನಿದೆ, ಸುಮ್ಮನಿರಿ’ ಎಂದು ಅಪ್ಪ ಸಮಾಧಾನ ಮಾಡಲು ಯತ್ನಿಸಿದ. ‘ಹೆಂಗಿದ್ರೂ ನಿಮ್ಮ ದೊಡ್ಡಪ್ಪನ ಮಗನೇ ಸೊಸೈಟಿ ಕಾರ್ಯದರ್ಶಿ ಅಲ್ವಾ, ಏನೂ ತೊಂದರೆ ಮಾಡಬೇಡ ಎಂದು ಕೇಳಿಕೊಳ್ಳೋಣ’ ಎಂದು ಅವ್ವನಿಗೆ ಧೈರ್ಯದ ಮಾತು ಹೇಳಿದ.
ಹೀಗಿರುವಾಗ ಪೊಲೀಸರನ್ನು ಜತೆಗಿಟ್ಟುಕೊಂಡ ಅಧಿಕಾರಿಗಳ ಜೀಪು ಮನೆಯ ಮುಂದೆ ಬಂದು ನಿಂತೇಬಿಟ್ಟಿತು. ಮೊದಲಿಗೆ ಇಳಿದ ಕಾರ್ಯದರ್ಶಿ ಸುಬ್ರಾಯಗೌಡ ಮನೆಗೆ ನುಗ್ಗಿದ. ಮೂಲೆಯಲ್ಲಿ ಮುದುರಿ ಕುಳಿತಿದ್ದ ಅವ್ವ ‘ಸುಬ್ರಾಯಣ್ಣ ಹಂಗೆಲ್ಲಾ ಮಾಡ್ಬೇಡಪ್ಪ’ ಎಂದು ಅಂಗಲಾಚತೊಡಗಿದಳು. ಅವಳ ಮಾತನ್ನು ಗಣನೆಗೇ ತೆಗೆದುಕೊಳ್ಳದ ಕಾರ್ಯದರ್ಶಿ ಕುಡಿಯುವ ನೀರಿನ ತಾಮ್ರದ ಹಂಡೆ, ಬಚ್ಚಲು ಮನೆಯ ನೀರು ಕಾಯಿಸುವ ಹಂಡೆ, ದೊಡ್ಡ ದೊಡ್ಡ ಪಾತ್ರೆಗಳನ್ನು ಒಂದೊಂದಾಗಿ ತಂದು ಹೊರಗಿಡತೊಡಗಿದ.
ಅವ್ವ ಅವನ ಕಾಲನ್ನು ಭದ್ರವಾಗಿ ಹಿಡಿದುಕೊಂಡು ‘ನಮ್ಮ ಮನೆ ಮರ್ಯಾದೆ ಉಳಿಸಿಕೊಡಣ್ಣ’ ಎನ್ನುತ್ತಾ ಜೊರಾಗಿ ರೋದಿಸತೊಡಗಿದಳು. ಅಪ್ಪ ಅಸಹಾಯಕನಾಗಿ ನಿಂತಿದ್ದ. ಒಂಬತ್ತು ಜನ ಮಕ್ಕಳೂ ಏನು ನಡೆಯುತ್ತಿದೆ ಎಂಬುದೇ ತಿಳಿಯದೆ ಕಕ್ಕಾಬಿಕ್ಕಿಯಾಗಿ ನಿಂತಿದ್ದೆವು.
ಇನ್ನೇನು ಮನೆಯೊಳಗಿದ್ದ ಪಾತ್ರೆ ಪರಡಿಗಳನ್ನೆಲ್ಲಾ ಹೊರಗೆ ಇಟ್ಟು, ಜಪ್ತಿ ಮುಗಿಯಿತು ಎನ್ನಿಸುವಷ್ಟರಲ್ಲಿ ಅಧಿಕಾರಿ ‘ಇವರ ಭತ್ತದ ಪೆಟಾವು ಎಲ್ಲಿದೆ ನೋಡ್ರಿ’ ಎಂದಾಗ ಅವ್ವ ನಡುಗತೊಡಗಿದಳು. ಇನ್ನೂ ಎರಡು ತಿಂಗಳಿಗಾಗುವಷ್ಟು ಭತ್ತ ಉಳಿದಿತ್ತು. ಅದಕ್ಕೂ ಕೈ ಹಾಕಿದರಲ್ಲ ದೂರ್ತರು ಎನ್ನುತ್ತಾ ಕೈಗೆ ಸಿಕ್ಕ ಮಕ್ಕಳನ್ನೆಲ್ಲಾ ಬಾಚಿ ತಬ್ಬಿಕೊಂಡು ಕುಸಿದು ಕುಳಿತುಬಿಟ್ಟಳು. ಪೆಟಾವಿಗೆ ಬೀಗ ಹಾಕಿ ಸೀಲ್ ಮಾಡಿದ ಅಧಿಕಾರಿ ಒಂದೂ ಮಾತಾಡದೆ ಜೀಪೇರಿ ಕುಳಿತುಕೊಂಡ.
‘ನೀವೇನೂ ಹೆದರಬೇಡ ಅಕ್ಕ, ನಿಮ್ಮ ಸಾಮಾನೆಲ್ಲಾ ಜೋಪಾನವಾಗಿರುತ್ತೆ. ದುಡ್ಡು ಕಟ್ಟಿದರೆ ಬಿಟ್ಟುಕೊಡ್ತಾರೆ’ ಸುಬ್ರಾಯಗೌಡ ಸಮಜಾಯಿಷಿ ಹೇಳಿದ.
‘ನಾಳೆಯಿಂದ ನನ್ನ ಒಂಬತ್ತು ಜನ ಮಕ್ಕಳು ಉಪವಾಸ ಇರಬೇಕಾಗುತ್ತೆ. ಆ ಪೆಟಾವಾದ್ರೂ ಬೀಗ ತೆಗೆಸಿಕೊಡು’ ಎಂದು ಕೇಳಬೇಕೆನಿಸಿತು. ಆದರೆ ಅದರಿಂದೇನೂ ಪ್ರಯೋಜನವಿಲ್ಲ ಎನಿಸಿ ಮೌನದಿಂದ ತಲೆತಗ್ಗಿಸಿ ಕುಳಿತಳು.
ನಮ್ಮನ್ನೆಲ್ಲಾ ಅವಮಾನದಲ್ಲಿ ಅದ್ದಿದ ಅಧಿಕಾರಿಗಳ ಜೀಪುಗಳು ಭರ್ ಭರ್ ಎಂದು ಸದ್ದುಮಾಡುತ್ತಾ ಹೊರಟುಹೋದವು.
ಮಾರನೆಯ ದಿನ ಬೆಳಗು ಮೂಡುವ ಮೊದಲೇ ಅಪ್ಪ ಮನೆಯಿಂದ ಕಾಣೆಯಾಗಿದ್ದ. ಅವ್ವನೊಂದಿಗೆ ನಾವೆಲ್ಲರೂ ಕಂಗಾಲಾಗಿ ಕುಳಿತೆವು. ಸಂಜೆಯವರೆಗೂ ಮನೆಯಿಂದ ಹೊರಗೆ ತಲೆಹಾಕದಿದ್ದ ಅವ್ವ ಹಸಿದ ಹೊಟ್ಟೆಯ ಒಂಬತ್ತು ಮಕ್ಕಳನ್ನು ಸಾಲಾಗಿ ಮಲಗಿಸಿಕೊಂಡು ಮಲಗಿದಳು. ಅಪ್ಪ ಅವಮಾನ ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅವಳು ಭಯಗೊಂಡಿದ್ದಳು.
ಆ ಕರಾಳ ರಾತ್ರಿಯನ್ನು ಕಳೆಯಲೇಬೇಕಾಗಿತ್ತು. ರಾತ್ರಿ ಹೊತ್ತು ಕಳೆಯುತ್ತಾ ಹೋದಂತೆ ನಾವೆಲ್ಲಾ ಹಸಿವು ತಾಳಲಾರದೆ ನರಳಾಡತೊಡಗಿದೆವು. ಅವ್ವನ ನಿಟ್ಟುಸಿರು ಮನಯನ್ನೆಲ್ಲಾ ವ್ಯಾಪಿಸತೊಡಗಿತ್ತು.
ಅಷ್ಟರಲ್ಲಿ ಮುಂದಿನ ಬಾಗಿಲ ಸದ್ದಾಯಿತು. ಒಳಬಂದವನು ಅಪ್ಪ. ಭರವಸೆ ಕಳೆದುಕೊಂಡಿದ್ದ ನಾವೆಲ್ಲಾ ಆಸೆಯಿಂದ ಎದ್ದುಕುಳಿತೆವು.
ಅವ್ವ ಭಯ ಕಾತರ ತುಂಬಿಕೊಂಡು ಅವನ ಮುಖ ದಿಟ್ಟಿಸತೊಡಗಿದಳು. ದೀಪ ದೊಡ್ಡದು ಮಾಡಿದ ಅಪ್ಪ, ಸೋತು ಸೊರಗಿಹೋಗಿದ್ದ ಅವ್ವನನ್ನು ಕೈಹಿಡಿದು ಕೂರಿಸಿದರು. ಚಡ್ಡಿಯ ಜೇಬಿನಿಂದ ಒಂದು ಕಟ್ಟು ನೋಟು ತೆಗೆದು ಅವ್ವನ ಕೈಗೆ ಕೊಡುತ್ತ ‘ಮಲ್ನಾಡ್ ಸಾಮಿಲ್‍ನ ನಾರಾಯಣಶೆಟ್ಟರಿಗೆ ನಮ್ಮ ತೋಟದ ಮರ ಮಾರಿಬಿಟ್ಟೆ… ತಗಾ ಇದು ಅಡ್ವಾನ್ಸು…ನಾಳೆ ಸೊಸೈಟಿಗೆ ಹೋಗಿ ಕಟ್ಟಿಬಿಡಾಣ. ಮಕ್ಕಳನ್ನ ಉಪವಾಸ ಕೆಡಗಕ್ಕೆ ಆಗದಿಲ್ಲ’ ಎಂದ. ಅವ್ವನ ಕಣ್ಣೀರು ನೋಟಿನ ಮೇಲೆ ಬಳಬಳನೆ ಸುರಿಯುತ್ತಿದ್ದವು.
ಚಿನ್ನಪ್ಪನ ಮಾತು ಮುಗಿದಾಗ ಚತುರ ಮಾತುಗಾರನಾದ ಸುಬ್ಬಪ್ಪ ಮಂಕು ಬಡಿದವನಂತೆ ಕುಳಿತಿದ್ದ. ಸೀತೆ ಸೆರಗಿನಿಂದ ಕಣ್ಣೊರಸಿಕೊಳ್ಳುತ್ತಿದ್ದಳು. ಸ್ವಲ್ಪ ಸುಧಾರಿಸಿಕೊಂಡ ಚಿನ್ನಪ್ಪ ಮತ್ತೆ ಮುಂದುವರಿಸಿದ.
ಅವ್ವ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಳು. ಈ ಜಂಜಾಟಗಳ ಮಧ್ಯೆ ನನಗೆ ಏಳನೇ ತರಗತಿಯ ಪರೀಕ್ಷೆ ಬರೆಯಲು ಸಾಧ್ಯವೇ ಆಗಲಿಲ್ಲ. ನನ್ನನ್ನ ಚೆನ್ನಾಗಿ ಓದಿಸಿ ಹಸನಾದ ಬದುಕಿನ ದಾರಿ ತೋರಿಸಬೇಕೆಂದಿದ್ದ ಅವ್ವನಿಗೆ ಇದೂ ಒಂದು ಕೊರಗು ಅಂಟಿಕೊಂಡಿತು.
ನಮ್ಮ ಅಕ್ಕಂದಿರೆಲ್ಲಾ ರೂಪಿನಲ್ಲಿ ಅವ್ವನಂತೆಯೇ. ಚಟುವಟಿಕೆಯಲ್ಲೂ ಅಷ್ಟೇ! ಮನೆ ತುಂಬಾ ಮಕ್ಕಳಿದ್ದರೂ ಅವರ ಮದುವೆ ಮಾಡುವುದು ಏನೂ ಕಷ್ಟವಾಗದು ಎಂಬ ಭರವಸೆ ಅವ್ವನಿಗೆ ಮೊದಲಿನಿಂದಲೂ ಇತ್ತು.
‘ಕೈಯಲ್ಲಿ ದುಡ್ಡು ಐತೆ ಅಂತಾ ಧಾಳಾಧೂಳಿ ಖರ್ಚು ಮಾಡಬೇಡ. ಮದುವೆಗೆ ಬಂದ ಹೆಣ್ಣುಮಕ್ಕಳಿದಾರೆ ಮನೆಯಲ್ಲಿ’ ಎಂದು ನನ್ನನ್ನು ಎದುರಿಗೆ ಕೂರಿಸಿಕೊಂಡು ಅಪ್ಪನಿಗೆ ಹೇಳುತ್ತಿದ್ದಳು. ಅಪ್ಪನೂ ಮನೆಯ ವಿಚಾರದಲ್ಲಿ ಜವಾಬ್ಧಾರಿಯಿಂದ ಇರುವುದನ್ನು ಕಲಿತುಕೊಂಡಿದ್ದ.
ಮರ ಕಡಿಯುವ ತೋಟವಾದುದರಿಂದ ಹೊಸದಾಗಿ ಅಭಿವೃದ್ಧಿಪಡಿಸುವುದು ಏನೂ ಇರಲಿಲ್ಲ. ಆದರೂ ಅಪ್ಪನ ನೇತೃತ್ವದಲ್ಲಿ ನಾವು ಹೋಗಿ ಅಳಿದುಳಿದ ಕೆಲಸ ಮಾಡುತ್ತಿದ್ದೆವು. ಮನೆಯಲ್ಲಿ ಮಂಕು ಬಡಿದವಳಂತೆ ಇರುತ್ತಿದ್ದ ಅವ್ವ ತೋಟಕ್ಕೆ ಬಂದ ಕೂಡಲೇ ಲವಲವಿಕೆ ಪಡೆದುಕೊಳ್ಳುತ್ತಿದ್ದಳು. ತೋಟದಲ್ಲಿ ಹೊರಗಿನ ಜನರ ಓಡಾಟ ಹೆಚ್ಚಾಯಿತು. ಸರ್ವೆಯರ್‍ಗಳು, ಗಾರ್ಡ್‍ಗಳು, ರೇಂಜರ್‍ಗಳು ವಿವಿಧ ಸ್ತರದ ಜನ.
ಹೊಳೆಯಾಚೆಗೆ ಎದುರಿನ ಬೆಟ್ಟ ಕಾಣುತ್ತಲ್ಲ. ಪಟ್ಟಣದ ಅಧಿಕಾರಿಗಳೆಲ್ಲಾ ಜೀಪಲ್ಲಿ ಬಂದು ಅಲ್ಲಿ ಇಳಿಯುತ್ತಿದ್ದರು. ನಂತರ ಕಾಲ್ನಡಿಗೆಯಲ್ಲಿ ಕಾಡೊಳಗೆ ನಮ್ಮ ತೋಟದ ಕಡೆ ಅವರ ಪಯಣ.
ನಾವು ಒಂದು ದಿನ ನೋಡ ನೋಡುತ್ತಿದ್ದಂತೆಯೇ ಆ ಬೆಟ್ಟದ ಮೇಲೆ ಒಂದು ಜೀಪು ಅದರ ಹಿಂದೆ ಒಂದು ಪಿಕ್‍ಅಪ್ ವಾಹನ ಬಂದು ನಿಂತದ್ದು ಕಂಡಿತು. ಜೀಪಿನಿಂದ ಇಳಿದವರು ಮಾಮೂಲಿಯಾಗಿ ಬರುವ ಅಧಿಕಾರಿಗಳಂತೆ ಕಾಣಲಿಲ್ಲ. ಪಿಕ್‍ಅಪ್‍ನಿಂದ ಇಳಿದ ಜನ ಅವರನ್ನು ಹಿಂಬಾಲಿಸಿ ನಮ್ಮ ತೋಟದ ಕಡೆಗೇ ಬರತೊಡಗಿದರು. ಅವರ ಹೆಗಲ ಮೇಲೆ ಸರ್ವೆ ಮಾಡಲು ಉಪಯೋಗಿಸುವಂತಹ ವಿವಿಧ ಉಪಕರಣಗಳು.
ತೋಟಕ್ಕೆ ಬಂದವರು ನಮ್ಮ ತೋಟದಂಚಿನ ರೋಡಿನಲ್ಲಿ ಅವರ ಮೂರು ಕಾಲಿನ ಉಪಕರಣದ ಮೇಲೆ ದುರ್ಬೀನಿನಂತದ್ದನ್ನು ಇಟ್ಟು ವೀಕ್ಷಿಸುತ್ತ ಏನೇನೋ ಬರೆದುಕೊಳ್ಳುತ್ತಿದ್ದರು. ಅಪ್ಪನೊಂದಿಗೆ ತೋಟಕ್ಕೆ ಹೋಗಿದ್ದ ನಾವು ಮಿಕಿಮಿಕಿ ಕುತೂಹಲದಿಂದ ನೋಡುತ್ತಾ ನಿಂತೆವು.
ಅಧಿಕಾರಿ ಅಪ್ಪನನ್ನು ಹತ್ತಿರ ಕರೆದು ಮಾತಾಡತೊಡಗಿದರು.
ಕರೆಂಟ್ ತಯಾರು ಮಾಡಲು ಸರ್ಕಾರದವರು ಕೆಂಪುಹೊಳೆಗೆ ಡ್ಯಾಂ ಕಟ್ಟಲು ಯೋಜನೆ ತಯಾರು ಮಾಡಿದ್ದರು. ಹೊಳೆಯ ಸಾಲಿನ ಜಮೀನಿನಲ್ಲಿ ಹಿನ್ನೀರು ಎಲ್ಲಿಯವರೆಗೂ ನಿಲ್ಲುತ್ತದೆ, ಯಾರ್ಯಾರ ಜಮೀನು ಎಷ್ಟೆಷ್ಟು ಮುಳುಗಡೆಯಾಗುತ್ತದೆ ಎಂದು ಅಂದಾಜು ಮಾಡುವ ಕಾರ್ಯ ನಡೆಯುತ್ತಿತ್ತು.
‘ನಮಗೆ ಮತ್ತೊಂದು ಕಷ್ಟ ಎದುರಾಯಿತು’ ಅಪ್ಪ ಮನೆಗೆ ಹಿಂತಿರುಗುವಾಗ ನಮ್ಮೊಂದಿಗೆ ಹೇಳಿದ.
ನಾರಾಯಣಶೆಟ್ಟಿಯ ಕಡೆಯಿಂದ ಬಿರುಸಿನ ಚಟುವಟಿಕೆ ನಡೆದಿತ್ತು. ಕೆಳಹಂತದ ಅಧಿಕಾರಿಗಳ ಕೆಲಸವೆಲ್ಲಾ ಮುಗಿದಿತ್ತು. ಸರ್ವೆ ಕಾರ್ಯವೂ ಆಗಿತ್ತು. ಹಾಸನದಿಂದ ಹಿರಿಯ ಅರಣ್ಯಾಧಿಕಾರಿಗಳು ಬರುವ ದಿನಾಂಕವೂ ನಿಗಧಿಯಾಗಿತ್ತು.
‘ಆ ದಿನ ನೀವು ಬೆಟ್ಟದ ನೆತ್ತಿಗೆ ಜೀಪು ನಿಲ್ಲುವ ಸ್ಥಳಕ್ಕೆ ಬರಬೇಕು. ಅರಣ್ಯಾಧಿಕಾರಿಗಳು ನಾವು ಎಲ್ಲಾ ಬಂದಿರುತ್ತೇವೆ. ನಮಗೆಲ್ಲಾ ಸರಿಯಾದ ದಾರಿ ತೋರಿಸಲು ಬೇಕಾಗುತ್ತದೆ’ ಎಂದು ಟಿಂಬರ್ ಮರ್ಚೆಂಟ್ ನಾರಾಯಣಶೆಟ್ಟಿ ಹೇಳಿ ಕಳಿಸಿದ್ದರು.
ಅಪ್ಪನೊಂದಿಗೆ ನಾನೂ ಹೋಗಿದ್ದೆ. ಮೂರು ಜೀಪುಗಳು ಬಂದು ನಿಂತವು. ಒಂದರಿಂದ ನಾರಾಯಣಶೆಟ್ಟಿ ಹಾಗೂ ಹಿರಿಯ ಅರಣ್ಯಾಧಿಕಾರಿ ಇಳಿದರು. ಇನ್ನೊಂದರಿಂದ ಮೊದಲೆಲ್ಲಾ ಬಂದು ಹೋಗಿದ್ದ ರೇಂಜರುಗಳು, ಸರ್ವೆಯರ್‍ಗಳು. ಮತ್ತೊಂದು ಜೀಪಿನಿಂದ ನಾರಾಯಣಶೆಟ್ಟರ ರೈಟರು ಹಾಗೂ ಇತರ ಸಹಾಯಕರು!
ಫೈಲ್ ಹಿಡಿದು ಬಂದ ರೇಂಜರ್‍ಗಳು ಹಾಗೂ ರೈಟರು ಹಿರಿಯ ಅಧಿಕಾರಿಗೆ ಎದುರಿದ್ದ ಕಾಡಿನ ಕಡೆ ನಿರ್ದೇಶನ ಮಾಡುತ್ತಾ ಮರ ಕಡಿಯಬೇಕಾದ ಕೂಪ್‍ನ ವಿವರ ನೀಡತೊಡಗಿದರು.
ಅತ್ತಕಡೆಯೇ ಪಕ್ಷಿ ನೋಟ ಬೀರಿದ ಅಧಿಕಾರಿ ‘ಬಲಕ್ಕೆ ಕಾಣುವ ಸಣ್ಣ ಕಾಡು ಮಾತ್ರ ಈ ಗೌಡನ ಹಿಡುವಳಿ ಅಲ್ಲವೇನ್ರಿ? ಇನ್ನು ಎಡಕ್ಕೆ ವಿಶಾಲವಾಗಿ ಹರಡಿಕೊಂಡಿರುವುದೆಲ್ಲಾ ಸರ್ಕಾರಿ ಅರಣ್ಯ ಅಲ್ಲವಾ’ ತನ್ನ ಕೈ ಕೆಳಗಿನ ಅಧಿಕಾರಿಯನ್ನು ಕೇಳಿದ.
‘ಹೌದೌದು, ಕೆಳಗಿಳಿದು ಸ್ಪಾಟ್‍ಗೊಮ್ಮೆ ಹೋಗಿ ಬರೋಣ್ವ ಸಾರ್’ ನಾರಾಯಣಶೆಟ್ಟಿ ಅಧಿಕಾರಿಯನ್ನು ಕೇಳಿದ.
‘ಏನ್ ಅಗತ್ಯ ಇಲ್ಲ ಬಿಡಿ… ಒಳ್ಳೆ ಜಾಗನೇ ಹಿಡಿದಿದ್ದೀರಿ ಶೆಟ್ರೆ. ಇದೆಲ್ಲಾ ನಿಮ್ದೇನೆ ಅಂದ್ಕೊಳಿ ಹಾಗಾದ್ರೆ! ಮುಂಚಾಚಿದ ತೋರು ಬೆರಳು ನಮ್ಮ ತೋಟದಿಂದ ಹೊರಟು ಎಡಬದಿಗಿದ್ದ ನಮ್ಮ ಹಿಡುವಳಿಯ ಹತ್ತು ಪಟ್ಟಿನಷ್ಟಿದ್ದ ಸರ್ಕಾರಿ ಅರಣ್ಯವನ್ನು ಬಳಸಿ ಒಂದೆಡೆ ಸ್ಥಗಿತವಾಯಿತು.
ಶೆಟ್ಟಿಯ ಮುಖ ಮಂದಹಾಸದಿಂದ ಮಿನುಗಿತು.
‘ಇಂತದ್ದು ಒಂದು ವ್ಯವಹಾರ ಮಾಡಿದ್ರೆ ಸಾಕು ಕಣ್ರಿ ಜನ್ಮದಲ್ಲಿ. ಮುಂದಿನ ಎರಡು ಜನ್ಮಕ್ಕೆ ಮನೆಯವರೆಲ್ಲಾ ಕೂತು ತಿನ್ನಬಹುದು’ ಅಧಿಕಾರಿ ಶೆಟ್ಟಿಯ ಭುಜದ ಮೇಲೆ ಕೈ ಹಾಕಿ ಹತ್ತಿರ ಎಳೆದುಕೊಂಡು ಪಿಸುಮಾತಿನಲ್ಲಿ ಹೇಳಿದ.
ಸೂಚನೆಯರಿತ ರೈಟರು ಚರ್ಮದ ಚೀಲದ ಜಿಪ್ ತೆಗೆದು ಶೆಟ್ಟಿಯ ಮುಂದೆ ಹಿಡಿದ. ಅದರಿಂದ ಐನೂರರ ಎರಡು ಕಟ್ಟು ನೋಟು ತೆಗೆದು ಶೆಟ್ಟಿ ಅಧಿಕಾರಿಯ ಕೈಗಿತ್ತ.
‘ನೀವೆಲ್ಲಾ ಸಿದ್ಧತೆ ಮಾಡಿಕೊಳ್ಳಿ. ಮರ ಕಡಿಯೋದಿಕ್ಕೆ. ಜನ ಎಲ್ಲಾ ಕರೆಸಿಕೊಳ್ಳಿ ಕೇರಳದಿಂದ ಬೇಕಾದ್ರೆ; ಇನ್ನೆರಡು ದಿನದಲ್ಲಿ ಫೆಲ್ಲಿಂಗ್ ಆರ್ಡರ್ ರೆಡಿಯಾಗುತ್ತೆ’ ಎನ್ನುತ್ತಾ ಅಧಿಕಾರಿ ಜೀಪಿನ ಕಡೆ ನಡೆದ.
ಚಿನ್ನಪ್ಪನ ಮಾತು ಮತ್ತೊಂದು ನಿಲುಗಡೆಗೆ ಬಂದಿತ್ತು. ಅವನ ಮನಸ್ಸು ವಿಷಾದದ ಮಡುವಾಗಿದ್ದನ್ನು ಸುಬ್ಬಪ್ಪ ಹಾಗೂ ಸೀತೆ ಗಮನಿಸಿದರು.
‘ಎಂಥಾ ಮೋಸ ಭಾವ. ಇಷ್ಟಗಲ ಹಿಡುವಳಿ ಜಮೀನಿನ ಪರ್ಮಿಟ್ ನೆಪದಲ್ಲಿ ಎಷ್ಟು ಅರಣ್ಯ ಲೂಟಿ ನಡೆದಿದೆ… ಅದರೊಂದಿಗೇ ಒಡನಾಡಿದ ರೈತ ಕೊನೆಗೆ ವಿಧಿಯಿಲ್ಲದೆ ತಾನು ಪ್ರೀತಿಸಿದ ಅರಣ್ಯವನ್ನು ತೊರೆದದ್ದಕ್ಕೆ ದಕ್ಕಿದ್ದು ಒಂದು ಲಕ್ಷ! ಬೆಟ್ಟದ ತುದಿಯಲ್ಲಿ ಬಂದು ನಿಂತು ಕೇವಲ ಒಂದೇ ನಿಮಿಷದಲ್ಲಿ ಬೆರಳು ತೋರಿಸಿ ಅರಣ್ಯ ದೇವತೆಯನ್ನೇ ಲೂಟಿಕೋರರಿಗೆ ತಲೆಹಿಡಿದು ಕೊಟ್ಟ ಅಧಿಕಾರಿಗೆ ಸಿಕ್ಕಿದ್ದು ಒಂದು ಲಕ್ಷ! ಇದೆಂತಹಾ ವಿಪರ್ಯಾಸ!’ ಸುಬ್ಬಪ್ಪನ ಮನಸ್ಸು ಅನ್ಯಾಯಕ್ಕಾಗಿ ಮರುಗಿತು.
ಭಾವ ಮೌನ ಧರಿಸಿ ಕುಳಿತದ್ದು ಕಂಡ ಸುಬ್ಬಪ್ಪ ‘ಹಂಗಾದ್ರೆ ಇಷ್ಟೆಲ್ಲಾ ನಡೀತು ಅನ್ನಿ’ ತಾನೇ ಮಾತು ಮುಂದುವರಿಸಿದ.
‘ಇಷ್ಟೆಲ್ಲಾ’ ಅಂತ ಏನು ಹೇಳ್ತೀಯ. ಬದುಕಿನ ಇಳಿಮುಖ ಚಲನೆಯ ಜಾರುಗುಪ್ಪೆಯ ಮೇಲೆ ಕುಳಿತು ಆಗಿತ್ತಲ್ಲ. ಅದು ನಿಲ್ಲಬೇಕಾದರೆ ತಳ ತಲುಪಲೇಬೇಕಲ್ಲ…
ತಲೆತಲಾಂತರದಿಂದ ಬೆಳೆದು ನಿಂತಿದ್ದ ನಂದಿ, ಬೊಬ್ಬಿ, ದೂಪ ಮುಂತಾದ ಅನೇಕ ಜಾತಿಯ ಮರಗಳು ಟಿಂಬರ್ ಲಾಬಿಯ ಕೊಡಲಿಯ ಬಾಯಿಗೆ ಸಿಕ್ಕಿ ನಗರಮುಖವಾಗಿ ಹೋಗಿದ್ದವಲ್ಲ…
ಬಯಲಾದ ಜಾಗಕ್ಕೆ ಶೀಘ್ರ ಬೆಳವಣಿಗೆಯ ಹವಳಿಗೆ, ಸಿಲವಾರ ಮುಂತಾದ ಸಸಿಗಳನ್ನು ನೆಟ್ಟು ಮುಂದೊಮ್ಮೆ ಮತ್ತೆ ಇಲ್ಲಿಯೇ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿದ್ದ ನಮಗೆ ಮತ್ತೊಂದು ಪೆಟ್ಟು!…
ಮಾಮೂಲಿನಂತೆ ಅಂದು ತೋಟ ಪ್ರವೇಶಿಸಿ ನೋಡಿದ ನಮಗೆ ಕಂಡ ದೃಶ್ಯ ಗಾಬರಿ ಹುಟ್ಟಿಸಿತು. ಪಟ್ಟಣದ ಕೆಲ ಜನ ನಮ್ಮ ಹಿಡುವಳಿ ಬಳಸಿದಂತೆ ಕಲ್ಲು ನೆಡುತ್ತಿದ್ದಾರೆ. ಕೆಂಪು ಬಣ್ಣ ಬಳಿದ ಆ ಕಲ್ಲಿನ ಮೇಲೆ ಕೆಪಿಸಿಎಲ್ ಎಂದು ಇಂಗ್ಲಿಷ್ ಅಕ್ಷರೆ ಕೆತ್ತಿದೆ.
ನಮ್ಮ ನಲುಗಿಹೋದ ಬದುಕನ್ನು ಸರ್ವನಾಶ ಮಾಡಲು ಯಾರೋ ದಯ್ಯವನ್ನು ನೆಟ್ಟು ಪೂಜಿಸುತ್ತಿದ್ದಾರೇನೋ ಅನಿಸಿತು ಅವ್ವನಿಗೆ ಎಂದು ತೋರುತ್ತದೆ.
ಹೌಹಾರಿ ಅವರ ಬಳಿ ಹೋದಳು.
‘ಕರೆಂಟ್ ತಯಾರು ಮಾಡಲು ಕೆಳಗೆ ಡ್ಯಾಂ ಕಟ್ಟುತ್ತಾರಂತೆ. ಆ ನೀರಿನಲ್ಲಿ ನಿಮ್ಮ ಜಾಗವೂ ಮುಳುಗಡೆಯಾಗಿ ಹೋಗುತ್ತೆ, ಜಾಗ ಖಾಲಿ ಮಾಡಿ ಅಂತಾ ನೋಟೀಸ್ ಬರುತ್ತೆ ನಿಮಗೆ…’ ಎಂದರು ಅವರು.
ಅವ್ವ ಅಲ್ಲೇ ಕುಸಿದುಬಿದ್ದವಳು ಮತ್ತೆ ಮೇಲೇಳಲಿಲ್ಲ.
ಮತ್ತೆ ಕೆಲ ವರ್ಷ ನಮಗೆಲ್ಲಾ ಆಸರೆಯಾಗಿದ್ದ ಅಪ್ಪ ಒಂದು ದಿನ, ಸೇಂದಿಗಾಗಿ ತಾನೇ ಮಾಡಿಕೊಂಡಿದ್ದ ಎತ್ತರದ ಬೈನೆ ಮರದಿಂದ ಬಿದ್ದು ತಲೆಯೊಡೆದು ಪ್ರಾಣ ಬಿಟ್ಟಿದ್ದರು. ಯಾರೋ ಹೊಟ್ಟೆಕಿಚ್ಚಿಗೆ, ಬೈನೆಗೆ ಕಟ್ಟಿದ್ದ ಏಣಿಯ ತುದಿಯ ಹಂಬನ್ನು ಸಡಿಲ ಮಾಡಿದ್ದರು ಎಂದು ಜನ ಮಾತಾಡಿಕೊಂಡರು. ಆಯ ತಪ್ಪಿ ಬಿದ್ದರು ಎಂದರು ಕೆಲವರು.
ಮೊದಲೇ ಅವರ ಮನಸ್ಸಿನ ಆಯ ತಪ್ಪಿತ್ತು ಎಂಬುದು ನಮ್ಮ ಮನೆಯವರಿಗೆಲ್ಲಾ ಅರಿವಾಗಿತ್ತು.
ಆಗ ತೊರೆದುಹೋದ ಈ ತೋಟ, ನೋಡಿ ಈಗ ಆನೆಗಳಿಗೆ, ಕಾಡೆಮ್ಮೆಗಳಿಗೆ ವಾಸಸ್ಥಾನವಾಗಿದೆ.
ಹತ್ತಾರು ವರ್ಷದಿಂದ ಕಾಯುತ್ತಲೇ ಇದ್ದೇವೆ. ಸರ್ಕಾರದಿಂದ ಪರಿಹಾರವೂ ಇಲ್ಲ, ಡ್ಯಾಂ ಕಟ್ಟಿ ಕರೆಂಟ್ ಉತ್ಪತ್ತಿಯನ್ನೂ ಮಾಡುತ್ತಿಲ್ಲ.
‘ನೀವೇ ಹೇಳಿ ಈಗ, ಬದುಕಿಗೆ ಆ ಒಂದೆಕರೆ ಗದ್ದೆ ನೆಚ್ಚಿಕೊಳ್ಳದೆ ಮತ್ತೇನು ಮಾಡಬೇಕು. ಈ ಹೊತ್ತಿನ ದುಬಾರಿ ಬದುಕನ್ನು ಸರಿದೂಗಿಸಲು ಎಲ್ಲರಂತೆ ನಾವೂ ಕೃಷಿಯೆಂಬ ಜೂಜಾಟದಲ್ಲಿ ತೊಡಗದೆ ಇನ್ನೇನು ಮಾಡಬೇಕು’ ಚಿನ್ನಪ್ಪ ತನ್ನ ಎದುರಿಗಿದ್ದವರಿಗೆ ಪ್ರಶ್ನೆ ಹಾಕಿ ಮಾತು ನಿಲ್ಲಿಸಿದ.
ದನಗಳೆಲ್ಲಾ ಮೇಲೆ ಬಂದು ಎಮ್ಮೆಗುಂಡಿ ತಲುಪಿಯಾಗಿತ್ತು. ‘ಓ ಆಗಲೇ ಸಾಯಂಕಾಲ ಆಯ್ತು. ನೀವು ತೀನ ಕಟ್ಟಿಕೊಂಡು ಹೋಗಿ. ನಾನು ಮತ್ತೆ ಮುಂದಿನ ವಾರ ಬಂದು ಬೇಲಿ ಕಟ್ಟಿಕೊಟ್ಟು ಹೋಗ್ತೀನಿ’ ಎನ್ನುತ್ತಾ ಊರಿಗೆ ಹೋಗಲು ದೇವರ ಬೆಟ್ಟದ ದಾರಿ ಹಿಡಿದ ಸುಬ್ಬಪ್ಪ.
‘ಒಂದೆರಡು ದಿನ ಇರಕೆ ಅಂತ ಬಾರ. ಮೆಣಸಿನ ಗಿಡದ ಪಾತಿನಾದ್ರೂ ಮಾಡಿಕೊಟ್ಟು ಹೋಗಿಯಂತೆ’ ಸೀತೆ ತಮ್ಮನಿಗೆ ಕೂಗಿ ಹೇಳಿದಳು. ‘ಹೂಂ ಹೂಂ ಸರಿ ಕಣಕ್ಕ. ಈ ಸಾರಿ ಬಂದಾಗ ಆ ಕೆಂಪು ಹುಂಜ ಕುಯ್ಯಬೇಕು ಮತ್ತೆ’ ಎನ್ನುತ್ತಾ ಭಾವನ ಕಡೆ ತಿರುಗಿ ‘ದಿನಾ ಆ ಕಾಳಮ್ಮನ ಮನೆಗೆ ಹೋಗಿ ಕೂರಬ್ಯಾಡ ಭಾವ…ನಮ್ಮಕ್ಕ ಪೊರಕೆ ತಗಂಡುಬಿಟ್ಟಾಳು’ ಕಣ್ಣುಮಿಟುಕಿಸಿ ಹೇಳುತ್ತಾ ಕಾಡಿನಲ್ಲಿ ಅಂತರ್ದಾನವಾದ.
–ಹಾಡ್ಲಹಳ್ಳಿ ನಾಗರಾಜ್
ಓದುಗರಿಗೆ ವಿಶೇಷ ಸೂಚನೆ:
ನಿಲುವಂಗಿಯ ಕನಸು… ಈಗ ಪಂಜು ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗುತ್ತಿದೆ. ಖ್ಯಾತ ಸಾಹಿತಿಗಳಾದ ಹಾಡ್ಲಹಳ್ಳಿ ನಾಗರಾಜ್ ಅವರ ಈ ಕಾದಂಬರಿ ಬಹಳಷ್ಟು ಕಾರಣಕ್ಕಾಗಿ ಮುಖ್ಯವಾದುದು. ಇದನ್ನು ವಾರವಾರ ಓದುತ್ತಾ ಹೋದಂತೆ ನಿಮಗೆ ತಿಳಿಯುತ್ತಾ ಹೋಗುತ್ತದೆ. ಇಲ್ಲಿ ಒಂದು ಸಂಗತಿಯಿದೆ. ಕಾದಂಬರಿ ಮುಗಿದ ಮೇಲೆ ಕಾದಂಬರಿಯ ಬಗ್ಗೆ ಅಭಿಪ್ರಾಯಗಳನ್ನು ಓದುಗರಿಂದ ಕೇಳಲಾಗುವುದು. ಓದುಗರಿಂದ ಬಂದ ಅತ್ಯುತ್ತಮ ಅಭಿಪ್ರಾಯಗಳಿಗೆ ಪುಸ್ತಕ ರೂಪದ ಬಹುಮಾನಗಳನ್ನು ನೀಡಲಾಗುವುದು. ಇನ್ ಯಾಕೆ ತಡ… ಒಂದೊಳ್ಳೆ ಕೃತಿ ಓದಿದ ಅನುಭವದ ಜತೆ ಒಂದೊಳ್ಳೆ ಅಭಿಪ್ರಾಯ, ಚರ್ಚೆ… ಜೊತೆಗೆ ಬಹಳಷ್ಟು ಪುಸ್ತಕಗಳ ಬಹುಮಾನ. ಅಭಿಪ್ರಾಯಗಳ ಜತೆ ನಡೆಯೋಣ ಬನ್ನಿ.