ಪ್ರೇಮ ಪತ್ರಗಳು

ನಾನಂತೂ ಆ ಕ್ಷಣ ಯಾವಾಗ ಬರುತ್ತೋ ಅಂತಾ ಕಾಯ್ತಾ ಇದ್ದೀನಿ: ಪರಮೇಶ್ವರಪ್ಪ ಕುದರಿ

ಪ್ರೀತಿಯ ವಿಜಯಾ,

ನಾನಿಲ್ಲಿ ಕ್ಷೇಮ, ನಿನ್ನ ಕ್ಷೇಮದ ಬಗ್ಗೆ ತಿಳಿಯುವ ಹಂಬಲ. ಹೇಗಿದ್ದಿಯಾ ವಿಜು? ಅಂದು ನೀ ನನ್ನಿಂದ ಅಗಲಿದ ಮೇಲೆ ತುಂಬಾ ಹೊತ್ತು ನಿನ್ನದೇ ಧ್ಯಾನ – ನಿನದೇ ನೆನಪು ! ನನ್ನ ಜೀವನದ ಕೊನೆಯವರೆಗೂ ನಿನ್ನನ್ನು ನನ್ನ ಬಾಳ ಸಂಗಾತಿಯಾಗಿ ಪಡೆಯುವ ಪರಮ ಇಚ್ಚೆ ನನಗೆ. ನಮ್ಮಿಬ್ಬರ ಪ್ರೇಮದ ಹಾದಿಗೆ ಅದ್ಯಾರೇ ಅಡ್ಡ ಬಂದರೂ, ನಾನು ಜಯಿಸಿ ನಿನ್ನನ್ನು ಪಡೆದೇ ಪಡೆಯುತ್ತೆನೆ ಎಂಬ ಬಲವಾದ ನಂಬಿಕೆ ನನಗಿದೆ ಚಿನ್ನಾ. ನೀನು ಬಡವಿ ನಾನು ಶ್ರೀಮಂತ ಎಂಬ ಬ್ರಮೆ ನಿನಗೆ ಬೇಡವೇ ಬೇಡ, ನಿಜ ಹೇಳ ಬೇಕೆಂದರೆ ನಿನ್ನ ಹೃದಯ ಶ್ರೀಮಂತಿಕೆಯ ಮುಂದೆ ನಾನು ತುಂಬಾ ಬಡವ ಕಣೆ! ಒಲವೇ ನಮ್ಮಿಬ್ಬರ ಹಾಡಾಗ ಬೇಕು – ಬದುಕಾಗಬೇಕು.

ಅಂದು ನಾನು, ನಿನ್ನನ್ನು ಮೊದಲ ಬಾರಿಗೆ ಭೇಟಿಯಾಗಲು ಬಂದಾಗ ನೀನು ಧರಿಸಿದ್ಧ ಆ ಲಂಗ – ದಾವಣಿಯಲ್ಲಿ ನನಗೆ ಅಪ್ಸರೆಯಂತೆ ಕಂಡಿದ್ದೆ! ಹೌದು, ಆ ಸೂಪರ್ ಟೇಸ್ಟ್ ನ ಚಿತ್ರನ್ನ ನೀನೇ ಮಾಡಿದ್ದಾ? ಅಮ್ಮ ಮಾಡಿದ್ದಾ ? ಪುಟ್ಟ ಬಾಕ್ಸ್ ನಲ್ಲಿ ತಂದಿದ್ದ ಆ ಚಿತ್ರನ್ನ ಸೂಪರ್! ವಿಜಿ, ನನಗೆ ಇಲ್ಲಿ ಒಬ್ಬಂಟಿಯಾಗಿರಲು ತುಂಬಾ ಬೇಸರವಾಗುತ್ತಿದೆ. ಸದಾ ನಿನ್ನ ಆ ಕೆಂದುಟಿಗಳ ಸವಿ ನನ್ನನ್ನು ಕಾಡುತ್ತಿದೆ – ಕೆಣಕುತ್ತಿದೆ! ಏನು ಮಾಡಲಿ ವಿರಹ ವೇದನೆಯನ್ನು ಸಹಿಸಲಾಗುತ್ತಿಲ್ಲ ಕಣೆ. ನಿನಗೆ ನನ್ನ ನೆನಪು ಕಾಡುವುದಿಲ್ಲವೇ? ನನ್ನ ನೆನಪಾದಾಗ ಏನು ಮಾಡುತ್ತಿ? ನಾನಂತೂ ಒಮ್ಮೊಮ್ಮೆ ಅತ್ತೇ ಬಿಡುತ್ತೇನೆ!

“ ನಾನೆಂದೂ ಚೂಡಿದಾರ್ ಹಾಕಿದವಳೇ ಅಲ್ಲ, ನನಗೆ ಅದೆಲ್ಲಾ ಇಷ್ಟ ಆಗೋಲ್ಲ “ ಎಂದು ನೀನು ಅಂದು ಹೇಳಿದಾಗ ನಾನು ಆತಂಕಕ್ಕೆ ಒಳಗಾಗಿದ್ದೆ ಕಣೆ! ಆದರೂ ಅಂದು ನನ್ನ ಒತ್ತಾಯಕ್ಕೆ ಮಣಿದು ನೀನು ಚೂಡಿದಾರ್ ಧರಿಸಿದ್ದೆ, ಅದೇ ಡ್ರೆಸ್ಸಲ್ಲಿ ನಾವಿಬ್ಬರೂ ಒಂದು ಮದುವೆಗೂ ಕೂಡಾ ಹೋಗಿದ್ದೆವು. ನೀನಂತೂ ಆ ಮದುವೆ ಮುಗಿಸಿ ಬರುವವರೆಗೂ ಸಂಕೋಚದ ಮುದ್ದೆಯಾಗಿದ್ದೆ ಏಕೆ? ನಿಜ ಹೇಳ್ತೀನಿ ವಿಜಿ, ಚೂಡಿದಾರಲ್ಲಿ ನೀನು ಅಪ್ಸರೆಯಂತೆ ಗೋಚರಿಸಿದ್ದೆ! ಅಂದು ನಾವಿಬ್ಬರೂ ತೆಗೆಸಿದ ಆ ಭಾವಚಿತ್ರ ಇಂದಿಗೂ ನನಗೆ ನಿತ್ಯ ನೂತನ.

ಭಯ ಪಡಬೇಡ, ಹೇಗಿದ್ದರೂ ನನಗೆ ಸರ್ಕಾರಿ ಕೆಲಸ ಇದೆ, ನಿನ್ನನ್ನು ಮದುವೆ ಆಗೇ ಆಗ್ತೀನಿ,ಯಾವುದಕ್ಕೂ ನನ್ನ ಮೇಲೆ ಅಪನಂಬಿಕೆ ಬೇಡ ಕಣೆ, ನೀನೆ ನನ್ನ ಒಲವ ಸಾಮ್ರಾಜ್ಯದ ಒಡತಿ… ನನ್ನ ಶ್ರೀಮತಿ ! … ವಿಜು, ನನಗೆ ಆಡಂಬರದ ಮದುವೆಗಳಲ್ಲಿ ನಂಬಿಕೆ ಇಲ್ಲ , ನಿನ್ನನ್ನು ಒಂದು ದೇವಸ್ಥಾನದಲ್ಲಿ ಸರಳ ವಿವಾಹ ಆಗುವ ಇಚ್ಚೆ ನನಗೆ. ಅಲ್ಲಿ ನೀನು ನಾನು, ನಿಮ್ಮ ಅಮ್ಮ, ನಮ್ಮ ಅಪ್ಪ – ಅಮ್ಮ, ನನ್ನ ಸಹೋದರರು…ಆಯ್ದ ಸ್ನೆಹಿತರು ಮಾತ್ರ ಇರಬೇಕು ಕಣೆ. ಏನಂತಿಯಾ? ನಾನಂತೂ ಆ ಕ್ಷಣ ಯಾವಾಗ ಬರುತ್ತೋ ಅಂತಾ ಕಾಯ್ತಾ ಇದ್ದೀನಿ. ಒಂದು ಪುಟ್ಟ ಮನೆ….ಅಲ್ಲಿ ನೀನು – ನಾನು , ನಮ್ಮ ಎರಡು ಮುದ್ದಾದ ಮಕ್ಕಳು.. ಓಡಾಡಿಕೊಂಡಿರಬೇಕು.

ವಿಜಿ, ನನಗಂತೂ ನಿನ್ನ ಹಾಗೆ ಮುದ್ದಾದ ಹೆಣ್ಣು ಮಗುವೊಂದು ಬೇಕೇ ಬೇಕು ಮೊದಲೇ ಹೇಳಿದೀನಿ ಕಣೆ! ನೀನು ಮದುವೆಯ ನಂತರ ಓದು ಮುಂದುವರೆಸುತ್ತೇನೆ ಅಂತ ಹೇಳಿದ್ದೀಯ…. ನನಗಂತೂ ಆಗ ನಿನ್ನ ಬಗ್ಗೆ ತುಂಬಾ ಹೆಮ್ಮೆ ಎನ್ನಿಸಿತು. ಮದುವೆ ಆದರೆ ಬದುಕೇ ಮುಗಿಯಿತು ಎನ್ನುವವರ ನಡುವೆ ನೀನು ಭಿನ್ನ ಕಣೆ! ಖಂಡಿತಾ ನಿನ್ನಿಚ್ಚೆಯಂತೆಯೆ ಆಗಲಿ ಓದು, ನಿನ್ನ ಕನಸಿನ ಟೀಚರ್ ಗೆ ಮತ್ತೆ ಜೀವ ಬರಲಿ! ನೀನೊಬ್ಬ ಆದರ್ಶ ಶಿಕ್ಷಕಿಯಾಗೇ ಆಗುತ್ತಿ ಎಂಬ ವಿಶ್ವಾಸ ನನಗಿದೆ ಕಣೆ. ಏಕೆಂದರೆ ನೀನು ಅಂದಗಾರ್ತಿಯಷ್ಟೇ ಅಲ್ಲ, ಕನಸುಗಾರ್ತಿಯೂ ಹೌದು ಕಣೆ! ನಿನ್ನ ಕನಸುಗಳನ್ನೆಲ್ಲ ಖಂಡಿತ ನನಸು ಮಾಡಿಸುತ್ತೇನೆ ನನ್ನ ನಂಬು ಅಷ್ಟೇ ಸಾಕು.

ಅಂದ ಹಾಗೆ ವಿಜಿ, ನೀನು ಹಳ್ಳಿ ಮಣ್ಣಲ್ಲಿ ಬಿರಿದ ಮಲ್ಲಿಗೆ ಕಣೆ! ನಿನ್ನ ನಡೆ-ನುಡಿ ನನಗೆ ತುಂಬಾ ಇಷ್ಟ. ಅದರಲ್ಲೂ ನಿನ್ನ ವಯ್ಯಾರದ ಆ ನಡಿಗೆಯಂತೂ ಸೂಪರ್. ನಾನು ಫಿದಾ ಆಗಿದ್ದೇ ಆ ನಿನ್ನ ನಡಿಗೆಗೆ… ಆ ಸುಂದರ ನಗುವಿಗೇ ಕಣೆ! ಸದಾ ನಿನ್ನ ಜೊತೆ ಇರಬೇಕು… ನಿನ್ನನ್ನು ಚುಡಾಯಿಸುತ್ತಾ, ಸತಾಯಿಸುತ್ತಾ ಇರಬೇಕು, ನೀನು ಕೋಪ ಮಾಡಿಕೊಂಡ ಆ ಮುಖ ನೋಡಬೇಕು ಅನ್ನೋ ಆಸೆ ಕಣೆ. ಯಾಕಂದ್ರೆ ನೀನು ಕೋಪಿಸಿಕೊಂಡಾಗಲೂ ಮುದ್ದು ಮುದ್ದಾಗಿ ಕಾಣ್ತೀಯಾ ಕಣೆ! ಒಂದೊಂದು ಸಾರಿ ನೀನು ಓವರ್ ಮೇಕಪ್ ಮಾಡಿಕೊಂಡಾಗ ನನಗೆ ನಗು ಬರುತ್ತದೆ. ಅಲ್ಲಾ ಕಣೆ ನೀನು ಸಹಜ ಸುಂದರಿ, ಸಹಜವಾಗಿ ಸುಂದರವಾಗಿರೋ ಕಾಡು ಮಲ್ಲಿಗೆಗೆ ಬಾಡಿಗೆ ಅಲಂಕಾರ ಯಾಕೆ ಬೇಕು ಹೇಳು ವಿಜಿ !

ವಿಜಿ, ಅಂದು ನಾನು ನೀನು ಬೆಂಗಳೂರಲ್ಲಿ ಒಂದು ವ್ಯಾನ್ ಲ್ಲಿ ಹೋಗುವಾಗ, ಕೆಲವು ಹುಡುಗಿಯರು ನನ್ನನ್ನೇ ನೋಡುತ್ತಿರುವುದನ್ನು ಗಮನಿಸಿದೆ. ಒಬ್ಬಳಂತೂ ನನಗೆ ಅಂಟಿಕೊಂಡು ನಿಂತಾಗಲಂತೂ ನಿನ್ನಿಂದ ಸಹಿಸಿಕೊಳ್ಳಲಾಗಲಿಲ್ಲ ಅವಳ ಜೊತೆ ನಿನ್ನ ಧಾರ್ವಾಡ್ ಭಾಷೆಯಲ್ಲಿ ಬಯ್ಯುತ್ತ ಜಗಳಕ್ಕೇ ನಿಂತು ಬಿಟ್ಟೆ! ನನಗಂತೂ ಆಗ ನಿನ್ನ ನೋಡಿ ನಗೆಯೂ ಬಂತು ಹಾಗೆ ನಿನ್ನ ಪ್ರೇಮವನ್ನು ಕಂಡು ಅಭಿಮಾನವೂ ಆಯ್ತು ಕಣೆ! ನನ್ನನ್ನು ಯಾವ ಹೆಣ್ಣೂ ನೋಡಬಾರದು, ನಾನು ನಿನ್ನವನು ಮಾತ್ರ ಆಗಿರಬೆಕು ಎಂಬ ನಿನ್ನ ಮನದಿಚ್ಚೆ ಅಂದೆ ಅರಿವಾಯಿತು ನನಗೆ!

ಇರಲಿ ವಿಜಿ, ನನಗೆ ನಿದ್ದೆ ಬರ್ತಾ ಇದೆ. ನಿನ್ನ ನೆನೆಪಿನೊಂದಿಗೆ ಕಣ್ಣು ಮುಚ್ಚುತ್ತೇನೆ. ದಯವಿಟ್ಟು ಕನಸಿಗೆ ಬಾ. ಅಲ್ಲಿ ಇಬ್ಬರೂ ಒಂದಾಗುತ್ತ ಕನಸುಗಳನ್ನು ಕಟ್ಟೋಣ!

ಒಲವುಗಳೊಂದಿಗೆ
ನಿನ್ನ ಭಾಸ್ಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.