ಲೇಖನ

ಹದಿಹರೆಯದ ಮಕ್ಕಳು ಮತ್ತು ಪೋಷಕರು: ಪ್ರವೀಣ ಶೆಟ್ಟಿ, ಕುಪ್ಕೊಡು

ದೃತಿ ಯಾಕೋ ತುಂಬಾ ಕಾಡ್ತಾ ಇದ್ದಾಳೆ. ಹೌದು ದೃತಿ “ದ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ನ ಮುಖ್ಯ ಪಾತ್ರಧಾರಿ ಶ್ರೀಕಾಂತ್ ತಿವಾರಿಯ ಮಗಳು. ತಂದೆ – ತಾಯಿ ಇಬ್ಬರೂ ತಮ್ಮ ತಮ್ಮ ಕೆಲಸಗಳ ನಡುವೆ ಬ್ಯೂಸಿಯಾಗಿರುವಾಗ ಮಕ್ಕಳ ಮೇಲೆ ಗಮನ ಕಡಿಮೆಯಾಗಿ ಮಕ್ಕಳು ಕೆಟ್ಟ ಹಾದಿ ತುಳಿದರೂ ತಂದೆ ತಾಯಿಗೆ ಅದರ ಬಗ್ಗೆ ಕಿಂಚಿತ್ತೂ ಗಮನವಿರುವುದಿಲ್ಲ. ಮಗಳು ಬಾಯ್ ಫ್ರೆಂಡ್ ಎಂದು ಅಲೆಯುತ್ತಿರುವಾಗಲೂ, ಓದುವುದನ್ನು ಬಿಟ್ಟು ಇಡೀ ದಿನ ಮೊಬೈಲ್ ನಲ್ಲಿ ಚಾಟಿಂಗ್ ಮಾಡುವುದನ್ನೂ ಹೆತ್ತವರು ಗಮನಿಸುವುದಿಲ್ಲ. ಕೊನೆಗೊಂದು ದಿನ ಟರರಿಸ್ಟ್ ಗಳ ಕೈಗೆ ಸಿಕ್ಕು ಕಿಡ್ನಾಪ್ ಆದಾಗಲೇ ಅವರಿಗೆ ಅರಿವಾಗಿದ್ದು ಬೇರೆ ಕಥೆ.

ಇದು ಕೇವಲ ಧಾರಾವಾಹಿ ಅಥವಾ ಸಿನಿಮಾಗಳಿಗಷ್ಟೇ ಸಂಬಂಧಿಸಿದ ಸಮಸ್ಯೆಯಲ್ಲಾ. ಇತ್ತೀಚೆಗೆ ಮಕ್ಕಳ ಅಪ್ಪ -ಅಮ್ಮ ಇಬ್ಬರೂ ದುಡಿಯುವವರಾದರೆ ಅವರವರ ಕೆಲಸ ಮಾಡಿಕೊಳ್ಳುವುದೇ ದೊಡ್ಡದಾಗಿರುವಾಗ ಮಕ್ಕಳ ಚಿಂತೆ ಯಾರಿಗೆ. ಈಗಿನ ಎಷ್ಟೋ ಸಂಸಾರಗಳಲ್ಲಿ ಗಂಡ ಹೆಂಡತಿಯರೂ ಇಬ್ಬರೂ ದುಡಿಯುವಾಗ ಹೆಂಡತಿ ಆಫೀಸಿನಲ್ಲೂ ಕೆಲಸಮಾಡಿ ಮತ್ತು ಮನೆಗೆ ಬಂದು ಅಡುಗೆ, ಮಕ್ಕಳ ಹೊಮ್ ವರ್ಕ್ ಇದನ್ನು ಮಾಡಿಸಬೇಕಾಗಿ ಬಂದಾಗ ಬೇಡವೆಂದರೂ ವೈಮನಸ್ಯ ಮೂಡುತ್ತದೆ. ಇದು ಗಂಡ ಹೆಂಡಿರ ಜಗಳಕ್ಕೂ ಕಾರಣವಾಗುತ್ತದೆ.

ಆದರೆ ಮಕ್ಕಳ ತಂದೆ-ತಾಯಿ ತಾವೆಷ್ಟು ಬ್ಯೂಸಿಯಾಗಿದ್ದರೂ ಮಕ್ಕಳ ಚಲನವಲನ ಹಾಗೂ ಮಕ್ಕಳ ಮೊಬೈಲ್ ಚಟುವಟಿಕೆಗಳ ಮೇಲೆ ಗಮನ ಇಡಲೇಬೇಕು. ಕಡಿಮೆ ಪಕ್ಷ ಅವರ ಸ್ನೇಹಿತರು ಯಾರು, ಯಾರೊಂದಿಗೆ ಹೆಚ್ಚು ಮಾತನಾಡುತ್ತಿರುತ್ತಾರೆ, ಯಾರೊಂದಿಗೆ ಸುತ್ತಾಡುತ್ತಾರೆ ಅನ್ನುವ ಒಂದು ಕಣ್ಣಿಟ್ಟಿರಬೇಕು.

ನಮ್ಮ ಪರಿಚಯದವರು ಹೇಳುತ್ತಿದ್ದರು ನನ್ನ ಮಗಳು ಹಗಲು ರಾತ್ರಿ ಎನ್ನದೆ ಓದುತ್ತಾಳೆ, ರೂಮಿನ ಹೊರಗೆ ಬಂದರೆ ಅದೂ ಊಟಕ್ಕೆ. ಆ ಹುಡುಗಿ ಇದೀಗ ನಾ ಹೆಚ್ಚಿಗೆ ಓದಬೇಕು ನನಗೆ ನಾನು ಅಮೇರಿಕಾಕ್ಕೆ ಹೋಗಿ ನನ್ನ ವಿಧ್ಯಾಭ್ಯಾಸ ಮುಂದುವರೆಸುವೆ, ನನಗೆ ಮೂವತ್ತು ಲಕ್ಷ ಹಣ ಕೊಡಿ ಎಂದು ತಂದೆ ತಾಯಿನ್ನು ಪುಲಾಯಿಸುತ್ತಿದ್ದಾಳೆ. ಆದರೆ ಅದೇ ಹುಡುಗಿಯ ವಿಟಿಯೂ ಪಲಿತಾಂಶ ನೋಡಿದರೆ ಐದನೇ ಸೆಮಿಸ್ಟರ್ ನಲ್ಲಿ ಎರಡು ಮತ್ತು ಏಳನೇ ಸೆಮೆಸ್ಟರ್ ನಲ್ಲಿ ಮೂರರಲ್ಲಿ ಬ್ಯಾಕ್ ಇದೆ. ಈ ವಿಷಯ ಅವಳ ತಂದೆ ತಾಯಿಗೆ ಗೊತ್ತಿಲ್ಲಾ.‌ಈಗ ಹೇಳಿ ಈ ಹುಡುಗಿ ತಂದೆ ಹತ್ತಿರ ಮೂವತ್ತು ಲಕ್ಷ ಕೇಳುತ್ತಿರುವ ಉದ್ದೇಶವಾದರೂ ಏನಿರಬಹುದು!

ಮಕ್ಕಳನ್ನು ಕಣ್ಣಿನಲ್ಲಿ ಕಣ್ಣಿಟ್ಟು ಕಾಯಬೇಕಂತೇನು ಇಲ್ಲಾ. ಅವರಿಗೆ ಸಾಮಾಜೀಕ ಸ್ವಾತಂತ್ರ್ಯ ಕೊಡಿ ಅಕ್ಕ ಪಕ್ಕದ ಮಕ್ಕಳೊಂದಿಗೆ ಬೆರೆಯಲು ಬಿಡಿ, ಅವರ ದಿನಚರಿ ಬಗ್ಗೆ ಮುಕ್ತವಾಗಿ ಚರ್ಚಿಸಿ, ಅವರ ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳನ್ನು ಗಮನಿಸುತ್ತಿರಿ. ಬೆಳೆದ ಮಕ್ಕಳನ್ನು ಸ್ನೇಹಿತರಂತೆ ನೋಡಿ. ಇಷ್ಟಾಗಿಯೂ ದಾರಿ ತಪ್ಪುತ್ತಿದ್ದಾರೆಂದರೆ ಕುಳಿತು ತಾಳ್ಮೆಯಿಂದ ಬುದ್ದಿ ಹೇಳಿ. ಯಾಕೆಂದರೆ ಈಗಿನ ಮಕ್ಕಳು ತುಂಬಾ ಸೂಕ್ಷ್ಮ ಸ್ವಲ್ಪ ಬೈದರೂ ಸಾಕು ಜೀವಕ್ಕೆ ಕುಂದು ತಂದು ಕೊಳ್ಳುವ ಅದೆಷ್ಟೋ ದೃಷ್ಟಾಂತ ನಮ್ಮ ಮುಂದಿವೆ.

ಚಿಕ್ಕವರಿಂದಲೇ ಹೆತ್ತವರ ಕಷ್ಟನಷ್ಟಗಳ ಬಗ್ಗೆ ಅನುಭವ ಮಾಡಿಸಿ. ಅವರು ಕೇಳಿದ್ದನ್ನೆಲ್ಲಾ ಕೊಡಿಸಬೇಕೆಂದೇನು ಇಲ್ಲಾ. ಯಾವುದು ಅವಶ್ಯಕ ಅದನ್ನು ಮಾತ್ರ ಕೊಡಿಸಿ. ಬೆಳೆದಂತೆ ಅವರೂ ಅರಿತುಕೊಳ್ಳುತ್ತಾರೆ. ಮಕ್ಕಳನ್ನು ಪ್ರೀತಿಸಿ, ನಿಷ್ಕಲ್ಮಷವಾಗಿ ಪ್ರೀತಿಸುವುದನ್ನು ತೋರಿಸಿಕೊಡಿ. ಹೆತ್ತವರು ನಿಸ್ವಾರ್ಥ ಪ್ರೀತಿಯಿಂದ ನಡೆದುಕೊಂಡರೆ, ಇದು ಮಕ್ಕಳಲ್ಲೂ ತಮ್ಮ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುತ್ತದೆ. ಅದೆಷ್ಟೋ ಜಟಿಲ ಸಮಸ್ಯೆಗಳನ್ನು ಪ್ರೀತಿಯಿಂದ ಬಗೆಹರಿಸಬಹುದಾದುದರಿಂದ, ಅದು ಸಂಬಂಧಗಳನ್ನು ಸುಮಧುರಗೊಳಿಸ್ತದೆ.

-ಪ್ರವೀಣ ಶೆಟ್ಟಿ, ಕುಪ್ಕೊಡು


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *