ಕಥಾಲೋಕ

ನಾ ಕಂಡಂತೆ: ಶೀತಲ್

ನಾನು ಈ ಮನೆಗೆ ಬಂದು ಈಗ ನಾಲ್ಕು ವರ್ಷವಾಯಿತು. ಮನೆಯೆಂದರೆ ಅಬ್ಬಾ! ಇವರ ಮನೆಯಂತೆ ಯಾವ ಮನೆಯೂ ಇಲ್ಲ ಆ ಲೇಔಟ್ ನಲ್ಲಿ ಎಂದು ಆಗಾಗ ಕೆಲಸದಾಕೆ ಸುಗುಣ ಮನೆಯೊಡತಿ ವೈದೇಹಿ ಯವರ ಬಳಿ ಹೇಳುವುದನ್ನು ಕೇಳಿದ್ದೇನೆ. ಇವರ ಮನೆಯಲ್ಲದೆ ನಾನು ಯಾವ ಮನೆಗೂ ಹೋಗುವ ಹಾಗಿಲ್ಲವಲ್ಲ ಹಾಗಾಗಿ ನನ್ನ ಸ್ವಂತ ಅಭಿಪ್ರಾಯವಲ್ಲ ಇದು. ಇವರ ಮನೆಯಿಂದ ಎದುರು ಕಾಣುವ ಎರಡು ಮನೆಗಳು, ಹಾಗೆ ಬಲಗಡೆಗೆ, ಇವರ ಮನೆಯ ಹೂದೋಟ ದಾಟಿದರೆ ಕಾಣುವ ಮನೆ ಕೂಡ ಇವರ ಮನೆಗೆ ಹೋಲಿಸಿದರೆ ಸಣ್ಣದು, ಹಾಗಾಗಿ ಈ ರೀತಿ ಹೇಳುವರೋ ಗೊತ್ತಿಲ್ಲ . ಮನೆಯ ಹೆಸರನ್ನು ಗಂಡ ಹೆಂಡತಿಯರ ಹೆಸರುಗಳನ್ನು ಸೇರಿಸಿ ಇಟ್ಟಿದ್ದು, ಎಂದು ವೈದೇಹಿ ಅಂದು ಬಂದ ಎರಡನೇ ಮಗನ ಕೆಲವು ಸ್ನೇಹಿತರ ಬಳಿ ಹೇಳುವುದನ್ನು ಕೇಳಿದ್ದೆ. ಮನೆಯ ಹೆಸರು ಏನಿರಬಹುದೆಂದು ಯೋಚಿಸುತ್ತಿದ್ದೀರಾ?

ಹೇಳ್ತಿನಿ, “ಕ ವೈ ವಿಲ್ಲಾ ” ಅಂತ. ಕರಣ್ ರಾವ್ ಹಾಗು ವೈದೇಹಿ ರಾವ್ ಅವರ ಸುಂದರವಾದ, ವಿಶಾಲವಾದ ಮನೆ.
ಡಾ। ಕರಣ್ ರಾವ್ ಹೆಸರಾಂತ ಮಕ್ಕಳ ತಜ್ನ್ಯ, ವೈದೇಹಿ ಮನಃ ಶಾಸ್ತ್ರ ಹೇಳಿಕೊಡುವ ಕಾಲೇಜ್ ಪ್ರೊಫೆಸ್ಸರ್. ಇವರಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳು ಅಮೋಘ್ ರಾವ್ ಹಾಗು ಅರ್ನವ್ ರಾವ್ ಅಂತ . ಒಂದು ನಾಯಿಯೂ ಇದೆ ಇವರೊಂದಿಗೆ, ಹೆಸರು ಡೇವಿಸ್ ಅಂತ. ಅವನದು ಗೋಲ್ಡನ್ ರಿಟ್ರೀವರ್ ಬ್ರೀಡ್ ಎಂದು ಹೇಳಿದ್ದು ಕೇಳಿದ್ದೇನೆ . ಬಹಳ ತುಂಟ ಅವನು. ಕೆಲವೊಮ್ಮೆ ನನ್ನನ್ನು ನೆಕ್ಕಲು ಜಿಗಿಯುತ್ತಿರುತ್ತಾನೆ. ಪಾಪ! ನಾಲಿಗೆಗೆ ಸಿಗದೆ ಯಾವಾಗಲೂ ಹತಾಶೆಯೊಂದಿಗೆ ಬಾಲ ಮುದುಡಿ ಹಿಂದಿರುಗುತ್ತಾನೆ. ಈಗ ಈ ಮನೆಯನ್ನು ಮಾರುತ್ತಾರಂತೆ, ಇಂದು ಬೆಳಿಗ್ಗೆ ಕರಣ್ ವೈದೇಹಿಗೆ ಹೇಳುತ್ತಿದ್ದರು. ಇವರಿಲ್ಲದೆ ಈ ಮನೆಯಲ್ಲಿ ನಾನಿರುವುದನ್ನು ಯೋಚಿಸಿ ಏನೋ ಒಂದು ರೀತಿಯ ಬೇಸರ. ನಾಲ್ಕೇ ವರ್ಷಗಳಾದರೂ ನಾನು ಮೊದಲು ಬಂದಾಗಿನ ಕುಟುಂಬ ಇವರದು. ಇಂದೇಕೋ ನನಗೆ ಕೆಲವು ನೆನಪುಗಳು ಬಂದು ಹೋಗುತ್ತಿವೆ, ಅದೂ ಕನಸಿನಂತೆ. ಏಕೋ ಗೊತ್ತಿಲ್ಲ ಆ ಚಿತ್ರಗಳು ತುಂಬಾ ಗೊಂದಲ ಉಂಟು ಮಾಡುತ್ತಿದೆ ಮನಸಿನಲ್ಲಿ. ಅದಕ್ಕೆ ನಿಮ್ಮ ಬಳಿ ನನ್ನ ಕಥೆಯನ್ನು ಹೇಳುವ ನಿರ್ಧಾರ ಮಾಡಿದ್ದು. ಈ ಮನೆಯಲ್ಲಿ ಏನು ನಡೆದರೂ ನನಗೆ ಗೊತ್ತಾಗದೆ ಇರುವುದಿಲ್ಲ. ಕೆಲವೊಮ್ಮೆ ಅಮೋಘ್(೨೨ ವರ್ಷ), ಅರ್ನವ್(೧೭ ವರ್ಷ) ಮಧ್ಯರಾತ್ರಿ ಐಸ್ ಕ್ರೀಮ್ ಕದ್ದು ತಿನ್ನುವುದರಿಂದ ಹಿಡಿದು ವೈದೇಹಿ ಕರಣ್ ರವರ ನಡುವೆ ನಡೆವ ಡೈನಿಂಗ್ ಹಾಲಿನ ಪ್ರೇಮ ಸಲ್ಲಾಪಗಳು ಕೂಡ ನನಗೆ ತಿಳಿದಿದೆ. ಆದರೆ ಯಾವುದೋ ಒಂದು ಸನ್ನಿವೇಶ ಮಾತ್ರ ನನ್ನ ಮನಸ್ಸಿನ ಪುಟದಿಂದ ಅಳಿಸಿ ಹೋದಂತೆ ಭಾಸವಾಗುತ್ತಿದೆ ಇಂದು.

ಇಂದಿನಿಂದ ಸರಿಯಾಗಿ ಒಂದು ತಿಂಗಳ ಹಿಂದೆ ಅರ್ನವ್ ನ ಹುಟ್ಟುಹಬ್ಬವಿತ್ತು ಹದಿನೇಳನೇ ವಯಸ್ಸಿಗೆ ಕಾಲಿಡುವ ಸಂಭ್ರಮದಲ್ಲಿದ್ದ ಅವನು. ತನ್ನ ಎಲ್ಲಾ ಸ್ನೇಹಿತರನ್ನು,ಅವನ ಸಾಯಂಕಾಲದ ಪಾರ್ಟಿಗೆ ಕರೆದಿದ್ದ. ಮೈಥಿಲಿಯನ್ನು ಕೂಡ. ಈ ಮೈಥಿಲಿ ಯಾರೆಂದರೆ, ಅರ್ನವ್ ನ ಬಹಳ ಹತ್ತಿರದ ಸ್ನೇಹಿತೆ, ಅವನು ಅವಳೊಂದಿಗೆ ರಾತ್ರಿಗಳಲ್ಲಿ ಒಮ್ಮೊಮ್ಮೆ ಮಾತನಾಡುವುದನ್ನು ನಾನು ನೋಡಿದ್ದೇನೆ. ಒಬ್ಬರನೊಬ್ಬರು ಪ್ರೀತಿಸುತ್ತಿದ್ದರೋ ಗೊತ್ತಿಲ್ಲ ಆದರೆ ಇಬ್ಬರ ಜೋಡಿ ಬಹಳ ಸುಂದರವಾಗಿತ್ತು ಎನಿಸುತಿತ್ತು ನನಗೆ. ಅಂದು ಆ ಪಾರ್ಟಿಗೆ ಅವಳೂ ಬಂದಿದ್ದಳು. ನೀಲಿ ಬಣ್ಣದ ವಸ್ತ್ರದಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದಳು. ಪಾರ್ಟಿ ಬಹಳ ಜೋರಾಗಿಯೇ ನಡೆಯಿತು.ಪಾರ್ಟಿ ಮುಗಿಸಿ ಎಲ್ಲರೂ ತಮ್ಮ ತಮ್ಮ ಮನೆಗೆ ತೆರಳಿದ್ದರು, ಅವಳು ಮಾತ್ರ ಅರ್ನವ್ ನ ಅಪೇಕ್ಷೆಯ ಮೇರೆಗೆ ಇವರ ಮನೆಯಲ್ಲೇ ಇದ್ದಳು. ರಾತ್ರಿ ಎಲ್ಲರೂ ಅಂದರೆ ಕರಣ್, ವೈದೇಹಿ, ಅರ್ನವ್, ಅಮೋಘ್, ಮೈಥಿಲಿ ಒಟ್ಟಿಗೆ ಕುಳಿತು ಡೈನಿಂಗ್ ರೂಮ್ನಲ್ಲಿ ಹರಟೆ ಹೊಡೆದು ಅವರವರ ಕೋಣೆಗೆ ತೆರಳಿದ್ದರು. ಮಥಿಲಿಯನ್ನು ವೈದೇಹಿ ಗೆಸ್ಟ್ ರೂಮಿನಲ್ಲಿ ಬಿಟ್ಟು ಅವಳ ಕೋಣೆಗೆ ತೆರಳಿದ್ದಳು. ಆ ದಿನ ರಾತ್ರಿ ಯಿಂದ ಈ ದಿನದ ವರೆಗಿನ ನೆನಪು ನನಗೆ ಬರುತ್ತಿಲ್ಲ. ಬಂದರೂ ಮಾಸಿದ ಕನ್ನಡಿಯೊಳಗೆ ಕಂಡಂತೆ. ಎಲ್ಲಾ ಅಸ್ಪಷ್ಟ. ಯಾರ ಬಳಿಯಾದರೂ ಮಾತನಾಡಿದರೆ ಸ್ವಲ್ಪ ಮನಸ್ಸು ಹಗುರವಾಗಿ ಏನಾದರೂ ನೆನಪು ಬರಬೊಹುದಾ ಅಂತ ನಿಮ್ಮ ಬಳಿ ಮಾತನಾಡುತ್ತಿದ್ದೇನೆ. ಇಂದು ನಡೆದ ಒಂದು ಸನ್ನಿವೇಶ ತುಂಬಾನೇ ಅನುಮಾನ ಉಂಟು ಮಾಡುತ್ತಿದೆ ನನಗೆ.

ಪೊಲೀಸರು ಬಂದಿದ್ದರು ಇಲ್ಲಿಗೆ ಸುಮಾರು ಬೆಳಿಗ್ಗೆ ಹನ್ನೊಂದು ಘಂಟೆಗೆ. ಬಾಗಿಲಲ್ಲಿ ನಿಂತು ” ಮತ್ತೇನಾದರೂ ಗೊತ್ತಾದಲ್ಲಿ ನಿಮಗೆ ತಿಳಿಸುತ್ತೇವೆ ಡಾ । ಕರಣ್ “. ಎಂದು ಹೊರನಡೆದಿದ್ದರು. ಬೆಳೆಗ್ಗೆ ನಾನು ಕಣ್ಣು ಬಿಟ್ಟಾಗಿನಿಂದ ನೋಡಿದಂತೆ ಕುಟುಂಬದ ಎಲ್ಲಾ ಮಂದಿ ಮನೆಯಲ್ಲೇ ಇದ್ದಾರೆ, ಡೇವಿಸ್ ಕೂಡ ನನ್ನ ಬಳಿ ಬಂದಿದ್ದ ಎಂದಿನಂತೆ ನೆಕ್ಕಲು ಆದರೂ ಪೊಲೀಸ್ ಹೇಳಿದ ವಿಚಾರ ಯಾರ ಬಗ್ಗೆ ಎನ್ನುವುದು ಮಾತ್ರ ತಿಳಿದಿರಲಿಲ್ಲ. ಎಂದಿನಂತೆ ಸಾಯಂಕಾಲ ಮನೆ ಮಂದಿಯೆಲ್ಲಾ ಚಹಾ ಕುಡಿಯುತ್ತಾ ಕುಳಿತಿದ್ದರು. ಒಂದು ರೀತಿಯ ಮೌನ, ನಗುತಿತ್ತು ಅವರ ನಡುವೆ. ” ಅಮ್ಮಾ, ಮೈಥಿಲಿ ಯನ್ನು ತುಂಬಾ ಮಿಸ್ ಮಾಡ್ಕೋತಿದೀವಿ ನಮ್ಮ ಕ್ಲಾಸ್ನಲ್ಲಿ ಎಲ್ಲರೂ. ಒಂದು ತಿಂಗಳಾಯಿತು ಅವಳನ್ನು ನೋಡಿ ನನ್ನ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಬೆಳಿಗ್ಗೆ ನಡೆದವಳು ಇಂದಿನವರೆಗೂ ಸ್ಕೂಲ್ಗೆ ಬಂದಿಲ್ಲ.

ಪೊಲೀಸ್ ಕಂಪ್ಲೇಂಟ್ ಕೊಟ್ಟರೂ ಏನೂ ಉಪಯೋಗ ಇಲ್ವಲಮ್ಮ. ಅನಾಥೆ ಅನ್ನೋ ಕಾರಣಕ್ಕೆ ಯಾರು ವಿಚಾರಿಸುತ್ತಾನೂ ಇಲ್ಲ. ನಿನ್ನ ಬಳಿ ಬೆಳೆಗ್ಗೆ ಹೊರಡುವಾಗ ಏನು ಹೇಳಿದಳಮ್ಮ?” ಎಂದು ಕೇಳಿದ ಅರ್ನವ್. ಇದನ್ನು ಕೇಳುತ್ತಿದ್ದಂತೆಯೇ ನನ್ನ ಹೃದಯ ಒಮ್ಮೆ ಭೂಮಿಯ ಕೆಳಗೆ ಹೋದಂತಾಯಿತು. ಮೈಥಿಲಿ ಕಾಣುತ್ತಿಲ್ಲವೇ? ಏನಿದು ಎಂದು ನಾನು ಯೋಚಿಸುತ್ತಿರುವಾಗಲೇ ವೈದೇಹಿ, ” ಅರು, ನನ್ನ ಬಳಿ ಏನೂ ಹೇಳಲಿಲ್ಲ ಕಣೋ ಅವಳು. ಪಿ ಜಿ ಗೆ ಹೋಗಿ ರೆಡಿ ಆಗ್ತೀನಿ ಅಂದ್ಲು ಅಷ್ಟೇ “. ಎಂದು ಹೇಳಿ ಟೀ ಕಪ್ಪನ್ನು ಪುನಃ ಬಾಯಿಗೆ ಅಂಟಿಸಿದರು.

“ಏನೋಮ್ಮ, ಶಿ ವಾಸ್ ಎ ವೆರಿ ಸ್ಮಾರ್ಟ್ ಅಂಡ್ ಬ್ಯುಟಿಫುಲ್ ಅಂಡ್ ಕೈಂಡ್ ಗರ್ಲ್. ಅಂಡ್ ಐ ರಿಯಲಿ ಲೈಕ್ಡ್ ಹರ್ ” ಎಂದು ಹೇಳಿ ಸಪ್ಪೆ ಮುಖದೊಂದಿಗೆ ಸೀದಾ ತನ್ನ ರೂಮಿಗೆ ಹೋದ.
” ವೈದು, ಏನಿದು ಅರು ಅವಳನ್ನ ತುಂಬಾನೇ ಹಚ್ಚಿ ಕೊಂಡಿದ್ದ ಅನ್ಸತ್ತೆ. ಸ್ಟಿಲ್ ಹೀ ಟಾಕ್ಸ್ ಅಬೌಟ್ ಹರ್ ” ಎಂದರು ಕರಣ್.
” ಐ ವಿಲ್ ಹ್ಯಾಂಡಲ್ ಹಿಮ್ ಕರಣ್, ಅದಿಕ್ಕೆ ನಾನು ನಿಮಗೆ ಮನೆ ಮಾರೋ ಐಡಿಯಾ ಹೇಳಿದ್ದು. ನಾವು ಈ ಊರು, ದೇಶ ಬಿಟ್ಟು ಕೆನಡಾ ದಲ್ಲಿ ಸೆಟಲ್ ಆಗೋಣ ಅಂತ. ಅಲ್ಲಿ ಹೋದರೆ ಎಲ್ಲಾ ಸರಿ ಆಗತ್ತೆ. ” ಎಂದು ವೈದೇಹಿ ಕರಣ್ ನ ಹೆಗಲು ಸವರಿ, ಎದುರಿಗೆ ಕುಳಿತಿದ್ದ ಅಮೋಘನ ನೋಡಿ,
” ನೋಡು ಅಮು, ಈ ವಿಷಯದ ಬಗ್ಗೆ ನಾವು ಇನ್ನು ಚರ್ಚೆ ಮಾಡೋದು ಬೇಡ. ನೀನು ಸ್ಟ್ರಾಂಗ್ ಆಗಿ ಇರಬೇಕು. ನಾನು ಹೇಳಿದ್ನಲಾ ಆ ರೀತಿಯ ಎಕ್ಸರ್ಸೈಜ್ ಹಾಗೆ ಡಾ ।ಕಮಲಾ ಕೊಟ್ಟ ಮೆಡಿಸಿನ್ ಸರಿಯಾಗಿ ತಗೋಬೇಕು. ಇಟ್ ವಾಸ್ ಎ ಮಿಸ್ಟೇಕ್ ಅಷ್ಟೇ”ಎಂದಳು.

” ಸರಿ ಅಮ್ಮಾ, ಆದರೆ ಈ ಮನೇಲಿ ಇರೋಕೆ ಆಗ್ತಾ ಇಲ್ಲ ನಂಗೆ. ಯಾವಾಗ ಮಾರುತ್ತೀರಾ ?” ಎಂದು ಕೇಳಿದ ಅಮೋಘ್.
” ನಾಳೆ ಒಬ್ಬರು ಮನೆ ನೋಡಲು ಬರುತ್ತಾ ಇದ್ದಾರೆ, ನಮ್ಮ ತರಹದ ನಾಲ್ಕು ಜನ ಇರೋ ಕುಟುಂಬ. ಅವರು ತುಂಬಾನೇ ಆಸಕ್ತಿ ತೋರಿಸಿದ್ದಾರೆ ಅಂತ ಬ್ರೋಕರ್ ಹೇಳಿದ. ಮನೆಯ ಬೆಲೆನೂ ನಾನು ೩೦% ಕಡಿಮೇನೆ ಹೇಳಿದ್ದೇನೆ. ಟುಮಾರೊ ಡೀಲ್ ವಿಲ್ ಬಿ ಡನ್ ಅನ್ಕೋತೀನಿ ” ಎಂದ ಕರಣ್.
ಇದೆಲ್ಲಾ ಮಾತನಾಡಿ ಎಲ್ಲರು ತಮ್ಮ ಕೋಣೆಗೆ ನಡೆದರು..

ಈ ಎಲ್ಲಾ ಮಾತುಗಳು ನನಗೆ ದಹಿಸಿ ಕೊಳ್ಳಲು ಆಗುತ್ತಾನೆ ಇಲ್ಲ. ಏನಾಯಿತು ಈ ಮನೆಯಲ್ಲಿ. ಏಕೆ ಮನೆಯನ್ನು ಮಾರುತ್ತಿದ್ದಾರೆ. ಎಷ್ಟು ಆಸೆಯಿಂದ ಕಟ್ಟಿದ ಮನೆ ಇದು. ಹಲವು ಪ್ರಶ್ನೆಗಳು ನನ್ನೊಳಗೆ ಕಡಲ ಅಲೆಗಳಂತೆ ಪದೇ ಪದೇ ಏಳುತ್ತಿದೆ . ನಾಳೆ ನೋಡೋಣ ಏನಾಗುತ್ತದೆ ಎಂದು ಎಂದುಕೊಂಡು ಸುಮ್ಮನಾದೆ. ರಾತ್ರಿ ಪ್ರಶಾಂತವಾಗಿ ಕಳೆಯಿತು. ಬೆಳಿಗ್ಗೆ ಹತ್ತು ಘಂಟೆಗೆ ಒಂದು ಕುಟುಂಬ ಬಂತು, ಅಪ್ಪ-ಅಮ್ಮ ಮಗ-ಮಗಳು. ಮನೆಯೆಲ್ಲಾ ನೋಡಿದರು. ತುಂಬಾ ಇಷ್ಟವಾಯಿತೆಂದು ಟೋಕನ್ ಅಡ್ವಾನ್ಸ್ ಕೊಟ್ಟು ಹೋಗೇ ಬಿಟ್ಟರು. ಕರಣ್ ವೈದೇಹಿಯ ಮುಖದಲ್ಲಿ ಏನೋ ವಿಚಿತ್ರ ಸಮಾಧಾನವ ನೋಡಿದೆ ಇಂದು. ಇಂದಿನಿಂದಲೇ ಸಾಮಾನುಗಳನ್ನು ಪ್ಯಾಕ್ ಕೂಡ ಮಾಡಲಾರಂಭಿಸಿದರು. ಬಟ್ಟೆಗಳು ಮತ್ತು ಕೆಲವು ಮುಖ್ಯ ವಸ್ತುಗಳಲ್ಲದೆ ಬೇರೇನೂ ತೆಗೆದುಕೊಂಡು ಹೋಗುವುದು ಬೇಡ ಎಂದು ಚರ್ಚೆ ಮಾಡಿದರು ಕರಣ್ ಮತ್ತು ವೈದೇಹಿ. ಎರಡು ದಿನ ಹೀಗೆ ಮುಂದುವರೆಯಿತು. ಖಾಲಿ ಮಾಡುವ ದಿನ ಬಂದೆ ಬಿಟ್ಟಿದೆ.

ಅವರು ಹೋಗುವುದನ್ನು ನೋಡುತ್ತಿದ್ದಂತೆಯೇ ನನಗೆ ಏನೋ ಒಂದು ರೀತಿಯ ಬೇಸರ. ಕೊನೆಗೊಮ್ಮೆ ಬಾಗಿಲನ್ನು ನೋಡಿ ಗಾಡಿ ಹತ್ತಿದರು ಐದು ಮಂದಿ. ಹೌದು ಡೇವಿಸ್ ಕೂಡ ಇವರ ಕುಟುಂಬದ ಸದಸ್ಯನೇ. ಇದ್ದಕಿದ್ದ ಹಾಗೆ ನನಗೆ ಯಾರೋ ಕಿರುಚಿದಂತೆ ಕೇಳುತ್ತಿದೆ, ಏನೋ ಕಣ್ಣಲ್ಲಿ ಮಬ್ಬು ಮುಸುಕಿದಂತೆ ಕಪ್ಪು ಬಿಳುಪು ಚಿತ್ರಗಳು ಕಾಣುತ್ತಿವೆ. ಮೈಥಿಲಿ ಕೂಡ ಇದ್ದಳು ಕೆಲವು ಚಿತ್ರಗಳಲ್ಲಿ . ‘ಏನಪ್ಪಾ ಇದು?’, ಎಂದು ಕೊಳ್ಳುತ್ತಿದಂತೆಯೇ ಬಾಗಿಲ ಬಳಿ ಒಬ್ಬಾತ ನಲವತ್ತರ ಆಸುಪಾಸಿನವನು, ಒಂದು ದೊಡ್ಡ ಕಪ್ಪು ಬ್ಯಾಗ್ನೊಂದಿಗೆ ಬಂದು ಫೋನಿನಲ್ಲಿ ” ಸರ್, ಮನೆ ಮುಂದೆ ಇದೀನಿ ಕೀ ಎಲ್ಲಿಟ್ಟಿದ್ದೀರಾ ? ಬ್ರೋಕರ್ ಕಳುಹಿಸಿದ್ದರು ಕ್ಯಾಮರಾ ಡಿಸ್ಮ್ಯಾಂಟಲ್ ಮಾಡೋಕೆ”, ಅಂದ. ನಂತರ ಅವನೇ ಮುಂದುವರೆಸುತ್ತಾ ” ಸರಿ ಸರ್ ತಗೋಳ್ತೀನಿ. ಇವತ್ತು ಕನೆಕ್ಷನ್ ತೆಗೆದು ನಾಳೆ ಎಲ್ಲಾ ಉಪಕರಣಗಳನ್ನು ತೆಗೆದು ಕೊಂಡು ಹೋಗುತ್ತೇನೆ ” ಎಂದು ಫೋನ್ ಇಟ್ಟ.

ಬಾಗಿಲ ಮುಂದೆ ಇರೋ ಮ್ಯಾಟ್ ಕೆಳಗಿರುವ ಕೀ ತೆಗೆದು ಒಳಗೆ ಬಂದ. ಕರಣ್ ರವರ ರೂಮಿಗೆ ಹೋಗಿ ಅಲ್ಲಿರುವ ಒಂದು ಸಣ್ಣ ಮಾನಿಟರ್ ನಲ್ಲಿ ಏನೋ ಕೆಲಸ ಮಾಡುತ್ತಿದ್ದಂತೆಯೇ ನನ್ನೊಳಗೆ ಏನೇನೋ ಆಗಲಾರಂಭಿಸಿತು. ಒಂದು ರೀತಿಯ ಸದ್ದು ಕೂಡ ಬರಲಾರಂಭಿಸಿತು. ತಕ್ಷಣ ಅವನು ಯಾರಿಗೋ ಫೋನ್ ಮಾಡಲಾರಂಭಿಸಿದ “ಏನೋ ಶಬ್ದ ಬರ್ತಿದೆ ಕಣೋ ಹೇಗೆ ಕ್ಯಾಮರಾ ಸಿಸ್ಟಮ್ ಆಫ್ ಮಾಡೋದು ?,” ಎಂದ. ಆಗಲೇ ನನಗೆ ಒಂದು ತಿಂಗಳ ಹಿಂದೆ ನಡೆದ ರಾತ್ರಿಯ ದೃಶ್ಯಗಳು ಕಣ್ಮುಂದೆ ಬರಲಾರಂಭಿಸಿದವು. ನಾನು ಆಶ್ಚರ್ಯದಿಂದಲಿ ಎಲ್ಲದನ್ನು ನೋಡುತ್ತಿದ್ದಂತೆಯೇ, ಅವನು ಫೋನ್ ಅನ್ನು ಸ್ಪೀಕರ್ ನಲ್ಲಿ ಇಟ್ಟಿದ್ದ ಕಾರಣ ಆ ಕಡೆಯಿಂದ ಒಂದು ಶಬ್ದ, ” ಫುಲ್ ಸಿಸ್ಟಮ್ ಫೈಲ್ಸ್ ಡಿಲೀಟ್ ಮಾಡು. ಕೆಲೊವೊಮ್ಮೆ ಅವರು ಕ್ಯಾಮರಾ ಫೈಲ್ಸ್ ಡಿಲೀಟ್ ಮಾಡಿದ್ದರೆ ಅದು ರಿಸೈಕಲ್ ಬಿನ್ ನಲ್ಲಿ ಇರತ್ತೆ.

ಒಮ್ಮೊಮ್ಮೆ ಅಲ್ಲಿಯೂ ಅವರು ಹೋಗಿ ಡಿಲೀಟ್ ಮಾಡಿದ್ದಲ್ಲಿ, ಅದು ಹಿಡನ್ ಫೈಲ್ಸ್ ರೂಪದಲ್ಲಿ ಮತ್ತೆ ಮೈನ್ ಫೋಲ್ಡೆರನಲ್ಲಿ ಇರತ್ತೆ. ನೀನು ಆ ಫೈಲ್ಸ್ ಗಳನ್ನು ಅನ್ – ಹೈಡ್ ಮಾಡಿ, ಅವುಗಳನ್ನೂ ಡಿಲೀಟ್ ಮಾಡು. ಇದೊಂದು ಡಿಫೆಕ್ಟ್ ಇದೆ ಈ ಕ್ಯಾಮರಾದಲ್ಲಿ. ಬೇಗ ಮಾಡಿದರೆ ಈ ಶಬ್ದ ನಿಲ್ಲತ್ತೆ.”ಎಂದ. ಆಗ ಅವನು ಎಲ್ಲಾ ಫೈಲ್ಗಳನ್ನು ಡಿಲೀಟ್ ಮಾಡಿಬಿಟ್ಟ. ತನ್ನ ಕೆಲಸ ವಾದಮೇಲೆ ಬೀಗ ಹಾಕಿ ನಡೆದೇ ಬಿಟ್ಟ. ಯಾವ ಫೈಲ್ಸ್ ಅನ್ನು ನೋಡಬಾರದೆಂದು ಡಿಲೀಟ್ ಮಾಡಿ ಕರಣ್ ವೈದೇಹಿ ಮನೆಯನ್ನು ಮಾರಿ ದೇಶ ಬಿಟ್ಟು ಹೋಗಲು ನಿರ್ಧರಿಸಿದರೋ ಆ ವಿಷಯ ನಂಗೆ ಇಂದು ಗೊತ್ತಾಯಿತು. ಆ ಒಂದು ಕರಾಳ ರಾತ್ರಿಯ ರಹಸ್ಯ. ನಾನ್ಯಾರೆಂದು ನಿಮಗೆ ಹೇಳಲೇ ಇಲ್ಲ ಅಲ್ವಾ ? ನಾನು ಆ ಮನೆಯಲ್ಲಿನ ಆಗು ಹೋಗುಗಳನ್ನು ನೋಡಿಕೊಳ್ಳಲು ಅಳವಡಿಸಿದ ” ಕ್ಯಾಮರಾ “. ನನಗೆ ಏಳು ಕಣ್ಣುಗಳಿದ್ದವು. ಹಲವು ಕಡೆಗಳಲ್ಲಿ ನಡೆಯುವ ವಿಚಾರಗಳನ್ನು ಒಟ್ಟಿಗೆ ನೋಡುವ ಸಾಮರ್ಥ್ಯ ನಂಗೆ ಇದೆ. ಕ್ಷಮಿಸಿ, ಇತ್ತು. ಅವರ ಜೀವನದಲ್ಲಿನ ಒಂದು ಪ್ರಮುಖ ಭಾಗವಾಗಿದ್ದೆ ನಾನು.

ಅಂದು ನಡೆದದ್ದು ಏನಿರಬೊಹುದು ಎಂದು ಕೊಳ್ಳುತ್ತಿದ್ದೀರಾ? ಹೇಳುತ್ತೇನೆ. ಡೈನಿಂಗ್ ನಿಂದ ಮಲಗಲು ಹೋದ ಎಲ್ಲರೂ ಅವರವರ ಕೋಣೆ ಬಾಗಿಲು ಹಾಕಿ ಆಗಿತ್ತು. ಮಧ್ಯರಾತ್ರಿಯ ಆಸುಪಾಸಿನಲ್ಲಿ ಅರ್ನವ್ ಬಾಗಿಲು ತೆಗೆದು, ಮೈಥಿಲಿಯ ಕೋಣೆಯ ಬಾಗಿಲು ಬಡಿದ. ಅವಳು ಹೊರಗೆ ಬಂದಳು. ಇಬ್ಬರೂ ಐಸ್ ಕ್ರೀಮ್ ತಿನ್ನುತ್ತಾ ಪ್ರೀತಿಯ ಮಾತನಾಡಿ ನಂತರ ಒಬ್ಬರನೊಬ್ಬರು ಆಲಂಗಿಸಿ ತಮ್ಮ ತಮ್ಮ ರೂಮಿಗೆ ತೆರಳಿದರು. ಸ್ವಲ್ಪ ಹೊತ್ತಾದ ಮೇಲೆ ಮೈಥಿಲಿ ತನ್ನ ಕೋಣೆ ಇಂದ ಹೊರಗೆ ಬಂದು, ಡೈನಿಂಗ್ ರೂಮಿನ ಬಳಿ ಬರುತ್ತಿರುವಾಗ (ನೀರು ಕುಡಿಯಲು ಬಂದಿರಬೊಹುದು) ಯಾರನ್ನೋ ಎಡವಿ ಬಿದ್ದಳು. ಚೀರಲು ಕೇಳಿ ಓಡಿ ಬಂದರು ಕರಣ್ ಹಾಗಿ ವೈದೇಹಿ. ಅರ್ನವ್ ನ ರೂಮ್ ಸ್ವಲ್ಪ ದೂರ ಇದ್ದುದರಿಂದ ಅವನು ಬಹಶಃ ಬರಲಿಲ್ಲ . ಲೈಟ್ ಆನ್ ಮಾಡಿದಾಗ ಕಂಡದ್ದು ರಕ್ತ. ಸಂಭವಿಸಿದ್ದೇನೆಂದರೆ, ಮೈಥಿಲಿ ಅಲ್ಲೇ ಕತ್ತಲಲ್ಲಿ ಕುಳಿತಿದ್ದ ಅಮೋಘ್ ಅನ್ನು ಎಡವಿ ಬೀಳುವಾಗ ಡೈನಿಂಗ್ ಟೇಬಲ್ ನ ತುದಿ ತಲೆಗೆ ತಾಗಿ ಅಲ್ಲೇ ಸತ್ತಿದ್ದಳು. ವೈದೇಹಿ ಕರಣ್ ಬಂದು ಅಮೋಘ್ ನ ಕೇಳಲು “ಯಾವಾಗಲು ರಾತ್ರಿ ನಡೆಯುತ್ತಿದ್ದೆನಲ್ಲ ಹಾಗೆ ಇವತ್ತು ಇಲ್ಲಿ ಬಂದು ಕುಳಿತಿದ್ದೆ, ಅವಳು ಎಡವಿ ಬಿದ್ದು ಕಿರುಚಿದಾಗ ಎಚ್ಚರವಾಯಿತು ಅಮ್ಮ. ನಾನೇನೂ ಮಾಡಿಲ್ಲ. ಮೈಥಿಲಿ…. ಮೈಥಿಲಿ…. ” ಎಂದು ವೈದೇಹಿಯನ್ನು ತಬ್ಬಿ ಬಿಕ್ಕಳಿಸಲಾರಂಭಿಸಿದ.

ಕರಣ್ ತಕ್ಷಣ, ” ನಿನ್ನ ತಪ್ಪಲ್ಲ, ಆದರೂ ಇಲ್ಲಿ ಒಂದು ಮರಣ ನಡೆದಿದೆ.. ಹೀಗಾಯಿತು ಹಾಗಾಯಿತು ಎಂದು ನಾವೇನೇ ಅಂದರೂ ಯಾರೂ ಅದನ್ನು ನಂಬುವುದಿಲ್ಲ. ಪಾಪದ ಹುಡುಗಿಯನ್ನು ಬಲವಂತವಾಗಿ ಸಾಯಿಸಿದ್ದಾರೆ ಎಂದೇ ಹೇಳುತ್ತಾರೆ ನಮ್ಮ ಬದುಕು ಮುಗಿಯಿತು. ದೇವರೇ ಏನು ಮಾಡುವುದು ” ಎನ್ನುತ್ತಿರುವಾಗಲೇ
ವೈದೇಹಿ ” ನನ್ನ ಮಕ್ಕಳ ಜೀವನವನ್ನು ಹಾಳು ಮಾಡಲು ನಾನು ಯಾವ ನ್ಯಾಯಕ್ಕೂ ಬಿಡುವುದಿಲ್ಲ. ಕರಣ್ ಬಾಡಿ ಯನ್ನು ಡಿಸ್ಪೋಸ್ ಮಾಡೋಣ. ಅಮೋಘ್ ನೀನು ಈ ವಿಷಯದ ಬಗ್ಗೆ ಯಾರೊಂದಿಗೂ ಚರ್ಚೆ ಮಾಡಬೇಡ ಹೋಗು ನಿನ್ನ ಕೋಣೆಗೆ. ನಾಳೆ ಡಾ । ಕಮಲಾ ಬಳಿ ಹೋಗೋಣ ” ಎಂದು ಅವನನ್ನು ಎಬ್ಬಿಸಿ ಕಳುಹಿಸಿದಳು.
ಕರಣ್ ಹಾಗು ವೈದೇಹಿ ಸೇರಿ ಅವಳನ್ನು ಒಂದು ಮೂಟೆಯಲ್ಲಿ ಹಾಕಿ ಕಾರೀ ನಲ್ಲಿ ಹೋಗೆ ಬಿಟ್ಟರು. ಎರಡು ಘಂಟೆ ಕಳೆದು ಮರಳಿ ಮನೆಗೆ ಬಂದಿದ್ದರು.

“ಇಂದಿನ ರಾತ್ರಿಯ ಕ್ಯಾಮರಾ ಫೈಲ್ಸ್ ಡಿಲೀಟ್ ಮಾಡಿ ಕರಣ್. ಒಂದು ತಿಂಗಳ ತನಕ ಕ್ಯಾಮರಾ ಆಫ್ ಮಾಡಿ ಇಡೋಣ. ಪೊಲೀಸ್ ಬಂದರೆ ಕ್ಯಾಮರಾ ಸರಿ ಇಲ್ಲದ ಕಾರಣ ರಿಪೇರಿಯಲ್ಲಿದೆ ಎಂದರಾಯಿತು. ನಾಳೆಯೇ ಕೆನಡಾ ಹೋಗುವ ಬಗ್ಗೆ ಎಮಿಗ್ರೇಶನ್ ಕಚೇರಿಯಲ್ಲಿರುವ ನಿಮ್ಮ ಗೆಳೆಯನ ಹತ್ತಿರ ಒಂದು ತಿಂಗಳಲ್ಲಿ ಎಲ್ಲಾ ರೆಡಿ ಮಾಡಿಕೊಡಲು ಹೇಳಿ. ಮನೆ ಮಾರಾಟಕ್ಕೆ ಹಾಕಿ. ” ಎಂದಳು ಹಾಲ್ನಲ್ಲಿರುವ ಸೋಫಾ ಮೇಲೆ ಕೂರುತ್ತಾ.
“ಅದೆಲ್ಲ ಸರಿ, ನಾವು ಹೂತಿಟ್ಟ ಸ್ಥಳ ಸರಿ ಇದೆಯಾ? ಮುಂದೆ ಯಾರು ಅವಳನ್ನು ಹುಡುಕಿ ಬರೋದಿಲ್ವಾ ವೈದು?” ಎಂದು ಕೇಳಿದ ಕರಣ್.

” ಅಯ್ಯೋ ನಾವು ಹಾಕಿರುವ ಸ್ಥಳ, ಪೊಲಿಟಿಷಿಯನ್ ಒಬ್ಬ ಕಟ್ಟಿಸುತ್ತಿರುವ ಮಾಲ್. ಕೊನೆಯಲ್ಲಿರುವ ಸ್ವಲ್ಪ ಮಣ್ಣು ಭಾಗದಲ್ಲಿ ಹೂತಿದ್ದೇವೆ.ಅಕಸ್ಮಾತಾಗಿ ಕಂಡರೂ ಅದನ್ನು ಯಾರೂ ದೊಡ್ಡ ವಿಷ್ಯವಾಗಿಸೋಲ್ಲ ಯಾಕೆಂದರೆ, ಈ ರೀತಿಯ ಸಂಶಯಾಸ್ಪದ ಶವ ಕಂಡರೆ ಈಗಾಗಲೇ ಹೋಲ್ಡ್ ನಲ್ಲಿರೋ ಅವರ ಮಾಲ್ ನ ಪ್ರಾಜೆಕ್ಟ್ ಎಂದಿಗೂ ಮುಗಿಯುವುದಿಲ್ಲ. ಇದಕ್ಕಿಂತ ಒಳ್ಳೆ ಜಾಗ ಈ ಸಿಟಿಯಲ್ಲಿ ಇಲ್ಲ ಕರಣ್ ಯೋಚನೆ ಮಾಡಬೇಡ. ನಾಳೆ ಕಮಲಾ ಬಳಿ ಅಮೋಘ್ ನನ್ನ ಕರೆದುಕೊಂಡು ಹೋಗಬೇಕು. ” ಎಂದಳು ವೈದೇಹಿ.
” ನಾವು ಇಷ್ಟೊಂದು ಕ್ರೂರಿಗಳಾದೆವೇ ವೈದು?” ಎನ್ನುತ್ತಾ ಬೇಸರದ ಧ್ವನಿಯಲ್ಲಿ ಕೇಳಿದ ಕರಣ್.

” ನೋಡಿ ನಾನೊಬ್ಬ ತಾಯಿ, ನನಗೆ ನನ್ನ ಮಗನ ಭವಿಷ್ಯ ತುಂಬಾ ಮುಖ್ಯ. ಅದರಲ್ಲೂ ಯಾರ ತಪ್ಪಿಲ್ಲದಿದ್ದರು ನಡೆದ ಈ ವಿಚಿತ್ರ ವಿಧಿಯ ಆಟದಿಂದ ಮುಗ್ಧ ಹುಡುಗಿಯ ಜೀವನ ನಿಂತುಹೋಯಿತು. ಅವಳನ್ನು ಕರೆತರಲು ನಮಗೆ ಸಾಧ್ಯವಿಲ್ಲ. ಹಾಗೆಯೇ ಬದುಕಿರುವ ನಮ್ಮ ಜೀವನ ವನ್ನು ಈ ಸಮುದಾಯ, ರಾಜಕಾರಣ, ರಾಜಕೀಯ ಪಾರ್ಟಿಗಳ ನಡುವೆ ಹದ್ದುಗಳಿಗೆ ಹಾಕಿದ ಮಾಂಸದ ತುಂಡು ಮಾಡಲು ನನಗೆ ಒಪ್ಪಿಗೆಯಿಲ್ಲ. ಅದಕ್ಕೆ ಆ ಕ್ಷಣದಲ್ಲಿ ತೋಚಿದಂತೆ ಮಾಡಿದೆ. ಇಲ್ಲಿ ಯಾರದು ತಪ್ಪಿಲ್ಲ ಕರಣ್. ” ಎಂದಳು ವೈದೇಹಿ.
” ನೀನು ಮನಃಶಾಸ್ತ್ರ ಓದಿದಕ್ಕೂ ಸಾರ್ಥಕವಾಯಿತು. ನಿನ್ನಷ್ಟು ಧೈರ್ಯ ನನಗಿಲ್ಲ ಕಣೆ. ಅಮೋಘ್ ನ ಈ ಖಾಯಿಲೆ ಗೊತ್ತಾದಾಗಲೂ ನೀನು ಬಹಳ ಧೈರ್ಯ ದಿಂದ ಇದ್ದೆ.
ನೀನೇ ಆಶ್ರಯ ನಮಗೆ ” ಎಂದು ಅವಳನ್ನು ತಬ್ಬಿ ಅತ್ತರು ಕರಣ್.

” ನಾನು “ಅಮ್ಮ” ಕರಣ್, ಮೈಥಿಲಿಯೂ ನನ್ನ ಮಗಳಿದ್ದಂತೆಯೇ ಇದ್ದಳು . ಸೊಸೆಯಾಗಿ ಬರಬೇಕು, ಅವಳು ಅನ್ನೋ ಆಸೆ ಇತ್ತು ನನಗೆ. ಅವಳು ಮತ್ತೊಂದು ಜನ್ಮ ಹೊತ್ತು ನಮಗೇ ಮೊಮ್ಮಗಳಾಗಿ ಬರಲಿ ಅಂತ ಆ ದೇವರಲ್ಲಿ ದಿನಾ ಪ್ರಾರ್ಥಿಸುವೆ. ನಾಳೆ ಅವಳ ಹೆಸರಲ್ಲಿ ಒಂದು ಪೂಜೆ ಮಾಡಿಸ ಬೇಕು. ಅವಳ ಆತ್ಮ ಶಾಂತಿಗಾಗಿ. ” ಎಂದು ಬಿಕ್ಕಿ ಬಿಕ್ಕಿ ಅತ್ತಳು ವೈದೇಹಿ. ಒಂದು ರಾತ್ರಿಯಲ್ಲಿ ಒಂದು ಕುಟುಂಬದ ಜೀವನ ಹಾದಿಯನ್ನೇ ಬದಲಾಯಿಸಿದ ಆ ಘಟನೆ ಈಗ ನನಗಲ್ಲದೆ ನಿಮಗೂ ತಿಳಿಯಿತು. ಯಾರು ತಪ್ಪು ಯಾರು ಸರಿ ಎಂದು ಹೇಳುವಷ್ಟು ಬುದ್ದಿ ನನಗಿಲ್ಲ.
ಈಗ ನೀವೇ ಹೇಳಿ ಆ ರಾತ್ರಿ ನಡೆದ ವಿಧಿಯಾಟ ದಲ್ಲಿ ಯಾರು ಸರಿ ಯಾರು ತಪ್ಪು?

-ಶೀತಲ್


ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ನಾ ಕಂಡಂತೆ: ಶೀತಲ್

Leave a Reply

Your email address will not be published. Required fields are marked *