ಮಹಾಕಾವ್ಯಗಳು ಜಗತ್ತಿನ ಎಲ್ಲಾ ನಾಗರೀಕತೆಯಲ್ಲಿಯೂ ಮೂಡಿ ಬಂದಿವೆ, ಇನ್ನೂ ಕೆಲವು ಮಹಾ ಕಾವ್ಯಗಳು ಮೂಡಿ ಬರುತ್ತಲೇ ಇವೆ. ಮಹಾಕಾವ್ಯ ಎಂದು ಕರೆಸಿ ಕೊಳ್ಳುವುದು ಕೇವಲ ಗಾತ್ರದ ದೃಷ್ಟಿಯಿಂದಲ್ಲ ಅದರ ಅಂತಸತ್ವದ ದೃಷ್ಟಿಯಿಂದ. ಅದರಲ್ಲಿ ಒಂದು ರೀತಿಯಲ್ಲಿ ಪರಂಪರೆಯ ಮೌಲ್ಯಗಳೇ ಅಂತರ್ಗತವಾಗಿರುತ್ತವೆ. ಕೆಲವು ಜಗತ್ತಿನ ಅಂತಹ ಮಹಾಕಾವ್ಯಗಳ ಪರಿಶೀಲನೆ ಈ ಲೇಖನದ ಉದ್ದೇಶ.
ಸಮೇರಿಯನ್ನರ ‘ಗಿಲ್ಗಮೇಶ್’ ಮತ್ತು ಜಪಾನಿನ ಮುರಸಾಕಿಯ ‘ಗೆಂಜಿ ಮನೋಗಟರಿ’ ಪ್ರಾರಂಭಿಕ ಮಹಾಕಾವ್ಯಗಳು ಎಂದು ಕರೆಸಿ ಕೊಂಡರೂ ಹೋಮರ್‍ನ ‘ಇಲಿಯಡ್’ನಿಂದ ಮಹಾಕಾವ್ಯಗಳ ಪರಂಪರೆ ಆರಂಭ. ಹೆಲನ್ ಸ್ಟಾರ್ಟ್ ಎಂಬ ರಾಜ್ಯದ ಮೆನೆಲಾಸನ ಹೆಂಡತಿ ಅವಳ ಅಣ್ಣ ಅಗಮೆಮ್‍ನನ್. ಅವಳು ಟ್ರಾಯ್ ರಾಜ್ಯದ ಅರಸ ಪ್ರಯಮ್‍ನ ಮಗ ಪ್ಯಾರಿಸ್ ಎಂಬ ಸುರದ್ರೂಪಿಯ ಜೊತೆ ಓಡಿ ಹೋಗುತ್ತಾಳೆ. ಗ್ರೀಕ್ ರಾಜರು ಟ್ರಾಯ್ ನಗರವನ್ನು ಮುತ್ತುತ್ತಾರೆ. ಹತ್ತು ವರ್ಷ ಯುದ್ಧ ನಡೆದು ಕೊನೆಗೆ ಗೆದ್ದ ಗ್ರೀಕರು ಟ್ರಾಯ್ ನಗರವನ್ನು ಭಸ್ಮ ಮಾಡುತ್ತಾರೆ. ಹೋಮರ್‍ನ ‘ಇಲಿಯಡ್’ ಆರಂಭವಾದಾಗ ಒಂಬತ್ತು ವರ್ಷದ ಕಳೆದಿದೆ. ಆರು ತಿಂಗಳ ಘಟನೆಗಳು ಕಾವ್ಯದಲ್ಲಿದೆ. ಪೆಟ್ರೂಕ್ಲೀಸ್ ಯುದ್ಧದಲ್ಲಿ ಸಾಯುತ್ತಾನೆ. ಅಕಿಲೀಸ್ ತನ್ನ ಗೆಳೆಯನನ್ನು ಕೊಂದ ಹೆಕ್ಟರ್‍ನನ್ನು ಕೊಲ್ಲುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಇಲ್ಲಿ ಒಂದು ವಿಷಾದದ ಜಗತ್ತು ಅನಾವರಣಗೊಳ್ಳುತ್ತದೆ. ‘ಇಲಿಯಡ್’ನಲ್ಲಿ ಮೂರು ಕಥೆಗಳು ಹೆಣೆದು ಕೊಂಡಿವೆ ಅಕಿಲೀಸನ ಕಥೆ, ಹೆಲನ್‍ಳ ಕಥೆ ಮತ್ತು ಟ್ರಾಯ್ ರಾಜ್ಯದ ಕಥೆಗಳನ್ನು ಇಲ್ಲಿ ಅರ್ಥವತ್ತಾಗಿ ಜೋಡಿಸಲಾಗಿದೆ. ಇದು ಯುದ್ಧದ ಕಥೆಯಂತೆ ತೋರಿದರೂ ಮುಖ್ಯವಾಗುವುದು ಇಲ್ಲಿ ಮಾನವ ಸ್ವಭಾವಗಳು, ಪ್ರತಿ ಹಂತದಲ್ಲಿಯೂ ಅವುಗಳ ಪರೀಕ್ಷೆ ನಡೆದಿದೆ ಎಂದು ಹೇಳ ಬೇಕು.
‘ಆಡಿಸಿ’ ಹೋಮರ್‍ನ ಎರಡನೇ ಮಹಾಕಾವ್ಯ. ಇದರ ನಾಯಕ ಒಡಿಸ್ಯೂಸ್( ಇವನ ಇನ್ನೊಂದು ಹೆಸರು ಯೂಲಿಸೆಸ್) ಗ್ರೀಕರು ಟ್ರಾಯ್ ನಗರಕ್ಕೆ ಬೆಂಕಿ ಹಚ್ಚಿದ ನಂತರ ಗ್ರೀಕ್ ವೀರ ಒಡಿಸ್ಯೂಸ್ ತನ್ನ ದ್ವೀಪವಾದ ಇಥಾಕಕ್ಕೆ ಹಿಂದಿರುಗುತ್ತಾನೆ. ಅವರ ಶತೃ ಸಮುದ್ರ ದೇವತೆ ಪಾಸಿಡಾನ್ ಸಮುದ್ರದಲ್ಲಿ ಕ್ಷೋಭೆಯನ್ನು ಉಂಟು ಮಾಡುತ್ತಾನೆ. ಯೂಲಿಸೆಸ್‍ನೂ ಅವನ ನಾವಿಕರೂ ಹಲವಾರು ವಿಪತ್ತುಗಳನ್ನು ಎದುರಿಸ ಬೇಕಾಗುತ್ತದೆ. ಕಡೆಗೆ ಏಕಾಂಗಿಯಾಗಿ ಒಡಿಸ್ಯೂಸ್ ಇಥಾಕವನ್ನು ತಲುಪುತ್ತೇನೆ. ಅಲ್ಲಿ ಅವನ ಹೆಂಡತಿ ಪೆನಲೊಪೆಯ ಕೈ ಹಿಡಿಯಲು ಅವಳನ್ನು ಕಾಡುತ್ತಿದ್ದ ಸಿಂಹಾಸನಾಕಾಂಕ್ಷಿಗಳನ್ನು ಕೊಂದು ಮತ್ತೆ ರಾಜ್ಯವನ್ನು ಪಡೆಯುತ್ತಾನೆ. ‘ಆಡಿಸಿ’ಯ ನಾಯಕ ‘ಇಲಿಯಡ್’ನಾಯಕನಿಗಿಂತ ತೀರಾ ಭಿನ್ನ. ‘ಇಲಿಯಡ್’ ನಾಯಕ ಅಕಿಲೀಸ್ ಅಪ್ರತಿಮ ಶೂರ. ಆದರೆ ಅವನು ಭಾವನೆಗಳ ಒತ್ತಡದಲ್ಲಿ ತೀರ್ಮಾನಗಳನ್ನು ಮಾಡುತ್ತಾನೆ. ಇಲ್ಲಿ ಮಾನವ ಸ್ವಭಾವಗಳನ್ನು ಗುರುತಿಸುವಲ್ಲಿ ವಿಭಿನ್ನತೆಯನ್ನು ಕಾಣ ಬಹುದು. ದೇವತೆಗಳ ಪ್ರವೇಶದಿಂದ ಅಲ್ಲಲ್ಲಿ ಮಾನವ ಸ್ವಭಾವದ ಸಹಜತೆ ಈ ಕಾವ್ಯದಲ್ಲಿ ಸಾಧ್ಯವಾಗಿಲ್ಲ ಎನ್ನುವುದನ್ನೂ ನಾವು ಗಮನಿಸ ಬೇಕು.
ಪುಬ್ಲಿಯಸ್ ವರ್ಜಿಘಲಿಯಸ್ ಮ್ಯಾರೋ ಎಂಬ ಲೇಖಕನ ಹೆಸರನ್ನು ‘ವರ್ಜಿಲ್’ ಎಂದು ಸಂಕ್ಷೇಪಿಸಿ ಹೇಳುವುದು ವಾಡಿಕೆ. ವರ್ಜಿಲ್ ಬರೆದಂತಹ ಕಾವ್ಯ ‘ಇನೀಡ್’ ಕ್ರಿ.ಪೂ 22ರ ಹೊತ್ತಿಗೆ ಈ ಕಾವ್ಯ ಬರೆದ ಕ್ರಿ.ಪೂ 19ರಂದು ಅವನು ತೀರಿ ಕೊಂಡಾಗ ಇನ್ನೂ ತಿದ್ದುವ ಕೆಲಸ ಮುಗಿದಿರಲಿಲ್ಲ. ಅವನ ಗೆಳೆಯರು ಇದನ್ನು ಪ್ರಕಟಿಸಿದರು. ‘ಇನೀಡ್’ ಟ್ರಾಯ್ ನಗರದ ವೀರ ಈನಿಆ್ಯಸ್‍ನ ಕಥೆ, ಅವನು ಅಂಚೆಸಸ್ ಎಂಬ ವೀರ ಮತ್ತು ಪ್ರೇಮದೇವತೆ ವೀನಸರ ಮಗ. ಗ್ರೀಕರು ಟ್ರಾಯ್ ನಗರವನ್ನು ಸುಟ್ಟಾಗ ವೃದ್ಧ ತಂದೆಯನ್ನು ಹೆಗಲ ಮೇಲೆ ಹೊತ್ತು ಕೊಂಡು ಹೆಂಡತಿ, ಮಗನೊಡನೆ ಹೊರಟ. ಆದರೆ ಎಲ್ಲರನ್ನೂ ಕಳೆದು ಕೊಂಡು ಏಕಾಂಗಿಯಾದ. ದೇವೇಚ್ಛೆ ಅವನಿಗೆ ಲ್ಯಾಟಿಯಮ್‍ಗೆ ಹೋಗುವಂತೆ ಹೇಳಿತು. ಆದರೆ ಸ್ವರ್ಗದರಿಸಿ ಜೂನೋ ಅಡ್ಡ ಬಂದಳು. ಈನಿಆ್ಯಸ್‍ನಿಗೂ ಅವನ ಜೊತೆಗಾರರಿಗೂ ಬಹಳ ಕಷ್ಟ ಕೊಟ್ಟಳು. ತಾಯಿ ವೀನಸ್ ನೆರವಿನಿಂದ ಈನಿಆ್ಯಸ್ ಕಾರ್ಥೇಜ್ ತಲುಪಿದ ಅಲ್ಲಿನ ವಿಧವೆ ರಾಣಿ ಡೈಡೋಳಿಗೆ ಅವನ ಮೇಲೆ ಅನುರಾಗವಾಯಿತು. ಇಬ್ಬರೂ ಪ್ರಣಯದಲ್ಲಿ ತೊಡಗಿದಾಗ ಮುಂದೆ ಸಾಗುವಂತೆ ದೈವ ಸಂದೇಶ ಬಂದಿತು. ಡೈಡೋ ವಿರಹ ತಾಳದೆ ಆತ್ಮಹತ್ಯೆ ಮಾಡಿ ಕೊಂಡಳು. ಈನಿಆ್ಯಸ್ ಸಿಸಿಲಿಯಲ್ಲಿ ಅನೇಕ ತೊಂದರೆ ಅನುಭವಿಸಿ ಮೃತ್ಯಲೋಕಕ್ಕೆ ಬಂದ ಅಲ್ಲಿ ಡೈಡೋಳ ಪ್ರೇತವನ್ನು ಕಂಡರೂ ಅವಳು ಸ್ಪಂದಿಸಲಿಲ್ಲ. ಮುಂದೆ ಈನಿಆ್ಯಸ್ ಇಟಲಿಗೆ ಬಂದ. ಅಲ್ಲಿನ ರಾಜ ಲ್ಯಾಟಿನಸ್ ಅವನ ಮಗಳು ಲೆವಿನಿಯ ವಿದೇಶಿಯನನ್ನು ಲಗ್ನವಾಗುತ್ತಾಳೆ. ಅವಳ ಮಗ ಸಾಮ್ರಾಟನಾಗುತ್ತಾನೆ ಎನ್ನುವ ಭವಿಷ್ಯವಾಣಿ ಇತ್ತು. ಈನಿಆ್ಯಸ್ ಬರುತ್ತಲೇ ಶುಭ ಶಕುನವಾಗಿ ಅವನಿಗೆ ಸ್ವಾಗತ ದೊರೆಯಿತು. ಆದರೆ ಜೂನೋ ಲೆವಿನಿಯಳ ತಾಯಿ ಅಮಾಟಳನ್ನು ಎತ್ತಿ ಕಟ್ಟಿದಳು. ಹಿಂದೆ ಲೆವಿನಿಯಾಳನ್ನು ಟರ್ನಾಸ್ ಎಂಬುವವನಿಗೆ ಕೊಟ್ಟು ಮದುವೆಯಾಗುವ ಮಾತಾಗಿತ್ತು. ಅದಕ್ಕೆ ಹಠ ಹಿಡಿದಳು. ಟರ್ನಸ್‍ನ ಕಡೆಯವರಿಗೂ ಲ್ಯಾಟಿನಸ್ ಕಡೆಯುವರಿಗೆ ಯುದ್ಧವಾಯಿತು. ಟರ್ನಸ್‍ನನ್ನು ಯುದ್ಧದಲ್ಲಿ ಈನಿಆ್ಯಸ್‍ನು ಕೊಂದನು. ಇದು ಈ ಮಹಾಕಾವ್ಯದ ವಸ್ತು. ಹೋಮರ್‍ನ ಎರಡೂ ಕಾವ್ಯಗಳಿಗೂ ಮತ್ತು ‘ಇನೀಡ್’ಗೆ ಇರುವ ಹೋಲಿಕೆ ಗಮನಿಸಿದಾಗ ಹೋಮರ್‍ನಿಗೆ ನೈತಿಕ ಕಲ್ಪನೆ ಇಲ್ಲ. ಅವನದು ವಸ್ತುನಿಷ್ಟ ಶೈಲಿ. ಆದರೆ ವರ್ಜಿಲನ ಕಾವ್ಯಕ್ಕೆ ನಾಗರೀಕತೆಯ ಹಿನ್ನೆಲೆ ಇದೆ. ನೈತಿಕ ನೆಲೆ ಕೂಡ ಇದೆ ದೇವತೆಗಳನ್ನು ಚಿತ್ರಿಸುವಲ್ಲಿ ಇಬ್ಬರಿಗೂ ಗಾಢವಾದ ವ್ಯತ್ಯಾಸವಿದೆ. ಹೋಮರನಲ್ಲಿ ದೇವತೆಗಳು ಅಮರರು, ಸರ್ವಶಕ್ತರು, ಸ್ವೇಚ್ಛಾ ಪ್ರವೃತ್ತಿಯವರು. ಆದರೆ ವರ್ಜಿಲ್ ಸ್ಪಷ್ಟವಾಗಿ ದೇವತೆಗಳನ್ನು ವಿಶ್ವದಲ್ಲಿ ಸಂಯಮರಹಿತ ರಾಗಗಳು ಮತ್ತು ಸಂಯಮರಹಿತ ವಿವೇಕ ಇವುಗಳ ಹೋರಾಟದ ಶಕ್ತಿಗಳ ಸಂಕೇತಗಳನ್ನಾಗಿ ಮಾಡುತ್ತಾನೆ. ಇದು ಒಂದು ರೀತಿಯಲ್ಲಿ ನಾಗರೀಕತೆಯ ಪರಿಕಲ್ಪನೆಗಳ ಬೆಳವಣಿಗೆಯನ್ನು ಕೂಡ ಚಿತ್ರಿಸುತ್ತದೆ.
ಯುರೂಪಿನ ಮಧ್ಯಯುಗದ ಮಹಾಕವಿ ಡಾಂಟೆ(1265-1321) ಬರೆದ ಮಹಾಕಾವ್ಯ ‘ಡಿವೈನ್ ಕಾಮಿಡಿ’. ಇದು ಕವಿ ಕೊಟ್ಟ ಹೆಸರಲ್ಲ. ಜನರು ಇದು ದೈವಿಕ ಕಾವ್ಯ ಎಂದು ಭಾವಿಸಿದ್ದರಿಂದ ಬಂದ ಹೆಸರು. ಈ ಮಹಾ ಕಾವ್ಯದಲ್ಲಿ ಮೂರು ಭಾಗಗಳಿವೆ. ಇನ್‍ಫನೋ (ನರಕ), ಪರ್ಗೆಟೋರಿಯೋ (ಸ್ವಲ್ಪ ಪಾಪ ಮಾಡಿದವರು ಶುದ್ಧಿಯಾಗುವ ಲೋಕ) ಮತ್ತು ಪ್ಯಾರಡೈಸೋ(ಸ್ವರ್ಗ). ಮೊದಲನೆಯ ಕ್ಯಾಂಟೋ ಇಡೀ ಕಾವ್ಯಕ್ಕೆ ಪ್ರವೇಶ. ಪ್ರತಿಭಾಗದಲ್ಲಿ 33 ಕ್ಯಾಂಟೋ. ಹೀಗೆ ಒಟ್ಟು 100 ಕ್ಯಾಂಟೋಗಳು: ಇದು ಪರಿಪೂರ್ಣ ಸಂಖ್ಯೆಯಾದ ಹತ್ತರ ವರ್ಗ. ಒಟ್ಟು ಈ ಮಹಾಕಾವ್ಯದಲ್ಲಿ 14,233 ಪಂಕ್ತಿಗಳಿವೆ. ಕತ್ತಲೆ ಆವರಿಸಿದ ಕಾಡಿನಲ್ಲಿ ಕವಿ ದಾರಿ ತಪ್ಪುತ್ತಾನೆ. ಒಂದು ಚಿರತೆ, ಒಂದು ಸಿಂಹ, ಒಂದು ಹೆಣ್ಣು ತೋಳ ಎದುರಾಗಿ ಭಯದಿಂದ ಓಡುತ್ತಾನೆ. ಆಗ ವರ್ಜಿಲ್ ಕವಿಯ ಚೇತನ ಎದುರಾಗಿ ಅಭಯ ನೀಡಿ ಮೂರೂ ಲೋಕಗಳ ದರ್ಶನ ಮಾಡಿಸುತ್ತದೆ. ‘ಡಿವೈನ್ ಕಾಮಿಡಿ’ಯನ್ನು ಡಾಂಟೆ ಬ್ರಿಯಾಂಟಳ ನೆನಪಿನ ಯೋಗ್ಯಕೃತಿ ಮಾಡಲು ಬಯಸಿದ್ದರೂ ತನ್ನ ದೇಶಭ್ರಷ್ಠತೆ, ಏಕಾಂಗಿತನ ಎಲ್ಲವನ್ನೂ ಕೂಡ ಸೇರಿಸಿದ. ತನ್ನ ಕಥಾನಕಕ್ಕೆ ಅನ್ಯಾರ್ಥ ಅಂಶವನ್ನು ಸೇರಿಸಿ ಅದನ್ನು ಕ್ರೈಸ್ತ ನಂಬಿಕೆಗಳ ದರ್ಶನವನ್ನಾಗಿಸಿದ. ಈ ಕೃತಿಯಲ್ಲಿ ಮಧ್ಯಯುಗದ ವಿದ್ವತ್ತು, ನಂಬಿಕೆಗಳು ಎಲ್ಲವೂ ಈ ಮಹಾಕಾವ್ಯದಲ್ಲಿ ಅಂತರ್ಗತವಾಗಿದೆ. ಇದೊಂದು ರೀತಿಯಲ್ಲಿ ಮಾನಸಿಕ ನೆಲೆಯ ಮಹಾಕಾವ್ಯ ಎನ್ನ ಬಹುದು. ಇಲ್ಲಿ ಮಾನವ ಸ್ವಭಾವಗಳಿಗಿಂತ ತಾತ್ವಿಕ ನೆಲೆಯ ವಿಶ್ಲೇಷಣೆ ಇರುವುದನ್ನು ನಾವು ಗಮನಿಸ ಬಹುದು.
ಜಾನ್ ಮಿಲ್ಟನ್‍ನ ‘ಪ್ಯಾರಡೈಸ್ ಲಾಸ್ಟ್’ನ ವಸ್ತು ಮನುಕುಲದ ಮಾತಾಪಿತರಾದ ಆಡಂ ಮತ್ತು ಈವ್ ಅವರ ಕುರಿತಾದ್ದು. ಅವರು ಈಡನ್ ತೋಟದಲ್ಲಿ ಇದ್ದರು. (ಇದೇ ಪ್ಯಾರಡೈಸ್). ಇಲ್ಲಿ ಚಿರವಸಂತ. ಚಳಿಗಾಳಿಗಳಿಲ್ಲ. ರೋಗರುಜಿನಗಳಿಲ್ಲ, ಮುಪ್ಪು ಸಾವಿಲ್ಲ, ತಾವು ದಿಗಂಬರರು ಎನ್ನುವ ಕಲ್ಪನೆ ಕೂಡ ಇಲ್ಲ. ಇತ್ತ ಸ್ವರ್ಗದಲ್ಲಿ ಭಗವಂತನಿಗೆ ವಿರೋಧವಾಗಿ ಸೇಟನ್ ಬಂಡೆದ್ದನು. ಅನೇಕ ಜನ ಏಂಜಲ್‍ಗಳನ್ನು ತನ್ನ ಕಡೆ ಒಲಿಸಿ ಕೊಂಡನು. ಆದರೆ ಯುದ್ಧದಲ್ಲಿ ಸೋತು ತನ್ನ ಸಹಚರರೊಂದಿಗೆ ನರಕಕ್ಕೆ ತಳ್ಳಲ್ಪಟ್ಟನು. ಸೇಟನ್ ಒಬ್ಬನೇ ಅಲ್ಲಿಂದ ತಪ್ಪಿಸಿ ಕೊಂಡು ಹೋಗಿ ಹಾವಿನ ರೂಪದಲ್ಲಿ ಈಡನ್ ತೋಟವನ್ನು ಹೊಕ್ಕನು, ಈವ್ ಒಬ್ಬಳೇ ಇದ್ದಾಗ ಕಾಣಿಸಿ ಕೊಂಡ. ಅಲ್ಲಿನ ಜ್ಞಾನವೃಕ್ಷದ ಹಣ್ಣನ್ನು ತಿನ್ನ ಬಾರದು ಎನ್ನುವುದು ಭಗವಂತನ ಅಜ್ಞೆ. ಅದನ್ನು ತಿನ್ನುವಂತೆ ಈವಳ ಮನ ಒಲಿಸಿದ. ಅವಳ ಮೇಲಿನ ಪ್ರೇಮದಿಂದ ಆಡಂ ಕೂಡ ಹಣ್ಣನ್ನು ತಿಂದ. ಭಗವಂತನ ದೂತ ಅವರಿಬ್ಬರನ್ನೂ ತೋಟದಿಂದ ಹೊರಕ್ಕೆ ಹಾಕಿದ. ‘ಪ್ಯಾರಡೈಸ್ ಲಾಸ್ಟ್’ನಲ್ಲಿ ಪ್ರಮುಖವಾಗುವುದು ಸೇಟನ್ ಪಾತ್ರ ಎಂದು ಕವಿ ಬ್ಲೇಕ್ ಗುರುತಿಸಿದ್ದಾನೆ. ಮಿಲ್ಟನ್ ಸ್ವತ: ಬಂಡಾಯಗಾರ. ಇಂತಹ ಲಕ್ಷಣಗಳನ್ನು ಸೇಟನ್‍ನಲ್ಲಿ ಕೂಡ ಕಾಣ ಬಹುದು. ಎಂತಹ ಸ್ಥಿತಿಯಲ್ಲಿಯೂ ಭಗವಂತನಿಗೆ ಅವನು ತಲೆ ಬಾಗುವುದಿಲ್ಲ. ಭಗವಂತನಿಗೇ ತನ್ನ ವಿಜಯದ ಕುರಿತು ಅನುಮಾನ ಬರುವಷ್ಟು ಶೈರ್ಯದಿಂದ ಹೋರಾಡುತ್ತಾನೆ. ದುಷ್ಟತನ ಎಷ್ಟು ಆಕರ್ಷಕವಾಗಿರುತ್ತದೆ ಎಂದರೆ ಅದನ್ನು ದೂರ ಇಡುವುದು ಅಥವಾ ಅರ್ಥ ಮಾಡಿ ಕೊಳ್ಳುವುದು ಕಷ್ಟ
ಪಾಶ್ಚಾತ್ಯ ಮಹಾಕಾವ್ಯಗಳನ್ನು ಪರಿಶೀಲಿಸಿದ ನಂತರ ಎರಡು ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಪರಿಶೀಲಿಸಿದರೆ ರಾಮಾಯಣದ ಉದ್ದೇಶ ಪರಿಪೂರ್ಣ ಮನುಷ್ಯನನ್ನು ಚಿತ್ರಿಸುವುದು. ಶ್ರೀರಾಮ ಮರ್ಯಾದಾ ಪುರುಷೋತ್ತಮ, ಜಗತ್ತಿಗೇ ಮಾದರಿಯಾದವನು. ಇಷ್ಟೇ ಅಲ್ಲ ರಾಮಾಯಣದ ಹಲವು ಪಾತ್ರಗಳು ಆದರ್ಶ ಪಾತ್ರಗಳು. ಸೀತೆ ಆದರ್ಶ ಮಹಿಳೆ. ಹನುಮಂತ, ಲಕ್ಷ್ಮಣ, ಸುಮಿತ್ರೆ, ಊರ್ಮಿಳೆ, ಮಂಡೋದರಿ ಹೀಗೆ ಹಲವು ಆದರ್ಶ ಪಾತ್ರಗಳಿವೆ ಎನ್ನುವ ಇಲ್ಲಿ ಚಿತ್ರಿತವಾಗಿರುವ ಸಮಕಾಲೀನ ಬದುಕು ಕೂಡ ತುಂಬಾ ಆಸಕ್ತಿಯುತವಾಗಿದೆ ಎನ್ನುತ್ತಾರೆ. ‘ರಾಮಾಯಣ’ವು ಮೂರು ಸಂಸ್ಕೃತಿಗಳನ್ನು ಸೃಷ್ಟಿಸುತ್ತದೆ. ಮಾನವರ ಅಯೋಧ್ಯ, ರಾಕ್ಷಸರ ಲಂಕೆ, ವಾನರರ ಕಿಷ್ಕಂದೆ. ಈ ಮೂರು ಸಂಸ್ಕೃತಿಗಳನ್ನು ಅಗತ್ಯವಾಗಿ ಹೋಲಿಸಬೇಕು. ರಾಮಾಯಣದ ಪಾತ್ರಗಳು ಸರಳ ಆದರೆ ಪರ್ವತ ಸದೃಶ. ಇಲ್ಲಿನ ಪಾತ್ರಗಳು ಒಂದೊಂದು ಸ್ವಭಾವಕ್ಕೆ ಉದಾಹರಣೆಯಾಗಿ ಬಿಡುತ್ತವೆ. ಇನ್ನು ಮಹಾಭಾರತದ ಕಡೆ ಬಂದರೆ ಇದು ಒಳಗೊಳ್ಳುವಷ್ಟು ಜೀವನಾನುಭವವನ್ನು ಜಗತ್ತಿನ ಬೇರೆ ಯಾವುದೇ ಮಹಾಕಾವ್ಯ ಒಳಗೊಂಡಿಲ್ಲ ಎನ್ನ ಬಹುದು ಇಲ್ಲಿನ ಹೊರ ಜಗತ್ತಿನ ಮತ್ತು ಒಳಜಗತ್ತಿನ ಅನುಭವ ವ್ಯಾಪ್ತಿ ಮತ್ತು ಶ್ರೀಮಂತಿಕೆ ಅಗಾಧವಾಗಿದೆ. ಕಾರ್ಯನಿಯಮದ ದರ್ಶನವು ಮಹಾಭಾರತವನ್ನು ಚೈತನ್ಯಮಯವಾಗಿಸಿದೆ. ಈ ದರ್ಶನಕ್ಕೆ ಎರಡು ಮುಖ. ಒಂದು ಧರ್ಮದ ಘನತೆ ಇನ್ನೊಂದು ಕಾರ್ಯನಿಯಮ. ಕಾಮ, ಕೇಡು, ಸಾವು ಮೂರನ್ನೂ ಮಹಾಭಾರತ ತನ್ನದೇ ಆದ ರೀತಿಯಲ್ಲಿ ವಿಶ್ಲೇಷಿಸಿದೆ.
ಪಾಶ್ಚಾತ್ಯ ಮತ್ತು ಭಾರತೀಯ ಎರಡೂ ಮಹಾಕಾವ್ಯ ಪರಂಪರೆ ಒಬ್ಬ ಅಸಾಧಾರಣ ನಾಯಕ(ಅಥವಾ ಕುಟುಂಬದ) ಸುತ್ತ ಬೆಳೆಯುತ್ತದೆ. ಒಂದು ಅಥವಾ ಹಲವು ಸಮುದಾಯದ ಭವಿಷ್ಯವು ಅವನನ್ನು ಅವಲಂಭಿಸಿದೆ. ಎರಡೂ ಪರಂಪರೆಗಳೂ ದೈವಸದೃಶ ಪಾತ್ರಗಳನ್ನು ಸೃಷ್ಟಿಸುತ್ತವೆ. ಮಾನವನನ್ನು ಮೀರಿದ ಅಂತಹ ಒಂದು ಶಕ್ತಿ ಇದೆ. ಮಾನವನ ಬದುಕಿಗೂ ಆ ಶಕ್ತಿಗೂ ನಿಕಟ ಸಂಬಂಧವಿದೆ ಎನ್ನುವುದನ್ನು ಎಲ್ಲಾ ಮಹಾಕಾವ್ಯಗಳೂ ಒಪ್ಪುತ್ತವೆ. ಎರಡೂ ಪರಂಪರೆಯಲ್ಲಿಯೂ ಒಂದು ವಿಶಿಷ್ಟವಾದ ಅಂಶವೆಂದರೆ ಪರಾಕ್ರಮಿಯಾದ ಶತ್ರವಿನ ಸಾವನ್ನು ವಿಜಯದ ಸಂಭ್ರಮದ ವಸ್ತುವಾಗಿಸಿದೆ ಗಂಭೀರ (ಟ್ರ್ಯಾಜಿಕ್) ಎಂದು ಪರಿಗಣಿಸುವುದು. ಎರಡೂ ಪರಂಪರೆಯ ಮಹಾಕಾವ್ಯಗಳಲ್ಲಿಯೂ ಘೋರ ಸಮರಗಳಾಗುತ್ತವೆ. ರಾಜರ ಸಮಾಲೋಚನೆ ಸಭೆ ನಡೆಯುತ್ತದೆ. ಆದರೆ ಪಾಶ್ಚಾತ್ಯ ಮಹಾಕಾವ್ಯಗಳಲ್ಲಿ ಯುದ್ಧ ಅಷ್ಟು ಮುಖ್ಯವಲ್ಲ. ‘ಡಿವೈನ್ ಕಾಮಿಡಿ’ಯಲ್ಲಿ ಯುದ್ಧವೇ ಇಲ್ಲ. ‘ಆಡಿಸಿ’ಯಲ್ಲಿ ನಡೆಯುವುದು ಕೇವಲ ಕಾದಾಟ ಅಷ್ಟೇ. ಭಾರತೀಯ ಪರಂಪರೆಯಲ್ಲಿ ಯುದ್ಧ ತಾತ್ವಿಕ ರೂಪ ಪಡೆದು ಧರ್ಮ ಮತ್ತು ಅಧರ್ಮಗಳ ನಡುವಿನ ಸಂಘರ್ಷವಾಗುತ್ತದೆ. ಮಹಾಕಾವ್ಯ ಅಭ್ಯಾಸಿಗಳೆಲ್ಲರೂ ಗಮನಿಸಿದ ಮುಖ್ಯ ವ್ಯತ್ಯಾಸ ಎಂದರೆ ಪಾಶ್ಚಾತ್ಯ ಮಹಾಕಾವ್ಯಗಳ ಕಥೆ ಮಧ್ಯದಲ್ಲಿ ಆರಂಭವಾಗುತ್ತದೆ. ಭಾರತೀಯ ಕಾವ್ಯಗಳಲ್ಲಿ ಅದು ಪೂರ್ವಿಕರ ಕಥೆಯಿಂದ ಆರಂಭವಾಗುತ್ತದೆ. ಇದು ಕೇವಲ ತಂತ್ರದ ವ್ಯತ್ಯಾಸವಲ್ಲ ನಂಬಿಕೆಯ ವ್ಯತ್ಯಾಸ. ಪಾಶ್ಚಾತ್ಯ ಕಾವ್ಯಗಳಲ್ಲಿ ವ್ಯಕ್ತಿಯ ಭಾವ ತೀವ್ರತೆ ಮುಖ್ಯವಾಗುತ್ತದೆ. ಆದರೆ ಭಾರತೀಯ ಕಾವ್ಯಗಳಲ್ಲಿ ಬದುಕಿನ ಸಮಗ್ರತೆ ಪುನರ್‍ಸೃಷ್ಟಿಯಾಗುತ್ತದೆ. ಪಾಶ್ಚಾತ್ಯ ಮಹಾಕಾವ್ಯಗಳಲ್ಲಿ ಮನುಷ್ಯ, ಪ್ರಕೃತಿ, ದೇವತೆ ಮೂರೂ ಸೇರಿ ಒಂದೇ ಸೃಷ್ಟಿ. ಭಾರತೀಯ ಮಹಾಕಾವ್ಯಗಳಲ್ಲಿಯೂ ದೇವತೆಗಳು ಸೃಷ್ಟಿಯ ಭಾಗವೇ ಆದರೆ ಇಲ್ಲಿ ಮನುಷ್ಯನಿಗೆ ಆಯ್ಕೆಯ ಸ್ವಾತಂತ್ರ್ಯ ಉಂಟು. ಪಾಶ್ಚಾತ್ಯ ಮಹಾಕಾವ್ಯಗಳಲ್ಲಿ ಮನುಷ್ಯ-ಪ್ರಕೃತಿ ಒಂದೇ ಸೃಷ್ಟಿಯ ಭಾಗವಾಗಿ ಒಂದೇ ದೇವಗಣದ ಪ್ರಭಾವಕ್ಕೆ ಒಳಪಟ್ಟು ರೂಪುಗೊಳ್ಳುತ್ತವೆ. ಪಾಶ್ಚಾತ್ಯ ಮಹಾಕಾವ್ಯಗಳಲ್ಲಿ ನಾಯಕ ಬೇರೊಂದು ಲೋಕವನ್ನು ಹೊಕ್ಕು ಬರುತ್ತಾನೆ. ಅಲ್ಲಿ ಅವನಿಗೆ ಚಿಂತನೆ ಬೋಧನೆ ದೊರಕುತ್ತದೆ. ಭಾರತೀಯ ಮಹಾಕಾವ್ಯಗಳಲ್ಲಿ ವನವಾಸದ ವರ್ಣನೆ ಬರುತ್ತದೆ. ಇಲ್ಲಿ ಋಷಿಗಳಿಂದ ಮಾರ್ಗದರ್ಶನ ದೊರಕುತ್ತದೆ. ಪಾಶ್ಚಾತ್ಯ ಕಾವ್ಯಗಳಲ್ಲಿ ಬದುಕಿನ ಅಗಾಧ ಪ್ರೀತಿ ಸಾವಿನ ವರ್ಣನೆಯಲ್ಲಿ ಮತ್ತೆ ಮತ್ತೆ ಮಿಂಚುತ್ತದೆ. ಆದರೆ ಭಾರತೀಯ ಮಹಾಕಾವ್ಯಗಳಲ್ಲಿಯೂ ಸಾವಿನ ಪ್ರವೇಶವಿದ್ದರೂ ಅದು ಮರೆಯಲಾಗದ ಶಕ್ತಿ ಆಗುವುದಿಲ್ಲ. ಒಂದು ಪರಂಪರೆಯ ಕೃತಿಗಳೆಲ್ಲವೂ ಒಂದೇ ಅಚ್ಚಿನಲ್ಲಿ ಎರಕ ಹೊಯ್ದಿರುವುದಿಲ್ಲ ಎನ್ನುವ ಅಂಶವನ್ನು ಗಣನೆಗೆ ತೆಗೆದು ಕೊಂಡು ಹೇಳುವುದಾದರೆ ಭಾರತೀಯ ಮಹಾಕಾವ್ಯದ ರೀತಿ ಬದುಕಿಗೆ ಹತ್ತಿರವಾದದ್ದು ಈ ಕಾರಣದಿಂದಲೇ ಅದರೊಡನೆ ಸಮೀಕರಣ ಸುಲಭ, ಆದರೆ ಪಾಶ್ಚಾತ್ಯ ಮಹಾಕಾವ್ಯಗಳು ಪ್ರಕ್ಷುಬ್ದ ರೀತಿಯಲ್ಲಿ ಸಾಗುವುದರ ಜೊತೆಗೆ ತಾತ್ವಿಕ ನೆಲೆಗೆ ಹೆಚ್ಚು ಮಹತ್ವ ನೀಡುತ್ತವೆ ಎನ್ನುವುದನ್ನು ಗುರುತಿಸ ಬಹುದು.
-ಎನ್.ಎಸ್.ಶ್ರೀಧರ ಮೂರ್ತಿ