ಪಂಜು ಕಾವ್ಯಧಾರೆ

ಮುಕ್ತಿ ಎಂದು?

ಮಾನವೀಯತೆ ಸತ್ತುಹೋಯಿತೆ
ಜಾತಿ ಧರ್ಮ ಕುಲ ನಶಿಸಿ ಹೋಯಿತೆ
ಶವಗಳು ಬಿಸಾಡುವ ಸ್ಥಿತಿ ಬಂದಿತೆ

ಲಕ್ಷಾಂತರ ಜೀವ ನೋವು ನರಳಾಟ ಸಾವಿನೆಡೆ
ಭೀಕರ ಮಾರಕ ರೋಗಗಳು ವಿಶ್ವದೆಲ್ಲೆಡೆ

ಚಿಕಿತ್ಸೆ ಇಲ್ಲದೆ ನರಳಿ ನರಳಿ ಸಾಯುತಿಹರು
ರೋಗದ ಸೋಂಕು ಎಲ್ಲೆಡೆ ಹರಡುತ್ತ ನೆತ್ತರು

ಮಮತೆ ವಾತ್ಸಲ್ಯ ಪ್ರೀತಿ ಸಮಾಧಿ ಆಯಿತು
ಬದುಕಿ ಉಳಿದವರು ಶವದಂತೆ ಬದುಕುವಂತಾಯಿತು
ಸಾವು-ನೋವು ಹಿಂಬಾಲಿಸುವ ಭಯಾನಕ ನೆರಳಾಯಿತು

ವಿಶ್ವವೇ ಭಯಭೀತ ವಾಗಿರಲೂ ನೆಮ್ಮದಿ ಇಲ್ಲ
ಕಾಲದ ಗರ್ಭಪಾತವಾಗಿ ರಕ್ತಸಿಕ್ತ ಭಾವಗಳೆಲ್ಲ

ಮೇಲು ಕೀಳು ಎನ್ನದೆ ಸಹಸ್ರಾರು ಬಲಿಯಾದರು
ಸಂಸ್ಕೃತಿ ಇಲ್ಲ ಸಂಸ್ಕಾರವಿಲ್ಲ ಸ್ಮಶಾನವು ಇಲ್ಲವಾಯಿತು

ಮಸೀದಿ ಮಂದಿರ ಚರ್ಚುಗಳಲ್ಲಿ ಬಿಕೋ ಎನ್ನುತ್ತಿದ್ದವು
ನಗರ- ಗ್ರಾಮ ಗಳೆಲ್ಲವೂ ನಿರ್ಜನ ಪ್ರದೇಶಗಳಾಗಿದ್ದವು

ಆಗಸವು ಕಂಬನಿಗೆರೆದಿತ್ತು ಧಾರಾಕಾರವಾಗಿ ಸುರಿದಿತ್ತು
ಮೊರೆಹೋಗುವುದರೂ ಎಲ್ಲಿ ದಿಕ್ಕೇ ತೋಚದಂತಾಗಿತ್ತು

ಪ್ರತಿ ಗಳಿಗೆಯೂ ಕಾಡಿದೆ ದುಃಸ್ವಪ್ನ
ಸಂಬಂಧಗಳಲ್ಲಿಯೂ ಬಿರುಕು ಬೀಳುತ್ತಿದೆ

ಮನೆಮನೆಯಲ್ಲಿಯೂ ನೆಲೆ ಇಲ್ಲ ಬೇಲಿಯೇ ಎಲ್ಲ
ಬಯಸಿದರು ಸ್ಮಶಾನದಲ್ಲಿ ಜಾಗವಿಲ್ಲ

ಗಾಳಿನೀರಿಗೂ ಬಂತು ಹಾಹಾಕಾರ ಚೇತರಿಕೆಯು ಇಲ್ಲ
ದಾನ ನೀಡಿದರು ದಾನಿ ದೇವನಾಗಲಾರ

ಸಾವು ಹೇಳಲಿಲ್ಲ ಒಂದಿಷ್ಟು ಸಾಂತ್ವನ ಮನಸ್ಸುಗಳಿಗೆ
ರೋಗಮುಕ್ತ ವಾಗಲಿಲ್ಲ ದುರ್ಬಲರ ಆಕ್ರಂದನ

ವೈದ್ಯರು ಶತಪ್ರಯತ್ನ ಪಟ್ಟರು ಫಲಕಾರಿಯಾಗಲಿಲ್ಲ
ಮುಕ್ತಿಎಂದು? ಕಾಲಾಯ ತಸ್ಮೈ ನಮಃ

ಹೆಚ್ ಶೌಕತ್ ಅಲಿ ಮದ್ದೂರು


ಭಾವಗಳ ಮೂಟೆ….

ಭಾವಗಳ ಮೂಟೆ
ಕಟ್ಟಿಟ್ಟು ಕಟ್ಟಿಟ್ಟು
ಹಬೆಯಾಗಿದೆ ಹೃದಯ!

ಹಾಡಿ ನಲಿದ ಒಲವು
ಎಂದೊ ಬೂದಿಯಾಗಿ
ನಿಂತು ಬೇರೂರುವ ಛಲಕೆ
ಮನಸ್ಸು ಕಲ್ಲು!

ಕಟ್ಟಿಟ್ಟ ಕನಸು
ಗಂಟಿಕ್ಕಿದ ಗೀತೆ
ಹನಿದು ಹನಿದು
ತೊರೆಯಂತೆ!

ಹರಿದು ಹಗುರಾಗುವ
ತಾಣವಿಲ್ಲ; ಬರಿದೆ ಬೊಗಳೆ
ನುರಿದು ಹಸನಾಗುವ
ನೂಲು ಅಲ್ಲವೇ ಅಲ್ಲ; ಕಗ್ಗಂಟು!

ಮತ್ತೊಮ್ಮೆ ಹೀಗೆಯೆ
ಪ್ರಾರಂಭಿಸಲಿ ಹೊಸತು
ಹಳೆಯ ನಂಬಿಕೆಯ ಹೊಸಲಲಿ
ಕಾಮನಬಿಲ್ಲ ರಂಗು ರಂಗೊಲಿ!

ದಿವ್ಯ ಆಂಜನಪ್ಪ


ಕವಿ ಕಂಡ ಚಿಗುರೆಲೆ

ನೆಲದ ಸವಿ ಹಾಲ ಹೀರಿ ಮೊಳೆತು
ಹಸಿರ ಸೊಬಗ ಉಡುಗೆ ತೊಟ್ಟು ಕುಳಿತು
ಪುಷ್ಪ ಕಾಶಿಗೆ ಕಾದಿದೆ ಎಳೆಯ ಜೀವ
ಕವಿ ಕಂಡ ಚಿಗುರೆಲೆಯ ಸಂಭ್ರಮ.

ಗಾಳಿ ಹಿತಕೆ ಮನದಿ ಮುದದಿ ನಾಚಿ
ಸುತ್ತ ಜೀವದುಸಿರ ರಂಗ ಚೆಲ್ಲಿ
ವಸಂತನ ಸೆಳೆವ ನೋಟವ ಬೀರಿ
ಒಲವಿನ ಹಾಡಾದ ಚಿಗುರ ಸಂಭ್ರಮ.

ಹಲವು ಹಗಲುಗಳ ಕಿರಣದಿ ಬಲಿತು
ಮೊಗ್ಗ ಭಾರ ಸಹಿಸಿ ಬೆಳಕನುಂಡು
ದುಂಬಿ ಗೆಳೆತನವ ಕಾದ ಜೀವ
ಎನಿತು ಬೆರಗು ಚಿಗುರೆಲೆಯ ಸಂಭ್ರಮ.

ಬದುಕ ಎಳೆತನವ ಕಳಚಿ ನಕ್ಕು
ಚಿಟ್ಟೆ ಹೆಜ್ಜೆಯ ಗುರುತು ಹೂವಾಗಿ
ಹೊಸ ಜೀವಕೆ ಮುದದಿ ಮುನ್ನುಡಿಯಿಡಲು
ಮತ್ತದೇ ಮೆರಗು ಚಿಗುರೆಲೆಯ ಸಂಭ್ರಮ.

ನಿರಂಜನ ಕೇಶವ ನಾಯಕ


  1. ನಿಲುವು

ಎದೆಗೂಡಿನಲ್ಲಿಂದು ಮಡಿದು
ಮಲಗಿದ ಹಕ್ಕಿ ಮರಿಗಳ ಹೆಕ್ಕಿ
ರೆಕ್ಕೆ ಪುಕ್ಕಗಳ ಅಚ್ಚುಕಟ್ಟಾಗಿ ಸುತ್ತಿ
ನಡೆದು ಗಾವುದ ದೂರ
ಹೊತ್ತೊಯ್ದು ಭಾರ
ಬಿಸುಟಿ ಬರಬೇಕು

ಹೇಳಿ ಬರಬೇಕು ಮತ್ತೆ
ತಪ್ಪಿಯೂ ಹುಟ್ಟಿ ಬರದಿರಿ
ಇಟ್ಟು ಮಲಗದಿರಿ ತಲೆ ಇತ್ತಕಡೆ
ನೆಚ್ಚಿ ಬಂದರಿಲ್ಲೀಗ
ಉಳಿದಿಲ್ಲ ಹಚ್ಚಹಸಿರು
ಬೆಚ್ಚನೆಯ ಮಾಡು

ಮೂಳೆಗಳು ಮುಡುಗಿ
ನೆಲಕಚ್ಚಿ ನಿಲುವು
ಉಳಿದದ್ದು ಬರಿ ನಾಲ್ಕು
ಗಟ್ಟಿ ಎಲುವು

  1. ನಿಲುವು

ಬಿದ್ದ ನೋವುಗಳ ಮೇಲೆ
ಕಟ್ಟಿ ಬಿಡಬೇಕು ಗೋರಿ
ಮೂಳೆ ಮುರಿತಕ್ಕೆಲ್ಲ
ಸೀಳು ಸೆಳೆತಕ್ಕೆಲ್ಲ ಮೆಣಸ
ಲೇಪನವಿಟ್ಟು ತುಸುವೆ
ಶಾಖವ ಕೊಟ್ಟು ಏಳು
ಎಂದೆಳೆದರೆ ಬೆಳೆದು
ಹೊಳೆದು ಮೈದಳೆದು
ಆಳಿಯೇ ಬಿಡುವುವು ನನ್ನೆದೆ
-ಯ ಹೆಸರಿರದ ರಾಜ್ಯ
ಬರಿ ಮೂರು ಮೂರರ
ನಿಬಿಡ ಸಾಮ್ರಾಜ್ಯ

-ಸಹನಾ ಹೆಗಡೆ


ಅಬಲೆ

ನೋವುಗಳೆಲ್ಲ ಕಂಗಳಲಿಳಿದು
ಕಂಬನಿಯಾಗಿ ಉದುರುತಿವೆ
ಹೆಣ್ಣಿನಾಳದಿ ಮನದಲಿ ಹುದುಗಿ
ಕಾಡಿದ ಕೈಗಳ ಶಪಿಸುತಿದೆ

ಕಾಣದ ಕಡಲ ಹೊಡೆತಕೆ ಸಿಲುಕಿ
ಬಿಕ್ಕುತ ಜೀವವ ತೊರೆದಿವೆ
ಗಿಡುಗನ ಹಿಡಿತಕೆ ಸಿಕ್ಕ ಗಿಳಿಯು
ಬೆಚ್ಚುತ ತಿಮಿರವ ಜರೆದಿವೆ

ಭೀಭತ್ಸ ಭೀಕರ ಅಘೋರವು
ಹೆಣ್ಣಿನ‌ ಮನವನೆ ಕದಡಿದೆ
ಚೀತ್ಕಾರವದು ಅಬಲೆಯೊಳಗೆ
ಬಲೆಯಲಿ ಸಿಲುಕುತ ಮುದುಡಿದೆ

ಘೋರ ಸಮರವು ಒಳಗೂ ಹೊರಗು
ಬೇಗುದಿಯಲ್ಲಿ ಕಳೆಯುತಿದೆ
ಕೆಸರಿನೊಳು ಅರಳಿದ ಕುಸುಮವು
ಹೆಣ್ಣಿನ ರೂಪವ ಹೇಳುತಿದೆ.

ಚನ್ನಕೇಶವ ಜಿ ಲಾಳನಕಟ್ಟೆ.


ಮಾರಿ ಬಿಡಿ…..!!

ಸತ್ಯದ ಎದೆಗೆ ಗುಂಡಿಕ್ಕಿ
ಕೊಂದು ಬಿಡಿ…
ಸುಳ್ಳನ್ನೆ ಸತ್ಯವಾಗಿಸುವ
ಹುನ್ನಾರ ಹೆಣಿದು ಬಿಡಿ…

ಹಗಲು ವೇಷಧಾರಿಗಳು
ಎಲುಬಿನ ಹಂದರದ ಮೇಲೆ
ಟಾರುರಸ್ತೆಯ ನಿರ್ಮಿಸಿದವರಲ್ಲವೇ..?
ನೀರ ಬದಲಾಗಿ ಬಡವರ
ರಕ್ತವನೇ ಕುಡಿದು ಬಿಡಿ…..!

ಕುರ್ಚಿಯ ಕಾಲಿಗೆ ಯಾರ ಯಾರ
ಶವದ ಮೆಟ್ಟಿಲು ಸಾಲು ಸಾಲು
ಮಾಡಿದ್ದಿರಿ…!!
ಹುತಾತ್ಮ ಸೈನಿಕರು ಮತ ಪೆಟ್ಟಿಗೆಗೆ
ಕೀಲಿ ಕೈಯಾಗುವ ಜಮಾನಾ ಗೆಳೆಯ…!!
ಸರಕಾರದ ಟೀಕೆ ಕೂಡ
ದೇಶ ದ್ರೋಹವಾಗಿರಲು..
ಸತ್ಯದ ಗೋರಿಗೆ ನಾಲ್ಕು
ಮೊಳೆ ಜಡಿದು ಬಿಡಿ….!!

ನೋವಿನ ನೆತ್ತರು ಬಳ್ಳಿಗೆ
ನೆನಪು ಕ್ಷಣಿಕ….
ಮತ್ತೇನಿದೆ ಮಂದಿರದ ಗಂಟೆಯ
ಸದ್ದನ್ನೇ ಎವಡುಗಚ್ಚುವ
ಹಾಗೆ ಬಾರಿಸಿ ಬಿಡಿ….
ಕಾಶಿಯಿಂದ ಕಾಶ್ಮೀರದವರೆಗೆ
ಮತ್ತೆ ಅಧಿಕಾರದ ಚುಕ್ಕಾಣಿ
ನಿಮ್ಮವರಿಗೆ ನಿಸಂಶಯ ಬಿಡಿ….!!

ಕೋರ್ಟಿನ ತಕ್ಕಡಿ
ಮುರಿದಾಗಿದೆ…!
ಸಂವಿಧಾನದ ಚಕ್ಕಡಿಯ
ಕೀಲು ಕಿತ್ತಾಗಿದೆ…!
ಮತ್ತೇನು ಸಂದೇಶ
ರಾಶಿ ರಾಶಿ ಚಾನಲ್ ಗಳ ಕೊಂಡಾಗಿದೆ….!
ಸತ್ಯದ ಎದೆಗೆ ಗುಂಡಿಕ್ಕಿ
ಕೊಂದಾಗಿದೆ….!
ದೇಶ ಪ್ರೇಮದ ಹೆಸರಲ್ಲಿ
ದೇಶವನೇ ಮಾರಿ ಬಿಡಿ…!!!!!

ದೇವರಾಜ್ ಹುಣಸಿಕಟ್ಟಿ.


ಅನುಭವದ ರಸ ಗಟ್ಟಿಗಳು

ಒಂದು ಭಾಷೆ ಇಬ್ಬರಿಗೆ ಸಮವೆನ್ನುವುದೂ ನಿಜವೆ
ಹಾಗಂತ ಬಹು ಭಾಷೆ ಕಲಿತವರಷ್ಟೇ ಜ್ಞಾನಿಗಳೆ ?
ತಾಯಿ ನುಡಿ ಬಿಟ್ಟು ಬೇರೆ ಗೊತ್ತಿಲ್ಲದ ಸಾಚಾ ಬದುಕಿನ
ಅನುಭವದ ರಸಗಟ್ಟಿಗಳಾದ ಜಾನಪದರು ಅಜ್ಞಾನಿಗಳೆ ?

ಫ್ರೈಡ್ ಕಾಫ್ಕಾ ಕಾಮೂ ಮುಲ್ಲರ್ ಲೆನಿನ್ ಮಾವೊ
ಸಾಕ್ರೆಟೀಸ್ ಅರಿಸ್ಟಾಟಲ್ ಜೆನ್ನ್ ಟಾಲ್ಸ್ಟಾಯ್ ಟಾವೊ
ಓದಲೇನು ಜ್ಞಾನಿಯಾಗಿ ನಾನಾ ಇಸಮ್ಮುಗಳು ಗೊತ್ತಾಗಲು ?
ಇಂಟೆಲೆಕ್ಚುವಲ್ ಆಗಿ ಬೇಲಿ ಹಾಕಿ ಹ್ಯುಮಾನಿಸಮ್ ಇಲ್ಲದೆ ?

ವೇದ ಉಪನಿಷತ್ತು ಪುರಾಣಗಳು ಮತ್ತು ಪುಣ್ಯಕಥೆಗಳು
ಗೀತೆ ಖುರಾನ್ ಬೈಬಲ್ ಇನ್ನಿತರ ಧಾರ್ಮಿಕ ಗ್ರಂಥಗಳು
ತಿಳಿದಿರಲೇಬೇಕೇನು ಸರಿಯಾಗಿ ಮಾನವೀಯತೆ ಕಲಿಯದೆ ?
ಸಕಲ ಜೀವಾತ್ಮರಲ್ಲಿಯೂ ದಯೆ ಕರುಣೆ ಇಲ್ಲದೆ ಕಟುಕನಾಗಿ?

ಇಂತಹವರೆಲ್ಲರ ತಲೆ ಮೆಟ್ಟಿ ಮೂತಿ ತಿವಿಯುವಂತೆ
ಎದೆ ತಟ್ಟಿ ಘನವಾಗಿದ್ದನ್ನು ಗಟ್ಟಿಯಾಗಿ ಹೇಳಿದ್ದಾರೆ
ಯಾವ ಶಾಲೆಗೂ ವಿಶ್ವವಿದ್ಯಾಲಯಕ್ಕೂ ಹೋಗದೆ
ವಚನಕಾರರು ಜಾನಪದರು ದಾಸರು ಅನುಭಾವಿಕರು

ಎಲ್ಲರಿಗೂ ತಿಳಿಯುವಂತೆ ಸರಳವಾಗಿ ಸಹಜವಾಗಿ..
ನೀರಿನಲ್ಲಿ ಮೀನು ಈಜಿದಂತೆ.. ಗಾಳಿಯಲ್ಲಿ ಹಕ್ಕಿ ಹಾರಿದಂತೆ

ಮೋಹನ ವೀ ಹೊಸೂರ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x