ಎಂದಿನಂತೆ ಆಫೀಸಿಗೆ ಹೋಗಿ, ಕಂಪ್ಯೂಟರ್ ತೆಗೆಯುತ್ತಿದ್ದೆ, ನಮ್ಮ ದತ್ತಾಂಶ ನಮೂದಕಿ (ಟೈಪಿಸ್ಟ್) ಒಬ್ಬರು ಬಂದವರೇ, ” ಮೇಡಂ, ನಿನ್ನೆ ಪತ್ರಗಳಲ್ಲಿ ಇದೊಂದು ಬಾಕಿ ಇದೆ, ಟೈಪ್ ಆಗಿಲ್ಲ.” ಎಂದರು. “ಯಾಕೆ” ಎಂದೆ. “ಮೇಡಂ, ಅವರ ಹೆಸರು ಚಿಂತಾಮಣಿ ಎಂದಿದೆ, ಶ್ರೀ ಅಂತ ಬರೀಬೇಕೋ, ಶ್ರೀಮತಿ ಅಂತ ಬರೀಬೇಕೋ ತಿಳೀಲಿಲ್ಲ. ಅದು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯ ಪತ್ರ. ಇಂದೇ ಕೊನೆಯ ದಿನ. ಕಳಿಸಲೇ ಬೇಕು ಇವೊತ್ತು. ಏನು ಬರೀಲಿ, ಶ್ರೀ ಅಥವಾ ಶ್ರೀಮತಿ” ಎಂದು ಕೇಳಿದರು. ಅವರ ಅರ್ಜಿ ನೋಡಿದೆ. ಅಲ್ಲಿ ಹೆಸರಿರಲಿಲ್ಲ. ಬರೀ ವಿಳಾಸ ಮಾತ್ರ ಇತ್ತು. ಕೆಳಗಡೆ ಸಹಿ ಮಾಡಿ, ಅದರ ಕೆಳಗೆ ಚಿಂತಾಮಣಿ ಎಂದು ಬರೆದಿದ್ದಾರೆ. ಈಗ ಏನು ಮಾಡುವುದು. ನಮ್ಮ ಶಾಖೆಯ ಎಲ್ಲರೂ ‘ತುರ್ತು ಮೀಟಿಂಗ್’ ಸೇರಿದೆವು. ಒಬ್ಬರು, “ಚಿಂತಾಮಣಿ” ಎಂದರೆ ಗಂಡಸರೇ ಮೇಡಂ” ಎಂದರು. “ಅದು ಹ್ಯಾಗ್ರೀ ಹೇಳ್ತೀರಾ” ಎಂದೆ. “ಚಿಂತೆ ಇರೋದು ಗಂಡಸರಿಗೇ ಜಾಸ್ತಿ ಮೇಡಂ” ಎಂದು ತೊದಲಿದರು. “ಯಾಕ್ರೀ, ನಾಗಮಣಿ, ರಂಗಮಣಿ, ರಾಜಮಣಿ ಈ ಎಲ್ಲಾ ಹೆಸರೂ ಹೆಂಗಸರದಲ್ವೇನ್ರೀ” ಅಂದೆ. ಅದಕ್ಕವರು, “ಇಲ್ಲಾ ಮೇಡಮ್, ತಮಿಳಿನಲ್ಲಿ ರಂಗಮಣಿ, ರಾಜಾಮಣಿ ಎಂದು ಗಂಡಸರೂ ಇದ್ದಾರೆ” ಎಂದರು. ತಮಿಳಿನ ಗಂಧಗಾಳಿಯೂ ಗೊತ್ತಿರದ ನಾನು, ಸುಮ್ಮನಿರದೇ ಬೇರೆ ಮಾರ್ಗ ಇರಲಿಲ್ಲ. ಆದರೂ ಬಿಡಲಿಲ್ಲ,”ದಾನ ಚಿಂತಾಮಣಿ ಅತ್ತಿಮಬ್ಬೆ ಹೆಣ್ಣುಮಗಳಲ್ವಾ” ಎಂದು ಗೊಣಗಿಕೊಂಡೆ. ಪಾಪ ಅದಕ್ಕೇ ಅವರೇನೂ ಉತ್ತರಿಸಲಿಲ್ಲ.
ಅದೇ ಕೋಪದಿಂದ, “ಇದೇನ್ರೀ, ಈ ಹೆಸರುಗಳು ಗಂಡಸರೋ ಹೆಂಗಸರೋ ತಿಳಿಯಲ್ವಲ್ರೀ, ವ್ಯಾಕರಣದಲ್ಲಿ ಆ ಮತ್ತೆ ಇ ಕಾರಗಳಿಂದ ಮುಕ್ತಾಯವಾಗುವ ಹೆಸರುಗಳೆಲ್ಲಾ ಹೆಂಗಸರ ಹೆಸರುಗಳು ಅಲ್ವೇನ್ರೀ” ಎಂದೆ. ಅವರು ಮಾತ್ರ ಸ್ವಲ್ಪವೂ ವಿಚಲಿತರಾಗದೆ, “ಹೌದು ಮೇಡಂ, ಆದರೆ, ಇಲ್ಲಿನವರಿಗೆ ವ್ಯಾಕರಣ ಗೊತ್ತಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಹೆಂಗಸರ ಹೆಸರನ್ನೂ ಅವರು, ವಸಂತ, ವಿನಯ, ವಿನೋದ ಹೀಗೇ ಬರೆಯುತ್ತಾರೆ ಮೇಡಂ” ಎಂದರು. “ಸರಿ ಬಿಡಿ, ಈಗ ಯಾರಿಗೂ ವ್ಯಾಕರಣ ಪಾಠ ಮಾಡೋದು ಬೇಡ. ಚಿಂತಾಮಣಿಯ ಚಿಂತೆ ಬಿಡಿಸಿ ಸಾಕು” ಎಂದು ಮೀಟಿಂಗ್ ಮುಗಿಸಿದೆ.
ಗೂಗಲಿಸಿ ಹುಡುಕಿದಾಗ, ದೊರಕಿದ ಹೆಸರು, ‘ಶ್ರೀಮತಿ ಎಸ್ ಸುಶೀಲಾ ಚಿಂತಾಮಣಿ’, ತಕ್ಷಣವೇ, ಆರ್ಕಿಮಿಡೀಸ್ ನಂತೆಯೇ ಖುಷಿಪಟ್ಟು, “ನೋಡ್ರೀ ಇಲ್ಲಿ, ಚಿಂತಾಮಣಿ ಎಂದರೆ ಹೆಂಗಸರೇ” ಎಂದು ಕೂಗಿದೆ. ಮತ್ತೆ ಎಲ್ಲಾ ಸೇರಿದರು. ಒಬ್ಬರೆಂದರು, ” ಅಲ್ಲ ಮೇಡಂ, ಅವರು ಹೆಸರು ಚಿಂತಾಮಣಿ ಅಲ್ಲ, ಅವರ ಊರು ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು” ಎಂದರು. ಉತ್ತರ ಕರ್ನಾಟಕದಿಂದ ಹೋದ ನನಗೆ ಅಷ್ಟೂ ಗೊತ್ತಿಲ್ಲವೆಂದು ಸುಮ್ಮನಾಗಿ ಬಿಟ್ಟೆ.
ಇನ್ಯಾವ ದಾರಿಯಿದೆ ಹುಡುಕಲು ಎಂದು ನೆನಪಿಪಿಸಿಕೊಂಡೆ. ಅರ್ಜಿಯಲ್ಲಿ ಅವರ ಫೋನ್ ನಂಬರ್ ಇದೆ. ಫೋನ್ ಮಾಡಿ, ಹೆಂಗಸರು ಹಲೋ ಎಂದರೆ ಶ್ರೀಮತಿ, ಗಂಡಸರಾದರೆ ಶ್ರೀ ಎಂದುಕೊಂಡೆ. ಫೋನ್ ಎತ್ತಿದ ಧ್ವನಿ ಹೆಂಗಸರದೇ. ನಾನೇ ಸರಿ ಎಂದು ಖುಷಿಯಾಯಿತು. ಆದರೂ ಒಮ್ಮೆ ಪರೀಕ್ಷಿಸಿ ಬಿಡೋಣ ಎಂದು “ಚಿಂತಾಮಣಿಯವರಾ” ಎಂದೇ ಬಿಟ್ಟೆ. “ಅವರಿಲ್ಲಾರೀ” ಎಂದು ಕಾಲ್ ಕಟ್ ಮಾಡಿಬಿಟ್ಟರು. ಅಯ್ಯೋ, ಈವಮ್ಮ ಅವನಿಲ್ಲ ಅಥವಾ ಅವಳಿಲ್ಲಾ ಎಂದಾದರೂ ಹೇಳಬಾರದಿತ್ತೇ ಎಂದು ಕೊರಗಿದೆ.
ನಮ್ಮೂರೇ ಚಂದ. ಹೀಗೆ ಫೋನ್ ಮಾಡಿದರೆ, ಫೋನ್ ಎತ್ತಿದವರು, ಅವನಿಲ್ರೀ ಅಥವಾ ಅಕಿಯಿಲ್ರೀ, ಸಾಲೀಗೆ ಹೋಗ್ಯಾರ್ರೀ, ಹೊಲಕ್ಕ ಹೋಗ್ಯಾರ್ರೀ, ಸಂಜೀಕೆ ಬರತಾರ್ರೀ, ಬಂದ ಕೂಡಲೇ ಇದ ನಂಬರಿಗೆ ಫೋನ್ ಹಚ್ಚು ಅಂತೇನಿ ಬಿಡರಿ, ಅಂದು ಯಾಕ ಹೋಗಿದ್ದು, ಎಲ್ಲೆ ಹೋಗಿದ್ದು, ಯಾವಾಗ ಬರುತ್ತಾರೆ ಎಲ್ಲಾ ಹೇಳಿ ಬಿಡುತ್ತಾರೆ. ಮಾತು ಮುಂದುವರಿಸೋದಕ್ಕೂ ಒಂದು ಹಾದಿ ಇರುತ್ತದೆ. ಇಲ್ಲಿಯವರ ಹಾಗೆ ಅದ್ಯಾರೋ, ಅದೇನೋ ಗೊತ್ತಿಲ್ಲ ಎಂದು ಮುಖಕ್ಕೇ ಕುಕ್ಕಿದವರಂತೆ ಫೋನ್ ಕುಕ್ಕುವುದಿಲ್ಲ.
ಈಗ ಏನು ಮಾಡುವುದು. ಪತ್ರದಲ್ಲಿ ಹೆಸರೇ ಬರೆಯದೇ ಮಾನ್ಯರೇ ಎಂದು ಬರೆದರೆ ಹೇಗೆ. ಅಯ್ಯಪ್ಪಾ, ಬೇಡಾ. ಇದು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯ ಪತ್ರ. ನಾಳೆ ಪತ್ರದಲ್ಲಿ ನನ್ನ ಹೆಸರು ಇಲ್ಲವೆಂದೂ ಅಪೀಲು ಹೋಗಬಹುದು. ಇಲ್ಲವೆಂದರೆ, ಶ್ರೀ/ ಶ್ರೀಮತಿ ಎಂದು ಬರೆದರೆ ಹೇಗೆ. ಬೇಡಾ, ತೀರಾ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಬರೆದಂತಾಗುವುದು ಎಂದು ಸಹ ಅನಿಸಿತು.
ಮೊದಲಿನ ಕಾಲದ ಹೆಸರುಗಳೇ ಚೆಂದವಾಗಿದ್ದವು. ಎಷ್ಟು ಸುಲಭವಾಗಿ ಸ್ತ್ರೀಲಿಂಗ ಪುಲ್ಲಿಂಗ ತಿಳಿಯುತ್ತಿತ್ತು. ಕಾಳವ್ವ, ಕಾಳಪ್ಪ, ನಾಗಮ್ಮ ನಾಗಪ್ಪ, ಗುಂಡಮ್ಮ, ಗುಂಡಪ್ಪ, ಎಂದೆಲ್ಲಾ ಹೆಸರುಗಳು. ಈಗ ಅವ್ವ, ಅಕ್ಕ, ಅಪ್ಪ, ಅಣ್ಣ ಅನ್ನುವ ಸಂಸ್ಕೃತಿಯೇ ಉಳಿದಿಲ್ಲ. ಉತ್ತರ ಕರ್ನಾಟಕದಲ್ಲೂ ಈ ತೊಂದರೆಯಿದೆ. ಕಮಲಕ್ಕನವರ್ ಸರ್ ಎಂದರೂ, ರಾಮಣ್ಣನವರ್ ಮೇಡಂ ಎಂದರೂ ಅಭಾಸವೇ ಎಂದು ವಿಚಾರ ಮಾಡುತಿದ್ದೆ.
ಅಷ್ಟರಲ್ಲಿ ನನಗೊಂದು ಫೋನ್ ಕಾಲ್ ಬಂತು, ಒಂದು ಗಂಡು ಧ್ವನಿ, “ಮೇಡಂ, ನಾನು ಚಿಂತಾಮಣಿ, ಫೋನ್ ಮಾಡಿದ್ದಿರಂತೆ. ಅಮ್ಮ ಈ ನಂಬರ್ ಕಳಿಸಿದರು.” ಎಂದರು. ಅಬ್ಬಾ, ಚಿಂತೆ ಬಿಡಿಸಿದಿರಾ, ಚಿಂತಾಮಣಿಯವರೇ, ಎಂದುಕೊಂಡು, ನಿಶ್ಚಿಂತೆಯಿಂದ, “ನೀವು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯಲ್ಲಿ ಮಾಹಿತಿ ಕೇಳಿದ್ದಿರಲ್ಲ, ವಿಳಾಸ ಸರಿಯಾಗಿದೆಯೇ ಎಂದು ಪರಿಶೀಲಿಸಲು ಫೋನ್ ಮಾಡಿದ್ದು” ಎಂದೆ.
“ಮೇಡಂ, ನಾನೀಗ ನಿಮ್ಮ ಆಫೀಸ್ ಹತ್ತಿರವೇ ಇದ್ದೇನೆ, ನಾನೇ ಬಂದು ಮಾಹಿತಿ ಪಡೆಯುವೆ, ಅಂಚೆಗೆ ಹಾಕಬೇಡಿ” ಎಂದರು. ಸರಿ ಬಿಡಿ, ನಮಗೀಗ ನಿಮ್ಮ ಹೆಸರಿನ ಹಿಂದೆ ಶ್ರೀ ಅಂತಾನೋ ಶ್ರೀಮತಿ ಅಂತ ಬರೆಯುವದೋ ನಿರ್ಧಾರ ಆಯ್ತು, ಎಂದುಕೊಂಡೆ. ಚಿಂತಾಮಣಿಯವರ ನಾಮಕರಣಕ್ಕೆ ಎಷ್ಟು ಜನ ಬಂದಿದ್ದರೋ, ಏನೇನು ಭಕ್ಷ್ಯಗಳನ್ನು ತಿಂದಿದ್ದರೋ, ಒಬ್ಬರಿಗಾದರೂ ಮುಂದೆ ಈ ಹೆಸರು ಇಷ್ಟು ತೊಂದರೆ ಮಾಡಬಹುದೆಂಬ ಕಲ್ಪನೆ ಬರಲಿಲ್ಲವೇ ಎಂದುಕೊಳ್ಳುತ್ತಾ, ಸೆಕ್ಷನ್ ಗೆ ಬಂದೆ. ಅಲ್ಲಿ ನಮ್ಮ ಟೈಪಿಸ್ಟ್, ” ಮೇಡಂ, ಚಿಂತಾಮಣಿ ಎಂದರೆ ಶ್ರೀ ಅಂತಾನೇ ಮೇಡಂ, ಶ್ರೀಮತಿ ಅಲ್ಲಾ, ಇಲ್ಲಿ ನೋಡಿ, ಚಿಂತಾಮಣಿ ಅಂತ ಕವಿ ಇದ್ದಾರೆ, ಅವರ ಫೋಟೋ ಕೊಟ್ಟಿದ್ದಾರೆ” ಎಂದರು. ಹೌದು, ಪ್ರಸಿದ್ಧ ಕವಿಗಳ ಫೋಟೋ ಸಮೇತ ಪರಿಚಯವಿದೆ ಗೂಗಲ್ನಲ್ಲಿ. “ಸರಿ, ಬೇಗ ಪತ್ರ ತಯಾರಿಸಿ, ಅವರೇ ಬರ್ತಾರಂತೆ, ಮಾಹಿತಿ ಪಡೆಯಲು ಎಂದೆ.
ನಮ್ಮ ಸೂಪರಿಂಟೆಂಡೆಂಟ್ ಮಾತ್ರ, ” ಬಿಡಿ ಮೇಡಂ, ಚಿಂತೆ ಗಂಡಸರಿಗೇ ಜಾಸ್ತಿ ಎಂದು ನಿರ್ಧಾರವಾಯ್ತಲ್ಲ” ಎಂದು ನಕ್ಕು ಬಿಟ್ಟರು.
-ಡಾ. ವೃಂದಾ. ಸಂಗಮ್
ಹೆಸರನ್ಯಾಗ ಏನದ, ಹೆಸರಿನ ಗೊಂದಲ ಅಂತು ಭಾರಿ ಮಜಾ ಅದ. ಓದಿ ನಕ್ಕದ್ದಂತೂ ಖರೆ 😂😂
ಡಾ.ವೃಂದಾ ಸಂಗಂ ಅವರ ಲೇಖನ..’ ಹೆಸರಿನಲ್ಲೇನಿದೆ’ ಬಹಳ ಮೋಜಿನದಾಗಿತ್ತು. ಆಫೀಸಿನ ಮೋಜಿನ ಪ್ರಸಂಗದ ವಿವರಣೆ ತುಂಬ ಕುತೂಹಲದಿಂದ ಕೂಡಿದೆ. ಅದರ ಜೊತೆ ಹೇಳಿದ ಉಳಿದ ವಿಷಯಗಳೂ ಚೆನ್ನಾಗಿ ಮೂಡಿವೆ..ಧನ್ಯವಾದಗಳು
ಪ್ರಸಂಗ ತುಂಬಾ ಗಂಭೀರ ಹಾಗೂ ತಮಾಷೆಯಾಗಿಯೂ ಇದೆ. ಸಂಬಂಧಪಟ್ಟವರಿಗೆ ಗಂಭೀರ, ಬೇರೆಯವರಿಗೆ ತಮಾಷೆ.
ಡಾ. ..ವೃಂದಾ ಸಂಗಮ್ ಆಫೀಸಿನ ಕೆಲಸದಲ್ಲಿ ಆಗಿಂದಾಗ್ಗೆ ಬರುವ ತೊಡಕುಗಳನ್ನು ಹಾಸ್ಯ ಲೇಖನದಂತೆ ಮಂಡಿಸಿ ಅದನ್ನು ಬಗೆಹರಿಸಲು ಪಟ್ಟ ಪಾಡು ಕುತೂಹಲದಿಂದ ಕೂಡಿದೆ ಮತ್ತು ಓದುಗರ ಮನಸ್ಸಿಗೆ ನಾಟುತ್ತದೆ.
ಹೆಸರಿನಲ್ಲೇನಿದೆ,
ಹೆಸರಿನ ಬಗ್ಗೆ ಅನೇಕ ಲೇಖನಗಳನ್ನು ಓದಿದರೂ ವಿಭಿನ್ನವಾಗಿ ನಿಲ್ಲುತ್ತದೆ.
Sundaravada atricle