ತಾನೇ ಕವಿತೆಯಾದ ಕವಿಯ ಕವಿತೆಗಳ ಜಾಡ್ಹಿಡಿದು ನಡೆದಾಗ…..!: ಜಬೀವುಲ್ಲಾ ಎಮ್. ಅಸದ್, ಮೊಳಕಾಲ್ಮುರು.

ಕೃತಿ: ನನ್ನೊಳಗಿನ ಕವಿತೆ (ಕವನ ಸಂಕಲನ – ೨೦೨೦)
ಲೇಖಕರು: ಅಷ್ಫಾಕ್ ಪೀರಜಾದೆ
ಪ್ರಕಾಶನ: ಹೆಚ್. ಎಸ್. ಆರ್. ಎ. ಪ್ರಕಾಶನ, ಬೆಂಗಳೂರು.
ಬೆಲೆ: ೧೫೦/-

“ಕವಿ ಕೊರಳಿಗೆ
ಉರಳಾದ ಕವಿತೆ
ಅದ್ಹೇಗೋ
ಅಮರವಾಗಿತ್ತು
ಕವಿ ಮಾತ್ರ
ಜಗದ ಬೆಳಕಿಗೆ
ಅಪರಿಚಿತನಾಗಿಯೇ
ಉಳಿದುಬಿಟ್ಟ”

ಹೀಗೆಲ್ಲಾ ಸಶಕ್ತವಾದ, ಅರ್ಥಪೂರ್ಣವಾಗಿ ಧ್ವನಿಸುವ ಕವಿತೆ ರಚಿಸುವ ‘ಅಷ್ಫಾಕ್ ಪೀರಜಾದೆ’ ರವರು, ಲೋಕದ ಬೆಳಕಿಗೆ ಅಪರಿಚಿತನಾಗಿ ಕತ್ತಲಲ್ಲೇ ಉಳಿದು ಬಿಡುವ ಕಹಿ ಸತ್ಯವನ್ನು ಕಾವ್ಯದ ಮೂಲಕ ತಮ್ಮ ಮನದಾಳದ ಇಂಗಿತವನ್ನು, ನೋವನ್ನು, ಹತಾಶೆಯನ್ನು, ತಲ್ಲಣವನ್ನು “ನನ್ನೊಳಗಿನ ಕವಿತೆ” ಎಂಬ ಭಾವಪೂರ್ಣ ಕವನ ಸಂಕಲನ ದಲ್ಲಿ ಹಂಚಿಕೊಂಡಿದ್ದಾರೆ.

ಬರಹಗಾರನು ತಾನು ರಚಿಸಿದ ಕವಿತೆಗಳ ಮುಖಾಂತರವೇ ತಾನು ಕವಿ ಎಂದು, ತನ್ನನ್ನು ತಾನು ಗುರುತಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಆವೊಂದು ಗುರುತಿಸುವಿಕೆ ಕಾವ್ಯವನ್ನು ಪ್ರೀತಿಸುವವರಿಂದ ಆಗಬೇಕು. ಆದರೆ ಪ್ರಸ್ತುತ ದಿನಗಳಲ್ಲಿ ಕಾವ್ಯ ಓದುಗರ ಸಂಖ್ಯೆಗಿಂತ ಬರೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಅನಾರೋಗ್ಯಕಾರಿ ಬೆಳವಣಿಗೆ ಎನ್ನಬಹುದು. ಹಾಗಾಗಿ ಇಲ್ಲಿ ಹೊಸಬರ ಕವಿತೆಗಳನ್ನು ಓದುವವರಾರು? ಕವಿತೆಗಳನ್ನು ರಚಿಸಿದ ಲಿಪಿಕಾರನಿಗೆ ‘ಕವಿ’ ಎಂಬ ಮನ್ನಣೆ ಸಿಗುವುದಾದರು ಹೇಗೆ? ಈ ಎಲ್ಲಾ ಪ್ರಶ್ನೆಗಳನ್ನು ನಾವಿಂದು ಕೇಳಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಇಂದಿಗೂ ಸಹ ಹಲವಾರು ಕಾವ್ಯಸಕ್ತರು ಹಿರಿಯ ಮತ್ತು ಪ್ರತಿಷ್ಠಿತ ಕವಿಗಳ ಕವಿತೆಗಳಿಗೆ ಜೋತುಬಿದ್ದಿದ್ದಾರೆ(ಅದು ತಪ್ಪೆಂದು ಹೇಳುತ್ತಿಲ್ಲ). ಹಾಗಾದರೆ ಇಂದಿನ ಕವಿಗಳು ಸತ್ವಯುತ ಕವಿತೆಗಳನ್ನು ಬರೆಯುವುದರಲ್ಲಿ ಸೋತಿದ್ದಾರೆಯೇ? ಎಂದರೆ, ಖಂಡಿತಾ ಇಲ್ಲ ಎಂದು ಹೇಳಲೇ ಬೇಕು. ಅಂತಹ ಸಶಕ್ತ ಕಾವ್ಯಕೃಷಿಯಲ್ಲಿ ತೊಡಗಿಸಿಕೊಡಿರುವ ಅನುಭವಿ ಕವಿಗಳಲ್ಲಿ ಅಷ್ಫಾಕ್ ಪಿರಜಾದೆ ರವರದು ಎದ್ದು ಕಾಣುವ ಹೆಸರು. ವೃತ್ತಿಯಿಂದ ಪಶು ವೈದ್ಯರಾದ ಇವರು ಮನೋಲೋಕ, ಒಂದು ಜೋಡಿ ಕಣ್ಣು, ಎಂಬ ಎರಡು ಕವನ ಸಂಕಲನಗಳ ಜೊತೆಗೆ ಪ್ರೇಮವೆಂದರೆ…, ಜನ್ನತ್ ಮತ್ತು ಇತರೆ ಕಥೆಗಳು ಎಂಬ ಎರಡು ಕಥಾ ಸಂಕಲನಗಳನ್ನೂ ಸಹ ಈಗಾಗಲೇ ಹೊರತಂದಿದ್ದಾರೆ.
ಹಲವು ಪತ್ರಿಕೆಗಳಲ್ಲಿ ಇವರ ಕವಿತೆ, ಕಥೆ, ವಿಮರ್ಶಾ ಲೇಖನಗಳು ಇಂದಿಗೂ ಪ್ರಕಟವಾಗುತ್ತಲೇ ಇವೆಯಾದರೂ ಕವಿ ಕತ್ತಲಲ್ಲೇ ಇನ್ನೂ ಉಳಿದಿರುವಂತೆ ಭಾಸವಾಗುತ್ತದೆ. ಅದಕ್ಕೆ ಕಾರಣವೇನೆಂದರೆ….. ನನ್ನೊಳಗಿನ ಕವಿತೆಯ ಸಂಕಲನದಲ್ಲಿ ಐವತ್ತಾರು ಕವಿತೆಗಳಿದ್ದರೂ ಅವುಗಳಲ್ಲಿ ಮುಖ್ಯವಾಗಿ ಕವಿಯನ್ನು ಮುಖ್ಯ ಭೂಮಿಕೆಯಲ್ಲಿಟ್ಟುಕೊಂಡು ರಚಿಸಿರುವ ಕವಿತೆಗಳು ಹೆಚ್ಚು ಸೆಳೆಯುತ್ತವೆ.

“ಆಗಾಗ ನನಗನಿಸುವುದು
ನನ್ನ ಮುರಿದ ಮನಸ್ಸಿನ
ಮೂಕ ವೇದನೆಗೆ
ನಾನೇ ಧ್ವನಿಯಾದೆ
ನನ್ನ ಹೃದಯದ ಸಾಂತ್ವನಕೆ
ನಾನೇ ಕವಿತೆಯಾದೆ
(ನಾನೇ ಕವಿತೆಯಾದೆ)
* * * *

ಪ್ರಸ್ತುತ ಸಂಕಲನಕ್ಕೆ ಶೀರ್ಷಿಕೆಯಾಗಿರುವ ನನ್ನೊಳಗಿನ ಕವಿತೆ ಯನ್ನ ಅವಲೋಕಿಸಿದಾಗ

“ನನ್ನೊಳಗಿನ ಮೌನಿಯನ್ನು
ದೂರ ಸ್ಮಶಾನಕೊಯ್ದು ಹೂಳಬೇಕು
ಮತ್ತೆಂದಿಗೂ ನನ್ನತ್ತ ಬಾರದಂತೆ
ನನ್ನ ಜೀವಂತ ಶವವಾಗಿಸದಂತೆ”
(ನನ್ನೊಳಗಿನ ಕವಿತೆ)

ನನ್ನೊಳಗಿನ ಕವಿತೆಯಲ್ಲಿ ಕವಿ ತನ್ನೊಳಗಿನ ಮೌನಿಯನ್ನು ಹೂಳಬೇಕು, ಪ್ರೇಮಿಯನ್ನು ಸುಟ್ಟುಹಾಕಿ ಬಿಡಬೇಕು, ಅಂತರಾತ್ಮದ ಬೆಂಕಿಯನ್ನು ನಂದಿಸಿಬಿಡಬೇಕು, ಬಿರುಗಾಳಿಯನ್ನು ದೈತ್ಯ ಮರವೊಂದಕ್ಕೆ ಬಿಗಿದು ಕಟ್ಟಿ ಬರಬೇಕು…..

“ನನ್ನೊಳಗಿನ ಕವಿತೆ ನೀ
ಉಸಿರು ಉಸಿರಿಗೂ ಶತ್ರುಗಳು ಇಲ್ಲಿ
ನಿನ್ನೊಳಗಿನ ಮಗುವನ್ನು ಕಾಪಿಟ್ಟುಕೊಳ್ಳಬೇಕು
ಮುಗ್ಧರು ಇಲ್ಲಿ ಬದುಕುವುದೇ ಕಷ್ಟವಂತೆ”

ಎನ್ನುವಾಗ ಕವಿಯಾಗುವುದು ಎಷ್ಟು ಕಷ್ಟ ಇಲ್ಲಿ, ಕವಿತೆ ಓದಿ ಆಸ್ವಾದಿಸುವರಿಗಿಂತ ಟೀಕಿಸುವವರೆ ಹೆಚ್ಚಿಲ್ಲಿ ಎಂಬುವುದನ್ನು ಕವಿಯ ಕಾವ್ಯ ಬದುಕಿನ ವಿವಿಧ ಮಜಲುಗಳನ್ನು ಪರಿಚಯಿಸುವುದರ ಮೂಲಕ ಅಸಹಾಯಕನಾಗಿ ತನ್ನೊಳಗಿನ ಕಿಡಿಯನ್ನು, ಕಿಚ್ಚನ್ನು ನಿರ್ನಾಮ ಮಾಡುವ ಧೋರಣೆ ವ್ಯಕ್ತವಾಗುತ್ತದೆ.

“ಕವಿಗೆ ಮೊದಲೇ ನಶೆ,
ಕುಡಿಯುವ ಜರೂರತ್ತೆ ಇಲ್ಲ
ಈ ನರಕ ನಗರದಲ್ಲಿ ಒಂಟಿ
ಎದೆಗಾಯಗಳೆ ಅವಳ ಸಂಗಾತಿ
ಬದುಕು ಒಂದು ದಂತ ಕಥೆ”
(ಸಖಿಯಲ್ಲ ಸಾಕಿ)

ಅಷ್ಫಾಕ್ ರ ಜೀವನ ಅನುಭವ ದೊಡ್ಡದು. ಮನುಷ್ಯ ಬದುಕಿನ ನಿತ್ಯದ ಪ್ರತಿ ಮಜಲನ್ನು ಸೂಕ್ಷ್ಮವಾಗಿ ಗ್ರಹಿಸುವ, ಗ್ರಹಿಸಿ ಅವಲೋಕಿಸುವ, ಅವಲೋಕಿಸಿ ಚಿಂತನೆಗೆ ಹಚ್ಚಿ ಕಾವ್ಯದ ಮೂಲಕ ಮರಳಿ ಸಮಾಜಕ್ಕೆ ಕನ್ನಡಿ ಹಿಡಿದು ಕಾಣಿಸುವ ಕಲೆ ಕರಗತವಾಗಿದೆ.

ನಿಮ್ಮ ಹೃದಯದಲ್ಲಿ, ಬುದ್ಧಿಯಲ್ಲಿ
ನಿಮ್ಮ ನಾಡಲ್ಲಿ, ನಿಮ್ಮ ಊರಲ್ಲಿ
ದಯವಿಟ್ಟು
ಕವಿತೆಗೊಂದಷ್ಟು ಜಾಗ ಕೊಡಿ
(ಕವಿತೆಗೊಂದಷ್ಟು ಜಾಗ ಕೊಡಿ)

ಪ್ರಸ್ತುತ ಸಂಕಲನದಲ್ಲಿ ಕವಿತೆಗೆ ಬಳಸಿದ ಭಾಷೆಯ ಬಳಕೆ ಹೇಗಿದೆ ಎಂದರೆ, ಕಾಗದದ ಮೇಲೆ ಗೆರೆಯೊಂದನ್ನು ಎಳೆದಂತಿದೆ. ಸಾದ, ಸೀದ…. ಎಲ್ಲಿಯೂ ಪದಗಳ ದುಂದುವೆಚ್ಚ ಮಾಡದೆ ಹೇಳಬೇಕಾದದ್ದನ್ನು ಯಾವ ಅಡೆತಡೆಯೂ ಇಲ್ಲದೆ, ಮೂಗಿನ ನೇರಕೆ, ನಿರರ್ಗಳವಾಗಿ ಅಷ್ಟೇ ಅರ್ಥಪೂರ್ಣವಾಗಿ ಕವಿಮನದಿಂದ ಓದುಗನ ಮನಕ್ಕೆ ದಾಟಿಸುವ ಸಾಮರ್ಥ್ಯ ಮೆಚ್ಚುವಂಥದ್ದಾಗಿದೆ.

“ಮಾತಿಗೆ ಮಾತು ಬೆಳೆದು
ಮಾತು ಮನಸ್ತಾಪಕೆ ಹೊರಳುವ
ಅಪಾಯವರಿತು ಮೌನ ತಾಳುವೆ
ಶಾಂತಿ ಸಂಧಾನದ ಮೌನಸಂದೇಶ
ಅರಿಯದ ಮಾತು
ಮೌನಕೆ ಅಹಂಕಾರದ
ಬಣ್ಣ ಬಳೆದು
ವಾತಾವರಣ ಹದಗೆಡಿಸಿ
ರಕ್ತ ಇನ್ನಷ್ಟು ಹೆಪ್ಪುಗಟ್ಟಿಸುವುದು”
(ಮಾತಿಗೆ ಮಾತು ಬೆಳೆದು)

ಅಷ್ಫಾಕ್ ರು ಮಿತ ಭಾಷಿ ಮತ್ತು ಮೂಲತಃ ಶಾಂತ ಸ್ವಾಭಾವದವರಾದರೂ ಸಹ, ಅವರ ಕವಿತೆಗಳಲ್ಲಿ ಬಂಡಾಯದ ಹೃದಯ ಮಿಡಿಯುತ್ತದೆ. ಅದರ ಸ್ವರೂಪ ಮತ್ತು ಲಕ್ಷಣಗಳು ಅಲ್ಲಲ್ಲಿ ಬೂದಿಮುಚ್ಚಿದ ಕೆಂಡವಾಗಿ ಗೋಚರಿಸುತ್ತವೆ. ಜೊತೆಗೆ ಎಲ್ಲಿಯೂ ಉದ್ವಿಗ್ನರಾಗಿ ಹೇಳಿದ್ದಾರೆ ಅನ್ನಿಸದೆ, ಇನಿದನಿಯಲ್ಲಿಯೇ ಘರ್ಜಿಸಿದ್ದಾರೆ ಎನ್ನಬಹುದು.

“ಅಗ್ನಿ ಸ್ಪರ್ಶ ನೀಡಿ
ಸುಟ್ಟು ಬೂದಿಯಾಗಿಸಿದರೂ
ಸುಗಂಧ ಬೀರುವ
ಊದೀನ ಕಡ್ಡಿಯ ಹೊಗೆ
ಮುಚ್ಚಿಟ್ಟರೂ ಪರಿಮಳ
ಸೂಸುವ ಮಲ್ಲಿಗೆ ಮಾಲೆ
(ಅಗೋಚರ)

ಇಲ್ಲಿ ಕವಿಗೆ ಕವಿತೆಗಳಲ್ಲಿ ತಾನೆನನ್ನು ಹೇಳುತ್ತಿದ್ದೇನೆ, ಯಾವ ವಿಷಯಗಳನ್ನು ನಿರ್ದೇಶಿಸುತ್ತಿದ್ದೇನೆ ಎಂಬ ಅರಿವಿದೆ. ಅಂತಹ ಅರಿವು ಎಲ್ಲಾ ಕವಿಗಳಿಗೂ ಇರಬೇಕಾಗುತ್ತದೆ. ಇಲ್ಲದಿದ್ದರೆ ಕವಿತೆ ತನ್ನ ಆತ್ಮವನ್ನು ಕಳೆದುಕೊಂಡು ಕೇವಲ ನಿರ್ಜಿವ ಶರೀರವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

” ಜಗದ ಜಂಜಾಟಗಳು
ಚಿಂತೆ ಸಮಸ್ಯೆಗಳು
ಎಲ್ಲಾ ಮರೆತು ಹಾಯಾಗಿರು
ಅವುಗಳನ್ನು ಪರಿಹರಿಸಲು
ಕವಿ ಇದ್ದಾನೆ!”

“ನಿನ್ನ ಮನದ ವೇದನೆ
ದುಃಖ ದುಮ್ಮಾನಗಳು
ಕವಿಯ ಮುಂದಿಟ್ಟು ಸುಮ್ನಿರು
ನೋವು ಮರೆಸಿ
ಮುಖದಲ್ಲಿ ನಗುವರಳಿಸಲು
ಕವಿ ಇದ್ದಾನೆ!”
(ಕವಿ ಇದ್ದಾನೆ!)

ಹೀಗೆ ನೊಂದ ಜೀವಗಳಿಗೆ ಆಪ್ತ ಸ್ಪರ್ಶದಿಂದ ಸಾಂತ್ವನ ನೀಡುವ, ಭರವಸೆ ಹುಟ್ಟಿಸುವ ಕೆಲಸ ಸಾಹಿತ್ಯದಿಂದಾಗಬೇಕು, ಆದರೆ ಆಗುತ್ತಿಲ್ಲ. “ಮನುಷ್ಯ ಒಂಟಿಯಿದ್ದಾಗ ನಿಜವಾಗಿಯೂ ತನ್ನ ಕಣ್ಣನ್ನು ತೆರೆದಿರುತ್ತಾನೆ” ಎಂದು ‘ಗೋಪಾಲಕೃಷ್ಣ ಅಡಿಗ’ ರು ಹೇಳುವಂತೆ, ದುಃಖದ ಮಡುವಿನಲ್ಲಿದ್ದವನು ಸಾಹಿತ್ಯದ ಮೊರೆ ಹೋಗಿ, ಕಾವ್ಯವನ್ನು ಅಪ್ಪಿಕೊಂಡಾಗ ಕವಿತೆ ಹೆಚ್ಚು ಅರ್ಥವಾಗುವುದರ ಜೊತೆಗೆ ಮನದ ನೋವನ್ನು ಹೀರಿಕೊಳ್ಳುತ್ತದೆ. ಕಾವ್ಯಕ್ಕಿರುವ ಮಾಂತ್ರಿಕ ಶಕ್ತಿ ಅಂಥದ್ದು. ಅದನ್ನೇ ಅಷ್ಫಾಕ್ ರು ಈ ಮೇಲಿನ ಕವಿ ಇದ್ದಾನೆ! ಎಂಬ ಕವಿತೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ನಿಜ, ಕವಿ ಇರವುದೇ ಹಾಗೆ.

“ಅಡಿಗೆ ಮನೆಯಿಂದ ಗಟಾರ ಹೊಟ್ಟೆಗೆ
ಹೊರಟು ನಿಂತ ತಂಗಳು ರೊಟ್ಟಿ
ಹಳಸಿದ ಅನ್ನ ಸಾರು ಪಲ್ಯ
ಮಎಲ್ಲಾ ಕಂಡಾಗ ಹಸಿವಿನಿಂದ
ಚುರುಗುಟ್ಟುವ ಹಸಿದ ಹೊಟ್ಟೆಗಳ ನೆನಪು”
(ಹಸಿದ ಹೊಟ್ಟೆಗಳ ನೆನಪು)

ದರ್ಶನಾದಿ ಶಾಸ್ತ್ರಗಳಿಗಿಂತ ಕಾವ್ಯ ಮನೋಹರ, ಕಾವ್ಯಕ್ಕಿಂತ ಮನೋಹರ ಸಂಗೀತ(ಸಂಗೀತ ಕಲ್ಲಿನ ಹೃದಯವನ್ನು ಸಹ ಕರಗಿಸಿ ಬಿಡುವುದು), ಸಂಗೀತಕ್ಕಿಂತಲೂ ಮನೋಹರ ಸುಂದರಿಯ ಮುಖ ದರ್ಶನ. ಆದರೆ – ಹಸಿವಾದಾಗ ಕಾವ್ಯ, ಸಂಗೀತ, ಯುವತಿ ಯಾವುದು ರುಚಿಸುವುದಿಲ್ಲ. “ಅನ್ನದ ಚಿಂತೆಯೊಂದೇ ಪ್ರಪಂಚದಲ್ಲಿ ಎಲ್ಲವನ್ನು ಮರೆಸಬಲ್ಲದು” ಎನ್ನುತ್ತಾರೆ ‘ರಾಮಕೃಷ್ಣ ಪರಮಹಂಸರು.’

ನಿಜ, ಹಸಿವಿನ ಬೇಗೆಯನ್ನು ಇಲ್ಲಿ ಕವಿ ಸಮರ್ಥವಾಗಿ ತಮ್ಮ ಕವಿತೆಯ ಮೂಲಕ ಭಾವನಾತ್ಮಕ ಚಿತ್ರಣವನ್ನು ಇಡೀ ಕವಿತೆಯ ಉದ್ದಕ್ಕೂ ಚಿತ್ರಿಸಿದ್ದಾರೆ. ಹೀಗೆ ಹೇಳುವುದರೊಂದಿಗೆ..
“ಜಗವೆಲ್ಲ ನಗುತಿರಲಿ
ಜಗದಳುವು ನನಗಿರಲಿ”
ಎಂದು ‘ಕವಿ ನಸು ನಕ್ಕ!’ ಎಂಬ ಕವಿತೆಯಲ್ಲಿ ಹೇಳುವುದಿದೆಯಲ್ಲ, ಅದು ಉತ್ಕೃಷ್ಟವಾದ ಸಮರ್ಪಣಾ ಭಾವ, ಎಲ್ಲರಿಂದಲೂ ಸಾಧ್ಯವಾಗದಂತಹುದು. ಕವಿಯಾದವನು ಕೇವಲ ಜಗದ ನೋವಿಗೆ ಸ್ಪಂದಿಸಿದರಷ್ಟೇ ಸಾಲದು, ಆ ನೋವನ್ನು ಹಂಚಿ ಉಣ್ಣುವ ಉದಾತ್ತವಾದ ಮನೋಭಾವವನ್ನು ಬೆಳೆಸಿಕೊಳ್ಳಬೇಕು.

“ಅವನೀಗ ಖಾಲಿ… ಖಾಲಿ!
ಖಾಲಿ… ಕೊಡ,
ಎಲ್ಲವೂ ಸೋರಿ ಹೋಗಿ
ಉಳಿದದ್ದು ಬರೀ ಕೊಡ!!”
(ಅವನೀಗ ಖಾಲಿ ಕೊಡ!!)

ಮನುಷ್ಯನಾದವನು ಜಗದ ಮೋಹ – ಮಾಯೆ, ರಾಗ- ದ್ವೇಷಗಳನ್ನು, ಆಸೆ – ಆಮಿಶ್ಯ ಗಳನ್ನು ಕಳೆದುಕೊಂಡು ನಿಸ್ವಾರ್ಥ, ನಿರ್ಲಿಪ್ತನಾಗಿ, ಎಲ್ಲದರಿಂದ ಮುಕ್ತನಾಗಿ ಬಯಲಾಗಬೇಕು. ಆಗ ಮಾತ್ರ ಸಾಮಾನ್ಯ ಆತ್ಮವೊಂದು ಪಾರಮಾತ್ಮನಲ್ಲಿ ಲೀನವಾಗಿ, ಪರಮಾತ್ಮನೇ ಆಗಲು ಸಾಧ್ಯವೆಂಬುದು ಕವಿ ಮನದ ಪಾರಮಾರ್ಥಿಕ ದೃಷ್ಟಿಕೋನವನ್ನು ಸಾದಾರಪಡಿಸುತ್ತದೆ.

ಇಲ್ಲಿನ ‘ಕತ್ತಲೆಯೊಂದಿಗೆ..’ ಎಂಬ ಕವಿತೆಯನ್ನು ಓದುವಾಗ ‘ಎಚ್ಚೆಸ್ವಿ’ ರವರ “ಇರುಳ ವಿರುದ್ಧ, ಬೆಳಕಿನ ಯುದ್ಧ, ಕೊನೆಯಿಲ್ಲದ ಕಾದಾಟ” ಎಂಬ ಸಾಲುಗಳು ನೆನಪಾಗಿಸುತ್ತಲ್ಲದೆ ದಿವ್ಯ ದಾರ್ಶನಿಕ ಅನುಭೂತಿಗೆ ಈಡು ಮಾಡುವ ಈ ಸಂಕಲನದ ಉತ್ಕೃಷ್ಟ ಕವಿತೆ “ಕತ್ತಲಿನೊಂದಿಗೆ…” ಎಂದು ಹೇಳಲು ಖುಷಿಯಾಗುತ್ತದೆ.
ಹಾಗೆಯೇ, ಕಲ್ಪನೆಯ ಕವಿತೆಯೊಂದು ‘ಖಾಲಿಕಾಗದ’ ವಾಗಿ ಅಸ್ತಿತ್ವ ಪಡೆಯುವ ಬಗೆ ಆಪ್ತವಾಗುತ್ತದೆ.

“ಕವಿ ಸತ್ತಾಗ
ವಿಧವೆ ಕಾವ್ಯ
ಶವದ ಬಳಿ ಕುಳಿತು
ರೋಧಿಸುತ್ತಿತ್ತು
(ಜೀವನ್ಮುಖಿ)

ಕವಿ ಸತ್ತಾಗ, ಆತನ ಕಾವ್ಯ ವಿಧವೆಯಾಗುವ, ಒಡೆದು ಬಿದ್ದು ಚೆಲ್ಲಾಪಿಲ್ಲಿಯಾದ ಬಿಡಿ ಅಕ್ಷರಗಳಿಗೆ ರೂಪಕವಾಗುವ ಪರಿಕಲ್ಪನೆ, ಕವಿ ಭೌತಿಕವಾಗಿ ಇಲ್ಲದಿದ್ದರೂ ಸಹ ಕವಿತೆ ಜೀವಂತ, ಆ ಮೂಲಕ ಕವಿಯೂ ಸಹ ಸಾವಿಲ್ಲದೆ ಅಮರತ್ವವನ್ನು ಪಡೆಯುವ ಸಂದೇಶ ಜೀವನ್ಮುಖಿಯಲ್ಲಿ ಕಾಣಬಹುದು.

ಇದರೊಂದಿಗೆ ‘ಚಿಗುರುತಿದೆ ಕಾವ್ಯದ ಬೇರು’ ಎಂಬ ಜೋಡಿ ಅಂತ್ಯ ಪ್ರಾಸಗಳ ವಿಭಿನ್ನ ಹಾಗೂ ಅಷ್ಟೇ ನವಿನಾ ಭಾವದ ಪ್ರಯೋಗಾತ್ಮಕ ಕವಿತೆ, ‘ದೀಪ ಹಚ್ಚುತ್ತೇನೆ’, ಸಾವಿಗೆ ರೂಪಕವಾಗುವ ‘ಖಾಲಿ ಗ್ಲಾಸು’, ಅಪ್ಪನ ಕುರಿತಾದ ‘ಮಣ್ಣಿಗೆ ಮಲಗುವ ಮರ’, ಸಂಭಾಷಣೆಯೋಪಾದಿಯಲ್ಲಿ ಪ್ರೇಮ ಸಲ್ಲಾಪದ ಪ್ರತೀಕವಾಗಿ ಅನನ್ಯವಾಗಿ ರಚಿಸಲ್ಪಟ್ಟ ‘ಕತ್ತಲೆ ಕರಗುತಲಿದೆ ಬೆಳದಿಂಗಳಂತೆ’ ಎಂಬ ಕವಿತೆ, ಅನಾಮಿಕೆಯ ಪ್ರೇಮ ಪುರಾಣದ ಜಾಡಿನ ‘ಒಂದು ಅಪೂರ್ವ ಪ್ರೊಫೈಲ್’ ಕವಿತೆ, ‘ರಕ್ತ ಕಣ್ಣೀರಲಿ ಬೆವರಿನ ಕತೆ’ ಯ ಮಾರ್ಮಿಕತೆ, ಸ್ತ್ರಿಪರ ಕಾಳಜಿಯ, ಸೂಕ್ಷ್ಮ ಸಂವೇದನೆಯ, ಸಮಾಜಮುಖಿ ಧೋರಣೆಯ ಕುರಿತಾದ ‘ಬಂಧಿಸುವ ಕಾಲ’, ಕವಿತೆಯಾಗಿಸಲು ಹೆಣಗಿದ ‘ಮನದ ಜಿದ್ದಿಗೆ ಸೋತ ಬುದ್ಧ’* ಕವಿತೆಯ ಹಂದರ ಆಪ್ತವಾಗಿ ಓದುಗನನ್ನು ತಟ್ಟುತ್ತವೆ.

“ನಿನ್ನೂರಲ್ಲಿ ನಿನ್ನ ಬೀದಿಯಲ್ಲಿ ನೀನೇ ಅಪರಿಚಿತ
ಯಾರು ನಿನ್ನ ಗುರುತಿಸುವವರಿಲ್ಲ ಹೊರಡು ಇಲ್ಲಿಂದ”
(ಎಲ್ಲಿಗೆ ಹೊರಡುವೆ!)
ಎಂಬ ಕವಿತೆಯ ಸಾಲುಗಳನ್ನು ಕುರಿತಾದ ‘ಆಲ್ಬರ್ಟ್ ಕಾಮು’ ವಿನ ‘ದಿ ಔಟ್ ಸೈಡರ್’ ಕಾದಂಬರಿಯ ವಸ್ತುವನ್ನು ನೆನಪಿಸುವ, ಅಗಾಧ ನೋವು ಮತ್ತು ಆತಂಕ ದ್ವಂದ್ವತನದ ಗಳಿಬಿಲಿಗಳು, ಸಮಾಜದೊಂದಿಗೆ ಒಂದಾಗಲಾಗದ ‘ಅನ್ಯ ತನದ’ ನೋವು, ಇಡೀ ಕವಿತೆಯ ಸಾರವಾಗಿದೆ ಎಂದು ಶ್ರೀಯುತ ‘ಫಿನಿಕ್ಸ್ ರವಿ’ ರವರ ಈ ಮೇಲಿನ ನುಡಿಗಳು ಉಲ್ಲೇಕಾರ್ಹವಾದವು.

ಕೊನೆಕೊನೆಗೆ ಸಂಕಲನದ ಕೆಲವು ಬೆರಳೆಣಿಕೆಯಷ್ಟು ಸಾಂದರ್ಭಿಕ ಹಾಗೂ ಇತರೆ ಕವಿತೆಗಳು ತೀರ ವಾಚ್ಯವಾಗಿದ್ದು, ಓದುಗನ ಈ ವರೆಗಿನ ಆಸಕ್ತಿಯನ್ನು ಹಿಡಿದಿಡುವಲ್ಲಿ ಸೋತಿವೆಯಾದರೂ, ಜೀವನ ಪಾಠ ಹೇಳುವಲ್ಲಿ ಗೆದ್ದಿವೆ.

ಮನುಷ್ಯ ಸಮಾಜದ ನೋವಿಗೆ ಸ್ಪಂದಿಸಿದಾಗಲೆಲ್ಲ ಅಷ್ಫಾಕ್ ಪೀರಜಾದೆ ರವರು ಉತ್ತಮ ಸಮಾಜ ಮುಖಿ ಕವಿತೆಗಳನ್ನು ರಚಿದಿದ್ದರೆ. ಅವರ ಕವಿತೆಗಳಲ್ಲಿ ವ್ಯಕ್ತವಾಗುವ ಜಾತಿ-ಧರ್ಮಗಳ ನಡುವಿನ ಸಾಮರಸ್ಯ ಬೆಸೆಯುವ, ಹಸಿವು-ಬಡತನದಂತಹ ಸಮಸ್ಯೆಗಳಿಗೆ ಮಿಡಿಯುವ ಅಂತಃಕರಣವನ್ನು ಕಾಣಬಹುದಾಗಿದೆ. ‘ಅಷ್ಫಾಕ್ ರ ಕಾವ್ಯ – ಬಯಲಲ್ಲಿ ನದಿ ಹರಿದಂತೆ,’ ಅಡೆತಡೆಗಳನ್ನು ಲೆಕ್ಕಿಸದೆ ಹರಿಯುತ್ತದೆ. ಆದರೆ ಒಮ್ಮೆ ಕವಿತೆ ಮುಗಿದ ಕ್ಷಣ ಆ ಚಲನೆಯೂ ನಿಂತು ಹೋದ ಭಾವ ಮೊದಲಾಗುತ್ತದೆ. ಆದರೆ ಹಾಗಾಗಬಾರದು; ಕವಿತೆ ಓದಿ ಮುಗಿಸಿದ ನಂತರವೂ ಕಾಡಬೇಕು. ಓದುಗನ ಎದೆಯಲ್ಲಿ ನದಿಯಾಗಿ ಪ್ರವಾಹಿಸಬೇಕು. ಅಂತಹ ಕೆಲವು ಕವಿತೆಗಳು ಸಂಕಲನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದು ಕವಿಯ ಪ್ರಬುದ್ಧ ಮನಸ್ಸಿನ ಚಿಂತನಾ ಕ್ರಮವನ್ನು ದಾಖಲಿಸುತ್ತವೆ.

ಮುಗಿಸುವ ಮುನ್ನ….

ಹಿರಿಯ ಮಿತ್ರರು, ಮಾರ್ಗದರ್ಶಿಗಳು, ಗುರು ಸಮಾನರಾದ ಶ್ರೀಯುತ ಅಷ್ಫಾಕ್ ಪೀರಜಾದೆ ರವರು, “ನನ್ನೊಳಗಿನ ಕವಿತೆ” ಗಳ ಮಾಗಿದ ಅನುಭವಿಕ ದರ್ಶನಗಳ, ಅನುಭಾವ ನಿದರ್ಶನಗಳ ಮೂಲಕ ತಮ್ಮನ್ನು ತಾವು ಭವಿಷ್ಯದ ಭರವಸೆಯ ಕವಿಯಾಗಿ ಹೊರಹೊಮ್ಮುವುದರಲ್ಲಿ ಸಫಲರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಉಜ್ವಲ ಭವಿಷ್ಯ ಅವರದಾಗಲಿ ಎಂಬ ಶುಭ ಹಾರೈಕೆಗಳೊಂದಿಗೆ……

-ಜಬೀವುಲ್ಲಾ ಎಮ್. ಅಸದ್, ಮೊಳಕಾಲ್ಮುರು.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x