ಕಥಾಲೋಕ

ದೃಷ್ಟಿ ಬೊಟ್ಟು: ಜ್ಯೋತಿ ಕುಮಾರ್. ಎಂ(ಜೆ. ಕೆ.)

ಒಂದಾನೊಂದು ಕಾಲದಲ್ಲಿ, ಒಂದೂರಿನಲ್ಲಿ ಒಂದು ಉತ್ತಮಸ್ಥ ಕೂಡು ಕುಟುಂಬದಲ್ಲಿ ಒಂದು ಗಂಡು ಮಗುವಿನ ಜನನವಾಯಿತು. ಯಪ್ಪಾ!ಎಂತಹ ಸ್ಫುರದ್ರೂಪಿ ಅಂದರೆ ನೋಡಲು ಎರಡು ಕಣ್ಣು ಸಾಲದು.

ಅವನು ಹುಟ್ಟಿನಿಂದಲೆ, ಕುರೂಪವನ್ನು ಹೊತ್ತು ತಂದಿದ್ದ. ಗಡಿಗೆ ಮುಖ, ಗೋಲಿಯಂತ ಮುಖದಿಂದ ಹೊರಗಿರುವ ಕಣ್ಣುಗಳು, ಆನೆ ಕಿವಿ, ಮೊಂಡು ಡೊಣ್ಣೆ ಮೂಗು, ಬಾಯಿಯಿಂದ ವಿಕಾರವಾಗಿ ಹೊರ ಚಾಚಿದ ದವಡೆ, ಕೈ ಕಾಲು ಸಣ್ಣ, ಹೊಟ್ಟೆ ಡುಮ್ಮ. ಕೆಂಡ ತೊಳದಂತಹ ಮಸಿ ಕಪ್ಪು ಬಣ್ಣ.

 ಹೆತ್ತವರಿಗೆ ಹೆಗ್ಗಣ ಮುದ್ದು, ಇಂತಿಪ್ಪ ರೂಪದಿ ಹುಟ್ಟಿದ ಮಗುವನ್ನು ಮೋರಿಗೆ ಎಸೆಯಲಾದೀತೆ?ದೇವರು ಕೊಟ್ಟದ್ದು, ಅವನು ಇಟ್ಟ ಹಾಗೆ ಆಗಲಿ ಎಂದು ನಿಟ್ಟುಸಿರು ಬಿಟ್ಟರು. ಮಗು ಅಂತ ಹುಟ್ಟಿದ ಮೇಲೆ, ಅದಕ್ಕೊಂದು ಹೆಸರು ಬೇಕಲ್ಲವೆ?ಆಯಿತು ಪುರೋಹಿತರನ್ನು ಕರೆಸಲಾಯಿತು. ಪುರೋಹಿತರು ಅ ಮಗು ಹುಟ್ಟಿದ ದಿನಾಂಕ, ಸಮಯವನ್ನು ಕೇಳಿ ತಿಳಿದು ಪಂಚಾಂಗವನ್ನು ತಿರುಗಿಸಿ, ಕವಡೆ ಶಾಸ್ತ್ರ ನೋಡಿ, ಒಂದು ಹೆಸರನ್ನು ಸೂಚಿಸಿದರು “ಬೆರ್ಚಪ್ಪ”. ” ಅಯ್ಯೋ, ಇದೇನು ಸ್ವಾಮಿ ಇಂತಹ ಹೆಸರು, ರಾಮನೋ, ಕೃಷ್ಣನೋ, ಈಶ್ವರನೋ, ಮಾದೇಶನೋ, ಲಿಂಗೇಶನೋ ಅಂತಹ ಹೆಸರು ಇಡೋದು ಬಿಟ್ಟು, ಇದೆಂತಹ ಹೆಸರು, ತಗೆಯಿರಿ”ಅಂದರು ಮನೆ ಮಂದಿಯೆಲ್ಲ.

ಪ್ರತ್ಯುತ್ತರವಾಗಿ ಪುರೋಹಿತರು, “ನಾನು ಮತ್ತು ನನ್ನ ಶಾಸ್ತ್ರದ ಮೇಲೆ ನಂಬಿಕೆ ಇದ್ದರೆ ಇದೇ ಹೆಸರು ಇರಲಿ, ಇದು ಸಾಮಾನ್ಯವಾದ ಹೆಸರಲ್ಲ. ಭೂಮಿ ಇರುವವರೆಗೂ, ಈ ಹೆಸರು ಅಜರಾಮರವಾಗಿರುತ್ತದೆ!”. ಎಂದು ಹೇಳಿದರು. ಇದನ್ನು ಕೇಳಿ ಮನೆಯವರೆಲ್ಲ ತುಂಬ ಸಂತೋಷ ವ್ಯಕ್ತಪಡಿಸಿದರು.

“ಬೆಳೆಯುವ ಪೈರು ಮೊಳಕೆಯಲ್ಲಿಯೆ” ಎಂಬಂತೆ, ಬೆರ್ಚಪ್ಪ ತನ್ನ ಕುರೂಪದ ಜೊತೆಗೆ ವಿಘ್ನ ಸಂತೋಷಿಯೂ ಆಗಿದ್ದ. ಅವನ ರೂಪವನ್ನು ನೋಡಿ ಎಲ್ಲರೂ ಹೆದರಿಕೊಳ್ಳುವವರೆ. ಹಾಗಾಗಿ ಮನೆಯಲ್ಲಿ ಅವನಿಗೆ ಯಾವುದೇ ಕೆಲಸ ಹೇಳುತ್ತಿರಲಿಲ್ಲ. ಮನೆಯಲ್ಲಿ ಸುಮ್ಮನೆ ಕುಳಿತು ಮಾಡುವುದು ಏನು?. ಬೆರ್ಚಪ್ಪ ಬರೀ ಸಮಾಜಘಾತುಕ ಚಟುವಟುಕೆಗಳಲ್ಲಿ ನಿರತನಾದ. ಯಾರೂ ಇಲ್ಲದ ಮನೆಗಳನ್ನು ಕೊಳ್ಳೆ ಹೊಡೆಯುವುದು, ಹುಲ್ಲಿನ ಬಣವೆಗಳಿಗೆ ಬೆಂಕಿ ಹಾಕುವುದು, ಸಣ್ಣ ಸಣ್ಣ ಕರುಗಳನ್ನು ನೀರಿಗೆ ಎಸೆಯುವುದು. ಹೀಗೆಯೆ ಮಾಡಿ ಉಂಡು ಅಲೆಯುತ್ತಿದ್ದ.

ಬೆರ್ಚಪ್ಪನ ಈ ಎಲ್ಲಾ ಪುಂಡಾಟಿಕೆಗಳಿಂದ ಮನೆಯವರು ಬೇಸತ್ತು ಹೋಗಿದ್ದರು. ದಿನ ಬೆಳಗಾದರೆ, ಒಂದಿಲ್ಲೊಂದು ತಕರಾರನ್ನು ತೀರಿಸುವುದೆ ಆಗುತ್ತಿತ್ತು. ಬೆರ್ಚಪ್ಪನಿಗೆ ಈ ಮಹಾನವಮಿ ಬಂದರೆ ಒಂಭತ್ತು ತುಂಬಿ, ಹತ್ತಕ್ಕೆ ಬೀಳೋ ವಯಸ್ಸು. ಮನೆಯವರೆಲ್ಲ ಸೇರಿ ಬೆರ್ಚಪ್ಪನಿಗೆ ಯಾವುದಾರೊಂದು ಬಡಕುಟುಂಬದ ಹೆಣ್ಣು ಮಗುವನ್ನು ತಂದು ಮದುವೆ ಮಾಡಿ ಬಿಡೋಣ ಎಂದು ತೀರ್ಮಾನಿಸಿದರು. ಏಕೆಂದರೆ, ಮದುವೆಯಾಗವರೆಗೂ ಹುಚ್ಚು ಬಿಡಲಿಲ್ಲ, ಹುಚ್ಚು ಬಿಡುವವರೆಗೂ ಮದುವೆಯಾಗಲಿಲ್ಲ. ಬರುವ ಹೆಣ್ಣು ಕೂಸಾದರೂ ಇವನನ್ನು ತಿದ್ದುತ್ತಾಳೆನೋ ಎಂಬ ಆಶಾ ಭಾವನೆ ಅಷ್ಟೆ!?.

ಆದರೆ, ಹೆಣ್ಣು ಕೊಡುವವರು ಯಾರು?ಯಾರಿಗೆ ಕೇಳಿದರೂ ಬಾವಿಗೆ ಬೇಕಾದರೆ ನೂಕುತ್ತೇವೆ, ಆದರೆ ಬೆರ್ಚನಿಗೆ ಮಾತ್ರ ಹೆಣ್ಣು ಕೊಡೊಲ್ಲ ಅಂದ್ರು. ತಮ್ಮ ತೋಟದಲ್ಲಿ ಕೆಲಸಕ್ಕೆಂದು ಹೀಗೆ ಕೆಲವು ದಿನಗಳ ಹಿಂದೆಯಷ್ಟೆ ಬಂದ, ಬೇರೆ ಸೀಮೆಯವರ ಕೂಲಿಯಾಳಿಗೆ ಒಂದು ಹೆಣ್ಣು ಮಗುವಿರುವುದು ಹೇಗೋ ಗೊತ್ತಾಯಿತು. ಆ ಕೂಲಿಯಾಳಿಗೆ ಸಾರಾಯಿ, ಜಮೀನಿನ ಆಸೆ ತೋರಿಸಿ, ಬೆರ್ಚನಿಗೆ ಲಘ್ನ ಗೊತ್ತು ಮಾಡಿದರು. ಪಾಪ! ಬೇರೆ ಸೀಮೆಯ ಅಸುಗೂಸು ಬೆರ್ಚನನ್ನು ನೋಡಿಯೆ ಇರಲಿಲ್ಲ. ಮದುವೆ ಮಂಟಪಕ್ಕೆ ಬಂದ ಹೆಣ್ಣು ಕಂದನನ್ನು ನೋಡಿದ ತಕ್ಷಣವೆ ಬೆರ್ಚ, ಒಂದು ತರಹದ ವಿಕಾರವಾದ ಕೂಗಿನೊಂದಿಗೆ, ಅಣಕಿಸಿ ಬಿಟ್ಟ. ಹೆಣ್ಣು ಕೂಸು ಇದೆಲ್ಲವ ನೋಡಿ ಕಿಟಾರನೆ ಚೀರಿ, ಪ್ರಜ್ಞೆ ತಪ್ಪಿ ಬಿದ್ದಳು. ಮತ್ತೆ ಎಚ್ಚರಗೊಂಡಾಗ, ಬೆರ್ಚನನ್ನು ನೋಡಿ “ನಾನು ಯಾವ ಕಾರಣಕ್ಕೂ ಇವನನ್ನು ಮದುವೆಯಾಗಲಾರೆ, ನೀವು ಬಲವಂತ ಮಾಡಿದರೆ, ನಾನು ಬಾವಿಗೆ ಬೀಳುತ್ತೇನೆ “ಎಂದು ತೋಟದ ಬಾವಿಯ ಕಡೆ ಓಡಿದಳು ಎಂಟರ ಪೋರಿ. ಗೊಗ್ಗರು ಧ್ವನಿಯಲ್ಲಿ ಬೆರ್ಚ ತಾನು ಇನ್ನು ಮದುವೆಯಾಗವುದಿಲ್ಲವೆಂದು ತನ್ನ ನಿರ್ಧಾರ ತಿಳಿಸಿದ.

ಆದರೆ, ಮನೆಯವರು ತಮ್ಮ ಪ್ರಯತ್ನ ತಾವು ಮುಂದುವರೆಸಿದರು. ಎರಡು ಮೂರು ವರ್ಷ ಬೆರ್ಚನ ಮದುವೆಗಾಗಿ ಹೆಣ್ಣುಗಳನ್ನು ಹುಡುಕಿದರೂ, ಯಾವುದೇ ಸಂಬಂಧ ಕುದುರಲಿಲ್ಲ. ಈ ಮುರಿದು ಬಿದ್ದ ಮದುವೆಯ ನಂತರ ಬೆರ್ಚ ತುಂಬಾನೇ ಬದಲಾಗಿ ಹೋದ. ಅವನು ಇತ್ತಿತ್ತಲಾಗಿ ಮನೆ ಬಿಟ್ಟು ಹೊರಗೆ ಹೋಗುತ್ತಲೇ ಇರಲಿಲ್ಲ. ಯಾವಾಗಲೂ ಅನ್ಯ ಮನಸ್ಕನಾಗಿ ಏನನ್ನೋ ನೋಡುತ್ತಾ ಕುಳಿತಿರುತ್ತಿದ್ದ. ತಿಳಿದಾಗ ಒಮ್ಮೆ ಗಬಗಬ ಒಂದಿಷ್ಟು ತಿನ್ನುತ್ತಿದ್ದ. ಉಳಿದಂತೆ ಮತ್ತೆ ಅದೇ ಅನ್ಯಮನಸ್ಕತೆ.

ಇದಕ್ಕೆ ಪರಿಹಾರ ಕಂಡುಹಿಡಿಯಲು ಮನೆಯವರು ಪುರೋಹಿತರನ್ನು ಕರೆಸಿದರು. ಮನೆ ಬಾಗಿಲಲ್ಲಿ ಪುರೋಹಿತರು ಬಂದು ನಿಲ್ಲುವುದಕ್ಕೂ, ಮನೆಯ ಮುಂದೆ ಮದುವೆ ಮುರಿದು ಕೊಂಡು ಹೋದ ಅಸುಗೂಸನ್ನು ಹೋಲುವ ಒಂದು ಹೆಣ್ಣು ಕೂಸು ಬರುವುದಕ್ಕೂ ಸರಿಯಾಯಿತು. ಹೆಣ್ಣು ಕೂಸನ್ನು ನೋಡುತ್ತಲೇ ಬೆರ್ಚ ಮತ್ತೆ ಪುಟಿದೆದ್ದ, ಹೊರಗೆ ಓಡಿದ.

ಬೆರ್ಚಪ್ಪನ ಜನ್ಮ ಕುಂಡಲಿಯನ್ನು ಕೂಲಂಕುಷವಾಗಿ ನೋಡಿದ ಪುರೋಹಿತರು, ಗುಣಿಸಿ ಭಾಗಿಸಿ ಪಂಚಾಂಗ ತಿರುಗಿಸಿ ನೋಡಿ, ”ಬೆರ್ಚನ ಜಾತಕದಲ್ಲಿ ಮದುವೆಯ ಯೋಗವಿಲ್ಲ, ಈ ನಿಟ್ಟಿನ ಪ್ರಯತ್ನಗಳನೆಲ್ಲ ಕೈ ಬಿಡಿ” ಎಂದು ಘೋಷಿಸಿದರು. ವಿಷಯವನ್ನು ಕೇಳಿ ಮನೆಮಂದಿಯಲ್ಲ ಬಾಯಿಯನ್ನು ಮುಚ್ಚಿಕೊಂಡು, ವಿಧಿಯನ್ನು ಅಳಿದು ಕೊಂಡರು.

ಇತ್ತ ಬೀದಿಗೆ ಇಳಿದ ಬೆರ್ಚನು ಹೆಣ್ಣು ಕೂಸನ್ನು ಹುಡುಕವಲ್ಲಿ ಸಫಲನಾದ. ಮುಲಾಜಿಲ್ಲದೇ ಆ ಕೂಸನ್ನು ಹೆದರಿಸಿದ. ಅವನ ಪ್ರಯತ್ನ ಸಫಲವಾಗಿ ಕೂಸು ಮೂರ್ಛೆ ತಪ್ಪಿ ಬಿದ್ದಳು. ಬೆರ್ಚನಿಗೆ ಅವರ್ಚನೀಯ ಸಂತೋಷವಾಯಿತು. ತುಂಬ ದಿನಗಳ ನಂತರ ಬೆರ್ಚ ಕುಣಿದು ಕುಪ್ಪಳಿಸಿದ. ಊರಿಗೆ ಊರೆ ಬೆದರುವಂತೆ ರಣ ಕೇಕೆ ಹಾಕಿದ, ಮತ್ತು ನಿರ್ಧಿರಿಸಿದ “ ಇವತ್ತಿನಿಂದ ನಾನು ಮಕ್ಕಳ ಪೀಡಕ”.

ಅದೇ ದಿನ, ಆ ಊರಿನ ಕೊನೇ ಭಾಗದಲ್ಲಿರುವ ಶಿವ ಭಕ್ತ ದಂಪತಿಗಳಿಗೆ ಒಂದು ಗಂಡು ಮಗುವಿನ ಜನನವಾಯಿತು. ಪುರೋಹಿತರ ಸಲಹೆಯ ಮೇರೆಗೆ ಆ ಮಗುವಿಗೆ ಚಿರಂಜೀವಿ ಎಂದು ಹೆಸರಿಡಲಾಯಿತು. ಮುದ್ದಾದ ಮಗು, ಉಂಬಳಿಯಾಗಿ ಬಂದ ಕೆರೆ ಪಕ್ಕದ ಎರೆಡು ಎಕೆರೆ ಜಮೀನು, ಇನ್ನೇನು ಬೇಕು. ಶಿವ ಪೂಜೆ, ಜಮೀನು ಕೆಲಸ, ಮಗುವಿನ ಪೋಷಣೆಯಲ್ಲಿ ಆರು ವರ್ಷಗಳು ಕಳೆದಿದ್ದು ಗೊತ್ತೇ ಆಗಲಿಲ್ಲ. ಚಿರಂಜೀವಿ ದಿನೆ ದಿನೇ ಬಾಲ ಚಂದಿರನಂತೆ ಬೆಳೆಯುತ್ತಿದ್ದ. ಅತ್ತ ಬೆರ್ಚನು ಕಳೆದ ಆರು ವರ್ಷಗಳಿಂದ ಮಕ್ಕಳನ್ನು ಪೀಡಿಸುವುದು, ಮಕ್ಕಳು ಹೆದರಿ ಓಡಿ ಹೋಗುತ್ತಿದ್ದ ಹಾಗೆ ಅವರ ಕೈಯಿಂದ ಜಾರಿದ ತಿಂಡಿ ಪೊಟ್ಟಣದಲ್ಲಿನ ಆಹಾರ ತಿಂದು ಬದುಕುವುದು, ಇದೇ ಜೀವನವಾಗಿತ್ತು. ಬೆರ್ಚನ ಕುಖ್ಯಾತಿ ಊರಿನಲ್ಲಿ ಯಾವ ರೀತಿಯಲ್ಲಿ ಹರಡಿಕೊಂಡಿತ್ತು ಅಂದರೆ, ಹಠಮಾಡುವ, ಚಂಡಿ ಇಡಿದ ಮಕ್ಕಳಿಗೆ ಬೆರ್ಚ ಗುಮ್ಮನ್ನನ್ನು ಕರೆಯುತ್ತೇವೆ ಅಂದರೆ, ಸಾಕು ತೆಪ್ಪಗಾಗಿ ಬಿಡುತ್ತಿದ್ದರು, ಇಲ್ಲವೇ ಹುಚ್ಚೆ ಹೊಯ್ದುಕೊಂಡು ಇನ್ನಷ್ಟು ರಚ್ಚೆ ಹಿಡಿದುಬಿಡುತ್ತಿದ್ದರು.

ಹೊಲದಲ್ಲಿ ಕೆಲಸ ಮಾಡಲು ಕೂಲಿಯವರು ಬರದೇ ಇರುವ ಕಾರಣಕ್ಕೆ ಚಿರಂಜೀವಿಯ ಅಪ್ಪ ಬೆಳಗ್ಗೆಯೇ ಎದ್ದು ಹೊಲಕ್ಕೆ ಹೋದರೆ, ಮನೆಗೆ ಬರುವ ವೇಳೆಗೆ ಸಂಜೆಯಾಗಿರುತ್ತಿತ್ತು, ಅವನ ತಾಯಿ ಹೊತ್ತು ಮೂಡುವ ವೇಳೆಗೆ ರೊಟ್ಟಿ ಬುತ್ತಿ ಮಾಡಿ ಕೊಂಡು ಅವರೂ ಸಹ ಹೊಲಕ್ಕೆ ಹೋಗುತ್ತಿದ್ದರು. ಬಯಲು ಶಿವಾಲಯದ ಪೂಜೆಯ ಜವಾಬ್ದಾರಿ ಚಿರಂಜೀವಿಯ ಹೆಗಲಿಗೆ ಬಿತ್ತು.

ಚಿರಂಜೀವಿ ಧೈರ್ಯಶಾಲಿಯಾಗಿದ್ದ. ಆರು ವರ್ಷದ ಪೋರ ದಿನವೂ ಸೂರ್ಯ ಮೂಡುವ ವೇಳೆಗೆ ಬಯಲು ಶಿವಾಲಯಕ್ಕೆ ಹೋಗಿ ಮನ ಮೆಚ್ಚುವಂತೆ ಶಿವನ ಪೂಜೆ ಮಾಡಿ ಬಂದು, ಊಟ ಮಾಡಿ ಶಾಲೆಗೆ ಹೋಗಿ ಬರುತ್ತಿದ್ದ.

ಬೆರ್ಚನು ಊರಲ್ಲಿರುವ ಎಲ್ಲಾ ಮಕ್ಕಳನ್ನೂ ಹೆದರಿಸಿ ಗುಮ್ಮನಾಗಿದ್ದ. ಆದರೆ, ಚಿರಂಜೀವಿಯನ್ನು ಮಾತ್ರ ಹೆದರಿಸಲು ಸಾಧ್ಯವಾಗಿರಲಿಲ್ಲ. ಅದಕ್ಕೂ ಒಂದು ಉಪಾಯವನ್ನು ಸಜ್ಜು ಮಾಡಿ ಇಟ್ಟುಕೊಂಡ ಬೆರ್ಚ. ಅಂದು ಅಮವಾಸ್ಯೆ ಕಳೆದ ಬೆಳಗು, ಬೆಳಿಗ್ಗೆ ಆರು ಗಂಟೆಯಾಗಿದ್ದರೂ ಬೆಳಕು ಆಗಿರಲಿಲ್ಲ, ಕತ್ತಲು ಕತ್ತಲು ಅನ್ನಿಸುತ್ತಿತ್ತು. ಚಿರಂಜೀವಿ ಎಂದಿನಂತೆ, ತಟ್ಟೆಯಲ್ಲಿ ಹೂವು ಹಣ್ಣು ಕಾಯಿ ಊದು ಬತ್ತಿ ಕರ್ಪೂರ ಹಾಲುಸಕ್ಕರೆ ಶುದ್ದನೀರು ತುಂಬಿದ ತಂಬಿಗೆ ಹಿಡಿದು ಬಯಲು ಶಿವಾಲಯಕ್ಕೆ ಬಂದು ಇನ್ನೇನು ಪೂಜಾ ಸಾಮಾಗ್ರಿಗಳನ್ನು ಶಿವನ ವಿಗ್ರಹದ ಮುಂದೆ ಇಳಿಸಬೇಕು ಎನ್ನುವ ವೇಳೆಗೆ, ಶಿವನ ವಿಗ್ರಹದ ಹಿಂದೆ ಅವಿತುಕೊಂಡಿದ್ದ ಬೆರ್ಚ ವಿಕಾರ ಕೇಕೆಯೊಂದಿಗೆ, ಕಪ್ಪು ಕರಡಿಯಂತಹ ವೇಷದೊಂದಿಗೆ ಚಂಗನೇ ನೆಗೆದು, ವಿಚಿತ್ರವಾಗಿ ಕುಣಿಯಲು ಪ್ರಾರಂಭಿಸಿದ. ಶಿವನ ಯಾವುದೋ ಒಂದು ಗಾನಾಮೃತದಲ್ಲಿ ತಲ್ಲೀನನಾಗಿದ್ದ ಚಿರಂಜೀವಿ ಹಠಾತ್ತನೇ ಘಟಿಸಿದ ಈ ಘಟನೆಯಿಂದ ಗಲಿಬಿಲಿಗೊಂಡ, ಇನ್ನೂ ಎಳೆ ಕೂಸು, ಧೈರ್ಯವಂತನಾದರೂ ಒಂದು ಕ್ಷಣ ಅವಕ್ಕಾದ. ಹೆಜ್ಜೆ ಮುಂದೆ ಎತ್ತಿಡಲು ಹೋಗಿ, ದೇಹದ ಸಮತೋಲನ ಕಾಪಾಡಿಕೊಳ್ಳಲು ಆಗದೇ ಶಿವನ ವಿಗ್ರಹಕ್ಕೆ ತಲೆ ಸರಿಯಾಗಿ ತಾಕುವಂತೆ ಜಾರಿಬಿದ್ದ. ತಾಕಿದ ರಭಸಕ್ಕೆ ತಲೆ ಇಷ್ಟಗಲ ಬಾಯ್ಬಿಟ್ಟಿತು. ರಕ್ತ ಬುಳುಬುಳನೇ ಶಿವನ ವಿಗ್ರಹದ ತುಂಬೆಲ್ಲ ಹರಿಯಲು ಪ್ರಾರಂಭಿಸಿತು, ಹುಡುಗ ಮೂರ್ಛೆ ಹೋದ. ಬಂದ ಕೆಲಸ ಮುಗಿದ ಖುಷಿಗೆ ಬೆರ್ಚ ಓಡಿ ಹೋದ.

ಬೆಳಗು ಆದ ಮೇಲೆ ಆ ಕಡೆ ಬಂದವರು ಯಾರೋ ನೋಡಿ, ಚಿರುನ್ನನ್ನು ಆಸ್ಪತ್ರೆಗೆ ಹೊತ್ತೊಯ್ದರು. ಹೊಲಕ್ಕೆ ಹೋಗಿದ್ದ ಚಿರುವಿನ ತಂದೆ ತಾಯಿ ಅಲ್ಲಿಂದಲೇ ಆಸ್ಪತ್ರೆಗೆ ಅಳುತ್ತಲೇ ಧಾವಿಸಿದರು. ಗಾಯಕ್ಕೆ ಆರು ಹೊಲಿಗೆ ಹಾಕಿದ ವೈದ್ಯರು ಯಾವುದೇ ಭರವಸೆ ನೀಡಲಿಲ್ಲ. ತಲೆಗೆ ಆದ ಗಾಯದಿಂದ ಚಿರಂಜೀವಿಗೆ ವಿಪರೀತ ಅನ್ನಿಸುವಷ್ಟು ಜ್ವರ ಕಾಡಲು ಶುರು ಮಾಡಿದವು. ಮೂರು ದಿವಸದಿಂದ ಐದು ದಿವಸವಾದರೂ ಹುಡುಗನಿಗೆ ಪ್ರಜ್ಞೆ ಬರಲೇ ಇಲ್ಲ. ವೈದ್ಯರು ಕೈ ಚೆಲ್ಲಿದರು. ಅತ್ತ, ಕಳೆದ ಐದು ದಿನಗಳಿಂದ ಶಿವನಿಗೆ ಯಾರೂ ನೀರು ಸಹ ಹಾಕಿರಲಿಲ್ಲ. ವಿಗ್ರಹದ ಮೇಲಿನ ರಕ್ತ ಒಣಗಿ ವಿಕಾರವಾಗಿ ಕಾಣುತ್ತಿತ್ತು. ”ಅಷ್ಟೊಂದು ನಿಷ್ಕಲ್ಮಷವಾಗಿ ಪೂಜೆ ಮಾಡುವವರನ್ನೇ ಈ ಶಿವ ಕಾಪಾಡಲಿಲ್ಲ, ನಮ್ಮನ್ನೂ ಕಾಪಾಡುತ್ತಾನೆಯೆ?” ಎಂದು ಊರಿನ ತುಂಬ ಮಾತುಗಳು ಹರಿದಾಡಲು ಪ್ರಾರಂಭಿಸಿ, ಬಯಲು ಶಿವಾಲಯದ ಕಡೆ ಯಾರೂ ಕೂಡ ಸುಳಿಯಲೇ ಇಲ್ಲ.

ಜ್ವರದ ತಾಪದಿಂದ ನರಳುತ್ತಿರುವ ಚಿರುವಿಗೆ ಒಂದು ಕನಸು ಬಿತ್ತು, ತಾನು ಸತ್ತು ಸೀದಾ ಶಿವನ ಬಳಿಗೆ ಹೋದ ಹಾಗೆ. ಶಿವಪ್ಪನ ಪಾದ ಹಿಡಿದು ಚಿರು ಅಳಲು ಪ್ರಾರಂಭಿಸಿದ. ” ಶಿವಪ್ಪ, ಏನು ತಪ್ಪು ಮಾಡದ ನನಗೆ ಸಾವಿನ ಶಿಕ್ಷೆಯಾ?ಅಷ್ಟೊಂದು ತಪ್ಪು ಮಾಡಿರುವ ಬೆರ್ಚಪ್ಪನಿಗೆ ಯಾವುದೇ ಶಿಕ್ಷೆ ಇಲ್ಲದೇ ಆರಾಮಾಗಿ ಇದ್ದಾನೆ. ಇದು ಯಾವ ಸೀಮೆಯ ನ್ಯಾಯ, ಹೇಳು ತಂದೆ” ಎಂದು ಕೇಳುತ್ತಾನೆ. ಆಗ ಶಿವನು ನಗುತ್ತಾ, ಚಿರುವಿನ ತಲೆ ನೇವರಿಸುತ್ತಾ “ಎದ್ದೇಳು ಮಗು, ಬೆರ್ಚನ ಪಾಪದ ಕೊಡ ತುಂಬಲಿ ಎಂದು ಇಷ್ಟು ದಿನ ಕಾಯ್ದಿದ್ದೆ, ಮೊನ್ನೆಗೆ ಅವನ ಪಾಪದ ಖಾತೆಯ ಲೆಕ್ಕ ಪೂರ್ಣಗೊಂಡಿತು. ಇಂದಿನಿಂದ ಅವನು ಬೇರೆಯಾದ ಪಾತ್ರ ನಿರ್ವಹಿಸುತ್ತಾನೆ. ಪೈರಿಗೆ ಬಂದ ಹೊಲಗಳಲ್ಲಿ, ಸ್ವಂತ ಊರುಗಳಲ್ಲಿ ಕಟ್ಟಿಸುತ್ತಿರುವ ಮನೆಗಳ ಮೇಲೆ ಬೆರ್ಚಪ್ಪನು, ಬೆದರು ಗೊಂಬೆಯಾಗುತ್ತಾನೆ. ಹಗಲು ರಾತ್ರಿ ಎನ್ನದೇ, ಗೋಲಿ ಕಣ್ಣುಗಳನ್ನು ಮಚ್ಚದೇ ಕಳ್ಳರು ಕಾಕರು, ಪಕ್ಷಿಗಳನ್ನು ಕಾಯುತ್ತಾನೆ. ಆದರೆ ಇಷ್ಟು ದಿನ ಎಲ್ಲಾ ಮಕ್ಕಳನ್ನು ಹೆದರಿಸುತ್ತಿದ್ದ ಅವನನ್ನು ನೋಡಿ ಇನ್ನು ಯಾರೂ ಕೂಡ ಹೆದರಲಾರರು, ಹಕ್ಕಿ ಪಕ್ಷಿಗಳು ಸಹ ಹೆದರದೇ, ಅವನ ಮೇಲೆ ಮಲ ಮೂತ್ರ ವಿಸರ್ಜನೆ ಮಾಡುತ್ತವೆ. ಅವನ ಕಪ್ಪು ಮಸಿ ಬಣ್ಣದಿಂದ ತಯಾರಿಸಿದ ಕಾಡಿಗೆಯನ್ನು ಹಾಲುಗಲ್ಲದ ಮಕ್ಕಳ ಕೆನ್ನೆ ಮೇಲೆ, ಹುಬ್ಬುಗಳಿಗೆ ಹಚ್ಚಲಾಗುತ್ತದೆ. ಯಾವುದೇ ಕೆಟ್ಟ ದೃಷ್ಟಿ ಬೀಳದಂತೆ ಬೆರ್ಚಪ್ಪನೇ ಕಾಪಾಡಬೇಕು, ದೃಷ್ಟಿ ಬೊಟ್ಟಾಗಿ. ಭೂಮಿ ಇರುವವರೆಗೂ ಬೆರ್ಚನಿಗೆ ಈ ಕೆಲಸ ತಪ್ಪಿದ್ದಲ್ಲ. ನೀನು ಚಿರಂಜೀವಿ, ನನ್ನ ಪೂಜೆ ಮಾಡುತ್ತಾ, ಒಳ್ಳೆ ಕೆಲಸ ಮಾಡುತ್ತಾ, ದುಡಿಮೆ ಮಾಡಿದ್ದರಲ್ಲಿ ಒಂದಿಷ್ಟು ಧಾನ ಧರ್ಮ ಮಾಡುತ್ತಾ ನೂರ್ಕಾಲ ಬದುಕು”ಎಂದು ಆರ್ಶಿವದಿಸಿದರು.

ಜಿರಂಜೀವಿಯ ಜ್ವರದ ತಾಪ ನಿಧಾನವಾಗಿ ಇಳಿಯುತ್ತಾ ಬಂದು ಕಣ್ಣು ತೆಗೆದ. ಇತ್ತ ಊರಲ್ಲಿ ಬೆರ್ಚ ಕಾಣೆಯಾದ. ಬೆರ್ಚನು ಕಾಣದಾದ ದಿನದಿಂದ, ಶಿವಾಲಯದ ಹಿಂಬದಿಯ ಹೊಲದಲ್ಲಿ ಹೊಸದೊಂದು ಬೆದರು ಗೊಂಬೆ ಪ್ರತ್ಯಕ್ಷವಾಯಿತು.

ಜ್ಯೋತಿ ಕುಮಾರ್. ಎಂ(ಜೆ. ಕೆ.)


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *