ಟ್ರಂಕು ತಟ್ಟೆಯೊಳಗೆ ಏನೇನಿದೆ? ಡಾ. ನಟರಾಜು ಎಸ್ ಎಂ

ದಲಿತ ವಿದ್ಯಾರ್ಥಿ ನಿಲಯಗಳಿಗೆ ಒಂದು ವಿಶಿಷ್ಟವಾದ ಇತಿಹಾಸವಿದೆ. ಒಂದು ಕಾಲಕ್ಕೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟಕ್ಕೆ ಸೀಮಿತವಾಗಿದ್ದ ಸಮಾಜ ಕಲ್ಯಾಣ ಇಲಾಖೆಯ ದಲಿತರ ಹಾಸ್ಟೆಲ್ ಎಂಬ ಪರಿಕಲ್ಪನೆ ಇವತ್ತು ಅನೇಕ ಹಳ್ಳಿಗಳಿಗೂ ಪಸರಿಸಿದೆ. ಆ ಪ್ರತೀ ಹಾಸ್ಟೆಲ್ ಗಳ ಹುಟ್ಟು ಮತ್ತು ಧ್ಯೇಯ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳ ಸಲಹುವುದು ಆಗಿತ್ತಾದರೂ ಅನೇಕರು ಸಂಘಟಿತರಾಗಲು, ಹೋರಾಟದ ಮನೋಭಾವವನ್ನು ರೂಪಿಸಿಕೊಳ್ಳಲು ಸಹ ಆ ಹಾಸ್ಟೆಲ್ ಗಳು ಪ್ರತ್ಯಕ್ಷವಾಗಿ‌ ಮತ್ತು ಪರೋಕ್ಷವಾಗಿ ಸಹಕರಿಸಿವೆ ಎನ್ನಬಹುದು. ಹಾಸ್ಟೆಲ್ ಗಳ ಕಾರಣಕ್ಕೆ ವಿದ್ಯಾಭ್ಯಾಸ ಪಡೆದು ನೌಕರಿ ಪಡೆದು ಬದುಕು ಕಟ್ಟಿಕೊಂಡವರು ಒಂದು ಕಡೆಯಾದರೆ, ಹಾಸ್ಟೆಲ್ ಗಳ ಕಾರಣಕ್ಕೂ ಸರಿಯಾಗಿ ವಿದ್ಯಾಭ್ಯಾಸ ಮಾಡಲಾರದೆ ಬೇರೆಯದೇ ರೀತಿ ಬದುಕು ಕಟ್ಟಿಕೊಂಡವರ, ಬದುಕು ಕಳೆದುಕೊಂಡವರ ಸಂಖ್ಯೆ ನಮ್ಮ ನಡುವೆ ಕಡಿಮೆ ಏನಿಲ್ಲ. ಹಾಸ್ಟೆಲ್ ನಲ್ಲಿ ಓದಿ ಸರ್ಕಾರಿ ಉದ್ಯೋಗಕ್ಕೆ ಸೇರಿ ಬದುಕು ಕಟ್ಟಿಕೊಂಡವರ ಕೆಟಗರಿಗೆ ಸೇರುವ ಕತೆಗಾರ ಗುರುಪ್ರಸಾದ್ ಕಂಟಲಗೆರೆ ತಮ್ಮ ಈ ಹೊಚ್ಚ ಹೊಸ ಪುಸ್ತಕದ ಮೂಲಕ ತಮ್ಮ ಹಾಸ್ಟೆಲ್ ಅನುಭವಗಳನ್ನು ಕಟ್ಟಿಕೊಟ್ಟಿದ್ದಾರೆ.

ಗುರುಪ್ರಸಾದ್ ರವರ “ಟ್ರಂಕು ತಟ್ಟೆ” ಎಂಬ ಶೀರ್ಷಿಕೆಯ ೧೩೬ ಪುಟಗಳುಳ್ಳ ಈ ಪುಸ್ತಕವನ್ನು ತುಮಕೂರಿನ ಚೈತನ್ಯ ಪ್ರಕಾಶನದ ರಂಗಧಾಮಯ್ಯ ಜೆ ಸಿ ಅವರು ಪ್ರಕಟಿಸಿದ್ದಾರೆ. ಬೆಂಗಳೂರಿನ ಬೀ ಕಲ್ಚರ್ ನ ಎಸ್ ವಿಷ್ಣುಕುಮಾರ್ ಈ ಪುಸ್ತಕದ ವಿನ್ಯಾಸ ಮತ್ತು ಮುಖಪುಟ ವಿನ್ಯಾಸ ಮಾಡಿದ್ದಾರೆ. ಗುರುಪ್ರಸಾದ್ ರವರ ಪುಟ್ಟ ಮಕ್ಕಳಾದ ಧ್ಯುತಿ ಮತ್ತು ದವನ್ ರ ರೇಖಾಚಿತ್ರಗಳು ಈ ಪುಸ್ತಕಕ್ಕಿರುವುದು ವಿಶೇಷ. ರೀಗಲ್ ಪ್ರಿಂಟರ್ಸ್ ಬೆಂಗಳೂರು ಇವರು ಈ ಪುಸ್ತಕವನ್ನು ಮುದ್ರಿಸಿದ್ದಾರೆ. ಯಾರ ಮುನ್ನುಡಿಯೂ ಇಲ್ಲದೆ ಪುಸ್ತಕ ಲೇಖಕರ ಮಾತು, ಪ್ರಕಾಶಕರ ಮಾತು ಮತ್ತು ಕೃಷ್ಣಮೂರ್ತಿ ಬಿಳಿಗೆರೆಯವರ ಆಶಯ ನುಡಿಗಳನ್ನು ತನ್ನ ಒಡಲಲ್ಲಿ ತುಂಬಿ ಕೊಂಡಿದೆ.

ಈ ಪುಸ್ತಕದಲ್ಲಿ ಒಟ್ಟು ಎಪ್ಪತ್ತೆರಡು ಹೆಡ್ಡಿಂಗ್ ಗಳು ಇರುವ ಅನುಭವ ಕಥನಗಳಿವೆ. ಕೆಲವು ಹೆಡ್ಡಿಂಗ್ ಗಳು ಐದಾರು ಪುಟಗಳಿದ್ದರೆ ಕೆಲವು ಒಂದೆರಡು ಪ್ಯಾರಾಗಳಷ್ಟು ಸಹ ಇವೆ. ಈ ಅಷ್ಟೂ ಅನುಭವಗಳನ್ನು ಹಾಸ್ಟೆಲ್ ಮತ್ತು ಹಾಸ್ಟೆಲ್ ನ ಸುತ್ತಮುತ್ತಲ ಪರಿಸರದಿಂದಲೇ ಗುರುಪ್ರಸಾದ್ ರವರು ತಮ್ಮ ನೆನಪಿನಾಳದಿಂದ ಹೆಕ್ಕಿ ಹೆಕ್ಕಿ ಬರೆದಿದ್ದಾರೆ. ಈ ಪುಸ್ತಕವನ್ನು ಓದುವಾಗ‌ ಮಕ್ಕಳ ಭವಿಷ್ಯ ರೂಪುಗೊಳ್ಳುವಲ್ಲಿ, ಅವರ ಮಾನಸಿಕ ಆರೋಗ್ಯ ಉತ್ತಮಪಡಿಸುವಲ್ಲಿ ಪೋಷಕರು, ಸ್ನೇಹಿತರು, ಶಾಲೆ, ಸಮಾಜ, ಸುತ್ತಮುತ್ತಲಿನ ಪರಿಸರ, ಅಲ್ಲಿರುವ ವ್ಯವಸ್ಥೆಗಳು ಇತ್ಯಾದಿ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದನ್ನು ಲೇಖಕರು ವಿಶೇಷ ಆಸಕ್ತಿ ವಹಿಸಿ ಕಟ್ಟಿಕೊಟ್ಟಿದ್ದಾರೆ.

ನಮ್ಮ ಕಡೆ ಇವತ್ತಿಗೂ “ಇವರು ಸರಿಯಾಗಿ ಓದಲ್ಲ ಬರೆಯಲ್ಲ. ಬುಕ್ ಅಂತೂ ಮುಟ್ಟೋದೆ ಇಲ್ಲ. ಬರೋ ವರ್ಷ ಯಾವುದಾದ್ರು ಹಾಸ್ಟೆಲ್ ಗೆ ಸೇರಿಸಬೇಕು” ಅಂತ ತಂದೆ ಅಥವಾ ತಾಯಿ ಅಂದರೆ, “ಹೂಂ ನಾವ್ ಯಾವ್ ಹಾಸ್ಟೆಲ್ ಗೂ ಹೋಗಲ್ಲ. ನಾವ್ ಮನೇಲೆ ಇರ್ತೀವಿ” ಅಂತ ಮಕ್ಕಳು ಮರು ಮಾತನಾಡುತ್ತಾರೆ. ಒಂದು ಕಾಲದ ಪೋಷಕರಿಗೆ ಹಾಸ್ಟೆಲ್ ಗಳಿಗೆ ಮಕ್ಕಳನ್ನು ಸೇರಿಸಿದರೆ ಚೆನ್ನಾಗಿ ಓದುತ್ತಾರೆ ಎಂಬ ನಂಬಿಕೆ ಇತ್ತು. ಆ ನಂಬಿಕೆ ಇವತ್ತಿಗೂ ಕೆಲವರಿಗೆ ಇದೆ ಅನಿಸುತ್ತೆ. ಅಂತಹುದೊಂದು‌ ನಂಬಿಕೆಯ ಮೇಲೆ ಗುರುಪ್ರಸಾದ್ ಅವರ ತಂದೆ ಶ್ರೀ ಚನ್ನಬಸವಯ್ಯ ಅವರು ತಮ್ಮ ಮಕ್ಕಳಾದ ಗುರು‌‌ ಮತ್ತು ಜೆಪಿ ಅವರನ್ನು “ನಾವ್ ಪಟ್ಟಿರೋ ಕಷ್ಟಗಳನ್ನು ನಮ್ಮ ಮಕ್ಕಳು ಪಡಬಾರದು” ಎನ್ನುವ ಆಶಯದೊಂದಿಗೆ ಹಾಸ್ಟೆಲ್ ಗೆ ಸೇರಿಸಿ ಓದಲು ಹಚ್ಚುವುದು ಗುರು ಅವರ ಬದುಕಿಗೆ ಒಂದು‌ ಮಹತ್ತರ ತಿರುವು ಕೊಟ್ಟ ಘಟನೆ ಎನ್ನಬಹುದು.

ಈ ಪುಸಕದ ತುಂಬಾ ಅನೇಕ ವ್ಯಕ್ತಿತ್ವಗಳು ಪ್ರತೀ ಪುಟಗಳಲ್ಲಿ ಕಾಣಿಸುವುದು ಈ ಪುಸ್ತಕದ ವೈಶಿಷ್ಟ್ಯ. ಅಲ್ಲಿ ಕಾಣುವ ಅನೇಕ ವ್ಯಕ್ತಿತ್ವಗಳು ಗುರುಪ್ರಸಾದ್ ಅವರ ಜೀವನದಲ್ಲಿ ಗಾಢವಾದ ಪರಿಣಾಮ ಬೀರಿದ್ದಾರೆ ಎನ್ನಬಹುದು. ಈ ಪುಸ್ತಕ ಜನ್ಮ ತಾಳಲು ಅವರೆಲ್ಲರ ಒಡನಾಟ ಅಥವಾ ನೆನಪು ಕಾರಣ ಎನ್ನಬಹುದು. ಆ ವ್ಯಕ್ತಿತ್ವಗಳಲ್ಲಿ ಅಗ್ರಸ್ಥಾನ definitely ಗುರು ಅವರ ತಂದೆ ಚನ್ನಬಸವಯ್ಯ ಅವರಿಗೇ ಸಲ್ಲುತ್ತದೆ.
“ಅಪ್ಪ ಒಂದು ದಿನ ನನ್ನನ್ನೂ ಮತ್ತು ನನ್ನ ತಮ್ಮ ಜೇಪಿಯನ್ನು ಎಡಕ್ಕೆ-ಬಲಕ್ಕೆ ಹಾಕಿಕೊಂಡು, ತಂದಿದ್ದ ಬಟ್ಟೆ ಬರೆಯ ಲಗೇಜನ್ನು ಹೊತ್ತುಕೊಂಡು ತಿಪಟೂರು ಬಸ್‌ಸ್ಟಾಂಡ್‌ನಲ್ಲಿ ಇಳಿದು, ರೈಲ್ವೆ ಸ್ಟೇಷನ್ ರೋಡಿನಲ್ಲಿದ್ದ ಹಾಸ್ಟೆಲ್ ಕಡೆಗೆ ಮುಖ ಮಾಡಿತು. ರೈಲ್ವೆ ಸ್ಟೇಷನ್ ರೋಡಿನ ಎಡಗಡೆಗಿದ್ದ ತಿಪಟೂರಿನ ಸರ್ಕಾರಿ ಶಾಲೆಗೆ ಊರ ಶಾಲೆಯಿಂದ ಪಡೆದು ತಂದಿದ್ದ ಟೀಸಿಯನ್ನು ಕೊಟ್ಟು ನನ್ನನ್ನು ಏಳನೇ ತರಗತಿಗೆ, ತಮ್ಮನನ್ನು ಐದನೇ ತರಗತಿಗೆ ಅಡ್ಡಿಷನ್ ಮಾಡಿಸಿತು.” ಎಂದು ಬರೆದಿರುವ ಗುರು ಅವರ ಸಾಲುಗಳನ್ನು ಓದುವಾಗ ಮಕ್ಕಳ ಮೇಲಿನ ಅವರ ತಂದೆಯ ಕಾಳಜಿ ಎದ್ದು ಕಾಣುತ್ತದೆ. ಅದೇ ಕಾಳಜಿಯನ್ನು ಮುತುವರ್ಜಿಯನ್ನು ತಮ್ಮ ಬದುಕಿನುದ್ದಕ್ಕೂ ಮಕ್ಕಳಿಗಾಗಿ ತೋರಿಸಿರುವ ಅವರ ಕಷ್ಟಸುಖಗಳನ್ನು ಅನೇಕ ಪುಟಗಳಲ್ಲಿ ದಾಖಲಿಸಿ ಗುರು ಅವರು ತಮ್ಮ‌ ತಂದೆಯನ್ನು ನೆನೆದಿದ್ದಾರೆ. ಇನ್ನು ಅನೇಕ ವ್ಯಕ್ತಿತ್ವಗಳನ್ನು ಪುಸ್ತಕದಲ್ಲಿ ಓದುವಾಗ ಗುರು ಅವರ ಬಳಗ ದೊಡ್ಡದು‌ ಎನ್ನುವುದು ಅರಿವಿಗೆ ಬರುತ್ತದೆ.

“ಟ್ರಂಕು ತಟ್ಟೆ” ಪುಸ್ತಕದಲ್ಲಿ ವ್ಯಕ್ತಿತ್ವಗಳಂತೆ ಸ್ಥಳಗಳೂ ಕೂಡ ಅದರಲ್ಲೂ ಅವರ ಭಾಗದ ಹಾಸ್ಟೆಲ್ ಗಳು ವಿಶೇಷವಾಗಿ ಉಲ್ಲೇಖವಾಗುತ್ತಾ ಹೋಗುತ್ತವೆ. ಆ ಹಾಸ್ಟೆಲ್ ಗಳ ಹೆಸರುಗಳನ್ನು ನೋಡುತ್ತಾ ಹೋದಂತೆ ನನಗೆ ತಿಳಿದ ಎಷ್ಟೋ ದಲಿತ ಹಾಸ್ಟೆಲ್ ಗಳು ನೆನಪಿಗೆ ಬರತೊಡಗಿದವು. ಉದಾಹರಣೆಗೆ ನಮ್ಮ ಕನಕಪುರದ ಹಾಸ್ಟೆಲ್ ಎಂದರೆ “ಬುದ್ದದೇವ ಹಾಸ್ಟೆಲ್”, ಕೋಲಾರದ ದಲಿತ ಚಳುವಳಿ ರೂಪುಗೊಂಡ ಹಾಸ್ಟೆಲ್ ಎಂದರೆ “ನಚಿಕೇತ ಹಾಸ್ಟೆಲ್”, ಮೈಸೂರು ಎಂದರೆ ಟಿ ಎನ್ ನರಸಿಂಹಮೂರ್ತಿಯವರ “ದಲಿತ ವಿದ್ಯಾರ್ಥಿ ನಿಲಯ”, ಬೆಂಗಳೂರು ಎಂದರೆ ಪ್ರೈಮ್ ರೋಜ್ ರಸ್ತೆಯ ಫರ್ಸ್ಟ್ ಹಾಸ್ಟೆಲ್, ಮತ್ತು ಮತ್ತೊಂದು ಏರಿಯಾದಲ್ಲಿರೋ ಸೆಕೆಂಡ್ ಹಾಸ್ಟೆಲ್. ಹೀಗೆ ಹಾಸ್ಟೆಲ್ ಎಂದ ತಕ್ಷಣ ಎಷ್ಟೊಂದು ಹಾಸ್ಟೆಲ್ ಗಳ ಹೆಸರುಗಳು ಸ್ಮೃತಿಪಟಲದಲ್ಲಿ ಹಾದು ಹೋಗುತ್ತವೆ. ಗುರು ಅವರು ಸಹ ತಿಪಟೂರು, ಚಿಕ್ಕನಾಯಕನಹಳ್ಳಿ, ತುಮಕೂರು ಭಾಗದ ಅನೇಕ ಹಾಸ್ಟೆಲ್ ನಲ್ಲಿ ತಮ್ಮ ವಿದ್ಯಾರ್ಥಿ ಜೀವನವನ್ನು ಕಳೆದಿರುವ ಕಾರಣಕ್ಕೆ ಆ ಹಾಸ್ಟೆಲ್ ಗಳ ಅಂದಿನ ಸ್ಥಿತಿಗತಿ, ಅಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ಸಿಗದಿದ್ದ ಮೂಲಭೂತ ಸೌಕರ್ಯಗಳು, ಹಾಸ್ಟೆಲ್ ನ ಆಡಳಿತ ವೈಖರಿ ಇತ್ಯಾದಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

ಯಾವುದೇ ದಲಿತ ವಿದ್ಯಾರ್ಥಿ ನಿಲಯದ ಕುರಿತು ಮತ್ತೆ ಯಾರೇ ಬರೆದರೂ ಗುರು ಅವರು ಬರೆದಿರುವ ಅಷ್ಟೂ ಅನುಭವಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಆ ಹಾಸ್ಟೆಲ್ ವಾಸಿಗಳು ಖಂಡಿತವಾಗಿಯೂ ಅನುಭವಿಸಿರುತ್ತಾರೆ ಎಂದು ಹೇಳಬಹುದು. ಹಾಗೆಯೇ ಬಹುಶಃ ಯಾರಾದರು ಸಂಶೋಧನ ವಿದ್ಯಾರ್ಥಿಗಳು “ದಲಿತ ವಿದ್ಯಾರ್ಥಿ ನಿಲಯಗಳ ಇತಿಹಾಸ ಮತ್ತು ಇಂದಿನ ಸ್ಥಿತಿಗತಿ” ಎನ್ನುವ ವಿಷಯದ ಮೇಲೆ ಸಂಶೋಧನೆ ಕೈಗೊಂಡರೆ ಗುರು ಅವರ ಪುಸ್ತಕವೂ ಒಂದು ಒಳ್ಳೆಯ ಆಕರ ಗ್ರಂಥ ಆಗುವುದರಲ್ಲಿ ಸಂಶಯವಿಲ್ಲ ಎನಿಸುತ್ತದೆ.

ಗುರು ಅವರು ಈ ಪುಸ್ತಕದಲ್ಲಿ ವ್ಯಕ್ತಿ ಮತ್ತು ಸ್ಥಳಗಳ ಬಗ್ಗೆ ದಾಖಲಿಸುತ್ತಲೇ ಹಾಸ್ಟೆಲ್ ಜೀವನದ ಹಲವು ನೋವು ನಲಿವಿನ ಪ್ರಸಂಗಗಳನ್ನು ಕೂಡ ಸುದೀರ್ಘವಾಗಿ ಬರೆದಿದ್ದಾರೆ. ಒಂದೊಂದು ಪ್ರಸಂಗಗಳನ್ನು ಓದುವಾಗ child psychology ಪ್ರತಿ ಪುಟದಲ್ಲೂ ಎದ್ದು ಕಾಣುತ್ತದೆ. ಒಬ್ಬ ವಿದ್ಯಾರ್ಥಿಯ ದೇಹ, ಮನಸ್ಸು, ಬುದ್ಧಿಮತ್ತೆ ವಿಕಸನವಾಗುವ ಸಮಯದಲ್ಲಿ ಘಟಿಸಿದ ಘಟನೆಗಳು ಹಾಸ್ಟೆಲ್ ಮಕ್ಕಳ ಮನಸ್ಥಿತಿಗಳ ಅನಾವರಣ ಮಾಡುತ್ತವೆ. ದೇಹ ಬೆಳೆಯಲು ಉತ್ತಮ ಪೌಷ್ಟಿಕ ಆಹಾರ, ಬುದ್ದಿಮತ್ತೆ ಬೆಳೆಯಲು ಉತ್ತಮ ಶಿಕ್ಷಣ‌ ಮತ್ತು ಮಾರ್ಗದರ್ಶನ, ಹಾಗು ಮಾನಸಿಕವಾಗಿ ಸದೃಢವಾಗಲು ಪೂರಕವಾದ ಪರಿಸರ ಬಹುಮುಖ್ಯವಾಗಿರುತ್ತದೆ.

ಪುಸ್ತಕವನ್ನು ಓದುತ್ತಾ ಓದಂತೆ ಹಾಸ್ಟೆಲ್ ನಲ್ಲಿ ಶೌಚಕ್ಕೂ ಕೂಡ ಸರಿಯಾದ ವ್ಯವಸ್ಥೆ ಇಲ್ಲದಿರುವುದು, ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡದೆ ಇರುವುದು, ಪುಟ್ಟ ಮಕ್ಕಳ ಮೇಲೆ ಹನುಮಂತಪ್ಪನಂತಹ ಅಡಿಗೆ ಭಟ್ಟ ನೀಡುವ ಶಿಕ್ಷೆ ಮತ್ತು ಶಂಕ್ರಮ್ಮನ ಬೈಗುಳದಿಂದ ಉಂಟಾಗುವ ಮಾನಸಿಕ ಆಘಾತ, ಇಂತಹುಗಳನ್ನು ಮೆಟ್ಟಿ ನಿಂತು ಗುರು ಅಂತಹ ವಿದ್ಯಾರ್ಥಿಗಳು ಬದುಕಿನಲ್ಲಿ ಗೆಲುವು ಸಾಧಿಸಿದ್ದರೆ ಸೋತವರ ಸಂಖ್ಯೆ ಅದೆಷ್ಟೋ ತಿಳಿಯದು. ಶಾಲೆಗಳಲ್ಲಿ ತಮ್ಮ ಹತಾಶೆಗಳನ್ನು ಮಕ್ಕಳಿಗೆ ಹೊಡೆಯುವ ಮೂಲಕ ತೀರಿಸಿಕೊಳ್ಳುವ, ಅಥವಾ ಇಂಗ್ಲೀಷ್ ಭಾಷೆಯ ಅರಿವಿಲ್ಲದ ಕಾರಣಕ್ಕೆ ಅವಮಾನಕ್ಕೊಳಪಡಿಸುವ ಶಿಕ್ಷಕರ ಕಾರಣಕ್ಕೆ ಮಕ್ಕಳು ಶೈಕ್ಷಣಿಕ ಹಿಂದುಳಿಯುವುದನ್ನು, ಮಕ್ಕಳು ಪರೀಕ್ಷೆ ಬರೆದು ಫೇಲ್ ಆದರೆ ದುಡುಕಿನ ನಿರ್ಧಾರ ತೆಗೆದುಕೊಳ್ಳಬಹುದಾದ ವಿಷಯಗಳನ್ನು ಗುರು ಅವರು ಸೂಕ್ಷ್ಮವಾಗಿ ತಮ್ಮ ಈ ಪುಸ್ತಕದಲ್ಲಿ ಹೇಳಿದ್ದಾರೆ.

ಇನ್ನು ಈ ಪುಸ್ತಕದಲ್ಲಿ ಅತಿ ಮುಖ್ಯವಾಗಿ ಹಸಿವು ದಾಖಲಾಗಿರುವ ಪರಿಯನ್ನು ನೋಡಿದರೆ ಹಸಿವು ಎಷ್ಟೊಂದು ಕ್ರೂರಿ ಅಲ್ವಾ ಅನ್ನಿಸದೆ ಇರದು. ಹಸಿವಿನ ಕಾರಣಕ್ಕೆ ಗುರು ಅನುಭವಿಸುವ ಅನೇಕ ಸಂಕಷ್ಟಕರ ಪ್ರಸಂಗಗಳನ್ನು ಓದಿದಾಗ ಮನಸ್ಸು ಭಾರವಾಗುತ್ತದೆ. ಇನ್ನು ಜಾತಿಯ ಕಾರಣಕ್ಕೆ ಸಿಗದ ಬಾಡಿಗೆ ಮನೆ, ಮನೆ ಸಿಕ್ಕರೂ ಅತಿ ಕಡಿಮೆ‌ ಅವಧಿಯಲ್ಲಿ ಮನೆ ಖಾಲಿ ಮಾಡಬೇಕಾದ ಪ್ರಸಂಗಗಳು ಹಾಸ್ಟೆಲ್ ಆಚೆಗಿನ ಬದುಕಿನ ಹೋರಾಟಗಳನ್ನು ತುಂಬಾ ಪರಿಣಾಮಕಾರಿಯಾಗಿ ಗುರು ಅವರು ಬರೆದಿರುವುದಲ್ಲದೇ ಬದುಕಿನಲ್ಲಿ ಯಶಸ್ಸಿನ ಗುರು ಹೇಗೆ ಮುಟ್ಟಬಹುದು ಎನ್ನುವುದನ್ನು ಸ್ಫೂರ್ತಿದಾಯಕವಾಗಿ ಕಟ್ಟಿಕೊಟ್ಟಿದ್ದಾರೆ. ಈ‌ ಪುಸ್ತಕದಲ್ಲಿ ಹುಡುಕುತ್ತಾ ಹೋದರೆ ಗುರು ಅವರ ಯಶೋಗಾಥೆಯ ಜೊತೆಗೆ ಅನೇಕ ಸಂದೇಶಗಳು ನಮಗೆ ಕಾಣಸಿಗುತ್ತವೆ. ಉದಾಹರಣೆಗೆ ಅವರ ತಂದೆ ಚನ್ನಬಸವಯ್ಯ ಅವರು ತಮ್ಮ ಹೆಸರಿಗೆ ಬಂದಿದ್ದ ಐವತ್ತು ತೆಂಗಿನ ಮರ‌, ಮೂರು ಮಾವಿರ ಮರಗಳ ನೆರವಿನಿಂದ ಮಕ್ಕಳ ವಿದ್ಯಾಭ್ಯಾಸದ ಖರ್ಚು ವೆಚ್ಚುಗಳನ್ನು ತೂಗಿಸುತ್ತಿದ್ದರು ಎನ್ನುವ ಸಾಲುಗಳನ್ನು ಓದುವಾಗ ವಾಣಿಜ್ಯ ಬೆಳೆಗಳೆಡೆಗೂ ರೈತರು ಗಮನ ಕೊಟ್ಟರೆ ಖರ್ಚಿಗೆ ದುಡ್ಡು ಸಿಗುತ್ತದೆ ಎನ್ನುವ ಸಂದೇಶ ಕೂಡ ಈ ಪುಸ್ತಕದಲ್ಲಿದೆ. ಹಾಗೆಯೇ ಗಂಡು ಮಕ್ಕಳಿಗಲ್ಲದೇ ತಮ್ಮ ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಒತ್ತುಕೊಟ್ಟಿದ್ದ ಚನ್ನಬಸವಯ್ಯನವರ ನಡೆ ಇತರರಿಗೆ ಅನುಕರಣೀಯ ಎನ್ನುವುದನ್ನು ಈ ಪುಸ್ತಕದಲ್ಲಿ ಕಾಣಬಹುದು.

ಒಟ್ಟಾಗಿ, ಡಾ. ಬಿ ಆರ್ ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟದ ಅನೇಕ ಮಜಲುಗಳನ್ನು ಜೀವನದಲ್ಲಿ ಅನುಭವಿಸಿ‌ ಅದನ್ನು ಅಕ್ಷರ ರೂಪದಲ್ಲಿ “ಟ್ರಂಕು ತಟ್ಟೆ” ಕೃತಿಯ‌ ಮೂಲಕ ಗುರುಪ್ರಸಾದ್ ರವರು ನಮ್ಮ ಮುಂದಿಟ್ಟಿದ್ದಾರೆ. ತಳ ಸಮುದಾಯದ ಉನ್ನತಿ, ಶಿಕ್ಷಣ ಸಂಘಟನೆ ಹೋರಾಟದಿಂದ ಸಾಧ್ಯ ಎನ್ನುವುದನ್ನು ಗಟ್ಟಿ ದನಿಯಲ್ಲಿ ಅಲ್ಲದಿದ್ದರೂ ಮೆಲುದನಿಯಲ್ಲಾದರೂ ಹೇಳುತ್ತಿರುವ ಈ ಕೃತಿ ದಲಿತ ಹಾಸ್ಟೆಲ್ ವಿದ್ಯಾರ್ಥಿಗಳ ಪ್ರಸಂಗಗಳ ಕಥನವಾಗಿದೆ. ಗುರುಪ್ರಸಾದ್ ಕಂಟಲಗೆರೆಯವರಿಂದ ಇನ್ನೂ ಅನೇಕ ಕೃತಿಗಳು ಬರಲಿ ಎಂದು ಹಾರೈಸುತ್ತಾ ಈ ಪುಸ್ತಕವನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಕ್ಕಾಗಿ ಅಭಿನಂದಿಸುತ್ತೇನೆ.
ಡಾ. ನಟರಾಜು ಎಸ್ ಎಂ

ಕೃತಿ: ಟ್ರಂಕು ತಟ್ಟೆ

ಪ್ರಕಾರ: ಅನುಭವ ಕಥನ

ಬೆಲೆ: ೧೫೦/-

ಪ್ರಕಾಶನ: ಚೈತನ್ಯ ಪ್ರಕಾಶನ, ತುಮಕೂರು

ಪ್ರತಿಗಾಗಿ ಸಂಪರ್ಕಿಸಿ: 9964076203


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x