ಕಾಫಿ ಆಯ್ತಾ ಎನ್ನುತ್ತಲೇ ಇಳಿಸಂಜೆಯಲಿ ಮರೆಯಾಗಿ ಹೋದ ಕಿರಣ: ನಂದಾದೀಪ, ಮಂಡ್ಯ

ಎದೆಯ ಗೂಡಿನಲಿ ಭಾವನೆಯ ದೀಪ ಹೊತ್ತಿಸಿ, ಒಲವಿನ ಕಿರಣವ ಎಲ್ಲೆಡೆ ಹರಡಿ ತಮ್ಮ ಸತ್ಕಾರ್ಯದ, ಸವಿ ಮಾತಿನಲೆ ಎಲ್ಲರ ಮನದಲಿ ತಮ್ಮದೇ ಆದ ಸ್ಥಾನ ಗಳಿಸಿಕೊಂಡ ಕವಿ, ಲೇಖಕ, ಚಿತ್ರಕಲಾವಿದ, ಕಾದಂಬರಿಕಾರರು ಕಿರಣ ದೇಸಾಯಿಯವರು..

ಇವರು 17-07-1981ರಲ್ಲಿ ಬೆಳಗಾವಿಯ ಕಿತ್ತೂರಿನಲ್ಲಿ ಜನಿಸಿದರಾದರು.. ಬೆಳೆದಿದ್ದು ಮಾತ್ರ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ.. ತಂದೆ ಭಾಳಸಾಹೇಬ ದೇಸಾಯಿ, ತಾಯಿ ಲಕ್ಷ್ಮಿಬಾಯಿ ದೇಸಾಯಿ.. ವಿದ್ಯಾ ಪ್ರಸಾರಕ ಸಮಿತಿಯ C S ಬೆಂಬಳಗಿ ಕಲಾ ಕಾಲೇಜು, ರಾಮದುರ್ಗದಲ್ಲಿ ಬಿ. ಎ, ಬಿ.ಎಡ್ ವ್ಯಾಸಂಗ ಮಾಡಿರುವ ಇವರು.. ಎಂ. ಎ(ಇತಿಹಾಸ) ಪದವಿಯನ್ನು ಪೂರೈಸುವುದರಲ್ಲಿದ್ದರು!

ತಮ್ಮ ಕಾಲೇಜಿನ ದಿನಗಳಲ್ಲೇ ಕವನ, ಚುಟುಕು ಬರೆಯುವ ಹವ್ಯಾಸವಿದ್ದ ಇವರು ಚಿತ್ರಕಲೆಯಲ್ಲಿ ನಿಪುಣರಾಗಿ ಹೆಸರು ಪಡೆದಿದ್ದರು.. ಬರೆಯುವ ಹವ್ಯಾಸವನ್ನು ಹಾಗೆ ಮುಂದುವರೆಸಿಕೊಂಡು ಬಂದಿದ್ದ ಇವರು ಒಂದು ಖಾಸಗಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದು ಕೆಲವು ದಿನದ ನಂತರ ತಮ್ಮ ಕರ್ತವ್ಯವನ್ನು ತ್ಯಜಿಸಿ ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡಿದರು.. ಎಷ್ಟೋ ಆಶ್ರಮಗಳಿಗೆ ತಮಗಾದ ಸಹಾಯ ಮಾಡಿ.. ಕೆಲವು ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಂಡವರು.. ಅವರೂರಿನ ಶಾಲೆಗಳಿಗೆ ನಿರ್ದೇಶಕರಾಗಿ ಅಲ್ಲಿನ ಮಕ್ಕಳಿಗೆ ಪ್ರೇರಣಾ ತರಗತಿಗಳನ್ನು ನಡೆಸಿದ್ದಾರೆ..

ಭೂತಕಾಲದ ಬಗ್ಗೆ ಚಿಂತಿಸದೆ, ಭವಿಷ್ಯದ ಭಯವಿಲ್ಲದೆ ಸದಾ ವರ್ತಮಾನದಲ್ಲಿ ಹಸನ್ಮುಖಿಯಾಗಿ ಬದುಕಿದ ಇವರು “ನಾನಿದ್ದೀನಿ” ಎಂದು ಹೇಳುತ್ತಲೇ ಅದೆಷ್ಟೋ ಸ್ನೇಹವನ್ನು ಸಂಪಾದಿಸಿ ನೊಂದ ಮನಸುಗಳಿಗೆ ತಮ್ಮ ಮಾತಿನ ಮೂಲಕವೇ ಭರವಸೆಯ ಕಿರಣವಾಗಿ ಬೆಳಕಾಗಿದ್ದರು.. ಅವರ ಸಮಸ್ಯೆಗಳ ಜೊತೆ ನಿಂತು ಅದರ ಪಾಲುದಾರನಾಗಿ ಬೆಂಬಲ ನೀಡುತ್ತಿದ್ದರು.. ನಾವು ಏನನ್ನು ಮಾಡುತ್ತೇವೆಯೋ ಅದೇ ಮರಳಿ ಬರುತ್ತದೆ.. ಪ್ರೀತಿ ಹಂಚು ಪ್ರೀತಿ ಮರಳಿ ಬರುತ್ತದೆ.. ಎನ್ನುತ್ತಿದ್ದ ಅವರ ಮಾತಿನಂತೆಯೇ, ಅವರು ಕೊಟ್ಟ ಸಹಕಾರ, ಸಹಾಯ ಅವರ ಅನಾರೋಗ್ಯದ ಸ್ಥಿತಿಯಲ್ಲಿ ಆ ಪ್ರೀತಿ, ಸಹಕಾರ, ಸಹಾಯ ಮರಳಿ ಬಂದಿದ್ದು ನಿಜಕ್ಕೂ ಸೋಜಿಗ!

ಮೊದ ಮೊದಲು ಕೇವಲ ಹಾಳೆಗಷ್ಟೇ ಸೀಮಿತವಾಗಿದ್ದ ಅವರ ಕವಿತೆಗಳು ಹಾಗೂ ಹುಟ್ಟುಹಬ್ಬದ ವಿಶೇಷವಾಗಿ ಸ್ನೇಹಿತರಿಗಾಗಿ ಬರೆಯುತ್ತಿದ್ದ ಕವಿತೆಗಳು.. ಕ್ರಮೇಣ ಫೇಸ್ಬುಕ್ ಲೋಕಕ್ಕೆ ಬಂದಿಳಿದವು.. ಫೇಸ್ಬುಕ್ ನಲ್ಲಿ ಶುರುವಾದ ಅವರ ಸಾಹಿತ್ಯ ಪಯಣದಿಂದ, ಸ್ನೇಹ ಮನಸಿನಿಂದ ಎಲ್ಲರ ಆತ್ಮೀಯರಾದರು.. ಒಂದೊಂದೇ ಹಂತವಾಗಿ ಬೆಳೆಯುತ್ತ ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸಿದರು.. ಅದಷ್ಟೇ ಅಲ್ಲದೆ ಇವರ ನಿರೂಪಣೆ ಶೈಲಿಯನ್ನು ಮೆಚ್ಚಿ ಅನೇಕ ಕಾರ್ಯಕ್ರಮಗಳು ಇವರ ತೆಕ್ಕೆಗೆ ಬಂದವು..

ಕವನಗಳಿಗಷ್ಟೇ ಸೀಮಿತವಾಗದೆ ಇತಿಹಾಸದ ಮೇಲೆ ಒಲವಿದ್ದ ಕಾರಣ ಅನೇಕ ಇತಿಹಾಸದ ವಿಚಾರಗಳ ಕುರಿತು ಅಧ್ಯಯನ ನಡೆಸಿ ಹಲವು ಐತಿಹಾಸಿಕ ಲೇಖನಗಳನ್ನು ಬರೆದರು.. ದೇಶ ಸುತ್ತು ಕೋಶ ಓದು ಎನ್ನುವ ಮಾತಿನಂತೆ ವರ್ಷಕ್ಕೊಮ್ಮೆ ಎಲ್ಲಾ ಸ್ನೇಹಿತರನ್ನು ಭೇಟಿಯಾಗಿ ಅವರೂರಿನ ವಿಶೇಷ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ವಿಶೇಷತೆಗಳನ್ನು ತಮ್ಮ ಬರಹದ ಮೂಲಕ ಪರಿಚಯಿಸುವ ಹವ್ಯಾಸ ಇವರದಾಗಿತ್ತು.. ಅಂತೆಯೇ ಅದೆಷ್ಟು ಪುಸ್ತಕಗಳನ್ನು ಓದಿದ್ದಾರೋ ಲೆಕ್ಕವಿಲ್ಲ.. ಪುಸ್ತಕ ಸಂಗ್ರಹವೆ ಇದೆ.. ಅವರ ಪುಸ್ತಕಗಳು ಅವರೂರಿನಲ್ಲಿ ಅವರ ನೆನಪಿನಲ್ಲಿ ಒಂದು ಗ್ರಂಥಾಲಯವಾದರೆ ಉತ್ತಮ! ಇದರ ಜೊತೆ ಜೊತೆಗೆ ಎಲೆ ಮರೆ ಕಾಯಿಯಂತಿರುವ ಅನೇಕ ಸಾಧಕರನ್ನು ಹುಡುಕಿ ಅವರ ಕುರಿತು ಲೇಖನಗಳನ್ನು ಬರೆದು ಜನರಿಗೆ ಪರಿಚಯಿಸುವ ಕೆಲಸ ಅವರ ಖುಷಿಯ ಸಂಗತಿಗಳಲ್ಲಿ ಒಂದು!

ಬಿಡುವಿನ ವೇಳೆಯಲ್ಲಿ ತಮ್ಮ ಮತ್ತೊಂದು ಆಪ್ತವಾದ, ಪ್ರಾಣವಾದ ಹಾಗೂ ಅನ್ನವಾಗಿದ್ದ ಹವ್ಯಾಸವೆಂದರೆ(ಕೆಲಸ) ಚಿತ್ರಕಲೆ..! ಮಂಡಲ ಆರ್ಟ್, ಪೆನ್ಸಿಲ್ ಆರ್ಟ್, ವಾಟರ್ ಕಲರ್ ಆರ್ಟ್, ಆರ್ಕಲೀಕ್ ಆರ್ಟ್, ಪುಟ್ಟ ಕಲ್ಲುಗಳ ಬಳಕೆ, ಚಿಗುರೆಲೆಯ ಬಳಕೆ ಮಾಡಿ ಇನ್ನೂ ಅನೇಕ ಚಿತ್ರಗಳನ್ನು ಬರೆಯುತ್ತಿದ್ದರು.. ಚಿತ್ರಕಲಾಮೇಳದಲ್ಲಿ ಪ್ರದರ್ಶನ ಮಾಡುವ ಅವರ ಕನಸು ನನಸಾಗಬೇಕು..!

ಹೀಗೆ ಉತ್ತಮ ಹವ್ಯಾಸಗಳೊಂದಿಗೆ ಬದುಕು ಸಾಗಿಸಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಣ್ಣ ಕತೆಗಳನ್ನು ಆಗೊಮ್ಮೆ ಈಗೊಮ್ಮೆ ಬರೆಯುತ್ತಿದ್ದ ಅವರು ತಮ್ಮ ಕಲ್ಪನೆಯ ನಾಯಕ ನಾಯಕಿ ರಾಘವ ಜಾನಕಿಯ ಹೆಸರಲ್ಲಿ “ಸಂಜೆಗೊಂದು ಗುಟುಕು” ಪ್ರೇಮ ಲೇಖನಗಳನ್ನು ಬರೆಯಲು ಆರಂಭಿಸಿ ಆ ಗುಟುಕುಗಳು ಓದುಗರ ಮನಸಿನಲ್ಲಿ ಸವಿ ಸ್ವಾದವಾಗಿ ಇಂದಿಗೂ ಉಳಿದಿವೆ.. ಪುಟ್ಟ ಪುಟ್ಟ ಲೇಖನದಂತಿದ್ದ ಆ ಗುಟುಕು ಜಾನಕಿಯ ಕಲ್ಪನೆಯಲ್ಲಿ “ಕಾಫಿ ಆಯ್ತಾ..” ಎನ್ನುವ ಕಾದಂಬರಿಯಾಗಿ 17-07-2021(ಅವರ ಹುಟ್ಟಿದ ದಿನ) ರಂದು ಬಿಡುಗಡೆಗೊಂಡು ಅವರ ಕನಸು ನನಸಾಯಿತು..

ಇತ್ತೀಚೆಗಷ್ಟೇ ಆರ್ಟ್ ಟು ಹಾರ್ಟ್ ಎಂಬ ಯುಟ್ಯೂಬ್ ಚಾನೆಲ್ ಕೂಡ ಆರಂಭಿಸಿ ಚಿತ್ರಕಲೆಗಳ ಟೆಕ್ನಿಕ್ ಗಳನ್ನು ತಿಳಿಸುತ್ತಿದ್ದರು. ಅದಷ್ಟೇ ಅಲ್ಲದೆ ಅವರ ಹಲವಾರು ಕವನಗಳ ಒಂದು ಕವನ ಸಂಕಲನ, ಮತ್ತೆರಡು ಕಾದಂಬರಿಯಾದ ರಕ್ತ ಅಂಟಿದ ಹೆಜ್ಜೆ, ಪರದೆ ಸರಿದಾಗ, ಒಂದು ಕಥಾಸಂಕಲನ ಅವರ ಇಚ್ಛೆಯಂತೆಯೇ ಪುಸ್ತಕವಾಗಿ ಹೊರಬರಬೇಕು.. ಈಗಷ್ಟೇ ಐತಿಹಾಸಿಕ ಕಾದಂಬರಿ ರಕ್ತತಿಲಕ ಬರೆಯಲು ಶುರು ಮಾಡಿದ್ದು ಅದು ಅರ್ಧಕ್ಕೆ ನಿಂತದ್ದು ಬೇಸರದ ಸಂಗತಿ..!

ಎಲ್ಲರೊಡನೆ ನೀರಿನಂತೆ ಆಪ್ತವಾಗಿ ಬೆರೆಯುತ್ತಿದ್ದ ಅವರು ಶುಭವನ್ನೇ ಬಯಸುವ ನಿಷ್ಕಲ್ಮಶ ಹೃದಯಿ! ನಿನ್ನ ಬೆಳವಣಿಗೆ ನಾನು ನೋಡಬೇಕು.. ನೀನು ಅತಿ ಎತ್ತರದ ಸ್ಥಾನಕ್ಕೆ ತಲುಪಬೇಕು ಎನ್ನುವುದೇ ನನ್ನ ಹಾರೈಕೆ ಎನ್ನುತ್ತಿದ್ದ ಅವರ ಮಾತು ಇಂದಿಗೂ ನನ್ನ ಕಿವಿಯಲ್ಲಿ ಹಾಗೆಯೇ ಇದೆ.. ನೀವು ತೋರಿಸಿದ ಹಾದಿಯಲ್ಲಿ ನಡೆಯುವ ಪ್ರಯತ್ನ ಖಂಡಿತ ಇದೆ..

ವಿಪರ್ಯಾಸವೆಂದರೆ ತಮ್ಮ ಕಾದಂಬರಿ ಓದುಗರನ್ನು ತಲುಪುವ ಮೊದಲೇ ಅನಾರೋಗ್ಯಕ್ಕೆ ತುತ್ತಾದ ಅವರು ಪುಸ್ತಕಕ್ಕೆ ಬಂದ ವಿಮರ್ಶೆಗಳನ್ನು ನೋಡದೆ ಹೋದದ್ದು ಖೇದಕರ! ಅವರ ಮರಣ ನಂತರವೂ ಅವರ ಸಾಹಿತ್ಯಯಾನ ನಿಲ್ಲದೆ ಇರಲಿ ಎಂಬುದೇ ನಮ್ಮಂತ ಓದುಗರ ಬಯಕೆ.. ಅವರ ಪುಸ್ತಕಗಳು ಹೊರಬಂದು ಓದುಗರ ಮನವನ್ನು ತಣಿಸಲಿ..

ಅವರಿಂದು ದೈಹಿಕವಾಗಿ ನಮ್ಮೊಡನೆ ಇಲ್ಲದಿದ್ದರೂ ಅವರ ಕಲೆ, ಸಾಹಿತ್ಯ, ಸೇವೆಯ ಮೂಲಕ ಬೆಳಕಿನ ಕಿರಣವಾಗಿ ಎಂದಿಗೂ ಅಮರ!

-ನಂದಾದೀಪ, ಮಂಡ್ಯ

ಸಂಪಾದಕರ ಟಿಪ್ಪಣಿ: ಪಂಜುವಿಗಾಗಿಯೂ ಲೇಖನ ಬರೆದಿದ್ದ ಶ್ರೀ ಕಿರಣ್‌ ದೇಸಾಯಿಯವರು ಅಕಾಲಿಕ ಮರಣ ಹೊಂದಿದ್ದು ತುಂಬಾ ನೋವಿನ ವಿಚಾರ. ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಕಿರಣ್‌ ರವರ ಕುಟುಂಬದವರಿಗೂ ಅವರ ಆತ್ಮೀಯರಿಗೂ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ.. ಪಂಜು ಬಳಗ ಕಿರಣ್‌ ದೇಸಾಯಿಯವರಿಗೆ ಈ ಲೇಖನ ಪ್ರಕಟಿಸುವ ಮೂಲಕ ಶ್ರದ್ದಾಂಜಲಿಯನ್ನು ಅರ್ಪಿಸುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ..

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ದಾಕ್ಷಾಯಣಿ
ದಾಕ್ಷಾಯಣಿ
2 years ago

ಉತ್ತಮ ಕಲಾವಿದರು. ಸಂತಾಪಗಳು. 😥😥

1
0
Would love your thoughts, please comment.x
()
x