ಸೀರೆಯಂಚ ಹಿಡಿದು ತಪ್ಪೆಗಾಲ ಹಾಕಿ ಸೀರೆಯ ತೊಡರಿಸಿ ಕೊಂಡು ಬಿದ್ದಾಗ ಅಮ್ಮಾ ಎಂದಾಗ ಗಾಬರಿಗೊಂಡು ಜೋರಾಗಿ ಅಳುವ ನನ್ನ ಎತ್ತಿಕೊಂಡು ಎದೆಗಪ್ಪಿಕೊಂಡು ಪೆಟ್ಟಾಯಿತಾ ಮುದ್ದು ಎಂದು ಮುತ್ತಿಡುತ್ತ, ಬಿದ್ದ ಜಾಗವನ್ನೊಮ್ಮೆ ಇನ್ನೊಮ್ಮೆ ಬಡಿದು ಕಣ್ಣೀರು ಒರೆಸುತ್ತ ಎದೆಗವುಚಿ ಎದೆಹಾಲುಣಿಸುವಾಗ ಎಲ್ಲಿಲ್ಲದ ಸಂತಸ. ಅಮ್ಮನಿಗೆ ಅತ್ತು ಕರೆದು ಯಾಮಾರಿಸಿ ಹಾಲು ಕುಡಿವ ಕಾಯಕ ನನಗೆ ಹೊಸದಲ್ಲ.
ಐದು ವರುಷ ಕಳೆದರೂ ಅಮ್ಮ ಒಮ್ಮೆಯು ಗದರಿಸಿಲ್ಲ. ಹಾಲುಣಿಸುವುದ ಬಿಟ್ಟಿಲ್ಲ. ಶಾಲೆಗೆ ಹೋಗುವಾಗ ಪುಟ್ಟ ಕಿರುಬೆರಳ ತೋರಿಸುತ್ತ ಪ್ರೀತಿ ಬರುವಷ್ಟು ಮುದ್ದು ಮುಖ ಮಾಡಿ ಇಟಕೊಡಮ್ಮಾ ಪ್ಲೀಸ್ ಅನ್ನುವಾಗ, ಅಮ್ಮ ಒಲ್ಲೆ ಅನ್ನದೆ ರಸ್ತೆ ಪಕ್ಕದಲ್ಲಿ ಕೂತು ಹಾಲುಣಿಸುವಾಗ ಗೊತ್ತಿದ್ದವರು, ಅಲ್ಲಮ್ಮಾ ನಿನ್ನ ಮಗಳಿಗೆ ಬುದ್ದಿಯಿಲ್ಲ, ನಿನಗಾದರು ಬೇಡವಾ? ಎಲ್ಲಂದರಲ್ಲಿ ಹಿಂಗಕುಂತ ಬಿಡೋದಾ ಎರಡೇಟು ಹಾಕಿ ಸರಿಹೋಗತಾಳ. ಹಿಂಗ ಮುದ್ದ ಮಾಡಿ ಹಾಳ ಮಾಡಬ್ಯಾಡರಿ. ಅಯ್ಯೋ ಹಾಗೇನಾದರೂ ಮಾಡಿದ್ರೆ ಅವಳು ಶಾಲೆಗೆ ಹೋಗೊದಿಲ್ಲರೀ ವಾಪಸ್ ನೆನಪಾತಮ್ಮ ಅಂತ ಮನಿಗೆ ಬಂದ ಬಿಡತಾಳ. ಅವಳು ಕೇಳದಾಗ ಕೊ ಟ್ಟಬಿಟ್ಟರೆ ನನಗೆ ಚಿಂತಿಯಿಲ್ಲ. ಸರಿಹೋಯಿತು ಅಮ್ಮ ಮಗಳು ಸರಿಯಿದ್ದಿರಿ ನಿಮಗ ಹೇಳಾಕ ಬಂದಿವಲ್ಲ ನಮಗ ಬುದ್ದಿಯಿಲ್ಲೆಂದು ಸುಮ್ಮನೇ ಹೋದವರ ಕಂಡು ಇನ್ನೆರಡು ನಿಮಿಷ ಹಾಲು ಬರದಿದ್ದರೂ ಚೀಪುತ್ತ ಕುಳಿತು ಹೊರಡುತ್ತಿದ್ದೆ.
ಎಷ್ಟಾದರೂ ನನ್ನಮ್ಮ ಅವಳು. ಜಗತ್ತಿನ ಎಲ್ಲ ಸುಖವ ನನಗೆ ಧಾರೆಯೆರೆದವಳು. ದಿನವೂ ನನ್ನ ತಿಕ್ಕಿತೀಡಿ ಪೌಡರ್ ಹಚ್ಚಿ, ಕಾಡಿಗೆ ಹಣೆಗಿಟ್ಟು, ಅಂಗಾಲಿಗೂ ಹಚ್ಚಿ ಹೊರಗೆ ಆಡಲು ಬಿಡುತ್ತಿದ್ದಳು. ಅಕ್ಕ ಪಕ್ಕದವರು ನೋಡಿ ಆಡಿಕೊ ಳ್ಳುತ್ತಿದ್ದರು. ಅಲ್ಲವೇ ನಿನ್ನ ಮಗಳು ಏನಾದರೂ ಬೆಳ್ಳಗೆ ಇದ್ದಿದ್ದರೆ ಇನ್ನೇನು ಮಾಡತಿದ್ದಿಯೋ. ಇವಳೋ ರೊಟ್ಟಿ ತಟ್ಟೋ ಹಂಚಿನ ಬಣ್ಣದಂತೆ. ಕಾಗೆನಾದರೂ ಸ್ವಲ್ಪ ಕಲರ್ ಇದೆ ಪೌಡರ್ ಅದ್ಯಾವತರ ಹಚ್ಚಿಯೇ ಕಾಡಿಗೆ ಬೇರೆ ಕೇಡು ಮೂಗು ಮುರಿವಾಗ ನನ್ನಮ್ಮ ಕೊಂಚವು ಬೇಸರಿಸದೇ ಆಡಿಬಂದ ನನ್ನ ಅಂಗಾಲ ತೊಳೆದು ತುತ್ತು ಮಾಡಿ ಉಣ್ಣಿ ಸುವ ಅವಳ ಪ್ರೀತಿ ಮಾತ್ರ ಅರ್ಥವಾಗುತ್ತಿತ್ತು. ಅಮ್ಮ ಪ್ರತಿ ಸ್ಪರ್ಧಿಯಲ್ಲ ಎಲ್ಲವು ಅಮ್ಮಮಯ.
ಒಂದೇ ಎರಡೇ ಹೆಸರುಗಳ ಸಾಲುಸಾಲು ಪಕ್ಕದಲ್ಲಿ ಕುಳಿ ತುಕೊಳ್ಳಲು ಹಿಂಜರಿಯುವವರ ಕಂಡು ನೋವಾಗುತ್ತಿತ್ತು. ಆ ನೋವ ಅಮ್ಮನ ಮಡಿಲಲವಿತು ದುಃಖಿಸುತ್ತ ಹೇಳುವಾಗ ಅಮ್ಮ ತಲೆಸವರುತ್ತಾ. . ಗಲ್ಲಕ್ಕೆ ಮುತ್ತನಿಟ್ಟು ಚಿನ್ನು ನೀನು ಕೃಷ್ಣಸುಂದರಿ, ಕೃಷ್ಣನ ಆಪ್ತ ಬಣ್ಣ ನಿನ್ನದು ಈ ಬಣ್ಣ ಪುಣ್ಯವಂತರಿಗೆ ಮಾತ್ರ ಲಭಿಸುವುದು. ಈ ಬಣ್ಣ ಪ್ರೀತಿ ಪಾತ್ರರಾದವರಿಗೆ ಮಾತ್ರ ಒಲಿಯುವುದು. ಹೀಗಾಗಿ ಅವರಿವರ ಬಗ್ಗೆ ಚಿಂತೆಬಿಡು ಅನ್ನುವವರ ಮುಂದೆ ತಲೆಎತ್ತಿ ನಡೆ. ಓದು, ಜಾಣಳಾಗು, ವಿದ್ಯೆಯನ್ನು ಆಸ್ತಿಯಾಗಿಸು, ವಿನಯ ನಿನ್ನ ಆಭರಣವಾಗಿಸು. ಅನ್ಯಾಯದ ವಿರುದ್ಧ ಧ್ವನಿಯೆತ್ತು ದುರ್ಬಲರಿಗೆ ನೆರವಾಗು. ಬಣ್ಣದಿಂದ ಏನೂ ಸಾಧನೆಯಿಲ್ಲ ಅದು ಗುಣದಿಂದ ಮಾತ್ರ ಸಾಧ್ಯ. ಹೂ ಅರಸುವ ದುಂಬಿ ಯಾಗದೇ ನೀ ಪರಿಮಳ ಸೂಸುವ ಮಲ್ಲಿಗೆಯಾಗು. ಆಗ ನೋಡು ನನ್ನ ಕೃಷ್ಣೆ ನಿನ್ನ ಎಲ್ಲರೂ ಇಷ್ಟಪಡುವರೆನ್ನುವಾಗೆಲ್ಲ.
ನಾನು ದೊಡ್ಡವಳಾದರೂ ನನ್ನಮ್ಮ ತಿದ್ದಿ ತೀಡುವುದ ಬಿಟ್ಟಿಲ್ಲ. . ತನ್ನ ಕೈ ಬೆರಳಲಿ ದೃಷ್ಟಿ ತಗಿಯೋದ ಮರೆತಿಲ್ಲ. ನನ್ನಪ್ಪನ ಕಂಡರೆ ಪ್ರೇಮವಿದ್ದರೂ ಸಲಿಗೆಗೆ, ಗೆಳೆತನಕ್ಕೆ ತೀರ ಹತ್ತಿ ರವಾದವಳು ನನ್ನಮ್ಮ. ನನ್ನ ಪುಟ್ಟ ಭಾಷಣದ ಮುಂಭಾ ಗದಲ್ಲಿ ನನಗೆ ಕಾಣುವಂತೆ ನಿಂತು ಕೈ ಸನ್ನೆಬಾಯ್ ಸನ್ನೆ ಮಾಡುತ್ತಿದ್ದಂತೆ ನಾನು ಉಲಿಯುತ್ತಿದ್ದೆ. ಎಲ್ಲರೂ ನನ್ನಮ್ಮನ ಕಡೆ ನೋಡಿ ಹೆಮ್ಮೆ ಪಟ್ಟಿದ್ದಿದೆ. ಅಮ್ಮನ ಕಂಕುಳ ಏರಿ, , , ಕೂತು ಅಪ್ಪಿದ, ಆ ರೋಮಾಂಚನದ ಗಳಿಗೆಗಳು ಪುನಃ ಬರಲಾರವು.
ಅವಳೊಂದು ಅದಮ್ಯ ಚೈತನ್ಯ. ಅವಳ ಧೈರ್ಯ, ಸಾಹಸ ಮಾಡಬೇಕೆನ್ನುವ ಛಲ ಇವು ನನ್ನ ಮನದಲ್ಲಿ ಅಚ್ಚೊತ್ತಿವೆ. ಅಮ್ಮಾ ಇಂದು ನಾನೇನಾದರೂ ಆಗಿರುವೆನೆಂದರೆ ಅದು ನಿನ್ನಿಂದ. ನೀ ಕೊಟ್ಟ ಪ್ರೀತಿ ವಾತ್ಸಲ್ಯದಿಂದ. ಹಸಿದು ಬಂದವರಿಗೆ ಉಣಿಸದೇ ಕಳುಹಿಸದ ಅನ್ನಪೂರ್ಣ ಅಪ್ಪನ ಸಂಬಳ ಕಡಿಮೆಯಿದ್ದರೂ ಇದ್ದುದರಲ್ಲೆ ಜೀವನ ಹೇಗೆ ನಿಭಾಯಿಸಬೇಕೆಂದು ಕಲಿಸಿದಾಕೆ. ಸಂಸ್ಕಾರದ ಕಣಜ ನೀನ ಮ್ಮ. ಅಡಿಗೆ ಮನೆಗೆಂದೂ ರಜೆ ಘೋಷಿಸದವಳು. ದಿನದ ಇಪ್ಪನಾಲ್ಕು ಗಂಟೆ ಕಡಿಮೆಯೆಂಬಂತೆ ಕಾಯಕದಲ್ಲಿ ಬದುಕ ಸವೆಸಿದವಳು. ಅಮ್ಮಾ ಕಷ್ಟ ಸುಖದಲ್ಲೂ ಹಿಗ್ಗಿಲ್ಲ, ಕುಗ್ಗಿಲ್ಲ. ಸ್ಥಿತಪ್ರಜ್ಞೆಯ ಮಹಾತಾಯಿ ನೀನು. ಮನೆಯ ಮಂದಿರ ಮಾಡಿದ ದೇವತೆ. ನೂಲಿನಂತೆ ಸೀರೆ ಎಂಬಂತೆ ನಾನು ನಿನ್ನಂತಾಗುವೆ.
“ಅಮ್ಮಾ ಎಂದರೆ ಏನೋ ಹರುಷವು ನಮ್ಮ ಪಾಲಿಗೆ ಅವಳೇ ದೇವರು” ಸದಾ ನಗುವ ಸೂಸುವ ಪಾರಿಜಾತದಂತೆ. ನನ್ನ ಕಣ್ಣರೆಪ್ಪೆಯಲಿಟ್ಟು ಕಾಯ್ದಂತೆ ನಿನ್ನ ಈ ಜೀವ ಇರುವ ತನಕ ನಾನು ನಿನ್ನ ಹೃದಯದಲಿಟ್ಟು ಕಾಯ್ವೆ, ನನ್ನ ಹೃದಯದ ಭಾಷೆ ನೀನು ಅಮ್ಮಾ. ಜಗದ ಕಣ್ಣು ನೀನು.
-ಶಿವಲೀಲಾ ಹುಣಸಗಿ ಯಲ್ಲಾಪುರ
ಅಮ್ಮನ ಕುರಿತಾದ ಲೇಖನ ಅದ್ಭುತವಾಗಿದೆ.ಅಮ್ಮನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಸುಮಧುರ ಲೇಖನ
ತಾಯಿಗಿಂತ ದೇವರಿಲ್ಲ, ಒಲವು, ಪ್ರೀ ತಿಗೆ ಇನ್ನೊಂದು ಹೆಸರು ಅಮ್ಮಾ.ಅಮ್ಮನ ಈ ಸುಂದರ ಲೇಖನ ಬರೆದ ತಮಗೆ ಶರಣು ಶರಣು.🙏🏻🙏🏻💞💞🙏🏻🙏🏻
Amman bagge estu heidaru saladu tumbhane chennagide
ಅಮ್ಮ ಎಂದರೆ ಹೇಳಲಾರದ ಅನುಭವ ಲೇಖಕ ಚೆನ್ನಾಗಿ ದೆ