ಕನ್ನಡದ ನವೋದಯ ಸಾಹಿತ್ಯದ ಮೇಲೆ ಡಾ. ಬಿ.ಎಂ. ಶ್ರೀಯವರ ‘ಇಂಗ್ಲೀಷ್ ಗೀತಗಳು’ ಹಾಗೂ ಡಾ. ಹಟ್ಟಿಯಂಗಡಿಯವರ ‘ಆಂಗ್ಲ ಕವಿತಾವಳಿ’ಯ ಪುಸ್ತಕಗಳ ಪ್ರಭಾವ !: ಎಚ್. ಆರ್. ಲಕ್ಷ್ಮೀ ವೆಂಕಟೇಶ್

ಇಪ್ಪತ್ತನೇ ಶತಮಾನದ ಆದಿಯಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಭಾವದಿಂದ ಕನ್ನಡ ಸಾಹಿತ್ಯವು ಹೊಸ ಹುಟ್ಟನ್ನು ಪಡೆದು ಹಳೆಗನ್ನಡ -ನಡುಗನ್ನಡ ಸಾಹಿತ್ಯಕ್ಕಿಂತ ಬೇರೆಯಾದ ‘ನವೋದಯ ಸಾಹಿತ್ಯ’ ವೆಂದು ಹೊಸ ಸಾಹಿತ್ಯ ಪ್ರಕಾರದಲ್ಲಿ ಕಾಣಿಸಿಕೊಂಡಿತು. ಇದು ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಕಾವ್ಯ, ಕವನ, ಭಾವಗೀತೆ, ಹೀಗೆ ವಿವಿಧ ಪ್ರಕಾರಗಳಲ್ಲಿ ಬಹುಬೇಗ ಅಭಿವೃದ್ಧಿ ಪಡೆದು ವಿಫುಲ ಸಾಹಿತ್ಯ ಬೆಳವಣಿಗೆಗೆ ಕಾರಣವಾಯಿತು. ಇದರಲ್ಲಿ ಮುಖ್ಯವಾದ ಕಾವ್ಯ ಪ್ರಕಾರಗಳಲ್ಲಿ, ಭಾವಗೀತೆ, ಕವನ, ಕಗ್ಗ, ವಚನದ ಲಕ್ಷಣದ ಮತ್ತು ರಗಳೆ, ಛಂದಸ್ಸಿನ ಸಾನೆಟ್, ಮಾದರಿಯ ಪದ್ಯಗಳು ಮುಖ್ಯವಾದವು.

ಇಂತಹ ನವೋದಯ ಕಾವ್ಯ ಪರಂಪರೆಗೆ ಅಡಿಗಲ್ಲು ಹಾಕಿದ ಧೀಮಂತ ವ್ಯಕ್ತಿಗಳಲ್ಲಿ ಆಚಾರ್ಯ ಬಿ. ಎಂ. ಶ್ರೀ ಯವರ ಜೊತೆಗೆ ಅನೇಕರು ತಮ್ಮ ಅನುಪಮ ಕಾಣಿಕೆಗಳನ್ನು ಕೊಟ್ಟಿದ್ದಾರೆ. ಅವರಲ್ಲಿ ಮುಂಬಯಿಯ ಹಿರಿಯ ಸಾಹಿತಿ, ಡಾ. ಹಟ್ಟಿಯಂಗಡಿ ನಾರಾಯಣರಾಯರ ಕೊಡುಗೆ ಅಪಾರ. .’ಆಂಗ್ಲ ಕವಿತಾವಳಿಯ ಪುಸ್ತಕ’ ವು ೧೯೧೯ ರಲ್ಲಿ ಮುಂಬಯಿನಿಂದ ಬೆಳಕುಕಂಡಿತು. ಅವರೊಬ್ಬ ಕವಿ, ಇಂಗ್ಲಿಷ್ ಪ್ರಾಧ್ಯಾಪಕ, ಅನುವಾದಕಾರ, ಸಂಶೋಧಕ, ಕಾದಂಬರಿಕಾರ, ಪತ್ರಿಕಾ ಸಂಪಾದಕ, ಕೊಂಕಣಿ, ಇಂಗ್ಲೀಷ್, ಕನ್ನಡ ಭಾಷೆಗಳ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿಮಾಡಿದ ಅಪೂರ್ವ ಸಾಧಕರು. ನಾರಾಯಣರಾಯರ ಜೀವಿತ ಸಮಯದಲ್ಲಿನ ಬದುಕು, ಬರಹ, ಸಾಹಿತ್ಯ ಸಾಧನೆಗಳನ್ನು ಕನ್ನಡಿಗರೊಂದಿಗೆ ಹಂಚಿಕೊಳ್ಳುವ ಸಲುವಾಗಿ ‘ಆನ್ ಲೈನ್ ಕಾರ್ಯಕ್ರಮವನ್ನು ಆಯೋಜಿಸಿದರು’. ಕರಾವಳಿ, ಧಾರವಾಡ, ಮತ್ತು ಮೈಸೂರಿನಲ್ಲಿ ಹಾಗೂ ಮುಂಬಯಿನಲ್ಲೂ ಸಹಿತ ಏಕಕಾಲದಲ್ಲಿಯೇ ಕನ್ನಡ ಸಾಹಿತ್ಯ ಬೆಳಕುಕಂಡಿತು ಎನ್ನುವುದನ್ನು ಗಮನಿಸಬಹುದಾಗಿದೆ.

೧೯-೨೦ ನೆಯ ಶತಮಾನದ ಆದಿಯಲ್ಲಿ ಆಂಗ್ಲಭಾಷಾ ಸಾಹಿತ್ಯದ ಅಧ್ಯಯನದಿಂದ ಕನ್ನಡ ಸಾಹಿತ್ಯ ಮೇಲೆ ಅಪಾರ ಪ್ರಭಾವವಾಗಿ ಕನ್ನಡ ಸಾಹಿತ್ಯದ ಗತಿ ಬಹಳವಾಗಿ ಬದಲಾಯಿಸಿತು. ಕನ್ನಡ ಸಾಹಿತ್ಯದ ಪ್ರಕಾರಗಳು, ಭಾವಗೀತೆ, ಸಣ್ಣಕಥೆ, ಕಾದಂಬರಿ, ಪ್ರಬಂಧಗಳ ಮುಖಾಂತರ ಕನ್ನಡಕ್ಕೂ ಬಂದ ವಿಷಯ ಎಲ್ಲರಿಗೂ ಗೊತ್ತು. ಆ ಕಾಲಘಟ್ಟದಲ್ಲಿ ಅನುವಾದ, ಒಂದು ಪ್ರಮುಖ ಮಾಧ್ಯಮವಾಗಿತ್ತು ಒಂದು ಕಡೆ ಇಂಗ್ಲೀಷ್ ಸಾಹಿತ್ಯ ಅನುವಾದಗಳು ಹಟ್ಟಿಯಂಗಡಿ ಮತ್ತು ಶ್ರೀ. ನರಸಿಂಹಾಚಾರ್ಯರ ಕಡೆಯಿಂದ ಬರುತ್ತಿದ್ದರೆ, ಅನೇಕರು ಇನ್ನೊಂದು ಕಡೆ, ಸಂಸ್ಕೃತದಿಂದ ಶೇಷಗಿರಿರಾಯರು, ಬಸಪ್ಪಶಾಸ್ತ್ರಿಗಳು, ಮರಾಠಿಯಿಂದ ಗಳಗನಾಥರು, ಬಂಗಾಳಿಯಿಂದ ಮತ್ತು ಬೇರೆಬೇರೆ ಭಾಷೆಗಳಿಂದ ಅನುವಾದಕಾರ್ಯ ಬಿರುಸಾಗಿ ನಡೆಯುತ್ತಿತ್ತು. ಇನ್ನೂ ಹಲವಾರು ಇಂಗ್ಲೀಷ್ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ, ಒಂದು ಹೊಸತನವನ್ನು, ಒಂದು ಹೊಸ ಪರಂಪರೆಯನ್ನು ಹುಟ್ಟುಹಾಕಿದ ಅವರ ಪ್ರಯತ್ನ ಅನನ್ಯವೆನ್ನುವುದು ವಿದ್ವಾಂಸರ ಮೆಚ್ಚುಗೆಯ ಮಾತುಗಳಿಂದ ತಿಳಿಯಬರುತ್ತದೆ. ಈ ಕೃತಿ ದೂರದ ಮುಂಬಯಿನಿಂದ ಪ್ರಕಟವಾಗಿದ್ದರಿಂದ ಕನ್ನಡ. ಸಾಹಿತ್ಯ ಚರಿತ್ರೆಯಲ್ಲಿ ಅಷ್ಟಾಗಿ ಬೆಳಕು ಕಂಡಿಲ್ಲದೆ ಉಪೇಕ್ಷೆಗೆ ಒಳಗಾಗಿದೆಯೆಂದು ಕೆಲವು ತಜ್ಞರ ಅಭಿಪ್ರಾಯ. ‘ಆಂಗ್ಲ ಕವಿತಾವಳಿ’ ಪ್ರಕಟವಾಗಿ ನೂರು ವರ್ಷಗಳಾಗಿದೆ. ಆದರೂ ನವೋದಯ ಸಾಹಿತಿಗಳು ಹಟ್ಟಿಯಂಗಡಿಯವರ ಹೆಸರನ್ನು ಎಲ್ಲೂ ಹೆಸರಿಸದಿರುವುದಕ್ಕೆ ಕೆಲವು ಪ್ರಬಲ ಕಾರಣಗಳಿರಬಹುದು. ಬಿ. ಎಂ. ಶ್ರೀ. ಯವರಿಗಿಂತ ೨ ವರ್ಷ ಹಿರಿಯರಾದ ಹಟ್ಟಿಯಂಗಡಿಯವರು ತಮ್ಮ ಇಂಗ್ಲಿಷ್ ಕವಿತೆಗಳ ಅನುವಾದ ಮಾಧ್ಯಮದ ಮೂಲಕ ಕನ್ನಡಕ್ಕೆ ‘ಹೊಸಕಸಿ’ಯನ್ನು ತಂದರು.

ಡಾ. ಹಟ್ಟಿಯಂಗಡಿ ನಾರಾಯಣರಾಯರ ಪರಿಚಯ :

ಕಾರ್ಕಳದಲ್ಲಿ ಜನಿಸಿದ ನಾರಾಯಣ ರಾಯರ ವಿದ್ಯಾಭ್ಯಾಸಗಳು ಮಂಗಳೂರು, ಕಾರ್ಕಳ ಮದ್ರಾಸ್ ನಲ್ಲಿ ಅವರ ಜರುಗಿದವು. ಮಂಗಳೂರಿನ ಸರ್ಕಾರೀ ಕಾಲೇಜ್ ನಲ್ಲಿ ಅಧ್ಯಾಪಕರು ಸಮಾಧಾನವಿಲ್ಲದೆ ಮದ್ರಾಸ್ ಗೆ ಹೋಗಿ ಲಾ ಪದವಿ ಗಳಿಸಿದರು ಸ್ವಲ್ಪದಿನ ವಕೀಲರಾಗಿ ಕೆಲಸ Indian spectator National magazine ಅನಾಮದೇಯನಾಗಿ ಲೇಖನ ಬರೆದುಕೊಡುತ್ತಿದ್ದರು ಪತ್ರಿಕೆ ಕಾರಣಾಂತರಗಳಿಂದ ಮುಂಬಯಿಗೆ ಸ್ಥಾನಾಂತರಗೊಂಡಾಗ, ತಾವೂ ಮುಂಬಯಿನಗರಕ್ಕೆ ಬಂದು ನೆಲೆಸಿದರು ನಾರಾಯಣರಾಯರ ವ್ಯಕ್ತಿತ್ವ ಸರಳತೆ ಸಾರ್ಥಕತೆ, ಸಹಾಯ ಪರತೆಯಿಂದ ಕೂಡಿತ್ತು. ತಮ್ಮ ೫೦ ನೆಯ ವಯಸ್ಸಿನಲ್ಲಿ ಕನ್ನಡದಲ್ಲಿ ಬರೆಯಲು ಆರಂಭಿಸಿದರು. ಮಂಗಳೂರಿನ ಕನ್ನಡ ಸಾಹಿತ್ಯ ಪತ್ರಿಕೆ ‘ಸ್ವದೇಶಾಭಿಮಾನಿ’, ಹಾಗೂ ಧಾರವಾಡದ ‘ವಾಗ್ಭೂಷಣ’ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದರು. ಆಂಗ್ಲ ಕವಿತಾವಳಿ, ೧೯೧೯ ರಲ್ಲಿ ಪ್ರಕಟಿತ ಭಾಷಾಶಾಸ್ತ್ರ ಮತ್ತು ತತ್ವಜ್ಞಾನ, ಕನ್ನಡ ಕಥಾನಕ ಕನ್ನಡ ಭಾಷೆ, ಅದರ ಸಂಪತ್ತು ಇವುಗಳ ಒಂದು ಮೌಲಿಕ ಅಧ್ಯಯನ.

ಅಂದಿನ ವಿದ್ವಾಂಸರು ಕನ್ನಡ ಶಬ್ದಗಳು, ದೇಶ್ಯ, ಸಂಸ್ಕೃತದ ತತ್ಸಮ-ತದ್ಭವಗಳಿಗೆ ಮಾತ್ರ ಮೀಸಲೆಂದು ಭಾವಿಸಿದ್ದರು ಪ್ರಾಕೃತದಿಂದ, ಮರಾಠಿಯಿಂದ ಹೊಸ ಪದಗಳನ್ನು ಸ್ವೀಕರಿಸಿ, ವಿಸ್ತರಿಸಿದರು. ‘ಮುಂಬಯಿನ ಏಷ್ಯಾಟಿಕ್ ಸೊಸೈಟಿ’ಯಲ್ಲಿ ನೀಡಿದ ಭಾಷಣ ಬಹಳ ಪ್ರಸಿದ್ಧಿಯನ್ನು ಪಡೆಯಿತು. ಕೊಂಕಣಿ ಅವರ ಮಾತೃಭಾಷೆ. ಬ್ರಹ್ಮಸಮಾಜದಲ್ಲಿ ಸಕ್ರಿಯರಾಗಿದ್ದರು. ಗಾಯತ್ರೀಮಂತ್ರ ಮತ್ತು ಭಜನೆಗಳನ್ನು ಕನ್ನಡಕ್ಕೆ ಅನುವಾದಿಸಿದರು. ಅವು ಸತ್ವಯುತವೂ ಮತ್ತು ಐತಿಹಾಸಿಕ ಮಹತ್ವದ ಕೊಡುಗೆಗಳೆಂದು ಪಂಡಿತರ ಅಂಬೋಣ.

ಡಾ. ಅನಂತನಾರಾಯಣರವರು ಹೇಳುವಂತೆ, ಆಗ ಇಂಗ್ಲೀಷ್ ಕವಿತೆಗಳನ್ನು ಕನ್ನಡಕೆ ಭಾಷಾಂತರಿಸುವ ಕೆಲಸ ವ್ಯಾಪಕವಾಗಿ ಯಾವ ತೊಂದರೆಯಿಲ್ಲದೆ ನಡೆಯುತ್ತಿತ್ತು. ಕಾವ್ಯ ಪ್ರಕಟನೆಯಲ್ಲೂ ಯಾವ ಬಾಧೆ ಇರಲಿಲ್ಲ. ಮದ್ರಾಸಿನ ಎಂ. ಡಿ. ಅಳಸಿಂಗಾಚಾರ್ಯ ಎಂಬ ಕನ್ನಡ ವಿದ್ವಾಂಸರು, ತಮ್ಮ ಬರಹಗಳನ್ನು ಪ್ರಕಟಿಸಲು ಶ್ರೀ ಕೃಷ್ಣ ಸೂಕ್ತಿ ಎಂಬಉಡುಪಿಯ ಪತ್ರಿಕೆಗೆ ಕಳಿಸುತ್ತಿದ್ದರು. ಮುಂಬಯಿನಲ್ಲಿ ಬಂದು ನೆಲಸಿದ ಹಟ್ಟಿಯಂಗಡಿ ನಾರಾಯಣರಾಯರು, ಧಾರವಾಡದ ‘ವಾಗ್ಭೂಷಣ’, ಎಂಬ ಪತ್ರಿಕೆಗೆ ಮತ್ತು ಬೆಂಗಳೂರಿನ ‘ಸಾಹಿತ್ಯ ಪರಿಷತ್ ಪತ್ರಿಕೆ,ಗೆ ಕಳುಹಿಸುತ್ತಿದ್ದರು. ಆ ಸಮಯದಲ್ಲಿ ಎಸ್. ಜಿ .ನರಸಿಂಹಚಾರ್ಯ, ಜಯರಾಯಾಚಾರ್ಯ, ಸೋಸಲೆ ಅಯ್ಯಶಾಸ್ತ್ರಿ, ಎಸ್. ಜಿ. ಗೋವಿಂದಾಚಾರ್ಯ, ಎಂಬ ಕವಿಗಳು ಕವಿತೆಗಳನ್ನು ಬರೆಯುತ್ತಿದ್ದರು. ಹಟ್ಟಿಯಂಗಡಿ ನಾರಾಯಣರಾಯರ ಮತ್ತಿತರ ಕೃತಿಗಳು :
ಪ್ರಸಿದ್ಧ ಹಿಂದೂದೇಶದ ಸ್ತ್ರೀಯರು (೧೮೮೭)
ಆಂಗ್ಲ ಕವಿತಾವಳಿ (೧೯೧೯)
ಇಂಗ್ಲೀಷ್ ಕನ್ನಡ ನಿಘಂಟು (೧೯೧೯)
ಕನ್ನಡ ಕಥಾನಕ (೧೯೧೯)
ಕನ್ನಡ ಕವಿತೆಯ ಭಾವಿತವ್ಯ
ಬ್ರಾಹ್ಮ ಗೀತಾ
ನಲವತ್ಮೂರು ಹಾಡುಗಳು
ಕೊಂಕಣಿ ಶಬ್ದಾಂ ಸಂಸ್ಕೃತಚೆ ಮೂಲ ಸಾಂಗಚೆ (ಕೊಂಕಣಿ. ೧೯೧೮)
Etymological Glossary of Southern Konkani (English)
ಡಾ. ಕಡೆಂಗೋಡ್ಲು ಶಂಕರಭಟ್ಟ (೧೯೦೪-೧೯೬೮) ,
ಪಂಜೆ ಮಂಗೇಶರಾಯರು (೧೮೭೪-೧೯೩೭) ಗೋವಿಂದ ಪೈ (೧೮೮೩-೧೯೬೩)

ಡಾ. ಅನಂತ ನಾರಾಯಣರವರ ಮಾತಿನಂತೆ ಡಾ. ಹಟ್ಟಿಯಂಗಡಿಯವರು ಹಾಗೂ ಬಿ. ಎಂ. ಶ್ರೀ ಯವರೂ ಬೇರೆಬೇರೆ ಕಾಲಘಟ್ಟದಲ್ಲಿ ಹೆಚ್ಚು ಹೆಚ್ಚು ಸಕ್ರಿಯರಾಗಿ ಕೆಲಸಮಾಡಿ ಕನ್ನಡಕ್ಕೆ ಒಂದು ಹೊಸ ಮಾರ್ಗವನ್ನು ಕೊಟ್ಟು ಆಂಗ್ಲ ಕವಿತೆಗಳನ್ನು ಕನ್ನಡಕ್ಕೆ ಅನುವಾದಮಾಡಿದ ಕಾರ್ಯದಲ್ಲಿ ಒಂದು ಬೃಹತ್ ಸಾಧನೆಯನ್ನು ಮಾಡಿರುವುದನ್ನು ಗಮನಿಸದಬಹುದು. ಒಂದು ಮಟ್ಟದಲ್ಲಿ ಈ ಇಬ್ಬರು ಮಹನೀಯರ ಸಾಧನೆಗಳು ಹೆಚ್ಚುಕಡಿಮೆ ಪೂರಕವಾದದ್ದೆಂದು ಡಾ. ಶಂಕರಭಟ್ಟರ ಅಭಿಪ್ರಾಯ.

ಹಟ್ಟಿಯಂಗಡಿಯವರ ಪುಸ್ತಕ ಸಿಗುವುದು ದುರ್ಲಭವಾಗಿತ್ತು. ಅವರ ಪುಸ್ತಕವನ್ನು ಉಡುಪಿಯ ಪತ್ರಿಕೆಯೊಂದಕ್ಕೆ ವಿಮರ್ಶೆಗಾಗಿ ಕಳಿಸಿಕೊತ್ತಿದ್ದರು. ರಚಿಸಿದ ನೂರು ವರ್ಷಗಳ ನಂತರ, ಬೆಂಗಳೂರಿನ ಹಾಥಿ ಕೃಷ್ಣೇಗೌಡರು ಪಿ. ಎಚ್. ಡಿ. ಮಾಡಲು ಗ್ರಂಥ ಭಂಡಾರದಲ್ಲಿ ಹುಡುಕಾಡುತ್ತಿದ್ದಾಗ, ‘ ಆಂಗ್ಲ ಕವಿತಾವಳಿ’ ಯ ಒಂದು ಪ್ರತಿ ಸಿಕ್ಕಿತು. ಡಾ. ಅನಂತಕೃಷ್ಣ ಅಭಿಪ್ರಾಯಪಡುವಂತೆ ಹಟ್ಟಿಯಂಗಡಿಯವರ ಪ್ರಭಾವ ಮಂಗಳೂರಿನ ಕಡೆಯ ಲೇಖಕರಿಗೆ ಬಿ. ಎಂ. ಶ್ರೀ ಯವರ ಅನುವಾದ ಕಾರ್ಯಕ್ಕೆ ಪೂರಕವಾಗಿದೆ. ಇವರ ಪೂರ್ವದಲ್ಲಿ ಪಂಜೆ ಮಂಗೇಶರಾಯರು ೧೮೯೬ ರಲ್ಲಿ ಸರಳ ಕನ್ನಡದಲ್ಲಿ ‘ಮರಳಿ ತಮ್ಮನ ಕರೆಯಪ್ಪ’ ಎಂಬ ಕವನವನ್ನು ಪ್ರಕಟಿಸಿದರು. ‘ತೆಂಕಣಗಾಳಿಯಾಟ’ವೆಂಬ ಕವಿತೆಯನ್ನು ಬರೆದು ಪ್ರಸಿದ್ಧರಾದರು. ಆದರೆ ಪಂಜೆಯವರು ಇಂಗ್ಲೀಷ್ ಕವಿತೆಯೊಂದನ್ನು ಆಧರಿಸಿದ್ದರ ಬಗ್ಗೆ ಯಾರಿಗೂ ಹೇಳಲಿಲ್ಲ. ಇನ್ನೊಬ್ಬ ಕವಿ, ಎಸ್. ಜಿ. ನರಸಿಂಹಾಚಾರ್ ಎನ್ನುವವರು ಇದೇ ತರಹ ಇಂಗ್ಲೀಷ್ ಕವಿತೆಗಳನ್ನು ಆಧರಿಸಿ ಕನ್ನಡದಲ್ಲಿ ಬರೆದರೂ, ಅವರ ಕವಿತೆಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸಲಿಲ್ಲ.

‘Character of a happy life born or taught’ : ಎಂಬ ಸರ್ ಹೆನ್ರಿ ವಾಟ್ಟನ್ ಕವಿತೆಯ ಕನ್ನಡ ಅನುವಾದವನ್ನು ಡಾ. ಬಿ.ಎಂ. ಶ್ರೀಯವರು ಹಾಗೂ ಡಾ. ಹಟ್ಟಿಯಂಗಡಿ ನಾರಾಯಣರಾಯರೂ ಇಬ್ಬರೂ ಮಾಡಿದ್ದಾರೆ. ಅವುಗಳ ರೂಪ ಕೆಳಗೆ ಕಂಡಂತಿದೆ.
ಬಿ. ಎಂ. ಶ್ರೀಯವರ ಅನುವಾದ :
ಏನು ಸುಖಿಯೋ ತಾನು ಹುಟ್ಟಿನಲಿ ಕಲಿಕೆಯಲಿ
ಇನ್ನೊಬ್ಬನಿಗೆ ಯನು ದುಡಿಯದೆ
ಹಟ್ಟಿಯಂಗಡಿ ನಾರಾಯಣರಾಯರ ಅನುವಾದದ ಮಾದರಿ :
ಪರರ ತುಷ್ಟಿಗೆ ಮಣಿಯದವನ ಸುಖಕೆಣೆಯೆಲ್ಲಿ
ಸರಸಭಾವದ ಕವಚದಂತೆ ರಕ್ಷಣವಲ್ಲಿ
ನಿತ್ಯ ಸುಖಿಗೆ ಬಲು ಜಾಣತನ
ಇಂದ್ರಿಯಗಳ ಆಳುತನ
ಜಗದ ನಿರಭ್ರ ತಮಿಸ್ರ ಪಟಲವನು
ಅಗಣಿತ ದೀಪಗಳು ಉರಿಯುವ ಶಾಶ್ವತ
ವಿಸ್ಮೃತಿಯದು ಇಹ ಬಹ ಕಳೆ
ಶೇಕ್ಸ್ ಪಿಯರ್ ಹಟ್ಟಿಯಂಗಡಿಯವರ ಬಹಳ ಮೆಚ್ಚಿನ ಕವಿ. ಇವರ ಪದ್ಯಗಳಲ್ಲಿ ಹೊಸತನ ಎದ್ದು ಕಾಣುತ್ತದೆ. ವಿಶೇಷವೆಂದರೆ ತಾವು ಬರೆದ ೧೫ ಪದ್ಯಗಳ ಅನುವಾದದ ಶೈಲಿಯನ್ನು ಯಾವುದೇ ಮಾದರಿ ಅನುಸರಿಸಿ ಬರೆದ ಕಂದ, ಷಟ್ಪದಿ, ಮುಂತಾದವನ್ನು ಅವರು ‘ಶಿಥಿಲ ಚಂದಸ್ಸು’ ಎಂದು ಕರೆದರು. ನಾರಾಯಣರಾಯರ ಭಾಷೆ ಅತಿ ಸುಂದರವಾದದ್ದು. ಆದರೆ ಸಂಕ್ಷಿಪ್ತ, ಮತ್ತು ಸ್ವಲ್ಪ ರೂಪಾಂತರಗಳನ್ನೂ ಒಳಗೊಂಡ ಸಂಸ್ಕೃತ ಭೂಷಿತ ಭಾಷೆಯಾಗಿತ್ತು.

ಆಚಾರ್ಯ ಕಣ್ವರೆಂದೇ ಪ್ರಸಿದ್ಧರಾದ ಬಿ. ಎಂ. ಶ್ರೀ ಅವರ ಪರಿಚಯ :
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು ೦೩:೦೧:೧೮೮೪ ರಂದು. ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ‘ಸಂಪಿಗೆ’ ಎಂಬ ಹಳ್ಳಿಯಲ್ಲಿ ಇವರ ತಾತನ ಮನೆಯಲ್ಲಿ ಮೈಲಾರಯ್ಯ ಮತ್ತು ಭಾಗೀರಥಮ್ಮನವರ ಪುತ್ರರಾಗಿ ಜನಿಸಿದರು.
ಇವರ ಬಾಲ್ಯ ಶಿಕ್ಷಣ ಶ್ರೀರಂಗಪಟ್ಟಣದಲ್ಲಿ ನಡೆದಿದ್ದು 1907 ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ಪದವಿ ಪಡೆದು 1909 ರಲ್ಲಿ ಮದ್ರಾಸ್ ನಲ್ಲಿ ಎಂ ಎ ಪದವಿ ಪಡೆದುಕೊಂಡರು. ಮುಂದೆ 1910 ರಲ್ಲಿ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನೇಮಕಗೊಂಡು 1 9 2 3 ರಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸಿದರು.

ಮೊದಮೊದಲು ಬಿಎಂಶ್ರೀ ಅವರು ಕನ್ನಡದ ಬಗ್ಗೆ ಅಷ್ಟಾಗಿ ಒಲವು ತೋರುತ್ತಿರಲಿಲ್ಲ, ಕನ್ನಡದಲ್ಲಿ ಮಾತನಾಡಿ ಎಂದರೆ ಅವರಿಗೆ ಬಿಗುಮಾನ, ಅವಮಾನ ವಾಗುತ್ತಿದ್ದಂತೆ. ಕನ್ನಡ ಸಭೆಗಳಿಗೆ ಹೋಗುತ್ತಿರಲಿಲ್ಲ. ಆದರೆ ಬಹಳ ಕಾಲ ಈ ಬಿಗುಮಾನ ಉಳಿಯಲಿಲ್ಲ. ಕನ್ನಡದ ಕಂಪು ಇವರನ್ನು ಬಹುಬೇಗ ಆಕರ್ಷಿಸಿತು.

‘ಕನ್ನಡ ಮಾತು ತಲೆ ಎತ್ತುವ ಬಗೆ’ ಎಂಬ ವಿಷಯ ಕುರಿತು ತಮ್ಮ ಭಾಷಣದಲ್ಲಿ ಜನರಿಗೆ ತಿಳಿಯದ ಭಾಷೆಯಲ್ಲಿ ಬರೆಯುವುದರಲ್ಲಿ ಯಾವ ಬುದ್ಧಿವಂತಿಕೆಯು ಇಲ್ಲಾ. ಹೊಸಗನ್ನಡವನ್ನೇ ಎಲ್ಲರೂ ಹಿಡಿಯಬೇಕು ಎಂದು ಕರೆಕೊಟ್ಟರು ಅಲ್ಲಿಂದ ಮುಂದೆ ಕನ್ನಡವೇ ಅವರ ಸರ್ವಸ್ವವಾಗಿತ್ತು. ಬಿಎಂಶ್ರೀ ಅವರು ಬರೆದದ್ದು ಸ್ವಲ್ಪವಾದರೂ ನವೋದಯ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಕರುಣಾಳು ಬಾ ಬೆಳಕೆ, ಹಳೆಯ ಪಳಕೆಯ ಮುಖಗಳು, ಕನಕಾಂಗಿ, ದೇಶ ಸೇವಕ, ನನ್ನ ಪ್ರೇಮದ ಹುಡುಗಿ, ಹೀಗೆ ಬಿಎಂಶ್ರೀಯವರು ಅನೇಕ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದು, ಗದಾಯುದ್ಧ ನಾಟಕಂ, ಅಶ್ವತ್ಥಾಮ, ಪಾರಸಿಕರು ಇನ್ನು ಹಲವು ಒಳ್ಳೆಯ ಸಾಹಿತ್ಯ ಕೃತಿಗಳನ್ನು ಕನ್ನಡಿಗೆ ಕನ್ನಡಿಗರಿಗೆ ನೀಡಿದ್ದಾರೆ.
ಬಿ. ಎಂ. ಶ್ರೀ ರವರ ಕೃತಿಗಳು :
ಇಂಗ್ಲೀಷ್ ಗೀತಗಳು (೧೯೨೬)
ಹೊಂಗನಸುಗಳು (೧೯೪೩).
ನ್ನಡಿಗರಿಗೆ ಒಳ್ಳೆಯ ಸಾಹಿತ್ಯ.
ಕನ್ನಡ ಛಂದಸ್ಸಿನ ಚರಿತ್ರೆ.
ಕನ್ನಡ ಸಾಹಿತ್ಯ ಚರಿತ್ರೆ.
ಕನ್ನಡ ಮಾತು ತಲೆ ಎತ್ತುವ ಬಗ್ಗೆ.
ಇಸ್ಲಾಂ ಸಂಸ್ಕೃತಿ.
A Handbook of Rhetoric.

ಸಿರಿಗನ್ನಡಂ, ಸಿರಿಗನ್ನಡಂ ಬಾಳ್ಗೆ, ಕನ್ನಡ ತಾಯ್ ಗೆಲ್ಗೆ , ಕನ್ನಡ ತಾಯ್ ಬಾಳ್ಗೆ ಎಂದು ಬಿಎಂಶ್ರೀ ಅವರು ಉದ್ಗರಿಸಿದ್ದಾರೆ. ಇವರಿಗೆ ಕನ್ನಡದ ಬಾವುಟ ವೆಂದರೆ ಇನ್ನಿಲ್ಲದ ಅಭಿಮಾನ ಉತ್ಸಾಹ. ಕನ್ನಡದ ಹಿರಿಮೆ ಎಲ್ಲರನ್ನು ರೋಮಾಂಚನಗೊಳಿಸುತ್ತದೆ ಕೆಲವು ಸಾಲುಗಳು ಹೀಗಿವೆ.
ಏರಿಸಿ ಹಾರಿಸಿ ಕನ್ನಡದ ಭಾವುಟ
ಓಹೋ ಕನ್ನಡ ನಾಡು,
ಆಹಾ ಕನ್ನಡ ನುಡಿ,
ಹಾರಿಸಿ, ತೋರಿಸಿ ಕೆಚ್ಚೆದೆಯ ಬಾವುಟ.
ಗಾಳಿಯಲ್ಲಿ ಪಟಪಟ,
ದಾಳಿಯಲ್ಲಿ ಚಟಚಟ,
ಉರಿಯಿತೋ ಉರಿಯಿತೋ
ಹಗೆಯ ಹಠ ಮನೆ-ಮಠ
ಹಾಳ್ ಹಾಳ್ ಸುರಿಯಿತು
ಹಾಗೆಯೇ ಬೀಡ ಕಠ,
ಬಾಳ್ ಕನ್ನಡ ತಾಯ್, ಏಳ್ ಕನ್ನಡ ತಾಯ್,
ಆಳ್ ಕನ್ನಡ ತಾಯ್, ಕನ್ನಡಿಗರ ಒಡತಿ, ಓ ರಾಜೇಶ್ವರಿ. ಎಂಬ ಬಿಎಂಶ್ರೀ ಅವರ ಕವನ ನಮ್ಮೆಲ್ಲರಿಗೂ ರೋಮಾಂಚನಗೊಳಿಸುತ್ತದೆ.

ಬಿಎಂ ಶ್ರೀಗಳು ಪ್ರಸಿದ್ಧ ವಾಗ್ಮಿಗಳು ತರುಣ ಕನ್ನಡ ಲೇಖಕರಿಗೆ ಇವರ ಪ್ರೋತ್ಸಾಹ ನಿರಂತರವಾಗಿರುತ್ತದೆ ಬಿಎಂಶ್ರೀ ಅವರು ೧೯೨೬-೧೯೩೦ ರವರೆಗೆ ಮೂರು ವರ್ಷಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಗುಲ್ಬರ್ಗದಲ್ಲಿ ನಡೆದ ಹದಿನಾಲ್ಕನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿಕೊಂಡಿದ್ದು ಕನ್ನಡಿಗರ ಹೆಮ್ಮೆ ಎಂದು ತಮ್ಮ ಉಪನ್ಯಾಸದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ವಾಮದೇವಪ್ಪ ನವರು ಬಿಎಂಶ್ರೀ ಅವರನ್ನು ಕುರಿತಾಗಿ ಮಾತನಾಡುತ್ತಾ ಬಿಎಂಶ್ರೀ ಅವರು ಆಧುನಿಕ ಕಣ್ಣು ಆಧುನಿಕ ಸಾಹಿತ್ಯದ ಪ್ರವರ್ತಕ ಎಂದು ಬಣ್ಣಿಸುವುದು ರೊಂದಿಗೆ ಅವರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಗಳನ್ನು ಸ್ಮರಿಸಿಕೊಳ್ಳುತ್ತಾ ಎಂದು ಕನ್ನಡ ಸಾಹಿತ್ ಪರಿಷತ್ತಿಗೆ ಮಹಾನ್ ಕಾಯಕ ಕಾಯಕಲ್ಪ ತಂದುಕೊಟ್ಟ ಮಹಾನ್ ಚೇತನ ಎಂದು ಬಣ್ಣಿಸಿದರು.

ಇವರು ಕೊಟ್ಟ ಕೊಡುಗೆಗಳನ್ನು ಕೊಡುಗೆಗಳನ್ನು ನೆನೆಯುತ್ತ ಬಿಎಂಶ್ರೀಯವರು ತಮ್ಮ ಸ್ವಂತ ದುಡಿಮೆಯ 6,500 ರೂಪಾಯಿಗಳನ್ನು ವ್ಯಯಮಾಡಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಮುದ್ರಣ ಆರಂಭಿಸಿದ ಸವಿನೆನಪಿಗಾಗಿ ಆಧುನಿಕ ಗೊಂಡಿರುವ ‘ಬಿಎಂಶ್ರೀಯವರ ಅಚ್ಚುಕೂಟ’ವೆಂತಲೂ ನಾಮಕರಣಕ್ಕೆ ಕಾರಣೀಭೂತರಾಗಿದ್ದಾರೆ.
೧. ಆಚಾರ್ಯ ಬಿ.ಎಂ.ಶ್ರೀ ರವರು, ಎರಡು ಭಿನ್ನ ಭಾಷೆಗಳ ಸೃಜನಶೀಲ ಅನುಸಂಧಾನ ಮಾಡಿ ಸಮೀಕರಿಸಿದರು. ಶ್ರೀಯವರು ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದರು. ತಾವು ಬರೆದ ಕನ್ನಡ ಸಾಹಿತ್ಯವನ್ನು ಮೂರು ಭಾಗಗಳಾಗಿ ವಿಭಾಗಿಸಿದರು.
೧. ‘ರನ್ನನ ಸಾಹಸ ಭೀಮ ವಿಜಯ’ ನ್ನಾಧರಿಸಿ ‘ಗಧಾಯುದ್ಧ ನಾಟಕಂ’ ರಚಿಸಿದರು.
೨. ಪಾಶ್ಚಾತ್ಯ ಮೂಲದ ನಾಟಕಗಳನ್ನಾಧರಿಸಿ ‘ಅಶ್ವತ್ಥಾಮನ್ ಮತ್ತು ಪಾರಸೀಕರು ನಾಟಕಗಳನ್ನು ರಚಿಸಿದರು.
೩. ಪಾಶ್ಚಾತ್ಯಮೂಲದ ಹೆಸರಾಂತ ಇಂಗ್ಲಿಷ್ ಕವಿತೆಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದರು. ಕನ್ನಡದ ಸಾಂಸ್ಕೃತಿಕ ಸಂವೇದನೆಗಳ ಪ್ರತಿರೂಪದಂತಿದ್ದ ಅವರ ಕವಿತೆಗಳು, ಎಲ್ಲರಿಗೂ ಬಹಳ ಬೇಗ ಪ್ರಿಯವಾದವು. ಆಚಾರ್ಯ ಬಿ. ಎಂ. ಶ್ರೀಯವರು ರಚಿಸಿ ಪ್ರಕಟಿಸಿದ ”ಇಂಗ್ಲೀಷ್ ಗೀತಗಳು”, ಆಗಿನ ಕನ್ನಡ ಸಾಹಿತ್ಯ ದಿಕ್ಕನ್ನೇ ಬದಲಾಯಿಸಿದವು.
ಶೇಕ್ಸ್ ಪಿಯರ್ ನ Under the Greenwood tree. ಕನ್ನಡಕ್ಕೆ, ಅಡವಿ ಮರದಡಿಯಲ್ಲಿ ,
Wordsworth ‘Pet lamb’, ಕನ್ನಡಕ್ಕೆ ಮುದ್ದಿನ ಕುರಿಮರಿ,
Burns love poem, ನನ್ನ ಪ್ರೇಮದ ಹುಡುಗಿ,
Rule Britannia, ಕನ್ನಡಕ್ಕೆ
Burns Could love for ever, Oh my love; is like a Red Red Rose,
ಕನ್ನಡಕ್ಕೆ, ವಸಂತ ಕಾಲದೊಲುಮೆ
Wordsworth Written : In march-The Cattle are grazing. There are forty ; feeding like one.
ಕನ್ನಡಕ್ಕೆ, ಕೊರಳೆತ್ತಿ ಮೈಮರೆತು ಹರಡಿದೆಳ ಹಸುರಾದ ಗರುಕೆಯನು
ಮೇಯದೆಯೇ ಮುಂದೆಯಿಹುದು.
೪. ೧೯೨೮ ರಲ್ಲಿ ಕಲಬುರ್ಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
೫. ಕನ್ನಡಸಾಹಿತ್ಯ ಪರಿಷತ್ತಿಗೆ ಮುದ್ರಣಾಲಯವನ್ನು ಸ್ಥಾಪಿಸಿಕೊಟ್ಟರು.
೬. ಪರಿಷತ್ತಿನ ಗತಿವಿಧಾನಗಳನ್ನು ಪ್ರಚುರಪಡಿಸಲು ‘ಕನ್ನಡ ನುಡಿ ಮಾಸಪತ್ರಿಕೆ’ಯನ್ನು ಸ್ಥಾಪಿಸಿದರು.
೭. ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದ ಮೇಲೆಯೇ ಸಿರಿಗನ್ನಡಂ ಗೆಲ್ಗೆ ; ಬಾಳ್ಗೆ ಎಂಬ ಘೋಷವಾಕ್ಯಗಳನ್ನು ಬರೆಸಿದರು.

ಇಂಗ್ಲಿಷ್ ಭಾಷೆಯನ್ನು ಬೋಧಿಸುತ್ತಿದ್ದ ‘ಶ್ರೀ’ಯವರು ಕನ್ನಡದ ಭಾವಗೀತೆಗಳ ಪ್ರಪಂಚಕ್ಕೆ ನಾಟಿ ಮಾಡಿ ಹುಲುಸಾದ ಹೊಸ ಪೈರನ್ನು ಬೆಳೆದ ಧೀಮಂತ ವ್ಯಕ್ತಿ. ಕನ್ನಡದ ‘ಕಣ್ವ’ರೆಂದೇ ಪ್ರಸಿದ್ಧಿಗಳಿಸಿರುವ ‘ಶ್ರೀ’ಯವರು ಕನ್ನಡಿಗರ ಹೃದಯದಲ್ಲಿ ಚಿರ ಸ್ಥಾಯಿಯಾಗಿ ನೆಲೆಸಿರುತ್ತಾರೆ. ಕನ್ನಡದ ಜನತೆ ಅವರನ್ನು ಅತ್ಯಂತ ಪ್ರೀತಿ, ಭಕ್ತಿ ಗೌರವಗಳಿಂದ ಸನ್ಮಾನಿಸಿ ‘ಸಂಭಾವನೆ’ ಎನ್ನುವ ಗ್ರಂಥವನ್ನು ಅವರಿಗೆ ಸಮರ್ಪಿಸಿದರು. ಈ ಕಾರ್ಯಕ್ರಮ ೧೯೪೧ ರಲ್ಲಿ ಬಹಳ ಅದ್ಧೂರಿಯಿಂದ ಜರುಗಿತು.

1946 ರಲ್ಲಿ ಧಾರವಾಡದಲ್ಲಿದ್ದಾಗಲೇ ಡಾ. ಬಿ. ಎಂ. ಶ್ರೀಕಂಠಯ್ಯನವರು ನಿಧನರಾದರು. ಅವರ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿಯನ್ನು ಸಮರ್ಪಿಸಲು ಹಾಗೂ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಧಾವಿಸಿ ಬಂದ ಸಹಸ್ರಾರು ಜನರ ಪ್ರೀತ್ಯಾದರಗಳು ಜನಪ್ರಿಯತೆಗೆ ನಿದರ್ಶನವಾಗಿದೆ.

(೨೦೨೧ ಮೇ, 11, 12 ರಂದು ಮುಂಬಯಿ ವಿಶ್ವವಿದ್ಯಾಲಯದಕನ್ನಡ ವಿಭಾಗ, ಹಟ್ಟಿಯಂಗಡಿ ನಾರಾಯಣರಾಯರು ಹಾಗೂ ಡಾ. ಬಿ. ಎಂ. ಶ್ರೀಕಂಠಯ್ಯ ನವರ ಕನ್ನಡ ಕೃತಿಗಳ ಶತಮಾನೋತ್ಸವದ ಸ್ಮೃತಿ ಕಾರ್ಯಕ್ರಮವನ್ನು ‘ಆನ್ ಲೈನ್’ ನಲ್ಲಿ ಹಮ್ಮಿಕೊಂಡಿತ್ತು. ವಿಭಾಗದ ಮುಖ್ಯಸ್ಥ, ಡಾ. ಜಿ. ಏನ್. ಉಪಾಧ್ಯ, ಪ್ರಾಧ್ಯಾಪಕಿ, ಡಾ. ಪೂರ್ಣಿಮಾ ಶೆಟ್ಟಿ, ಡಾ. ಭಾಗವತ್, ಮತ್ತು ನಾಳಿನ ಪ್ರಸಾದ್, ಕಾರ್ಯಕ್ರಮ ನಡೆಸಿಕೊಟ್ಟರು. ಆಹ್ವಾನಿತ ಉಪನ್ಯಾಸಕಾರರು : ಡಾ. ಜನಾರ್ಧನ ಭಟ್)


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x