ಉತ್ತರ ಪುಸ್ತಕ ಪರಿಚಯ: ಪೂಜಾ ಮಂಗಳೂರು

ಮನಸ್ಸನ್ನು ಕಾಡಿಸುವ ಪ್ರಶ್ನೆಗಳು ಬದುಕಲ್ಲಿ ಬಂದಾಗ “ಉತ್ತರ” ದ ಮೂಲವನ್ನು ಹುಡುಕುವ ನಿರ್ಧಾರವನ್ನು ಮನಸ್ಸು ಮಾಡುತ್ತದೆ. ಆ “ಉತ್ತರ”ಕ್ಕಾಗಿಯೇ ಸುಪ್ರೀತ್ ಕೆ.ಎನ್. ಅವರು ಈ ಕೃತಿಯನ್ನು ಆಧ್ಯಾತ್ಮದ ಬೇರೆ ಬೇರೆ ಆಯಾಮದಲ್ಲಿ ರಚಿಸಿದ್ದಾರೆ.
ಕೆಲಸದ ಒತ್ತಡದ ಮಧ್ಯೆಯೂ ಈ ಪುಸ್ತಕವನ್ನು ಓದಿ ಕೆಳಗಿಟ್ಟಾಗ ಮನಸ್ಸು ಒಮ್ಮೆ ಅಧ್ಯಾತ್ಮದತ್ತ ವಾಲಿದ್ದೂ ನಿಜ.‌ ಇದರ ಮೊದಲು ಸುಪ್ರೀತ್ ಅವರ ಎಲ್ಲ ಬರವಣಿಗೆಯನ್ನು ಓದಿದ್ದೇನೆ. ಕಳೆದ ಬಾರಿ ಅವರು ಬರೆದ “ಸಾವು” ಕಾದಂಬರಿಯು ತುಂಬಾ ಕಾಡಿಸಿತ್ತು. ಈಗ “ಉತ್ತರ” ದ ಮೂಲಕ ಅವರು ಮತ್ತೊಮ್ಮೆ ತಮ್ಮ ಬರವಣಿಗೆಯಲ್ಲಿ ಗೆದ್ದಿದ್ದಾರೆ.

ಈ ಕಾದಂಬರಿಯ ಮೂಲ ವಸ್ತು “ನೋವು” ಮನುಷ್ಯ ಯಾಕೆ ಅತಿಯಾದ ನೋವು ಅನುಭವಿಸುತ್ತಾನೆ? ನೋವಿನ ಮೂಲವೇನು? ಇದರ ಅನ್ವೇಷಣೆಯ ಸುತ್ತಾ ಸಾಗುವ ಕತೆಯಲ್ಲಿ ಕೆಲವು ಅಧ್ಯಾತ್ಮ ಸಾಧನೆಗಳು ಹಾಗೂ ಕರ್ಮ ಸಿದ್ದಾಂತವು ಸೇರಿದೆ.

ಎಲ್ಲ ಬಿಟ್ಟು ಇನ್ನೇನನ್ನೋ ಹುಡುಕಿಕೊಂಡು ಹೋಗುವ ಸ್ಕಂದನ ಪಾತ್ರವೇ ಇಲ್ಲಿ ಪ್ರಮುಖವಾಗಿದೆ. ತೀವ್ರವಾದ ನೋವು ತೀರಿಸಲಾಗದ ಬಯಕೆ. ಮನಸ್ಸನ್ನು ಕಾಡುವ ಹಲವಾರು ಪ್ರಶ್ನೆಗಳ ಸುತ್ತ ಸುತ್ತುವ ಸ್ಕಂದನ ಮಾನಸಿಕ ತೊಳಲಾಟಕ್ಕೆ ಉತ್ತರವನ್ನು ಈ ಆಧ್ಯಾತ್ಮದ ದಾರಿ ಈಡೇರಿಸುತ್ತ? ನೋವಿನಿಂದ ಶುರುವಾದ ಸ್ಕಂದನ ಹಲವಾರು ಪ್ರಶ್ನೆಗಳಿಗೆ ಉತ್ತರಿಸುವ ಗುರುದೇವರ ಪಾತ್ರವೇನು..? ನೋವಿನ ಮೂಲ ಯಾವುದು ಇದು ಬದುಕನ್ನು ಯಾವ ರೀತಿಯಲ್ಲಿ ಬದಲಿಸುತ್ತದೆ?
ಇದನ್ನೆಲ್ಲ ತಿಳಿಯಲು “ಉತ್ತರ” ವನ್ನು ಓದಲೇ ಬೇಕು.

ಕರ್ಮಗಳು ಎಂದರೇನು.? ಅಂತ ಕೇಳುವ ಸ್ಕಂದನಿಗೆ ಕರ್ಮದ ಬಗ್ಗೆ ಮಾತಾಜಿಯವರು ವಿವರಿಸುವ ರೀತಿ ಇಷ್ಟವಾಗುತ್ತದೆ.ನಮ್ಮ ಹುಟ್ಟಿನಿಂದ ಶುರುವಾಗ ಕರ್ಮಗಳಿಗೆ ಆದರದ್ದೆ ಆದ ಗುಣಲಕ್ಷಣಗಳು ಇರುತ್ತದೆ.
ನಮ್ಮ ಪ್ರತಿ ಯೋಚನೆಗೂ ಕರ್ಮಗಳು ಸೃಷ್ಟಿಯಾಗುತ್ತದೆ. ಅನ್ನುವ ಮಾತಾಜಿಯ ಮಾತುಗಳನ್ನು ಕೇಳುವಾಗ ನಮ್ಮ ಕರ್ಮಗಳ ಲೆಕ್ಕವನ್ನು ನಾವು ಮಾಡುತ್ತೇವೆ.

ಮನುಷ್ಯ ಸ್ವಭಾವತಃ ಕರ್ಮಜೀವಿ. ಅದೆಷ್ಟೋ ಸಲ ನಮ್ಮ ಕ್ರಿಯೆಗಳು ಹಲವು ರೀತಿಯಲ್ಲಿ ವ್ಯಕ್ತವಾಗುತ್ತ ಇರುತ್ತದೆ. ಹುಟ್ಟಿನಿಂದ ಸಾಯುವವರೆಗೂ ಅನಿವಾರ್ಯವಾಗಿ ನಾವು ಒಂದಲ್ಲ ಒಂದು ಕರ್ಮಗಳನ್ನು ಮಾಡುತ್ತಿರುತ್ತೇವೆ. ಆದರೂ ಅದೆಷ್ಟೋ ನೋವುಗಳು ನಮ್ಮನ್ನು ಭಾಧಿಸುತ್ತಲೇ ಇರುತ್ತದೆ. ನಾವು ಅಂದುಕೊಂಡಷ್ಟು ಸುಲಭವಾಗಿ ಬದುಕಿನ ಕರ್ಮಪಾಶದಿಂದ ಮುಕ್ತರಾಗಲು ಸಾಧ್ಯವಿಲ್ಲ. ಪಾಪ ಕರ್ಮಗಳಿಗೂ ಪೂರ್ವ ಜನ್ಮದ ನಂಟು ಅಂಟಿಕೊಂಡಿರುತ್ತದೆ ಅನ್ನುವ ಕಲ್ಪನೆಯೂ ಇಲ್ಲಿದೆ. ಮನಸ್ಸಿನಲ್ಲಿ ಮೂಡುವ ಹಲವಾರು ಗೊಂದಲಗಳಿಗೆ ಉತ್ತರವನ್ನು ಮನಸ್ಸು ಬಯಸುತ್ತದೆ.

ಇಲ್ಲಿ ಅದೆಷ್ಟೋ ಸಂತರೂ ತತ್ವಜ್ಞಾನಿಗಳು ತೋರಿಸಿಕೊಟ್ಟ ಧರ್ಮದರ್ಶನದ ಹಾದಿಯಲ್ಲಿ ಭಗವಂತನನ್ನು ನೆನೆಯುತ್ತ ಸತ್ಕರ್ಮಗಳನ್ನು ಮಾಡುತ್ತ ನಮ್ಮಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದು‌ ಎನ್ನುವುದೇ ನಮಗೆ ದೊರೆಯುವ “ಉತ್ತರ”.

ಇಲ್ಲಿ ಬದುಕುವ ನಮಗೆ ಬೇರೆಬೇರೆ ಹಂತಗಳಲ್ಲಿ ಹೋರಾಡುವಾಗ ಹಲವಾರು ಪ್ರಶ್ನೆಗಳು ಮನಸ್ಸನ್ನು ಕೊರೆಯುತ್ತದೆ ಪ್ರಶ್ನೆ ಉದ್ಬವಿಸಿದೆ ಅಂದಾಗ “ಉತ್ತರ” ದ ಅನ್ವೇಷಣೆ ಕೂಡ ಶುರುವಾಗುತ್ತದೆ. ಆಗ ಅಧ್ಯಾತ್ಮದ ಕಡೆ ಮನಸ್ಸು ವಾಲುತ್ತದೆ. ಈ ಅಧ್ಯಾತ್ಮ ಅನ್ನೋದು ವಿಶಾಲವಾದ ಕಡಲಿನಂತೆ.‌ ಅದೆಷ್ಟು ತಿಳಿದರೂ ಅದರ ಆಳ ಅಗಲ ಇನ್ನಷ್ಟು ವಿಸ್ತಾರವಾಗುತ್ತ ಹೋಗುತ್ತದೆ. ಅಂದರೆ ನಮ್ಮಲ್ಲಿ ಮೂಡುವ ಪ್ರತಿ ಪ್ರಶ್ನೆಗೂ ಆಧ್ಯಾತ್ಮದ ಹಾದಿಯಲ್ಲಿ ಉತ್ತರ ಸಿಗುತ್ತದೆ ಅನ್ನುವ ನಂಬಿಕೆ ಬಲವಾಗುತ್ತದೆ.
ಕೆಲವೊಮ್ಮೆ ನಮ್ಮ ಯೋಚನೆಗೂ ನಿಲುಕದ್ದು ಘಟಿಸಿ ಬಿಡುತ್ತದೆ. ನಂಬಿಕೆ ಭಕ್ತಿ ಇರುವಲ್ಲಿ ಕಣ್ಣಿಗೆ ಕಾಣದ ಶಕ್ತಿಯೊಂದು ನಮ್ಮನ್ನು ಕೈ ಹಿಡಿದು ಕಾಪಾಡುತ್ತದೆ. ಅದು ಈ ಸೃಷ್ಟಿಯ ಪವಾಡ.

ಕತೆಯಲ್ಲಿ ಬರುವ ಮಾತಾಜಿಯ ಪಾತ್ರ ಕೂಡ ಅತಿಯಾಗಿ ಕಾಡಿಸುತ್ತದೆ. ಬದುಕಿನಲ್ಲಿ ನಾವು ಇಷ್ಟ ಪಟ್ಟದೆ ಸಿಗುತ್ತೆ ಸಿಗಬೇಕು ಅಂತ ಬಯಸುವುದು ಮನುಷ್ಯನ ಸ್ವಾರ್ಥ ಗುಣ. ಇದನ್ನು ಅದೆಷ್ಟು ಚೆನ್ನಾಗಿ ಮಾತಾಜಿ ತಿಳಿಸಿಕೊಡುತ್ತಾರೆ. ಇಂತಹವರು ನಮ್ಮ ಬದುಕಿನಲ್ಲಿಯೂ ಇರಬೇಕು ಅನಿಸಿ ಬಿಡುತ್ತದೆ.
ಜೀವನದಲ್ಲಿ ಒಂದು ಧ್ಯೇಯವಿಲ್ಲದಿದ್ದರೆ ಮಹತ್ತರವಾದದ್ದನ್ನು ಸಾಧಿಸಲು ಸಾಧ್ಯವಿಲ್ಲ. ಈ ಜೀವನದಲ್ಲಿ ಏನೂ ಮಾಡಿದರೆ ಸಾರ್ಥಕವಾಗುತ್ತದೆ ಎಂಬುದರ ಅರಿವು ಇದ್ದಾಗ ಪ್ರತಿಪ್ರಶ್ನೆಗಳಿಗೂ “ಉತ್ತರ”ವೂ ಸಿಗುತ್ತದೆ.

ಇನ್ನು ಕತೆಯಲ್ಲಿ ಬರುವ ಕಥಾನಾಯಕಿ ಸಹನಾಳ ಬದುಕು ಕೂಡ ವಿಚಿತ್ರ ತಿರುವಿನಲ್ಲಿ ಸಾಗುತ್ತದೆ. ತಾನು ಎರೆಡೆರಡು ಬಾರಿ ಜೀವ ಭಿಕ್ಷೆ ಪಡೆದು ಬದುಕಿದ್ದು ಯಾಕೆ.? ಇದರ ಉದ್ದೇಶವೇನು ಎಂಬ ಪ್ರಶ್ನೆಗೂ “ಉತ್ತರ ” ಇಲ್ಲಿ ಸಿಗುತ್ತದೆ. ಕಷ್ಟ ನೋವುಗಳು ಶಾಶ್ವತವಲ್ಲ. ಎಲ್ಲದಕ್ಕೂ ಒಂದು ಪರಿಹಾರ ಇದ್ದೆ ಇರುತ್ತದೆ. ಅದನ್ನು ಕಂಡುಕೊಳ್ಳುವ ರೀತಿ ನಮ್ಮಲ್ಲಿಯೇ ಇರಬೇಕು. ಇಲ್ಲದಿದ್ದರೆ ಬದುಕು ಇನ್ನೆಲ್ಲಿಯೋ ಕಳೆದು ಹೋಗುತ್ತದೆ. ಇದನ್ನೆಲ್ಲ ಲೇಖಕರು ಮನಸ್ಸು ಮುಟ್ಟುವ ಹಾಗೆ ವಿವರಿಸಿದ್ದಾರೆ.

ಲೇಖಕರು ತಮ್ಮ ಬರವಣಿಗೆಯಲ್ಲಿ ಆಧ್ಯಾತ್ಮದ ಬಗ್ಗೆ ತುಂಬಾ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ವಿವರಣೆಗಳು ಪುನಾರವರ್ತನೆಯಾಗೋದು ಬೇಡವಾಗಿತ್ತು ಅನಿಸಿದರೂ ಕತೆ ತನ್ನ ಗಟ್ಟಿತನವನ್ನು ಉಳಿಸುವಲ್ಲಿ ಸಫಲವಾಗಿದೆ.
ಇನ್ನು ಶ್ರದ್ಧೆಯಿಂದ ಓದಿದರೆ ಅಧ್ಯಾತ್ಮದ ಬಗ್ಗೆ ಒಲವಿಲ್ಲದವರಿಗೂ ಮನಸ್ಸು ಅದರತ್ತ ವಾಲುವುದರಲ್ಲಿ ಸಂಶಯವಿಲ್ಲ. ಅಷ್ಟರ ಮಟ್ಟಿಗೆ ಇದು ಕಾಡುತ್ತದೆ.

ಇನ್ನು ಕತೆಯಲ್ಲಿ ಅತಿಯಾಗಿ ಕಾಡುವುದು ಉತ್ತರ ಭಾರತದ ಪ್ರಸಿದ್ಧ ಕ್ಷೇತ್ರಗಳು. ಅದನ್ನೆಲ್ಲ ಓದುವಾಗ ನಿಜಾವಾಗಿಯೂ ನಾವು ಉತ್ತರಭಾರತದ ಪ್ರವಾಸವನ್ನು ಮಾಡಿ ಬಂದಂತಹ ಅನುಭವವನ್ನು ಕೊಡುತ್ತದೆ. ಸುಪ್ರೀತ್ ಅವರು ಯಾವಾಗಲೂ ಒಂದು ಪ್ರಮುಖವಾದ ವಿಷಯವನ್ನು ಹಾಯ್ದು ಕೊಂಡಾಗ ಅದರ ಬಗ್ಗೆ ತುಂಬಾ ಆಳವಾಗಿ ಮನಸ್ಸು ಮುಟ್ಟುವ ರೀತಿ ವಿವರಿಸುತ್ತಾರೆ. ಇದು ಅವರ ಬರವಣಿಗೆಯ ವೈಶಿಷ್ಟ್ಯ.. ಇದನ್ನು ಅವರ ಪ್ರತಿ ಪುಸ್ತಕ ಓದುವಾಗಲೂ ಅನಿಸಿದೆ.

ಈ ಪುಸ್ತಕವನ್ನು ಓದಿ ಮುಗಿಸುವಾಗ ಒಂದು ಸತ್ಯ ನಮ್ಮರಿವಿಗೆ ಬರುತ್ತದೆ. ನಂಬಿಕೆ ಶ್ರದ್ಧೆ ಬಲವಾಗಬೇಕು ಅಂದರೆ ಪ್ರತಿಯೊಬ್ಬರ ಬಾಳಲ್ಲೂ ಒಬ್ಬ ಗುರುದೇವನೂ ಇರಬೇಕು. ಆಗಲೇ ಬದುಕಿನ ಹಲವಾರು ಪ್ರಶ್ನೆಗಳಿಗೆ “ಉತ್ತರ” ವೂ ಸಿಗುತ್ತದೆ. ಅನ್ನುವ ಭಾವವನ್ನು ಈ ಪುಸ್ತಕವು ಮೂಡಿಸುತ್ತದೆ. ಅಷ್ಟರಮಟ್ಟಿಗೆ ಕತೆಯೂ ಗೆಲ್ಲುತ್ತದೆ.
ಈ ಕಾರಣಕ್ಕಾದರೂ ಈ ಕಾದಂಬರಿಯನ್ನು ಪ್ರತಿಯೊಬ್ಬರು ಓದಲೇಬೇಕು.

ಪೂಜಾ ಮಂಗಳೂರು..

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x