ಹಿಜಾಬ್ ಮತ್ತು ವಿದ್ಯಾಭ್ಯಾಸ: ರಾಘವೇಂದ್ರ ಅಡಿಗ ಎಚ್ಚೆನ್

ಕಳೆದ ಕೆಲ ದಿನಗಳಿಂದ ದೇಶದಾದ್ಯಂತ ಹಿಜಾಬ್ ಕುರಿತ ವಿವಾದ ಹೊಗೆಯಾಡುತ್ತಿದೆ. ಉಡುಪಿಯ ಕಾಲೇಜಿನಲ್ಲಿ ಪ್ರಾರಂಭವಾದ ಚಿಕ್ಕ ಘಟನೆಯೊಂದು ದೇಶದ ಗಡಿಗಳನ್ನು ಮೀರಿ ವಿವಾದವಾಗಿ ಮಾರ್ಪಟ್ಟಿದೆ ಎಂದರೆ ಈ ಆಧುನಿಕ ಕಾಲದಲ್ಲಿಯೂ ಮಾನವನು ಧರ್ಮದ ಸಂಬಂಧವಾಗಿ ಹೇಗೆ ಭಾವಿಸಿಕೊಂಡಿದ್ದಾನೆ ಎನ್ನುವುದಕ್ಕೆ ಸಾಕ್ಷಿ. ರಾಜ್ಯದ ನಾನಾ ಶಾಲೆ, ಕಾಲೇಜುಗಳಲ್ಲಿನ ಕೆಲ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಹಾಕಿಕೊಳ್ಳಲು ಅವಕಾಶ ಸಿಗದಿದ್ದರೆ ಶಿಕ್ಷಣವನ್ನೇ ಮೊಟಕು ಮಾಡುತ್ತೇವೆ ಎನ್ನುವವರೆಗೆ ಮುಂದುವರಿದಿದ್ದಾರೆ. ಇದು ನಿಜಕ್ಕೂ ಆಘಾತಕರ. ”ನಮಗೆ ನಮ್ಮ ಇಸ್ಲಾಂ ಧರ್ಮ, ಹಿಜಾಬ್ ಮುಖ್ಯ, ಶಾಲೆಯ ಶಿಕ್ಷಣವಲ್ಲ, ಮನೆಯಲ್ಲಿ ನಮ್ಮ ಅಪ್ಪ-ಅಮ್ಮ ಏನು ಹೇಳುತ್ತಾರೆ ಅವರ ಮಾತುಗಳನ್ನು ಕೇಳುತ್ತೇವೆ” ಎನ್ನುವ ಇವರು ಕರ್ನಾಟಕ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶಕ್ಕೂ ಕ್ಯಾರೇ ಎನ್ನುತ್ತಿಲ್ಲ. ಇನ್ನೊಂದೆಡೆ ಹಿಜಾಬ್ ವಿವಾದದ ವಸ್ತುವೇ ಅಲ್ಲ, ಇದು ಮುಸ್ಲಿಂ ಯುವತಿಯರನ್ನು, ಮಹಿಳೆಯರನ್ನು ಶಿಕ್ಷಣದಿಂಡ ದೂರ ಸರಿಸುವ ಸಂಚಾಗಿದೆ ಎಂದು ಕೇರಳ ರಾಜ್ಯಪಾಲರಾದ ಆರಿಫ್ ಮೊಹಮದ್ ಖಾನ್ ಹೇಳುತ್ತಾರೆ.

ಮೂಲ ಇಸ್ಲಾಂ ಧರ್ಮದಲ್ಲಿ ಐದು ವಿಷಯಗಳನ್ನು ಕಡ್ಡಾಯ ಮಾಡಲಾಗಿದೆ. ಅವುಗಳೆಂದರೆ ಕಲಿಮಾ, ಪ್ರಾರ್ಥನೆ, ರಂಜಾನ್ ಉಪವಾಸ, ದಾನ ಮತ್ತು ಹಜ್. ಈ ಪಟ್ಟಿಯಲ್ಲಿ ಹಿಜಾಬ್ ಇಲ್ಲ. ಹಾಗಾಗಿ ಇದು ಇಸ್ಲಾಂ ಧರ್ಮದ ಮೂಲ ಅಗತ್ಯವಾಗಿಲ್ಲ ಎಂದು ಕೇರಳ ರಾಜ್ಯಪಾಲರು ತಮ್ಮ ಮಾತುಗಳಲ್ಲಿ ಹೇಳಿರುವುದು ಇಲ್ಲಿ ಉಲ್ಲೇಖಾರ್ಹ.

ಹಿಜಾಬ್ ಪರವಾಗಿ ವಾದಿಸುವ ವಿದ್ಯಾರ್ಥಿನಿಯರು ಮಾತ್ರ ತಾವು ನೂರಾರು ವರ್ಷಗಳಿಂದ ಇದನ್ನು ಧರಿಸುತ್ತಾ ಬಂದಿದ್ದೇವೆ. ಇದೇನೂ ನಿನ್ನೆ ಮೊನ್ನೆ ಬಂದ ಆಚರಣೆಯಲ್ಲ. ಇಷ್ತೂ ದಿನ ನಾವು ಶಾಲೆಗೆ ಹಿಜಾಬ್ ಧರಿಸಿಯೇ ಬರುತ್ತಿದ್ದೆವು, ಈಗ ಮಾತ್ರವೇ ವಿರೋಧ ವ್ಯಕ್ತವಾಗುತ್ತಿರುವುದೇಕೆ? ಎನ್ನುತ್ತಾರೆ. ಅಲ್ಲದೆ ಹಿಂದೂ ಯುವತಿಯರು ಬಳೆ, ಕುಂಕುಮಗಳನ್ನು, ಯುವಕರು ರುದ್ರಾಕ್ಷಿಯಂತಹಾ ವಸ್ತುಗಳನ್ನು, ಕ್ರಿಶ್ಚಿಯನ್ನರು ಶಿಲುಬೆಗಳನ್ನು ಧರಿಸಿ ಶಾಲೆಗೆ ಬರಬಹುದಾದರೆ ನಾವೇಕೆ ಹಿಜಾಬ್ ಧರಿಸಕೂಡದು? ಹೀಗೆ ಅವರ ವಾದ ಸರಣಿ ಸಾಗುತ್ತದೆ.

ಹಾಗಾದರೆ ಸಮವಸ್ತ್ರ ಎನ್ನುವುದಕ್ಕೆ ಯಾವ ಮಾನ್ಯತೆ, ಮೌಲ್ಯವೂ ಇಲ್ಲವೆ? ಖಂಡಿತವಾಗಿಯೂ ಇದೆ. ಮಕ್ಕಳಲ್ಲಿ ತಾವು ಇಂತಹಾ ಜಾತಿ, ಧರ್ಮದವರು, ಶ್ರೀಮಂತರು, ಬಡವರು, ಮೇಲು ಕೀಳು ಎಂಬ ನಾನಾ ಬೇಧ ಭಾವಗಳು ಮೂಡದಿರಲಿ ಎಂಬ ಕಾರಣಕ್ಕಾಗಿಯೇ ಒಂದೇ ಬಗೆಯ ಬಣ್ಣ, ವಿನ್ಯಾಸವುಳ್ಳ ಸಮವಸ್ತ್ರ ಹಾಕಿಕೊಳ್ಳುವ ಪದ್ದತಿಯನ್ನು ಜಾರಿಗೆ ತರಲಾಗಿದೆ. ಎಂದರೆ ಒಂದು ಶಾಲೆಯಲ್ಲಿ ಕಲಿಯುವ ಮಕ್ಕಳು ಅವರೆಂತಹಾ ಧಾರ್ಮಿಕ ಹಿನ್ನೆಲೆಯವರಾಗಿದ್ದರೂ, ಆರ್ಥಿಕ ಹಿನ್ನೆಲೆ ಏನೇ ಇದ್ದರೂ ಜಾತಿ ಹೇಗಾಗಿದ್ದರೂ ಅವರೆಲ್ಲಾ ಒಂದೇ ಎಂದು ಮನೋಭಾವ ಬೆಳೆಯುವಂತಿರಬೇಕು. ಆ ಮೂಲಕ ಮಕ್ಕಳಲ್ಲಿ ಪರಸ್ಪರ ಸಮಾನತೆ ಅರಿವು ಮೂಡಬೇಕೆಂಬ ಉದಾತ್ತ ನಿಲುವು ಈ ಸಮವಸ್ತ್ರ ನೀತಿಯ ಹಿಂದಿದೆ. ಆದರೆ ಇದೀಗ ಹುಟ್ಟಿಕೊಂಡಿರುವ ಹಿಜಾಬ್ ವಿವಾದ ಮಕ್ಕಳಲ್ಲಿ ಧರ್ಮ ಬೇಧವನ್ನು ಉಂಟು ಮಾಡಿ ಪರಸ್ಪರ ಸ್ನೇಹದಿಂದಿರಬೇಕಾದವರು ಪರಸ್ಪರ ವೈರತ್ವ ಬೆಳೆಸಿಕೊಳ್ಲಲು ದಾರಿ ಮಾಡಿಕೊಡುತ್ತಿದೆ. ಮುಂದೊಂದು ದಿನ ಇದೇ ಸಮಸ್ಯೆ ಬೃಹತ್ ಗಾತ್ರದಲ್ಲಿ ಬೆಳೆದು ವಿದ್ಯಾರ್ಥಿ ಸಮುದಾಯದ ಒಳಗೆ ಬಹುದೊಡ್ಡ ಸಾಮಾಜಿಕ ಕಂದಕವನ್ನು ನಿರ್ಮಾಣ ಮಾಡುವ ಸಾಧ್ಯತೆಯಿದೆ.

ಇದಲ್ಲದೆ ಕಳೆದ ಎರಡು ವರ್ಷಗಳಿಂಡ ಕೊರೋನಾ ಮಹಾಮಾರಿಯ ಕಾರಣ ಸರಿಯಾಗಿ ತರಗತಿಯು ನಡೆಯದೆ ಶಿಕ್ಷಣ ವಯವಸ್ಥೆ ತಳ ಹಿಡಿದಿದ್ದು ಶಾಲಾ ಕಾಲೇಜುಗಳು ಕೆಲವೇ ತಿಂಗಳ ಹಿಂದೆ ಸಹಜ ಸ್ಥಿತಿಯನ್ನು ತಲುಪಿದೆ. ಅಈ ಸಮಯದಲ್ಲಿ ,ಕೋವಿಡ್‌ನಿಂದ ಅನಿಯಮಿತವಾದ ಪಠ್ಯ ಚಟುವಟಿಕೆಗಳಿಗೆ ತಲೆ ಕೊಡಬೇಕಾಗಿದ್ದ ಶಿಕ್ಷಣ ಸಂಸ್ಥೆಗಳು ಹಿಜಾಬ್ ನಿಂದಾಗಿ ಸಮವಸ್ತ್ರ ವಿವಾದಕ್ಕೆ ಸಿಲುಕಿರುವುದು ವಿಷಾದನೀಯ.

ಇದೆಲ್ಲಕ್ಕಿಂತ ಮಿಗಿಲಾಗಿ ನಾವಿಲ್ಲಿ ಇನ್ನೊಂದು ಮಹತ್ವದ ಅಂಶವನ್ನು ಗಮನಿಸಬೇಕು. ಅದೆಂದರೆ ಇಂದು ಹಿಜಾಬ್, ಕೇಸರಿ ಶಾಲು ವಿವಾದದಿಂದ ಶಿಕ್ಷಣದಿಂದ ವಂಚಿತರಾದವರಿಗೆ ಮುಂದಿನ ದಿನಗಳಲ್ಲಿ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಇದೇ ದೊಡ್ಡ ಸವಾಲಾಗಲಿದೆ. ಕಾಲೇಜು ವಿದ್ಯಾಭ್ಯಾಸ ಮುಗಿಸಿ ಹೊರಬಂದು ಉದ್ಯೋಗ ಹುಡುಕಾಟ ನಡೆಸುವ ವೇಳೆಯಲ್ಲಿ ಯಾವ ಉದ್ಯೋಗದಾತ ಸಂಸ್ಥೆ ಅಥವಾ ವ್ಯಕ್ತಿಯೂ ಅಂಕಪಟ್ಟಿ ಹಾಗೂ ಶ್ರೇಯಾಂಕ (ಪರ್ಸಂಟೇಜ್) ನೋಡಿ ಆತ/ಆಕೆಗೆ ಉದ್ಯೋಗ ನೀಡುವನೇ ವಿನಃಅ ಆತ/ಆಕೆ ಹಿಜಾಬ್ ಅಥವಾ ಕೇಆರಿ ಶಾಲು ಹಾಕಿರುವುದನ್ನು ನೋಡಿ ಯಾರೂ ಕೆಲಸ ನೀಡುವುದಿಲ್ಲ. ಪ್ರತಿಯೊಬ್ಬ ಮಕ್ಕಳ ಪೋಷಾಕರೂ ತಮ್ಮ ಮಕ್ಕಳು ಒಳ್ಳೇ ಓದು ಓದಿ ವಿದ್ಯಾವಂತರಾಗಿ ಸ್ವಾವಲಂಬಿಗಳಾಗಿ ಬದುಕಬೇಕೆಂದು ಬಯಸುವವರಿದ್ದಾರೆ. ಅದಕ್ಕಾಗಿ ತಾವು ಕಷ್ಟ ಪಟ್ಟು ಸಾಲ, ಸೋಲಗಳನ್ನು ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾರೆ. ಆದರೆ ತಾವು ಧರಿಸುವ ಬಟ್ಟೆಯೇ ಮುಖ್ಯ, ಅದರ ಹಿಂದಿನ ಧಾರ್ನಿಕ ಕಾರಣಗಳೇ ತಮಗೆ ಶ್ರೇಷ್ಠವಾದದ್ದೆಂದು ನಂಬಿ ನಡೆಯುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ತಮ್ಮ ತಂದೆ ತಾಯಿಗಳ ಕನಸು ಈಡೇರಿಸಲು ಇರುವ ಏಕೈಕ ಮಹೋನ್ನತ ಮಾರ್ಗ ಶಿಕ್ಷಣ ಎನ್ನುವುದು ಅರಿವಾಗುವ ಮುನ್ನ ಕಾಲ ಮಿಂಚಿ ಹೋಗಿರುತ್ತದೆ.

ಇನ್ನು ಹಿಂದೂ ಅಥವಾ ಮುಸ್ಲಿಂ ಯಾವುದೇ ಧರ್ಮದವರಿರಲಿ ಧಾರ್ಮಿಕ ಆಚರಣೆಗಳ ಮಹತ್ವ ಅದೆಷ್ಟೇ ದೊಡ್ಡದಾಗಿರಲಿ ಅದೆಲ್ಲಕ್ಕೀಂತ ಶಿಕ್ಷಣ, ಭವಿಷ್ಯದ ಜೀವನ ಮುಖ್ಯ ಎನ್ನುವುದನ್ನು ಮನಗಾಣಬೇಕಿದೆ. ಇದಕ್ಕೆ ಉತ್ತಮ ಉದಾಹರಣೆಯನ್ನಾಗಿ ನಾವು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೋಡಬಹುದು. ಓರ್ವ ದಲಿತ ಕುಟುಂಬದಿಂದ ಬಂದ ಅಂಬೇಡ್ಕರ್ ತಾವು ಉನ್ನತ ಜಾತಿಯವರಿಗೆ ಸರಿಸಮನಾಗಿ ನಿಲ್ಲಬೇಕಾದರೆ ನನಗೆ ಶಿಕ್ಷಣವೊಂದೇ ಮಾರ್ಗ ಎಂದು ಅರಿತಿದ್ದರು. ಅದಕ್ಕಾಗಿ ಅವರು ಹಗಲಿರುಳು ಕುಳಿತು ಓದಿ ತಮ್ಮ ಗುರಿಯನ್ನು ಸಾಧಿಸಿದ್ದರು. ಹಾಗಿಲ್ಲದೆ ಅವರೇನಾದರೂ ತಾನು ದಲಿತ, ದಲಿತ ಜಾತಿಯ ಸೂಚಕ ಗುರುತು ಧರಿಸಿ ಮಾತ್ರ ಶಾಲೆಗೆ ಬರುವೆನು ಇಲ್ಲವಾದರೆ ಬರಲಾರೆ ಎಂದು ಪ್ರತಿಭಟಿಸಿ ಉಳಿದಿದ್ದರೆ ಅವರೆಂದೂ ಭಾರತದ ಸರ್ವಶ್ರೇಷ್ಠ ನೇತಾರರಾಗಿರುತ್ತಿರಲಿಲ್ಲ.

ಇದೇ ವೇಳೆ ಶಿಕ್ಷಣ ಮುಖ್ಯವಲ್ಲ ಬದಲಿಗೆ ಧಾರ್ಮಿಕ ಆಚರಣೆ, ನಂಬಿಕೆಗಳು ಮುಖ್ಯ ಎನ್ನುವವರು ಹೇಗೆ ರೂಪುಗೊಳ್ಳಬಹುದು ಎನ್ನಲು ಅಮೆರಿಕಾದ ಅವಳಿ ಕಟ್ಟಡ ನಾಶಪಡಿಸಿದ ಜಾಗತಿಕ ಉಗ್ರ ಅಲ್ ಖೈದಾದ ಜನಕ ಒಸಾಮಾ ಬಿನ್ ಲಾಡೆನ್ ಜೀವನ ನಮ್ಮ ಕಣ್ಣ ಮುಂದಿದೆ. ಲಾಡೆನ್ ಶ್ರೀಮಂತ ಕುಟುಂಬದಲ್ಲಿ ಜನಿಸಿ ಉತ್ತಮ ಶಿಕ್ಷಣ ಪಡೆದಿದ್ದರೂ ಕೂಡ ಧರ್ಮಾಂಧತೆಯಲ್ಲಿ ಮುಳುಗೆದ್ದು ಅದನ್ನೇ ಸರ್ವಸ್ವ ಎಂದುಕೊಂಡ ಪರಿಣಾಮ ಜಾಗತಿಕ ಭಯೋತ್ಪಾದಕನಾಗಿ ಬದಲಾಗಿದ್ದ ಹಾಗೂ ಅಂತ್ಯದಲ್ಲಿ ಅಮೆರಿಕಾ ಕೈನಲ್ಲಿ ಒಂದು ಯಕಶ್ಚಿತ್ ಕ್ರಿಮಿಯಂತೆ ಹತ್ಯೆಯಾದ.

ಹಾಗಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ತಮ್ಮ ಧರ್ಮದ ನಂಬಿಕೆಗಳಿಗೆ ಜೋತು ಬೀಳದೆ ಶಿಕ್ಷಣದ ಶ್ರೇಷ್ಠತೆಯನ್ನರಿತು ಮುಂದುವರಿದರೆ ಭಾರತ ಇನ್ನಷ್ಟು ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ ಅವರುಗಳನ್ನು ಪಡೆಅಯಲಿದೆ ಅಲ್ಲದೆ ಹೋದರೆ ಮುಂದೊಂದು ದಿನ ಭಾರತದಲ್ಲಿ ಸಹ ನೆರೆಯ ಅಫ್ಘಾನಿಸ್ಥಾನದಂತಹಾ ವ್ಯವಸ್ಥೆ ತಲೆ ಎತ್ತಬಹುದು.ಹಾಗಾಗಿ ಭವ್ಯ ಭಾರತದ ಭವಿಷ್ಯವಾದ ಮಕ್ಕಳು, ಯುವಕ, ಯುವತಿಯರು ರಾಜಕೀಯ ಪ್ರೇರಿತ, ಅಂತರಾಷ್ಟ್ರೀಯ ಒತ್ತಡ ತಂತ್ರಗಳಿಗೆ ಬಲಿಯಾಗದೆ ಹಿಜಾಬ್, ಕೇಸರಿ ಶಾಲುಗಳ ಹಿಂದೆ ಬೀಳದೆ ನೈಜ ಶಿಕ್ಷಣ ಪಡೆಯುವತ್ತ ಗಮನಹರಿಸಿ ಮುಂದಿರುವ ಉಜ್ವಲ ಭವಿಷ್ಯಕ್ಕಾಗಿ ಸಜ್ಜಾಗಬೇಕಿದೆ.
ರಾಘವೇಂದ್ರ ಅಡಿಗ ಎಚ್ಚೆನ್.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x