Sean O’ Casey ನ “Juno and Paycock”-ಯುದ್ಧ ಜಗತ್ತಿನಲ್ಲಿ ಸಾಮಾಜಿಕ ಏರಿಳಿತ: ನಾಗರೇಖಾ ಗಾಂವಕರ

ಅದು Dublinನ ಎರಡು ಕೋಣೆಗಳ ಬಾಡಿಗೆ ಮನೆ. ಜೂನೋ ಆ ಮನೆಯ ಒಡತಿ. ಮಕ್ಕಳಾದ Jonny Boyle ಮತ್ತು Mary Boyle ಅಲ್ಲಿದ್ದಾರೆ. Jonny ಬೆಂಕಿ ಕಾಯಿಸಿಕೊಳ್ಳುತ್ತಿದ್ಧಾನೆ. ಮೇರಿ ದಿನಪತ್ರಿಕೆಯಲ್ಲಿಯ ಆ ದಿನ ವಿಶೇಷ ಸುದ್ದಿ ಓದುತ್ತಿದ್ದಾಳೆ. ಅವರ ನೆರೆಮನೆಯ ಹುಡುಗನೊಬ್ಬ ದುರಂತವಾಗಿ ಹತ್ಯೆಗೀಡಾಗಿದ್ದಾನೆ. ಅದೂ ಐರಿಶ್ ಸೈನಿಕರ ಕೈಯಲ್ಲಿ. ಈ ವಿಚಾರ ತಿಳಿಯುತ್ತಲೇ ಜಾನಿ ಬೆವರಿ ಹೋಗುತ್ತಾನೆ ಅಷ್ಟೊತ್ತಿಗೆ ಅಲ್ಲಿಗೆ ಬರುವ ತಾಯಿ ಜುನೋ ತಂದೆ Jonny Boyle ಕುರಿತು ವಿಚಾರಿಸುತ್ತಾಳೆ. Jonny ತಂದೆಯ ವರ್ತನೆಯ ಕುರಿತು ತಾತ್ಸಾರಗೊಂಡಿದ್ದಾನೆ. ಮನೆ ಮಕ್ಕಳ ಸರಿಯಾಗಿ ನೋಡಿಕೊಳ್ಳದೇ ಯಾವಾಗಲೂ ಪಬ್ಗಳಲ್ಲಿ ಕುಡಿಯುತ್ತಾ ಕಾಲಹರಣಗೈಯುವ ಬೇಜವಾಬ್ದಾರಿ ತಂದೆಯನ್ನು ಬೈಯುತ್ತಾನೆ. ಪತ್ನಿ ಕೂಡಾ ಆತನ ದುರ್ವರ್ತನೆಗೆ ರೋಸಿ ಹೋಗಿದ್ದಾಳೆ. ಆತನ ಅಸ್ತವ್ಯಸ್ತ ಬದುಕು,ಆಲಸ್ಯ, ಹಾಸ್ಯಭರಿತ ಮಾತುಗಳು,ವಿಚಿತ್ರ ಪಾತ್ರವಾಗಿ ಮೂಡಿಬರುತ್ತಾನೆ. ಕುಡಿತಕ್ಕೆ ಒಳಗಾಗಿ ಮಾನಸಿಕ ಸಾಮಥ್ರ್ಯ ಕುಗ್ಗಿದ,ತನ್ನ ಘನತೆ ಮರೆತು ವ್ಯವಹರಿಸುವ ಕೀಳು ವ್ಯಕ್ತಿತ್ವವಾಗಿ ಬಿಂಬಿಸಲ್ಪಡುತ್ತಾನೆ. ಆ ಕಾಲದ ಸಾಮಾಜಿಕ ಜಗತ್ತಿನ ಒಂದು ಪಾತ್ರಕ್ಕೆ ದೃಷ್ಟಾಂತವಾಗಿ ಆತನ ಚಿತ್ರಿಸುತ್ತಾನೆ ನಾಟಕಕಾರ. ಇದು Sean O’ Casey ಯ ನಾಟಕ Juno and Paycockನ ಮೊದಲ ಅಧ್ಯಾಯ.

1920ರ ಸುಮಾರಿಗೆ ಐರ್ಲೆಂಡಿನ ಬದುಕಿನ ಪ್ರಮುಖ ಆವರಣಗಳಾದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ, ಕೌಟಂಬಿಕ ಚಿತ್ರಗಳು ಒಂದಕ್ಕೊಂದು ಹೇಗೆ ಹೆಣೆದುಕೊಂಡಿದ್ದು, ಆ ರಾಜಕೀಯ ಆರ್ಥಿಕ ಅಸುಭದ್ರತೆಗೆ ಹೇಗೆ ಸಾಮಾನ್ಯ ಬಡ ಕಾರ್ಮಿಕ ಕುಟುಂಬಗಳು ಬಲಿಪಶುಗಳಾಗುತ್ತಿದ್ದರು ಎಂಬುದಕ್ಕೆ ಒಂದು ಚಿತ್ರಣದಂತೆ ಕಟ್ಟಿಕೊಡುತ್ತಾನೆ. O’ Casey ಮೂಲಭೂತವಾದಿ ರಾಷ್ಟೀಯತೆ, ಯುಧ್ಧದ ಭೀತಿ ಭೀಕರತೆ ಇವೆಲ್ಲವನ್ನೂ ಸೆರೆಹಿಡಿಯುತ್ತಾನೆ. ಹಾಗೆಂದು ಡಬ್ಲಿನ್‍ನ ನಾಗರಿಕ ಯುದ್ದವನ್ನು ಹಿನ್ನೆಲೆಯಾಗಿಟ್ಟುಕೊಂಡು ನಾಟಕ ಹುಟ್ಟಿದ್ದರೂ ಪಾತ್ರಗಳು ಮಾತ್ರ ಐರಿಶ್‍ನ ಯುದ್ಧ ವೀರರಲ್ಲ. ಬದಲಿಗೆ ಡಬ್ಲಿನ್‍ನಲ್ಲಿ ತುಂಬಿ ತುಳುಕುತ್ತಿರುವ ಸಾಮಾನ್ಯ ಜನಜೀವನ, ಕೋಳಗೇರಿಯ ಜನರ ಕರುಣಾಜನಕ ಬದುಕಿನ ಕಥೆಯನ್ನು ಹತಾಶೆಯನ್ನು ತೆರೆದಿಡುತ್ತಾನೆ.ಹಾಗಿದ್ದೂ ಇದು ಬರೀಯ ಅಲ್ಲಿಯ ಕಥೆಯಾಗುವುದಿಲ್ಲ ಬದಲಿಗೆ ಇಡೀ ಜಗತ್ತಿನಲ್ಲಿ ಬಡತನದಲ್ಲಿ ಬದುಕುತ್ತಿರುವ ಸ್ಲಂವಾಸಿಗಳ ಬದುಕಿನ ಕಥೆಯೂ ಆಗುತ್ತದೆ.

ಆಕೆ ಜುನೋ ತನ್ನ ಸಂಸಾರವನ್ನು ಕಾಪಾಡಿಕೊಳ್ಳಲು ನಡೆಸುವ ಪರಿಶ್ರಮ ಅನುಪಮ. ಆಕೆ ತಾಯಿ. ತನ್ನ ಇಬ್ಬರು ಮಕ್ಕಳ ಬದುಕನ್ನು ಸುಸ್ಥಿತಿಗೆ ತರುವುದಕ್ಕೆ ಆಕೆಯ ತಿಣುಕಾಟ. ಹೀಗಾಗೇ ಜುನೋ ನಾಟಕದ ಪ್ರಮುಖ ಪಾತ್ರಧಾರಿ. ಎಲ್ಲ ನಾಟಕಗಳಲ್ಲಿ ಬರುವ ಆತನ ಇಷ್ಟದ ಪಾತ್ರವೂ ಹೌದು. ಯಾಕೆಂದರೆ ಗ್ರೀಕ ದಂತಕಥೆಗಳಲ್ಲಿ ಬರುವ ಜುನೋ ದೇವತೆಗಳ ಗುರು ಜ್ಯೂಪಿಟರನ ಪತ್ನಿ. ಸುಶೀಲೆ. ಸದ್ಗುಣಿ. ಆದರೆ ಜ್ಯೂಪಿಟರ ಸ್ತ್ರೀ ವ್ಯಾಮೋಹಿ. ಆತನ ತುಂಬಾ ಪ್ರೀತಿಸುವ ಜುನೋಳಿಗೆ ಆತ ಸದಾ ಅನ್ಯಾಯ ಮಾಡುತ್ತಾನೆ. ಆಕೆಯ ಪಕ್ಷಿ ಪಿಕೊಕ್. ಅದರ ಪುಕ್ಕಗಳಲ್ಲಿ ಜುನೋಗೆ ಜ್ಯೂಪಿಟರ್‍ನ ಚಲನವಲನಗಳ ಕುರಿತು ಗೂಢಾಚಾರ ಮಾಡುವ ಸಂದೇಶ ಕಳಿಸುವ agrus ನ ನೂರು ಕಣ್ಣುಗಳಿವೆ. ಆತ ಆಕೆಯ ಸಂದೇಶ ರವಾನೆ ಮಾಡುವವ.

ಆ ಪಾತ್ರಗಳನ್ನೆ ತನ್ನ ನಾಟಕದಲ್ಲಿ ಬಳಸಿಕೊಂಡಿದ್ದರೂ ಇಲ್ಲಿ Jonny Boyle ವೈವಾಹಿಕ ಬದುಕಿನಲ್ಲಿ ಆಕೆಗೆ ಅನ್ಯಾಯಗಾರನಲ್ಲ. ಬದಲಿಗೆ ತನ್ನ ಸಂಸಾರ ನಿಭಾಯಿಸುವಲ್ಲಿ ಆತನ ಅಸಮರ್ಥತೆ. ತಂದೆಯಾಗಿ ಪತಿಯಾಗಿ ಆತನ ಬೇಜವಾಬ್ದಾರಿ ವರ್ತನೆಯಿಂದ.ಆತನೊಬ್ಬ ಬಡಾಯಿವೀರ,ಆಲಸಿ, ಆಕೆಯ ಬದುಕಿಗೆ ಗಂಡನಾಗುವ ಬದಲು ಹುಣ್ಣು. ಮಗ ಜಾನಿ ಕೂಡಾ ಮನೆಯಿಂದ ಹೊರಹೋಗಲು ಅಂಜುತ್ತಿದ್ದಾನೆ ಕಾರಣ ಆತ ಮಾಹಿತಿ ನೀಡಿದ್ದರಿಂದ ಆತನ ನೆರೆಮನೆಯಾತ Robbie Tancred ಐರ್ಲೆಂಡಿನ ಫ್ರೀ ಸ್ಟೇಟರ್ ಹೋರಾಟಗಾರರ ಕೈಯಲ್ಲಿ ಹತನಾಗಿದ್ದು ರಿಪಬ್ಲಿಕನ್ ಸೈನ್ಯ ಇತನ ತಲಾಷೆಯಲ್ಲಿದೆ. ಮಗಳು ಮೇರಿ ಕೂಡಾ ಟ್ರೇಡ್ ಯುನಿಯನಿಸ್ಟಗಳು ನಡೆಸಿದ ಚಳುವಳಿಯಲ್ಲಿ ಭಾಗವಹಿಸಿದ ಕಾರಣ ತಾನು ಕೆಲಸ ಮಾಡುವ ಫ್ಯಾಕ್ಟರಿ ಕೆಲಸ ಕಳೆದುಕೊಂಡಿದ್ದಾಳೆ. ಹೀಗಾಗಿ ಸಹಿಷ್ಣುವಾದ ತಾಳ್ಮೆಯುಳ್ಳವಳಾದ ಜುನೋ ಮನೆ ನಡೆಸಲು ಹೊರಗೆ ಕೆಲಸಕ್ಕೆ ಹೋಗುವುದು ಅನಿವಾರ್ಯ.

ಇದೇ ಹೊತ್ತಿಗೆ ಆ ಕುಟುಂಬಕ್ಕೆ ಪರಿಚಯವಾಗುವ ಢೋಂಗಿ ವ್ಯಕ್ತಿತ್ವದ Charlie Bentham ಸಕ್ಕರೆ ಮಾತಿಗೆ ಕುಟುಂಬ ಮರಳಾಗುತ್ತದೆ. ಮೇರಿಯನ್ನು ಮರಳುಗೊಳಿಸಲು ಆತ ಹೂಡುವ ನಾಟಕವೆಂದರೆ ಜ್ಯಾಕ್ ಬೊಯ್ಲೆಯ ಸಹೋದರ ಸಂಬಂಧಿಯೊಬ್ಬ ಸತ್ತು ಹೋಗಿದ್ದು ತನ್ನ ಆಸ್ತಿಯಲ್ಲಿ ಜ್ಯಾಕ್‍ಗೆ ಕೂಡಾ ಭಾಗ ನೀಡಿರುವುದಾಗಿ ಅದರ ವಿಲ್‍ನ್ನು ತೋರಿಸಿ ನಂಬುವಂತೆ ಮಾಡುತ್ತಾನೆ. ಇದನ್ನು ನಂಬಿದ ಕುಟುಂಬ ಅದರ ಆಧಾರದ ಮೇಲೆ ದೊಡ್ಡ ಪ್ರಮಾಣದಲ್ಲಿ ಸಾಲವನ್ನು ಮಾಡಿಕೊಂಡಿದೆ. ಅದಲ್ಲದೇ ಚಾರ್ಲಿ ಮೇರಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾನೆ. ಆ ಎಲ್ಲ ಸಂತೋಷಗಳು ಒಮ್ಮೆಲೆ ಕುಟುಂಬಕ್ಕೆ ಬೆಳದಿಂಗಳಂತೆ ಕಂಡುಬರುತ್ತವೆ. ಈ ಸಂತೋಷದಲ್ಲಿ ರಿಪಬ್ಲಿಕನ್ ಸೈನ್ಯ ಮತ್ತು ಫ್ರೀ ಸ್ಟೇಟರ್ಸ ನಡುವಿನ ಹಣಾಹಣಿಯಲ್ಲಿ ಹತನಾದ ನೆರೆಮನೆಯ ಹುಡುಗನ ಸಾವು ಕೂಡಾ ಅವರ ಭಾಧಿಸುವುದಿಲ್ಲ. ತನ್ನ ಮನಸಾರೆ ಪ್ರೀತಿಸುತ್ತಿದ್ದ Jerry Devine ನಿರಾಕರಿಸಿ ಮೇರಿ ಚಾರ್ಲಿಯ ಆಸ್ತಿಯ ಸುಳ್ಳು ಉತ್ತರದಾಯಿತ್ವದ ಆಶ್ವಾಸನೆ ನಂಬಿ ಆತನ ಬುಟ್ಟಿಗೆ ಬೀಳುತ್ತಾಳೆ.

ಆದರೆ ಇದೆಲ್ಲವೂ ಅಲ್ಪಾವಧಿಯಷ್ಟೇ. ಕೆಲವೇ ದಿನಗಳಲ್ಲಿ ಚಾರ್ಲಿಯ ಮೋಸ ಅವರಿಗೆ ಅರ್ಥವಾಗುತ್ತದೆ.ಚಾರ್ಲಿ ತನ್ನ ವಿಲ್‍ನಲ್ಲಿ ನಮೂದಿಸಿದ ಸಂಗತಿಗಳು ವಿಚಿತ್ರವಾಗಿದ್ದು ಎಲ್ಲ ಹಣವೂ ಮೊದಲು ಮೃತವ್ಯಕ್ತಿಗೆ ಹಂಚಲ್ಪಡುವುದೆಂದು ನಂತರ ಆತನ ಸಹೋದರ ಬಂಧುಗಳಿಗೆಂದು ಉಲ್ಲೇಖಿಸಲ್ಪಟ್ಟಿರುತ್ತದೆ.ಅಲ್ಲಿ ನಿರ್ದಿಷ್ಟ ಯಾರೊಬ್ಬರ ಹೆಸರು ಇಲ್ಲದೇ ಎಲ್ಲರೂ ಆ ಹಣಕ್ಕಾಗಿ ಹೆಣಗುವಂತೆ ಆಗಿಹೋಗುತ್ತದೆ, ಇದೇ ಹೊತ್ತಿಗೆ ಇನ್ನೊಂದು ಆಘಾತ ಆ ಕುಟುಂಬದ ಮೇಲೆರಗುವುದು ವಿಪರ್ಯಾಸ. ಚಾರ್ಲಿ ಮೇರಿಯನ್ನು ಗರ್ಭವತಿಯಾಗಿಸಿ ಬಿಟ್ಟು ಹೊರಟುಹೋಗುತ್ತಾನೆ.

ಇವೆಲ್ಲವೂ ಸಾಮಾಜಿಕ ಜೀವನದ ಸಂಕೀರ್ಣ ಸಂಬಂಧಗಳ ಅನಾವರಣಗೊಳಿಸುತ್ತವೆ. ಇದೂ ಸಾಲದೆಂಬಂತೆ ಜುನೋ ಇನ್ನೊಂದು ಆಘಾತಕ್ಕೆ ಎದುರಾಗುತ್ತಾಳೆ. ಫ್ರೀ ಸ್ಟೇಟರ್ಸಗಳಗೆ ಮಾಹಿತಿ ನೀಡಿ ನೆರಮನೆಯ ಹುಡುಗನ ಸಾವಿಗೆ ಕಾರಣನಾದ Jonny ಗೆ ಆತನ ತಪ್ಪಿಗೆ ಶಿಕ್ಷೆಯಾಗಿ ರಿಪಬ್ಲಿಕನ್‍ರು ಗುಂಡಿಟ್ಟು ಕೊಲ್ಲುತ್ತಾರೆ. ಜುನೋ ಎಲ್ಲವನೂ ಕಳೆದುಕೊಂಡ ಅತಂತ್ರ ಸ್ಥಿತಿಯಲ್ಲಿ ಒಂದಾದ ಮೇಲೊಂದರಂತೆ ಆಘಾತಗಳ ಅನುಭವಿಸುವುದು,ಆದಾಗ್ಯೂ ಆಕೆ ಸಬಲ ಮನಸ್ಥಿತಿಗೆ ಸಾಕ್ಷಿಯಾಗಿ ನಿಂತು ಎಲ್ಲವನ್ನು ಸಹಿಸುವುದು ಶ್ರೇಷ್ಟವೆನಿಸುವಂತೆ ಚಿತ್ರಿಸುತ್ತಾನೆ O’ Casey. ತನ್ನ ಮಗನ ಸಾವು, ಸಾವಿಗಿಂತಲೂ ನೋವಿನ ಹೊರೆ ನೀಡಿದ ಮಗಳ ಬದುಕು ಇದ್ದಾಗಲೂ ತಂದೆ ಎಂಬಾತ ಕುಡಿತದಲ್ಲಿ ಇವೆಲ್ಲವನ್ನೂ ಮರೆತು ಹಗುರವಾಗುವುದು, ತನ್ನದೇ ಹಾಸ್ಯಭರಿತ ತತ್ವಜ್ಞಾನದ ಮಾತುಗಳ ಉದ್ಘರಿಸುತ್ತಾನೆ. ನಡೆಯುವುದು ಹೊರ ನೋಟಕ್ಕೆ ಹಾಸ್ಯಾಸ್ಪದವೆನಿಸಿದರೂ ಅದರ ಸಾರ ಮಹತ್ತಾದುದು.

ಮಾನವ ಸಂಬಂಧಗಳು, ಸನ್ನಿವೇಶಕ್ಕೆ ತಕ್ಕಂತೆ ಅವು ಪಡೆದುಕೊಳ್ಳುವ ರೂಪಾಂತರಗಳು ವಿವರಿಸಲಾಗದು.ಇನ್ನು ಬಹುಮುಖ್ಯವಾಗಿ ಆ ಕಾಲದ ಐರಿಶ್ ಸ್ವಾತಂತ್ರ್ಯ ಸಂಘಟನೆಗಳಾದ ಫ್ರೀ ಸ್ಟೇಟರ್ಸ ಮತ್ತು ರಿಪಬ್ಲಿಕನ್ ಗುಂಪುಗಳು ತಮ್ಮಲ್ಲಿಯೇ ವಿಭಜನೆ ಗುಂಪುಗಳಾಗಿ ಪರಸ್ಪರ ದ್ವೇಷಿಗಳಾಗಿ ಹೋರಾಡುತ್ತಿದ್ದದು, ಆ ಸಂಕೇತವನ್ನು ಗೂಢವಾಗಿ ಜಾನಿ ತನ್ನ ನೆರಮನೆಯ ಹುಡುಗ ರೋಬಿಯ ಮಾಹಿತಿ ನೀಡಿ ಆತನ ಸಾವಿಗೆ ಕಾರಣನಾಗುವುದ ತೋರಿಸುವ ಮೂಲಕ ನಿರ್ವಹಿಸುತ್ತಾನೆ . ಅರಿಸ್ಟಾಟಲ್ ಹೇಳುವಂತೆ “ಅತ್ಯಂತ ದುರಂತಮಯ ಘರ್ಷಣೆ ಎಂದರೆ ಸ್ನೇಹಿತನೊಬ್ಬ ತನ್ನ ಸ್ನೇಹಿತನೊಡನೆ ಹೊಡೆದಾಡುವುದು” ಆಗಿದೆ.

ಜಾನಿಯ ಬದುಕು ರಾಜಕೀಯ ಘರ್ಷಣೆಗೆ ಬಲಿಯಾದರೆ, ಮೇರಿ ಬಂಡವಾಳಶಾಹಿ ಹಾಗೂ ಕಾರ್ಮಿಕರ ನಡುವಿನ ಘರ್ಷಣೆಗೆ ಬಲಿಪಶು. ಜುನೋ ಬದುಕಿನ ವಿಪರ್ಯಾಸಗಳಿಗೆ ಬಲಿ. ಆ ಕಾಲದ ರಾಷ್ಟ್ರೀಯ ವೈರುಧ್ಯಮಯ ಸಂದರ್ಭಗಳಿಗೆ ಆ ಕುಟುಂಬ ಜೀವನ ನೂಚ್ಚುನೂರಾಗುವುದನ್ನು ಬಡ ಕಾರ್ಮೀಕರ ಬದುಕು, ಅವರು ಎದುರಿಸುವ ಸಮಸ್ಯೆಗಳನ್ನು ಅರ್ಥವತ್ತಾಗಿ ನಿರೂಪಿಸುತ್ತದೆ ನಾಟಕ.

ಐರಿಶ ನಾಟಕಕಾರ Sean O’ Casey ಹುಟ್ಟಿದ್ದು ಡಬ್ಲಿನ್‍ನಲ್ಲಿ ಮಾರ್ಚ 1884ರಂದು. ಕೋಳಗೇರಿಯಲ್ಲಿ ಬದುಕಿನ ಪ್ರಾರಂಭದ ಸೂರ್ಯೋದಯಗಳ ಕಂಡ ಅಪ್ರತಿಮ ಪ್ರತಿಭಾವಂತ. ಆತ ಪಡೆದ ಶಿಕ್ಷಣ ಡಬ್ಲಿನ್‍ನ ಶಾಲೆಯಲ್ಲಿ ಬರೀಯ ಮೂರು ವರ್ಷಗಳು. ಯಾಕೆಂದರೆ ಬದುಕಿನ ಚೀಲ ತುಂಬಿಸಲು ಆತನಿಗೆ ಉದ್ಯೋಗದ ಅಗತ್ಯವಿದ್ದುದರಿಂದಲೋ ಏನೋ ಕಾರ್ಮಿಕನಾಗಿ ಕೆಲಸಕ್ಕೆ ಸೇರಿದ. ಐರಿಶ ರಾಷ್ಟೀಯ ಮತ್ತು ಕಾರ್ಮಿಕ ಚಳುವಳಿಗಳಲ್ಲಿ ಗುರುತಿಸಿಕೊಂಡಿದ್ದ. ಮೊದಲ ಎರಡು ನಾಟಕಗಳಾದ “The shadow of a gunman” “Juno and Paycock”ಆತನ ಯಶಸ್ವಿ ನಾಟಕಗಳು. ಈ ಕೊಳಗೇರಿ ಬದುಕಿನ ದುರಂತ ಹಾಸ್ಯ ನಾಟಕಗಳ ಹೊರತಾಗಿ “The Plough and the Stars” ನಾಟಕ ಆತನಿಗೆ ಐರಿಶನ ಅಬ್ಬೆ ಥೇಟರನ ಪ್ರಮುಖ ನಾಟಕಕಾರನೆಂಬ ಹೆಗ್ಗಳಿಕೆ ತಂದುಕೊಟ್ಟಿತು.

-ನಾಗರೇಖಾ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x