ಕಳೆದು ಹೋಗುವ ಸುಖ (ಕೊನೆಯ ಭಾಗ): ಡಾ. ಹೆಚ್ಚೆನ್ ಮಂಜುರಾಜ್

ಇಲ್ಲಿಯವರೆಗೆ

ಭಯವೇ ಭಕ್ತಿಯ ಮೂಲ; ಆದರೆ ಅದು ವ್ಯಕ್ತಿಯನ್ನು ಸಂಸ್ಕರಿಸಿ, ತನ್ನ ಜೀವಿತವನ್ನು ಸಾರ್ಥಕವಾಗಿಸಿಕೊಳ್ಳಲು ಪ್ರೇರಿಸಬೇಕು. ಪರಮಾತ್ಮನನ್ನು ಯಾವಾಗಲೂ ಶಿಕ್ಷಿಸುವ ದಂಡಾಧಿಕಾರಿಯೆಂದೇ ನೋಡಬಾರದು; ತನ್ನನ್ನು ಹೆತ್ತು, ಸಾಕಿದ ಪ್ರೇಮಮಯೀ ತಾಯಿಯಂತೆ, ಆತ್ಮೀಯವಾಗಿ ಕಂಡು, ತಪ್ಪುಗಳನ್ನು ತಿದ್ದುವ ಸ್ನೇಹಿತನಂತೆ ಕಾಣಬೇಕು. ಇವೆಲ್ಲವನ್ನೂ ಮಹಾಭಾರತದಲ್ಲಿ ಸರಳವಾಗಿ, ‘ಪರೋಪಕಾರಃ ಪುಣ್ಯಾಯ; ಪಾಪಾಯ ಪರಪೀಡನಂ’ ಎಂದು ತಿಳಿಸಲಾಗಿದೆ. ಜನಸೇವೆಯೇ ಜನಾರ್ಧನ ಸೇವೆ ಎಂಬ ಮಾತೂ ಇದೆ. ದೀನದುರ್ಬಲರ ಮತ್ತು ದರಿದ್ರರ ಸೇವೆಯಲ್ಲಿ ಪರಮಾತ್ಮನನ್ನು ಕಾಣು ಎಂದ ಸ್ವಾಮಿ ವಿವೇಕಾನಂದರ ಈ ಎಲ್ಲ ಮಾತುಗಳ ಒಟ್ಟಂದದ ಪರಿಣಾಮ ಹಾಗೂ ಸ್ವರೂಪವನ್ನು ಅರ್ಥೈಸಿದರು. ‘ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಂ ಇದಂ ಶರೀರಂ’ ಅಂದರೆ, ಗಿಡಮರಗಳು ಹಣ್ಣುಗಳನ್ನು ನೀಡುವುದಾಗಲೀ ನದಿಗಳು ಹರಿಯುವುದಾಗಲೀ ಹಸುಗಳು ಹಾಲನ್ನು ಕೊಡುವುದಾಗಲೀ ಎಲ್ಲವೂ ಪರೋಪಕಾರಕ್ಕಾಗಿಯೇ! ಹಾಗೆಯೇ ಮನುಷ್ಯನ ಜೀವನವು ಪರೋಪಕಾರಕ್ಕಾಗಿಯೇ ಮೀಸಲಿರುವಂಥದು.

ಹರಿದಾಸರಾದರೋ ಜನಸಾಮಾನ್ಯರ ಬಳಿಗೆ ಧರ್ಮವನ್ನು ತಂದರು ಮತ್ತು ಶುದ್ಧ ಭಕ್ತಿಯೋಗವನ್ನು ಆಚರಿಸಿದರು. ಅದರಲ್ಲೂ ಡಾಂಭಿಕ ಭಕ್ತಿಯನ್ನು ವಿಡಂಬಿಸಿದರು. ‘ಮಂಡೆ ಬೋಳಾದಡೇನು; ಮನ ಬೋಳಾದಡಲ್ಲದೆ’ ಎಂದು ಶಿವಶರಣರು ವಿಷಾದಿಸಿದರೆ, ದಾಸವರೇಣ್ಯರು ‘ಚರುಮವ ತೊಳೆದರೆ ಕರುಮವು ಹೋದೀತೇ?’ ಎಂದು ಪ್ರಶ್ನಿಸಿ, ಅರ್ಥಹೀನ ಬಾಹ್ಯಾಚರಣೆಗಳತ್ತ ಬೊಟ್ಟು ಮಾಡಿದರು. ಶುದ್ಧ ಧಾರ್ಮಿಕ ಮಾರ್ಗದಲ್ಲಿ ನಡೆದರೆ ಸಾಕು; ಅದಕಾಗಿ ಸತ್ಯ ಶುದ್ಧ ಕಾಯಕದ ಸರಳ ಜೀವನ ಬೇಕು ಎಂದು ಬೋಧಿಸಿ, ವೈರಾಗ್ಯದಲಿ ನಿಜಯೋಗವಿದೆ ಎಂದರು. ಆ ಮೂಲಕ ದುರ್ಗುಣಗಳನ್ನು ಬಿಡುವ ಬಗೆಯನ್ನು ತಿಳಿಸಿದರು. ಧಾರ್ಮಿಕ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಿದರು; ಪುನಃ ಸ್ಥಾಪಿಸಿದರು. ಸಮಾಜದ ಮಂದಿ ಒಂದಷ್ಟು ಮೃದು ಮಧುರವಾಗಿ, ಸನ್ಮಾರ್ಗದಲ್ಲಿ ನಡೆಯಲು ಊರುಗೋಲಾದರು. ಭಕ್ತಿಪಂಥದ ಪರಿಣಾಮ ಮತ್ತು ಪುನರುಜ್ಜೀವನವಿದು. ದೇವರನ್ನು ಸ್ನೇಹಿತನೆಂದೂ ಸಖನೆಂದೂ ಪರಿಭಾವಿಸುವ ಭಕ್ತಿಪಂಥದ ಪ್ರಾಮುಖ್ಯವನ್ನು ನಿಧಾನವಾಗಿ ನಾವಿಂದು ಅರಿಯುತ್ತಿದ್ದೇವೆ.

ಹೀಗೆ ಏನಾದರೂ ಪಡೆದುಕೊಳ್ಳಬೇಕೆಂದು ತಹತಹಿಸುವಾಗ ಇದುವರೆಗೆ ತುಂಬಿಸಿಟ್ಟುಕೊಂಡ ದುರ್ಗುಣ ಹಾಗೂ ದುರ್ವ್ಯಾಪಾರಗಳನ್ನು ಕಳೆದುಕೊಳ್ಳಬೇಕೆಂಬ ಅರಿವು ಉಂಟಾಗುವುದೇ ಧಾರ್ಮಿಕ ನಡೆ. ದೇವರು ಮತ್ತು ಧರ್ಮಗಳ ಹೆಸರಿನಲ್ಲಿ ಶೋಷಣೆ ಮಾಡುತ್ತಾರೆಂದು ಬೊಬ್ಬೆ ಹೊಡೆಯುವ ವಿಚಾರವಾದಿಗಳು ಸ್ವಲ್ಪ ವಿಚಾರ ಮಾಡಬೇಕು. ಮನುಷ್ಯರನ್ನು ಮಾನವೀಯಗೊಳಿಸಿ, ಅವರೊಳಗಿನ ಮೃಗೀಯ ಮತ್ತು ರಾಕ್ಷಸೀಯ ಚಹರೆಗಳನ್ನು ಇನ್ನಿಲ್ಲವಾಗಿಸಿ, ಸತ್ಪಥದತ್ತ ಚಲಿಸಲು ದಾರಿ ತೋರುವ ಭಕ್ತಿಯೋಗವನ್ನು ಪ್ರಚುರಪಡಿಸುವುದು ಇದರ ಸದಾಶಯವಾಗಿತ್ತು.

ಮನುಷ್ಯನ ಆರೋಗ್ಯವಂತ ಮನಸ್ಥಿತಿಯೇ ಅವನನ್ನು ಸದಾ ಕ್ರಿಯಾಶೀಲನನ್ನಾಗಿಟ್ಟಿರುವುದು ಎಂದೇ ಮನೋವಿಜ್ಞಾನ ಭಾವಿಸಿದೆ. ಇದನ್ನು ಹೀಗೂ ಹೇಳಬಹುದು: ಸದಾ ಕ್ರಿಯಾಶೀಲವಾಗಿರುವುದೇ ಮಾನಸಿಕ ಆರೋಗ್ಯದ ಗುಟ್ಟು! ವೃತ್ತಿ, ಪ್ರವೃತ್ತಿಗಳನ್ನು ನಾವೇ ಕಂಡುಕೊಳ್ಳಬೇಕು; ಯಾರೂ ಕಾಣಿಸುವುದಿಲ್ಲ! ಅಪರೂಪಕ್ಕೆ ಮಾತ್ರ ವೃತ್ತಿಗೂ ಪ್ರವೃತ್ತಿಗೂ ಸಹ ಸಂಬಂಧವಿರುತ್ತದೆ, ಮಿಕ್ಕಂತೆ ಜಗದಲ್ಲಿ ಬಹಳಷ್ಟು ಮಂದಿಗೆ ವೃತ್ತಿಯೇ ಬೇರೆ; ಪ್ರವೃತ್ತಿಯೇ ಬೇರೆ. ಆಧುನಿಕ ನಾಗರಿಕ ಜಗತ್ತಿನಲ್ಲಿ ಇದು ಸಹಜವಾಗಿದೆ. ನಾನು ಓದಿದ್ದೇ ಒಂದು; ಕೆಲಸ ಮಾಡುತ್ತಿರುವುದೇ ಇನ್ನೊಂದು ಎಂಬಂತೆ ಆಗಬಹುದು. ಇದು ಸಹಜ ಮಾತ್ರವಲ್ಲ; ಅನಿವಾರ‍್ಯ ಕೂಡ. ಇದು ಏಕೆ ಹೀಗೆ? ಎಂದು ನಾನು ಕೇಳಿಕೊಳ್ಳದೇ ಇದನ್ನು ಒಪ್ಪಿಕೊಂಡು ವೃತ್ತಿಯಲ್ಲೂ ಸಂತಸ ಕಂಡು, ಪ್ರವೃತ್ತಿಯಲ್ಲೂ ನೆಮ್ಮದಿ ಕಂಡು ಪ್ರಸನ್ನವದನರಾಗುವುದು ನಮ್ಮ ಕೈಯಲ್ಲೇ ಇದೆ; ಕೈಯಳತೆಯಲೇ ಇದೆ. ನಮ್ಮನ್ನು ಇನ್ನೊಬ್ಬರಿಗೆ ಅರ್ಥ ಮಾಡಿಸುವ (ಹೀಗೆಂದರೇನೆಂದು ನನಗೆ ಇಂದಿಗೂ ಅರ್ಥವಾಗಿಲ್ಲ!) ವ್ಯರ್ಥ ಸಾಹಸವನ್ನು ಕೈ ಬಿಟ್ಟ ಮೇಲೆ ಇಂಥ ನೆಮ್ಮದಿ ನಮ್ಮ ಅನುಭವಕ್ಕೆ ಬರುತ್ತದೆ. ಅರ್ಥ ಮಾಡಿಕೊಂಡವರಿಗೆ ಅದರ ಅಗತ್ಯವಿಲ್ಲ; ಅರ್ಥ ಮಾಡಿಕೊಳ್ಳದವರಿಗೂ!

ನಮ್ಮೆಲ್ಲ ಕಾಯಕಗಳೂ ಹೊಟ್ಟೆಪಾಡಿಗೆ ಎಂಬಂತೆ ಆಗಿರುವುದರಿಂದ, ಆತ್ಮಸಂತೋಷವನ್ನು ಕಂಡುಕೊಳ್ಳಲು ಪ್ರವೃತ್ತಿಗಳು ಇರಬೇಕು; ಅದಕಾಗಿಯೇ ಕಲೆ, ಸಾಹಿತ್ಯ, ಸಂಗೀತ ಮುಂತಾದ ಮಾನವಿಕವೂ ಆತ್ಮಿಕವೂ ಆದ ಮನೋರಂಜನೆಗಳಿರುವುದು. ಇವನ್ನೇ ವೃತ್ತಿಯನ್ನಾಗಿಸಿಕೊಂಡಿರುವವರದು ಅದೃಷ್ಟ ಮತ್ತು ಪುಣ್ಯದ ಸಂಗತಿ. ನಮ್ಮ ಪರಂಪರೆಯು ಇವನ್ನು ಕೇವಲ ಮನೋರಂಜನೆ ಎಂದಷ್ಟೇ ಸೀಮಿತಗೊಳಿಸದೇ ಸೃಷ್ಟಿಯನ್ನು ಅರಿಯುವ ಮತ್ತು ಭಗವಂತನನ್ನು ಕಾಣುವ ಮುಕ್ತಿಮಾರ್ಗವೆಂದೂ ಬಿಂಬಿಸಿದೆ. ಇದರಲ್ಲೇನೂ ತಪ್ಪಿಲ್ಲ. ಎಲ್ಲವೂ ಅಂತಿಮವಾಗಿ ಒಂದು ಆದರ್ಶವನ್ನು ಕಾಣುವ, ಕಾಣಿಸುವ ಮತ್ತು ಮುಟ್ಟುವ ಏಣಿಯನ್ನಾಗಿಸುವ ತುಡಿತ ನಮ್ಮ ಮನುಕುಲದ್ದಲ್ಲವೇ? ಅದಕೆಂದೇ ಸ್ವಾಮಿ ವಿವೇಕಾನಂದರು ಹೇಳಿದ್ದು: ಕಲೆ ವಿಲಾಸಕ್ಕಾಗಿಯಲ್ಲ; ವಿಕಾಸಕ್ಕಾಗಿ!

‘ಕೆಲಸಕ್ಕೆ ಬಾರದವರೆಂಬುವವರೇ ಇಲ್ಲ; ಆದರೆ ಕೆಲಸಕ್ಕೆ ತೊಡಗಿಸಬಲ್ಲವರು ದೊರೆಯುವುದು ಕಷ್ಟ’ ಈ ಮಾತು ನಮ್ಮ ನಡುವಿನ ಅಪರೂಪದ ಜಗದ್ವಿಖ್ಯಾತ ಸಾಧಕ ಇನ್ಫೋಸಿಸ್ ನಾರಾಯಣಮೂರ್ತಿಯವರದು. ಅವರ ತಿಳಿವು, ಅಪಾರ ಅನುಭವ ಹಾಗೂ ಅದಮ್ಯ ಕ್ರಿಯಾಶೀಲತೆಯ ಹಿನ್ನೆಲೆಯಲ್ಲಿ ಈ ಮಾತನ್ನು ಮಥಿಸಿದರೆ ನಮಗೆ ಸ್ಪಷ್ಟವಾಗುತ್ತದೆ: ಸೋಮಾರಿಗಳಾದ ನಮ್ಮನ್ನು ಬಡಿದೆಬ್ಬಿಸಿ, ಕೆಲಸಕ್ಕೆ ಹಚ್ಚುವ ಮತ್ತು ಆಗಿಂದಾಗ್ಗ್ಯೆ ಎಚ್ಚರಿಸುತ್ತಾ, ಸರಿದಾರಿ ತೋರಿ, ನಿಯಂತ್ರಿಸುವ ಪ್ರೇರಣಾದಾಯಕರು ಇರಬೇಕು. ಯಾವುದೇ ಹೋರಾಟ, ಚಳವಳಿ, ಬೃಹತ್ ಉದ್ಯಮಗಳು, ದೇಶ ಕಟ್ಟುವ ಸಂಕಲ್ಪ, ಧಾರ್ಮಿಕ-ಆಧ್ಯಾತ್ಮಿಕ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಸಹಕಾರೀ ಸಂಘಸಂಸ್ಥೆಗಳು ಮೊದಲಾದವುಗಳ ಹುಟ್ಟು ಮತ್ತು ಬೆಳವಣಿಗೆಗಳನ್ನು ನೋಡಿದಾಗ ಈ ಮಾತು ಮನವರಿಕೆಯಾಗುತ್ತದೆ. ನಮ್ಮ ಸ್ವಾತಂತ್ರ್ಯ ಚಳವಳಿಯ ಸ್ವರೂಪವನ್ನು ಅಧ್ಯಯನ ಮಾಡಿದರೆ ಸಾಕು, ಇದು ವೇದ್ಯ.

ಕೆಲಸಕ್ಕೆ ಬಾರದವರೆಂದು ನಾವು ಅಂದುಕೊಂಡಿರುತ್ತೇವೆ; ಆದರೆ ಒಂದು ಸಮರ್ಥ ಮತ್ತು ಚಾಣಾಕ್ಷ ನಾಯಕತ್ವವು ಅಂಥವರನ್ನು ಕೆಲಸಕ್ಕೆ ತೊಡಗಿಸಿ, ಅಂದುಕೊಂಡ ಯಶಸ್ಸನ್ನು ಸಾಧಿಸುತ್ತದೆ. ಒಮ್ಮೆ ಈ ರೀತಿ ನಾವು ಅಂಥವರ ಅಡಿಯಲ್ಲಿ ಕೆಲಸ ನಿರ್ವಹಿಸಿದರೆ ಆಗ ಅದರ ರುಚಿಯಭಿರುಚಿ ಪರಿಚಯವಾಗುತ್ತದೆ. ‘ಆಕಳಿಸುತ್ತಾ ಕೂರಬೇಡಿ; ಜೀವಂತ ಮನುಷ್ಯನಿಗೆ ಕಟ್ಟುವ ಗೋರಿಯೇ ಆಕಳಿಕೆ’ ಎಂದಿದ್ದಾರೆ ಚೆರಮಿ ಟೈಯ್ಲರ್ ಎಂಬ ಚಿಂತಕರು. ಸದಾ ಚಟುವಟಿಕೆಯಿಂದ ಮತ್ತು ಜೀವಂತಿಕೆಯಿಂದ ಇರುವಂತೆ ಮಾಡುವಲ್ಲಿ ನಾವು ಕೈಗೊಳ್ಳುವ ಕೆಲಸಕಾರ‍್ಯಗಳದೇ ಪ್ರಮುಖ ಪಾತ್ರ. ಬಸವಣ್ಣ, ಅಲ್ಲಮ ಮೊದಲಾದವರ ಮುಂದಾಳತ್ವದಲ್ಲಿ ನೂರಾರು ಸಮಾನಮನಸ್ಕರು ಸಮಾಜೋಧಾರ್ಮಿಕ ಆಂದೋಲನವನ್ನು ಕಾಯಕ-ದಾಸೋಹದ ಮೂಲಕ ಕೈಗೊಂಡಿದ್ದಕ್ಕೆ ಕಾರಣ: ಸಮರ್ಪಕ ನಾಯಕತ್ವ. ಅಲ್ಪಕಾಲವಾದರೂ ಹೊಸ ಸಮಾಜದ ಸರ್ವ ಸಮತೆಯ ಕನಸಿನ ಬೀಜ ಮೊಳಕೆಯೊಡೆದು ಸಸಿಯಾಗಿ ನಳನಳಿಸುವ ಸಾಧ್ಯತೆಯನ್ನು ಅಂದು ಅವರು ಮನಗಂಡರು. ಬಸವಕ್ರಾಂತಿಯು ಸೋತರೂ ತಾತ್ತ್ವಿಕವಾಗಿ ಗೆದ್ದು ಇಡೀ ಜಗತ್ತಿನಲ್ಲೇ ವಿಸ್ಮಯ ಪಡುವಂಥ ‘ಕಲ್ಯಾಣ ಅರ್ಥಶಾಸ್ತ್ರ’ವನ್ನು ಪರಿಚಯ ಮಾಡಿಕೊಟ್ಟದ್ದು ಸ್ವಲ್ಪದ ಸಾಧನೆಯಲ್ಲ. ಕಾಯಕದಲ್ಲಿ ತೊಡಗಿಸಿಕೊಂಡ ಮೇಲೆ ಗುರುವೇ ಬರಲಿ, ಜಂಗಮನೇ ಆಗಮಿಸಲಿ, ಸಾಕ್ಷಾತ್ ಶಿವನೇ ಬಂದು ನಿಲ್ಲಲಿ; ಕಾಯಕ ನಿಷ್ಠೆ ಮಾತ್ರ ನಿರಂತರವಾಗಿರಬೇಕು ಎಂದಿಲ್ಲವೇ ಕಾಯಕ ಜೀವಿಗಳಾದ ವಚನಕಾರರು. ‘ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗು ಹರಿಯಬೇಕು, ಕಾಯಕವೇ ಕೈಲಾಸವಾದ ಕಾರಣ, ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು’ ಎನ್ನುತ್ತಾರೆ ಶಿವಶರಣ ಆಯ್ದಕ್ಕಿ ಮಾರಯ್ಯನವರು. ಸ್ವತಃ ದೇವನೂ ಈ ಕಾಯಕದ ನಿಯಮಕ್ಕೆ ಒಳಪಟ್ಟವರೇ ಎನ್ನುವ ಈತ ಕರ್ತವ್ಯ ಪ್ರಜ್ಞೆಯನ್ನು ಎಚ್ಚರಿಸುತ್ತಾ ಅಭೂತಪೂರ್ವವಾಗಿ ಕೆಲಸದ ಮಹತ್ವವನ್ನು ಮನಗಾಣಿಸಿದ್ದಾರೆ. ಜೊತೆಗೆ ದೈವವಾದ ಅಮರೇಶ್ವರ ಲಿಂಗದ ಪೂಜೆಯೂ ಈ ಕಾಯಕದ ಒಳಗೇ ಸೇರಿಕೊಂಡಿದೆ! ಪ್ರತ್ಯೇಕವಾಗಿ ಪೂಜಿಸುವ ಅಗತ್ಯವಿಲ್ಲ ಎಂಬ ಧ್ವನಿಯನ್ನು ಇದರಲ್ಲಿ ಗುರುತಿಸಬಹುದು. ನಾವು ಕೈಗೊಳ್ಳುವ ಸತ್ಯ ಶುದ್ಧ ಕಾಯಕ ಅಂದರೆ ಒಟ್ಟು ಜನಸಮುದಾಯಕ್ಕೆ ಹಿತವನ್ನುಂಟು ಮಾಡುವ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಮೂಲಕವೇ ಭಗವಂತನನ್ನು ಕಾಣಬೇಕೆಂಬ ಸಂದೇಶವನ್ನು ಪರೋಕ್ಷವಾಗಿ ನೀಡಿದ್ದಾರೆ. ಕೃಷ್ಣಾರ್ಪಣಮಸ್ತು, ಶಿವಾರ್ಪಿತ ಎಂಬ ಉದ್ಗಾರದಲ್ಲೇ ಇದರ ಸೂಚನೆಯಿದೆ.

ಇದನ್ನೇ ಪುರಂದರದಾಸರು ‘ಕೃಷ್ಣ ಎನಬಾರದೆ?’ ಎಂದು ಪ್ರಶ್ನಿಸುತ್ತಾ ಅದರಲ್ಲೇ ಉತ್ತರವನ್ನೂ ಅಡಗಿಸಿಟ್ಟಿದ್ದಾರೆ! ‘ದಾರಿಯ ನಡೆವಾಗ, ಭಾರವ ಹೊರುವಾಗ ಕೃಷ್ಣ’ ಎಂದುಸುರಿಸಿ, ‘ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ’ ಎಂದು ಹೆಸರಿಸಿ, ‘ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣ’ ಎಂಬ ಮಾತನಿರಿಸಿ, ‘ಭೋಗ ಪಡೆದು ಅನುರಾಗದಿಂದಿರುವಾಗ ಕೃಷ್ಣ’ ಎಂದು ಸ್ಮರಿಸಿ ಎನ್ನುತ್ತಾರೆ! ಕೊನೆಗೆ ‘ಕೆಲಸದೊಳೊಂದು ಕೆಲಸವೆಂದು ಕೃಷ್ಣ ಎನಬಾರದೆ’ ಎಂದು ಹಾಡುವ ಮೂಲಕ ಕೈಗೊಂಡ ಕೆಲಸದ ಸಾರ್ಥಕತೆ ಇರುವುದೇ ಭಗವಂತನಿಗರ್ಪಿತವೆಂಬ ಧನ್ಯತೆಯಲ್ಲಿ! ಎನ್ನುವಾಗ ನಮ್ಮ ಕಾಯಕದ ಪರಮೋದ್ದೇಶವನ್ನಿದು ನಿರ್ದೇಶಿಸುತ್ತದೆ ಎಂದು ನಾನು ತಿಳಿದಿದ್ದೇನೆ.

ʼಪತ್ರಂ ಪುಷ್ಪಂ ಫಲಂ ತೋಯಂ ಯೋಮೇ ಭಕ್ತ್ಯಾ ಪ್ರಯಚ್ಛತಿ; ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ’ ಭಕ್ತಿಯಿಂದ ಒಂದು ಎಲೆ, ಒಂದು ಹೂವು, ಒಂದು ಫಲ, ಕೊನೆಗೆ ಒಂದು ಬೊಗಸೆ ನೀರನ್ನು ಸಮರ್ಪಿಸು ಸಾಕು; ನಾನದನ್ನು ಸಂತೋಷದಿಂದ ಸ್ವೀಕರಿಸಿ, ಸಂತುಷ್ಟನಾಗಿ ಅನುಗ್ರಹಿಸುವೆ ಎಂಬುದಾಗಿ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಉವಾಚಿಸುತ್ತಾನೆ. ಅಂದರೆ ಕಾಯಕವನ್ನೇ ಕೈಲಾಸವೆಂದು ತಿಳಿದು ಅದನ್ನೇ ನಿಷ್ಠೆಯಿಂದ ಮಾಡು, ನನಗಾಗಿ ನೀನು ಗಂಟೆಗಟ್ಟಲೆ ಜಪತಪಗಳನ್ನು ಮಾಡುವ ಅಗತ್ಯವಿಲ್ಲ, ದಿನವಿಡೀ ಪೂಜೆ ಪುರಸ್ಕಾರಗಳನ್ನು ನಡೆಸಬೇಕಾಗಿಲ್ಲ, ನಿರ್ದಿಷ್ಟಪಡಿಸಿದ ವಿಧಿ-ವಿಧಾನಗಳಲ್ಲೇ ಅರ್ಚಿಸಿ, ನನ್ನನ್ನು ಹೊಗಳಿ, ಅಟ್ಟಕ್ಕೇರಿಸಿ, ನಿನ್ನ ಸ್ವಾರ್ಥವೇ ತುಂಬಿದ ಲೌಕಿಕ ಬಯಕೆ ಬೇಗುದಿಗಳನ್ನು ನಿವೇದಿಸುವುದು ಬೇಡ, ಕೇವಲ ಒಂದು ಎಲೆ ಅಥವಾ ಒಂದು ಹೂವು ಅಥವಾ ಒಂದು ಹಣ್ಣು ಸಾಕು, ಅದೂ ಸಿಗದಿದ್ದರೆ ಕೊನೆಗೊಂದು ಬೊಗಸೆ ನೀರನ್ನು ಅರ್ಪಿಸು ಎಂದಿದರ ಭಾವ. ನಾವು ಗಮನಿಸಬೇಕಾದುದು ಏನೆಂದರೆ ಈ ಶ್ಲೋಕದಲ್ಲಿ ಬಂದಿರುವ ಯಾವ ಸಮರ್ಪಣೆಯೂ ಮನುಷ್ಯ ನಿರ್ಮಿತವಾದುದಲ್ಲ! ನಮ್ಮ ಸುತ್ತಮುತ್ತ ಇರುವ ಪ್ರಾಕೃತಿಕ ಸಂಪತ್ತು; ಅದುವೇ ದೇವತಾರ್ಚನೆಗೆ ಸರಿಯಾದ ಸವಲತ್ತು. ಹೀಗೆ ಸರಳವೂ ವಿರಳವೂ ಸಹಜವೂ ಆದ ಎಲ್ಲವನ್ನೂ ನಾವು ನಮ್ಮದೇ ಆದ ಅಹಂಕಾರ ಮತ್ತು ಪ್ರತಿಷ್ಠೆಗಳಿಂದ ಸಂಕೀರ್ಣ ಮಾಡಿಕೊಂಡು ನಮ್ಮ ಕೈಗಳನ್ನು ನಮ್ಮದೇ ಹಗ್ಗದಿಂದ ನಾವೇ ಬಂಧಿಸಿಕೊಂಡು ಯಾರೋ ಬಂಧಿಸಿದ್ದಾರೆಂದು ಹುಯಿಲೆಬ್ಬಿಸುವ ಮನೋ ವ್ಯಾಕುಲತೆಗೆ ತುತ್ತಾಗಿದ್ದೇವೆ. ಸರಳತೆಯೇ ಸುಂದರತೆ ಎಂಬುದನ್ನು ಮರೆತಿದ್ದೇವೆ. ಅದಕ್ಕಾಗಿಯೇ ದಾಸವರೇಣ್ಯರು ‘ಮಾನವ ಜನ್ಮ ದೊಡ್ಡದು; ಅದನು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದು ವಿಷಾದಿಸಿದರು.

ಕಾಯಕವೇ ಕೈಲಾಸ ಎಂದ ಶರಣರು ದೇಹವೇ ದೇಗುಲವೆಂದು ಸಾರಿದರು. ಅದುವರೆಗಿನ ಎಲ್ಲರೂ ಈ ಶರೀರವನ್ನು ಕನಿಷ್ಠವಾಗಿಸಿ, ನಿಂದಿಸಿ, ಹೀಗಳೆದವರೇ ಆಗಿದ್ದರು. ಅಂದರೆ ಮೊದಲ ಬಾರಿಗೆ ಈ ಸಾಧಕರು ಮಾನವ ಶರೀರವನ್ನು ಘನತೆಯ ಆಲಯವನ್ನಾಗಿಸಿದರು. ಎಲ್ಲದಕ್ಕೂ ಈ ದೇಹವೇ ಆಧಾರವಾಗಿದೆ. ದೇಹವಿಲ್ಲದ ಆತ್ಮಕ್ಕೆ ಯಾವ ಬೆಲೆಯೂ ಇಲ್ಲ; ಅರ್ಥವೂ ಇಲ್ಲ ಎಂಬುದನ್ನು ಅವರ ವಚನಗಳು ಸಾರಿ ಹೇಳಿದವು. ಆದರೆ ಇದೊಂದು ವಾಹಕ ಎಂಬುದನ್ನು ಹೇಳಲು ಮರೆಯಲಿಲ್ಲ. ಕುವೆಂಪು ಅವರು ಇನ್ನೂ ಮುಂದುವರೆದು ‘ದೇಹವಿದು ನೀನಿರುವ ಗುಡಿಯೆಂದು ತಿಳಿದು ಗುಡಿಸುವೆನು ದಿನದಿನವೂ ದೇವ ದೇವ’ ಎಂದರು. ‘ಗಂಟೆಗಳ ನಾ ಹೊಡೆಯೆ, ಶಂಖವನು ನಾ ಊದೆ, ಮಂಗಳಾರತಿಯ ನಾ ಬೆಳಗಲರಿಯೆ! ನಿನ್ನ ಸಂಗವ ತೊರೆಯೆ, ನಿನ್ನನೆಂದಿಗು ಮರೆಯೆ, ನಿನ್ನವನು ನಾನಲ್ಲವೇನು? ದೊರೆಯೇ!’ ಎನ್ನುವಾಗ ಭಗವಂತನು ಸಖನಾದನು; ಆತ್ಮೀಯನಾದನು. ಪ್ರಾಣಪದಕವಾದನು. ಹೆದರಿಸುವ ಮತ್ತು ಶಿಕ್ಷಿಸುವ ದೇವತೆಯಾಗಲಿಲ್ಲ! ‘ಶರಣಸತಿ; ಲಿಂಗ ಪತಿ’ ಎಂದರು ಶರಣರು. ಇದನ್ನೇ ಮಧುರ ಭಕ್ತಿ ಎಂದರು ಸಂತರು. ರಾಧೆಯು ಕೃಷ್ಣನನ್ನು ಪ್ರೀತಿಸುವಾಗ, ಮೀರಾಬಾಯಿಯು ಗಿರಿಧರ ಗೋಪಾಲನನ್ನು ಆರಾಧಿಸುವಾಗ, ಮಹದೇವಿಯಕ್ಕಳು ಚನ್ನಮಲ್ಲಿಕಾರ್ಜುನನನ್ನು ಪತಿಯೆಂದು ಸ್ವೀಕರಿಸುವಾಗ ಏನನ್ನೋ ಕಳೆದುಕೊಂಡರು; ಆದರೆ ಆತ್ಮೋನ್ನತಿಯನ್ನು ಸಾಧಿಸಿ ಸಂತೋಷಿಸಿದರು! ಅದರಲೊಂದು ಆನಂದವನ್ನೂ ಬ್ರಹ್ಮತತ್ತ್ವವನ್ನೂ ಮನಗಂಡರು. ಜಗತ್ತಿನುದ್ದಕ್ಕೂ ಹೀಗೆ ದಾರ್ಶನಿಕರೂ ಸಂತರೂ ಮಹಾಮಹಿಮರೂ ತತ್ತ್ವಾನ್ವೇಷಕರೂ ರಹಸ್ಯದರ್ಶಿಗಳೂ ಅವಧೂತರೂ ಪರಿಪರಿಯಾಗಿ ತಂತಮ್ಮ ದೇಶಭಾಷೆಗಳಲ್ಲಿ ಮಾತಾಡಿದ್ದು ಇದನ್ನೇ. ಅದರಲ್ಲೂ ತಂತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿಯೂ ನ್ಯಾಯೋಚಿತವಾಗಿಯೂ ಮಾಡುತ್ತಾ ಮಂದಿ ಮನಸ್ಸನ್ನು ಹದಗೊಳಿಸುತ್ತಾ ಪ್ರೇರಕರಾಗಿ ಇದ್ದಷ್ಟು ಕಾಲ ಒಳಿತನ್ನು ಹಾರೈಸಿದವರೇ ಇಂದಿಗೂ ನಮಗೆ ಆದರ್ಶ. ಇಂಥವರು ಕಾಯಕವೇ ಕೈಲಾಸ ಎಂದರೆ ಅದಕ್ಕೆ ಅರ್ಥವಿದೆ. ಇವರೇ ಅನುಸರಣೀಯರು. ಜಗತ್ತಿನ ತುಂಬ ಬರೀ ಉಪದೇಶಗಳೇ ಸಿಗುತ್ತವೆ; ನೂರು ಸಲಹೆಗಳು ದೊರಕುತ್ತವೆ; ಆದರೆ ತಾವು ಸ್ವತಃ ಆಚರಿಸಿದ ಮತ್ತು ಆಚರಣೆಗೆ ತಕ್ಕುದಾದ ಮಾರ್ಗದರ್ಶನ ನೀಡುವವರು ಅಂದಿಗೂ ಇಂದಿಗೂ ಕಡಮೆಯೇ.

‘ಕೈಲಾದವನು ಮಾಡುವನು; ಆಗದವನು ಉಪದೇಶಿಸುವನು’ ಎಂದು ಜಾರ್ಜ್ ಬರ್ನಾಡ್ ಷಾ ಹೇಳಿದ್ದು ಇಂಥ ಕಾರಣಕ್ಕಾಗಿಯೇ. ಪ್ರಾರ್ಥಿಸುವ ತುಟಿಗಳಿಗಿಂತ ಸಹಾಯ ಮಾಡುವ ಕೈಗಳೇ ಮೇಲು ಎಂಬ ಮಾತೇ ಇದೆ. ಇಷ್ಟಕ್ಕೂ ಕೆಲಸದಲ್ಲಿ ಕಳೆದು ಹೋಗುವುದು ಎಂದರೆ ನಮ್ಮ ಅಹಮನ್ನು ಮರೆಯುವ ಮತ್ತು ದೂರವಿಡುವ ದಿವ್ಯಕ್ಷಣಗಳೇ ಆಗಿರುತ್ತವೆ. ನಾನು, ನನ್ನದು, ನಾನು ಮಾಡಿದ್ದು, ನಾನು ಆಗ ಮಾಡಿದ್ದೆ, ನಾನು ಮಾಡದೇ ಇರುವುದಾದರೂ ಏನು? ನನಗೆ ಗೊತ್ತಿದೆ! ನಾನು ಆಗ ಇದ್ದಿದ್ದರೆ!! ಎಂಬಂಥ ಮಾತುಗಳನ್ನು ನಾವಾಡುವುದನ್ನು ಕಡಮೆ ಮಾಡಿದರೆ ಅಥವಾ ಆಡದೇ ಇದ್ದರೆ ಮಾಡುವ ಕೆಲಸದಲ್ಲಿ ಇಂಥ ಕಳೆದು ಹೋಗುವ ಸುಖ ಅರಿವಿಗೆ ಬರುತ್ತದೆ. ಮನುಷ್ಯ ಸಂಬಂಧಗಳೇ ಆಗಿರಲಿ, ಕೆಲಸ ಮಾಡುವ ಸ್ಥಳಗಳೇ ಆಗಿರಲಿ ಈ ನಾನತ್ವದಿಂದ ಹೊರತಾಗಿದ್ದರೇನೇ ಸಂತಸದ ಸುಗಂಧ ಪಸರಿಸುವುದು. ಹೀಗೆ ನಾನತ್ವವನ್ನು ಬಿಟ್ಟು, ಇದಕ್ಕೆ ನಾನು ನೆಪ ಮಾತ್ರ; ನಾನಲ್ಲದಿದ್ದರೆ ಬೇರೆ ಯಾರೋ ಮಾಡುತ್ತಿದ್ದರು; ಇಂಥ ಸದವಕಾಶ ನನಗೆ ಒದಗಿರುವುದು ಸುದೈವ ಎಂಬಂಥ ಭಾವವನ್ನು ಹೊಂದಿದ್ದರೆ ಈ ಕಳೆದು ಹೋಗುವ ಸುಖವನ್ನು ಹೆಚ್ಚು ಹೆಚ್ಚು ಕಂಡುಕೊಳ್ಳುತ್ತಿರಬಹುದು! ಇಷ್ಟಕ್ಕೂ ಕಳೆದು ಹೋಗುವುದು ಎಂದರೆ ಏನನ್ನಾದರೂ ಅದರ ಬದಲಿಗೆ ಕೊಂಡುಕೊಳ್ಳುತ್ತಿರುತ್ತೇವೆ ಎಂದೇ ಅರ್ಥ. ‘ರೂಪಾಂತರ’ ಎಂದು ಮೇಲೆ ಹೇಳಿದ್ದನ್ನು ನೆನಪಿಸಿಕೊಂಡರೆ ಇದು ಅರ್ಥವಾದೀತು.

ಆಧುನಿಕ ಸೈಕಾಲಜಿ ಅಂದರೆ ವರ್ತನವಿಜ್ಞಾನವೂ ಇದನ್ನೇ ಸಲಹಿಸುತ್ತದೆ. ನಮ್ಮ ಸಂವಾದಗಳ ವೈಖರಿಯಿಂದ ನಾವು ಸಿಹಿಘಾತವನ್ನೋ ಕಹಿಘಾತವನ್ನೋ ನೀಡುತ್ತಿರುತ್ತೇವೆ. ಕಹಿಘಾತವನ್ನು ನೀಡಿ, ಸಿಹಿಘಾತವನ್ನು ನಿರೀಕ್ಷಿಸಿ ದುಃಖಿಸುತ್ತೇವೆ. ಯಾವಾಗಲೂ ಕ್ಯಾತೆ ತೆಗೆಯುವ, ಇನ್ನೊಬ್ಬರನ್ನು ಹೀಯಾಳಿಸುವ, ತಾನು ಮಾಡಿದ್ದೇ ಸರಿ ಎಂದು ಹಠ ಹಿಡಿಯುವ, ಎದುರಿನವರ ಮಾತನ್ನು ತಾಳ್ಮೆಯಿಂದ ಆಲಿಸದೇ ಜೋರು ದನಿಯಲ್ಲಿ ವಾದಿಸಿ, ಜಗಳಕ್ಕೆ ನಿಲ್ಲುವ ಮನೋಧರ್ಮವನ್ನು ನಾವು ಬೆಳೆಸಿಕೊಂಡಿದ್ದೇವೆಯೇ ಹೊರತು ಇದೇನೂ ಆನುವಂಶೀಯವಲ್ಲ! ಅದಕ್ಕಾಗಿಯೇ ಯಾವಾಗ ಏನು ಮಾತಾಡಬೇಕೆಂಬುದನ್ನು ಅರಿಯದವರು ಏನೇನೋ ಮಾತಾಡಿ ಸಮಸ್ಯೆಯನ್ನು ನಿರ್ಮಿಸಿಕೊಳ್ಳುತ್ತಾರೆ. ಮಾತೇ ಮುತ್ತು; ಮಾತೇ ಮೃತ್ಯು ಎಂಬುದು ಸರ್ವಕಾಲಕ್ಕೂ ಸರಿಯಾದ ಮಾತು. ಅದಕಾಗಿಯೇ ಕೆಲಸದಲ್ಲಿ ಕಳೆದು ಹೋಗುವ ಸುಖವನ್ನೂ ಅದರ ದಾರಿಯನ್ನೂ ಕಂಡುಕೊಂಡರೆ ನಮ್ಮ ಬದುಕು ಆನಂದದ ಅರಮನೆಯಾದೀತು; ಅದಲ್ಲದೇ ಬರಿದೇ ಮಾತಿನಲ್ಲೇ ‘ಕೊಚ್ಚಿ ಕೊಳ್ಳು’ ತ್ತಿದ್ದರೆ ಸಂಬಂಧಗಳು ಹಳಸಿ, ದುರ್ನಾತ ಬೀರುವ ಸೆರೆಮನೆಯಾದೀತು. ಹಿಂದಿನ ಕಾಲದಲ್ಲಿ ಇಂಥವನ್ನೆಲ್ಲ ಧರ್ಮಶಾಸ್ತ್ರಗಳೂ ಅದರ ವಿಧಿ ನಿಷೇಧಗಳೂ ಮಂದಿಯನ್ನು ‘ಎಜುಕೇಟ್’ ಮಾಡಿ, ಮೃದುಗೊಳಿಸಿ, ಕಾಯಕದಲ್ಲಿ ಕೈಲಾಸವಿದೆ ಎಂಬುದನ್ನು ಅಕ್ಷರಶಃ ಧರಿಸಿ, ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ನೆರವೀಯುತ್ತಿದ್ದವು. ವಾಸ್ತವವಾಗಿ ಮತಧರ್ಮಗಳು ಪ್ರಾಚೀನ ಕಾಲದ ಸೈಕಾಲಜಿಯಾಗಿ ತನ್ನದೇ ಆದ ಪಥಗಳಲ್ಲಿ ಕೌನ್ಸೆಲಿಂಗ್ ಮಾಡಿ ವ್ಯಕ್ತಿಯನ್ನು ಹೆಚ್ಚು ಧಾರ್ಮಿಕಗೊಳಿಸಿ, ಸಮುದಾಯವನ್ನು ಸಹ್ಯಗೊಳಿಸುವ ದೃಷ್ಟಿಯಿಂದಲೇ ಕಾರ‍್ಯಾಚರಿಸುತ್ತಿದ್ದವು. ಕಾಲಾ ನಂತರ, ಅದನ್ನೊಂದು ವ್ಯಾಪಾರವಾಗಿಸಿ, ಅಂಧಶ್ರದ್ಧೆಗಳನ್ನು ತುರುಕಿ, ಕಂದಾಚಾರಗಳ ಕಾರ್ಖಾನೆಯಾಗಿಸಿ, ಮೌಢ್ಯದ ಮಾಲೀಕರನ್ನಾಗಿಸಿದ್ದು ನಾವೇ ವಿನಾ ಧರ್ಮಗಳಲ್ಲ. ಧರ್ಮವೆಂದರೆ ಧರಿಸುವುದು. ದಯೆ, ಮರುಕ, ನೆರವು, ಉಪಕಾರ ಸ್ಮರಣೆ, ದಾನ, ದತ್ತಿಗಳೇ ಮೊದಲಾದ ಮಾನವತಾ ಮಾರ್ಗಗಳಿಂದ ಬದುಕು ನಡೆಸುವುದು. ತನ್ನಂತೆಯೇ ಪರರು ಎಂಬ ಹೃದಯವೈಶಾಲ್ಯವನ್ನು ಹೊಂದುವುದು ಎಂದರ್ಥ. ಹರಿಯುವ ಗಂಗೆಯನ್ನು ಮಲಿನ ಮಾಡಿದವರೂ ನಾವೇ; ಮಲಿನವಾಯಿತೆಂದು ಥೂಕರಿಸುವವರೂ ನಾವೇ! ಯಾವುದನ್ನೇ ಆಗಲಿ ವೃತ್ತದಾಚೆಗೆ ನಿಂತು ಟೀಕಿಸುವುದು ಸುಲಭ. ವೃತ್ತದೊಳಗೇ ನಾನೂ ನಿಂತಿದ್ದೇನೆಂಬ ಪರಿಜ್ಞಾನದಿಂದ ಆಲೋಚಿಸುವುದು ಕಷ್ಟ. ಇದನ್ನೇ ವಿವೇಕದ ಹಾದಿ ಎನ್ನುವುದು.

ಬರೆಹದ ಮೊದಲಲ್ಲಿ ಪ್ರಸ್ತಾಪಿಸಿದ ವಿಚಾರಕ್ಕೆ ಮರಳುವುದಾದರೆ ಈ ಅಖಂಡ ವಿಶ್ವದಲ್ಲಿ ನಾನೊಂದು ಧೂಳಿನ ಕಣ; ಅಂಥ ಕಣದ ಲಕ್ಷ ಕೋಟಿ ಭಾಗದ ಒಂದಂಶ. ನನ್ನೊಳಗೆ ಈ ವಿಶ್ವವಿದೆ; ನಾನೂ ಈ ವಿಶ್ವದ ಒಂದು ಭಾಗ ಎಂಬ ತಾತ್ತ್ವಿಕತೆಯನ್ನು ಅರಿಯುವುದೇ ಅಧ್ಯಾತ್ಮ. ಇದು ಎಲ್ಲ ಮತಧರ್ಮ ಮತ್ತು ಆಚರಣೆಗಳಿಂದಾಚೆ ಇರುವ ಶುದ್ಧ ತಿಳಿವಳಿಕೆ. ಹಾಗಾಗಿ ಈ ಜೀವ ಜೀವನದ ಕ್ಷಣಿಕತೆ ಮತ್ತು ಆಕಸ್ಮಿಕತೆ ನಮಗೆ ಮನವರಿಕೆಯಾದರೆ ನಾವು ಮಾಡುವ ಕೆಲಸಗಳಲ್ಲಿ ಕಳೆದು ಹೋಗುತ್ತೇವೆ; ಅದರ ಸುಖವನ್ನುಂಡು ಹಾಯಾಗಿರುತ್ತೇವೆ. ಪ್ರಥಮತಃ ಆತ್ಮಸಂತೋಷಕ್ಕಾಗಿ ಏನಾದರೊಂದು ಕೆಲಸಗಳನ್ನು ಕೈಗೊಳ್ಳುತ್ತಿರುತ್ತೇವೆ, ಅದು ಹತ್ತೂ ಜನಕ್ಕೆ ಅನುಕೂಲ ಮಾಡಿದರೆ, ಅವರ ಬದುಕಿಗೆ ನೆರವಾದರೆ ಅಥವಾ ಬೆಳಕಾದರೆ ಅಂಥ ಕಾಯಕವೇ ನಿಜವಾದ ಕೈಲಾಸ. ಕೆಲಸಗಳಲ್ಲಿ ಕಳೆದು ಹೋಗುವುದನ್ನು ಅಭ್ಯಾಸ ಮಾಡಿಕೊಂಡರೆ ನಮಗೆ ಬೇರೊಂದು ಲೋಕವೇ ಪರಿಚಯವಾಗುತ್ತದೆ. ಇಂಗ್ಲಿಷಿನಲ್ಲಿ Workaholic ಎಂಬ ಪದವಿದೆ; ಕಾಯಕವ್ಯಸನಿ ಎಂದಿದನ್ನು ಕರೆಯಬಹುದು! ಇಂಥ ಕಾಯಕವ್ಯಸನಿಗಳಿಗೆ ಈ ಕಳೆದು ಹೋಗುವ ಸುಖದ ಪರಿಚಯವಿರುತ್ತದೆ. ಏನಾದರೊಂದು ಕೆಲಸ ಮಾಡುತ್ತಿದ್ದರೇನೇ ಅವರಿಗೆ ಸಮಾಧಾನ ಮತ್ತು ನಿರಾಳ. ಏಕೆಂದರೆ ಅವರು ಸೋಮಾರಿಯಾಗಿ ಕುಳಿತು, ಕಾಲ ಕಳೆಯುವ ಪೈಕಿಯಲ್ಲ! ಬೇರೆಲ್ಲ ವ್ಯಸನಗಳಿಗಿಂತ ಈ ವ್ಯಸನ ಎಷ್ಟೋ ಒಳ್ಳೆಯದು ಮತ್ತು ರಚನಾತ್ಮಕವಾದುದು ಎಂದೇ ನಾನು ಭಾವಿಸಿರುವೆ. ಆದರೆ ಹೀಗೆ ಕೆಲಸಗಳಲ್ಲಿ ಕಳೆದು ಹೋಗುವ ಸುಖವನ್ನು ಸೂರೆಗೊಳ್ಳಲು ಒಂದಲ್ಲಾ ಒಂದು ಕೆಲಸಗಳಲ್ಲಿ ತದೇಕವಾಗಿ ಮಗ್ನರಾದವರು ಆನಂತರ ಅಹಂಕಾರದಿಂದ ಮೆರೆಯಬಾರದು ಅಷ್ಟೇ. ‘ಮಾಡಿದೆನೆಂಬುದು ಮನದಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ! ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ, ಮಾಡಿದೆನೆಂಬುದು ಮನದಲಿ ಇಲ್ಲದಿದ್ದಡೆ ಬೇಡಿತ್ತನೀವನು ಕೂಡಲಸಂಗಮದೇವ’ ಎಂದಿದ್ದಾರೆ ಅಣ್ಣ ಬಸವಣ್ಣನವರು.

-ಡಾ. ಹೆಚ್ಚೆನ್ ಮಂಜುರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x