ಮಕ್ಕಳು ಕತೆಗಳು: ಸಿಂಧು ಭಾರ್ಗವ್

ಅದೃಷ್ಟದ ಪಾರಿವಾಳ

ಮಹದೇವಪುರ ಎಂಬ ಒಂದು ಸುಂದರವಾದ ಹಳ್ಳಿ. ದಟ್ಟ ಅರಣ್ಯದಿಂದ ಕೂಡಿದ ಹಳ್ಳಿಯದು. ಎಲ್ಲರೂ ಕೃಷಿಕರು, ರೈತರಾಗಿದ್ದರು. ಸುಂದರ ಮತ್ತು ರಮೇಶ ಇಬ್ಬರು ಅಣ್ಣತಮ್ಮಂದಿರು. ಅಣ್ಣ ಶ್ರಮಜೀವಿ. ಹೊಲದಲ್ಲಿ ಪ್ರತಿದಿನ ಕೆಲಸ‌ ಮಾಡುತ್ತಿದ್ದನು. ಅವನಿಗೆ ಹೆಂಡತಿ ಮಾಲಾ ಕೂಡ ಸಹಾಯ ಮಾಡುತ್ತಿದ್ದಳು. ದವಸಧಾನ್ಯಗಳನ್ನು ಮಾರಿ ಬಂದ ಹಣದಿಂದ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದರು. ಅವನಿಗೆ ಹಣಕಾಸಿಗೆ ಏನೂ ಸಮಸ್ಯೆ ಇರಲಿಲ್ಲ. ಊರಿಗೆ ಶ್ರೀಮಂತ ರೈತನಾಗಿದ್ದ. ಆದರೆ ತಮ್ಮ ರಮೇಶ ಆಲಸ್ಯದ ಮನುಷ್ಯ ‌. ಅಣ್ಣನ ದುಡಿಮೆಯಲ್ಲಿಯೇ ಬದುಕುತ್ತಿದ್ದ. ಆಗ ಅತ್ತಿಗೆಯಾದ ಮಾಲಾಗೆ ತುಂಬಾ ಚಿಂತೆಯಾಯಿತು. ಗಂಡನ ಕರೆದು “ಇವನಿಗೆ ಮದುವೆ ಮಾಡಿಸಿದರೆ ಜವಾಬ್ದಾರಿ ಬರಬಹುದು. ದುಡಿಮೆ ಮಾಡಲು ಆರಂಭಿಸಬಹುದು, ಅವನ ಬಗ್ಗೆ ತುಂಬಾ ಚಿಂತೆಯಾಗುತ್ತಿದೆ” ಎಂದು ಹೇಳಿದಳು. ಅಣ್ಣನಿಗೂ ಹೌದೆನಿಸಿತು. ಮಡದಿಯ ಕಾಳಜಿಗೆ ಮೆಚ್ಚುಗೆ ಸೂಚಿಸಿದ.

ಅಣ್ಣನ ಮಾತಿನಂತೆ ರಮೇಶ ಮದುವೆಯಾದ. ಬಂದ ಸೊಸೆಗೆ ಒಂದೇ ವಾರದಲ್ಲಿ ಎಲ್ಲ ವಿಷಯ ತಿಳಿಯಿತು. ಅಣ್ಣ ಅತ್ತಿಗೆಯೇ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ, ನನ್ನ ಗಂಡ ಊಟ ಮಾಡುವುದು ಸುತ್ತುವುದು, ಮಲಗುವುದು ಬಿಟ್ಟರೆ ಅಣ್ಣನ ದುಡ್ಡಿನಲ್ಲಿಯೇ ಬದುಕುತ್ತಿದ್ದಾನೆ. ಹೇಗಾದರು ಮಾಡಿ ಆಸ್ತಿಯನ್ನು ಪಾಲು ಮಾಡಲು ಹೇಳಬೇಕು. ಫಲಭರಿತ ಹೊಲ ತನ್ನದಾಗಿಸಿಕೊಂಡು ನಾವೂ ಶ್ರೀಮಂತರಾಗಬೇಕು ಎಂದು ಯೋಚಿಸಿದಳು. ಅದರಂತೆ ಒಂದು ದಿನ ಮಾತಿಗೆ ಮಾತು ಬೆಳೆಸಿ ಜಗಳ ಮಾಡಿದಳು. ” ನಿಮ್ಮ ತಮ್ಮನಿಗೆ ಆಸ್ತಿ ಪಾಲು ಮಾಡಿ ಕೊಡಿ. ಎಷ್ಟು ದಿನ ನಿಮ್ಮ ಕೈಕೆಳಗೆ ಇರಬೇಕು..?? ” ಎಂದು ಜಗಳ ಮಾಡಿದಳು. ಸುಂದರನಿಗೆ ಬೇಸರವಾಯಿತು. ಯೋಚನೆ ಮಾಡುತ್ತ ಕುಳಿತನು. ಆಗ ಹೆಂಡತಿ ಮಾಲಾ ಬಂದು “ನನಗೆ, ನಿಮ್ಮ ನೋವು ಅರ್ಥವಾಗುತ್ತಿದೆ. ಅವಳು ಹೇಳುವುದರಲ್ಲೂ ಅರ್ಥವಿದೆ. ನೀವೇಕೆ ಮನೆ ಒಡೆಯುತ್ತಿದ್ದಾಳೆ ಎಂದು ಯೋಚಿಸುವಿರಿ….ನಿಮ್ಮ ತಮ್ಮನಿಗೂ ಜವಾಬ್ದಾರಿ ಬರಲಿ..” ಎಂದಳು.

ಒಲ್ಲದ ಮನಸ್ಸಿನಿಂದ ಅಣ್ಣನು ಫಲವತ್ತಾದ ಭೂಮಿಯನ್ನು ಬರೆದು ಕೊಟ್ಟನು. ಸುಂದರವಾದ ಮನೆ ಕಟ್ಟಿಕೊಟ್ಟನು. ಹೊಸದಾಗಿ ಬಂದ ಸೊಸೆಗೆ ಎಲ್ಲಿಲ್ಲದ ಸಂತೋಷವಾಯಿತು. ಈಗ ನಾನೇ ಶ್ರೀಮಂತಳು ಎಂದು ಕುಣಿದಾಡಿದಳು. ಹೊಲದ ಫಸಲನ್ನೆಲ್ಲ ಮಾರಿ ಹಣವನ್ನು ಬ್ಯಾಂಕಿನಲ್ಲಿ ಇಟ್ಟುಬಂದಳು. ಸುಂದರನ ಪಾಲಿನ ಭೂಮಿಯಲ್ಲಿ ಏನೂ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಕೂಡಿಟ್ಟ ಹಣವೆಲ್ಲ ವರ್ಷ ಕಳೆದಂತೆ ಖಾಲಿಯಾಗತೊಡಗಿತು. ಇದ್ದ ಮನೆಯನ್ನೂ ಮಾರುವ ಹಂತಕ್ಕೆ ಬಂದನು. ಆಗ ಅವನಿದ್ದ ಪುಟ್ಟ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡನು. ಪ್ರತಿರಾತ್ರಿ ಮನೆ ಹೊರಗೆ ಮಂಚದಲ್ಲಿ ಆಕಾಶ ನೋಡುತ್ತ ನಿದ್ದೆಗೆ ಜಾರುತ್ತಿದ್ದನು. ಹೀಗಿರುವಾಗ ಒಮ್ಮೆ ಬೆಳಿಗ್ಗೆ ಒಂದು ಪಾರಿವಾಳ ಅವನ ಮೈಮೇಲೆ ಸಣ್ಣ ಚೀಲವನ್ನು ಎಸೆದು ಹಾರಿಹೋಯಿತು. “ಮಾಲಾ ಮಾಲಾ…” ಎಂದ ಅವಸರವಾಗಿ ಕರೆದು ಆ ಚೀಲವನ್ನು ಬಿಡಿಸಲು ಹೇಳಿದನು. ನೋಡಿದರೆ ಒಂದಷ್ಟು ಬೀಜಗಳು ಹಾಗು ಚಿನ್ನದ ನಾಣ್ಯಗಳಿದ್ದವು. ಮಾಲಾಗೆ ಎಲ್ಲಿಲ್ಲದ ಖುಷಿಯಾಯಿತು. “ನೋಡಿದಿರಾ…. ನಮ್ಮ ಬಡತನ ನೋಡಿ ಆ ದೇವರೇ ಸಹಾಯ ಮಾಡಿರಬಹುದು. ಬೇಗ-ಬೇಗನೆ ಉಳುಮೆ ಮಾಡಿ ಈ ಬೀಜಗಳನ್ನು ಬಿತ್ತಿ ಬನ್ನಿ…” ಎಂದಳು. ಅದಕ್ಕೆ ಸುಂದರ್ ” ನಮಗೆಲ್ಲಿಯಾ ಹೊಲ, ಫಲವತ್ತಾದ ಭೂಮಿಯನ್ನು ತಮ್ಮನು ಪಡೆದ. ನಮಗಿರುವ ಭೂಮಿಯಲ್ಲಿ ಏನೂ ಬೆಳೆ ಬೆಳೆಯದು ಮಾಲಾ….” ಎಂದು ಮರುಗಿದ. ಆಗ ಥಟ್ ! ಎಂದು ಉಪಾಯ ಬಂದಿತು. “ನಾವಿರುವ ಈ ಮನೆಯ ಹಿಂಬದಿಯಲ್ಲೇ ಈ ಬೀಜಗಳನ್ನು ಬಿತ್ತೋಣ… ಚೆನ್ನಾಗಿ ಆರೈಕೆ ಮಾಡೋಣ. ಖಂಡಿತ ಫಲ ಸಿಗುತ್ತದೆ… ಯೋಚಿಸದಿರಿ…” ಎಂದು ಧೈರ್ಯ ತುಂಬಿದಳು. ಹಾಗೆಯೇ ಮಾಡಿದರು. ಒಂದಷ್ಟು ತಿಂಗಳಲ್ಲಿ ಸಾಕಷ್ಟು ಚೀನಿಗುಂಬಳಕಾಯಿ (ಸಿಹಿಗುಂಬಳಕಾಯಿ) ಮಾಮೂಲಿ ಗುಂಬಳಕಾಯಿಯ ಆಕಾರಕ್ಕಿಂತ ದೊಡ್ಡದಾಗಿ, ಫಲಭರಿತ ಪುಷ್ಟಿಕರವಾಗಿ ಬೆಳೆದಿದ್ದವು. ಅವೆಲ್ಲವನ್ನೂ ಮಾರಾಟ ಮಾಡಿ ಬಂದನು. ಅವರು ಹೊಸದಾದ ಜೀವನ ನಡೆಸಲು ಶುರುಮಾಡಿದರು. ಆದರೆ ತಮ್ಮನು ಮಾತ್ರ ಆಲಸ್ಯವನ್ನು ಮುಂದುವರಿಸಿ ಅಣ್ಣ ನೀಡಿದ ಫಲವತ್ತಾದ ಭೂಮಿಯಲ್ಲಿ ಕೂಡ ಏನೂ ಬೆಳೆ ಬೆಳೆಯದೇ ಖಾಲಿಬಿಟ್ಟು ಮಡದಿಯ ಕೈಯಲ್ಲಿ ಚೀಮಾರಿ ಹಾಕಿಸಿಕೊಂಡನು.

ಈ ಕತೆಯ ನೀತಿ: ಕಷ್ಟ ಕಾಲದಲ್ಲಿ ಆತ್ಮವಿಶ್ವಾಸ ಜೊತೆಗಿರಬೇಕು. ಎಂದಿಗೂ ಅಧೀರರಾಗಬಾರದು. ಹಾಗೆಯೇ ಆಲಸ್ಯತನ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ.


ಪರಿಶ್ರಮಕ್ಕೆ ತಕ್ಕ‌‌ ಫಲ ಸಿಕ್ಕೇ ಸಿಗುತ್ತದೆ

ರಾಮಾಪುರವೆಂಬ ಗ್ರಾಮವು ಬರಗಾಲ ಪೀಡಿತ ಪ್ರದೇಶವಾಗಿ ಬದಲಾಗಿತ್ತು. ಅನೇಕ‌ ಯುವ ರೈತರು ನಗರದ ಕಡೆಗೆ ಗುಳೆ‌ ಹೋಗುತ್ತಿದ್ದರು.‌ ಸೋಮಣ್ಣ ಮಾತ್ರ ತನ್ನ ಹೊಲದಲ್ಲಿಯೇ ಉತ್ತು ಬಿತ್ತು ಆಗಲೋ ಈಗಲೋ ಬರುವ ಮಳೆಗೆ ಕಾದು ಬೆಳೆ ಬೆಳೆಸುತ್ತ ಇದ್ದ. ಅದರಿಂದ ಲಾಭವೇನೂ ಬರದಿದ್ದರೂ ಅವನ ಜೀವನ ನಡೆಸಲು ‌ಸಾಕಾಗುತ್ತಿತ್ತು. ಹೀಗಿರುವಾಗ ಅವನ‌ ಮಗ ರಾಜೇಶ ತುಂಬಾ ಆಸಲ್ಯದ ಯುವಕ. ತಂದೆ ಅಷ್ಟು ಕಷ್ಟಪಟ್ಟು ದುಡಿದರೂ ಅವರ ಸಹಾಯಕ್ಕೆ ಹೋಗದೇ ಬೇರೆ ಉದ್ಯೋಗವನ್ನು ಮಾಡದೇ ಮನೆಯಲ್ಲೇ ಕುಳಿತಿರುತ್ತಿದ್ದ. ಅಪ್ಪ ಅಮ್ಮನಿಗೆ ಇದೇ ತಲೆ ನೋವಾಗಿ ಪರಿಣಮಿಸಿತು.

ಸೋಮಣ್ಣ ಮುದುಕನಾಗಿದ್ದ. ಒಮ್ಮೆ ಹೊಲದಲ್ಲಿ ಕೆಲಸ ಮಾಡಿ ಬಂದಾಗ ವಿಪರೀತ ಜ್ವರದಿಂದ ಬಳಲುತ್ತಿದ್ದ. ಹೆಂಡತಿ ಔಷಧವನ್ನು ಕೊಟ್ಟು ವಿಶ್ರಾಂತಿ ಪಡೆಯಲು ಹೇಳಿದಳು. ಆದರೆ ಅವನು‌ ಕೇಳಲಿಲ್ಲ. ನಾನು‌ ಕೆಲಸ‌ ಮಾಡದೇ ಕುಳಿತರೆ ಇನ್ಯಾರು ಮಾಡುವುದು. ನಾನು ಸತ್ತರೂ ಸರಿಯೇ ಕೆಲಸ ಮಾತ್ರ ನಿಲ್ಲಿಸಲಾರೆ ಎಂದ. ಮರುದಿನ ಬೆಳಿಗ್ಗೆ ಜ್ವರವಿದ್ದ ಕಾರಣ ಏಳಲು ಸಾಧ್ಯವಾಗಲಿಲ್ಲ. ಜ್ವರ ಕೆಮ್ಮು ಹೆಚ್ಚಾಯಿತು. ಮಗನಿಗೆ ಇದಾವುದರ ಪರಿವೂ ಇಲ್ಲದೇ ತನ್ನ ಪಾಡಿಗೆ ತಾನಿದ್ದ.

ಸೋಮಣ್ಣನನ್ನು ನೋಡಲು ಪಕ್ಕದ ಊರಿನ ಗೆಳೆಯ ಮಾದಪ್ಪ ಬಂದಿದ್ದರು. ಗೆಳೆಯನ ಬಳಿ ತನ್ನೆಲ್ಲ ನೋವನ್ನು ಹೊರಹಾಕಿದ. ಆಗ ಮಾದಪ್ಪ ಒಂದು ಉಪಾಯ ಹೇಳಿ ಹೋದನು.
ಸಂಜೆ ಸೋಮಣ್ಣ, ಮಗನನ್ನು ಕರೆದು ” ಮಗ… ನೀನು ಏಕೆ ಹೊಲದಲ್ಲಿ ಕೆಲಸ‌ ಮಾಡುತ್ತಿಲ್ಲ. ನನಗೆ ಏಕೆ ಸಹಾಯ ಮಾಡುತ್ತಿಲ್ಲ..” ಎಂದು‌ ಕೇಳಿದ.
ಆಗ ಮಗ ” ಅದರಲ್ಲಿ ಏನು ಬೆಳೆ ಬರುತ್ತದೆ?! ನೀನೇ ಬೆನ್ನು ಬಗ್ಗಿಸಿ ದುಡಿಯುತ್ತೀಯಲ್ಲಾ… ಲಾಭವಂತೂ ಇಲ್ಲ..‌” ಎಂದ.
ಹಾಗಲ್ಲ‌ ಮಗಾ… ನನ್ನ ತಂದೆ ಒಂದು ಮಾತು ಹೇಳಿದ್ದರು. ಆ ಭೂಮಿಯಲ್ಲಿ‌ ನಿಧಿಯಿದೆ ಎಂದು
ಹಾಗಾಗಿ ನಾನು ದಿನವೂ ಭೂಮಿಯನ್ನು ಅಗೆಯುತ್ತಿದ್ದೇನೆ. ಒಂದಲ್ಲ ಒಂದು ದಿನ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ನಾನೀಗ ಮುದುಕನಾದೆ. ಅದಕ್ಕೆ‌ ಈ ಕೆಲಸವನ್ನು ನಿನಗೆ ವಹಿಸುತ್ತಾ‌ ಇರುವೆ” ಎಂದನು.
ಮಗನಿಗೆ ಒಳಗೊಳಗೆ ಹರುಷವಾಯಿತು. ರಾತ್ರಿ ಗುದ್ದಲಿ ಹಿಡಿದು ಹೊಲಕ್ಕೆ ನಡೆದನು. ಕಷ್ಟಪಟ್ಟು ಹೊಲವನ್ನು ಅಗೆಯಲು ಪ್ರಾರಂಭಿಸಿದನು. ಅವನಿಗೆ ಹೇಗೆ ಕೆಲಸ ಮಾಡಬೇಕೆಂದು ತಿಳಿದಿರಲಿಲ್ಲ. ಒಂದು ವಾರದೊಳಗೆ ಹೊಲವು ಕೆರೆಯಾಗಿ ಬದಲಾಗಿತ್ತು. ಅಷ್ಟರವರೆಗೆ ಮಣ್ಣು ತೆಗೆದು ಹೊಂಡ ಮಾಡಿದ್ದನು. ಆದರೆ ಅವನಿಗೆ ನಿಧಿ ಸಿಗಲೇ ಇಲ್ಲ. ವರುಷಗಳು ಕಳೆದವು.ಸೋಮಣ್ಣ ಮರಣ ಹೊಂದಿದನು. ಆ ವರುಷ ಅದೃಷ್ಟವೆಂಬಂತೆ ಹಳ್ಳಿಯಲ್ಲಿ ಧೋ..!! ಎಂದು ಮಳೆ ಸುರಿಯಲಾರಂಭಿಸಿತು. ನೆರೆ ಬಂದು ಸೋಮಣ್ಣನ ಹೊಲದಲ್ಲಿದ್ದ ಕೆರೆಗಳೆಲ್ಲ ತುಂಬಿದವು. ಮುಂದೆ ಎಂದಿಗೂ ನೀರಿನ ಸಮಸ್ಯೆ ಎದುರಾಗಲೇ ಇಲ್ಲ. ಇದನ್ನು ಗಮನಿಸಿದ ಜಿಲ್ಲಾಡಳಿತ “ಗ್ರಾಮದ ಒಳಿತಿಗಾಗಿ ತನ್ನ ಹೊಲವನ್ನೆ ಕೆರೆಯನ್ನಾಗಿಸಿ ಊರವರ ಸೇವೆಗೆ ದಾನ ಮಾಡಿದ ರಾಜೇಶ ಎಂದು ಘೋಷಿಸಿ ಸನ್ಮಾನ ಮಾಡಿ ಗೌರವಿಸಿದರು”

ನೀತಿ : ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ.

ಸಿಂಧು ಭಾರ್ಗವ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x