ಕವಿತೆಯೊಳಗೊಬ್ಬ ಅಪ್ಪ
ಮೊನ್ನೆ ಮೊನ್ನೆಯ ತನಕ
ಚೆನ್ನಾಗಿ ನಗು ನಗುತಲೇ
ಮಾತನಾಡುತ್ತಿದ್ದ ಅಪ್ಪ
ಯಾಕೋ ಸಾಯಂಕಾಲ
ಮಾತೇ ನಿಲ್ಲಿಸಿದ…..
ನಿಂತುಹೋಗಿರುವದು ಅಪ್ಪನ
ಮಾತುಗಳು ಅಥವಾ ಉಸಿರು ಅನ್ನುವುದು
ಮಲಗಿದ ಅಪ್ಪನ ಹಾಸಿಗೆಯ ಮುಂದೆ
ಕೂತ ಅಕ್ಕನಿಗೂ ತಂಗಿಗೂ ತಿಳಿಯಲಿಲ್ಲ….
ಎರಡೇ ದಿನ ಹೋಗಿ ಬರುವುದಾಗಿ
ಅಪ್ಪನಿಗೆ ಹೇಳಿ ಹೋಗಿ ಮರಳಿ ಬರುವಾಗ
ಅರ್ಧ ದಾರಿಯಲ್ಲೇ ಮುಟ್ಟಿದ ಹೆತ್ತ
ಮಗನಿಗೂ ಗೊತ್ತಾಗಲಿಲ್ಲ…….
ಕಾಯಿಲೆ ಗುಣವಾಗಿ ಅಪ್ಪ ಬೇಗನೆ
ಮನೆ ಸೇರುತ್ತಾನೆಂಬ ಆಸೆಯಲ್ಲಿ ಅಮ್ಮ,
ಅಮ್ಮನಿಗೆ ಹೇಗೆ ಹೇಳಬೇಕೋ
ಅನ್ನುವುದು ಅಪ್ಪನ ಪ್ರೀತಿಯ ಸೊಸೆಗೂ
ಅರ್ಥವಾಗಲಿಲ್ಲ…….
ಅಜ್ಜನ ಬಾಲ ಹಿಡಿದು ಓಡಾಡುವ
ಮೊಮ್ಮಗ ಮತ್ತೆ ಮತ್ತೆ ಕೇಳುತ್ತಾನೆ
ಅಜ್ಜ ಮರಳಿ ಯಾವಾಗ ಬರುತ್ತಾನೆ…?
ಮೊನ್ನೆ ಮೊನ್ನೆಯ ತನಕ ನೂರಾರು ಸಲ
ಆ ಕೋಣೆಯಲ್ಲಿ ಓಡಾಡುತ್ತಿದ್ದ ಅಪ್ಪ
ಇಂದು ಹೆಣವಾಗಿ ಮಲಗಿದ್ದಾನೆ…..
–ನರೇಶ ನಾಯ್ಕ ದಾಂಡೇಲಿ.
ಅಮ್ಮ ನೆನಪಾದಳು
ವರ್ಷದ ತಿಥಿಗಾಗಿ ಗೋಡೆಯ ಮೇಲಿನ ಫೋಟೋದ ಹಾರ ಬದಲಿಸುವಾಗಲೂ ಅಲ್ಲ,
ಮನೆ ಸಾರಿಸಿ ತೊಳೆದು ಸಿಂಗರಿಸುವಾಗಲೂ ಅಲ್ಲ,
ನಾಳೆಯ ಕಾರ್ಯಕ್ಕೆ ಪುರೋಹಿತರಿಗೆ ಹೇಳಿ ದಕ್ಷಿಣೆಯ ಕೊಡುವಾಗಲೂ ಅಲ್ಲ
ಶ್ರದ್ಧಾಕ್ಕೆ ಕರಿ ಎಳ್ಳು, ಸಮಿತ್ತು, ಚಂದನದ ತುಂಡು ,ಪತ್ರಾವಳಿ, ಊದುಬತ್ತಿ, ಜನಿವಾರ,
ಗೋಮೂತ್ರ, ಕುಂಕುಮ, ಅರಿಷಿಣ ತರುವಾಗಲೂ ಅಲ್ಲ…!
ಆಫೀಸಿನಲ್ಲಿ ರಜೆ ಚೀಟಿ ಬರೆದು ಕೊಡುವಾಗಲೂ ಅಲ್ಲ,
ಹೆಂಡ್ತಿ ಮಕ್ಕಳ ಸಮೇತರಾಗಿ ಹೋಗಿ ಅಮ್ಮ ಹೆಸರಿನಲ್ಲಿ
ಮನೆದೇವರಿಗೆ ಹಣ್ಣು ಕಾಯಿ ಮಾಡಿಸುವಾಗಲೂ ಅಲ್ಲ,
ಅವಳ ಹೆಸರಿನಲ್ಲಿ ಹಳದಿ ತೋಪು ಸೆರಗಿನ ಸೀರೆಯನ್ನು
ದಾನ ಕೊಡಲು ಖರೀದಿಸಿದಾಗಲೂ ಅಲ್ಲ…!
ಎಂದೂ ನನ್ನ ಹುಟ್ಟು ಹಬ್ಬ ಆಚರಿಸಿದ ನಾನು ಅವಳ ಹುಟ್ಟುಹಬ್ಬ ದಿನ
ಗೆಳೆಯರ ಬಳಗಕ್ಕೆ ಊಟ ಕೊಡಿಸುವಾಗಲೂ ಅಲ್ಲ
ಓದಿಗೆ ತಕ್ಕ ಕೆಲಸ ಸಿಕ್ಕು ಸಿಹಿ ಹಂಚುವಾಗಲೂ ಅಲ್ಲ
ಮೊದಲ ಹೆಣ್ಣು ಮಗು ಹುಟ್ಟಿ ಅದಕ್ಕೆ ಅಮ್ಮನ ಹೆಸರು ಇಟ್ಟಾಗಲೂ ಅಲ್ಲ…!
ಅಮ್ಮನಷ್ಟೇ ಪ್ರೀತಿ ನೀಡಿ ತನ್ನ ಸ್ವಂತ ಮಗನಂತೆ ಬೆಳಸಿದ
ನನ್ನಮ್ಮ ವಾರಿಗೆಯ ನನ್ನ ಗೆಳೆಯನ ತಾಯಿಯನ್ನು ವೃದ್ಧಾಶ್ರಮದಲ್ಲಿ
ಕಂಡಾಗ ನನ್ನ ಅಮ್ಮ ಮತ್ತೆ, ಮತ್ತೆ ನೆನಪಾದಳು…!
ಪಕ್ಕದಲ್ಲಿ ನಿಂತ ಹೆಂಡ್ತಿ ಕೈ ನನ್ನ ಭುಜ ಸವರಿತ್ತು, ಕಣ್ಣಿನಲ್ಲಿ ನೀರಿತ್ತು,
ರೀ.. ಅಮ್ಮ ಇದ್ದಿದ್ದರೆ ನಾನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ,
ನನ್ನ ಗಂಟಲು ಉಬ್ಬಿತ್ತು ಕಣ್ಣು ಮಂಜಾಗತೊಡಗಿತು…!
ಗೆಳೆಯ ಸ್ಥಿತಿವಂತ ವಾಗಿದ್ದರೂ ಯಾಕೆ ಅವರಮ್ಮ
ವೃದ್ಧಾಶ್ರಮದಲ್ಲಿ ಯಾಕಿಟ್ಟ?
ಪ್ರಶ್ನೆಗೆ ಮನಸಿನಲ್ಲಿ ಉತ್ತರ ಹುಡುಕಾಡಲು ತಡಕಾಡಿದೆ
ಆಗ ಅಮ್ಮ ಮತ್ತೆ ನೆನಪಾದಳು..!
–ವೃಶ್ಚಿಕ ಮುನಿ, ಪ್ರವೀಣಕುಮಾರ ಸುಲಾಖೆ.
ಸ್ಥಿತ್ಯಾಂತರ
ಬಿಟ್ಟ ಕಣ್ಣು ನೆಲವ ಕಚ್ಚಿ
ಹುಡುಕ ಹೊರಟಿದೆ
ರೊಟ್ಟಿಯ ಚೂರು, ಹಸಿವು ಹೆಚ್ಚಿ
ಆಗಸ ಹೊತ್ತ ಹಾಗೆ ನಡಿಗೆ
ಅತ್ತ- ಇತ್ತ, ತೂಗಿ – ಬಾಗಿ
ಹತ್ತಿ ಇಳಿದಂತೆ
ಬದುಕ ಏರು – ಪೇರು
ಮುಟ್ಟಿದಷ್ಟು ಕಷ್ಟ ಗಟ್ಟಿಯಾಗಿ
ಅನುಭವವೆ ಶಕ್ತಿಯಾಗಿ
ಕಂಬನಿಯ ಕಡಲು ಬತ್ತಿ
ಖಾಲಿಯಾಗಿ
ನಡೆದಿದೆ ನೆರಳು
ನೋವ ಕೊರಳ ಪಿಡಿದು
ಏಕಾಂಗಿಯಾಗಿ
ಸಾವನು ಮಿಡಿದು
ಹಗಲಿಗೊಂದಷ್ಟು ಬಣ್ಣ
ಸೂರ್ಯ ಬಳಿದ ಸುಣ್ಣ
ಇರುಳಿಗೆ ಹಚ್ಚುವವರಾರು ಕಣ್ಣ
ಕುರುಡು ಭಾವದ
ಒಂಟಿ ರೆಕ್ಕೆಯ ಹಕ್ಕಿ
ಮೂಕ ಮನ
ಮರವಿಲ್ಲ, ಬಳ್ಳಿ ಇಲ್ಲ
ಅಗಸವಿಲ್ಲ, ಬಯಕೆ ಸಲ್ಲ
ಬಯಲೇ ಎಲ್ಲಾ
ನೆಚ್ಚಿಕೊಂಡದ್ದು ನಾಳೆಗಿಲ್ಲ
ಒಲವ ಸುಮ ಬಾಳ್ವೆಗಿಲ್ಲ
ಹರಿದ ಅರಿವೆಯ ನಡುವೆ
ನರ್ತಿಸುವ ದಾರಿದ್ರ್ಯ!
ಬೆಂಕಿಗೆ ಬಿದ್ದ ಹಾವಿನಂತೆ
ಅಬ್ಬಬ್ಬಾ… ಅದೆಂಥ ರೌದ್ರ್ಯ?
ಹೊತ್ತು ಮುಳುಗುತ್ತೆ
ಕನ್ನಡಿ ತಿರುಗಿದಂತೆ
ಕತ್ತಲ ಹಿಮ ಸುರಿಯುತ್ತೆ
ಕಂಡದ್ದು, ಉಂಡದ್ದು
ಮಾಡಿದ್ದು, ಕೇಳಿದ್ದು
ಎಲ್ಲವೂ ಅತ್ತಲೇ ಸರಿಯುತ್ತೆ
ಕಾಲ ಎಂಬ ನರಿ
ಕುರಿಯ ವೇಷ ತೊಟ್ಟು
ನಶ್ವರತೆಯ ಪಾಠ ಹೇಳಿ ಚಪ್ಪಾಳೆ ತಟ್ಟಿ ನಗುತ್ತೆ
ಬೆತ್ತಲೆಯ ಹಾಡು
ಸುಖದ ರಾಗವನ್ನರಸುವಾಗ
ಕಾಣದ ಬೆರಳು
ಕಾಣುವ ನೆರಳಿಗಂಟಿ ಕರಗುತ್ತದೆ
ಮತ್ತದೇ ಜಾವ, ಋತು ಸ್ರಾವ
ಬಂಜೆಗೆ ಹುಟ್ಟಿದ ಮಕ್ಕಳನ್ನು
ನಂಬುವವರಾರು ಇಲ್ಲ
ಸಾವಿಗೆ ಧಿಕ್ಕಾರ ಹೇಳಿ
ಬದುಕನ್ನು ಎದುರು ಹಾಕಿಕೊಂಡವರು
ಇನ್ನೂ ಬದುಕುಳಿದಿಲ್ಲ
ಅಸ್ತಿತ್ವದ ಪ್ರಶ್ನೆ
ಅಸ್ಮಿತೆಯ ಬುನಾದಿಯ ಮೇಲೆ ನಿಂತು
ಸುಮ್ಮನೆ ವಟಗುಡುತ್ತಿದೆ
ವಾಸ್ತವದ ಗೋಡೆ ಮುಗಿಲೆತ್ತರಕ್ಕೆ ಬೆಳೆದು
ಭವಿಷ್ಯ ಕಾಣದಾಗಿದೆ
-ಜಬಿವುಲ್ಲಾ ಎಮ್. ಅಸದ್