“ವಿಶ್ವವನ್ನೇ ತಲ್ಲಣಗೊಳಿಸಿ, ಈಗ ನಮ್ಮ ದೇಶಕ್ಕ ಗಂಡಾಂತರ ತಂದ ಕೋರೋನಾ ವೈರಸ್ ಹಾವಳಿಯಿಂದ ನಮ್ಮನ್ನು ರಕ್ಷಣೆ ಮಾಡಲು, ಸರ್ಕಾರ ರಾಜ್ಯದಲ್ಲಿ ಇಂದಿನಿಂದ ಹದಿನಾಲ್ಕು ದಿನಗಳ ವರೆಗೆ ಲಾಕ್‍ಡೌನ್ ಜಾರಿಗೊಳಿಸಿದೆ.ಅತ್ಯಗತ್ಯ ಸಾಮಗ್ರಿಗಳನ್ನು ಸಂಗ್ರಹ ಮಾಡಿಕೊಳ್ಳಿ,ಒಬ್ಬರಿಂದ ಒಬ್ಬರಿಗೆ ಬೇಗ ಹರಡುವ ಈ ವೈರಸ್ ಹೆಚ್ಚಾದರೆ, ಲಾಕ್‍ಡೌನ್ ಅವಧಿ ವಿಸ್ತರಣೆ ಸಹ ಆಗಬಹುದು,ಯಾರೊಬ್ಬರೂ ಯಾವೂದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು, ಹೊರಗೆ ಕಾಣಿಸಿಕೊಂಡರೆ ಶಿಕ್ಷೆ ತಪ್ಪಿದಲ್ಲಿ….” ಪೋಲಿಸ್ ಜೀಪ್ ಮೇಲೆ ಹಾಕಿರುವ ಚಿಕ್ಕ ಸ್ಪೀಕರ್‍ದಲ್ಲಿನ ಮಾತುಗಳನ್ನು ಕೇಳಿಸಿಕೊಂಡ ತಿಮ್ಮಪ್ಪ ಮಾಸ್ತರ ಬೆಚ್ಚಿಬಿದ್ದನು. ಸರ್ಕಾರ ಅನುದಾನ ಕೊಡುತ್ತದೆ ಎಂದು ಉಸಿರಾಡುತ್ತಾ ಕಳೆದ ಇಪ್ಪತ್ತೆರಡು ವರ್ಷಗಳಿಂದ ಮಕ್ಕಳೆ ಸರ್ವಸ್ವ, ಅವರಿಂದಲೇ ನಾನು ಹಾಗೂ ನನ್ನ ಬದುಕು ಒಂದು ಪೈಸಾ ಹಣ ಮಾಡದೆ ಆಸ್ತಿ ಎಂಬಂತೆ ಪುಸ್ತಕಗಳನ್ನು ಮನೆಯ ತುಂಬಿಕೊಂಡು, ಖಾಸಗಿ ಶಾಲಾ ಕನ್ನಡ ಶಿಕ್ಷಕನಾಗಿ ಕೇವಲ ಆರು ಸಾವಿರ ರೂದಲ್ಲಿ ಹೆಂಡತಿ ಇಬ್ಬರು ಮಕ್ಕಳನ್ನು ಸಾಕಿ ಸಲಹುತ್ತಿದ್ದವನ ಕಿವಿಗೆ ಲಾಕ್‍ಡೌನ್ ಶಬ್ದ ಕಿವಿಗೆ ಕೇಳಿಸುತ್ತಿದ್ದಂತೆ ಆಕಾಶ ಕಳಚಿ ಬಿದ್ದಂತಾಯಿತು. ಇದೇ ಗುಂಗಿನಲ್ಲಿ ಮರುದಿನ ಶಾಲೆಗೆ ಬಂದರೆ “ಲಾಕ್‍ಡೌನ ಮುಗಿಯುವವರೆಗೆ ಶಾಲೆ ರಜೆ ನೀಡಲಾಗಿದೆ ಶಾಲೆ ಆರಂಭವಾಗುವವರೆಗೆ ಬೇರೆ ಉದ್ಯೋಗ ನೋಡಿಕೊಳ್ಳಿ.” ಹೆಡ್ ಮಾಸ್ತರನ ಮಾತು ಕೇಳಿ ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೇ ಎನಿಸಿತು.
ಅಲ್ಲಿಂದ ಮನೆಗೆ ಬಂದು ಮಗ್ಗಲ ಮನೆಯವರಿಂದ ಹೆಂಡತಿಯ ಮನೆಯವರ ತವರು ಮನೆಗೆ ಪೋನ್ ಮಾಡಿ ಹೆಂಡತಿ ಮಕ್ಕಳನ್ನು ಅವರ ತವರ ಮನೆಗೆ ಕಳುಹಿಸಿಕೊಟ್ಟು, ‘ಹೆಂಡತಿ ಮಕ್ಕಳನ್ನು ಸಾಕದವನು ನಾನೊಬ್ಬ ಗಂಡಸಾ…..’ ಎನಿಸಿ ಬ್ಯಾಗು ರೆಡಿ ಮಾಡಿ ಸೀದ ತನ್ನೂರಿನತ್ತ ಮುಖ ಮಾಡಿದ. ನಲವತ್ತೆರಡು ಕಿ.ಮಿ ನಡೆದುಕೊಂಡೆ ಬಂದ ತಿಮ್ಮಪ್ಪ ಸುಸ್ತಾಗಿ ತನ್ನೂರಿನ ಹತ್ತಿರದ ಸಿದ್ದಪ್ಪ ಸಾವಕಾರನ ಹೊಲದ ಹತ್ತಿರದ ಮಾವಿನ ಗಿಡದ ಕೆಳಗೆ ಬಿದ್ದ ಎರಡು ಕೊಳೆತ ಹಣ್ಣು ಸ್ವಚ್ಚ ಮಾಡಿಕೊಂಡು ತಿಂದು ಮಲಗಿದ. ಮೈಮೇಲೆ ಮಳೆ ಹನಿ ಉದುರಿದಂತಾಗಿ ಎಚ್ಚರವಾದಾಗ ಸಾವಕಾರನ ಮಗಾ “ಯಾರ್ರೀ ನೀವು ಏಳರಿ ಜಗತ್ನಾಗ ಎಲ್ಲಾ ಕಡೆ ಕೋರೋನಾ ವೈರಸ್ ಬಂದೈತಿ ನೀವ್ಯಾರಿ ಏಳರಿ…..” ಕೈಯಲ್ಲಿ ಕೋಲು ಹಿಡಿದುಕೊಂಡು ನಿಂತಿದ್ದ ಆಕೃತಿ ಕಂಡು ಅಲ್ಲಿಂದ ಕಾಲು ಕಿತ್ತನು. ಅಣ್ಣ ಕರೆಯುತ್ತಾನೆಂದು ಅಣ್ಣನ ಮನೆಗೆ ಬಂದು ಬಾಗಿಲಲ್ಲಿ ನಿಂತಿದ್ದ ಅಣ್ಣನ ಹೆಂಡತಿ ತನ್ನ ಗಂಡನಿಗೆ ಕರೆಯುತ್ತ ಒಳಗೆ ಹೋಗಿ ಕಿವಿಯಲ್ಲಿ ಏನೋ ಹೇಳಿದಂತಾಯಿತು. ಅಣ್ಣ ಹೊರಗೆ ಬಂದು “ ತಿಮ್ಮಪ್ಪ, ಇಪ್ಪತ್ತೆರಡ ವರ್ಷ ಆತ ಇವತ್ತ ಬಂದಿ, ಸುತ್ತಮುತ್ತ ಮಂದಿಯರ ಏನ ಅಂತಾರು..? ಕೋರೋನಾ ವೈರಸ್ ಬಂದಾಗ ಹಿಂಗ ಬಂದರ ನಮನೂ ಸರ್ಕಾರಿ ಸ್ಕೂಲ್‍ದಾಗ ಕ್ವಾರಂಟೈನ್ ಮಾಡತಾರ ಎಲ್ಲಿಯಾದರೂ ಹೋಗ, ನಮಗೂ ಮಕ್ಕಳದಾವು ಅವುಕ ವೈರಸ್ ಬಂದರ ಏನ ಮಾಡೂದ..” ಕೇಳದ ಮಾತು ಕೇಳಿ ಅಲ್ಲಿಂದ ಕಾಲು ಕಿತ್ತು ಊರ ಹೊರಗಿನ ಕಲ್ಲಿನ ಕಣಿವೆಯತ್ತ ಹೆಜ್ಜೆ ಹಾಕಿದ, ಚಿಕ್ಕವನಿದ್ದಾಗ ಮನೆಯ ಮುಂದೆ ಇರುವ ಜಗಲಿಯಲ್ಲಿ ಗೆಳೆಯರ ಜೊತೆಗೆ ಆಟವಾಡಿದ್ದು,ಅಕ್ಕನ ನೆನಪುಗಳ ಚಿತ್ರಣ ಕಣ್ಮುಂದೆ ಸುಳಿಯಿತು.
****
ಮೂಡಣ ದಿಕ್ಕಿನಲ್ಲಿ ಉದಯಿಸುತ್ತಿರುವ ಸೂರ್ಯನ ಕಿರಣಗಳು ವಿಠ್ಠಲನ ಮನೆಯ ತಗಡುಗಳಿಗೆ ಬಿದ್ದ ತೂತಿನಲ್ಲಿ ಹಾಯ್ದು ತಿಮ್ಮಪ್ಪನ ಮುಖದ ಮೇಲೆ ಬಿದ್ದಿರುವದನ್ನು ನೋಡಿ “ ತಿಮ್ಮಾ ಏಳೋ ಬಿಸಲಾ ನೆತ್ತಿಮ್ಯಾಲ ಬಂದದ, ಎದ್ದ ಸ್ಕೂಲಗೆ ಹೋಗ ಬಾ” ಅಪ್ಪನ ಮಾತುಗಳೊಂದಿಗೆ ಮನೆಯ ಮುಂದಿನ ಜಗಲಿ ಮೇಲೆ ಅಮ್ಮನ ಕೈಯಿಂದ ತಲೆ ಬಾಚಿಸಿಕೊಳ್ಳುತ್ತಾ ಕುಳಿತಿರುವ ರುಕ್ಮಿಣಿಯು ಮುಖ ನೋಡಲು ಹಿಡಿದುಕೊಂಡಿರುವ ಕನ್ನಡಿಯಲ್ಲಿ ಅಪ್ಪನ ಚಲನವಲನಗಳನ್ನು ನೋಡುತ್ತಿದ್ದಳು. ಬರಗಾಲ ಹಾಗೂ ನೆರೆಹಾವಳಿಯಿಂದ ಕಳೆದ ವಾರ ಪಾಟೀಲ ಶಾಂತಪ್ಪ ಮೂರು ದಿನದ ಹಿಂದೆ ಅವ್ವಪ್ಪ, ನಿನ್ನೆ ಮಾನಪ್ಪ ಮಾಡಿದ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದೇ ತಲೆಯಲ್ಲಿ ತುಂಬಿಕೊಂಡು ‘ಎಲ್ಲಿ ನನ್ನಪ್ಪನೂ ಹಿಂಗ ಮಾಡಿ ನಮ್ಮನ್ನು ಬಿಟ್ಟು ಹೋದರೆ ನಮಗ್ಯಾರು ಗತಿ ?’ ಎಂದು ಅಪ್ಪನ ಚಲನ ವಲನ ಗಮನಿಸಿ ತಲೆ ಬಾಚಿಸಿಕೊಂಡ ತಕ್ಷಣ ಅಪ್ಪ ಹೋಗುವ ದಾರಿಯಲ್ಲಿ ಅವನಿಗೆ ತಿಳಿಯದ ಹಾಗೆ ಹೊಲದ ಹತ್ತಿರ ಹೋಗಿ ಸಂಜೆಯರೆಗೂ ಕಾಯುತ್ತಾ ಕುಳಿತುಕೊಂಡು ಶಾಲೆ ಬಿಡುವ ಸಮಯದಲ್ಲಿ ಮನೆಗೆ ಬರುತ್ತಿರುವ ವಿಷಯವನ್ನು ಯಾರಿಗೂ ತಿಳಿಯದ ಹಾಗೆ ನಿಯಂತ್ರಣ ಮಾಡಿದ್ದಳು.
ಸೋಮವಾರ ಬ್ಯಾಂಕಿನವರು ಮನೆಗೆ ಬಂದು “ ನಿಮ್ಮ ಹೊಲದ ಮೇಲೆ ತೆಗೆದುಕೊಂಡ ಸಾಲವನ್ನು ವಾರದಲ್ಲಿ ತುಂಬದೆ ಇದ್ದರೆ ನಿಮ್ಮ ಹೊಲ ಹಾಗೂ ಮನೆಯನ್ನು ನಮ್ಮ ವಶಕ್ಕೆ ತೆಗೆದುಕೊಳ್ಳುತ್ತೇವೆ” ಮಾತುಗಳನ್ನು ಕೇಳಿದ ವಿಠ್ಠಲ ಭಯಬೀತನಾಗಿದ್ದನ್ನು ಮಗಳು ಕನ್ನಡಿಯಲ್ಲಿ ನೋಡಿದಳು, ರುಕ್ಮಿಣಿ ಅಪ್ಪ ಹೋಗಿದ್ದ ದಾರಿ ನೋಡಿ ಸ್ನಾನ ಮಾಡಿ ಹೊರ ಬಂದು ನಿತ್ಯ ಮನೆಯಲ್ಲಿರುತ್ತಿದ್ದ ಹಗ್ಗವನ್ನು ಕಾಣದೆ ದಿಗ್ಬ್ರಾಂತಳಾದಳು. ಕಣ್ಣೀರು ಹಾಕುತ್ತಾ ಮನೆಯಲ್ಲಿ ಎಲ್ಲ ಕಡೆ ಹುಡುಕಾಡಿದಳು ಸಿಗದೆ ಇದ್ದಾಗ ಸೀದ ಹೊಲಕ್ಕೆ ಬಂದು ಅಪ್ಪನನ್ನು ನೋಡಿದಳು ಅಪ್ಪ ಹೊಲದಲ್ಲಿದ್ದ ಮಾವಿನ ಗಿಡಕ್ಕೆ ಹಗ್ಗ ಕಟ್ಟುತ್ತಿದ್ದನು. ಓಡಿ ಬಂದು,
“ಅಪ್ಪಾ…..ಅಪ್ಪಾ…..”ಮಗಳ ಧ್ವನಿ ಕೇಳಿದ ಅಪ್ಪ ಆ ಕಡೆ ತಿರುಗಿ ಕಣ್ಣೀರನ್ನು ತನ್ನ ಟಾವೆಲ್‍ಗೆ ಒರೆಸಿಕೊಳ್ಳುತ್ತಾ. “ಯಾಕೆ ರುಕ್ಕು ಇಲ್ಲೇಕೆ ಬಂದೆ”
“ ಅಪ್ಪಾ ನೀನೇ ನಮಗೆ ಎಲ್ಲ, ನೀವಿಲ್ಲದಿದ್ದರೆ ನಾವಿಲ್ಲ, ಮೊನ್ನೆ, ಮೊನ್ನೆ ನೀ ಸಾಯುವದಿಲ್ಲ ಎಂದು ಈಗ ನಮ್ಮನ್ನು ಬಿಟ್ಟು ಹೊಂಟಿದ್ದಿಯಲ್ಲ ಮೊದಲು ನಮ್ಮನ್ನು ಮೇಲೆ ಕಳುಹಿಸು ಅಪ್ಪ” ಎಂದು ಅಪ್ಪ ಹಾಕಿದ ನೇಣು ಕುಣಿಕೆಗೆ ಕೊರಳು ಕೊಟ್ಟಾಗ ಅಪ್ಪ “ಬೇಡ ಮಗಳೆ ನೀನೇಕೆ ಸಾಯುತ್ತಿಯಾ ಅರಳುವ ಮೊಗ್ಗು ನೀ, ಸಂಕಟ ನನಗೆ ನಾನು….” ಮಾತು ನಿಲ್ಲಿಸಿ ಕಣ್ಣೀರು ಹಾಕಿದಾಗ ಅದನ್ನು ನೋಡಿದ ಮಗಳು “ಅಪ್ಪಾ ನೀ ಸಾಯಬೇಡ, ನೀ ಸತ್ತರೆ ರೈತರ ಮಕ್ಕಳು ಏನನ್ನು ಕಾಣುವದಿಲ್ಲ, ಹೀಗೆ ಸಾಲು ಸಾಲು ರೈತರು ಸತ್ತರೆ ಅವರ ಹೆಂಡತಿ, ಮಕ್ಕಳು ನಂಬಿದವರ ಗತಿ ಏನಪ್ಪ, ಈ ದೇಶಕ್ಕೆ ಊಟಾ ಹಾಕುವವರು ನೀವು ಅಪ್ಪಾ, ನೀ ಸತ್ತರೆ, ನಾವು ಸುಖವಾಗಿ ಬದಕತೀವಾ, ಒಂದು ಮಾತ ಕೊಡತೀನಪ್ಪ ನಾನು ಒಬ್ಬ ರೈತನ ಮಗಳಾಗಿ ಓದಿ, ಸಾಧನೆ ಮಾಡಿ, ನಿನ್ನ ಸಾಲ ತೀರಿಸಿ ನಾನು ಬದುಕಿ ತೋರಿಸ್ತೀನಪ್ಪ,ನಂಬು ಅಪ್ಪಾ ನೀನಿಲ್ಲದ ಈ ಜಗತ್ತು ನಮಗೂ ಬೇಡ ದಯವಿಟ್ಟು ನೀನು ಸಾಯದೆ ನಿನ್ನ ಹಾಗೆ ಸಾಯುವ ರೈತರಿಗೂ ಹೇಳು ಸಾಯಬೇಡಂತ ನಮಗೆ ನಿಜವಾಗಿಯೂ ನಿನ್ನ ಸಾಕುವ ಅರ್ಹತೆ ಇದೆ ಅಪ್ಪಾ..” ಮಗಳ ಉದ್ದುದ್ದ ಬಾಷಣ ಕೇಳಿದ ಅಪ್ಪ ತನ್ನ ದಾಟಿಯನ್ನು ಬದಲಾಯಿಸಿ ಸತ್ತರೆ ನನಗೆ ಮಾತ್ರ ಸಂಕಟ ಕಡಿಮೆಯಾದೀತು ಹೆಂಡತಿ ಮಕ್ಕಳ ಗತಿ ಮತ್ತಷ್ಟು ತೀವ್ರತರಹದ ಸಂಕಟ ಎದುರಿಸಬೇಕಾಗುತ್ತದೆ ಎಂದುಕೊಂಡು,” ರುಕ್ಕು, ನಾನು ಸಾಯಿತಾ ಇಲ್ಲ ನಾಡಿದ್ದು ಪಂಚಮಿ ಅಲ್ವಾ ಅದಕ್ಕೆ ನಿನಗೆ ಹಾಗೂ ನಿನ್ನ ಅಣ್ಣ,ತಮ್ಮ ಜೋಕಾಲಿ ಆಡಬೇಕಲ್ವಾ ಅದಕ್ಕೆ ಜೋಕಾಲಿ ಕಟ್ಟುತಿದ್ದೇನೆ” ಕಟ್ಟಿದ ನೇಣು ಕುಣಿಕೆ ತೆಗೆದು ಹಗ್ಗವನ್ನು ಮೇಲಕ್ಕೆ ಹಾಕಿ ಜೋಕಾಲಿ ಕಟ್ಟಿದಾಗ ಮಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಜೋಕಾಲಿ ಆಡಿ ಮನೆಗೆ ಬಂದ ತಂದೆ-ಮಗಳು ನಡೆದ ಘಟನೆ ಹೇಳಿ ಸಂತಸದಿಂದ ಕಾಲ ಕಳೆದರು.
ಹತ್ತಾರು ವರ್ಷಗಳು ಕಳೆದವು. ರುಕ್ಮಿಣಿಯ ಮದುವೆ ಮಾಡಿದ ಅಪ್ಪ ದೊಡ್ಡ ಮಗ ಶಿವರಾಜನಿಗೆ ಹೆಣ್ಣು ನೋಡಿ ಮದುವೆ ಮಾಡಿ ಚಿಕ್ಕ ಮಗ ತಿಮ್ಮಪ್ಪನಿಗೆ ಮದುವೆ ಮಾಡಬೇಕು ಎಂದು ಆಸೆ ಆದರೆ ಸಾಲದ ಸೂಲಕ್ಕೆ ಸಿಲುಕಿದ ತಂದೆ ವಿಠ್ಠಲ ಇರುವ ಆರು ಎಕರೆಯಲ್ಲಿ ಮೂರು ಎಕರೆ ಹೊಲ ಮಾರಿ ಸಾಲ ಕಡಿಮೆ ಮಾಡಿಕೊಂಡು ಮನೆಯಲ್ಲಿ ಕುಳಿತ ಸಮಯದಲ್ಲಿ ಮಕ್ಕಳಿಗೆ ಹೊಲ ಇಲ್ಲ ಎಂದು ಭಯದಲ್ಲಿಯೇ ಹಾರ್ಟ ಅಟ್ಯಾಕ ಎಂಬ ರೋಗ ವಿಠ್ಠಲಪ್ಪನನ್ನು ವಿಠ್ಠಲನ ಪಾದ ಸೇರುವಂತೆ ಮಾಡಿತು. ಅಪ್ಪನ ಆಸೆಯನ್ನು ನೆರವೇರಿಸಬೇಕು ಎಂದು ಚಿಕ್ಕಮಗ ತಿಮ್ಮಪ್ಪ ನೂರಾರು ದಿನ ಹಸಿವು, ಕಷ್ಟ ಅನುಭವಿಸುತ್ತಾ ಶಾಲೆ ಕಲಿಯುತ್ತಲೇ ಪಟ್ಟಣಕ್ಕೆ ಕೆಲಸಕ್ಕೆ ಹತ್ತಿದ ಹೇಗೋ ಶಿಕ್ಷಣ ಮುಗಿಸಿಕೊಂಡು ಅನುದಾನ ಸಿಗುತ್ತದೆ ಎಂದು ಖಾಸಗಿ ಶಾಲಾ ನೌಕರಿ ಸೇರಿದ ಶಾಲೆ ಮುಗಿದ ನಂತರ ಬೇರೆ ಮನೆಗಳ ಸಣ್ಣ ಕಾರ್ಯ ಮಾಡುತ್ತಾ ಕಾಲ ಕಳೆಯುತ್ತಾ ಸಾಗಿದ್ದನು, ಪಟ್ಟಣದಲ್ಲಿ ಸರ್ಕಾರಿ ಶಾಲಾ ಶಿಕ್ಷಕರ, ಸರ್ಕಾರಿ ನೌಕರರಿಗೆ ತಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಕಲಿಸುವ ತಿಮ್ಮಪ್ಪ ತನ್ನ ಎರಡು ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡುಸುತ್ತಿದ್ದನು.ಇಬ್ಬರು ಮಕ್ಕಳು ಆಟ, ಪಾಠ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಶಾಲೆಗೆ ಪಸ್ಟ್, ಹೇಗೋ ಜೀವನ ಸಾಗಿತ್ತು.
ಬಡವರು, ಕಷ್ಟದಲ್ಲಿರುವವರೂ ಎಂದರೆ ಸಂಕಟ ಪಡುವ ತಿಮ್ಮಪ್ಪ ಜೀವನದಲ್ಲಿ ಮಕ್ಕಳ ಹಾಗೂ ಪಾಲಕರ ಪ್ರೀತಿ ಬಿಟ್ಟರೆ ನಯಾಪೈಸೆ ಗಳಿಸಲಿಲ್ಲ ನೂರಾರು ಬಾಲ್ಯ ವಿವಾಹ ತಡೆದು ಮಾದರಿ ಶಾಲಾ ಶಿಕ್ಷಕನಾದರೆ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಮಾದರಿ ಮನುಷ್ಯನಾಗಿ ಬೆಳೆದು, ಪೂರ್ಣ ಪಟ್ಟಣ ಈ ಮನುಷ್ಯನೆಂದರೆ ಬಹಳ ಪ್ರೀತಿ, ಆದರೆ ಸ್ವಾಭಿಮಾನಿ ಕೆಟ್ಟ ಕೆಲಸಗಳಿಂದ ಹಣ ಮಾಡದೆ ಕಷ್ಟದಲ್ಲಿಯೇ ಜೀವನ ಸಾಗಿಸಿದ. ಶ್ರೀಮಂತರ ಮನೆಯ ಹೆಣ್ಣನ್ನೆ ಮದುವೆ ಸಹ ಮಾಡಿಕೊಂಡು ಅವಳು ಸಹ ಅಷ್ಟೇ ತಿಮ್ಮಪ್ಪನ ಸ್ವಾಭಿಮಾನಕ್ಕೆ ಸೋತು ಎಲ್ಲ ಮಕ್ಕಳಂತೆ ನಮ್ಮ ಮಕ್ಕಳನ್ನು ದೊಡ್ಡ ದೊಡ್ಡ ಸಿಬಿಎಸ್‍ಇ ಶಾಲೆಗೆ ಹಚ್ಚಬೇಕು ಎನ್ನುವ ಆಸೆ ಇತ್ತಾದರೂ ಗಂಡನ ಆಸೆಯಂತೆ ನಡೆದಳು, ಭಾಷಣ, ಪ್ರವಚನಕ್ಕಾಗಿ ಅಲ್ಲಲ್ಲಿ ತಿರುತ್ತಿದ್ದರೂ ಇದ್ದ ಹಾಸಿಗೆಯಲ್ಲಿಯೇ ಕಾಲು ಚಾಚಿ ಜೀವನ ನಡೆಸಿದ್ದಳು. ತವರು ಮನೆಯಿಂದ ಏನನ್ನೂ ತರದ ಸ್ವಾಭಿಮಾನಿಯಾಗಿದ್ದಳು. 22 ವರ್ಷಗಳಾಗುತ್ತಾ ಬಂದರೂ ಶಾಲೆ ಅನುದಾನಕ್ಕೆ ಬರಲಿಲ್ಲ ಬೇರೆ ಉದ್ಯೋಗ ಮಾಡಲು ಸಾದ್ಯವಾಗುತ್ತಿರಲಿಲ್ಲ ಎನ್ನುವದಕ್ಕಿಂತ ಶಿಕ್ಷಕನಾಗಿ ಮಕ್ಕಳ ಜೊತೆ ಜೊತೆಯಲ್ಲಿ ಜೀವನ ಸಾಗಿಸಬೇಕು ಎನ್ನುವ ಆಸೆ ತಿಮ್ಮಪ್ಪ ಮಾಸ್ತರನದಾಗಿತ್ತು,
ಅತ್ತ ಅಣ್ಣ ಇರುವ ಹೊಲವನ್ನು ಮಾರಿ ಬೇರೆ ಕಡೆ ಜಮೀನು ಕೊಂಡುಕೊಂಡು ಚನ್ನಾಗಿ ಜೀವನ ಸಾಗಿಸಿದ್ದನೂ ಅಪ್ಪನ ಆಸ್ತಿಗೂ ಆಸೆ ಪಡದೆ ಜೀವನ ಸಾಗಿಸಿದ ತಿಮ್ಮಪ್ಪ ಈ ಲಾಕ್‍ಡೌನದಲ್ಲಿ ಸಿಲುಕಿಕೊಂಡು ಊರಿನತ್ತ ಬಂದು ಅಣ್ಣ ಹಾಗೂ ಊರಿನವರಿಂದ ಅವಮಾನಕ್ಕೆ ಒಳಗಾಗಿ ಮತ್ತೆ ನಡೆಯುತ್ತಲೇ ಪಟ್ಟಣ ಸೇರಿದ, ಮನೆಯ ಬಾಗಿಲ ತೆಗೆದು ಮಲಗಿಕೊಂಡ, ಒಂದು ವಾರದ ವರೆಗೆ ಹೇಗೋ ಇದ್ದ ಆಹಾರವನ್ನು, ಅಲ್ಪ ಪ್ರಮಾಣದಲ್ಲಿ ಮಾಡಿಕೊಂಡು ತಿಂದು ಹದಿನಾಲ್ಕು ದಿನ ಕಳೆದ ನಂತರ ಸರ್ಕಾರ ಮತ್ತೆ ಲಾಕ್‍ಡೌನ ಮಾಡಿದಾಗ ತಿಮ್ಮಪ್ಪ ಬೆಚ್ಚಿಬಿದ್ದ ಹೊರಗಡೆ ಹೋಗುವಂತಿಲ್ಲ ಮನೆಯಲ್ಲಿ ಇದ್ದರೆ ಊಟ ಇಲ್ಲ ಅವರಿವರೂ ಆದರೂ ಎಷ್ಟು ದಿನ ಕೊಟ್ಟಾರು….? ಅದಕ್ಕೂ ಆಸೆ ಪಡದೆ ಮನೆಯಲ್ಲಿಯೇ ಉಪವಾಸ ಕುಳಿತು ಬೇಜಾರಾಗಿ ಮನೆಗೆ ಬೀಗ ಹಾಕಿ ಹೊರ ನಡೆದನು.
ಕೆಲವು ವಾರ ಅಕ್ಕನ ಮನೆಯಲ್ಲಿ ಇದ್ದನು, ಅದು ಕೃಷಿಕರ ಮನೆತನವಾದ್ದರಿಂದ ಅಲ್ಲಿನ ಯಾವೂದೇ ಕೆಲಸ ಬಾರದೆ ಇದ್ದ ಕಾರಣ ಮರಳಿ ಮನೆಗೆ ಹೋಗಬೇಕು ಎನ್ನುವದರಲ್ಲಿ ಮನೆಯ ಮಾಲಿಕ “ನಿಮ್ಮ ಮನೆಯನ್ನು ಕಳ್ಳತನ ಮಾಡಿದ್ದಾರೆ” ದೂರವಾಣಿ ಕರೆಯ ಮೂಲಕ ಸುದ್ದಿ ತಿಳಿದು ಎಲ್ಲರೂ ಸಂಕಟ ಪಟ್ಟರೂ ಆತುರ ಪಡದೆ ನಮ್ಮದಲ್ಲದರ ಬಗ್ಗೆ ವಿಚಾರ ಮಾಡಬಾರದು ಎಂದು ತಿಳಿದು ಮನೆಗೆ ಬಂದು ನೋಡಿದರೆ ಎಲ್ಲವೂ ಅಸ್ತವ್ಯಸ್ತವಾಗಿ ಬಿದ್ದಿದ್ದವೂ ಮನೆಯಲ್ಲಿ ಚಿನ್ನ, ಹಣ ಇಲ್ಲದ ಕಾರಣ ಅವರಿವರು ಕೊಟ್ಟ ಬೆಳ್ಳಿಯ ಕಾಣಿಕೆ ತೆಗೆಕೊಂಡು ಅವರೇ ಎರಡು ನೂರು ಇಟ್ಟು ಹೋಗಿದ್ದರು. ಪೋಲಿಸ್ ಇಲಾಖೆಯು ನಿರಂತರವಾಗಿ ಸಹಕಾರ ನೀಡದ್ದನ್ನು ನೋಡಿದ ಅಲ್ಲಿನ ಜನ “ಹಣ ಮಾಡದಿದ್ದರೂ ಜನರನ್ನು ಗಳಿಸಿದ್ದಾನೆ ನೋಡಿ ಮಾಸ್ತರ್ ..” ಮಾತುಗಳು ಅಲ್ಲಲ್ಲಿ ಕೇಳುತ್ತಿದ್ದವು. ಅದೆ ಎರಡು ನೂರು ರೂಗಳಿಂದ ಮತ್ತಷ್ಟು ದಿನಗಳು ಕಳೆದವು ಶಾಲೆ ಆರಂಭವಾಗದೆ 5 ತಿಂಗಳುಗಳೆ ಕಳೆದವು ಜೀವನ ಕಷ್ಟಕರವಾಯಿತು. ಬಂದು ಬಳಗ ಕೈಬಿಟ್ಟಿತು. ಹೆಂಡತಿ ತವರು ಮನೆಯಲ್ಲಿ ಹೇಗೋ ಸುಖವಾಗಿದ್ದರು.
ಕೊನೆಗೆ ಅವರಿವರ ಮನೆಯಲ್ಲಿ ಲೆಕ್ಕ ಬರೆಯುವದು, ಸಣ್ಣ ಪುಟ್ಟ ಕೆಲಸ ಮಾಡಿದರೂ ಮನೆ ಬಾಡಿಗೆ ಕೊಡದೆ ಇದ್ದಾಗ ಮಾಲಿಕರು ಮನೆಯಿಂದ ಹೊರಹಾಕಿದರು, ಕೆಲವು ದಿನದ ಮಟ್ಟಿಗೆ ತನ್ನ ಶಾಲೆಯ ಕೊಣೆಯೊಂದರಲ್ಲಿ ಸಾಮಾನು ಇರಿಸಿ ನಂತರ ಮತ್ತೊಂದು ಚಿಕ್ಕ ಕೋಣೆ ಬಾಡಿಗೆ ಪಡೆದು ಅಲ್ಲಿಯೇ ವಾಸ ಮಾಡುತ್ತಿದ್ದನು. ಒಂದು ಸಲ ತರಕಾರಿ ವ್ಯಾಪಾರ, ಒಂದಿಷ್ಟು ದಿನ ಸಣ್ಣ, ಸಣ್ಣ ಕೃಷಿ ಕಾರ್ಯ ಮಾಡಿದರೂ ದೇಹ ಅದಕ್ಕೆ ಒಗ್ಗಿಕೊಳ್ಳಲಿಲ್ಲ. ಎಲ್ಲವನ್ನು ಬಿಟ್ಟು ಮತ್ತೆ ಶಾಲೆಯ ಮಾಲಿಕರ ಮನೆಯತ್ತ ಬಂದು ವಿನಂತಿಸಿದರೂ “ಶಾಲೆ ಪ್ರಾರಂಭವಾಗುವರೆಗೆ ನಮಗೂ ಏನೂ ಮಾಡಲಾಗುವದಿಲ್ಲ” ಎಂದು ಕಡ್ಡಿ ಮುರಿದವರ ಹಾಗೆ ಮಾತನಾಡಿದರು. ಅಲ್ಲಿಂದ ಶಾಲೆಗೆ ಬಂದು ಒಂದು ಚೀಟಿ ಬರೆದಿಟ್ಟು ಮನೆಯ ಬೀಗ ಹಾಕಿಕೊಂಡನು ತಿಮ್ಮಪ್ಪ. ಅತ್ತ ಶಾಲಾ ಮುಖ್ಯೋಪಾಧ್ಯಾಯನಿಗೆ ಈ ಚೀಟಿ ಸಿಕ್ಕಿತು.
ತೆರೆದು ನೋಡಿದರೆ ‘ವಿದ್ಯಾರ್ಥಿಗಳೆ ದಯವಿಟ್ಟು ಕ್ಷಮಿಸಿಬಿಡಿ ನಾನು ರೈತನ ಮಗ ಆದ್ದರಿಂದ ನನಗೆ ರೈತನ ಮಗನಾಗಲು ಸಾದ್ಯವಾಗಲಿಲ್ಲ, ಶಿಕ್ಷಕನಾಗಲೂ ಸಾಧ್ಯವಾಗಲಿಲ್ಲ ಈ ಕಾರಣಕ್ಕಾಗಿ ನಾನು ಈ ಸಮಾಜ ಕಟ್ಟುವ ಶಿಕ್ಷಕನಾಗಲು ಇಷ್ಟಪಟ್ಟಿದ್ದೇ, ಈಗಲೂ ನನಗೆ ಮೇಷ್ಟ್ರೂ ಆಗಿ ಕೆಲಸ ಮಾಡಿದ್ದು ಖುಸಿಯಾಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಕನಾಗಿದ್ದು ಸಾರ್ಥಕವೆನಿಸಿದೆ ಇನ್ನು ಮುಂದೆ ಈ ಶಿಕ್ಷಕ ನಿಮ್ಮಗಳ ಜೊತೆಗೆ ಇರುವದಿಲ್ಲ ಕ್ಷಮಿಸಿಬಿಡಿ, ನನ್ನ ಈ ಕಷ್ಟದ ದಿನಗಳಲ್ಲಿ ಬಂದು ಬಳಗ ಯಾರೂ ಕೈಹಿಡಿಯಲಿಲ್ಲ. ನಾನು ಪ್ರೀತಿಸಿದ ವಿದ್ಯಾರ್ಥಿಗಳನ್ನು ಸರ್ಕಾರ ಹೊರಗೆ ಹೋಗದಂತೆ ಕಟ್ಟಿ ಹಾಕಿದೆ, ಪಾಪ ನಮ್ಮ ಶಾಲಾ ಮಾಲಿಕರಾದರೂ ಏನು ಮಾಡಿಯಾರು ? ಫೀಯನ್ನೇ ನಂಬಿ ನಮ್ಮಂತ ಹಲವಾರು ಶಿಕ್ಷಕರಿಗೆ ಕೆಲಸ ಕೊಟ್ಟಿದ್ದಾರೆ ಈಗ ಫೀ ಇಲ್ಲದ ದಿನದಲ್ಲಿ ಅವರು ಆದರೂ ಏನು ಮಾಡಿಯಾರು?.ನಿಮ್ಮ ಜೊತೆಗೆ ಇರುವಷ್ಟು ದಿನ ನಾನು ಖುಷಿಯಿಂದ ಇದ್ದು ಜೀವನ ಮಾಡಿದ್ದೇನೆ, ಇಷ್ಟಕ್ಕೆ ಈ ಜೀವನ ತೃಪ್ತಿಯಾಗಿದೆ, ಮುಂದಿನ ಜನ್ಮ ಅಂತ ಇದ್ದರೆ ನಿಮ್ಮ ಶಿಕ್ಷಕನಾಗಲು ಇಷ್ಟಪಡುತ್ತೇನೆ, ಅಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ಮುಂಬರುವ ಕನ್ನಡ ಶಿಕ್ಷಕನ ಹೃದಯದಲ್ಲಿರುತ್ತೇನೆ. ನೀವು ಮಾಡುವ ಕೆಲದಲ್ಲಿರುತ್ತೇನೆ, ಅವಮಾನ, ಅನುಮಾನ ಏನೆಲ್ಲ ಬಂದರೂ ಉಸಿರಿರುವರೆಗೂ ನಾನು ಮಕ್ಕಳನ್ನೇ ಪ್ರೀತಿಸುತ್ತೇನೆ ಹೋಗಿ ಬರುತ್ತೇನೆ. ನಾನು ತೀರಿದ ಮೇಲೆ ನನ್ನನ್ನು ನೋಡಲು ಬರಬೇಡಿ ಏಕೆಂದರೆ ವೈರಸ್ ಹಾವಳಿ ನಿಮ್ಮನ್ನು ನನ್ನ ಹತ್ತಿರ ಬರಲು ಬಿಡುವದಿಲ್ಲ ಕ್ಷಮಿಸಿ ಬಿಡು ಮಕ್ಕಳೆ, ಇಂತಿ ನಿಮ್ಮ ಕನ್ನಡ ಶಿಕ್ಷಕ.’
ಮುಖ್ಯೋಪಾಧ್ಯಾಯ ಚೀಟಿ ಹಿಡಿದು ದಿಗ್ರ್ಬಾಂತರಾದರು. ಮೊದಲು ಶಾಲೆಯ ಮಾಲಿಕರಿಗೆ ಹೇಳದೆ ತಿಮ್ಮಪ್ಪ ಮಾಸ್ತರನ ಜೀವ ಉಳಿಸುವ ಅಸ್ತ್ರ ಬಳಿಸಲು ಮುಂದಾದರು ಹೌದು ಮಕ್ಕಳೆಂದರೆ ಅವರಿಗೆ ಪ್ರಾಣ, ಆ ಪ್ರಾಣದಿಂದಲೇ ಈ ಪ್ರಾಣ ಉಳಿಸಬೇಕು ಎಂದು ಮಕ್ಕಳನ್ನು ಸೇರಿಸುವ ಕಾರ್ಯದಲ್ಲಿ ನಿರತರಾದರು. ಮಕ್ಕಳ ಮನೆ ಮನೆಗೆ ಹೋದರು. ಶಾಲೆಯ ಮುಂದೆ ಚಿಕ್ಕ ದೊಡ್ಡ ಮಕ್ಕಳ ದಂಡೇ ನಿರ್ಮಾಣವಾಯಿತು. ಎಲ್ಲರೂ ಕಣ್ಣುಗಳಲ್ಲಿ ನೀರು ಜಿಣುಗುತ್ತಿದ್ದವು. ಕನ್ನಡ ಬಾವುಟ, ಹಳಗನ್ನಡ ಪದ್ಯಗಳು, ಹಾಸ್ಯ, ಮೌಲಿಕ ಶಿಕ್ಷಣದ ತಿಮ್ಮಪ್ಪ ಮಾಸ್ತರನ ಮಾತುಗಳು ಕಿವಿಯಲ್ಲಿ ಗುಂಯ್ ಎನ್ನವ ಮಾತುಗಳು, ವೈರಸ್‍ಗೆ ಹೆದರದೆ ಮನೆಯ ಪಾಲಕರಿಗೂ ಹೆದರದೆ ಮಕ್ಕಳ ತಂಡಗಳು ಸೀದ ತಿಮ್ಮಪ್ಪ ಮಾಸ್ತರನ ಮನೆಗೆ ಬಂದಿತು. ಇತ್ತ ತಿಮ್ಮಪ್ಪ ಮಾಸ್ತರ ತನ್ನ ಮಕ್ಕಳ ಭಾವಚಿತ್ರವನ್ನೊಮ್ಮೆ ಊರಲ್ಲಿರುವ ತಾಯಿಯ ಭಾವಚಿತ್ರವನ್ನೊಮ್ಮೆ, ನಂಬಿದ ಪತ್ನಿಗೆ ಅನ್ಯಾಯ ಮಾಡುತ್ತಿದ್ದೇನೆ ಅವಳ ಪೋಟೋ ಹಿಡಿದು ಮುತ್ತಿಕ್ಕಿ ಮನೆಯಲ್ಲಿನ ಪ್ಯಾನಿಗೆ ಹಗ್ಗ ಕಟ್ಟಿ ಮೇಲು ಮಲು ಹಾಕಿದನು ಮನೆಯ ಮುಂದೆ ಗದ್ದಲ ಪ್ರಾರಂಭವಾಯಿತು. ನಾ ಸಾಯುವ ಸುದ್ದಿ ಈಗಲೆ ಜನರಿಗೆ ತಿಳಿಯಿತೇ..? ಎಂದು ಹಗ್ಗಕ್ಕೆ ಕುತ್ತಿಗೆ ಕೊಟ್ಟರು ಮಾಸ್ತರ ತಿಮ್ಮಪ್ಪ..
ಓರ್ವ ಬಾಲಕ ಕಿಟಕಿಯಿಂದ ಈ ದೃಶ್ಯ ನೋಡಿ ಉಳಿದವರಿಗೆ ತಿಳಿಸಿದ ತಕ್ಷಣ ಎಲ್ಲರೂ ಸೇರಿ ಬಾಗಿಲು ಮುರಿದು ಬಂದು ಹಗ್ಗ ಕತ್ತರಿಸಿ ಮಾಸ್ತರನ ಜೀವ ಕೈಯಲ್ಲಿ ಹಿಡಿದರು. ಇನ್ನೂ ಜೀವ ಹೋಗಿರದ ಕಾರಣ ಅಪಾಯ ತಪ್ಪಿತ್ತು. ಎಲ್ಲ ಮಕ್ಕಳು ಉಳಿದ ಶಿಕ್ಷಕರು ಸೇರಿ ಮನೆಯಲ್ಲಿದ್ದ ಮುರಿದ ಖುರ್ಚಿಯ ಮೇಲೆ ಕುರಿಸಿ ಎಲ್ಲ ಮಕ್ಕಳು ಮುಂದೆ ಬಂದು ತಮ್ಮ ಕೈಯಲ್ಲಿದ್ದ ಜೇಬಿನಲ್ಲಿದ್ದ ಹತ್ತು, ಇಪ್ಪತ್ತು, ನೂರು ರೂಗಳನ್ನು ಮುಂದೆ ಹಿಡಿದು ಒಬ್ಬಬ್ಬರಾಗಿ ಬಂದು ಅವರ ಮುಂದೆ ಇಟ್ಟು ಹೊರಟರು ಸಾವಿರಾರು ರೂಪಾಯಿಗಳು ಸಂಗ್ರಹವಾದವು. ಹಳೆಯ ವಿದ್ಯಾರ್ಥಿಗಳು ಬಂದು ಮನೆಗೆ ಬೇಕಾದ ರೇಶನ್ ಸಾಮಾಗ್ರಿಗಳ ಚೀಲಗಳನ್ನು ತಂದಿಟ್ಟು “ ಸಾರ್ ನಮಗೆ ಭವಿಷ್ಯ ಕೊಟ್ಟ ನೀವ, ನಮ್ಮ ಪಾಲಿನ ದೇವರು ನಮಗೆ ಆತ್ಮಸ್ಥೈರ್ಯ ನಂಬಿಕೆ, ವಿಶ್ವಾಸ ತುಂಬಿ ನಮಗೆ ಭವಿಷ್ಯ ಕಟ್ಟಿ ಕೊಟ್ಟವರು ನಿಮ್ಮ ಭವಿಷ್ಯವನ್ನು ನಡು ನೀರಲ್ಲಿ ಬಿಡುತ್ತೀವಾ, ನಾವು ಇರುವವರೆಗೆ ನೀವು ಹೆದರಬೇಡಿ ಸರ್ ನಿಮಗೆ ಬೇಕಾದ ಎಲ್ಲ ಸೌಕರ್ಯ ನಾವು ಕೊಡುತ್ತೇವೆ” ಎಂದು ಕೈಮುಗಿದಾಗ ತಿಮ್ಮಪ್ಪ ಮಾಸ್ತರನ ಬದುಕು ಸಾರ್ಥಕವೆನಿಸಿತು. ಸಮಾಜಕ್ಕೆ ನಾವು ಮಾಡಿದ ಒಳ್ಳೆಯ ಕಾರ್ಯ ಇಂದು ಕಣ್ಮುಂದೆ ಕಾಣಿಸಿತು.
ಓರ್ವ ಒಳ್ಳೆಯ ಶಿಕ್ಷಕನ ಬದುಕು ಯಾವಾಗಲೂ ನಡುವೆ ಅಂತ್ಯವಾಗುವದಿಲ್ಲ ಸೂರ್ಯ ಮಧ್ಯಾಹ್ನದಲ್ಲಿ ಮುಳುಗುವದಿಲ್ಲ ಎಂಬ ಮಾತು ಎಷ್ಟು ಸತ್ಯವೋ ಉತ್ತಮ ಶಿಕ್ಷಕರಿಗೆ ಉತ್ತಮ ಬದುಕು ಅನ್ನುವದೂ ಅಷ್ಟೇ ಸತ್ಯ ಎನ್ನುವ ಮಾತು ನಿಜವೆನಿಸಿತು. ಅತ್ತ ಕಡೆಯಿಂದ ತಿಮ್ಮಪ್ಪ ಮಾಸ್ತರ ಹೆಚ್ಚು ಪ್ರೀತಿಸುವ ಐದನೆ ತರಗತಿ ಮಗುವೊಂದು “ ಸಾರ್ ನೀವು ಹೇಳುವ ಕಥೆಗಳು ನಮೆಗೆ ಬೇಕು, ನಿಮ್ಮ ಪ್ರೀತಿ ನಮಗೆ ಬೇಕು ನನ್ನ ಅಪ್ಪ ಚಾಕಲೇಟ್‍ಗೆ ಕೊಟ್ಟ ಹಣ ಇದರಲ್ಲಿದೆ ತೆಗೆದುಕೊಳ್ಳಿ..” ತಿಮ್ಮಪ್ಪ ಮಾಸ್ತರನನ್ನು ತಬ್ಬಿಕೊಂಡಾಗ ಅಲ್ಲಿರುವವರ ಕಣ್ಣುಗಳಲ್ಲಿನ ಹನಿಗಳು ನೆಲಕ್ಕೆ ತಾಕುತ್ತಿದ್ದವು. ತಿಮ್ಮಪ್ಪ ಮಾಸ್ತರ ಬದುಕು ಕರೋನಾ ಸಮಯದಲ್ಲಿ ಲಾಕ್‍ಡೌನ್ ಆದಂತೆ ಬದುಕಿನಲ್ಲಿಯೂ ಲಾಕ್‍ಡೌನ್ ಆಗುವ ಕಾಲ ದೂರ ಸರಿಯಿತು ಬದುಕು ಸಾರ್ಥಕವೆನಿಸಿತು.
-ವೆಂಕಟೇಶ ಪಿ.ಗುಡೆಪ್ಪನವರ