ಪೂಜ ಗುಜರನ್‌ ಅಂಕಣ

ಕಾಲಾಯ ತಸ್ಮೈ ನಮಃ: ಪೂಜಾ ಗುಜರನ್ ಮಂಗಳೂರು

“ಸಂಬಂಧಗಳು ಸಮಯವನ್ನು ಬೇಡುತ್ತದೆ.
ಸಮಯವಿಲ್ಲದೆ ಸಂಬಂಧಗಳು ಸಾಯುತ್ತದೆ”..

ನಿಜ ಈ ಸುಂದರ ಕ್ಷಣಗಳು ಬದುಕಿಗೆ ಅದೆಷ್ಟು ಮುಖ್ಯವಾಗಿರುತ್ತದೆ. ಈ ಸಮಯ ಅನ್ನುವುದು ಎಂತಹ ಅದ್ಭುತವನ್ನು ಸೃಷ್ಟಿಸಬಲ್ಲದು. ಹಾಗೇ ಎಂದೂ ಅಳಿಯದ ವಿಚಿತ್ರವನ್ನು ಉಳಿಸಬಲ್ಲದು. ಈ ಕ್ಷಣಗಳು ಕಳೆದು ಹೋದರೆ ಮತ್ತೆ ಬರುವುದೇ? ಅದಕ್ಕೆ ಉತ್ತರ ಯಾರಲ್ಲೂ ಇಲ್ಲ. ನಿಜ ಇಲ್ಲಿ ಸಮಯಕ್ಕೆ ತುಂಬಾ ಬೆಲೆ. ಒಂದು ಕ್ಷಣ ಕಳೆದು ಹೋದರು ಅದು ಮತ್ತೆ ಬರಲಾರದು. ಆ ಸಮಯಕ್ಕೆ ಏನು ಆಗಬೇಕು ಅದು ಆಗಿಯೇ ಆಗುತ್ತದೆ. ಕಾಲವನ್ನು ತಡೆಯೋರು ಯಾರು ಇಲ್ಲ. ನಾವು ಸಮಯಗಳ ಜೊತೆ ನಮ್ಮ ಜೀವನವನ್ನು ಅರ್ಥಪೂರ್ಣವಾಗಿ ಕಳೆಯಲು ಪ್ರಯತ್ನ ಪಡುತ್ತೇವೆ. ಆದರೂ ಅದೆಷ್ಟೋ ಸಲ ಅಂದುಕೊಂಡಂತೆ ಯಾವುದು ಆಗುವುದಿಲ್ಲ. ಇಲ್ಲಿ ಮನುಷ್ಯನ ಯೋಚನೆಗೂ ಮಿಗಿಲಾದದ್ದು ನಡೆಯುತ್ತದೆ. ಎಲ್ಲವೂ ನಾವು ಅಂದುಕೊಂಡಂತೆ ನಡೆದರೆ ನಾವು ದೇವರಾಗಿ ಬಿಡುತ್ತೇವೆ. ಹಾಗಂತ ಯಾವುದು ಆಗುವುದಿಲ್ಲ ಅಂದುಕೊಂಡು ಸುಮ್ಮನಿದ್ದರೆ ಮತ್ತೆಂದೂ ಆ ಸಮಯವೇ ಬರುವುದಿಲ್ಲ. ಒಳ್ಳೆಯ ಕೆಲಸ ಮಾಡಲು ಸಮಯದ ಅಗತ್ಯವಿಲ್ಲ ಅದು ಆಗಿಯೇ ತೀರುತ್ತದೆ ಇದು ಈ ಸೃಷ್ಟಿಯ ಅದ್ಭುತಗಳಲ್ಲೊಂದು.

ಆದರೂ ಅದೆಷ್ಟೋ ಸಲ ನಾವು ಈ ಕಾಣದ ಸಮಯದ ಜೊತೆ ಗುದ್ದಾಡುತ್ತ ಸಾಗುತ್ತೇವೆ. ಎಲ್ಲೋ ನಮಗಾಗಿ ಕಾಯುವವರಿಗಾಗಿ ಸಮಯವನ್ನು ಮೀಸಲಿಡಬೇಕು ಎಂದು ಪ್ರಯತ್ನಿಸುತ್ತೇವೆ. ಬದುಕಿನ ಬಹುತೇಕ ಸಮಯವನ್ನು ಹೀಗೆ ನಮ್ಮವರ ಜೊತೆಯೇ ಬದುಕುತ್ತೇವೆ. ಈ ಅಮೂಲ್ಯ ಸಮಯದಲ್ಲಿ ನಾವು ಓಡುವ ಓಟವೇ ನಮ್ಮ ಬದುಕಿನ ವೇಗವನ್ನು ಗುರುತಿಸುತ್ತದೆ. ಓಡುವವನನ್ನು ಕಾಲ ಯಾವತ್ತು ನಿಲ್ಲುಸುವುದಿಲ್ಲ. ಅದು ನಮ್ಮನ್ನು ಪ್ರೋತ್ಸಾಹಿಸುತ್ತ ಸಾಗುತ್ತಲೇ ಇರುತ್ತದೆ. ಬದುಕಿನ ಬಂಡಿಗೆ ಹಿತವಾದ ವೇಗ ಇರಬೇಕು. ಕಾಲವನ್ನು ಹಿಂದಿಕ್ಕಿ ಮುಂದೆ ಸಾಗುತ್ತೇನೆ ಆನ್ನುವ ಹುಂಬತನಕ್ಕೆ ಇಲ್ಲಿ ಜಾಗವಿಲ್ಲ. ಕಾಲ ಜೀವನದ ಪಾಠವನ್ನು ಕಲಿಸುತ್ತದೆ. ಮನುಷ್ಯನ ಪ್ರತಿಯೊಂದು ಕಾರ್ಯವನ್ನು ಕಾಲ ಲೆಕ್ಕವಿಟ್ಟು ಕಾಯುತ್ತದೆ. ಈ ಕ್ಷಣಕ್ಕೆ ನಾನೇನೂ ಮಾಡಿದ್ದೆ ಎನ್ನುವ ಪ್ರತಿಯೊಂದು ಲೆಕ್ಕವೂ ಸಮಯದ ಜೊತೆ ಸಮಯೋಜಿತವಾಗಿರುತ್ತದೆ. ನಾವು ಮರೆತರೂ ಕಾಲ ಮರೆಯೊದಿಲ್ಲ. ನಮ್ಮ ಪ್ರತಿ ಹಾಗು ಹೋಗುಗಳನ್ನು ಗಮನಿಸುತ್ತಿರುತ್ತದೆ. ನಾವು ಯಾರಿಗೂ ಕಾಣದಂತೆ ಏನೇ ಮಾಡುತ್ತಿದ್ದೇವೆ ಅಂದುಕೊಂಡರೂ ಕಾಲ ಅದೆಲ್ಲವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿರುತ್ತದೆ. ಅದೆಲ್ಲದಕ್ಕೂ ಪ್ರತಿಫಲವನ್ನು ಕಾಲವೇ ನಿರ್ಧರಿಸಿರುತ್ತದೆ.

ಒಳ್ಳೆಯ ಕೆಲಸ ಮಾಡಲು ಒಳ್ಳೆಯ ಸಮಯಕ್ಕಾಗಿ ಕಾಯಬೇಕಿಲ್ಲ. ಇಲ್ಲಿ ನಾವು ಎಲ್ಲದಕ್ಕೂ ಸಮಯ ಸಂದರ್ಭವನ್ನು ನೋಡುತ್ತೇವೆ. ಕೆಟ್ಟ ಘಳಿಗೆ ಒಳ್ಳೆ ಘಳಿಗೆ ಅನ್ನುವ ಲೆಕ್ಕಚಾರದಲ್ಲಿ ಬದುಕುತ್ತೇವೆ. ಏನಾದರೂ ಕೆಟ್ಟದು ನಡೆದರೂ ಅವನ ಸಮಯ ಸರಿ ಇಲ್ಲ. ಏನೋ ಆಗಬಾರದು ಆಗಿದೆ ಅನ್ನುತ್ತೇವೆ. ಅಂದರೆ ನಮ್ಮ ಬದುಕು ಈ ಸಮಯದ ಜೊತೆ ಸಂಯೋಜಿತವಾಗಿದೆಯಾ.? ಏನೇ ನಡೆದರೂ ಅದನ್ನು ಘಳಿಗೆಗಳ ಜೊತೆ ತಾಳೇ ಹಾಕುವುದನ್ನು ನಾವು ಕಲಿತಿದ್ದೇವೆ. ಇಲ್ಲಿ ಎಲ್ಲವೂ ಒಳ್ಳೆಯದೇ. ಕೆಟ್ಟದು ಅನ್ನುವುದು ಯಾವುದು ಇಲ್ಲ. ಒಳ್ಳೆ ಘಳಿಗೆ ಕೆಟ್ಟ ಘಳಿಗೆ ಇವೆಲ್ಲ ನಾವು ಸೃಷ್ಟಿಸಿದ ಲೆಕ್ಕವಷ್ಟೆ. ಸಮಯದ ಗತಿಯನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಅದನ್ನು ನಿಯಂತ್ರಿಸಲು ಎಂದಿಗೂ ಸಾಧ್ಯವಿಲ್ಲ. ಹಾಗಂತ
ಸಮಯದ ಮಹತ್ವವನ್ನು ತಿಳಿಯದೆ ಬೇಜಾವಾಬ್ದಾರಿಯಿಂದ ವರ್ತಿಸಿದರೆ ಎಲ್ಲವೂ ಕಾಲನ ಕೈಯಲ್ಲಿ ನಶಿಸಿ ಹೋಗಿರುತ್ತದೆ.

ಮರಳಿ ಹೋದ ಸಮಯವನ್ನು ಯಾರಿಂದಲೂ ಹಿಂತಿರುಗಿಸಲಾಗದು. ಅದಕ್ಕೆ ಸಮಯದ ಮಹತ್ವವನ್ನು ನಾವು ತಿಳಿದಿರಬೇಕು. ಕೆಲವೊಮ್ಮೆ ನಮ್ಮ ಉಡಾಫೆಯ ಮನೋಭಾವಕ್ಕೆ ಅದೆಷ್ಟೋ ಸುಂದರ ಸಮಯಗಳು ವ್ಯರ್ಥವಾಗಿ ಹೋಗಿರುತ್ತದೆ. ಹೇ ಪರವಾಗಿಲ್ಲ ಅದನ್ನು ನಾಳೆ ಮಾಡಿದರೂ ನಡೆಯುತ್ತದೆ ಅನ್ನುವ ನಿರ್ಲಕ್ಷ್ಯತನದಿಂದ ನಮ್ಮ ಬದುಕಿನ ಅತ್ಯಮೂಲ್ಯ ಕ್ಷಣಗಳು ಕಳೆದು ಹೋಗಿರುತ್ತದೆ. ನಮ್ಮ ಉದಾಸೀನಕ್ಕೆ ಸುಂದರ ಸಂಬಂಧಗಳು ಬಾಡಿ ಹೋಗುತ್ತದೆ. ನೀನು ನನಗಾಗಿ ಸಮಯವನ್ನು ಕೊಡುತ್ತಿಲ್ಲ ಅನ್ನುವ ಮಾತಿನೊಂದಿಗೆ ಮನಸ್ಸುಗಳು ಮುರಿದು ಬೀಳುತ್ತದೆ. ಹೊತ್ತು ಮೀರಿದರೆ ಹೋಯಿತು. ಮತ್ತೆ ಅದು ತಿರುಗಿ ಬಾರದು. ನಾವು ಆ ಕ್ಷಣ ತೆಗೆದುಕೊಳ್ಳುವ ನಿರ್ಧಾರ ನಮ್ಮ ಬದುಕನ್ನು ನಿರ್ಧರಿಸುತ್ತದೆ. ಮತ್ತೆ ನಾಳೆ ಎನ್ನುವುದಕ್ಕಿಂತ ಇಂದು ಈಗಲೇ ಈ ಕ್ಷಣವೇ ಅನ್ನುವ ಕೆಲಸಗಳು ನಮ್ಮನ್ನು ಇನ್ನಷ್ಟು ಯಶಸ್ವಿ ಬದುಕಿನತ್ತ ಕರೆದುಕೊಂಡು ಹೋಗುತ್ತದೆ. ಮನುಷ್ಯ ಇರುವಷ್ಟು ಸಮಯವನ್ನು ಬರಿ ಕೋಪ ದ್ವೇಷದ ದಳ್ಳುರಿಯಲ್ಲಿ ಬೇಯುವ ಬದಲು ಜೀವನ ಖುಷಿಯನ್ನು ಪ್ರತಿಕ್ಷಣವೂ ಅನುಭವಿಸಬೇಕು. ಯಾಕೆಂದರೆ ಮುಂದೊಂದು ದಿನ ನಾವು ತಿರುಗಿ ನೋಡಿದಾಗ ವ್ಯರ್ಥವಾದ ಆ ಕ್ಷಣಗಳನ್ನು ಕೂಡಿಸಲು ಸಾಧ್ಯವಿಲ್ಲ. ಮತ್ತೊಮ್ಮೆ ಆ ಸಮಯವನ್ನು ಮರಳಿ ಪಡೆಯಲಾಗದು. ಯಾಕೆಂದರೆ ಸಮಯದಂತೆ ನಮ್ಮ ಆಯುಷ್ಯವೂ ಕರಗುತ್ತಿರುತ್ತದೆ. ಅದಕ್ಕೆ ಯಾವ ಸಮಯಕ್ಕೆ ಏನೂ ಆಗಬೇಕು ಅದು ದೊರೆತರೇನೆ ಚಂದ

ಕಳೆದು ಹೋದದಕ್ಕೆ ಚಿಂತಿಸುತ್ತ ಕುಳಿತರೆ ಅದು ಎಂದಿಗೂ ತಿರುಗಿ ಬಾರದು. ಈ ಪ್ರಪಂಚದಲ್ಲಿ ಮರಳಿ ಪಡೆಯಲಾಗದು ಅಂದ್ರೆ ಅದು ಸರಿದು ಹೋದ ಸಮಯ ಮಾತ್ರ. ಯಾವ ಕಾಲಕ್ಕೆ ಏನೂ ನಡೆಯಬೇಕು ಅದು ನಡೆದೆ ನಡೆಯುತ್ತದೆ. ಇದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ.. ಇಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ಇಲ್ಲ ಅನ್ನುವುದಕ್ಕೆ ಅದೆಷ್ಟೋ ಉದಾಹರಣೆಗಳು ಸಿಗುತ್ತವೆ. ನಮ್ಮ ಬದುಕು ಬದಲಾಗುತ್ತಲೇ ಹೋಗುತ್ತದೆ. ಬಾಲ್ಯ, ಯೌವ್ವನ, ಮುಪ್ಪು, ಹೀಗೆ ಸಮಯದದ ಜೊತೆ ನಮ್ಮನ್ನು ನಾವು ಬದಲಾಯಿಸುತ್ತ ಸಾಗುತ್ತೇವೆ. ಇಲ್ಲಿ ಕೆಲವೊಂದು ನೆನಪುಗಳು ಮಾತ್ರ ನಮ್ಮ ಜೊತೆಯಾಗಿ ಇರುತ್ತದೆ. ಕೆಲವೊಂದನ್ನು ಕಾಲ ಮರೆಸುತ್ತದೆ.

ಕಾಲನ ಮುಂದೆ ನಾವೆಲ್ಲ ಬರಿ ನೆಪಮಾತ್ರ. ಇಲ್ಲಿ ನಮಗಿರುವ ಸಮಯದ ಮಿತಿಯಲ್ಲಿ ಬದುಕು ನಿರ್ಧರಿತವಾಗಿರುತ್ತದೆ. ಅದನ್ನು ಯಾವತ್ತು ಬದಲಾಯಿಸಲಾಗದು. ನಾನು ಇದೆ ಹೊತ್ತಿಗೆ ಅಲ್ಲಿ ತಲುಪಬೇಕು ಅಂತ ಹೊರಟರು ಇನ್ನೇನೊ ಆಗಿ ಬಿಡುತ್ತದೆ. ಇಲ್ಲಿ ನಾವಂದುಕೊಂಡಂತೆ ನಡೆಯದೆ ಇರಬಹುದು. ಸಮಯ ಸಂದರ್ಭಗಳೂ ಇನ್ಯಾವುದನ್ನೋ ನಿರ್ಧರಿಸಬಹುದು. ಅದನ್ನೆಲ್ಲ ಮೀರಿ ನಡೆಯಲಾಗದು. ಕಾಲವನ್ನು ತಡೆಯಲು ಯಾರಿಗೂ ಆಗದು. ನಮ್ಮ ಬದುಕು ಕಾಲನ ಕೈಯಲ್ಲಿ ಭದ್ರವಾಗಿರುತ್ತದೆ. ಅದನ್ನೂ ಮೀರಿ ಇಲ್ಲಿ ಒಂದು ಹುಲ್ಲುಕಡ್ಡಿಯು ಅಲುಗಾಡದು ಅನ್ನುವ ಸತ್ಯ ನಾವು ಅರಿಯಬೇಕಿದೆ. ಕಾಲಾಯ ತಸ್ಮೈ ನಮಃ

-ಪೂಜಾ ಗುಜರನ್ ಮಂಗಳೂರು.


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *