ಶತಾವಧಾನಿ ಗಣೇಶರ ’ಮಣ್ಣಿನ ಕನಸು’ – ಆಧುನಿಕೋತ್ತರ ಕಾಲಘಟ್ಟದಲ್ಲಿ ತೆರೆದುಕೊಳ್ಳುವ ಪ್ರಾಚೀನ ಭಾರತದ ಕಥೆ: ರಾಘವೇಂದ್ರ ಅಡಿಗ ಎಚ್ಚೆನ್

‘ಮಣ್ಣಿನ ಕನಸು’ ಇದು ಒಂದು ಕಾದಂಬರಿ ಎಂದು ಹೇಳುವುದಕ್ಕಿಂತ 2022ರಲ್ಲಿ ಪ್ರಕಟವಾದ ಆಧುನಿಕೋತ್ತರ ಭಾರತೀಯ ಮಹಾಗದ್ಯ ಎಂದು ಹೇಳಲು ಅಡ್ಡಿ ಇಲ್ಲ. ಶತಾವಧಾನಿ ಗಣೇಶ್ ಅವರ ಸಾಕಷ್ಟು ಉಪನ್ಯಾಸಗಳನ್ನು ಕೇಳಿದ್ದ ನಾನು ಅವರ ಕಾದಂಬರಿಯನ್ನು ಓದಲೇಬೇಕೆನ್ನುವ ಆಸೆಯಿಂದ ಬೆಲೆ ದುಬಾರಿ ಎಂದೆನಿಸಿದರೂ ಖರೀದಿಸಿ ಓದಿದೆ. ಒಟ್ಟೂ 634 ಪುಟಗಳ ಗಾತ್ರ, 14 ಅಧ್ಯಾಯಗಳಿರುವ ’ಮಣ್ಣಿನ ಕನಸು’ ನಮ್ಮನ್ನು ಎರಡೂವರೆ ಸಾವಿರ ವರ್ಷಗಳ ಹಿಂದಿನ ಭಾರತದಲ್ಲಿ ಪಯಣಿಸುವಂತೆ ಮಾಡುತ್ತದೆ. ಅದರಲ್ಲಿಯೂ ನೀವು ಸಂಸ್ಕೃತ ನಾಟಕಗಳನ್ನು ಓದಿರುವಿರಾದರೆ ಖಂಡಿತವಾಗಿ ಇದು ನಿಮಗೆ ಅನಾಯಾಸವಾಗಿ ಓದಿಸಿಕೊಂಡು ಹೋಗುವಂತಿದೆ. ಉದಯನ, ವಾಸವದತ್ತೆಯರ ಕತೆಯನ್ನು ನಾನೆಲ್ಲಿಯೂ ಇಷ್ಟು ವಿವರವಾಗಿ ಓದಿಲ್ಲ. ಚಾರುದತ್ತ, ವಸಂತಸೇನೆಯ ಕತೆಯನ್ನೂ ಅಲ್ಲಲ್ಲಿ ಅಷ್ಟಿಷ್ಟು ಕೇಳಿ ತಿಳಿದಿದ್ದೆನಷ್ಟೆ. ಆದರೆ ಈ ಕಾದಂಬರಿ ಓದಿದ ನಂತರ ಉದಯನ, ವಾಸವದತ್ತೆಯರು, ಚಾರುದತ್ತ, ವಸಂತಸೇನೆಯರು ನಮ್ಮ ಆಪ್ತ ಬಂಧುಗಳಾಗಿದ್ದಾರೆ. ಈ ಕಾದಂಬರಿಯಲ್ಲಿ ಗಣೇಶರು ಭಾಸನ ‘ಸ್ವಪ್ನವಾಸವದತ್ತ’ ಮತ್ತು ಶೂದ್ರಕನ ‘ಮೃತ್ಚಕಟಿಕ’ ಎಂಬ ಎರಡು ಭವ್ಯಕೃತಿಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿದ್ಯಮಾನಗಳನ್ನು ಹದವರಿತು ಬೆಸೆದಿದ್ದಾರೆ. ಗಣೇಶರಿಗೆ ಈ ಎರಡೂ ಕತೆಗಳಲ್ಲಿ ಸಂಪರ್ಕ ಅಥವಾ ಸಾಮ್ಯತೆ ಕಂಡಿರುವುದೇ ಒಂದು ಕಾಣ್ಕೆ. ಎನ್ನುವುದು ಸತ್ಯ. ಪಾತ್ರಗಳು ಸಹ ಹೊಸ ರೂಪಗಳಲ್ಲಿ ಜೀವತಳೆದು ಬಂದಿದೆ ಕಾದಂಬರಿಯಲ್ಲಿ ಯೋಧ, ರಾಜನೀತಿಜ್ಞ, ನಟ-ವಿಟ, ವಿಪ್ರ, ವರ್ತಕ, ಶ್ರಮಿಕ, ಶ್ರಮಣ, ಗೃಹಸ್ಥ-ಗೃಹಿಣಿ ಎಲ್ಲರೂ ಬರುತ್ತಾರೆ. ಕಾದಂಬರಿಯ ಹೆಸರೂ ಸಹ ಈ ಎರಡು ನಾಟಕಗಳ ಹೆಸರನ್ನು ಬೆಸೆದು ಕೊಡಲಾಗಿದೆ. ಹೇಗೆಂದರೆ ಮೃತ್ಚಕಟಿಕದಿಂದ ಮೃತ್(ಮಣ್ಣಿನ) ಹಾಗೂ ಸ್ವಪ್ನವಾಸವದತ್ತದಿಂದ ಸ್ವಪ್ನ(ಕನಸು) ಸೇರಿಸಿ ‘ಮಣ್ಣಿನ ಕನಸು’ ಎಂದು ಹೆಸರು ನೀಡಿದ್ದಾರೆ. ಓದುಗನಾಗಿ ಮನಸ್ಸನ್ನ್ನು ಕಾಡುವ ಪಾತ್ರಗಳು ಇಲ್ಲಿದೆ. ಅವು ಸನ್ನಿವೇಶಕ್ಕೆ ತಕ್ಕಂತೆ, ಬಲು ರೋಚಕ ಹಾಗೂ ಅರ್ಥಪೂರ್ಣವಾಗಿ ಬರುತ್ತವೆ. ಚಾರುದತ್ತ, ವಸಂತಸೇನೆಯರು ಸಂಸ್ಕೃತ ಸಾಹಿತ್ಯದ ಚಿರನೂತನ ಪ್ರಣಯಿಗಳು. ಇವರೀಗೆ ಶತಾವಧಾನಿ ಗಣೇಶರ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಬಂದಿದ್ದಾರೆ.

‘ಮಣ್ಣಿನ ಕನಸು’ ಗಣೇಶರ ಮೊದಲ ಕಾದಂಬರಿ. ಆದರೆ ಕಾದಂಬರಿ ಪ್ರಕಾರಕ್ಕೆ ಕೈಹಾಕಿ ಮೊದಲ ಪ್ರಯೋಗದಲ್ಲೇ ಯಶಸ್ವಿಯಾಗಿದ್ದು, ಭಾಷಾಪ್ರಯೋಗದಿಂದಲೇ ಎನ್ನುವುದು ವಿಶೇಷ. ಅವರು ಕೃತಿಯ ಬೆನ್ನುಡಿಯಲ್ಲಿ ಉಲ್ಲೇಖಿಸಿರುವ ಸಾಲುಗಳೇ ಕಾದಂಬರಿಯ ಕುರಿತಾಗಿ ನಮಗೆ ಸ್ಪಷ್ಟ ಚಿತ್ರಣ ನೀಡುತ್ತದೆ. ಅದು ಮುಂದಿನಂತಿದೆ- ‘ಮಣ್ಣಿನ ಕನಸು ಸ್ವಪ್ನವಾಸವದತ್ತ ಮತ್ತು ಮೃಚ್ಛಕಟಿಕ ಎಂಬ ಸುಪ್ರಸಿದ್ಧ ಸಂಸ್ಕೃತ ರೂಪಕಗಳ ಇತಿವೃತ್ತವನ್ನು ಆಧರಿಸಿ ರೂಪುಗೊಂಡ ಐತಿಹಾಸಿಕ ಕಾದಂಬರಿ. ಇದು ಪ್ರೀತಿ-ವಿಶ್ವಾಸಗಳ, ರಾಜಕೀಯ, ತಂತ್ರ-ಪ್ರತಿತಂತ್ರಗಳ, ಕಲೆ ತತ್ವಗಳ ಬಣ್ಣಗಳನ್ನು ಒಳಗೊಂಡ ಚಿತ್ರ. ಸಹೃದಯರ ಚಿತ್ರವೃತ್ತಿಗಳನ್ನು ಕಾಡುವ ಹತ್ತಾರು ಪಾತ್ರಗಳು, ಸಂಕೀರ್ಣವಾದ ಘಟನೆಗಳು, ಕಾವ್ಯಮಯ ವರ್ಣನೆಗಳು, ಆಳವಾದ ಸಂವಾದಗಳು, ಅಭಿಜಾತ ಭಾಷಾ ಶೈಲಿ, ಈ ಕಾದಂಬರಿಯ ಕೆಲವು ವಿಶೇಷಗಳು. ವ್ಯಕ್ತಿಗಳಿಗೆ ಕನಸುಗಳಿರುವಂತೆ ನಮ್ಮನ್ನು ತಾಳಿ ಬಾಳಿಸುವ ಈ ಮಣ್ಣಿಗೂ ಕನಸಿದ್ದರೆ ಅದು ನನಸಾಗುವ ನಲಿವಿನ ಹಾದಿಯನ್ನು ಹುಡುಕುವ ನೋವು ಇಲ್ಲಿದೆ. ಸುಮಾರು ಎರಡು ಸಾವಿರದ ಐನೂರು ವರ್ಷಗಳಿಗೂ ಮುನ್ನ ಇದ್ದ ಭಾರತದ ಸಾಂಸ್ಕೃತಿಕ ಮತ್ತು ರಾಜಕೀಯ ಜೀವನದ ಎಷ್ಟೋ ವಿವರಗಳು ಈ ಕೃತಿಯ ಕಥೆ ಮತ್ತು ಪಾತ್ರಗಳ ಜೊತೆಯಲ್ಲಿ ದಟ್ಟವಾಗಿ ಹೆಣೆದುಕೊಂಡಿದೆ. ಇವುಗಳ ಅಧಿಕೃತತೆ ಮತ್ತು ಸೂಕ್ಷ್ಮತೆಗಳು ಓದುಗರ ಮನೋನೇತ್ರಗಳಿಗೆ ಆ ಕಾಲದ ಜೀವನವನ್ನು ಆಪ್ತವಾಗಿ ಒದಗಿಸಿಕೊಟ್ಟಿವೆ.’

ಕೃತಿಯಲ್ಲಿನ ವೈಚಾರಿಕತೆ, ಸಂಭಾಷಣೆ, ಸ್ವಗತಗಳ ವೈವಿಧ್ಯ, ಔಚಿತ್ಯ, ರೀತಿ, ಆಳ, ಹರವು ಅಪೂರ್ವವಾಗಿದೆ. ಯಾವೊಂದು ವರ್ಣ-ವೃತ್ತಿಗಳಿಗೆ ಸೀಮಿತವಾಗದೆ ಸಾತ್ತ್ವಿಕ ಆನಂದ, ಶುದ್ಧಪ್ರೇಮ, ಸುಖ-ಶಾಂತಿಗಳ ಶೋಧನೆ ಇಲ್ಲಿ ನಾವು ಕಾಣುತ್ತೇವೆ. ಮೂಲದಲ್ಲಿ ಇದು ಎರಡು ವರ್ಷಗಳ ಅವಧಿಯಲ್ಲಿ ನಡೆಯುವ ಕತೆ. ವತ್ಸರಾಜ ಉದಯನ ಘೋಷವತಿ ಎನ್ನುವ ವೀಣೆಯ ನೆರವಿನಿಂದ ಎಂತಹಾ ಆನೆಯನ್ನೂ ಪಳಗಿಸುವ ಕಲೆಯನ್ನು ಕರಗತವನ್ನಾಗಿಸಿಕೊಂಡಿದ್ದ. ಈತನನ್ನು ಮಣಿಸಬೇಕೆನ್ನುವ ಉದ್ದೇಶದೊಡನೆ ಉಜ್ಜಯಿನಿಯ ರಾಜ ಚಂಡಮಹಾಸೇನ ಕುಟಿಲೋಪಾಯ ಮಾಡುತ್ತಾನೆ. ಹಾಗೆ ಕತೆ ಬೆಳೆಯುತ್ಟಾ ಹೋಗುತ್ತದೆ. ಇಂದ್ರನ ಅನುಗ್ರಹದಿಂದ ಹುಟ್ಟಿದ ಮಗಳೆಂದು ವಾಸವದತ್ತೆ ಬಗೆಗೆ ಪ್ರದ್ಯೋತ ಮಹಾರಾಜನಿಗೆ ಅಪಾರ ಅಭಿಮಾನವಿದೆ. ಆದರೆ ಅದೇ ಮಗಳಿಂದಲೇ ಅವನ ಅಭಿಮಾನ ಭಂಗವೂ ಆಗುತ್ತದೆ. ಉದಯನನಲ್ಲಿ ಪ್ರೀತಿಯಾಗಿ ತನ್ನವರೆಲ್ಲರನ್ನೂ ಬಿಟ್ಟು ಬಂದ ವಾಸವದತ್ತೆ ಉದಯನನನ್ನು ವಿವಾಹವಾಗಿ ಕೆಲವೇ ದಿನಗಳಲ್ಲಿ ಅವನ ಅಭ್ಯುದಯಕ್ಕಾಗಿ ಸ್ವತಃ ಆವನಿಂದ ದೂರ ಸರಿಯುತ್ತಾಳೆ.ಇನ್ನು ಉದಯನನ ರಾಜ್ಯದಲ್ಲಿ ಸಾರ್ಥವಾಹ ಚಾರುದತ್ತ ಅವನ ಒಳ್ಳೆಯ ಗುಣಗಳಿಂದ ಪ್ರಸಿದ್ದನಾಗಿದ್ದು ಬಡತನ ಬಂದರೂ ಒಳ್ಳೆತನವನ್ನು ಎಂದೂ ಕೈಬಿಡುವುದಿಲ್ಲ. ಅವನ ಒಳ್ಳೆಯತನ ಮೆಚ್ಚಿನ ವಸಂತಸೇನೆ ಎನ್ನುವ ವೇಷ್ಯಾ ವೃತ್ತಿಯಲ್ಲಿರುವ ಯುವತಿ ಅವನಿಗೊಲಿದು ವಿವಾಹವಾಗುತ್ತಾಳೆ.

ಉದಯನನಿಗೆ ಒಲಿದ ಆನೆಗಳನ್ನು ಒಲಿಸಿಕೊಳ್ಳುವ ವಿದ್ಯೆ, ಆತ ನಾಡಾಗಿರಿಯಂತಹಾ ಬೃಹತ್ ಗಜವನ್ನೂ ತನ್ನ ವೀಣಾವಾದನದ ನೆಪದಿಂದ ಪಳಗಿಸಿ ಕುಣಿಸಬಲ್ಲನೆನ್ನುವ ವಿಚಾರ ನಮ್ಮ ಭಾರತೀಯರು ಪ್ರಾಚೀನ ಕಾಲದಲ್ಲಿಂದಲೂ ಪ್ರಾಣಿಗಳನ್ನು ಅವುಗಳ ಮನಸಿನಾಳಕ್ಕಿಳಿದು ಅರಿಯುವ ವಿದ್ಯೆ ಹೇಗೆ ಕರತಲಾಮಲಕ ಮಾಡಿಕೊಂಡಿದ್ದರೆನ್ನುವುದನ್ನು ತೋರುತ್ತದೆ. ಅಲ್ಲದೆ ಕೌಶಾಂಬಿಯಲ್ಲಿ ನಡೆಸುವ ವಸಂತೋತ್ಸವದ ವೈಭವದ ವರ್ಣನೆ ಅಂದಿನ ಕಾಲದಲ್ಲಿ ಜನರು ಹಬ್ಬದ ಸಂಭ್ರಮ, ಉತ್ಸವಗಳ ಸಂಭ್ರಮವನ್ನು ಹೇಗೆ ಎಷ್ಟು ವರ್ಣರಂಜಿತವಾಗಿ ಆಚರಿಸುತ್ತಿದ್ದರೆನ್ನಲು ಸಾಕ್ಷಿಯಾಗಿದೆ. ವತ್ಸದೇಶ, ಆವಂತಿ, ಮಗಧ, ಕೋಸಲ, ವೈಶಾಲಿ ಹೀಗೆ ಇಲ್ಲಿ ಬರುವ ಅನೇಕ ಪ್ರಾಂತ್ಯಗಳಾಗಲಿ ಅಲ್ಲಿನ ಸಾಮಾಜಿಕ, ಧಾರ್ಮಿಕ, ರಾಜಕೀಯ ಬದುಕಿನ ಚಿತ್ರಣವು ಅಂದಿನ ಭಾರತದಲ್ಲಿ ಜನಸ್ತೋಮ ಹೇಗೆ ಬದುಕಿತ್ತು ಎನ್ನುವ ಕಲ್ಪನೆಯನ್ನು ಸವಿಸ್ತಾರವಾಗಿಯೇ ನಮಗೆ ಕಟ್ಟಿ ಕೊಡುತ್ತದೆ. ಕಾದಂಬರಿಯ ಭಾಷೆಯಲ್ಲಿ ಆಡುಮಾತಿನ ಅಂದವೂ ಇದೆ, ಅಭಿಜಾತತ್ವದ ಶೋಭೆಯೂ ಇದೆ.

ಮೇಲ್ನೋಟಕ್ಕೆ ಇದೊಂದು ರಾಜನ ಕಥೆ, ಅರಮನೆಯಲ್ಲಿನಡೆಯುವ ಪ್ರೇಮ ಕಥೆ ಎನಿಸಿದರೂ ಎಲ್ಲಾ ವರ್ಗದ ಜನರನ್ನೂ ಒಳಗೊಂಡು ನಾಡು, ಕಾಡು, ನದಿ, ಬೆಟ್ಟ, ಅರಮನೆ, ಗುಡಿಸಲು ಹೀಗೆ ಎಲ್ಲಾ ಬಗೆಯ ಸನ್ನಿವೇಶವನ್ನೂ ಸಹ ಇದು ನಮಗೆ ಕಣ್ಣೆದುರು ತರುತ್ತದೆ. ಗಣೇಶರ ವಿದ್ವತ್ ಪ್ರತಿಭೆ ಕಾದಂಬರಿಯ ಉದ್ದಕ್ಕೂ ನಮಗೆ ಕಾಣಿಸುತ್ತದೆ.

ಅಂದಿನ ಭಾರತದಲ್ಲಿ ರಾಜರ ಆಳ್ವಿಕೆಯು ಇದ್ದಂತೆ ಗಣತಂತ್ರ ವ್ಯವಸ್ಥೆಯಲ್ಲಿದ್ದ ಇನ್ನೊಂದು ರೂಪವನ್ನೂ ವಿವರಿಸುತ್ತದೆ.ಗಣತಂತ್ರದಡಿಯಲ್ಲಿ ಗಣಬೋಗಿನಿಯಾಗಿದ್ದ ಅಮ್ರಪಾಲಿಯ ಕತೆ ಜೊತೆಗೆ ಬುದ್ದನಿಂದ ಪ್ರಾರಂಭವಾಗಿದ್ದ ಬೌದ್ಧಮತದ ವರ್ಣನೆಗಳೂ ಇಲ್ಲಿದೆ.

ಇಲ್ಲಿನ ಯೌಗಂಧಾಯಣ, ಶಾಲಂಕಾಯನ, ವಿಶಾಖ ಮತ್ತೂ ಕೆಲವು ಪಾತ್ರಗಳ ಮುಖೇನ ಗಣೇಶರು ನಾನಾ ಶಾಸ್ತ್ರ ನೀತಿಗಳ ವಿವರವನ್ನು ಅತಿ ಸಾಮಾನ್ಯರಿಗೆ ಸಹ ಅರ್ಥವಾಗುವಂತೆ ಕಟ್ಟಿಕೊಟ್ಟಿದ್ದಾರೆ. ಮೊದಲಿನ ಅರಿಕೆಯಲ್ಲಿ ಹೇಳಿರುವಂತೆ, ಇದು ನಿಜವಾಗಿ ದೇವುಡು ನರಸಿಂಹಶಾಸ್ತ್ರಿಗಳಂತಹ ಮಹಾವಿದ್ವಾಂಸರ ಕೃತಿಗಳನ್ನು ಮಾರ್ಗದರ್ಶಕವೆಂಬಂತೆ ಸ್ವೀಕರಿಸಿ ರಚಿಸಿದ ಫಲ ಎನ್ನಬಹುದು. ದೇವುಡುರವರ ಮಯೂರ ಕೃತಿಯಲ್ಲಿ ಕಾಣುವ ಸಹ್ಯಾದ್ರಿಯ ವಿವರಣೆಗಳಿರುವಂತೆಯೇ ಇಲ್ಲಿ ವಿಂಧ್ಯಾಟವಿಯ ವಿವರಣೆಯನ್ನು ಕಾಣಬಹುದು. ಉದಯನ-ವಾಸವದತ್ತೆಯರಷ್ಟೇ ಪ್ರಾಮುಖ್ಯತೆ ಶರ್ವಿಲಕ-ಮದನಿಕೆಯರಿಗೂ ನೀಡಲಾಗಿದೆ ಎನ್ನುವುದು ನಾವು ಗಣೇಶರ ಪಾತ್ರಗಳಿಗೆ ನೀಡುವ ಪ್ರಾಮುಖ್ಯತೆಯ ಕಾರಣಕ್ಕೆ ಉದಾಹರಿಸಬಹುದು.ಇದಲ್ಲದೆ ಕಾಮಲತೆ, ಗಣಿಕೆಯಾಗಿದ್ದ ಅಮ್ರಪಾಲಿಯರ ಪಾತ್ರಗಳು ಸಹ ಅಷ್ಟೇ ವಿವರಣಾತ್ಮಕವಾಗಿ ಬಂದಿದೆ. ಭಾರತವರ್ಷದಲ್ಲಿ ಆಗಿಹೋದ ನಿರ್ಮಲವಾದ ಲೋಕಾದರವೂ, ಜನಹಿತಕಾರಿಯಾದ ಪ್ರೀತಿಯೂ ಇದೆ. ವರ್ಣ/ಆಶ್ರಮ ಧರ್ಮಗಳ ಗುಣಗ್ರಾಹಿ ಅನುಷ್ಠಾನ, ಕಲೆ/ದರ್ಶನಗಳ‌ ಸುದೀರ್ಘವಾದ ಮೀಮಾಂಸೆ, ಸಂಗೀತ/ಕಾವ್ಯಗಳನ್ನು ಸವಿಯುವ ರಸಿಕತೆ, ಶುಕ್ರ-ವಿದುರ-ಬೃಹಸ್ಪತಿಯೇ ಮುಂತಾದ ನೀತಿಶಾಸ್ತ್ರದ ಸಂಗತಿಗಳು, ಅರ್ಥಶಾಸ್ತ್ರ/ಧರ್ಮಶಾಸ್ತ್ರಗಳ ವಿವೇಕಯುತ ಅನ್ವಯಗಳ ಚರ್ಚೆ ಇಲ್ಲಿದೆ. ಕೌಶಾಂಬಿಯ ಮಹಾಮಾತ್ಯ ಯೌಗಂಧರಾಯಣ ಸಮಸ್ತ ಭರತವರ್ಷಕ್ಕೇ ಮಾದರಿಯಾದ ರಾಜಸತ್ತೆಯ ನಿರ್ಮಾಣದ (ಮಣ್ಣಿನ) ಸಂಕಲ್ಪ (ಕನಸು) ತೊಟ್ಟು ದುಡಿದ ಕಥಾನಕ ಇಲ್ಲಿಯದು. ಹೂವಿನ ಮಾಲೆಮಾಡುವ ವಿವರ, ಜೂಜುಕಟ್ಟೆಯ ವಿವರ, ಗಜಶಾಲೆಯ ವಿವರ, ಅಂದಿನ ಆಹಾರಪದ್ಧತಿ, ಹೂವುಗಳು, ವೃಕ್ಷಗಳು, ಕಟ್ಟಡಗಳ ಸುಣ್ಣ-ಬಣ್ಣ ಗಾರೆಗಳ ವಿವರ- ಹೀಗೆ ಕಾದಂಬರಿಯಲ್ಲಿ ಅತ್ಯಂತ ಮಹತ್ವದ ವಿಚಾರಗಳಷ್ಟೇ ಅಲ್ಲದೆ ಚಿಕ್ಕ ಚಿಕ್ಕ ವಿಚಾರಗಳೂ ಸಹ ಪ್ರಾಮುಖ್ಯತೆ ಪಡೆದಿದೆ. ಅಲ್ಲದೆ ಅಂದಿನ ಭಾರತದಲ್ಲಿ ಆಚರಿಸಲ್ಪಡುತ್ತಿದ್ದ ಮದನೋತ್ಸವ, ಅಶೋಕವೃಕ್ಷ ಪೂಜೆ ಮತ್ತು ಇಂದ್ರಧ್ವಜೋತ್ಸವದ ವಿವರಣೆಗಳು ಆ ದಿನಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ. ಕಾದಂಬರಿಯಲ್ಲಿ ಬಳಸಿದ ಭಾಷೆ ಅಲಂಕಾರ-ಧ್ವನಿಗಳು ಅತ್ಯಪೂರ್ವವಾಗಿದ್ದಾಗಿ ಇತ್ತೀಚಿನ ದಿನಮಾನಗಳಲ್ಲಿ ಬಂದ ಅಪರೂಪದ ಕೃತಿಯನ್ನಾಗಿಸಿದೆ.

ದೇವುಡು ಅವರ ಮೂರು ಕಾದಂಬರಿಗಳಾದ ’ಮಹಾಬ್ರಾಹ್ಮಣ’, ’ಮಹಾಕ್ಷತ್ರಿಯ’ ಹಾಗೂ ’ಮಹಾದರ್ಶನ’ಗಳು ಭಾರತೀಯ ವೈದಿಕ ಜೀವನದ ಕಲ್ಪನೆಯ ಸಾರ ನೀಡಿದ್ದರೆ ಗಣೇಶರ ಈ ಕಾದಂಬರಿ ಪ್ರಾಚೀನ ಭಾರತದ ಸಾಂಸ್ಕೃತಿಕ ಜೀವನದ ಸಾರವನ್ನು ಓದುಗರಿಗೆ ಉನಬಡಿಸುತ್ತದೆ. ಪ್ರಾಚೀನ ಭಾರತದ ಸಮಾಜವನ್ನು ಇಷ್ಟು ಸುಸ್ಪಷ್ಟವಾಗಿ, ಸುಂದರವಾಗಿ ಕಟ್ಟಿಕೊಟ್ಟ ಇನ್ನೊಂದು ಕಾದಂಬರಿ ಅಥವಾ ಕೃತಿ ಇಲ್ಲ ಎನ್ನುವುದು ನನ್ನ ಭಾವನೆ.

ಶತಾವಧಾನಿ ಗಣೇಶ್ ತರ್ಕ, ಶಾಸ್ತ್ರ, ಲೌಕಿಕ, ಅಲೌಕಿಕ, ರಾಜಕೀಯ, ಸಂಗೀತ, ನೃತ್ಯ, ಸಾಹಿತ್ಯ ಮುಂತಾದ ಲಲತಕಲೆ, ತಂತ್ರಜ್ಞಾನ, ಪ್ರಸಕ್ತ ವಿಷಯಗಳು ಹೀಗೆ ಯಾವುದರ ಬಗ್ಗೆ ಕೇಳಿದರೂ ಥಟ್ ಎಂದು ಉತ್ತರಿಸಬಲ್ಲ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿರುವವರು. ಕರ್ನಾಟಕವಲ್ಲದೇ, ದೇಶಾದ್ಯಂತ ವಿದೇಶಗಳಾದ ಅಮೇರಿಕ ಮತ್ತು ಯೂರೋಪ್ ದೇಶಗಳಿಗೆ ಭೇಟಿ ಕೊಟ್ಟ ಸಮಯದಲ್ಲಿ 20ಕ್ಕೂ ಅಧಿಕ ಅವಧಾನಗಳನ್ನು ನಡೆಸಿರುವ ಕೀರ್ತಿ ಇವರದು. ಕನ್ನಡ ಹಿರಿಯ ಸಾಹಿತಿ ಭೈರಪ್ಪನವರ ಕಾದಂಬರಿಯನ್ನು ಸಂಸ್ಕೃತಕ್ಕೆ ಅನುವಾದ ಮಾಡಿದ್ದಾರೆ. ಇಂತಹಾ ಮೇರು ವಿದ್ವಾಂಸರೊಬ್ಬರು ಬರೆದ ಮಣ್ಣಿನ ಕನಸು ಎಂಬ ಕಾದಂಬರಿ ನಾವೆಲ್ಲರೂ ಪ್ರತಿಯೊಬ್ಬರೂ ಆಸ್ವಾದಿಸಬಹುದಾದ ಶ್ರೇಷ್ಠ ಕೃತಿ ರತ್ನ ಎನ್ನಲು ಅಡ್ಡಿ ಇಲ್ಲ. ಶುದ್ಧ ಸಾಹಿತ್ಯಕೃತಿಯನ್ನು ರಚಿಸಬೇಕೆಂಬ ಶತಾವಧಾನಿ ಗಣೇಶ್ ಅವರ ಹಂಬಲವು ‘ ಮಣ್ಣಿನ ಕನಸು ‘ ಕೃತಿಯು ಮೂಲಕ ನನಸಾಗಿದೆ. ಗಣೇಶರು ತಮ್ಮ ದಶಕಗಳ ಅಧ್ಯಯನದ ಸಾರವನ್ನು ಈ ಕಾದಂಬರಿಯ ಮೂಲಕ ಕಟ್ಟಿ ಕೊಟ್ಟಿದ್ದಾರೆ. ಇನ್ನು ಈ ಕಾದಂಬರಿಯನ್ನು ಒಮ್ಮೆಲೇ ಒಂದೇ ಓದಿಗೆ ಓದುವುದು ತುಸು ಕಷ್ಟ. ಅದು ನಿಧಾನವಾಗಿ ರಸಾಸ್ವಾದನೆ ಜತೆಗೆ ಓದುತ್ತಾ ಮೈಮರೆಯಬೇಕಾಗುತ್ತದೆ. ಹಾಗಾಗಿ ಇದು ಕನ್ನಡದಲ್ಲಿ ಇದುವರೆಗೆ ಬಂದ ದೇವುಡು, ಕುವೆಂಪು, ಭೈರಪ್ಪ, ಕಾರಂತರ ಕಾದಂಬರಿಯ ಸಮಸಮವಾಗಿ ನಿಲ್ಲಬಲ್ಲ “ಕ್ಲಾಸಿಕ್” ಕೃತಿಯಾಗಿದೆ.

-ರಾಘವೇಂದ್ರ ಅಡಿಗ ಎಚ್ಚೆನ್.

ಮಣ್ಣಿನ ಕನಸು (ಕಾದಂಬರಿ)
ಲೇಖಕ: ಶತಾವಧಾನಿ ಆರ್.  ಗಣೇಶ
ಪುಟಗಳು 658
₹ 600.00
ಪ್ರಕಟಣೆಯ ವರ್ಷ: 2022
ಪ್ರಕಟಣೆ: ಸಾಹಿತ್ಯ ಪ್ರಕಾಶನ,
ವಿಳಾಸ: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020
ದೂರವಾಣಿ: 09448110034

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x