ಅಷ್ಟು ಪ್ರೀತಿ ಇಷ್ಟು ಪ್ರೀತಿ ಎಣಿಸಿ ಕಷ್ಟಬಡದಿರು: ಮನು ಗುರುಸ್ವಾಮಿ

ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇ
ನೀಡುವೆನು ರಸಿಕ ನಿನಗೆ
ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ

ಬೇಂದ್ರೆ… ಧಾರವಾಡ ಅಜ್ಜ, ಶಬ್ದಗಾರುಡಿಗ, ಬದುಕಿನ ಅನನ್ಯತೆಯನ್ನು ಪದ್ಯಗಳಲ್ಲಿ ಹಿಡಿದಿಟ್ಟ ಮಾಂತ್ರಿಕ. ಬಡತನದ ಬೇಗೆಯಲ್ಲೂ ದಾಂಪತ್ಯವೆಂಬುದು ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟ ಕವಿ. ಕೆ ಎಸ್ ನರಸಿಂಹಸ್ವಾಮಿ ಒಂದುಕಡೆ “ಪ್ರೇಮವೆನಲು ಹಾಸ್ಯವೆ ?” ಎಂದ ಪ್ರಶ್ನಿಸುತ್ತಾರೆ. ಆಗಿದ್ದರೆ ? ಒಲವೆಂಬುದೇನು ? ಅದು ಹುಡುಗಾಟವಲ್ಲ. “ಒಲವೆಂಬುದು ಹೊತ್ತಿಗೆ” ಎನ್ನುವುದೇ ಬೇಂದ್ರೆಯವರ ನಿಲುವು. ಪ್ರೀತಿ ಮತ್ತು ದಾಂಪತ್ಯವನ್ನು ಒಂದುಗೊಳಿಸಿ ಕಾವ್ಯವನ್ನು ಕಟ್ಟಿಕೊಡುವ ಬೇಂದ್ರೆ, ತಮ್ಮ ಹಲವು ಕವಿತೆಗಳಲ್ಲಿ ಅವುಗಳ ಮಹತ್ವವನ್ನು ಪ್ರಸ್ತಾಪಿಸುತ್ತಾರೆ.

ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡವದನೆ ನಾವು
ಅದಕು ಇದಕು ಎದಕು

ಈ ಕವಿತೆಯ ಸಾಲುಗಳನ್ನು ಗಮನಿಸಿದಾಗ ಎಷ್ಟು ಖುಷಿ ಎನಿಸುತ್ತದೆ. ಇಂದಿನ ಯುವಜನತೆ, ಅದರಲ್ಲೂ ಯುವತಿಯರು ಮತ್ತು ಅವರ ಪೋಷಕರು ಮದುವೆ ವಿಚಾರ ಬಂದ ತಕ್ಷಣ ವರನ ಸ್ಥಿತಿಗತಿಗಳನ್ನು ಗಮನಿಸುತ್ತಾರೆ. ಬಹುತೇಕರಿಗೆ ಗೊತ್ತಿಲ್ಲ. ಭಾಗಶಃ ಹಣವಿದ್ದವರಿಗೆ ಪ್ರೀತಿಸುವಷ್ಟೂ ಸಮಯವಿರುವುದಿಲ್ಲ. ಅದು ಬಡತನದಲ್ಲೇ ಹೆಚ್ಚು ಹುಟ್ಟಿ ಅರಳುವ ಕಮಲ.

ಇಲ್ಲಿ ಕವಿ ಬಡತನದ ಬೇಗೆಯನ್ನೂ ಬದಿಗಿಟ್ಟು ಒಲವು ಎಂಬುದೇನಿದೆಯೋ ಅದೇ ನಮ್ಮ ಬದುಕು. ಪ್ರತಿ ವಿಚಾರದಲ್ಲೂ ಪ್ರೀತಿಯನ್ನು ಎಳೆದು ತರುವ ನಮಗೆ ಅದರ ಕೊರತೆಯಿರುವುದಿಲ್ಲ. ಒಲವನ್ನು ನಂಬಿ ಬದುಕುವ ಕಲೆಯನ್ನು ನಾವು ರೂಢಿಸಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ. ಬಡತನ ಒಡೆತನ ಕೊನೆವರೆಗೂ ಬರುವುದಿಲ್ಲ ಎನ್ನುವ ಕವಿ –

ಬಡತನ ಒಡೆತನ ಕಡೆತನಕುಳಿದಾವೇನ
ಎದೆಹಿಗ್ಗು ಕಡೆಮುಟ್ಟ
ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ
ಕಡೆಗೋಲು ಹಿಡಿಹುಟ್ಟ !

ಬದುಕಿನ ಕಡಲಿನಲ್ಲಿ ನೌಕೆ ಇಳಿಸಿರುವ ನಾವು ಒಂದು ದಡವನ್ನು ಮುಟ್ಟುವ ಅಗತ್ಯವಿದೆ. ಅದನ್ನು ಬಿಟ್ಟು ಚಿಂತಿಸುತ್ತಾ ಕೂತರೇಗೆ ? ಮುಳುಗುವುದು ಬೇಡ; ಹುಟ್ಟನ್ನ ಹಿಡಿದು ದಡ ಮುಟ್ಟಿಬಿಡೋಣವೆಂದು ಅಭಿಪ್ರಾಯಿಸಿದ್ದಾರೆ.

“ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
ನಾನೂನು ನಕ್ಕೇನ”

ಈ ಸಾಲುಗಳನ್ನು ಗಮನಿಸಿದಾಗ ಕೆ ಎಸ್ ನರಸಿಂಹಸ್ವಾಮಿ ಅವರ “ಒಂದು ಹೆಣ್ಣಿಗೊಂದು ಗಂಡು, ಹೇಗೋ ಸೇರಿ ಹೊಂದಿಕೊಂಡು” ಎಂಬ ಕವಿತೆಯ ಸಾಲುಗಳೂ ನೆನಪಾಗುತ್ತವೆ. ಪ್ರೀತಿಯಲ್ಲೇ ಆಗಲಿ, ದಾಂಪತ್ಯದಲ್ಲೇ ಆಗಲಿ ಹೊಂದಾಣಿಕೆ ಮುಖ್ಯ. “ಎತ್ತು ಏರಿಗೇಳಿದರೆ, ಕೋಣ ನೀರಿಗೆ ಎಳೆಯಿತ್ತು” ಎಂಬ ಗಾದೆಯಂತೆ ಗಂಡು ಹೆಣ್ಣು ತದ್ವಿರುವಾದರೆ ದಾಂಪತ್ಯವಾಗಲಿ, ಪ್ರೀತಿಯಾಗಲಿ ಬಹುಕಾಲ ಉಳಿಯುವುದಿಲ್ಲ. ತನ್ನ ಕೈಯಿಡಿದು ಸಪ್ತಪದಿ ತುಳಿದು ಬಂದಿರುವ ಮಡದಿಯನ್ನು ಕುರಿತು ನಿನ್ನ ದುಃಖವೇನಿದೆಯೋ ಅದನ್ನು ನುಂಗಿ ಒಮ್ಮೆ ನಕ್ಕುಬಿಡು; ನಿನ್ನ ನಗುಮುಖವ ಕಂಡು ನಾನೂನು ನಕ್ಕುಬಿಡುತ್ತೇನೆ ಎಂಬ ಕವಿಯ ನಿಲುವು ದಾಂಪತ್ಯದಲ್ಲಿ ಒಲವಿನ ಪಾತ್ರವೇಷ್ಟಿದೆ ಎಂಬುದನ್ನು ಒತ್ತಿ ಹೇಳುತ್ತದೆ. ಮತ್ತೊಂದು ಕವಿತೆಯಲ್ಲಿ:

ಹುದುಗಲಾರದ ದುಃಖ ಹುಗಿದಿರಿಸಿ ನಗೆಯಲ್ಲಿ
ನಸುನಗುತ ಬಂದೆ ಇದಿರು;
ಇನಿತು ತಿಳಿಯದ ಮೂಢನೆಂದು ಬಗೆದೆಯೆ ನನ್ನ
ಇದು ಯಾವ ಊರ ಚದುರು ?

ಪ್ರೀತಿಯಲ್ಲಿ ಅಥವಾ ದಾಂಪತ್ಯದಲ್ಲಿ ಗಂಡಾಗಲಿ ಹೆಣ್ಣಾಗಲಿ ಪರಸ್ಪರರನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯವಾದ ಸಂಗತಿ. ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವಲ್ಲಿ ವಿಫಲರಾದರೋ ? ಅವರ ಪ್ರೀತಿಯೂ ವಿಫಲವಾದಿತು; ದಾಂಪತ್ಯವೂ ಕೂಡ. ಇಲ್ಲಿ ಹೆಂಡತಿಯೊಬ್ಬಳು ತನ್ನ ದುಃಖವನ್ನು ನಗೆಯ ಹಿಂದೆ ಮರೆಮಾಡಿ ಗಂಡನೆದುರು ಬಂದಿರುವಂತಹ ಸನ್ನಿವೇಶದಲ್ಲಿ ಆಕೆಯ ಪತಿ ಮಾತನಾಡುತ್ತಾ ತಡೆಯಲಾರದ ನೋವನ್ನು ನಗುವಿನ ಹಿಂದೆ ಮರೆಮಾಡಿ ನಸುನಗುತು ಎದುರು ಬಂದಿರುವೆಯಲ್ಲ? ನಿನ್ನ ದುಃಖವನ್ನು ಅಥವಾ ನಿನ್ನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳದಷ್ಟೂ ದಡ್ಡನೆ ನಾನು ಎಂದು ಪ್ರಶ್ನಿಸುತ್ತಿದ್ದಾನೆ. ಇಲ್ಲಿ ಪರಸ್ಪರರನ್ನು ಅರ್ಥಮಾಡಿಕೊಳ್ಳುವ ಧಾಟಿ ವಿಭಿನ್ನ. ತನ್ನ ಗಂಡನಿಗೆ ದುಃಖ ತೋರಬಾರದು; ಆತನು ನೊಂದುಕೊಳ್ಳಬಹುದೆಂಬುದು ಹೆಣ್ಣಿನ ಮನಸ್ಥಿತಿಯಾದರೆ, ತನ್ನ ಹೆಂಡತಿ ನೋವಿನಲ್ಲಿರುವುದನ್ನು ಆಕೆಯ ಮುಖ ನೋಡಿಯೇ ಗ್ರಹಿಸಿಕೊಂಡದ್ದು ಗಂಡಿನ ಮನಸ್ಥಿತಿಯಾಗಿದೆ. ಮುಂದುವರಿದು ಒಲವೆಂಬ ಹೊತ್ತಿಗೆಯ ಬಗ್ಗೆ ಮಾತನಾಡಿರುವ ಕವಿ :

ಒಲವೆಂಬ ಹೊತ್ತಿಗೆಯ ಓದ ಬಯಸುತ ನೀನು
ಬೆಲೆ ಎಷ್ಟು ಎಂದು ಕೇಳುತಿಹೆಯ ಹುಚ್ಚ
ಹಗಲಿರುಳು ದುಡಿದರೂ ಹಲ ಜನುಮ ಕಳೆದರೂ
ನೀ ತೆತ್ತಲಾರೆ ಬರಿ ಅಂಚೆ ವೆಚ್ಚ !

ಈಗಾಗಲೇ ಹೇಳಿದಂತೆ ಒಲವೆಂಬುದು ಹುಡುಗಾಟಿಕೆಯ ವಿಷಯವಲ್ಲ; ಅದೊಂದು ಧ್ಯಾನ; ತಪ್ಪಸ್ಸು; ಹೊತ್ತಿಗೆ. ಒಲವಿಗೆ ಬೆಲೆ ಕಟ್ಟಲು ಸಾಧ್ಯವೆ ? ಸಾಧ್ಯವಿಲ್ಲವೆಂಬುದು ಬೇಂದ್ರೆಯವರ ವಿಚಾರ. ಇದನ್ನು ಇಂದಿನ ಯುವ ಜನತೆ ಸಂಪೂರ್ಣವಾಗಿ ಅರ್ಧಮಾಡಿಕೊಳ್ಳುವ ಅಗತ್ಯವಿದೆ. ಸದಾ ಪ್ರೀತಿ ಪ್ರೇಮದ ಗುಂಗಿನಲ್ಲಿರುವ ಯುವಪೀಳಿಗೆ, ಒಲವೆಂದರೆ ಏನು ? ನೈಜ್ಯ ಪ್ರೀತಿಯ ಲಕ್ಷಣಗಳಾವುವು ? ಮೊದಲಾದ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮದುವೆಯಾಗಿ ಮಕ್ಕಳಾದಂತವರೆ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಿದ್ದಾರೆ; ಇನ್ನೂ ನಮ್ಮ ಪ್ರೀತಿ ಯಾವ ಮಹಾ ಎಂದು ಬಂಡಪ್ರಶ್ನೆಗಳನ್ನು ಎತ್ತುವ ಮೂಢರಿಗೆ ದಾಂಪತ್ಯ, ಪ್ರೀತಿಯ ಬೆಲೆ ತಿಳಿದಿರುವುದಿಲ್ಲ. ಅಲ್ಲಿ ಪ್ರಾಮಾಣಿಕತೆಯೂ ಇರುವುದಿಲ್ಲ. ಆಕರ್ಷಣೆಗೋ, ಆಮಿಷಕ್ಕೊ, ಆಸೆಗೋ ಒಳಗಾಗಿ ಬೇಸತ್ತ ಮೇಲೆ ಪ್ರೀತಿ ಸಪ್ಪೆಯೆಂದರೆ ಏನು ಬಂತು ? ಅಕ್ಷರ ಸಹ ಅದೂ ಪ್ರೀತಿಯೇ ಅಲ್ಲ. ಒಲವೆಂಬುದು ಬೆಲೆಕಟ್ಟಲಾಗದ ಪುಸ್ತಕದಂತೆ.. ಅದರ ಬೆಲೆ ಎಷ್ಟು ಎಂದು ಕೇಳಿ ಕೊಂಡುಕೊಳ್ಳುಲು ಸಾಧ್ಯವಿಲ್ಲ. ಏಕೆಂದರೆ ಒಲವಿಗೆ ಬೆಲೆ ಕಟ್ಟಲಾಗದು. ಇಡೀ ಜನುಮ ಪೂರ್ತಿ ದುಡಿದರೂ ಎಷ್ಟೇ ಜನುಮವೆತ್ತಿ ಬಂದರೂ ಪ್ರೀತಿಯ ಋಣವನ್ನು ತೀರಿಸಲು ಸಾಧ್ಯವೇ ಇಲ್ಲವೆನ್ನುವ ಕವಿ ಮತ್ತೊಂದು ಕವಿತೆಯಲ್ಲಿ :

ಅಷ್ಟು ಪ್ರೀತಿ ಇಷ್ಟು ಪ್ರೀತಿ
ಎಣಿಸಿ ಕಷ್ಟಬಡದಿರು
ಒಲೆದು ಒಲಿಸಿ ಸುಖವಿರು
ಎಷ್ಟೆಯಿರಲಿ ಅಷ್ಟೇ ಮಿಗಿಲು
ತಮ್ಮ ಕಿರಣ ತಮಗೆ ಹಗಲು
ಉಳಿದ ಬೆಳಕು ಕತ್ತಲು

ನಮ್ಮ ಪಾಲಿನದೇಷ್ಟಿದೆಯೋ ಅದೇ ನಮಗೆ ಹಿತ. ಅದು ಒಲವಾಗಿರಲಿ; ಚೆಲುವಾಗಿರಲಿ. ನಮಗೆ ದಕ್ಕಿರುವ ಪ್ರೀತಿ ಅಷ್ಟು ಇಷ್ಟು ಎಂಬಂತೆ ಮತ್ತೊಂದರ ಜೊತೆ ಹೋಲಿಸಿ, ಎಣಿಸಿ ನಿರಾಶೆಗೆ ಒಳಗಾಗುವುದು ಏತಕೆ ? ಎಲ್ಲಿ ಪ್ರೀತಿಯಿದೆಯೋ ಆ ಪ್ರೀತಿಗೆ ಒಲಿದು, ಆ ಪ್ರೀತಿಯನ್ನು ಅಷ್ಟೇ ಪ್ರೀತಿಯಿಂದ ಒಲಿಸಿಕೊಂಡು ಸುಖದ ಜೀವನವನ್ನು ನಡೆಸಬೇಕು. ಆ ಪ್ರೀತಿ ಎಷ್ಟಿರಲಿ, ಹೇಗಿರಲಿ ಅದೇ ನಮಗೆ ಮಿಗಿಲಾಗಿರಬಲ್ಲದು. ನಮ್ಮದೇನಿದೆಯೋ ಅದಷ್ಟೇ ನಮ್ಮ ಪಾಲಿನದು. ಉಳಿದದ್ದು ನಮ್ಮದಲ್ಲವೆಂದು ತಿಳಿದು, ಇರುವ ಪ್ರೀತಿಯನ್ನೇ ಪ್ರೀತಿಸಿಕೊಂಡು ಬದುಕು ದೂಡಬೇಕು. ಅದನ್ನೇ ಕವಿ “ಮರದ ಅಡಿಗೆ ಗುಡಿಸಲಿರಲಿ ಅಲ್ಲೆ ಒಲವು ಮೆರೆಯದೇ ?” ಎಂದಿದ್ದಾರೆ.

ರೇಖಾಚಿತ್ರ:ಉಪೇಂದ್ರಪ್ರಭು

ಇನ್ನೂ ಒಲವಿನಲ್ಲಿ ಮುನಿಸು ಬಂದಂತಹ ಸಂದರ್ಭದಲ್ಲಿ ಸಂಭಾವಿಸುವುದಿದೆಯಲ್ಲಾ ಅದು ತುಂಬಾ ತ್ರಾಸದಾಯಕ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಇದ್ದರೂ ಕೂಡ, ಆ ಕ್ಷಣಿಕ ಮುನಿಸು ಕೂಡ ಒಲವು ಹೆಚ್ಚಾಗಲು ಕಾರಣವಾಗುತ್ತದೆ. ತನ್ನೊಂದಿಗೆ ಮುನಿದು ಹೊರಟು ನಿಂತ ಇನಿಯನನ್ನು ಆತನ ಮನದನ್ನೆಯೊಬ್ಬಳು ಪ್ರಶ್ನಿಸುತ್ತಿದ್ದಾಳೆ :

ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗ ಕನಸು
ಪ್ರಾಯ ತಿಳಿಯಲಿಲ್ಲ ನಿನ್ನ ಮನಸು
ನೀ ಹೊರಟಿದ್ದೀಗ ಎಲ್ಲಿಗೆ
ಎಂದೂ ಇಲ್ಲದ ಮುನಿಸು ಇಂದೇಕೆ ನಿನಗೆ ಬಂದಿದೆ ? ನೀನು ಮುನಿಸಿಕೊಂಡಿದ್ದಕ್ಕೆ ಕಾರಣವಾದರೂ ಏನು ? ಇದನ್ನು ನಾನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಈ ಬೆಳದಿಂಗಳ ರಾತ್ರಿಯಲ್ಲಿ ನನ್ನ ಜೊತೆ ಮುನಿದುಕೊಂಡು ಹೊರಟು ನಿಂತದ್ದು ಸರಿಯೆ ? ಎಂಬುದಾಗಿ ನಲ್ಲನನ್ನು ಕೇಳುತ್ತಿರುವ ಹೆಣ್ಣೊಬ್ಬಳ ಭಾವನೆಯನ್ನು ಕವಿ ಇಲ್ಲಿ ತಂದಿದ್ದಾರೆ. ಬಹುಶಃ ಇಲ್ಲಿ ಶೃಂಗಾರದಲ್ಲಿ ವಿರಹವಿರುವುದನ್ನು ನಾವು ಗಮನಿಸಬಹುದು.
ಆದರೆ ಒಲವಿನಲ್ಲಿ ವಿರಹವೇ ಕಾಡಿದರೆ ಹೇಗೆ ? ಅದನ್ನೂ ಕವಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಒಬ್ಬ ಚೆಲುವನ ಪ್ರೀತಿಗೆ ಸಿಲುಕಿದ ಹೆಣ್ಣುಮಗಳೊಬ್ಬಳು, ಒಂದು ಬಾರಿ ತನ್ನತ್ತ ನಗುವನ್ನು ಬೀರಿ ಮತ್ತೆ ಹಿಂದುರುಗಿ ನೋಡದೆಯೂ ಹೊರಟುಹೋದ ಹುಡುಗನನ್ನು ನೆನಪಿಸಿಕೊಳ್ಳುತ್ತಿರುವ ಚಿತ್ರಣ ಇಲ್ಲಿದೆ :

ಒಂದೇ ಬಾರಿ ನನ್ನ ನೋಡಿ
ಮಂದ ನಗೀ ಹಾಂಗs ಬೀರಿ
ಮುಂದs ಮುಂದs ಮುಂದs ಹೋದ ||
ಹಿಂದs ನೋಡದs | ಗೆಳತಿ
ಹಿಂದs ನೋಡದs

ತನ್ನ ಪ್ರೀತಿಯನ್ನು, ಪ್ರೀತಿಸಲ್ಪಟ್ಟ ಹುಡುಗನನ್ನು ನೆನಪಿಸಿಕೊಳ್ಳುತ್ತಿರುವ ಹುಡುಗಿ ತನ್ನ ಗೆಳತಿಯೊಂದಿಗೆ ತನ್ನ ಮನದಲ್ಲಾಗುತ್ತಿರುವ ತಲ್ಲಣಗಳ ಬಗ್ಗೆ ಹೇಳಿಕೊಳ್ಳುತ್ತಿರುವ ವಿಚಾರ ಇಲ್ಲಿದೆ.

ಹೇಳಬೇಕೆಂದರೆ, ಒಲವೆಂಬುದು ಮನುಷ್ಯನಿಗೆ ದಕ್ಕಿರುವ ವಿಶೇಷತೆಗಳಲ್ಲಿ ಒಂದು. ಅದರೆ ಮನುಷ್ಯ ಪ್ರೀತಿಯನ್ನು ಹಂಚುವ ಬದಲು ದ್ವೇಷವನ್ನು ಹಂಚುತ್ತಿದ್ದಾನೆ. ಇಂದು ದಾಂಪತ್ಯದಲ್ಲೂ ಕೂಡ ಸಣ್ಣ ಸಣ್ಣ ವಿಚಾರಕ್ಕೂ ಬಿರುಕು ಮೂಡಿ ವಿಚ್ಛೇದನಗಳು ಹೆಚ್ಚಾಗುತ್ತಿರುವುದನ್ನು ಕಂಡಿದ್ದೇವೆ. ಆಗೇ ಪ್ರೇಮ ವೈಫಲ್ಯದ ಹೆಸರಿನಲ್ಲಿ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳ ಬಗ್ಗೆಯೂ ಕೇಳಿದ್ದೇವೆ. ನಮಗೆ ಬೇಕಾಗಿರುವುದು ಒಲವು. ಆ ಒಲವಿಗೆ ಯಾವ ವ್ಯಕ್ತಿ ಬೆಲೆ ನೀಡಬಲ್ಲನೋ ಅಂತಹ ಸರಿಯಾದ ವ್ಯಕ್ತಿಯೊಂದಿಗೆ ಅಮೂಲ್ಯವಾದ ಒಲವನ್ನು ವಿನಿಯೋಗಿಸಬೇಕು. ಅಪಾತ್ರರಿಗೆ ಪ್ರೀತಿ ನೀಡಿದಾಗ, ಅಪಾತ್ರರ ನಡುವೆ ಮದುವೆ ಏರ್ಪಟ್ಟಾಗ ಒಲವು ಹೆಚ್ಚು ದಿನ ಬದುಕುವುದಿಲ್ಲ. ಒಲವಿನ ಬೆಲೆ ತಿಳಿಯಬೇಕು. ಒಲವೆಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮದುವೆ ಆಡಂಬರದಿಂದಾದರೂ ಮದುವೆಯ ನಂತರ ಅವರ ಬದುಕು ಹೇಗಿರಬಲ್ಲದು ಎಂಬುದೂ ಇಲ್ಲಿ ಮುಖ್ಯವಾಗುತ್ತದೆ. ಅದನ್ನೇ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರೂ ಹೇಳಿರುವುದು : “ಮದುವೆ ಮಹತ್ತರವಾದ ವಿಚಾರವಲ್ಲ; ಆ ನಂತರದ ಬದುಕು ಮುಖ್ಯ”. ಬಡತನವೇ ಇರಲಿ, ಸಿರಿತನವೇ ಇರಲಿ ಗಂಡು ಹೆಣ್ಣು ಹೊಂದಾಣಿಕೆಯಲ್ಲಿ ಹೆಜ್ಜೆ ಇಟ್ಟರೆ ಆ ಬಾಳು ಧನ್ಯ. ಬೇಂದ್ರೆ ಅದನ್ನೇ “ಸಪ್ಪೆಬಾಳಿಗಿಂತ ಉಪ್ಪುನೀರು ಲೇಸು” ಎಂದಿದ್ದಾರೆ. ಒಟ್ಟಾರೆಯಾಗಿ ಬಾಳಿನ ಕಡಲನ್ನು ದಾಟಬೇಕಾದರೆ‌ ಒಲವಿನ ಅಗತ್ಯವೇಷ್ಟಿದೆ ಎಂಬುದನ್ನು ತಮ್ಮ ಕಾವ್ಯಗಳಲ್ಲಿ ಹಿಡಿದಿಟ್ಟು ರಸಿಕರ ಮತ್ತು ಸಹೃದಯರ ಮನದಲ್ಲಿ ನಿಜ ಒಲುಮೆಯ ತಿಳಿದೀಪವನ್ನು ಬೇಂದ್ರೆ ಹೊತ್ತಿಸಿದ್ದಾರೆ.

ಮನು ಗುರುಸ್ವಾಮಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x