ಮನಸಿನ ರಾಜಕುಮಾರ: ಮಧುಕರ್ ಬಳ್ಕೂರ್

“ವಾವ್ಹ್..! ಯಶು ಈ ನಡುವೆ ಅದೆಷ್ಟು ಸುಂದರವಾಗಿ ಕಾಣ್ತಾಳೆ..! ಅದ್ಯಾಕೆ ನನ್ನನ್ನು ಅಷ್ಟೊಂದು ಅಟ್ರಾಕ್ಟಿವ್ ಮಾಡ್ತಿದಾಳೆ..! ಈಗ ಇದ್ದ ರೂಪವಲ್ಲವೆ ಆಗಲೂ ಇದ್ದಿದ್ದು..! ನನಗಂತೂ ಅರ್ಥ ಆಗ್ತಾ ಇಲ್ಲ. ಒಂದಂತೂ ನಿಜ. ಇಷ್ಟು ದಿನ ನಾನು ನೋಡಿರೋ ಹುಡುಗಿರಲ್ಲೆ ಯಶು ತುಂಬಾನೆ ಸ್ಪೇಷಲ್. ಅವಳಲ್ಲೆನೋ ಒಂದು ನಿಗೂಢತೆ ಇದೆ..! ಅದೇನು ಒಮ್ಮೆಲೇ ಹುಟ್ಟಿ ಸಾಯುವಂತ ಆಕರ್ಷಣೆ ಅಲ್ಲ. ಮುಗಿಲಾರದ ಸೆಳೆತವೆನೋ ಅನ್ನಿಸ್ತಾ ಇದೆ..! ಜೀವನ ಸಂಗಾತಿಯಲ್ಲಿ ನೋಡುವ ಸೆಳೆತವದು. ಸ್ಟುಪಿಡ್ ನಾನು. ಹೋಗಿ ಹೋಗಿ ಇಂತಹ ಹುಡುಗಿಯನ್ನು ನನ್ನ ಟೇಸ್ಟ್ ನವಳಲ್ಲ ಎಂದು ಧನುವಿಗೆ ಗಂಟ್ ಹಾಕ್ದೆ. ಅವನೊಬ್ಬ ಪೂರ್ ಫೇಲೋ. ಈ ಮೂರು ವರ್ಷಗಳಲ್ಲಿ ಯಶು ಮನಸ್ಸನ್ನ ಗೆಲ್ಲೊ ಪ್ರಯತ್ನ ಮಾಡಿಲ್ಲ. ಬರೀ ಬುಕ್ಸ್, ಸ್ಟಡೀಸ್ ಅಂತ ಕಾಲ ತಳ್ಳಿದಾನೆ. ಬೇರೆ ಯಾರೇ ಆಗಿದ್ರು ಇಷ್ಟೊತ್ತಿಗೆ ಪಾರ್ಕ್, ಕಾಫಿ ಡೇ, ಫೀಲ್ಮ್ ಅಂತ ಸುತ್ತಿಸಿ ಎಂಗೇಜ್ ಆಗಿರೋರು. ಅವಳಾದ್ರು ಅಷ್ಟೆ. ಆಸೆ, ಕನಸುಗಳನ್ನೆಲ್ಲ ಒಳಗಡೆಯಲ್ಲೆ ಇಟ್ಟುಕೊಂಡಿರೋ ಹುಡುಗಿ. ಅದೆಂಥ ನಿಯತ್ತು ಅವಳ ಕಣ್ಣಲ್ಲಿ…! ಇದೇ ಅಲ್ವಾ ನನ್ನ ಕೆಣಕತಾ ಇರೋದು..! ಈ ಗೂಬೆ ಧನು ಮನಸ್ಸಲ್ಲಿ ಅದೇನ್ ಇದೆಯೋ..? ಇಲ್ಲಾ ಅಂದ್ರೆ ಈ ಕ್ಷಣಕ್ಕೆ ನನ್ನ ಮನಸಿನ ಡ್ಯಾಮ್ ಅನ್ನ ಅವಳೆದುರು ಓಪನ್ ಮಾಡೋಕೆ ರೆಡಿ. ತಪ್ಪ್ ಮಾಡ್ದೆ ನಾನು” ಹಾಸಿಗೆಯಲ್ಲಿ ನಿದ್ದೆ ಬಾರದೆ ಉರುಳಾಡುತ್ತ ತನ್ನಲ್ಲೆ ಸ್ವಗತ ಹೇಳಿಕೊಂಡ ಸಿದ್ದು.

ಅವನಿಗೀಗ ನಿದ್ದೆ ಬರುತ್ತಿಲ್ಲ. ಕಾಲೇಜ್ ನ ಕಾರಿಡಾರಿನಲ್ಲಿ ನೂರಾರು ಹುಡುಗಿಯರ ಜೊತೆ ಫ್ಲರ್ಟ್ ಮಾಡುತ್ತಾ ಅವರ ಅದೆಷ್ಟೋ ರಾತ್ರಿಗಳನ್ನು ಕದ್ದವನು ಸಿದ್ದು. ಆದರೆ ಈವರೆಗೆ ಯಾವ ಹುಡುಗಿಯೂ ಅವನನ್ನು ಡಿಸ್ಟರ್ಬ್ ಮಾಡಿರಲಿಲ್ಲ. ಪಕ್ಕದ ಬೆಡ್ ನಲ್ಲೇ ಮಲಗಿದ್ದ ಧನು ಶತ್ರು ತರಹ ಕಾಣಲಾರಂಭಿಸಿದ. ಧನು ಇವನ ಹೈಸ್ಕೂಲು ಗೆಳೆಯ. ಸಂಪ್ರದಾಯ ಕುಟುಂಬದಿಂದ ಬಂದವನು. ಸಂಭಾವಿತ. ಹೈಸ್ಕೂಲಿನಿಂದ ಇಂಜಿನಿಯರಿಂಗ್ ಓದುವ ಈ ವೇಳೆಗೂ ಸಹಪಾಠಿ. ಸ್ವಭಾವದಲ್ಲಿ ಸಿದ್ದುವಿಗೆ ತದ್ವಿರುದ್ಧ. ಸದಾ ಪುಸ್ತಕದ ಹುಳು. ಯಾವ ಹೆಣ್ಣು ಸೊಳ್ಳೆಯೂ ಅವನನ್ನು ತಾಕಲು ಸಾಧ್ಯವಿರಲಿಲ್ಲ. ಏಕೆಂದರೆ ಸಭ್ಯತೆ ಎನ್ನುವ ಪರದೆಯನ್ನು ಸದಾ ಕಟ್ಟಿಕೊಂಡವನಾಗಿದ್ದ. ಇದೇ ಸಿದ್ದುವಿಗೆ ಹಿಡಿಸಿದ ಸಂಗತಿ. ಇರುವ ಒಂದು ಲೈಪಿನಲ್ಲಿ ಎಂಜಾಯ್ ಮಾಡಬೇಕು. ತೀರಾ ಕುಡಿತ, ಸಿಗರೇಟ್ ಅಲ್ಲದಿದ್ದರೂ ಗರ್ಲ್ ಫ್ರೆಂಡ್ ಅಂತ ಒಂದು ಜೀವ ಇಲ್ಲದಿದ್ದರೆ ಹೇಗೆ…? ಕಡೆ ಪಕ್ಷ ಒಂದು ಹೆಣ್ಣನ್ನಾದರೂ ಧನು ತನ್ನ ತೆರೆದ ಹೃದಯದಿಂದ ನೋಡಬೇಕು. ಅಥವಾ ಆ ಹೆಣ್ಣಾದರೂ ಇವನ ಹೃದಯದ ಬಾಗಿಲನ್ನು ತೆರೆಯಬೇಕು. ಹೀಗೆ ಅಂದುಕೊಳ್ಳುವಾಗ ಕಂಡವಳು ಯಶು. ಪಕ್ಕಾ ಸಂಪ್ರದಾಯಸ್ಥ ಹುಡುಗಿಯಂತೆ ಕಂಡ ಯಶು ಧನುವಿಗೆ ಸರಿಯಾದ ಜೊತೆ ಎಂದೇ ಬಾವಿಸಿದ್ದ. ಸಾಹಿತ್ಯದ ವಿಧ್ಯಾರ್ಥಿನಿಯಾಗಿದ್ದ ಯಶುಗಳನ್ನು ಕಾಲೇಜ್ ಗೆ ಬಂದ ದಿನವೇ ಧನುವಿಗೆ ಪರಿಚಯ ಮಾಡಿಸಿದ್ದ. ಮೊದಲ ನೋಟದಲ್ಲೇ ಅವರಿಬ್ಬರ ಕಣ್ಣುಗಳು ಮಾತನಾಡಿಕೊಂಡಿದ್ದವು. ಧನುವಿಗೆ ಯಶು ಇಷ್ಟವಾಗಿದ್ದಳು. ರೂಮಿನಲ್ಲಿ ಯಶು ಬಗ್ಗೆ ಕೇಳಿದಾಗಲೆಲ್ಲ ಅವನ ಮುಖ ರಂಗೇರುತ್ತಿತ್ತು. ಒಳಗೊಳಗೆ ಖುಷಿ ಪಡುತ್ತಿದ್ದ. ಆದರೆ ಈಗೀಗ ಅದು ಕಾಣ್ತಾ ಇಲ್ಲ. ಇದೇ ಗೊತ್ತಾಗದೇ ಇರೋದು. ಈ ಮೂರು ವರ್ಷಗಳಲ್ಲಿ ಕಾಲೇಜ್ ನ ಕ್ಯಾಂಟೀನ್ ನಲ್ಲಿ ಅವರಿಬ್ಬರನ್ನು ನೋಡಿದ್ದಷ್ಟೆ. ಪಾರ್ಕ್, ಕಾಫಿ ಡೇ, ಸಿನಿಮಾ ಊಹ್ಹೂ.. ಹೆಚ್ಚೆಂದರೆ ಫೇಸ್ಬುಕ್ ಮೇಸೆಂಜರ್ ನಲ್ಲೊ ವಾಟ್ಸಾಪ್ ನಲ್ಲೊ ಚಾಟಿಂಗ್ ಮಾಡ್ತಾರೆ. ಇಷ್ಟು ದಿನಗಳಲ್ಲಿ ಇದಕ್ಕಿಂತ ಹೆಚ್ಚೆನೂ ಅವರು ಮಾಡಿಲ್ಲ. ಸಿದ್ದುವಿಗೆ ಅದೇ ಡೌಟು..! “ಇವರಿಬ್ಬರು ನಿಜಕ್ಕೂ ಪ್ರೀತಿಸ್ತಾ ಇದ್ದಾರಾ…! ಮದುವೆ ಆಗುವಷ್ಟು..? ಈಗೀಗ ಧನುವಿನ ವರ್ತನೆ ಕೂಡ ವಿಚಿತ್ರವಾಗಿದೆ. ವಾಟ್ಸಾಪ್ ನಲ್ಲಿ ಬರೋ ಪೋಲಿ ಜೊಕ್ಸ್ ಗಳನ್ನು ನೋಡಿ ಒಬ್ಬನೆ ನಗುತ್ತಾನೆ. ಲ್ಯಾಪ್ ಟಾಪ್ ನಲ್ಲಿ ಪೊರ್ನ್ ಸೈಟ್ ಗಳನ್ನು ಕದ್ದು ಮುಚ್ಚಿ ನೋಡ್ತಾನೆ. ಮನಸಲಿ ಅದೇನೋ ಚಡಪಡಿಕೆ. ಆದರೆ ಯಾವುದು ಓಪನ್ ಮೈಂಡೆಡ್ ಇಲ್ಲ. ಯಾರ ಪ್ರೀತಿಗೋ ಹಾತೊರೆಯೋ ರೀತಿಯಲ್ಲಿ ಕಾಣ್ತಾನೆ. ಆದರೆ ಅದು ಯಶು ಅಲ್ಲ. ಯಾವತ್ತೂ ನನ್ನ ಗರ್ಲ್ ಫ್ರೆಂಡ್ ರೀನಾ ಜೊತೆ ಮಾತನಾಡದೆ ಇದ್ದೊನು ಮೊನ್ನೆ ನಾನಿಲ್ಲದ ಟೈಮಲ್ಲಿ ಅವಳ ಡ್ರೆಸ್ ಬಗ್ಗೆ ಕಮೆಂಟ್ ಕೊಟ್ಟನಂತೆ. ನಗು ಬಂತು ನನಗೆ. ಅವಳಿರೋದೆ ಅರ್ಧಂಬರ್ಧ ಡ್ರೆಸ್ ನಲ್ಲಿ. ಅದರಲ್ಲಿ ಅದೇನ್ ನೋಡಿದನೊ…!? ಏನಾಗ್ತ ಇದಾನೆ ಇವನು..!? ಹಾಳಾಗಿ ಹೋಗಲಿ. ನನಗೇನು. ನನಗೆ ಮಾತ್ರ ಯಶು ಮನಸ್ಸಲ್ಲಿ ಏನಿದೆ ಅಂತ ತಿಳ್ಕೊಳ್ಳೊದಷ್ಟೆ ಮುಖ್ಯ. ಅವಳ ಮನಸಿನಲಿ ಅವನಿಲ್ಲ ಅಂತ ಕ್ಲಿಯರ್ ಆದ್ರೆ ಸಾಕು. ನಾಳೇನೆ ನನ್ನ ಪ್ರಪೋಸಲ್ ಅವಳ ಮುಂದಿರುತ್ತೆ. ನಾಳೆ ಬೇರೆ ಫೆಬ್ರವರಿ 14. ದೇವರೇ, ಯಶು ಮನಸಲ್ಲಿ ಧನು ಬಗ್ಗೆ ಪ್ರೀತಿ ಇಲ್ಲದೆ ಇರೋ ಹಾಗೆ ಮಾಡಪ್ಪ” ಎನ್ನುತ್ತಾ ಧನುವನ್ನು ಮನಸಲ್ಲೇ ಬೈದುಕೊಂಡು ಮಗ್ಗಲು ಬದಲಿಸಿದ.

ಇನ್ನೊಂದೆಡೆ ಧನು ಕೂಡ ನಿದ್ದೆ ಬಾರದೆ ಚಡಪಡಿಸುತ್ತಿದ್ದ. ಅವನ ಚಡಪಡಿಕೆಗೆ ಕಾರಣಳಾದವಳು ಮಾತ್ರ ಸಿದ್ದುವಿನ ಗರ್ಲ್ ಫ್ರೆಂಡ್ ರೀನಾ.. ರೀನಾ ಹೇಳಿ ಕೇಳಿ ಮಾಡ್ ಹುಡುಗಿ. ಧನುವಿಗೆ ರೀನಾ ಪಿಯುಸಿಯಿಂದಾನೂ ಗೊತ್ತು. ಆದರೆ ಅವಳನ್ನು ನೋಡಿದ್ದೆಲ್ಲಾ ಸಿದ್ದುವಿನ ಜೊತೆಗಿದ್ದಾಗಲೆ. ಗೆಳೆಯನ ಗರ್ಲ್ ಫ್ರೆಂಡ್ ಆದರೂ ಒಂದು ದಿನವೂ ಅವಳತ್ತ ನೋಡಿ ಹಾಯ್ ಅಂದವನಲ್ಲ. ರೀನಾಳಿಗೆ ಸಿದ್ದುವಿನ ಮೇಲೆ ಹುಚ್ಚು ಪ್ರೀತಿಯಿದ್ದುದು ಧನುವಿಗೆ ಗೊತ್ತಿತ್ತು. ಇವರಿಬ್ಬರು ಪಿಯುಸಿಯ ಆ ದಿನಗಳಲ್ಲೆ ಕ್ಲಬ್, ಪಬ್ಬು, ಡಿಸ್ಕೋಥಿಕ್ ಅಂತ ಸುತ್ತಿದವರು. ಆದರೆ ಧನು ಆ ವಿಷಯದಲೆಲ್ಲ ಮೈಲು ದೂರ. ಆದರೆ ಬರುಬರುತ್ತಾ ಒಂದು ವಿಷಯ ರೀನಾಳಲ್ಲಿ ಇಷ್ಟವಾಗತೊಡಗಿತು. ಅದು ರೀನಾ ಸಿದ್ದುವನ್ನು ಹಚ್ಚಿಕೊಂಡ ಪರಿ. ಅವಳ ಮಾತು, ಲವಲವಿಕೆ, ಕಾಲೇಜ್ ನ ಕಾರಿಡಾರಿನಲ್ಲಿ ನಿರ್ಭಿತಿಯಿಂದ ಸಿದ್ದುವನ್ನು ತಬ್ಬಿಕೊಂಡು ಓಡಾಡುವ ಅವಳ ಧೈರ್ಯ, ಸಿದ್ದುನನ್ನು ಮುದ್ದು ಮಾಡುವ ಆ ಕ್ಷಣಗಳು… ಇವೆಲ್ಲವನ್ನೂ ಹತ್ತಿರದಿಂದಲೋ ಇಲ್ಲ ಕದ್ದುಮುಚ್ಙಿಯೋ ನೋಡಿದ್ದ ಧನುವಿಗೆ ರೀನಾಳ ಮೇಲೆ ಅವ್ಯಕ್ತವಾದ ಸೆಳೆತ ಬೆಳೆಯಿತು. “ಇಂತಹ ಬಿಚ್ಚು ಮನಸಿನ ಸ್ವಚ್ಛ ಹೃದಯದ ಹುಡುಗಿಗೆ ಸಿದ್ದು ಸರಿಯಾದ ಜೋಡಿನಾ…? ನೋ.. ಅವನು ಅವಳಿಂದ ಅವೆಲ್ಲವನ್ನೂ ಬಯಸುತ್ತಿದ್ದಾನಷ್ಟೆ. ಅಷ್ಟು ಬಿಟ್ಟರೆ ಒಂದು ದಿನವೂ ಸಿದ್ದು ಆ ಪರಿಯಾಗಿ ಅವಳನ್ನು ಹಚ್ಚಿಕೊಂಡಿದ್ದು ನೋಡಿಲ್ಲ. ಸಾಲದ್ದಕ್ಕೆ ಅವಳನ್ನು ಅವೈಡ್ ಮಾಡೋದು ಬೇರೆ. ಈ ಮುಂಚೆ ಅವಳು ತುಂಬಾನೆ ಇಷ್ಟ ಆಗ್ತಾ ಇದ್ಲು. ಆದರೆ ಈಗೀಗ ಯಾಕೋ ಅವಳು ಹತ್ರ ಬಂದ್ರೆನೆ ಇರಿಟೇಟ್ ಆಗುತ್ತೆ ಅನ್ನೊನು. ನಾನ್ಸೆನ್ಸ್ ಇವನು. ಅವಳೆಂತಾ ಹುಡುಗಿಯನ್ನು ಇನ್ನು ಅರ್ಥಮಾಡಿಕೊಂಡಿಲ್ಲ. ಅಬ್ಬಬ್ಬಾ ಅಂದರೆ ಏನು ಅವಳು…? ಕೊಂಚ ಮಾಡ್ ಹುಡುಗಿ. ಮಾಡೆಲಿಂಗ್ ಮಾಡುತ್ತಾಳೆಂದ ಮೇಲೆ ಅದು ಇರಲೇಬೇಕು. ಅವಳು ಸಿದ್ದುವಿನಷ್ಟೆ ತನ್ನ ಪ್ರೊಫೆಷನ್ ಅನ್ನು ಇಷ್ಟ ಪಡುತ್ತಾಳೆ. ಅದು ಇವನಿಗೆ ಇಷ್ಟ ಆಗ್ತಾ ಇಲ್ಲ. ಇವನಿಗೆ ಮೋಜು, ಮಸ್ತಿ, ಸುತ್ತಾಟಕ್ಕೆ ರೀನಾ ಬೇಕು. ಆದರೆ ಅವಳ ಆಸೆ ಕನಸುಗಳು ಬೇಡ. ಆದರೆ ರೀನಾ ಮಾತ್ರ ಸಿದ್ದುನನ್ನು ಬರೀ ಬಾಯ್ ಫ್ರೆಂಡ್ ಆಗಷ್ಟೇ ಕಾಣ್ತಾ ಇಲ್ಲ. ಅವನಲ್ಲಿ ಒಬ್ಬ ಪ್ರೇಮಿಯನ್ನು ಕಾಣ್ತಾ ಇದಾಳೆ. ತನ್ನ ಪ್ರೋಫೆಷನ್ ಗೆ ಸಿದ್ದು ಗೈಡ್, ಫಿಲಾಸಫರ್ ಆಗಲಿ ಅಂತ ಆಸೆ ಪಡ್ತಿದಾಳೆ. ಅವನಿಂದ ಒಂದು ಸೆಕ್ಯೂರಿಟಿ ಬಯಸುತ್ತಿದ್ದಾಳೆ. ಅದು ಇವನಿಗೆ ತಿಳಿತಾ ಇಲ್ಲ. ಆದರೆ ನನಗೆ ಅದು ತಿಳಿತಾ ಇದೆ. ಐ ಥಿಂಕ್, ನಾನು ರೀನಾಳ ಪ್ರೀತಿಯಲ್ಲಿ ಬಿದ್ದಿದ್ದೇನೆ. ಅವಳದು ಸೂಜಿಗಲ್ಲಿನ ಸೆಳೆತ. ಮನಸು ಹುಣ್ಣಿಮೆ ಚಂದ್ರನಂತದು. ನಾನು ನೋಡಿದ ಮಟ್ಟಿಗೆ ಅವಳ ಡ್ರೆಸ್ ಸೆನ್ಸ್ ಅದ್ಭುತ. ಯಶು ಇವಳೊಂದಿಗೆ ಹೋಲಿಕೆ ಮಾಡೋಕೆ ಸಾಧ್ಯವಿಲ್ಲ. ನೋಡಲಿಕ್ಕೆ ಅವಳು ಚೆಂದವೆ. ಒಳ್ಳೆಯವಳೆ. ಆದರೆ ರೀನಾಳಲ್ಲಿರುವ ಲವಿಂಗ್ ಸೆನ್ಸ್ ಯಶುಳಲ್ಲಿ ಕಾಣಲು ಸಾಧ್ಯವಿಲ್ಲ. ಈ ಸಿದ್ದು ಅವಳಿಂದ ಕಳಚಿಕೊಳ್ಳಲಿ. ಅವಳ ಅಷ್ಟು ಆಸೆ, ಕನಸುಗಳಿಗೆ ನೀರೆರೆಯಲು ನಾನು ರೆಡಿ. ಅವಳನ್ನು ಹುಚ್ಚನಂತೆ ಪ್ರೀತಿಸುತ್ತೇನೆ. ಅವಳೇ ಬೆರಗಾಗಬೇಕು….” ಹೀಗೆ ಮನಸಿನಲಿ ಕನಸಿನ ಲೋಕವನ್ನು ತೆರೆದುಕೊಳ್ಳುತ್ತಾ ನಾಳೆ ಫೆಬ್ರವರಿ 14 ಎಂಬುದು ನೆನಪಾಗಿ ತನ್ನೊಳಗೆ ಮುಗುಳ್ನಕ್ಕ. ಇಬ್ಬರು ತಮ್ಮ ತಮ್ಮ ಗರ್ಲ್ ಫ್ರೆಂಡ್ ನ್ನು ಮರೆತು ತಮ್ಮ ಗೆಳೆಯನ ಪ್ರೆಯಸಿಯ ಬಗ್ಗೆನೆ ಕನಸು ಕಾಣಲಾಂಭಿಸಿದರು. ಇಬ್ಬರಿಗೂ ಇದೀಗ ಅರಿವಾಗತೊಡಗಿತು. ಇಲ್ಲಿಯವರೆಗೂ ನಾವು ಅಂದುಕೊಂಡಿದ್ದು ಪ್ರೀತಿಯಲ್ಲ. ಈಗ ಅನುಭವವಾಗ್ತ ಇರೋದೆ ನಿಜವಾದದ್ದು ಎಂದು. ಆದರೇನು…? ಗೆಳೆಯ, ಸಹಪಾಠಿ. ತಾನು ಕನವರಿಸುತ್ತಾ ಇರೋದು ಅವನ ಪ್ರೇಯಸಿಯನ್ನ. ಯಾಕೊ ತಾವು ಯೋಚಿಸುತ್ತಿರುವುದು ಆತ್ಮಸಾಕ್ಷಿ ಗೆ ವಿರುದ್ಧವೆನಿಸಿದರೂ ಅದರಲ್ಲೆನು ತಪ್ಪು ಎನ್ನುವ ಮನಸ್ಸಿನ ಸಮರ್ಥನೆ. ಇಬ್ಬರಿಗೂ ಚಡಪಡಿಕೆ. ಈಗಿಂದೀಗಲೇ ಒಂದು ನಿರ್ಧಾರಕ್ಕೆ ಬರಬೇಕೆನ್ನುವ ಆತುರ. ನಾಳೆ ಪ್ರೇಮಿಗಳ ದಿನ ಬೇರೆ. ಇದಕ್ಕಿಂತ ಒಳ್ಳೆ ದಿನ ಇನ್ನೇನು ಬೇಕು..? ಎನ್ನುತ್ತಾ ರಾತ್ರಿಯೆಲ್ಲಾ ಗೆಳೆಯನ ಪ್ರೇಯಸಿಯನ್ನ ತಮ್ಮೆಡೆಗೆ ಸೆಳೆದುಕೊಳ್ಳುವ ತಂತ್ರದಲ್ಲೆ ಕಳೆದರು.

ಬೆಳಿಗ್ಗೆ ಎದ್ದವರಿಗೆ ಎಲ್ಲಿಲ್ಲದ ಹುರುಪು. ತಮ್ಮ ಪ್ರೀತಿಯನ್ನು ಅದಕ್ಕಿಂತ ಹೆಚ್ಚಾಗಿ ಜೀವನ ಸಂಗಾತಿಯನ್ನು ನಿಕ್ಕಿ ಮಾಡಿಕೊಳ್ಳುವುದಕ್ಕಾಗಿ ಎಲ್ಲಿಲ್ಲದ ಉತ್ಸಾಹ. ಸಿದ್ದು ಅಂತೂ ಶುಭ್ರ ಬಿಳಿ ಶರ್ಟ್ ತೊಟ್ಟು ಹಣೆಗೊಂದು ತಿಲಕ ಇಟ್ಕೊಂಡು ಅಲ್ಲೇ ಇದ್ದ ರಾಧಾಕೃಷ್ಣ ಫೋಟೋಗೆ ಕೈ ಮುಗಿದು ಹೊರಟೇ ಬಿಟ್ಟ. ಧನುವಿಗೊ ಆಶ್ಚರ್ಯ…! ಅಷ್ಟೊಂದು ಸ್ಟೈಲಿಶ್ ಆಗಿರುತ್ತಿದ್ದ ಸಿದ್ದು ಇಷ್ಟೊಂದು ಸಿಂಪಲ್ ಆಗಿ ಹೊರಗೆ ಹೊರಟಿರುವುದು..! ಅದು ದೇವರಿಗೆ ಕೈ ಮುಗಿದು..! ಖಂಡಿತ ರೀನಾಳನ್ನು ಮೀಟ್ ಮಾಡೊದಕ್ಕಂತೂ ಅಲ್ಲ. ನನಗೆ ಬೇಕಾಗಿರೋದು ಅದೇ. ನಾನಂತೂ ರೀನಾಳ ಬಳಿ ಎಲ್ಲವನ್ನೂ ಇವತ್ತೆ ಹೇಳಿಕೊಳ್ಳಬೇಕು. ಆದರೆ ಹೇಗೆ..? ತಿಳಿತಾ ಇಲ್ಲ. ಎದೆ ಈಗಲೇ ಜೋರಾಗೆ ಹೊಡೆದುಕೊಳ್ತಾ ಇದೆ! ರೀನಾ ಹೇಗೆ ರಿಯಾಕ್ಟ್ ಮಾಡಬಹುದು! ಇಲ್ಲಿಯವರೆಗೂ ಬರೀ ನೋಡಿದ್ದೆ ಬಂತು. ಒಂದು ಸಾರಿನೂ ಹಾಯ್ ಹೇಳಲಿಕ್ಕೂ ಧೈರ್ಯ ಬರಲಿಲ್ಲ. ಒಂದೇ ಒಂದು ಬಾರಿ ಅವಳ ಡ್ರೆಸ್ ಕಾಮೆಂಟ್ ಮಾಡಿದ್ದೆ. ಅದು ಕೂಡಾ ನನಗೆ ಗೊತ್ತಿಲ್ಲದೆ ಬಂದಿದ್ದು.! ನಾನಾಗಲೇ ಅವಳಲ್ಲಿ ಕಳೆದುಹೋಗಿದ್ದೆ…. ಸಂಜೆ ಅವಳು ತನ್ನ ಡಾನ್ಸ್ ಕ್ಲಾಸ್ ನಲ್ಲಿ ಇರ್ತಾಳೆ. ಇದೇ ಸಂದರ್ಭ. ಅವಳನ್ನು ಹಾಸ್ಟೆಲಿಗೆ ಡ್ರಾಪ್ ಮಾಡೋ ನೆಪದಲ್ಲಾದರೂ ನಾನು ಹೋಗಬೇಕು. ಹಾಗೆ ಅಲ್ಲಿ ಸಿದ್ದು ಇರಬಾರದು ಕೂಡಾ. ಸಿದ್ದು ಬರೋದು ಡೌಟು. ಅಲ್ಲಿಗೆ ಪ್ರೇಮಿಗಳ ದಿನದಂದು ಸಿದ್ದುವಿನ ಪ್ರೀತಿಗೆ ಬೀಳುತ್ತೆ ಪುಲ್ ಸ್ಟಾಪ್. ರೀನಾಳೊಂದಿಗೆ ನನ್ನ ಪ್ರೀತಿ ನಾನ್ ಸ್ಟಾಪ್. ಓ ಕೃಷ್ಣ, ಎಲ್ಲಾ ನಿನ್ನ ಮೇಲೆ ಇದೆ. ರೀನಾ ಮುಂದೆ ನಿಲ್ಲಲು ನಂಗೇ ಧೈರ್ಯ ಕೊಡಪ್ಪಾ..” ಅಂತ ಅದೇ ರಾಧಾಕೃಷ್ಣ ಫೋಟೋಗೆ ತಾನು ಕೂಡ ಕೈ ಮುಗಿದ.

ಅದು ಕಾಲೇಜು ಕಾರಿಡಾರಿನ ಕ್ಯಾಂಟೀನ್. ಸಿದ್ದು ಯಶು ಎದುರು ಬದುರು ಕುಳಿತಿದ್ದರು. ಸಿದ್ದು ಅವಳನ್ನೊಮ್ಮೆ ಗಮನಿಸಿದ. ಆಗಷ್ಟೇ ಮೊಗ್ಗು ಅರಳಿದ ಹೂವಿನಂತೆ ಕಂಗೊಳಿಸುತ್ತಿದ್ದಳು. ಇಂತಹ ಅರಳಿದ ಪುಷ್ಪ ಬಾಡದಂತೆ ಕೊನೆಯವರೆಗೂ ಇರಬೇಕೆಂದರೆ ಅದು ನನ್ನ ಹೃದಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಆಗಲೇಬೇಕು. Carry on ಸಿದ್ದು… ಎಂದು ಮನಸಿನಲ್ಲಿ ಅಂದುಕೊಂಡವನೆ “ಯಶು, ಈ ನಡುವೆ ಧನು ಬಗ್ಗೆ ನಿನ್ನ ಓಪಿನಿಯನ್ ಏನು…? ಐ ಮೀನ್, ನಿಮ್ಮ ರಿಲೇಶನ್ ಯಾವ ಹಂತದಲ್ಲಿದೆ ಅಂತ ತಿಳ್ಕೊಳ್ಳೊಕೆ ಅಷ್ಟೆ” ಎನ್ನುತ್ತಾ ಅವಳ ಮಾತುಗಳಿಗೆ ಕಿವಿಯಾಗಲು ಕಾತರನಾದ. ಯಶು ಒಂದು ಕ್ಷಣ ಸೈಲಂಟಾದಳು. ಅವಳ ಮುಖದಲ್ಲಿ ಗೊಂದಲವಿತ್ತು. “ಚೆನ್ನಾಗಿದೆ. ಬಟ್ ಅವರ್ಯಾಕೋ ಈ ಮುಂಚಿನ ತರಹ ಇಲ್ಲಾ ಅನ್ನಿಸ್ತಿದೆ. ಏನನ್ನೊ ಕಳಕೊಂಡಿರೊ ಹಾಗೆ, ಯಾವುದನ್ನೊ ಹುಡುಕ್ತಾ ಇರೋರ ಹಾಗೆ ಕಾಣಿಸ್ತಿದಾರೆ. ಐ ಡೊಂಟ್ ನೋ, ನಾನು ಏನು ಅಂತ ಕೇಳಿಲ್ಲ. ಆರಂಭದಲ್ಲಿ ಐ ಲವ್ ಯೂ ಐ ಮಿಸ್ ಯೂ ಅಂತ ಮೆಸೆಜ್ ಮಾಡ್ತಿದ್ರು. ನಾನು ನಿಮ್ಮನ್ನು ಮದುವೆ ಆಗಬೇಕು ಅಂತಾನೂ ಹೇಳಿದ್ರು. ಆ ನಂತರ ಈ ಬಗ್ಗೆ ಮಾತಿಲ್ಲ. ನಾನೇನು ಇದಕ್ಕೆ ರಿಯಾಕ್ಟ್ ಮಾಡಿಲ್ಲ. ನನಗೂ ಅವರು ಇಷ್ಟವೇ. ಈ ಬಗ್ಗೆ ಮನೇಲಿ ಸಿಸ್ಟರ್ ಹತ್ರಾನೂ ಹೇಳಿದ್ದೀನಿ. ಇವರು ನನ್ನನ್ನು ಪ್ರೀತಿಸ್ತಿರೋದು ಹೌದು. ಆದರೆ ಈಗೀಗ ಅವರ ವರ್ತನೆ ನೋಡಿದ್ರೆ ಅದು ಯಾವ ತರಹದ ಪ್ರೀತಿ ಅನ್ನೋದೆ ತಿಳಿತಾ ಇಲ್ಲ. ಮಿಕ್ಕಂತೆ ಅವರು ನನ್ನ ಸ್ಟಡೀಸ್ ಬಗ್ಗೆ ಚರ್ಚೆ ಮಾಡ್ತಿದ್ರು. ತುಂಬಾನೆ ಸಪೋರ್ಟ್ ಕೊಡ್ತಾ ಇದ್ರು. ಆದರೆ ಈಗೀಗ ಅದು ಕಾಣ್ತಾ ಇಲ್ಲ. ಈ ನಡುವೆ ನಮ್ಮ ಭೇಟಿ ಕೂಡಾ ತುಂಬಾನೆ ಕಡಿಮೆ ಆಗಿದೆ. ಇದೇ ಗೊತ್ತಾಗ್ತಾ ಇಲ್ಲ” ಎನ್ನುತ್ತಲೇ ತಲೆ ತಗ್ಗಿಸಿದಳು.

ಸಿದ್ದು ಮನಸಲ್ಲೇ ನಕ್ಕ. ಯಶುಳಂತಹ ಸಾಧ್ವಿ ಹುಡುಗಿಗೂ ಪ್ರೀತಿಯ ಸಾಂಗತ್ಯದಲ್ಲಿ ವ್ಯತ್ಯಾಸವಾದರೆ ಚಡಪಡಿಸುತ್ತಾಳೆಂದು ತಿಳಿಯಿತು. ಅವನಿಗೂ ಇದೇ ಬೇಕಾಗಿತ್ತು. ಇಂತಾ ಸಮಯದಲ್ಲಿ ಮೀನು ಗಾಳಕ್ಕೆ ಬೀಳಲು ಹೆಚ್ಚು ಸಮಯ ಬೇಕಾಗದು ಅಂತಂದುಕೊಂಡವನೆ “ಹೌದು ಯಶು, ನಾನು ಈ ಬಗ್ಗೆ ನಿನ್ನಲ್ಲಿ ಹೇಳಬೇಕೆಂದು ತುಂಬಾ ಸಲ ಅಂದುಕೊಂಡಿದ್ದೆ. ಆದರೆ ಧನು ನಿನಗೆ ಮೋಸ ಮಾಡಲ್ಲ ಅಂತಾನೆ ತಿಳಿದಿದ್ದೆ. ಇಲ್ಲಾ. ಅವನು ನಿನಗೆ ಮೋಸ ಮಾಡ್ತಿದಾನೆ. ಅವನು ನಿಜಕ್ಕೂ ಒಳ್ಳೆ ಹುಡುಗಾನೇ ಇದ್ದ. ಹೈಸ್ಕೂಲು ಡೇಸ್ ನಿಂದ ನೋಡ್ತಾ ಇದಿನಲ್ಲ. ಆದರೆ ಈಗೀಗ ಅವನ ಆಸಕ್ತಿ ಬೇರೆ ಬೇರೆ ಕಡೆ ಹೋಗ್ತಾ ಇದೆ. ನಿನಗೆ ಹ್ಯಾಗೆ ಹೇಳಲಿ. ಅವನು ತುಂಬಾ ಪೊರ್ನ್ ಸೈಟ್ ಗಳನ್ನು ನೋಡ್ತಾನೆ. ಪೊಲಿ ಪೊಲಿ ಜೋಕ್ಸ್ ಗಳು ಅವನ ವಾಟ್ಸಾಪ್ ಗೆ ಬರುತ್ತೆ. ಅದನ್ನ ಯಾರ್ ಯಾರಿಗೋ ಫಾರ್ವರ್ಡ್ ಮಾಡ್ತಾನೆ. ಯಾಕೋ ದಿನದಿಂದ ದಿನಕ್ಕೆ ಅವನ ಟೇಸ್ಟ್ ಬದಲಾಗ್ತ ಇದೆ. ನಿನ್ನ ಎದುರಿಗೆ ಇದನ್ನೆಲ್ಲ ಎಲ್ಲಿ ಹೇಳೋಕಾಗುತ್ತೆ..? ಅದಕ್ಕೆ ನಿನ್ನನ್ನು ಅವೈಡ್ ಮಾಡ್ತಿದಾನೆ. ನನಗೆ ಗೊತ್ತಿಲ್ಲ ಅಂದುಕೊಂಡಿದಾನೆ. ಒಂದೇ ರೂಮ್ ಮೇಟ್ಸ್ ನಾವು. ಎಷ್ಟೇ ಕದ್ದು ಮುಚ್ಚಿ ನೋಡಿದ್ರೂ ಗೊತ್ತಾಗದೆ ಇರುತ್ತಾ…? ಇದರಲೆಲ್ಲಾ ಪಳಗಿರೋನು ನಾನು. ಆದರೆ ನನಗೆ ಇದೆಲ್ಲ ಸಾಕಾಗಿ ಹೋಗಿದೆ. ಸಿಗರೇಟ್, ಡ್ರಿಂಕ್ಸ್, ಗರ್ಲ್ ಫ್ರೆಂಡ್, ಪಾರ್ಟಿ ಇದೆಲ್ಲ ಈಗ ವಾಕರಿಕೆ ಬರ್ತಾ ಇದೆ. ಯಾಕ್ ಗೊತ್ತಾ..? ಇದ್ಯಾವುದರಲ್ಲೂ ಶಾಶ್ವತ ಸುಖ ಸಿಗೋಕೆ ಸಾಧ್ಯ ಇಲ್ಲ. ನಾನಾಗಲೇ ಅನುಭವಿಸಿದೀನಿ. ಪಶ್ಚಾತಾಪ ಪಡ್ತಿದೀನಿ. ಜೀವನದಲ್ಲಿ ನಿನ್ನಂತ ಒಂದು ಹುಡುಗಿ ಸಿಕ್ಕಿದ್ರೆ ಸಾಕು. ಮದುವೆಯಾಗಿ ಮರ್ಯಾದೆಯಿಂದ ಇರಬೇಕು ಅಂತ ಅನ್ನಿಸಿಬಿಟ್ಟಿದೆ. ನಿನ್ನಂತ ಹುಡುಗೀರು ಇದ್ರೆ ಮಾತ್ರ ಅದು ಸಾಧ್ಯವಾಗೋದು. ನಿನಗೆ ಗೊತ್ತಿಲ್ಲ ಯಶು. ನಿನ್ನಂತೋರು ಲಕ್ಷಕ್ಕೆ ಒಬ್ಬರು. ಆದರೆ ಇವನ್ ಏನ್ ಮಾಡ್ತಾ ಇದಾನೆ..? ಇವನಿಗೆ ಈಗ ಗೊತ್ತಾಗಲ್ಲ. ಮುಂದೆ ಗೊತ್ತಾಗುತ್ತೆ. ಐ ಯ್ಯಾಮ್ ಸಾರಿ ಯಶು. ನಾನೇ ನಿನಗೆ ಅವನನ್ನು ಪರಿಚಯ ಮಾಡಿಕೊಟ್ಟಿದ್ದು. ಈಗ ನಾನೇ ಹೇಳ್ತಾ ಇದೀನಿ. ಅವನನ್ನ ಮರೆತು ಬಿಡು. ಇದನ್ನ ಹೇಳೋಕೆ ನಾನು ನಿನ್ನನ್ನು ಇಲ್ಲಿಗೆ ಕರೆಸಿದ್ದು. ನೀನೊಬ್ಬಳು ಒಳ್ಳೆ ಹೆಣ್ಮಗಳು. ಯಾವ ಕಾರಣಕ್ಕೂ ನಿನಗೆ ಮೋಸ ಆಗಬಾರದು”. ಯಶು ತಲೆ ತಗ್ಗಿಸಿದಳು. ಅವಳಿಂದ ಒಂದು ಮಾತು ಹೊರಡುವುದು ಅಸಾಧ್ಯವಾಗಿತ್ತು. ಒಳಗೊಳಗೆ ಸಣ್ಣ ಕೋಪ, ಅಸಹನೆ ವ್ಯಕ್ತವಾಗುತ್ತಿರುವುದನ್ನು ಸಿದ್ದು ಗಮನಿಸಿದ. ‘ಅಂತೂ ಗಾಳಕ್ಕೆ ಮೀನು ಸಿಕ್ಕಿತು. ಇನ್ನು ಕೈ ಸೇರಲು ಇನ್ನೆಷ್ಟು ಹೊತ್ತು ಇವತ್ತಿಗೆ ಇಷ್ಟು ಸಾಕು’ ಅಂದುಕೊಂಡವನೆ ಒಳಗೊಳಗೆ ನಕ್ಕ.

ಧನು ಟ್ರಿಮ್ ಆಗಿ ಶೇವ್ ಮಾಡಿಕೊಂಡಿದ್ದ. ಜೀನ್ಸ್ ಪ್ಯಾಂಟ್, ಟೀ ಶರ್ಟ್ ನೊಂದಿಗೆ ರಿಬಾಕ್ ಶೂ ಅವನನ್ನು ಸ್ಮಾರ್ಟ್ ಆಗಿಸಿತ್ತು. ಗಾಗಲ್ ಅನ್ನ ಕುತ್ತಿಗೆ ಪಟ್ಟಿಯ ಮಧ್ಯದಲ್ಲಿ ಸಿಕ್ಕಿಸಿಕೊಂಡವನೆ ರಾಯಲ್ ಎನ್ ಫೀಲ್ಡ್ ಬೈಕನ್ನೇರಿ ಹೊರಟ. ರೀನಾಳ ಡಾನ್ಸ್ ಕ್ಲಾಸ್ ಎದುರಿನ ಕಾರ್ನರ್ ನಲ್ಲಿ ಬೈಕ್ ನ ಪಾರ್ಕ್ ಮಾಡಿದ. ಅವಳ ಬರುವಿಕೆಗಾಗಿಯೇ ಕಾಯತೊಡಗಿದ. ಒಂದೆಡೆ ಎದೆ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. ಮೈ ಅದಾಗಲೇ ಬೆವೆತು ಹೋಗಿತ್ತು. ಅದೇ ಕ್ಷಣಕ್ಕೆ ರೀನಾ ಕೂಡಾ ತನ್ನ ಕ್ಲಾಸ್ ಮುಗಿಸಿ ಹೊರಗೆ ಬರುತ್ತಿದ್ದಳು. ಜೊತೆಯಲ್ಲಿ ಒಂದಿಷ್ಟು ಮಂದಿ ಹುಡುಗ ಹುಡುಗಿಯರು. ಕೆಲವರಂತೂ ಜೋಡಿಯಾಗಿ ಅಂಟಿಕೊಂಡು ತಮ್ಮದೇ ಲೋಕದಲ್ಲಿ ಕಳೆದುಹೋಗಿದ್ದರು. ಆದರೆ ರೀನಾ ಮಾತ್ರ ಸಿಟ್ಟಿನಲ್ಲಿ ಕುದಿಯುತ್ತಿದ್ದಳು. ಅವಳ ಸಿಟ್ಟೆಲ್ಲ ಸಿದ್ದು ತನ್ನನ್ನು ಅವೈಡ್ ಮಾಡುತ್ತಿರುವುದರ ಮೇಲೇನೆ ಇತ್ತು. ತನ್ನ ಯಾವ ಮೆಸೆಜ್ ಗೂ ಕರೆಗೂ ರೆಸ್ಪಾಂಡ್ ಮಾಡದೆ ಇರೋದು ಅವಳನ್ನು ಕುದಿಯುವಂತೆ ಮಾಡಿತ್ತು. ಜೊತೆಗಿದ್ದ ಕೆಲ ಹುಡುಗರು ಅವಳನ್ನು ತಮ್ಮ ಬೈಕ್ ನಲ್ಲಿ ಡ್ರಾಪ್ ಮಾಡಲು ಹಾತೋರಿಯುತ್ತಿದ್ದರು. ರೀನಾ ಅವರೆಲ್ಲರ ಮನಸ್ಸನ್ನು ತನ್ನ ಬೊಲ್ಡ್ ನೆಸ್ ನಿಂದ ಗೆದ್ದಿದ್ದಳು. ಆದರೂ ಅವರೆಲ್ಲ ತಮ್ಮ ತಮ್ಮ ಗರ್ಲ್ ಫ್ರೆಂಡ್ ನ್ನು ದಿನದ ಅನಿವಾರ್ಯ ಡ್ಯೂಟಿ ಎಂಬಂತೆ ಕರೆದುಕೊಂಡು ಹೋದರು. ರೀನಾ ಒಬ್ಬಂಟಿಯಾದಳು. ಮನಸಿನಲ್ಲಿ ಸಿದ್ದುವಿಗೆ ಹಿಡಿ ಶಾಪ ಹಾಕುತ್ತಿರುವಾಗಲೇ, ದೂರದಲ್ಲಿ ಬೈಕ್ ನ ಜೊತೆ ನಿಂತ ಧನು ಕಾಣಿಸಿದ. ಅವನೆಡೆಗೆ ಸ್ಮೈಲ್ ಮಾಡಿ ‘ಹಾಯ್’ ಅಂದಳು. ಧನುವಿಗೆ ಉಸಿರು ಬಂದಂತಾಯಿತು. ಅವನು ಬೈಕ್ ನೊಡನೆ ಅವಳ ಬಳಿ ಬಂದು ‘ಬನ್ನಿ ರೀನಾ, ಹಾಸ್ಟೆಲ್ ತನಕ ಡ್ರಾಪ್ ಮಾಡ್ತೀನಿ’ ಅಂದ. ರೀನಾಳಿಗೆ ಅಚ್ಚರಿ! ಅವನ ಮೃದುವಾದ ಮಾತಿಗೆ ‘ಎಸ್’ ಅಂದಳು. ಧನು ಸುಂದರನಾಗಿ ಕಾಣುತ್ತಿದ್ದ. ‘ಇಷ್ಟು ದಿನ ರಿಸರ್ವ್ ಆಗಿರುತ್ತಿದ್ದ ಧನು ಇವನೆನಾ..? ಸಮ್ ಥಿಂಗ್ ಸ್ಪೇಷಲ್’ ಅದೇನು ಅಂತ ಕೇಳಬೇಕು ಅನ್ನಿಸಿದರೂ ತಕ್ಷಣವೇ ಸಿದ್ದು ನೆನಪಾಗಿ ವಿಚಾರ ಅವನೆಡೆಗೆ ತಿರುಗಿತು. ‘ಧನು ಇಫ್ ಯೂ ಡೊಂಟ್ ಮೈಂಡ್, ನಾನು ನಿಮ್ಮ ಹತ್ತಿರ ಸಿದ್ದು ವಿಚಾರವಾಗಿ ಮಾತನಾಡೋದಿತ್ತು. ಬನ್ನಿ ಕುಳಿತುಕೊಂಡು ಮಾತನಾಡೋಣ’ ಎನ್ನುತ್ತಾ ಡಾನ್ಸ್ ಕ್ಲಾಸಿನ ಕಾರಿಡಾರ್ ಬಳಿಗೆ ಕರೆದುಕೊಂಡು ಹೋದಳು. ಧನುವಿಗೀಗ ಮುಜುಗರದ ಜೊತೆಗೆ ಸಂಕೋಚ, ಭಯ. ಇನ್ನೊಂದು ಕಡೆ ಏಕಾಂತ ಸಿಕ್ಕ ಥ್ರೀಲ್.

ಇಬ್ಬರು ಕಾರಿಡಾರಿನಲ್ಲಿ ಕುಳಿತರು. ರೀನಾ ಡಿಸ್ಟರ್ಬ್ ಆಗಿದ್ದಂತೆ ಕಾಣುತ್ತಿದ್ದಳು. ಅವಳೇ ಮಾತಿಗಿಳಿದಳು. “ಧನು ನಿಮ್ಮಲ್ಲಿ ಒಂದು ಪ್ರಶ್ನೆ. ನೀವು ಸಿದ್ದುವಿನ ರೂಮ್ ಮೇಟ್. ನಿಜಕ್ಕೂ ಈ ಸಿದ್ದು ಹೇಗೆ..? ನಾನವನನ್ನು ಅರ್ಥ ಮಾಡಿಕೊಂಡಿದ್ದೆ ಅಂತಾನೆ ತಿಳಿದಿದ್ದೆ. ನಮ್ದು ಐದು ವರ್ಷಗಳ ಒಡನಾಟ. ಅವನಿಗೆ ಬೇರೆ ಬೇರೆ ಹುಡುಗಿಯರ ಜೊತೆ ಓಡನಾಟಾನೂ ಇತ್ತು. ಅದು ನನಗೂ ಗೊತ್ತು. ಆದರೆ ನನ್ನನ್ನು ಯಾವ ಕಾರಣಕ್ಕೂ ಮಿಸ್ ಮಾಡಿಕೊಂಡವನಲ್ಲ ಅವನು. ಇವತ್ತು ಬೇರೆ ವ್ಯಾಲೆಂಟೈನ್ಸ್ ಡೇ. ಇವತ್ತಿಡೀ ಅವನ ಜೊತೆಲೆ ಇರಬೇಕು ಅಂದುಕೊಂಡಿದ್ದೆ. ಹೀಗೆ ಕೇಳ್ತೀನಿ ಅಂತ ಅನ್ಕೋಬೇಡಿ. ಅವನು ಬೇರೆ ಯಾರ ಜೊತೆಯಲ್ಲಾದ್ರು ಲವ್ವಲ್ಲಿ..?” ಧನುವಿಗಿಗ ಮೆದುಳು ಓಡಲಾರಂಭಿಸಿತು. ಅವನು ರೀನಾಳನ್ನೊಮ್ಮೆ ಗಮನಿಸಿದ. ಅವಳ ಮುಖದಲ್ಲಿ ಸಿದ್ದು ತನ್ನ ಕೈ ತಪ್ಪಿಹೋದನಾ ಅಂತಾ ಭಯವಿತ್ತು. ಅವಳ ಕಣ್ಣುಗಳು ಹಿಡಿ ಪ್ರೀತಿಗಾಗಿ ಹಂಬಲಿಸುತ್ತಿತ್ತು. ಇದೇ ಸರಿಯಾದ ಸಮಯವೆಂದುಕೊಂಡು ಧೈರ್ಯ ತಂದುಕೊಂಡ. ಗಂಟಲು ಸರಿಪಡಿಸಿಕೊಂಡ. ಸಣ್ಣ ಹಿಂಜರಿಕೆಯಲ್ಲಿಯೇ ಶುರುಮಾಡಿದ. “ನನಗೆ ಅದೇ ಅರ್ಥ ಆಗ್ತಾ ಇಲ್ಲ. ರೂಮ್ ನಲ್ಲಿ ಆಗಾಗ ಹೇಳ್ತಿದ್ದ. ನನಗೆ ಅವಳ ಸಹವಾಸ ಸಾಕಾಗಿ ಹೋಗಿದೆ. ಅವಳಾಗೆ ಅವಳೆ ನನ್ನಿಂದ ದೂರವಾಗಲಿ ಅಂತ. ಯಾಕಪ್ಪಾ ಏನಾಯ್ತು ಅಂತ ಕೇಳ್ದೆ. ನನ್ನ ಹತ್ರ ಅದೆಲ್ಲಾ ಎಲ್ಲಿ ಹೇಳ್ತಾನೆ. ಆದರೆ ಅವನು ಹಾಗೆ ಅಂದಿದ್ದು ನನಗೆ ಬೇಸರವಾಯಿತು. ನೀವು ಅವನನ್ನು ತುಂಬಾ ಹಚ್ಚಿಕೊಂಡಿದ್ರಿ. ನನಗೂ ನಿಮ್ಮಲ್ಲಿ ಯಾವ ತಪ್ಪು ಕಾಣ್ತಿಲ್ಲ. ನೀವೊಬ್ಬರು ಇನ್ಫಿರೇಷನ್ ಗರ್ಲ್. ಸದಾ ಲವಲವಿಕೆಯಲ್ಲಿರೋರು. ನೀವಿದ್ದಲ್ಲಿ ಆ ವಾತಾವರಣವರಣವೇ ಸಂತೋಷವಾಗಿರುತ್ತೆ. ಪ್ರತಿಯೊಬ್ಬರೂ ನಿಮ್ಮ ಕಂಪನಿನಾ ಇಷ್ಟ ಪಡ್ತಾರೆ. Of course.. ನಾನು ಕೂಡ. ನನ್ನ ಪ್ರಕಾರ ನಿಮ್ಮಂತ ಒಂದು ಹುಡುಗಿ ಬದುಕಿನ ಜೊತೆಯಲ್ಲಿ ಸದಾ ಇರಬೇಕೆಂದು ಪ್ರತಿ ಹುಡುಗಾನೂ ಬಯಸ್ತಾನೆ. ಅವನಿಗೆ ಈಗ ಗೊತ್ತಾಗೊಲ್ಲ. ನೀವು ಮಾತ್ರ ಇದನ್ನ ಮನಸಿಗೆ ಹಚ್ಕೋಬೇಡಿ” ಎಂದು ಹೇಳಿ ದೊಡ್ಡದೊಂದು ಉಸಿರುಬಿಟ್ಟ.

“ಧನು ನೀನಾ ಹೇಳ್ತಿರೋದು ಈ ಮಾತನ್ನಾ…” ಅಂತ ರೀನಾ ಏಕ್ ಧಮ್ ಅಚ್ಚರಿಯಲ್ಲಿ ಖುಷಿಯಾದಳಾದರೂ ಒಳಗಡೆಯಲ್ಲಿದ್ದ ಸಿಟ್ಟು ಮತ್ತದೆ ಸಿದ್ದು ಕಡೆ ತಿರುಗಿತು. “ಬ್ಲಡಿ ಫೆಲೋ… ನಡಿ ಧನು ನಿಮ್ಮ ರೂಮಿಗೆ. ಅವನನ್ನು ಅಲ್ಲೇ ಜಾಡಿಸ್ತಿನಿ. ಏನಂತ ತಿಳ್ಕೊಂಡಿದಾನೆ ಅವನು…ಈ ಐದು ವರ್ಷಗಳಲ್ಲಿ ಅವನನ್ನು ಬಿಟ್ಟು ಬೇರೆ ಯೋಚ್ನೆ ಮಾಡಿಲ್ಲ ನಾನು. ನನಗೂ ಕೂಡ ತುಂಬಾ ಬಾಯ್ ಫ್ರೆಂಡ್ಸ್ ಇದಾರೆ. ನಾನು ಕೂಡ ಅವರ ಜೊತೆಯಲ್ಲಿ ಪ್ರೆಂಡ್ಲಿಯಾಗೆ ಇದೀನಿ. ಇವತ್ತು ಒಂದು ತೀರ್ಮಾನ ಆಗೇ ಹೋಗ್ಲಿ ನಡಿ…” ಎನ್ನುತ್ತಾ ಆವೇಶದಲ್ಲಿ ಅವನ ಕೈ ಹಿಡಿದೆಬ್ಬಿಸಿದಳು. ಧನು ತಬ್ಬಿಬ್ಬಾದ. ಇವಳ ಆ ಪರಿ ಆಕ್ರೋಶ, ಸಿಟ್ಟನ್ನು ನೋಡೇ ಗಲಿಬಿಲಿಯಾದ. ಯಾಕೊ ಕೆಲ್ಸ ಕೆಟ್ಟೊಯಿತಂತೆನ್ನಿಸಿ ದಿಢೀರ್ ಅಂತ ಅವಳನ್ನು ತಡೆಯಲು ಹೋದ. “ಕೂಲ್ ರೀನಾ ಕೂಲ್… ನೀವೆನ್ ಬರೋದ್ ಬೇಡ. ನಾನೇ ಅವನನ್ನು ಕನ್ ವಿನ್ಸ್ ಮಾಡ್ತಿನಿ. ನೀವು ಕೂಲ್ ಆಗೀರಿ. ಅಂದ ಹಾಗೆ ನಾನು ಈಗ ಅಂದಿದ್ದನ್ನು ಯಾವ ಕಾರಣಕ್ಕೂ ಅವನಲ್ಲಿ ಹೇಳೋಕೆ ಹೋಗಬೇಡಿ. ಸುಮ್ಮನೆ ಮನಸ್ತಾಪ ಯಾಕೆ? ಬನ್ನಿ… ನಿಮ್ಮನ್ನು ಹಾಸ್ಟೆಲ್ ತನಕ ಡ್ರಾಪ್ ಮಾಡ್ತೀನಿ” ಅಂತ ಅವಳ ಕೈ ಹಿಡಿದು ಕರೆದ. ರೀನಾ ಧನುನೊಮ್ಮೆ ತಣ್ಣಗೆ ನೋಡಿದಳು. ‘ಎಂತಹ ಸಾಫ್ಟ್ ಮನಸು ಧನುವಿನದು. ಅದೆಷ್ಟು ಲವ್ ಅಂಡ್ ಕೇರಿಂಗ್…’ “ಧನು ನಿಮ್ಮನ್ನ ತುಂಬಾ ರಿಸರ್ವ್ ಪರ್ಸನ್ ಅಂದುಕೊಂಡಿದ್ದೆ. ನಿಜಕ್ಕೂ ನಿಮಗೆ ಒಳ್ಳೆ ಟೇಸ್ಟ್ ಇದೆ. ಅದಕ್ಕಿಂತ ಹೆಚ್ಚಾಗಿ ತುಂಬಾ ಸಹನೆ ಇದೆ. ಐ ಲೈಕ್ ದಿಸ್… ನಾನು ನಿಮ್ಮ ಮಾತಿನಂತೆ ಇರ್ತಿನಿ. ಆದರೆ ಎಲ್ಲೊ ಸಿದ್ದುವಿನ ವಿಚಾರದಲ್ಲಿ ನಾನ್ ಹೊಪ್ ಕಳ್ಕೊಂಡೆ ಅಂತ ಅನಿಸುತ್ತೆ. ನಮ್ಮಿಬ್ಬರದು ಆಲ್ ಮೋಸ್ಟ್ ಒಂದೇ ನೇಚರ್. ಒಂದೇ ನೇಚರ್ ಇರೋರು ಹೆಚ್ಚೆಂದರೆ ಒಳ್ಳೆ ಫ್ರೆಂಡ್ಸ್ ಆಗಬಹುದು. ಆದರೆ ಲೈಪ್ ಪಾರ್ಟ್ನರ್ ಆಗೋಕೆ ತುಂಬಾನೆ ಕಷ್ಟ. ನಮ್ಮಿಬ್ಬರ ನಡುವೆ ಈಗಾಗಲೇ ಸಾಕಷ್ಟು ಜಗಳಗಳಾಗಿವೆ. ಇಬ್ಬರಿಗೂ ಇಗೋ ಕ್ಲಾಶಸ್. ಬಿಟ್ಟು ಬಿಡು ಧನು. ಅವನಿಗೆ ನಾನು ಉಸಿರುಗಟ್ಟಿಸುತ್ತಾ ಇರೋರ ಹಾಗೆ ಕಾಣಬಹುದು. ನನಗೂ ನಮ್ಮಿಬ್ಬರ ಸಂಬಂಧದಲ್ಲಿ ಪ್ರೀತಿ ಸತ್ತು ಹೋಗಿದೆ ಅಂತ ಗೊತ್ತು. ಆದರೆ ಈಗ ಅನ್ನಿಸ್ತಾ ಇದೆ ಇದು ಅಸಲಿಗೆ ಪ್ರೀತಿನೆನಾ… ಅಥವಾ ಅವಶ್ಯಕತೆಗೆ ಹುಟ್ಟಿಕೊಂಡ ರಿಲೇಶನ್ನಾ ಅಂತಾ..? ನಾನ್ ಮಾತ್ರ ಇಷ್ಟು ದಿನ ಅದನ್ನ ಪ್ರೀತಿ ಅಂದುಕೊಂಡು ತಪ್ಪ್ ಮಾಡಿಬಿಟ್ಟೆ. ನಾನೊಬ್ಬಳು…” ಎನ್ನುತ್ತಾ ಅಳತೊಡಗಿದಳು. ಧನುವಿನ ಕೈ ಅವನಿಗೆನೆ ಗೊತ್ತಿಲ್ಲದೆ ಅವಳ ಭುಜವನ್ನು ಹಿಡಿದು ಸಾಂತ್ವನ ಹೇಳಿತು. ಅವಳು ಅವನ ಹೆಗಲಿಗೆ ಒರಗಿಕೊಂಡು ದುಃಖವನ್ನೆಲ್ಲ ಇಳಿಸಿಕೊಂಡಳು. ತಕ್ಷಣವೇ ಅವನಿಂದ ಸರಿದು ಅವನನ್ನೊಮ್ಮೆ ನೋಡಿದಳು. ಅವನ ಮುಖದಲ್ಲಿ ತಿಳಿಯಾದ ಮುಗುಳುನಗು. ಈ ಜನ್ಮದಲ್ಲಿ ಮುಗಿಯಲಾರದೆನೊ ಎಂಬಂತಹ ಕಂಫರ್ಟ್ ನೆಸ್ ಭಾವ. “ಧನು ಆರ್ ಯೂ ಲವ್ ಮಿ” ಅಂತ ಕೇಳಬೇಕೆನ್ನಿಸಿದರೂ ಕೇಳದೆ ಧನುವಿನ ಹಾಗೆ ಮುಖಭಾವದಲ್ಲೆ ಅದನ್ನ ಪ್ರಕಟಿಸಿದಳು. ಧನುವಿಗಿಗ ದೊಡ್ಡ ಸಾಮ್ರಾಜ್ಯವನ್ನೆ ಗೆದ್ದ ಖುಷಿ. ರೀನಾಳಂತಹ ಬೊಲ್ಡ್ ಹುಡುಗಿ ಇಷ್ಟು ಬೇಗ ಇಷ್ಟು ಸಲೀಸಾಗಿ ಅದು ಹೀಗೆ ತನ್ನ ತೆಕ್ಕೆಯಲ್ಲಿ ಇರುತ್ತಾಳೆಂದು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಇಲಿಮರಿಯಂತೆ ಬಂದವನಿಗೆ ಇದೀಗ ಯುದ್ದಕ್ಕೆ ನಿಂತ ಸಿಪಾಯಿಯ ಧೈರ್ಯ. ಆದರೆ ಎಲ್ಲಿಯೂ ಅವನಿಗೆ ಯಶು ನೆನಪಾಗಲಿಲ್ಲ.

ಸಿದ್ದು, ಧನು ಇಬ್ಬರು ಪ್ರೇಮಿಗಳ ದಿನದಂದು ಹೊಸ ಪ್ರೀತಿಯನ್ನು ಒಲಿಸಿಕೊಂಡ ಸಂಭ್ರಮದಲ್ಲಿದ್ದರು. ರೂಮಿಗೆ ಬಂದ ಇಬ್ಬರಲ್ಲೂ ಏನೋ ದೊಡ್ಡ ಸಾಹಸ ಮಾಡಿದ ಖುಷಿ ತಲೆಗೇರಿತ್ತು. ಇಬ್ಬರಿಗೂ ತಮ್ಮ ತಮ್ಮ ಹಳೆಯ ಗೆಳತಿಯರು ನೆನಪಿಗೆ ಬರಲಿಲ್ಲ. ಅಷ್ಟೇ ಏಕೆ ತಮ್ಮ ಹಳೆ ಗೆಳತಿಯನ್ನು ತನ್ನ ಈ ಸಹಪಾಟಿಯೇ ಒಲಿಸಿಕೊಂಡಿದ್ದಾನೆಂದು ಕೂಡ ತಿಳಿಲಿಲ್ಲ. ಇಬ್ಬರು ತಮ್ಮ ತಮ್ಮ ಮನಸಿನಲ್ಲಿ ವ್ಯಂಗವಾಡಿಕೊಂಡರು. ”ಪೂವರ್ ಫೆಲೋ ಒಂದು ಹುಡುಗಿಯ ಮನಸ್ಸನ ಗೆಲ್ಲಲಿಕೆ ಆಗಲಿಲ್ಲ. ಆದರೆ ಧನು, ನಿನ್ನ ಟೈಮು ಮುಗಿತು. ಈ ಸಿದ್ದು ಒಂದು ಹಕ್ಕಿಗೆ ಕಣ್ಣು ಇಟ್ಟ ಅಂದ ಮೇಲೆ ಆ ಹಕ್ಕಿ ಅವನದೇ ಆಗಿರುತ್ತೆ. ಇವತ್ತು ಯಶು ಅನ್ನೊ ಹಕ್ಕಿಗೆ ಈ ಸಿದ್ದು ಮನಸೋತಿದಾನೆ. ಬಿಡೋ ಪ್ರಶ್ನೆನೆ ಇಲ್ಲಾ. ಆ ಹಕ್ಕಿನೆ ನನ್ನ ಉಸಿರು. ನನ್ನ ಜೀವನ. ಧನು, ನಾಳೆಯಿಂದ ನಿನ್ನ ಹೊಟ್ಟೆಯಲ್ಲಿ ಹ್ಯಾಗೆ ಬೆಂಕಿ ಹೊತ್ತಿಕೊಳ್ಳುತ್ತೆ ನೋಡು. ಸಾರಿ, ನಂದೇನು ತಪ್ಪಿಲ್ಲ. ನಾನೇನು ಮಾಡೋಕೆ ಆಗಲ್ಲ” ಎಂದು ತನ್ನೊಳಗೆ ನಗುತ್ತಾ ಹಾಸಿಗೆಗೆ ಒರಗಿದ. ಅವನನ್ನು ನೋಡಿ ಧನುವಿಗೂ ಅಯ್ಯೊ ಪಾಪವೆನಿಸಿತು. ”ಎಷ್ಟೇ ಮಾಡರ್ನ್ ಆದರೇನು ಪ್ಲರ್ಟಿಸ್ಟ್ ಅನ್ನಿಸಿಕೊಂಡರೇನು…? ಐದು ವರುಷ ಹಿಂದೆ ಸುತ್ತಿದ ಒಂದು ಹುಡುಗಿಯ ಮನಸ್ಸನ್ನ ಅರ್ಥಮಾಡಿಕೊಳ್ಳಲಿಲ್ಲ ಅಂದ ಮೇಲೆ..!! ರೀನಾಳ ಜೊತೆ ಇರೋ ಅದೃಷ್ಟ ನಿನ್ನ ಹಣೇಲಿ ಬರೆದಿಲ್ಲ ಸಿದ್ದು… ನೋಡ್ತಾ ಇರು.. ನಾಳೆಯಿಂದ ರೀನಾಳ ಮನಸ್ಸನ್ನು ಹ್ಯಾಗೆ ಗೆಲ್ಲಿತಿನಿ ಅಂತ… ಅದನ್ನು ನೋಡಿ ನೀನು ಉರುಕೊಂಡು ಒದ್ದಾಡಬೇಕು” ಎಂದು ಮನಸಲ್ಲೇ ಅಂದುಕೊಳ್ಳುತ್ತಾ ಅವನೆಡೆಗೆ ವ್ಯಂಗದ ನಗೆ ಬೀರಿದ.

ಸಿದ್ದು, ಧನು ಇಬ್ಬರು ತಮ್ಮ ತಮ್ಮ ಹೊಸ ಪ್ರೇಮಯಾನವನ್ನು ಎಂಜಾಯ್ ಮಾಡತೊಡಗಿದರು. ಸಿದ್ದು ಯಶುಳ ಮನಸ್ಸನ್ನ ಗೆದ್ದಿದ್ದ. ಆದರೆ ತನಗೆನೆ ಗೊತ್ತಿಲ್ಲದಂತೆ ಬದಲಾಗಿದ್ದ. ಯಶುವೆನೆದುರು ತುಂಬಾ ಆರ್ಡಿನರಿ, ಸಿಂಪಲ್ ಆಗಿ ಇರತೊಡಗಿದ. ಯಶುವೂ ಕೂಡ ಸಿದ್ದುವಿನ ಸಹವಾಸದಿಂದಾಗಿ ಕಾಫಿ ಡೇ, ಸಿನಿಮಾ, ಶಾಪಿಂಗ್ ಅಂತ ಸುತ್ತಲಾರಂಭಿಸಿದಳು. ಸಿದ್ದುವಿನ ಬೈಕಿನ ಹಿಂದಿನ ಸೀಟ್ ಯಶುಳಿಗೆ ಪರ್ಮನೆಂಟಾಗಿ ರಿಸರ್ವ್ ಆಯಿತು. ಇನ್ನೊಂದೆಡೆ ರೀನಾಳ ಸಹವಾಸದಿಂದ ಧನುವಿಗೆ ಹೊಸ ಎನರ್ಜಿ ಸಿಕ್ಕಿದಂತಾಗಿತ್ತು. ರೀನಾ ಕೂಡಾ ತನ್ನ ಒಂದೊಂದು ಆಸೆ ಕನಸುಗಳು ಧನುವಿನ ಕಣ್ಣಲ್ಲಿ ಪ್ರತಿಬಿಂಬವಾಗಿ ಕಾಣುತ್ತಿರುವುದನ್ನ ನೋಡಿದಳು. ಇಲ್ಲಿಯವರೆಗೂ ತಾನು ಹುಡುಕುತ್ತಿದ್ದ ಅಂತರಂಗದ ಸಖ ಇವನೇ ಎಂದು ಅವಳ ಮನಸು ಹೇಳಿತು. ಯಶು, ರೀನಾ ತಮ್ಮ ತಮ್ಮ ಭವಿಷ್ಯದ ಸಂಗಾತಿಯನ್ನು ಕಂಡು ಕೊಂಡ ಖುಷಿಯಲ್ಲಿ ಆರಾಮಾಗೇ ಇದ್ದರು. ಆದರೆ ಸಿದ್ದು ಧನುವಿಗೆ ಮಾತ್ರ ಈ ಖುಷಿ ತುಂಬಾ ದಿನ ಉಳಿಯಲಿಲ್ಲ. ಈ ಇಬ್ಬರಿಗೂ ತಮ್ಮ ಈ ಮಾಜಿ ಪ್ರೇಯಸಿ ಹೀಗೆ ತನ್ನ ಸಹಪಾಠಿಯ ತೆಕ್ಕೆಯಲ್ಲಿರುವುದನ್ನ ನೋಡಿಯೇ ಸಹಿಸದಾದರು. ಒಳಗೊಳಗೆ ಅದೇನೋ ಸಂಕಟ, ಅಸಹನೆ. ಯಾವುದನ್ನು ಏಕೆ ನು ಅಂತ ಬಾಯಿ ಬಿಟ್ಟು ಕೇಳುವ ಮುಖವೇ ಇಲ್ಲದಾಯಿತು. ಗೆಳೆಯನ ಹೊಟ್ಟೆ ಉರಿಸಬೇಕೆಂದವರು ಇದೀಗ ತಾವೇ ಆ ಅನುಭವಕ್ಕೆ ಬೀಳುವಂತಾದರು. ಆದರೂ ನಡೀಲಿ ನಡೀಲಿ ಇದೆಷ್ಟು ದಿನ ನೋಡೋಣ ಅಂತ ತಮ್ಮಲ್ಲೆ ತಾವೇ ಆಡಿಕೊಂಡು ವಿಚಿತ್ರ ಸಮಾಧಾನ ಪಟ್ಟರು.

ಅದು ಕಾಫಿ ಡೇ. ಸಿದ್ದು, ಯಶು ಎದುರುಬದುರಾಗಿ ಕುಳಿತಿದ್ದರು. ಖುಷಿಯಲ್ಲಿ ಹರಟುತ್ತಿದ್ದರು. ಅದೇ ಸಮಯದಲ್ಲಿ ಧನು ರೀನಾ ಕೂಡಾ ಕಾಫಿಡೇಗೆ ಬಂದರು. ಇಬ್ಬರು ಒಬ್ಬರಿಗೊಬ್ಬರು ತಬ್ಬಿಕೊಂಡು ಎಂಜಾಯ್ ಮೂಡ್ ನಲ್ಲಿದ್ದರು. ಯಶು ಸಿದ್ದು ಅವರನ್ನು ಗಮನಿಸಿದರು. ಯಶುವಿಗೆ ಅವರನ್ನು ನೋಡಿ ಏನು ಅನ್ನಿಸದಿದ್ದರೂ ಸಿದ್ದುವಿಗೆ ಮಾತ್ರ ತಡೆಯಲಾಗಲಿಲ್ಲ. “ನೋಡು ಯಶು, ನಮ್ಮ ಧನುವಿನ ಅಸಲಿ ಮುಖವಾಡವನ್ನ. ಹ್ಯಾಗೆ ಖುಷಿಯ ಮತ್ತಿನಲ್ಲಿ ತೇಲತಾ ಇದಾನೆ ನೋಡು. ಅಂದ ಹಾಗೆ ಅವನ ಜೊತೆಲಿದಾಳಲ್ಲ, ಅವಳೆಂತವಳು ಅಂತ ನನಗೆ ಗೊತ್ತು. ಇವನು ಮುಂದೆ ತುಂಬಾನೆ ಪಶ್ಚಾತಾಪ ಪಡ್ತಾನೆ”. ಯಶು ಅವರಿಬ್ಬರನ್ನು ಸೂಕ್ಷವಾಗಿ ಗಮನಿಸಿದಳು.” ಹಾಗೆ ಯಾಕೆ ಅಂತೀರಿ ಸಿದ್ದು, ನನಗೇನು ಹಾಗೆ ಕಾಣಿಸ್ತಿಲ್ಲ. ಧನು ತುಂಬಾ ಮೆಚ್ಯೂರ್ಡ್ ಗೈಯ್. ಬಹುಶಃ ಧನು ಒಂದು ಹುಡುಗಿಯಿಂದ ಇಂತಾ ಒಂದು ಬೊಲ್ಡ್ ಆದ ಪ್ರೀತಿಯನ್ನೆ ನಿರೀಕ್ಷಿಸುತ್ತಿಬಹುದು. ಮನಃಶಾಸ್ತ್ರ ಏನು ಹೇಳುತ್ತೆ ಅಂದ್ರೆ ಮನುಷ್ಯ ತನ್ನಲ್ಲಿ ಇಲ್ಲದೆ ಇರೋ ಒಳ್ಳೆ ಗುಣ ಸ್ವಭಾವವನ್ನು ತನ್ನ ಸಂಗಾತಿಯಲ್ಲಿ ನಿರೀಕ್ಷೆ ಮಾಡ್ತಾನಂತೆ. ಹಾಗೂ ಅದು ಸಿಕ್ಕಿದಾಗ ಅವನು ತುಂಬಾ ಖುಷಿಯಾಗಿರುತ್ತಾನಂತೆ. ಅದುವೇ ಅವನ ನಿಜವಾದ ಪ್ರೀತಿ. ಆ ಪ್ರೀತಿಯೇ ಅವನನ್ನು ಕೊನೆಯವರೆಗೂ ಕಾಪಾಡೋದು. ನನ್ನಿಂದ ಅವರಿಗೆ ಅದು ಸಿಕ್ಕಿರಲಿಲ್ಲ. Of course, ನನಗೂ ಕೂಡ” ಅಂತ ಹೇಳುತ್ತಲೇ ಸೈಲಂಟಾದಳು. ಸಿದ್ದು ಅವಳನ್ನೊಮ್ಮೆ ನೋಡಿದ. ಅವನಿಗೆ ಎಲ್ಲಾ ಅರ್ಥವಾಯಿತು. ಮತ್ತೆ ಅವನ ದೃಷ್ಟಿ ಧನು ರೀನಾರೆಡೆಗೆ ತಿರುಗಿತು. ಅವರ ಕಣ್ಣುಗಳಲ್ಲಿ ಮುಗಿಯಲಾರದ ನಿಷ್ಠೆ ಕಾಣುತ್ತಿತ್ತು. “ಯಶು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ. ಗುಡ್ ಲಕ್ ರೀನಾ… ನನ್ನ ಫ್ರೆಂಡ್ ಏನಿಲ್ಲವೆಂದರೂ ನಿನ್ನನ್ನು ಹುಚ್ಚನ ಹಾಗೆ ಪ್ರೀತಿಸ್ತಾನೆ. ಕಾಯಾ..ವಾಚಾ..ಮನಸಾ… ಅದು ನೀನೇ ಬಯಸಿದ ಪ್ರೀತಿ. ವಿಚಿತ್ರ ಅಂದ್ರೆ ಅವನು ನಿನ್ನಿಂದ ಉದ್ದಾರ ಆಗ್ತಿದಾನೆ” ಅಂತೇಳಿ ಮನಸಲ್ಲೇ ನಕ್ಕ. ಹೊಟ್ಟೆಯೊಳಗಿನ ಕಿಚ್ಚು ಆರಿಹೋಗಿತ್ತು.

ಯಶು ಸಿದ್ದು ಹೊರಟು ನಿಂತರು. ಇದೀಗ ಧನು ರೀನಾಳ ದೃಷ್ಟಿ ಅವರಿಬ್ಬರ ಮೇಲೆ ಸರಿಯಿತು. ಧನು ಸುಮ್ಮನಾಗಲಿಲ್ಲ. “ಅಲ್ನೋಡು ರೀನಾ, ಸಿದ್ದುವಿನ ಹೊಸ ಅಫೇರ್ ಅನ್ನ… ಆ ಹುಡುಗಿ ನನಗೆ ಗೊತ್ತು. ತುಂಬಾ ಒಳ್ಳೆಯವಳು. ಅಷ್ಟೇ ಸಂಪ್ರದಾಯಸ್ಥಳು. ಆದರೆ ಯಾವ ಯಾಂಗಲ್ ನಿಂದಲೂ ಇವನು ಅವಳಿಗೆ ಸೂಟ್ ಆಗಲ್ಲ. ಆದರೇನು…? ಅವನ ಕಣ್ಣಿಗೆ ಎಲ್ಲರೂ ಒಂದೇ. ನಿನಗೆ ಮೋಸ ಮಾಡಿದಾಗೆ ಅವಳಿಗೂ ಮಾಡ್ತಾನೆ. ನನಗದೇ ಬೇಜಾರು. ಆದರೆ ಅವಳಿಗೆ ಮೋಸವಾಗೋಕೆ ನಾನ್ ಬಿಡಲ್ಲ’ ಎನ್ನುತ್ತಾ ಯಶು ಬಗೆಗಿನ ಕಾಳಜಿಯನ್ನು ತೊಡಿಕೊಂಡ. ರೀನಾ ಸಿದ್ದುನನ್ನು ಹಾಗೂ ಅವನ ಜೊತೆಗಿದ್ದ ಯಶುಳನ್ನು ಗಮನಿಸಿದಳು. ಅವಳ ಗಮನಿಸುವಿಕೆಯಲ್ಲಿ ಸಿದ್ದು ಪ್ಲರ್ಟಿಸ್ಟ್ ನಂತೆ ಕಾಣಲಿಲ್ಲ. ಸಿಂಪಲ್ ಆಗಿ ಡ್ರೆಸ್ ಮಾಡಿಕೊಂಡು ಗಂಭೀರವಾಗಿರುವವನಂತೆ ಕಂಡುಬಂದ. “ನನಗ್ಯಾಕೋ ಹಾಗನ್ನಿಸುತ್ತಿಲ್ಲ. ಧನು, ಅವನು ತುಂಬಾ ಬದಲಾಗಿದ್ದಾನೆ. ಹಾಗೂ ಈ ಬದಲಾವಣೆನಾ ಬಹಳ ದಿನಗಳಿಂದ ನಿರೀಕ್ಷೆ ಮಾಡ್ತಾ ಇದಾನೆನೋ ಅಂತನಿಸುತ್ತೆ. ಅದು ಅಲ್ಲದೆ ಅವನು ಈ ಬದಲಾವಣೆಯನ್ನು ತುಂಬಾ ಎಂಜಾಯ್ ಮಾಡ್ತಾ ಇದಾನೆ. ನನಗ್ಯಾಕೋ ಅವನು ಅವಳಿಗೆ ಮೋಸ ಮಾಡಲ್ಲ. ಅದು ಅಲ್ಲದೆ ಅವಳು ಸಿದ್ದು ಜೊತೆ ತುಂಬಾ ಕಂಫರ್ಟ್ ಆಗಿದಾಳೆ. ಸಿದ್ದು ಒಂದು ವೇಳೆ ಅವಳಿಗೂ ಮೋಸ ಮಾಡಿದ್ರೆ ಅವನನ್ನು ಮೋಸಗಾರ ಅನ್ನಲ್ಲ. ಮೂರ್ಖ ಅಂತಿನಿ ಅಷ್ಟೇ. ನನಗನಿಸುವಂತೆ ಅಂತ ಮೂರ್ಖತನದ ಕೆಲಸ ಸಿದ್ದು ಮಾಡಲ್ಲ”. ಧನು ಒಂದು ಕ್ಷಣ ಆಶ್ಚರ್ಯಕ್ಕೊಳಗಾದ. ರೀನಾಳಾ ಈ ಮಾತನ್ನ ಆಡ್ತಿರೋದು…!? ಅವನು ಯಶುನೊಮ್ಮೆ ನೋಡಿದ. ಅವಳು ಸಿದ್ದುವಿನ ಜೊತೆ ತುಂಬಾನೆ ಖುಷಿಯಲ್ಲಿದ್ದಳು. ಎಂತಹ ಸಭ್ಯ ಸೌಮ್ಯದ ಹೆಣ್ಮಗಳಾದರೂ ಆಸೆ ಕನಸುಗಳು ಇದ್ದೆ ಇರ್ತಾವೆ. ನನಗದು ತಿಳಿಲಿಲ್ಲ. ಅದನ್ನು ಪೂರೈಸಬೇಕಾದ ನಾನು ಅದನ್ನೆ ಹುಡುಕುತ್ತಿದ್ದೆ. ನನಗೆ ಅದು ರೀನಾಳಲ್ಲಿ ಸಿಕ್ಕಿತು. ಯಶುವಿಗೆ ಸಿದ್ದುವಿನಲ್ಲಿ ಅಷ್ಟೇ. ನಾನು ಏನೆನೋ ಯೋಚಿಸಿ ಬಿಟ್ಟೆ. “ಯಶು, ರೀನಾ… ಏನೇ ಆದ್ರು ಈ ಹುಡುಗೀರು ತುಂಬಾನೆ ಪ್ರಾಕ್ಟಿಕಲ್. ಅಷ್ಟೇ ಭಾವುಕರು ಕೂಡ. ಅಷ್ಟೇ ಫಾರ್ವರ್ಡ್ ಆಗಿ ಯೋಚ್ನೆ ಮಾಡ್ತಾರೆ. “ಕಂಗ್ರಾಟ್ಸ್ ಯಶು, ನನ್ನ ಫ್ರೆಂಡ್ ತನ್ನ ಗೂಳಿ ಸ್ವಭಾವಾನ ಬಿಟ್ಟು ಹೊಸ ಮನುಷ್ಯನ ತರಹ ಕಾಣಿಸ್ತಾ ಇದಾನೆ. ಅವನು ನಿನ್ನನ್ನು ಚೆನ್ನಾಗೆ ನೋಡ್ಕೊತಾನೆ”.

-ಮಧುಕರ್ ಬಳ್ಕೂರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x