ಮಳೆ ಊರಿನ ಹುಡುಗಿಗೆ: ವೃಶ್ಚಿಕ ಮುನಿ (ಪ್ರವೀಣಕುಮಾರ ಸುಲಾಖೆ)

ನೆನಪಾಗುತ್ತೀಯ ಎಂದು ಪತ್ರ ಬರೆಯುತ್ತಿಲ್ಲ, ಪತ್ರ ಬರೆಯುತ್ತಿರುವುದು ನೆಪವಷ್ಟೆ ನೆನಪಿಗೆ ಉತ್ತರಿಸಲು.
ಗೆ. .
ಮಳೆ ಊರಿನ ಹುಡುಗಿಗೆ
ರಥ ಬೀದಿಯ ಕೊನೆಯ ತಿರುವು
ಕೆಂಪು ಹೆಂಚಿನ ಮನೆ
ಫೋಸ್ಟ :ಮಳೆಊರು

ಇಂದ. .
ಅಲೆಮಾರಿಯ ನೆಲೆಯಿಂದ
ಖಾಸಾಕೋಣೆಯ ಬಿಸಿಯುಸಿರು
ಶಾಯಿಯಲ್ಲಿ.

ಕ್ಷೇಮ ವಿಚಾರವಾಗಿ ಬರೆದ ಸಾಲುಗಳಲ್ಲಿ ಸಾಕಾಗುವಷ್ಟು ನೆನಪುಗಳಿವೆ. ಜಗದ ಯಾವ ಖಜಾನೆಯಲ್ಲಿ ತುಂಬಿ ಇಡಲು ಆಗದಷ್ಟು ಖಜಾನೆ ಲೂಟಿ ಗೆ ಕಳ್ಳರ ಭಯವಿಲ್ಲ. ನಾನು ನೀನು ಮಾತ್ರ ಜೀವಿತದ ಚಿತ್ರ ಶಾಲೆಯಲ್ಲಿ. ನೋಡು. . . ನಾನು ಎಷ್ಟು ಪೆದ್ದು ಅಂತಾ. . . ! ಸರಿಯಾದ ಒಕ್ಕಣಿಕ್ಕೆಯನ್ನು ಕೊಟ್ಟು ಬರೆಯಲು ಆಗುವುದಿಲ್ಲ ಈ ಪತ್ರ. ಪತ್ರ ಬರೆದು ಅಭ್ಯಾಸವಿಲ್ಲ, ಅದು ಆತ್ಮೀಯ ಜೀವಕ್ಕೂ ಬರೆಯುವುದೆಂದರೆ. ಕೈ ಕಾಲು ನಡುಗಿ ಜೀವ ಬಾಯಿಗೆ ಬಂದಿದೆ. ಬೇರೆ ಯಾರೂ ಆಗಿದ್ದರೆ ಮಿಂಚಂಚೆ ಕಳುಹಿಸಿ ಸುಮ್ಮನಾಗಿ ಬಿಡುತ್ತಿದ್ದೆ. ಕಾಗದಕ್ಕೆ ಇಷ್ಟು ಕಷ್ಟ ಕೊಟ್ಟವುದು ಇಷ್ಟವಿಲ್ಲದಿದ್ದರೂ ಬರೆಯಬೇಕು ಎನ್ನುವ ಉತ್ಸಾಹ ಇವಾಗ ಬರೆಯುತ್ತಿರುವೆ. ನಿನ್ನ ಊರಿನ ಮಳೆಯಂತೆ ಪತ್ರವನ್ನು ಭಾವನೆಗಳ ಹನಿಯಿಂದ ತೋಯಿಸುವ ಉಮೇದು ನನ್ನದು ಆದರೇನು ಮಾಡುವುದು ಮಳೆ ಕಾಣದ ಊರಿನ ಬೆಪ್ಪ ನಾನು. ಮಳೆ ಎಂದರೆ ಬಾಯಿ ಬಿಡುವವನೂ, ಕಣ್ಣು ಅರಳಿಸಿಕೊಂಡು ಮೈ ಮನವನ್ನು ತೊದ್ದು ತೊಪ್ಪೆಯಾಗಿಸುವ ಅಲೆಮಾರಿ ವಿಚಿತ್ರ ಜೀವಿ ನೋಡುವವರ ಕಣ್ಣಿಗೆ, ಕಾಡು ಮೇಡು ಅಲೆದು ಅಲೆದು ಸವಿದು ಬಿಡುವ ಕಾತುರದ ಕನವರಿಕೆ ಆತ್ಮತೃಪ್ತಿ ಗುಣದವನು. ಬರಗಾಲದ ಊರಿನವನಾದ ನಾನು ಒಂದು ಅರ್ಥದಲ್ಲಿ ನೀರು ಕಾಣದವನು ಬಿಸಿಲೂರಿನ ನೆಂಟನು. ನಮ್ಮೂರಿನಲ್ಲಿ ಬಿಸಿಲು ನಿತ್ಯ ಸಂಗಾತಿ, ಇಲ್ಲಿ ಮಳೆ ನಿತ್ಯ ಸಂಗಾತಿ. ಇಂತಪ್ಪ ಊರಿನಲಿ ನಾನು ಇರುವ ಇರುವ, ಮಳೆ ಹಾಡಿಗೆ ಅದರ ಶೃತಿಗೆ ಕಿವಿಯಾಗಿ, ಅಬ್ಬರಕ್ಕೆ ಕವಿಯಾಗುವ ಮನ ನನ್ನದು.
ಇಂತಹ ಧಾವಂತದ ಬದುಕು ನನ್ನದು. . .

ಕೆಲಸಕ್ಕೆ ಹೊರಟ ಫ್ಯಾಕ್ಟರಿ ಕಾರ್ಮಿಕನ ಎದುರುಸಿರಿನ ಸೈಲಕ್ ಸವಾರಿ ಸೈರನ್ ಕೂಗಿನ ವೇಗದಷ್ಟು. ಬ್ಯಾಗ್ ಹೆಗಲಿಗೆ ಏರಿಸಿಕೊಂಡು ಸಾಲು ಸಾಲಾಗಿ ಹೊರಟ ಪುಟ್ಟ ಕಂದಮ್ಮಗಳ ಶಾಲೆಯ ಪರಿ ನೋಡುತ್ತಾ ಕುಳಿತಾ ನಾನು ಅಂದುಕೊಂಡೆ ಬಹುಷಃ ! ಇಂದು ರವಿ ಕೂಡಾ ರಜೆ ಹಾಕಿ ಇವರು ಹೋಗುವುದನ್ನು ಮೋಡದ ಮರೆಯಿಂದ ನೋಡಿ ಮರೆಯಾಗುತ್ತಿರುವನೇನೂ ಎಂಥ ಸೋಂಬೇರಿ. ಸಾಮಾನ್ಯ ಜನರ ಬದುಕಿನ ದೊಂಬರಾಟವನ್ನು ನೋಡದೆ ಹೊದ್ದು ಮಲಗಿದ್ದಾನೆ. ಅವನು ಎಲ್ಲರ ಧಾವಂತಕ್ಕೆ ಮೂಲ ಪ್ರೇರಕ. ಸಂತೆಗೆ ಹೊರಟ ಗಂಗಮ್ಮನ ಮಂತ್ರಯ ತುಂಬಿದ ತರಕಾರಿಗಳು ತೊದ್ದು ತೊಪ್ಪೆಯಾಗಿವೆ. ಆದರೂ ಸಂಜೆಗೆ ಓಲೆ ಹೊತ್ತಲೇಬೇಕು, ಅನ್ನ ಬೇಯಲೇಕು. ಮಾರಾಟದ ಒಂದು ಭಾಗ ಮಗನ ಓದಿಗೆ ತಗೆದು ಇಡಲೇಬೇಕು. ಆಸೆಯನ್ನು ಕಟ್ಟಿ ಇಟ್ಟು ಬದುಕಿನ ಬಂಡಿಯ ಖರ್ಚ ನಿಬಾಯಿಸಲೇಬೇಕು. ಹೊಳೆಯ ದಂಡಿಯ ಮೇಲೆ ಮೀನು ಹಿಡಿಯಲು ಕುಳಿತ ಸಾಬಿಯ ಧ್ಯಾನಸ್ಥ ಮನಸ್ಸು ಯೋಚಿಸುವುದು ಇದನ್ನೇ. ಸಿಕ್ಕ ಒಂದಿಷ್ಟು ಮೀನನಿಂದ ಬದುಕಿಗೆ ಒಂದು ಆಸರೆಯಾಗುತ್ತದೆ. ಸಂಜೆಗೆ ಚಹಾಕ್ಕಾಗಿ ಮನೆ ಸೇರಬೇಕು. ಇದರ ಜೊತೆಗೆ ಪ್ರೇಮಿಯ ಕನಸುಗಳು ಹಸಿಯಾಗಿವೆ, ನಾಳೆಯ ಅಗಲಿಕೆಯ ವಿರಹಕ್ಕೆ ಅವು ಬೆಚ್ಚಾಗಾಗುತ್ತವೆ. ಒಣಗಿನಿಂತ ಮರಗಳಿಗೆ ಜೀವಕಳ ಬಂದ್ದಿದು ಈ ಮಳೆಯ ದೆಸೆಯಿಂದ ತುಂಬಿ ತುಳುಕುವ ನದಿಗಳಿಗೂ ಪುಟ್ಟಿದು ಚಿಮ್ಮವು ಝರಿಗಳಿಗೂ, ಹಾದು ಹೋಗುವ ತೊರೆಗಳಿಗೂ ಈ ಮಳ ಮೂಲನೆಲೆಯಾಗಿ, ಬದುಕಿಗೆ ಹಲವು ಬಣ್ಣ ತುಂಬಿ ರಂಗಾಗಿಸಿ ಮೆರೆಸಿದ. ಅನ್ನದ ಅಕ್ಷಯ ಪಾತ್ರಯ ಕಣಜವಾಗಿದೆ. ಅನ್ನ ಪ್ರತಿ ಜೀವಿಯ ಉಸಿರ ಕಣ. ಕೊಪ್ಪರಿಕೆ ಹೊತ್ತುಕೊಂಡು ಗದ್ದೆಯ ಬಯಲಲ್ಲಿ ಭತ್ಯದ ನಾಟಿಮಾಡುವ ಹೆಣ್ಣುಮಕ್ಕಳ ನಿತ್ಯ ಕೆಲಸಕ್ಕೆ ಈ ಮಳೆ ಯಾವ ಲೆಕ್ಕ. ಅವರದು ಶ್ರದ್ದೆಯ ದುಡಿಮೆ. ಮಗ ಉಂಡರೆ ಕೇಡಲ್ಲಾ, ಮಳೆಯಾದರೆ ಕೇಡಲ್ಲಾ ” ಇದು ಜೀವದ ಜೀವನದ ಮೂಲ ಸೆಲೆ -ನೆಲೆ, ಮಳೆಯನ್ನು ಶಪಸಿರಬಹುದು ಆದರೆ ಅದು ಆಗಮಟ್ಟಗಿನ ಶಪಥ ಅಷ್ಟೆ. ಎಂದು ಮಳೆ ಇಳೆಯ ಪ್ರಿಯಕರ ಮತ್ತಿಡುತಲೇ ಇರುತ್ತಾನೆ. ಇಳೆಯ ಕೆನ್ನೆ ನಾಚಿಕೆಯಿಂದ ಕಂಪಾಗಿ ಒದ್ದೆಯಾಗುವಂತೆ ಮಳೆ ಚಿತ್ರಗಳು ಪ್ರೀತಿಯ ಕುರುಹುಗಳು ಚಿಗುರುವಂತೆ ಹೊಸ ಕವಿತೆ ಹೊಸ ಹಾಡು. ತಾಳವು ನಿನ್ನದೆ ರಾಗವು ನಿನ್ನದೇ ಹಾಡಿಬಿಡಲೆ ಈಗಲೆ. ಇದರ ನಡುವೆ ಬದುಕಿನ ನಿರ್ವಹಣೆಗೆ ಫ್ಯಾಕ್ಟರಿ ಕೆಲಸ ಅನಿವಾರ್ಯ ಬದುಕಿನ ಹಣದ ಅವಶ್ಯಕತೆ ನಿಗಲು ಮತ್ತು ಒಲವು ಹಣ ತೈಲ ದುಡುಮೆ

ನಿಜ ಗೆಳತಿ, ನಿನ್ನಷ್ಟು ಅದೃಷ್ಟ ನಿನಗಿಲ್ಲ!
ನಗರ ಜೀವನಕ್ಕೆ ಈ ಮಳೆಯು ಒಂದು ಶಾಪವೂ, ಒಂದು ವರವೂ ಇದಂತೆ, ಕಡಿಮೆಯಾದರೆ ನೀರಿ ಕೊರತೆ ಅತಿಯಾದರೆ ಪ್ರವಾಹದ ಭೀತಿ. ನೀರು ಇಂಗುವ ನೆಲವು ಇಂದು ಕಾಂಕ್ರೀಟ್ ನ ಕವಚ ತೊಟ್ಟಿದೆ, ಕಾಡು ಮನೆಗಳು ಗೂಡಾಗಿದೆ ಬಿದ್ದ ನೀರು ಇಂಗುವ ಯಾವ ಮಾರ್ಗವಿಲ್ಲದೆ. ಧೀಡಿರಾಗಿ ಹರಿದು ತಗ್ಗು ಪ್ರದೇಶಕ್ಕೆ ಬಂದು ನಿಂತು ಅವಾಂತರ ಸೃಷ್ಟಿಸುತ್ತಿದೆ. ಅದು ನನ್ನೂರಿನ ಕತೆ. ಈ ವಿಷಯದಲ್ಲಿ ಇಲ್ಲಿನ ಜನ ಅದೃಷ್ಟವಂತರು, ಯಾಕೆ ಗೊತ್ತಾ? ಘಟ್ಟದ ಮೇಲಿನ ಜನ ಅಲ್ಲವೆ, ಮಳೆ ಎಷ್ಟು ಸುರಿದರು ಹರಿಹೋಗಿಬಿಡುತ. ಕಲ್ಲಿನ ಮೇಲೆ ಸುರಿದಂತೆ ನಮಗೆ ಮಳೆಯು ಅಪರೂಪದ ಅತಿಥಿ. ಬಂದರೆ ಭಾರತ ಹುಣ್ಣುಮೆ, ಹೋದರೆ ಹೋಳಿ ಹುಣ್ಣಿಮೆ. ಎರಡುಮೂರು ವರ್ಷ ಗೈರು ಹಾಜರಿ, ಆಗ ರೈತ ಕಣ್ಣೀರು ಮಳೆ ಹನಿಯೇನೂ ಎಂದು ಭಾಸವಾಗುತ್ತೆ, ಬರಗಾಲದ ಭೀಕರತೆಗೆ ಮನ ಕರಗುತ್ತದೆ.
ರಾತ್ರಿ ಅಂಗಳದಲ್ಲಿ ಮಲಗಿ ನಕ್ಷತ್ರ ಎಣಿಸುತ್ತಿರುವಾಗ ಕೈ ನೋವು ಬರುವುದು ಆದರೆ ನಿನ್ನ ಅಸಂಖ್ಯಾತ ನೆನಪುಗಳನ್ನು ಎಣಿಸುವಾಗ ಯಾವ ಕೈ ನೋವು ಬರುವುದಿಲ್ಲ. ಈ ನೆನಪುಗಳು ಯಾವತ್ತೂ ನೈಪತ್ಯಕ್ಕೆ ಸರಿಯುವುದಿಲ್ಲ. ಸದಾ ಸುರಿಯುತ್ತಿರುವ ಧಾರಣೆಯಿಂದಾಗಿ ನೆನಪು ಜೀವಂತ. ತಾನಾಗಿಯೇ ಹರಿದು ಬರುವ ಪ್ರೇಮಕ್ಕೆ ಯಾವ ಗೋಡೆ ಇರುವುದಿಲ್ಲ. ನೂರು ಸಂಭಾಷಣೆಯ ನಡುವೆ ಒಡಮೂಡುವ ಮೌನ ತುಂಬಾ ಕಾಡಿಬಿಡುತ್ತದೆ.

ಪೇಟೆ ಬೀದಿಯಲ್ಲಿ ಕರಿಗಿ ಹೋದೆ. . .
ಒಂದು ದಿನ ರಾತ್ರಿಯೇ ನಿರ್ಧಾರ ಮಾಡಿದ್ದೆ ನಾಳೆ ಹೊರಡಬೇಕು ಎಂದು. ರಸ್ತೆ ಇರದ ಊರಿಗೆ, ಇರುವ ಒಂದು ಬಸ್ ನಲ್ಲಿ ಸಾವಿರಾರು ಕನಸುಗಳನ್ನು ಹೊತ್ತು ಬಿರು ಮಧ್ಯಾಹ್ನ ಪ್ರಯಾಣ ಸಾಗಿತು. ಎರಡು ಮೂರು ಘಂಟೆ ಪ್ರಯಾಸದ ಪ್ರಯಾಣ ಅಂಕೂ, ಡೊಂಕು ತಿರುವು ಮೂರುವುಗಳ ನಡುವೆ ಅಂತೂ ಬಂದು ಸೇರಿದೆ. ಯಾರ ಪರಿಚಯವಿಲ್ಲದ, ಯಾರ ಗುರುತು ಮನಸು ಗುರುತಿಸುತ್ತಿಲ್ಲ, ಬಿದ್ದುಕೊಳ್ಳಲು ಒಂದು ರೂಂ ಮಾಡಬೇಕು. ಊಟಕ್ಕೆ ಎಲ್ಲಿಯಾದರೂ ತಿಂದ್ರಾಯಿತು ಎನ್ನುವ ಉಡಾಫೆಯ ಮನಸ್ಥಿತಿ. ಊರು ಸುತ್ತುವ ಕಯಾಲಿ ಸಂಜೆ ನದಿ ಸೇತುವೆ ಕಡೆಗೆ ಲೋಕಾಭಿರಾಮವಾದ ನಡಿಗೆ. ಎಲ್ಲವನ್ನೂ ಕುತೂಹಲದಿಂದಲೇ ಕಣ್ಣು ಅರಳಿಸಿ ನೋಡುವನು. ಚೆನ್ನಮ್ಮ ವೃತ್ತ ಬಳಸಿ ಸಂತೆ ಮಾರುಕಟ್ಟೆ ಒಳಹೊಕ್ಕು ಏನೂ ಖರೀದಿ ಮಾಡಬೇಕೆ ಎಂದು ಆಚೆಗೆ ತಿರುಗಿದೆ. ಕಣ್ಣುಗಳಿಂದ ಮಿಂಚು ಸುರಿಯುತ್ತಿತ್ತು, ನಗುವಿನ ನಡುವೆ, ಆ ಗದ್ದಲದ ನಡುವೆ ಎಲ್ಲವೂ ಮೌನವೇ ಆವರಿಸಿತ್ತು. ತರಕಾರಿಯ ಮಾರುವವಳ ಕೂಗು ಬರಿ ಮುಖ ಭಾವ ಮಾತ್ರ ಕಣ್ಣ ಮುಂದೆ ಹಾದು ಹೋಯಿತು. ಕಣ್ಣು ಕಾಡಿದವು. ಯಾರೂ ಕೊಂಡವರು, ಯಾರೂ ಮಾರಿದವರು ತಿಳಿಯದು ಮನಸಿನ ಬೀದಿಯಲ್ಲಿ ಸಂತೆ ಬೀದಿಯಲ್ಲಿ ಕಳೆದು ಹೋದೆ. ಮನಸಿನ ತೊಳಲಾಟ, ಕಂಗಳ ಚಲನೆ, ಭಾವನೆಗಳ ತಾಕಲಾಟ ಎಲ್ಲವೂ ಒಮ್ಮೆಲೇ ದಾಳಿಯಿಟ್ಟವು. ಇನ್ನು ನಾನು ದಾಳಿ ಪೀಡಿತನು. ಅವ್ಯಕ್ತ ಭಯ ಶುರುವಾಯಿತು. ಕಾಲ ಯಾಕಿಷ್ಟು ಇಷ್ಟು ನಿಧಾನವಾಗಿ ಸುರಿಯುತ್ತಿದೆ. ಯಾರು ಮಾತು ಯಾವ ಕ್ಷಣದಲ್ಲೂ ಕೇಳಿದಂತೆ ನಿಶ್ಯಬ್ದ, ನನ್ನ ಹೃದಯ ಬಡಿತ ನನಗೆ ಕೇಳಿಸುವಷ್ಟು. ಮೈ ಮನ ಹಗುರ ಲೋಕದಿಂದ ಲೋಕಕ್ಕೆ ಹಾರಿದಂತೆ. ನಿನ್ನ ಪ್ರತಿಮೆ ಮನದಲ್ಲಿ ಸೃಷ್ಟಿಸಿಕೊಂಡೆ ಪೂಜೆ ಶುರುವಾಯಿತು. ಇನ್ನೇನಿದ್ದರೂ ನಿನ್ನ ಪ್ರೀತಿಯ ತಾಪದಲ್ಲಿ ಕರಗುವ ಮೇಣದಂತೆ.

ಸಣ್ಣ ಆತಂಕದ ನಡುವೆ ದೊಡ್ಡ ಸಂತಸದ ಊಟಿ. . .
ಗಾಯವಿಲ್ಲದ ನೋವಿಗೆ ಮುಲಾಮು ಹುಡುಕಿಕೊಡಿ ಎಂದು ಯಾರಿಗೆ ಕೇಳುವುದು. ಜಗತ್ತಿನ ಯಾವ ವೈದ್ಯಶಾಸ್ತ್ರದಲ್ಲಿ ಈ ರೋಗಕ್ಕೆ ಔಷಧಿ ಕಂಡುಹಿಯುವ ಸಾಹಸ ಮಾಡಿಲ್ಲ. ತುಡಿತ, ಮಿಡಿತ, ಸೆಳೆತ, ಕೌತುಕ, ಕುತೂಹಲ ಇಂತಹ ಶಬ್ದಗಳಿಗೆ ಯಾವ ನಿಘಂಟಿನಲ್ಲಿ ಈಗ ಸದ್ಯಕ್ಕೆ ಅರ್ಥ ಸಿಗದು. ನಿದ್ದೆ ರಾತ್ರಿಗೆ ರಜೆ ಹಾಕಿ ತಿಂಗಳಾಯಿತು. ಊಟ ಓಟಕಿತ್ತು ಲೆಕ್ಕವಿಲ್ಲ. ನನಗೆ ಯಾವ ಹಸಿರು ಹಸಿರಾಗಿಲ್ಲ, ಯಾವ ಕತ್ತಲೆಯು ಬೆಳಕನ್ನು ಬಯಸುತ್ತಿಲ್ಲಾ, ಬೇಕಿರುವುದು ಅಪ್ಪಟ ಪ್ರೀತಿ. ಈ ಅಲೆಮಾರಿ ಆ ಮಳೆನಾಡಿನ ಹುಡುಗಿಯ ಪ್ರೀತಿ ಸಿಕ್ಕಿತೇ, ಬದುಕಿನ ಅಡಿಪಾಯವೆ ನಂಬಿಕೆ ಅಲ್ಲವೇ. ಪ್ರತಿ ಹತಾಸೆಗಳು ನಡುವೆ ಭರವಸೆ ಬೆಳಕು ಇದ್ದೆ ಇರುತ್ತದೆ. ನನ್ನ ಪ್ರೇಮ ನಿವೇದನೆಯ ಸುಮೂಹೂರ್ತಕ್ಕಾಗಿ ಪಂಚಾಂಗ ತಡಕಾಡಬೇಕಾಗಿದೆ. ಪ್ರತಿದಿನ ಮನಸು ನೀಡುವ ಪ್ರೀತಿಯ ಸವಾಲನ್ನು ಗೆಲ್ಲುವುದು ಹೇಗೆ ಮನದಾಳದಲ್ಲಿ ಅಡಗಿರುವ ಪ್ರೀತಿಯ ಸಾಲುಗಳನ್ನು ಹಂಚಿಕೊಳ್ಳಲು ಪಾತ್ರ ಬರೆದೆ ಕೊಡಲು ದಿನಕ್ಕಾಗಿ ಕಾಯುತ್ತಾ ಕುಳಿತೆ. ಮಾಘ ಮಾಸದ ಹುಣ್ಣಿಮೆಯ ರಾತ್ರಿ ಅವಳ ಮನೆ ಹಿತ್ತಲ ಪಕ್ಕದ ಬೀದಿಗೆ ಅಂಟಿಕೊಂಡ ಒಂಟಿ ಮರದ ಮುಂದೆ ಅವಳು ನಾನು ನನ್ನ ಪ್ರೇಮ ಪತ್ರ. ಕಣ್ಣಿನ ಛಾಯೆ ಬೆಳದಿಂಗಳನ್ನು ಮೀರಿಸುತ್ತಿತ್ತು. ನನ್ನ ಆತಂಕ ಆ ಬೆಳದಿಂಗಳಿನಂತೆ ಹೆಚ್ಚಾಗುತ್ತಿತ್ತು. ತುಸು ನಾಚಿ, ಸಣ್ಣ ನಗುವ ಬೀರಿ ಪಕ್ಕನೆ ಕೈಯಲ್ಲಿದ್ದ ಪತ್ರಯೊಂದಿಗೆ ಮಾಯವಾದಳು. ಆತಂಕಕ್ಕೀಡು ಮಾಡಿದ ಸಂಗತಿಗಳು ರಾತ್ರಿ ಕಳೆದು ಬೆಳಗಾಯಿತು.

ಮಳೆ ಕಾಣದ ಹುಡುಗನ ಬದುಕಲ್ಲಿ ಕುಂಭದ್ರೋಣ ಮಳೆ. . .
ನಕ್ಕೆ ನೀನು, ನಗುವ ಕಂಡು ಬೆರಗಾದೆ, ಬದುಕಿನಲ್ಲಿ ಬೆಳಕಾಗಿದೆ. ನಿರೀಕ್ಷೆಯಂತೆ ನಮ್ಮ ನಿನ್ನ ಮನೆಯಿಂದ ವಿರೋಧ ಬರಲಲ್ಲಿ. ಜಗದ ನಿಯಮದಲ್ಲಿ ಪವಿತ್ರ ಪ್ರೇಮಕ್ಕೆ ಮದುವೆ ಅಂತಿಮ ನಿಲ್ದಾಣ. ಆದರೆ ಎದೆಯೊಳಗಿನ ಪ್ರೀತಿ ನಿರಂತರ. ಎರಡು ವಸಂತಗಳು ಹೇಳದೆ, ಕೇಳದೆ ಜಾರಿ ಹೋದವು. ಪ್ರೀತಿ ಮತ್ತಷ್ಟು ಪಕ್ವವಾಯಿತು. ದಿನಗಳಿಗೆ, ತಿಂಗಳುಗಳಿಗೆ, ವರ್ಷಗಳಿಗೆ ನಮ್ಮ ಪ್ರೀತಿಯ ಸಂತಸ ಕಂಡು ಕರುಬಿದವು. ಬಿರು ಬಿಸಿಲಿನ ದಿನಗಳು ಸಂಬಳದ ಜೊತೆಗೆ ಮೂರುಮಾರು ಮಲ್ಲಿಗೆಯೊಂದಿಗೆ ಮನೆಯ ಅಂಗಳದಲ್ಲಿ ಹಾಜರಿದ್ದೆ. ಎರಡು ಬಾರಿ ಕರೆದ, ಯಾವ ಸದ್ದಿಲ್ಲ, ಯಾವ ಉತ್ತರವಿಲ್ಲ, ಮನೆಯಲ್ಲ ತಡಕಾಡಿದೆ. ಗಾಬರಿಗೊಂಡ ಓಣಿ ಓಣಿ ಅಲೆದೆ. ಎಲ್ಲಿಯೂ ನಿನ್ನ ಗುರುತಿನ ಸುಳವಿಲ್ಲ. ಅಕ್ಕ ಪಕ್ಕದವರ ಮನೆ ವಿಚಾರಿಸಿದೆ ಅವರಿಗೂ ಗೊತ್ತಿಲ್ಲ. ಆತಂಕದ ನಡುವೆಯೇ ಸಂಜೆಯಾಯಿತು. ರಾತ್ರಿಯ ಪಕ್ಕದ ಮನೆಯವರು ನೀನು ಬಸ್ ಸ್ಟ್ಯಾಂಡ್ ಕಡೆಗೆ ಹೋಗಿದ್ದು ನೋಡಿದೆ ಎಂದರು. . ಯಾವ ಮುನಿಸು, ಯಾವ ಕಾರಣ, ಯಾವ ಜಗಳ, ಯಾವ ಸಂದೇಹ ನಮ್ಮ ನಡುವೆ ಸುಳಿದಾಡಿತೋ ತಿಳಿಯದು. ಮುನಿಸಿಕೊಂಡ ಹೇಳದೆ, ಕೇಳದೆ ತವರಿಗೆ ಹೋದೆ. ಎರಡು ಮಾಸ ಕಳೆದವು, ಜೊತೆ ವರ್ಷವೂ ಸಮೀಪಿಸಿತು ನೀನು ಇಲ್ಲಿ ಕಡೆ ಬರುವು ಸುಳಿವಿಲ್ಲ.

ನೆನಪಾಗುತ್ತೀಯ ಎಂದು. . .
ಒಂಟಿತನ ಬೇಗೆಯಲ್ಲಿ ಅಪ್ಪಟ ಪ್ರೀತಿಯನ್ನು ನೀಡಿದವಳು. ನನ್ನ ಯಾವ ತಪ್ಪಿಗೆ ನಿನ್ನಿಂದ ಶಿಕ್ಷೆ. ಬದುಕಿನಲ್ಲಿ ಮಳೆಯಂತೆ ಬಂದವಳು ನೀನು. ಪ್ರೀತಿಯ ಬಳ್ಳಿ ನಿರಂತರವಾಗಿರಲಿ ನೀನು ಇರಲೆಬೇಕು. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸು. ನೀನು ನೆನಪಾಗುತ್ತೀಯ ಎಂದು ಪತ್ರ ಬರೆಯುತ್ತಿಲ್ಲ. ಈ ಪತ್ರ ಬರೆಯುತ್ತಿರುವಾಗ ನೆರವಾಗಿ ನಿನ್ನ ಮುಂದೆ ತಪ್ಪು ಒಪ್ಪಿಕೊಂಡವನಂತೆ ನಿಂತು ಬರೆಯುತ್ತಿರುವೆ. ಪ್ರತಿ ಅಕ್ಷರದಲ್ಲಿ ನಿನ್ನ ಬರುವಿಕೆಗಾಗಿ ಹಂಬಲಿಸಿದಂತೆ ಕಾಗುಣಿತ ಮೇಳವಿದೆ. ನಿನ್ನ ನೆನಪಿನಲ್ಲಿ ತಂದೆ ಮಲ್ಲಿಗೆ ಸಬೂಬು ಹೇಳಲು ನನ್ನಿಂದ ಆಗುತ್ತಿಲ್ಲ. ಅಂಗಳದ ರಂಗೋಲಿಗೆ ಬಣ್ಣದ ಕಸುವಿಲ್ಲ, ಹಿತ್ತಲದ ದಾಸವಾಳಕ್ಕೆ ನಲಿವಿಲ್ಲ. ಹಾಲಿ ಲೆಕ್ಕ, ಪೇಪರಿನ ಲೆಕ್ಕ, ದಿನಸಿಯ ಲೆಕ್ಕ ಸರಿಹೋಗುತ್ತಿಲ್ಲ. ಇಷ್ಟು ದಿನದಿಂದ ಜೊತೆಯಾದ ಪ್ರೀತಿಯ ಬಟವಾಡೆ ಆಗಬೇಕಿದೆ. ಜಾರಿ ಹೋದ ಕಾಲದ ನಡುವೆ, ತುಂಬಿರುವ ಕಡಲ ನಡುವೆ, ಸುರಿಯುವ ಮಳೆಯ ನಡುವೆ ಗದ್ದಲದ ಸಂತೆಯ ನಡುವೆ, ಕಾಡ ಬೆಳದಿಂಗಳ ನಡುವೆ, ಕಾಡಿಸುವ ಮೌನದ ನಡುವೆ, ಮಾತಿನ ಈಟಿ ನಡುವೆ, ಬೇಸರಿಕೆಯ ಬಯಲಿನ ನಡುವೆ ರಾತ್ರಿಯ ನಿಶ್ಯಬ್ದ ಸದ್ದಿನ ನಡುವೆ, ಪದೆ ಪದೆ ನೆನಪಾಗುವೆ ಬಿಟ್ಟು ಹೋದ ಕ್ಷಣಕ್ಕೆ ಕಂದಾಯ ಕಟ್ಟಿದ್ದೇನೆ. ಖಂಡಿತ ಕೋಪ ಕಡಿಮೆ ಮಾಡಿಕೊಂಡು ತಪ್ಪದೆ ಮರಳಿ ಬಾ ಮಳೆ ಕಾಣದ ಊರಿನ ಹುಡುಗನ ಎದೆಗೆ ಮಸಲಧಾರೆಯನ್ನು ಸುರಿಯಲು ಬಾ ಕಾಯಯುತ್ತಿರುವೆ. ಬರುವ ಹುಣ್ಣಿಮೆ ಬೆಳದಿಂಗಳದ ಊಟಕ್ಕೆ ನಿನ್ನ ಕೈ ತುತ್ತು ಬಯಸಿದೆ ಮನ. ನಮ್ಮ ಪ್ರೀತಿಯ ಬಳ್ಳಿಗೆ ನೀ ಆಸರೆ ನಿನ್ನ ನಿರೀಕ್ಷೆಯಲ್ಲಿ ನಾನು.

ಇಂತಿ
ಪ್ರೀತಿಯಲ್ಲಿ ಮುಳುಗಲು ತಯಾರು ಇರುವವನು.

-ವೃಶ್ಚಿಕ ಮುನಿ (ಪ್ರವೀಣಕುಮಾರ ಸುಲಾಖೆ).

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x