ಅನುಭವದ ಅನಾವರಣ: ಸಂಕಲ್ಪ (ಸದಾಶಿವ ಡಿ ಓ)

ಬರಹವು ಆದಿ ಅನಾದಿ ಕಾಲದಿಂದ ತನ್ನದೇ ಆದ ಗಟ್ಟಿತನವನ್ನು ಉಳಿಸಿಕೊಂಡು ಬಂದಿದೆ. ಇದರಲ್ಲಿನ ತಮ್ಮ ಆದಿ ಗ್ರಂಥಗಳು ಮಾತಿನ ರೂಪದಲ್ಲಿರದೆ ಇಂದು ಓದುಗನ ಕೈಯಲ್ಲಿ ನಲಿದಾಡುತ್ತಿವೆ. ಈ ಬರಹಗಳನ್ನು ಎರಡು ರೀತಿಯಾಗಿ ನಾವು ಕಾಣಬಹುದು. ಮೊದಲನೆಯದು ಕಲ್ಪನೆ ಎರಡನೆಯದು ವಾಸ್ತವತೆ. ಹಾಗೂ ಅಲ್ಲಿ ಇಲ್ಲಿ ಎಲ್ಲೋ ಒಬ್ಬರಿಂದ ಮತ್ತೊಬ್ಬರ ಬಾಯಿ ಮಾತುಗಳಿಂದ ರವಾನೆಯಾದ ವಿಷಯಗಳು ಇಂದು ಪ್ರಸ್ತುತದಲ್ಲಿವೆ ಆದರೆ ಇದರ ಪ್ರಮಾಣ ಅತ್ಯಲ್ಪ. ಆದ್ದರಿಂದ ಒಬ್ಬೇ ಒಬ್ಬ ಆ ಭಾಷೆ ತಿಳಿದಿರುವ ಕೊನೆಯ ವ್ಯಕ್ತಿ ಇರುವುವವರೆಗೂ ಶಾಶ್ವತವಾಗಿರುತ್ತವೇ ಆ ಭಾಷೆಯ ಪುಸ್ತಕಗಳು. ಇದಕ್ಕೆ ಮೂಲಕಾರಣ ಅಂದಿನಿಂದ ಇಲ್ಲಿಯವರೆಗೆ ಬರವಣಿಗೆಯೂ ನಿರಂತರತೆಯಿಂದ ಕೂಡಿರುವುದರಿಂದ.

ಈ ಹಿಂದೆ ನಡೆದಿರುವ ಹಲವಾರು ಘಟನೆಗಳನ್ನು ಆಧರಿಸಿ ನಮ್ಮ ಹಿರಿಯರು, ಪೂರ್ವಿಕರು ಬರೆದುಕೊಂಡು ಬಂದಿದ್ದಾರೆ. ಇಂದು ಇವುಗಳು ನಮ್ಮಗಳ ಪಾಲಿಗೆ ಕತ್ತಲ್ಲಲ್ಲಿಡಿದ ದೀಪದ ಹಾಗೆ. ಇವರ ಬರಹಗಳು ಭಾವ ತುಂಬಿ ಮೂಡಲು ಅವರ ಒಳಗಿನ ಅಂತರ್ಧನಿ. ಬಂಗಾರವು ಹೇಗೆ ಬೆಂಕಿಯಲ್ಲಿ ಉರಿದು ಪುಟಗೊಂಡ ಹೊಳೆಯುತ್ತದೆಯೋ ಹಾಗೆಯೇ ತಮ್ಮ ಜೀವನದ ಕುಲುಮೆಯಲ್ಲಿ ಮಿಂದು, ಎದ್ದು, ಓಡಾಡಿದರ ಫಲವೇ ನಮ್ಮ ಹಿರಿಯರ ಸಾಹಿತ್ಯ ಗುಚ್ಛ.

ನಮ್ಮ ವರಕವಿ ‘ದ.ರಾ.ಬೇಂದ್ರೆ’ ಯವರ ‘ನಾಕುತಂತಿ’ ಕವನ ಸಂಕಲನದಲ್ಲಿ ‘ಮತ್ತೆ ಶ್ರಾವಣ ಬಂದಾ’ ಕವನದಲ್ಲಿ ಹೇಳುತ್ತಾರೆ,

“ಕೃಷ್ಣನ ಕೈಯಲ್ಲಿ ಕೊಟ್ಟ, ಆ ಚಂದ್ರಭಟ್ಟ।
ಸಾವಿತ್ರಿಯ ಪಟ್ಟ।” ಎಂದು.

ಈ ಮೂರು ಸಾಲುಗಳ ಏಳು ಪದಗಳಲ್ಲಿ ಶ್ರೀಕೃಷ್ಣನು ಶಮಂತಕ ಮಣಿಯನ್ನು ತಂದು ನೀಡಿದಂತಹ ಸ್ವಾರಸ್ಯಕರವಾದ ಕಥಾಹಂದರವೇ ಅಡಗಿದೆ. ನೋಡಿ ನಮ್ಮ ಜ್ಞಾನ ತುಂಬಿದಂತೆ ನಮ್ಮ ಮಾತುಗಳು ಕಡಿಮೆಯಾಗುತ್ತವೆ. ಆಡುವ ಮಾತಿಗೆ ಅರ್ಥಗಳು ಅಧಿಕವಾಗಿ ಹುದುಗಿರುತ್ತವೆ. ಇವುಗಳನ್ನು ಹೂಡುಕಿ ಹೊರತೆಗೆದಾಗ ಅದರ ಆಳ ಅರಿವಿಗೆ ಬರುತ್ತದೆ.

ಕಲ್ಪನೆಯ ಲೋಕದಲ್ಲಿ ವಿವರಿಸಿ ಅಥವಾ ವಾಸ್ತವತೆಯನ್ನು ಯಥಾವತ್ತಾಗಿ ಅನುಕರಿಸಿ ಬರೆಯುವುದು ಕೂಡ ಕಷ್ಟ ಸಾಧ್ಯವಾದ ಕೆಲಸ. ಕಾರಣ ಭಾವ ಭಾವನೆಗಳನ್ನು ಮಸ್ತಕದಲ್ಲಿ ಅವಲೋಕಿಸಿ ಬರೆಯುವ ಶಕ್ತಿ ಬೇಕು. ಆ ಶಕ್ತಿ ಬರಬೇಕೆಂದರೆ ಮೊದಲು ನಾವುಗಳು ಸಂಪೂರ್ಣವಾಗಿ ಅರಿವಿನ ಬುತ್ತಿಗಳಾಗಿರಬೇಕು. ಆದರೆ ಇದು ಎಷ್ಟು ಕಠಿಣವಾಗಿರುತ್ತದೆ ಎಂದು ನಮ್ಮ ರಾಷ್ಟ್ರಕವಿ ‘ಕುವೆಂಪು’ ರವರು ರಚಿಸಿರುವ ‘ಅನಿಕೇತನ’ ಕವನ ಸಂಕಲನದ ‘ಕಷ್ಟವಯ್ಯಾ ಹೋಗಲು ಕವಿಹೃದಯಕೆ’ ಎಂಬ ಕವನದಲ್ಲಿ ಹೀಗೆ ಹೇಳುತ್ತಾರೆ,

ದುರ್ಗಮವೊ ಮಾರ್ಗವದು ಕವಿಯೆದೆಯ ಕಲ್ಗಡಿಗೆ
ಮೆಟ್ಟಿದರೆ ಪಥವೆಲ್ಲ ಮುಳ್ಳುಕಲ್ಲು।
ಕಂಟಕದ ಸಂಕಟವ ಕಳೆದು ಮೇಲೇರ್ದರೂ
ತಟ್ಟಿದೊಡನೆ ತೆರೆವ ಕದವದಲ್ಲ।

ವಿಚಾರಗಳ ಆಳವು ನೀರಿನಂತೆ. ಪ್ರತಿಸಲ ಅದರಲ್ಲಿ ಮುಳುಗಿ ಮೇಲಿದ್ದರೂ ಒಂದೊಂದು ಹೊಸ ಅನುಭವದಿಂದ ಹೊರಬರುತ್ತೇವೆ. ಇದೆ ಕಾವ್ಯಗಳಿಗಿರುವ ಶಕ್ತಿ. ನಮ್ಮ ರಾಷ್ಟ್ರಕವಿಗಳು ಹೇಳುವಂತೆ ಕವಿಯ ನಡಿಗೆ ಎಂಬುದು ಬಹಳ ದುರ್ಗಮವಾದ ಹಾದಿ. ಇದನ್ನು ಮೆಟ್ಟಿ ನಡೆದರೆ ಬರೀ ಕಲ್ಲುಮುಳ್ಳುಗಳೇ ಇಂತಹ ಘಟ್ಟಗಳನ್ನು ದಾಟಿ ಬಂದರು ತಟ್ಟಿದೊಡನೆ ತೆರೆವ ಕದವದಲ್ಲ ಆ ಹಾದಿ ಎಂದು.
ಅವರೇ ಮುಂದುವರೆದು ಇದೇ ಕವನದಲ್ಲಿ ಕೊನೆಗೆ ಹೇಳುತ್ತಾರೆ ‘ಎಲ್ಲಾ ಕಷ್ಟಪಟ್ಟ ಮೇಲೆ, ತನ್ನಲ್ಲಿನ ತನವನ್ನು ನೀಡಿ ಸಂಪೂರ್ಣವಾಗಿ ಅಡಗಿಸುತ್ತದೆ’ ಎಂದು. ಇದರರ್ಥ ತಮ್ಮ ಯಾವುದೇ ಮಾರ್ಗವಾದರು ಕೂಡ ತಮ್ಮ ಶ್ರಮ, ಪರಿಶ್ರಮವಿಲ್ಲದೆ ಯಾವುದು ದಕ್ಕುವುದಿಲ್ಲ. ಇದರ ಪರಿಯನ್ನು ಎಳೆಎಳೆಯಾಗಿ ಬಿಡಿಸಿ ಒಳ ಹೊಕ್ಕರೆ ಮಾತ್ರ ತಿಳಿಯುವುದು. ಹಿರಿಯರು ಹೇಳಿದಂತೆ “ಗಂಗೆಯು ಹರನ ಶಿರದಲ್ಲಿ ಹರಿಯುವಳೇ ಹೊರತು ನರನ ಪಾದದಲ್ಲಿ ಅಲ್ಲ”.  ಪವಿತ್ರವಾದ ಜ್ಞಾನವೆಂಬುದು ಪ್ರತಿಯೊಬ್ಬರ ಮೆದುಳಲ್ಲಿ ಅಡಕವಾಗಿರುತ್ತದೆ ಇದನ್ನು ಹೊರತೆಗೆಯುವ ಪ್ರಯತ್ನ ನಮ್ಮದಾಗಿರಬೇಕು.

ಈ ನಮ್ಮ ಮೆದುಳು ಏನೆಂಬುದನ್ನು ನಮ್ಮ ‘ಯುಗಧರ್ಮ ರಾಮಣ್ಣ’ ರವರು ‘ತೋಚಿದ್ದು ಗೀಚು’ ಎಂಬ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ.

“ಪುಸ್ತಕದ ವಿಷಯ ಮಸ್ತಕಕ್ಕೇರಿದೋಡೆ
ಪುಸ್ತಕದ ಕತೃ ಬಂದ್ರು। ಶಿಸ್ತಿನಿಂದ
ಕಿತ್ತಾಡಬಹುದು ಯುಗಧರ್ಮ॥”

ಎಷ್ಟು ಸತ್ಯವಾದ ಮಾತು. ಯಾವುದೇ ವಿಚಾರವನ್ನು ನಾವು ಓದಿ ಆ ವಿಚಾರವು ನಮ್ಮ ಅಂತರಾಳದಲ್ಲಿ ಇಳಿದಾಗ ಆ ಪುಸ್ತಕವನ್ನು ರಚಿಸಿದ ವ್ಯಕ್ತಿ ಬಂದರೂ ಕೂಡ ಆ ವ್ಯಕ್ತಿ ಹತ್ತಿರನೇ ನಾವು ಶಿಸ್ತಿನಿಂದ ಕಿತ್ತಾಡಬಹುದು. ಏಕೆಂದರೆ ಅದರ ಸವಿಸ್ತಾರವಾದ ಅರ್ಥವನ್ನು ಅರ್ಥೈಸಿಕೊಂಡಾಗ ನಿರ್ವಿಘ್ನವಾಗಿ ಸುಲಲಿತವಾಗಿ ಮಾತನಾಡುವ ಶಕ್ತಿ ನಮಗೆ ತಿಳಿಯುತ್ತದೆ .

ಯಾವುದೇ ವಿಚಾರವಾದರೂ ಅಷ್ಟೆ ನಾವುಗಳು ತಿಳಿಯದೆ ಯಾವುದನ್ನು ಸಹ ತಿಳಿಸಲಾರವು. ತತ್ತ್ವದ ವಿಚಾರಗಳನ್ನು ತಿಳಿ ತಿಳಿಯಾಗಿ ತಿಳಿದ ಮೇಲೆ ನಮ್ಮೊಳಗೆ ತಿಳಿಯದೆ ಸತ್ತ್ವವು ಬೆಳೆಯುತ್ತದೆ. ಬೆಳದಂತೆ ಆ ವ್ಯಕ್ತಿಯ ವ್ಯಕ್ತಿತ್ವವು ಅರಳುತ್ತದೆ. ಆ ವ್ಯಕ್ತಿತ್ವ ಅರಳಿಸಬಲ್ಲ ಪ್ರತಿಯೊಬ್ಬರಿಗೂ ಮಹತ್ವ ಬರುತ್ತದೆ. ಆ ನಿಟ್ಟಿನಲ್ಲಿ ನಾವುಗಳು ಪಯಣ ಬೆಳೆಸಿದರೆ ನಮಗೂ ಸಹ ಎಲ್ಲೋ ಒಂದು ಪಕ್ವತೆ ಬಂದು ಮನಸ್ಸು ಮುಂಜಾನೆಯ ಹೂವಿನಂತೆ ಅರಳುತ್ತದೆ.

ಈ ಮನಸ್ಸೆಂಬ ಕುಲುಮೆ ಎಷ್ಟು ಬೆಂದರು ಕೂಡ ಸ್ವಲ್ಪ ಸಮಯದ ಬಳಿಕ ಅದು ತನ್ನ ಜಾಡನ್ನು ತಾನು ಹಿಡಿದು ತಣ್ಣಗಾಗಿ ಬಿಡುತ್ತದೆ. ನಿರಂತರತೆಯಿಂದ ಅದಕ್ಕೆ ಬೇಕಾದ ಹಾಗೆ ಅಗ್ನಿಯನ್ನು ತಾಕಿಸುತ್ತಿದ್ದರೆ ಅದರ ಜ್ವಾಲೆಯಿಂದ ನಿರಂತರವಾಗಿ ಬಿಸಿಯಾಗಿರುತ್ತದೆ. ಪ್ರತಿದಿನ ನೀರನ್ನು ಕಾಯಿಸುವ ಒಲೆಯಲ್ಲಿ ನೀವು ನೀರು ಕಾಯಿಸಿದರೆ ಒಲೆಯು ತತ್ ಕ್ಷಣವೇ ಹೊತ್ತಿ ಉರಿಯುತ್ತಿರುತ್ತದೆ. ಹೊಸ ನೀರು ಕಾಯಿಸುವ ಒಲೆಗೆ ಎಷ್ಟೇ ಸೌದೆಗಳನ್ನು ಹಾಕಿದರೂ ಅದು ಹಳೆಯ ಒಲೆಯ ತರ ಬೇಗನೆ ಹೊತ್ತುವುದಿಲ್ಲ. ಹಾಗೇ ನಾವು ಯಾವುದಾದರೂ ಒಂದರಲ್ಲಿ ನಿರಂತರತೆಯಿಂದ ಕೂಡಿದ್ದರೆ ಮಾತ್ರ ನಮಗೆ ಅದರಲ್ಲಿ ಸಿದ್ಧಿ ಸಿಗಬಹುದು. ಇಲ್ಲವೆಂದರೆ ಅದು ಕೂಡ ವ್ಯರ್ಥ ಪ್ರಯತ್ನ.

ಈಗೊಮ್ಮೆ ನಮ್ಮ ‘ದ.ರಾ. ಬೇಂದ್ರೆ’ ಅಜ್ಜ ರವರನ್ನು ಯಾರೋ ಒಬ್ಬರು “ಏನು  ನೀವು ಬರೆದ ಕವನಗಳು ಕವಿತೆಗಳು ನಾಟ್ಯ ಮಾಡುತ್ತವಲ್ಲ. ಇವೆಲ್ಲವನ್ನೂ ಯಾವ ರೀತಿ ಬರೆಯಲು ಸಾಧ್ಯ, ಇದಕ್ಕೇನು ಕಾರಣ?” ಎಂದು ಕೇಳಿದಾಗ ನಮ್ಮ ದತ್ತಜ್ಜ ಹೇಳಿದರಂತೆ “ಮಗ ಒಳಗೆ ಹದವಿದ್ದರೆ ಹೊರಗೆ ಪದ ತಾನಾಗೆ ಬರುತ್ತವೆ” ಎಂದು. ಆ ಹದ ಕಟ್ಟುವ ಮನಸ್ಸು ನಮ್ಮದಾಗಬೇಕೆಂದರೆ ನಾವು ಎಷ್ಟು ಓದಿರಬೇಕು, ನೋಡಿರಬೇಕು, ತಿಳಿದಿರಬೇಕು ಮತ್ತು ಅನುಭವಿಸಿರಬೇಕು ಇವೆಲ್ಲವೂ ಕೂಡಿದರೆ ಮಾತ್ರ ಪರಿಪೂರ್ಣತೆ ಸಿಗುತ್ತದೆ. ಪದಗಳನ್ನು ಕಟ್ಟಲು ಸಹ ನಮಗೆ ಅನುಕೂಲವಾಗುತ್ತದೆ.

ಹೀಗೆ ‘ಬೀಚಿ’ ಯವರು ಬರದಿರುವಂತಹ ‘ಬಿತ್ತಿದ್ದೇ ಬೇವು’ ಎಂಬ ಕಾದಂಬರಿಯಲ್ಲಿ, ಹೆಣ್ಣು ತವರು ಮನೆಯಿಂದ ಮದುವೆಯಾಗಿ ಗಂಡನ ಮನೆಗೆ ಹೋದಾಗ ಅಲ್ಲಿ ತನ್ನ ಜೀವನವನ್ನು ಕಟ್ಟಿಕೊಳ್ಳವ ಹರಸಾಹಸದ ಘಟನೆಗಳನ್ನು ಅತಿ ಸೂಕ್ಷ್ಮವಾಗಿ ಹೇಳಿದ್ದಾರೆ . ಈ ಕಥಾ ಹಂದರವನ್ನು ಓದುತ್ತಾ ಹೋದಂತೆ ನಮಗೆ ಎರಡು ಪ್ರಮುಖ ಘಟನೆಗಳು ತಿಳಿಯುತ್ತವೆ. ಒಬ್ಬ ವ್ಯಕ್ತಿಯು ಯಾವುದೇ ರೀತಿ ಬೆಳವಣಿಗೆ ಮತ್ತು ಅವನತಿಯನ್ನು ಹೊಂದವುವ ಪ್ರಮುಖ ಕಾರಣಗಳು. ಒಂದು ಮಮಕಾರ ಇನ್ನೊಂದು ಅಹಂಕಾರ. ನಾವು ನಮ್ಮ ಸಂಬಂಧದ  ಕೊಂಡಿಯನ್ನು ಕಳಚದೆ, ನಾವು ನಮ್ಮ ಒಳಗೆ ಸುತ್ತಾಡಿಕೊಂಡು ಹೊರಬರದೇ ಇದ್ದಲ್ಲಿ ಏನೂ ಮಾಡಲು ಆಗದೇ ಸಾಯಿಸುವುದು ಮಮಕಾರ. ಏನೋ ಒಂದು ಅಹಮ್ಮಿನಿಂದ, ದುರಂಕಾರದಿಂದ ಬಂದಂತಹ ಎಲ್ಲಾ ಅವಕಾಶಗಳನ್ನು ಬಿಟ್ಟು ಸುಮ್ಮನೆ ನಡೆಯುವನು ಅದೊಂದು ದುರ್ನಡತೆಯ ಸೂಚಕ. ಈ ಎಲ್ಲ ಸೂಕ್ಷ್ಮತೆಗಳನ್ನು ಆ ಪುಸ್ತಕದಲ್ಲಿ ನಮಗೆ ಕಣ್ಣಿಗೆ ಕಟ್ಟುವ ರೀತಿಯನ್ನು ಜೀವನವನ್ನು ಕಟ್ಟಿಕೊಳ್ಳುವ ಬಗೆಯ ಜೊತೆಗೆ ವಿವರಿಸಿದ್ದಾರೆ ನಮ್ಮ ಬೀಚಿಯವರು.

ಇವುಗಳನ್ನು ನೋಡುತ್ತ ಓದುತ್ತ ಬಂದಾಗ ನಮಗೆ ತಿಳಿಯುವುದು ನಮ್ಮಲ್ಲಿರುವಂತಹ ಜ್ಞಾನದ ಮಿತಿ ಎಷ್ಟು ಎಂದು . ಅದರ ವ್ಯಾಪ್ತಿಯು ಜಗದಗಲದಷ್ಟು ದೊಡ್ಡದಾಗಿದೆ. ನಾವಿನ್ನು ಕಲಿತಿರುವುದು ಬೆಟ್ಟದಡಿಯ ಹುಲ್ಲಿನಷ್ಟು. ನಾವುಗಳು ಮತ್ತಷ್ಟು ನಿರಂತರತೆಯಿಂದ ಕಲಿತು ನಮ್ಮ ಜ್ಞಾನದ ಹುಲ್ಲನ್ನು ಚಿಗುರೊಡೆಸಿ, ಮರವಾಗಿ ಬೆಳೆಸಿ ಹೆಮ್ಮರವಾಗಿಸುವ ಕಡೆಗೆ ಗಮನ ಹರಿಸುವ, ಬೆಳೆಸಿ ಮತ್ತೊಬ್ಬರಿಗೆ ಆಸರೆಯಾಗುವ.

ಸಂಕಲ್ಪ (ಸದಾಶಿವ ಡಿ ಓ)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
SADASHIVA D O
SADASHIVA D O
2 years ago

Thank you PANJU….

Praveenkumar
Praveenkumar
2 years ago

ನಿಮ್ಮ ಬರಹ ತುಂಬಾ ಸರಳವಾಗಿದೆ, ಹಾಗು ಅತ್ಯಂತ ಅರ್ಥಗರ್ಭಿತವಾಗಿದೆ, ಹೊಸ ಬರಹಗಾರರು ಪ್ರೇರಣೆ ಆಗಲು ಸಂಕಲ್ಪಿತವಾದ ಬರಹ….. ಇನ್ನೂ ಹೆಚ್ಚಾಗಿ ಬರಲಿ… ನಿಮ್ಮ ಬರಹಗಳ ನಿರೀಕ್ಷೆಯಲ್ಲಿ…….

2
0
Would love your thoughts, please comment.x
()
x