ಬಹಳ ದಿನಗಳ ನಂತರ ಓಲೆ ಬರೆಯುತಿಹೆನೆಂದು ಬೇಜಾರು, ಗಾಬರಿಯಾಗಬೇಡ ಗೆಳತಿ. ನನ್ನ ಚರ್ಮ ಸುಕ್ಕುಗಟ್ಟಿದರೂ ನಿನ್ನ ಮ್ಯಾಲಿನ ಪ್ರೀತಿಗೆ ತುಕ್ಕು ಹಿಡಿಯದು. ಕಡಲು ಬತ್ತಿದ ಉದಾಹರಣೆಯುಂಟೇನು? ಹುಚ್ಚಿ..ಸಣ್ಣ ಸಣ್ಣ ಹಳ್ಳ ತೊರೆ ನದಿಗಳು ಬತ್ತಿ ಹೋಗಬಹುದು. ನನ್ನ ಪ್ರೀತಿ ಆ ಸುಂದರ ಸುವಿಶಾಲ ನೀಲ್ಗಡಲಿನಂತೆ ಕಣೆ, ಸದಾ ನಿನಗಾಗಿ ಪುಟಿಯುತ್ತಲೇ ಇರುವುದು. ಚುಮುಚುಮು ಚಳಿಯಲ್ಲಿ ನಿನ್ನ ನೆನಪಾದರೆ ಸಾಕು, ಈಗಲೂ ಬೆಚ್ಚನೆಯ ಭಾವ ಚಿಗುರೊಡೆಯುವುದು. ನನಗೆ ವಯಸ್ಸಾಗಿದೆಯೆಂದು ಮೂಗು ಮುರಿಯಬೇಡ. ನೀ ಮೂಗು ಮುರಿದಾಗಲೆಲ್ಲ ಮತ್ತಷ್ಟು ಮುದ್ದಾಗಿ ಕಾಣುವೆ. ವಯಸ್ಸು ಕೇವಲ ನಶಿಸಿ ಹೋಗುವ ಈ ತನುವಿಗಿರಬಹುದು, ನಿನ್ನ ಪ್ರೀತಿಯ ನಶೆಗಲ್ಲ. ಪ್ರೀತಿ ಮೂಡಲು ಅದಾವ ಕಾರಣ ಬೇಕಿತ್ತು? ಕಂಗಳೊಂದಿಗೆ ಕಂಗಳು ಮಿಲನವಾದೊಡೆ ಹೃದಯಾಂತರ್ಯದೊಳು ಅವೀರ್ಭವಿಸುವ ಅನೀರ್ವಚನೀಯ ಅದ್ಭುತ ಮಾಧುರ್ಯವೇ ಪ್ರೀತಿ.
ಮೊದಲ ಬಾರಿ ನಿನ್ನ ಮುಂದೆ ನನ್ನ ಪ್ರೀತಿಯನ್ನು ನಿವೇದಿಸುವಾಗ ಒಂಥರಾ ಏನೋ ಹೆದರಿಕೆಯಿತ್ತು ಕಣೆ. ಬಾಲ್ಯದಲ್ಲಿ ಕಾಗದದ ದೋಣಿಯನು ನೀರಿಗೆ ಬಿಟ್ಟಾಗ ಮುಳುಗುವುದೇನೋ ಎಂದು ಭಯದಿಂದ ಕಾಯ್ದು ಕುಳಿತ ಮಗುವಿನ ಮುಗ್ಧತೆಯ ಭಯದಿಂದಲೇ ನಿನ್ನೆದುರಿಗೆ ನಡುಗುತ್ತ ನಿಂತಿದ್ದೆ. ಲೆಕ್ಕವಿಲ್ಲದಷ್ಟು ಬಾರಿ ನನ್ನ ಪ್ರೀತಿಯನ್ನು ಹೇಳಿಕೊಳ್ಳಲು ಧೈರ್ಯ ಸಾಲದೆ ಯುದ್ಧದಲ್ಲಿ ಸೋತ ರಾಜನಂತೆ ಸಪ್ಪೆ ಮೋರೆ ಮಾಡಿಕೊಂಡು ಹಿಂತಿರುಗಿದ್ದಿದೆ. ಈಗಲೂ ನೆನಪಿದೆ…ನೀನು ಅಂದು ಅಚ್ಚ ಬಿಳಿಯ ಬಣ್ಣದ ಚೂಡಿದಾರ ತೊಟ್ಟು ಮುಡಿಗೆ ಮೈಸೂರು ಮಲ್ಲಿಗೆಯಿಟ್ಟಿದ್ದೆ. ಬಿಳಿಯ ಪಾರಿವಾಳದಂತೆ ಬಳಿಗೆ ಬಂದ ನಿನ್ನ ಕಣ್ತುಂಬಿಕೊಳ್ಳುವ ಆತುರದಲ್ಲಿ ಥತ್ತೇರಿಕೆ! ನಾನು ಕೆಂಪಿರುವೆ ಗೂಡಿನ ಮೇಲೆ ನಿಂತಿದ್ದು ನನಗೆ ಗೊತ್ತಾಗಿಯೇ ಇರಲಿಲ್ಲ. ಅವುಗಳಿಂದ ಕಚ್ಚಿಸಿಕೊಂಡು ಕುಣಿದಾಡುವಾಗಲೇ ನೀನು ಹುಣ್ಣಿಮೆಯ ಬೆಳದಿಂಗಳಿನಂತೆ ನಕ್ಕಿದ್ದೆ. ನನಗಷ್ಟೇ ಸಾಕಿತ್ತು..ಇನ್ನು ಜನ್ಮ ಜನ್ಮಾಂತರಕೂ ನಿನ್ನ ನಗುವೊಂದೆ ಸಾಕೆನಗೆ ಬಾಳಲು ಮತ್ತೇನೂ ಬೇಡವೆಂದು ತೀರ್ಮಾನಿಸಿ ಬಿಟ್ಟೆ.
ನಭದೊಳು ನಗುತ ನಿಂತಿಹ ಚಂದ್ರ ತಾರೆಗಳನುದುರಿಸಿ ತರುವೆನೆಂದು ಹೇಳಿ ಭ್ರಮೆಯಲ್ಲಿಡುವ ಸುಳ್ಳು ಪ್ರೇಮಿಯಲ್ಲವೇ ನಾನು. ನೀನಿರುವೆಡೆ ನಿತ್ಯ ತನಿಬೆಳದಿಂಗಳು ಚಿಮ್ಮುತಿರುವಾಗ ಚಂದ್ರಲೋಕದ ಗೊಡವೆ ನಮಗೇತಕೆ? ಹಸು ಕರೆವ ಹಾಲಿಗೂ ನೀರು ಬೆರೆಸಿ ಮೋಸಗೊಳಿಸಬಹುದು. ಆದರೆ ನನ್ನ ಕೆನೆಹಾಲಿನಂತಹ ಪ್ರೀತಿ ಅಪ್ಪಟ ಬಂಗಾರ ಕಣೆ. ನೀನೊಡ್ಡುವ ಪರೀಕ್ಷೆಗಳಿಗೆಲ್ಲಾ ಎದೆಯುಬ್ಬಿಸಿ ನಿಲ್ಲುವೆ…ಪರೀಕ್ಷಿಸಿ ನೋಡು. ಒಂದು ವೇಳೆ ಸೋತರೂ ಅನ್ಯತಾ ಭಾವಿಸಬೇಡ, ನಿನ್ನ ಸೌಂದರ್ಯಪುಷ್ಪದೊಳಗೆ ಬಿದ್ದು ಹೊರಳಾಡುವ ದುಂಬಿಯಂತಾಗಿರುವೆ ನಾನು. ಕಣ್ಣಿಗೆಲ್ಲ ನಿನ್ನಂದವೆಂಬ ಮಕರಂದದ ಮಂಕು ಕವಿದಿದೆ. ನೀ ಹ್ಞೂಂ! ಅಂದರೆ ಸಾಕು ಅದುವೆ ನನ್ನ ಗೆಲುವು.
ಪಾರ್ಕು, ಕ್ಲಬ್ಬು, ಪಬ್ಬು ಎಂದು ಸುತ್ತಾಡಿಸಿ ನನ್ನ ಕೈ ಬಿಡಬೇಡ. ನಾನು ಮೊದಲೇ ಖಾಲಿ ಜೇಬಿನ ಫಕೀರ ಕನಸುಗಳ ಸಾಹುಕಾರ. ಹರಿಯುವ ನದಿಗಳೆರಡಿರಬಹುದು. ಆದರೆ ಸೇರುವ ತೀರವೊಂದೆ ಎಂಬಂತೆ ಒಂದಾಗುವ ಆಲೋಚನೆ ಮಾಡು. ನಿನ್ನದೊಂದು ಒಪ್ಪಿಗೆಯಿಂದಲೆ ಮುಗಿಲ ಉಪ್ಪರಿಗೆಯಲ್ಲಿ ಸಂಜಿಯ ಸೂರ್ಯ ರಂಗೇರಿದಂತೆ ರಂಗಾಗುವುದು ನಮ್ಮ ಬದುಕು. ಅನ್ಯವಿಚಾರ ಮಾಡದೆ ಸಹಚಾರಿಣಿಯಾಗು ಬಾ…ನನ್ನ ಹೃದಯಂಗಳದಲ್ಲಿ ಹಸಿರು ಗಿಣಿಯಂತೆ ಸ್ವಚ್ಛಂದವಾಗಿ ಹಾರಾಡು ಬಾ. ಪ್ರಿಯೆ ನಾನಿನ್ನೂ ಉಸಿರಾಡುತಿರುವೆ ನೀ ಬರುವ ಬೀದಿಯಲ್ಲಿ ಎಂದಿನಂತೆ ನಿನ್ನ ಬರುವನ್ನೇ ದಿಟ್ಟಿಸುತ್ತಾ ನಿಂತು. ಏಕೆ, ನನ್ನುಸಿರ ಘಮಲು ನಿನಗೆ ತಾಕುತಿಲ್ಲವೇನು? ಹಾಗೊಂದು ವೇಳೆ ತಾಕಿದ್ದರೆ ನೀನಿಷ್ಟು ತಡಮಾಡುತ್ತಿರಲಿಲ್ಲ. ಕಾರಣ ನನ್ನುಸಿರಿನೊಳಗೆಯೆ ನಿನ್ನ ಹೆಸರಿನ ಎರಕ ಹೊಯ್ದಿರುವೆ. ಹ್ಞಾಂ! ಬರುವಾಗ ಕಾಲ್ಗಳಲಿ ನಾ ಕೊಟ್ಟ ಕಿರುಗೆಜ್ಜೆಯನು ಧರಿಸಿ ಬಾ…ಅವುಗಳ ಘಲ್ಲೆನ್ನುವ ನಾದದಲಿ ನಮ್ಮ ಸಾಂಗತ್ಯದ ನೂರಾರು ಕಥೆಗಳಿವೆ. ಮರೆತಿದ್ದೆ..ನೀನಂದು ಪಂಚಮಿಗೆ ಊರಿಗೆ ಬಂದಾಗ ನನ್ನ ಮನೆಯಂಗಳದಲ್ಲಿ ಹಚ್ಚಿ ಹೋದ ಗುಲಾಬಿಯ ಪುಟ್ಟ ಕೊರಡು ಚಿಗಿತು ಗಿಡವಾಗಿದೆ. ಮುಳ್ಳಿನ ಜೊತೆಗೆ ಟೊಂಗೆ ಟೊಂಗೆಗೂ ಹೂವರಳಿ ಸುಖಾಸುಮ್ಮನೆ ಅದಾರಿಗೊ ಕಾದು ಕಾದು ಸುಸ್ತಾಗಿ ಮಣ್ಣಾಗುತಿವೆ. ಥೇಟ್ ನನ್ನ ಬಯಕೆಗಳಂತೆಯೆ. ಇನ್ನೆಷ್ಟು ಕಾಯಿಸುವೆ?
ನನ್ನ ಮನೆ ಸಣ್ಣದಾದರೂ ಮನಸ್ಸು ದೊಡ್ಡದು ಎಂದು ಹೇಳಿಕೊಳ್ಳುವ ದಡ್ಡ ನಾನಲ್ಲ. ನಿನಗದು ಈಗಾಗಲೇ ಅರಿವಾಗಿರಲೂಬಹುದು. ನೀನೆಂದು ಬರುವೆ ಎಂದು ಮೊದಲೇ ಹೇಳಿಬಿಡು ಹೊಸಕೋಟಿಯ ಹಳೆ ಚೆಲುವೆ. ತುಸು ಸಿದ್ದತೆ ಮಾಡಿಕೊಳ್ಳುವುದಿದೆ. ಏಕೆಂದರೆ ಮೊದಲೇ ನನ್ನೂರು ಹಳ್ಳಿ. ಆ ಮೇಘರಾಜನಿಗೆ ಕೂಗಿ ಹೇಳಿಬಿಡುವೆ. ನೀ ಬರುವ ದಾರಿಯಲಿ ತುಸು ಹನಿಮುತ್ತುಗಳನುದುರಿಸಿ ಮಡಿ ಮಾಡೆಂದು. ನನಗೆ ನಂಬಿಕೆಯಿದೆ ನಾ ಕರೆದರೆ ಆತ ಬರಲೊಲ್ಲೆ ಎಂದೆನ್ನನು. ಏಕೆಂದರೆ ಆತ ನಿನ್ನಷ್ಟು ಕಿವುಡನಲ್ಲ ಬಿಡು. ತಗ್ಗುದಿಣ್ಣೆಗಳ ರಸ್ತೆಗೆಲ್ಲಾ ಜಾಜಿ ಮಲ್ಲಿಗೆ, ಕನಕಾಂಬರವ ತುಂಬಿ ಸಮ ಮಾಡಿ ಸುಮಂಗಲೆಯರಿಂದ ರಂಗವಲ್ಲಿ ಹಾಕಿಸುವೆ. ಇಂದ್ರನ ಐರಾವತ ನನ್ನಲ್ಲಿ ಇಲ್ಲದಿದ್ದರೂ ನಮ್ಮಪ್ಪನ ಜೋಡೆತ್ತುಗಳಿವೆ. ಕೊಂಬು ಕಹಳೆಯ ಕಟ್ಟಿ ಎತ್ತಿನ ಬಂಡಿಯನು ಮುತ್ತುಗಳಿಂದ ಶೃಂಗರಿಸಿ ತರುವೆ. ಅದರಲ್ಲಿಯೇ ನಡೆದು ಬಿಡಲಿ ನಮ್ಮಿಬ್ಬರ ಒಲವಿನ ಮೆರವಣಿಗೆ. ನೆನಪಿರಲಿ…ನನ್ನ ನಿನ್ನ ಮದುವೆಯ ನಂತರ, ಉಳುವಿ ಜಾತ್ರಿಗೂ ಇದೇ ಬಂಡಿ ಪ್ರಯಾಣ. ಇತ್ತೀಚಿಗೆ ನಮ್ಮಮ್ಮನ ನೆದರೂ ಕೂಡ ಕೊಂಚ ಮಂಕಾಗಿದೆ. ತಾನು ಸಾಯುವುದರೊಳಗೆ ಸೊಸೆಮುದ್ದುನ ಕಣ್ತುಂಬ ಕಾಣುವ ಆಸೆ ಅವಳದು. ಅವಳಿಗೊಂದು ಚಾಲೀಸು ಕೊಡಿಸುವೆ…ಮಸುಕು ಮಸುಕಲ್ಲಿಯೂ ಚುಕ್ಕಿ ಹಂಗ ನೀನವಳ ಕಣ್ಣು ಕುಕ್ಕುವೆ ಎಂಬುವುದರಲ್ಲಿ ಎರಡು ಮಾತಿಲ್ಲ ಬಿಡು…ನೀನಷ್ಟು ರೂಪಸಿ. ನಾನೇ ಕಾಗೆ ಕಪ್ಪು. ಹಾಗಂತ ನನಗೇನೂ ಹೆಣ್ಣು ಕೊಡದವರಿಲ್ಲವೆಂದುಕೊಳ್ಳಬೇಡ. ಮೀಸೆಯಲಿ ಒಂದೆರಡು ನೆರೆಗೂದಲೊಡೆದಿವೆ ಅಷ್ಟೇ..ತುಸು ಡೈ ಬಳಿದರೆ ಮತ್ತೆ ಮನ್ಮಥನೇ..
ಹಚ್ಚ ಹಸಿರಿನ ನಮ್ಮ ಹೊಲದೊಳಗ ಬೆವರ ಸುರಿಸಿ ದುಡಿದು, ಹಸಿವಾದಾಗ ಬೇವಿನ ಮರದಡಿಯ ತಂಪಿನಲಿ ಕುಳಿತು, ಬಿಳಿಜೋಳದ ಕಡಕ್ ರೊಟ್ಟಿ ಮ್ಯಾಲ, ಒಂದಿಷ್ಟು ಪುಂಡಿಪಲ್ಲೆ ಶೆಂಗಾದೆಣ್ಣಿ ಕೆಂಪಗಾರ ಸೇರಿಸಿ ಉಂಡು, ಒಂದ ತಂಬಿಗೆ ತಣ್ಣನೆಯ ಮಜ್ಜಿಗೆ ಗಟಗಟ ಕುಡಿದು ಹಂಗ ಮುಗಿಲಿನತ್ತ ಚಿತ್ತ ಹರಿಸಿ ಮಲಗಿಕೊಂಡರ, ಬೆಳ್ಳನ ಮೋಡದಾಗ ಈಗಲೂ ಚೆಲುವೆ ನಿನ್ನ ಮುದ್ದಾದ ಮಾರಿ ಸ್ಪಷ್ಟವಾಗಿ ಕಾಣಿಸುತ್ತೆ. ನಿನಗೊಂದು ವಿನಂತಿ, ನಾ ಬರೆದ ಪ್ರೇಮದೋಲೆಗಳನ್ನು ಯಾವುದೋ ಕೋಪದಿಂದ ಒಲೆಯ ಬಾಯಿಗಿಡಬೇಡ..ನನ್ನ ಹೃದಯ ಬೆಂದು ಹೋದಿತು. `ನಾ ಹೆಚ್ಚೋ? ಏನ ನಿಮ್ಮವ್ವ ಹೆಚ್ಚೋ?’ ಎಂದು ಎಂದೂ ನನ್ನ ಪ್ರಶ್ನಿಸಬೇಡ, ನಾನು ನಮ್ಮವ್ವನ ಮಗ…ಹಂಗ ಅಮ್ಮಾವ್ರ ಗಂಡ ಆಗೋಕು ಸೈ. ಚಾಡಿ ಮಾತು ಕೇಳಿ ಪ್ರೀತಿ ಮುರಿಯಬೇಡ. ಒಡೆದು ಹೋದ ಗಾಜಿನ ಬಳೆ ಮತ್ತ ಕೂಡಾಕ ಸಾಧ್ಯವೇನು? ಚಾಡಿ ಮಾತಿಗೆ ಚಾವಡಿನ ಹಾಳ ಆಯ್ತು ಅಂತಾರ. ಹಂತಾದ್ರಾಗ ನಮ್ಮ ಮನಸ್ಸುಗಳು ಯಾವ ಲೆಕ್ಕ? ಮನಸ್ಸು ಒಡೆದು ಹೋಗುವ ಮುನ್ನವೇ ಒಲವಿನ ಒಸಗೆಯ ಬೆಸುಗೆ ಬಲಗೊಳಿಸೋಣ. ಈ ಪ್ರೇಮದೋಲೆ ಬರೆಯಬಾರದೆಂದುಕೊಂಡಿದ್ದೆ…ಆದರೆ ಹೆತ್ತ ತಾಯಿ ಕೂಡ, ತನ್ನ ಕೂಸಿಗೆ ಅತ್ತಾಗಲೇ ಹಾಲೂಡಿಸೋದು. ಹಂಗಾಗಿ ನನ್ನ ಮನಸ್ಸಿನ ತುಮುಲಗಳನ್ನು ತೆರೆದಿಟ್ಟಿರುವೆ. ಇನ್ನಾದರೂ ಮುನಿಸು ಬಿಟ್ಟು ಫಕೀರನ ಸಾಹುಕಾರ್ತಿಯಾಗು ಬಾ. ಆಯ್ ಲವ್ ಯೂ ಚೋಟು.