ಹೆಸರು ಹೇಡಿ ಎಂದು ಬರೆದು ಬಿಡಿ (ಗಜಲ್ ಹಿಂದಿನ ಕಥನ): ಅಶ್ಫಾಕ್ ಪೀರಜಾದೆ.

ಮೊದಲು ನನ್ನ ರಚನೆಯ ಗಜಲ್ ಒಮ್ಮೆ ಓದಿ ಬಿಡಿ. ನಂತರ ನಾನು ಈ ಗಜಲ್ ಹುಟ್ಟಿನ ಹಿಂದಿನ ಕಥನವನ್ನು ವಿವರಿಸುವೆ.

ಗಜಲ್;

ನಗುನಗುತ್ತಲೇ ಉರುಳಿಗೆ ಕೊರಳ ನೀಡಿದೆವು ನಾವು/
ನಗುನಗುತ್ತಲೇ ಮಣ್ಣಲ್ಲಿ ಮಣ್ಣಾಗಿ ಬೆರತೆವು ನಾವು//

ದುರಂತ ಪ್ಯಾರ ಕಹಾನಿಗಳಿಗೆ ಆಸ್ತಿ ಅಂತಸ್ತಗಳೇ ಕಾರಣ/
ನಸುನಗುತ್ತಲೇ ನಮ್ಮ ಪ್ರೇಮ ತ್ಯಾಗ ಮಾಡಿದೆವು ನಾವು//

ಪ್ರೀತಿಗೆ ಗೋಡೆ ಬೇರೆಯಾಗಿದ್ದರೆ ಒದ್ದು ಕೆಡವ ಬಹುದಿತ್ತು/
ಹಾಲೇ ಹಾಲಾಹಲವಾದಾಗ ಅಸಹಾಯಕರಾದೆವು ನಾವು//

ಅವರು ಕೊಟ್ಟ ಹೂಗುಚ್ಚಕ್ಕೆ ಅದೆಂಥ ಮೊನಚಿತ್ತೋ ಕಾಣೆ/
ಮುಳ್ಳಾಗಿ ನೆಟ್ಟಿದ್ದರೂ ಪ್ರೀತಿಯಿಂದ ಸ್ವೀಕರಿಸಿದೆವು ನಾವು//

ಹೃದಯಕ್ಕಾದ ಗಾಯ ಜಗದ ಕಣ್ಣಿಗೆ ಕೊನೆಗೂ ಕಾಣಲಿಲ್ಲ/
ಮಕ್ಕಳ ಆಟವೆಂದರೂ ಅವರು ಗಂಭೀರವಾದೆವು ನಾವು//

ನನ್ನ ಯಾತನೆಯ ಅಂದಾಜು ಹೆತ್ತವರಿಗೂ ಸಿಗಲೇ ಇಲ್ಲ /
ಮನಸ್ಸು ನೋಯಿಸದಿರಲು ಖುಷಿಯ ಆಟ ಆಡಿದೆವು ನಾವು//

ನಿರ್ಗಮನಕೆ ಸಮಾಜ ಅಂತೆ ಕಂತೆಗಳ ಕತೆ ಕಟ್ಟುತಿರಲಿ/
ಅಪವಾದ ಕಳಂಕ ಅವರಿಗೆ ಬಾರದಿರಲಿ ಬಯಸಿದೆವು ನಾವು//

ಗೋರಿಯ ಮೇಲೆ ಹೆಸರು ಹೇಡಿಯೆಂದು ಬರೆದು ಬಿಡಿ/
ನಮ್ಮ ನಂತರ ಯಾರೂ ಹೆದರಿ ಸಾಯದಿರಲಿ ಬೇಡಿದೆವು ನಾವು//


‘ಆಕಾಶ’ ದೀಪವೂ ನೀನು
ಈ ಜೀವ ಸೋಲುತಿದೆ ..

ಕಳೆದ ಜುಲೈ 13 ಕ್ಕೆ‌
ಭರ್ತಿ‌ ಒಂದು ವರ್ಷ..‌
ಅವನನ್ನು ಕಳೆದುಕೊಂಡು.
ಅವನು ಎಂದರೆ ಮಗ, ಸಹೋದರ, ಸ್ನೇಹಿತ ಎಲ್ಲ…
..
..
..
ಸಮಯ ಸುಮಾರು ಹತ್ತು ಗಂಟೆ..!
ಅಂದು ಕರ್ತವ್ಯದಲ್ಲಿದ್ದು ದೈನಂದಿನ ಕಾರ್ಯವನ್ನು ನಿರ್ವಹಿಸುತ್ತಿದ್ದೆ.

ಒಂದೇ ಸವನೆ ಮೊಬೈಲಿನ ವೈಬ್ರೇಟ್ ಮೂಡ್ ನೊಂದಿಗೆ ರಿಂಗಣ ಸದ್ದು.

ತೆಗೆದು ನೋಡಿದರೆ ನನ್ನೂರಿನ ನನ್ನ ಎಲ್ಲ ಸಂಬಂಧಿಕದೇ ಫೋನ್ ಕರೆಗಳು. ಇಷ್ಟೊಂದು ಕರೆಗಳು ಯಾಕೆ ಬರ್ತಾಯಿವೆ ಎಂದು ಅನುಮಾನಗೊಂಡು ಕೆಲಸಕ್ಕೆ ಸ್ವಲ್ಪ ವಿರಾಮ ಕೊಟ್ಟು.. ಒಂದು ಕಾಲ್ ರಿಸಿವ್ ಮಾಡಿದರೆ, ಅತ್ತಲಿಂದ ಬಂದ ಧ್ವನಿ..

” ನಿನ್ನ ಸ್ನೇಹಿತನ ಮಗ ಆಕಾಶ್.. ಜಗಳಾ ಮಾಡಿದ್ದಾನಂತೆ” ಎಂದು ಹೇಳಿತು.

ಆಕಾಶ ನನ್ನ ಸ್ನೇಹಿತನ ಮಗನಾದರೂ ನನಗೆ ನನ್ನ ಸ್ವಂತ ಮಗನಕಿಂತ ಹೆಚ್ಚಾಗಿದ್ದ ಎಂದರೆ ಅತಿಶಯೋಕ್ತಿಯಲ್ಲ. ಕಾರಣ, ನಾನು ನನ್ನ ಗೆಳೆಯ ಬಾಲ್ಯ ಸ್ನೇಹಿತರು ಜೀವದ ಗೆಳೆಯರು. ನಮ್ಮ ನಡುವೆ ಯಾವುದೇ ಭೇದಭಾವ ಇರಲಿಲ್ಲ. ಬಾಲ್ಯದಿಂದ ಹಿಡಿದು ಇಲ್ಲಿಯವರೆಗೂ ಅಂದರೆ , ನಾನು ವರ್ಗಾವಣೆಗೊಂಡು ಧಾರವಾಡಕ್ಕೆ ಬರುವವರೆಗೂ ನಾವು ಒಂದೇ ಕುಟುಂಬದ ಸದಸ್ಯರಂತಿದ್ದು ಒಂದೇ ತಟ್ಟೆಯಲ್ಲಿ ಊಟಮಾಡಿ ಬೆಳೆದವರು.
ನಾವು ಸ್ವಂತ ಸಹೋದರರಕ್ಕಿಂತ ಹೆಚ್ಚು ಇದ್ದವರು. ನಮ್ಮ ಮಕ್ಕಳು ಕೂಡ ಅಷ್ಟೇ. ಅವನಿಗೆ ಒಬ್ಬನೇ ಮಗ, ನನಗೆ ಒಬ್ಬಳೇ ಮಗಳು. ಅವರು ಕೂಡ ಅಣ್ಣ ತಂಗಿಕ್ಕಿಂತ ಹೆಚ್ಚಾಗಿ ನಡೆದುಕೊಳ್ಳುತ್ತಿದ್ದು ನಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದರು.
ನಮಗೆ ಗಂಡು ಮಕ್ಕಳಿಲ್ಲ ಅನ್ನೋ ಕಾರಣಕ್ಕೆ ನಾವು ಆಕಾಶನ ಮೇಲೆ ಇನ್ನಷ್ಟು ಹೆಚ್ಚು ಅಂದರೆ ಬಹುಶಃ ಅವರ ತಂದೆತಾಯಿಕ್ಕಿಂತ ಹೆಚ್ಚಾಗಿ ನಾವು ಅವನನ್ನ ಪ್ರೀತಿಸುತ್ತಿದ್ದೇವು.

ಎಂ ಬಿ ಬಿ ಎಸ್ , ಎಂ.ಡಿ ಮುಗಿಸಿ ಆಗತಾನೇ ಪ್ರ್ಯಾಕ್ಟಿಸ್ ಆರಂಭಿಸಿದ್ದ. ಮನೆಗೆ ಒಬ್ಬನೆ ಮಗನಾಗಿದ್ದರಿಂದ ಮನೆಯ ಜವಾಬ್ದಾರಿ ಎಲ್ಲ ಅವನೇ ನೋಡಕೋತಿದ್ದ, ತಂದೆ ತಾಯಿ ಇಬ್ಬರೂ ಸರ್ಕಾರಿ ಅಧಿಕಾರಿಗಳಾಗಿ ಉನ್ನತ ಹುದ್ದೆಯಲ್ಲಿದ್ದು ಆತನಿಗೆ ಯಾವುದೇ ಕೊರತೆ ಇರಲಿಲ್ಲ. ಅವನು ಕೂಡ ಅಷ್ಟೇ ಜವಾಬ್ದಾರಿಯಿಂದ ತನ್ನ ವೃತ್ತಿಯೊಂದಿಗೆ ನಾಲ್ಕು ಜನರಿಗೆ ಹಚ್ಚಿಕೊಂಡು ಎಲ್ಲರೊಂದಿಗೆ ಅನ್ಯೋನ್ಯತೆಯಿಂದ ಬೆರೆತು ತನ್ನ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೊರಟ್ಟಿದ್ದ. ಏನೇ ಕೆಲಸ ಮಾಡುವದಿದ್ದರೂ ನನ್ನ ಸಲಹೆ ಇಲ್ಲದೆ ಮಾಡುತ್ತಿರಲಿಲ್ಲ.

ಎಲ್ಲದಕ್ಕೂ ನನಗೆ ಚಾಚಾ.. ಚಾಚಾ ಅಂತ ಪ್ರತಿಯೊಂದನ್ನು ಕೇಳುತ್ತಿದ್ದ.

ಬಹುಶಃ ಅವನೇ ನಮಗೂ ಮುಪ್ಪಿನಲ್ಲಿ ಆಸರೆ ಎಂದುಕೊಂಡಿದ್ದೆವು.

ಹಾಂ.. ಅತ್ತಲಿಂದ ಫೋನ ಮಾಡಿದ್ದ ನನ್ನ ಸಂಬಂಧಿಕರಿಗೆ ನಾನು ” ಯಾರೊಂದಿಗೆ ಜಗಳಾ ಮಾಡಿದ್ದಾನಂತೆ” ಎಂದು ಮರುಪ್ರಶ್ನಿಸಿದ್ದೆ. ಅವರು ಹೇಳಿದರು ” ಅವನ ತಂದೆ ತಾಯಿಯೊಂದಿಗೆ”
” ಜಗಳಾಡಲಿ ಬಿಡಿ. ನಿವ್ಯಾಕೆ ತೆಲೆ ಕೊಂಡಿದೀರಿ ಮಕ್ಕಳು ಹೆತ್ತವರೊಂದಿಗೆ.. ಜಗಳಾಡುವುದು ಸಹಜ.. ಅದರಲ್ಲಿ ಏನೂ ವಿಶೇಷ? ಇದನ್ನು ಹೇಳುವುದಕ್ಕೆ ಫೋನ್ ಮಾಡುವುದೇ.. ನಿಮಗೆ ಬೇರೆ ಕೆಲ್ಸಾ ಇಲ್ವಾ..” ಅಂತಾ ದಬಾಯಿಸಿದ್ದೆ.

“ಹಾಗಲ್ಲ.. ಜಗಳಾಡಿ.. “
ಅವರು ಮುಂದೆ ಹೇಳು ಧೈರ್ಯ ತೋರಲಿಲ್ಲ. ಆಗ ನನ್ನ ಮನಸ್ಸಿನಲ್ಲಿ ಆತಂಕ ಶುರುವಾಗಿತ್ತು .

” ಜಗಳಾಡಿ…!!??”
ನಾನು ತಕ್ಷಣದ ಉತ್ತರ ಕೇಳಿದೆ ಆದರೆ ಅವರೂ ಕೊನೆಗೂ ಉತ್ತರಿಸುವ ಧೈರ್ಯ ಮಾಡಲಿಲ್ಲ. ಬಹುಶಃ ಸತ್ಯ ಗೊತ್ತಾದರೆ ನನಗೆ ತಡೆದುಕೊಳ್ಳಲು ಆಗುವದಿಲ್ಲ ಅಂತಾ ಅವರಿಗೂ ಗೊತ್ತಿತ್ತು. ಹಾಗಾಗಿ ವಿವರವಾಗಿ ಹೇಳಲಿಲ್ಲ.

“ನನಗೂ ಗೊತ್ತಿರುವುದಿಷ್ಟೆ.. ಅದೇನೋ.. ಜಗಳವಂತೆ, ನೀವೇ ನಿಮ್ಮ ಸ್ನೇಹಿತರಿಗೆ ಫೋನ್ ಮಾಡಿ ಕೇಳಿಕೊಂಡರೆ ಒಳ್ಳೆಯದು” ಎಂದಾಗ ಅನುಮಾನ ಇನ್ನಷ್ಟು ಹೆಚ್ಚಾಗಿತ್ತು.
ಒಂದು ವಾರದ ಹಿಂದೆಯಷ್ಟೆ ನಾವುಗಳು ಎಲ್ಲರೂ ಸಂತೋಷದಿಂದ ಸ್ವತಃ ಓಡಾಡಿ ಅದ್ದೂರಿಯಾಗಿ ಅವನ ಮದುವೆ‌ ಮಾಡಿ ಬಂದಿದ್ದೆವು.

ಬಹಳ ದಿನಗಳಿಂದ ಅವನಿಗೆ ಹುಡುಗಿ ಹುಡುಕುತ್ತಿದ್ದೆವು. ನೂರಾ ಹುಡುಗಿಯರನ್ನು ನೋಡಿ ಬಂದಿದ್ದೆವು. ತುಂಬಾ ಸುಂದರ‌ ರಾಜಕುಮಾರನಂತಿದ್ದ ಆಕಾಶನಗಿ‌ ಅನುರೂಪದ ಹೆಣ್ಣು ಹುಡುಕುವುದು ಸವಾಲಿನ ಕೆಲಸೇ‌ ಕೆಲಸವಾಗಿತ್ತು. ತಾವು ಹಿರಿಯರು ತಾವು ಹೇಳಿದ ಹುಡುಗಿಗೆ ತಾಳಿ ಕೊಟ್ಟಲು ರೆಡಿ ಎನ್ನುತ್ತಿದ್ದ. ಹಾಗಂತ ವರದಕ್ಷಿಣೆ ಆಸೆಗೆ ಎಂಥದ್ದೋ ಹುಡುಗಿಗೆ ತಾಳಿ ಕಟ್ಟು ಎಂದು ಹೇಳುವುದು ಸಾಧ್ಯವಿರಲಿಲ್ಲ. ನನ್ನ ಸ್ನೇಹಿತನಿಗೆ ಏಕೈಕ ಪುತ್ರ ಸಾಕಷ್ಟು ಆಸ್ತಿ ಪಾಸ್ತಿ ಇರುವುದರಿಂದ ವರದಕ್ಷಣೆಗೆ ಆಸೆ ಪಡುವ ಕಾರಣವಿರಲಿಲ್ಲ. ಇಡೀ ಸಾಮ್ರಾಜ್ಯಕ್ಕೆ ಅವನೇ ರಾಜಕುಮಾರ.. ಎಲ್ಲವೂ ಅವನದೇ ಆಗಿತ್ತು.
ಹಾಗಂತ ಅವನೆಂದೂ ತಂದೆತಾಯಿಗಳ ಎದುರು ಉಸಿರು ಎತ್ತಿದವನಲ್ಲ. ತುಂಬಾ ವಿನಯದಿಂದ ವಿಧೇಯತೆಯಿಂದ ನಡೆದುಕೊಳ್ಳವನು. ನನ್ನ ಜೊತೆ ಸ್ವಲ್ಪ ಸಲುಗೆ ಜಾಸ್ತಿ ಅವನಿಗೆ ಏನೇ ಬೇಕಾದರೂ, ಎನೇ ಮಾಡಬೇಕಾದರೂ ನನ್ನೊಂದಿಗೆ ಮಾತಾಡಿ ಚರ್ಚಿಸಿ ಮಾಡುತ್ತಿದ್ದ. ಹಾಗಾಗಿ ನಾವು ಅವನಿಗೆ ತಕ್ಕ ಹುಡುಗಿ ಜೊತೆಗೆ ಮನೆಯ ಬೆಳಗಬೇಕಾದ ಸೊಸೆಯನ್ನು ಹುಡುಕಬೇಕಾಗಿದ್ದರಿಂದ ಸಾಕಷ್ಟು ಹೆಣ್ಣುಗಳು ‌ನೋಡಿ ಕೊನೆಗೆ ನಮಗೆಲ್ಲ ಬೇಕಾದಂಥ ಹೆಣ್ಣು ಸಿಕ್ಕಾಗ ಅವನಿಗೂ ತೋರಿಸಿ ಮದುವೆ ಮಾಡಿದ್ದೆವು.

ಆತ ನಗುನಗುತ್ತ ಒಪ್ಪಿ ಮದುವೆಯಲ್ಲಿ ತುಂಬಾ ಸಂತೋಷದಿಂದಲೇ ಇದ್ದ.

ಹುಡುಗಿ ಕೂಡ ಅಷ್ಟೇ ಒಳ್ಳೆಯವಳು. ಇಬ್ಬರಿಗೂ ಹೇಳಿ ಮಾಡಿಸಿದ ಜೋಡಿ ಎನ್ನುವಂತೆ ಇದ್ದರು. ಮದುವೆ ರಿಷಿಪ್ಷೇನ್ ಎಲ್ಲ ಮುಗಿದು “ನಾಳೆ ನನಗೆ ಡ್ಯೂಟಿ ಇದೆ ಹೊರಡಬೇಕು” ಎಂದು ನಾವೆಲ್ಲ ಕಾರು ಹತ್ತಿ ಕುಳಿತಾಗ..
“ಏನು ಹೀಗೆ ಹೊರಟು ಬಿಡೋದಾ ಇಳಿಯರಿ ಕೆಳಗೆ” ಎಂದು ಕಾರಿನಿಂದ ನಮ್ಮನ್ನು ಕೆಳಗಿಳಿಸಿ ಮತ್ತೊಮ್ಮೆ ತನ್ನ ಜೀವನ ಸಂಗಾತಿಯೊಂದಿಗೆ ನಮ್ಮ ಆಶೀರ್ವಾದ ಪಡೆದು.. “ಕೊನೆ ಚಿತ್ರ.. ಬನ್ನಿ ಎಲ್ಲರೂ ನಾವೆಲ್ಲ ಸೇರಿ ತಕ್ಕೋಳೋಣ” ಎಂದು ಹೇಳಿ ತಂದೆ ತಾಯಿ ನಾನು ನನ್ನ ಹೆಂಡತಿ ನನ್ನ ಮಗಳು ಎಲ್ಲರನ್ನು ನಿಲ್ಲಿಸಿಕೊಂಡು ಫೋಟೋ ತೆಗೆಸಿಕೊಂಡಿದ್ದ.

ಆದರೆ ಇಂಥ ಮೃದು ಸ್ವಭಾವದ ಹುಡುಗ ಈಗ ತಂದೆ- ತಾಯಿಯೊಂದಿಗೆ ಜಗಳ ಮಾಡಿದ್ದಾನೆ ಎಂದರೆ ನಂಬಲಾಗಲಿಲ್ಲ . ಆದರೂ ಏನೋ ಹೆತ್ತವರ ಮತ್ತು ಮಕ್ಕಳ ನಡುವೆ ಏನಾದರೂ ಸಣ್ಣಪುಟ್ಡ ಮನಸ್ತಾಪ ಇರಬಹುದು ಎಂದು ಮನಸ್ಸಿಗೆ ಸಮಾಧಾನ ಹೇಳಿಕೊಳ್ಳುವಷ್ಟರಲ್ಲಿ..

ಇನ್ನೊಂದು ಕರೆ !

ಕರೆ ಸ್ವೀಕರಿಸುವಷ್ಟರಲ್ಲಿ ಇನ್ನೊಬ್ಬ ಆತ್ಮೀಯರ ಧ್ವನಿ –
” ಆದಷ್ಟು ಬೇಗ ಬಂದು ಬಿಡಿ; ಆಸ್ಪತ್ರೆಯಲ್ಲಿ ಆಕಾಶ್ ತುಂಬಾ ಸಿರಿಯಸ್, ಬಹಳ ಸಮಯವಿಲ್ಲ ಈಗಲೇ ಹೊರಟು ಬನ್ನಿ…” ಎಂದು ಹೇಳಿ ಕಾಲ್ ಕಟ್ ಆದಾಗ ಸಿಡಿಲೇ ಅಪ್ಪಳಿಸಿದ ಅನುಭವ. ಅಲ್ಲೇ‌ ಕುಸಿದು ಕುಳಿತ್ತಿದ್ದೆ.

ನನ್ನೊಂದಿಗೆ ಕೆಲಸ ನಿರ್ವಹಿಸುತ್ತಿದ್ದ ಸಹೋದ್ಯೋಗಿಗಳಿಗೆ ನನ್ನ ಸಂಭಾಷಣೆಯಲ್ಲಿ ಗೊತ್ತಾಗಿ ಹೇಗೋ ಮಾಡಿ ನನ್ನನ್ನು ಸುಧಾರಿಸಿ ಎಚ್ಚರಿಸಿ ನನಗೆ ನನ್ನ ಕುಟುಂಬ ಸಹಿತ ಊರಿಗೆ ಕಳಿಸುವ ಏರ್ಪಾಡು ಮಾಡಿದರು.
ಮೂರು ಗಂಟೆಯ ದಾರಿ, ದಾರಿಯುದ್ದಕ್ಕೂ ನಾವು ಎಚ್ಚರ ತಪ್ಪುತ್ತ .. ಕಣ್ಣೀರಾಗುತ್ತ ಮನೆಗೆ ತಲುಪಿದಾಗ ಎಲ್ಲ ಮುಗಿದು ಹೋಗಿತ್ತು. ಆಕಾಶ್ ಆಗಸದತ್ತ ಮುಖ ಮಾಡಿ ಚಿರನಿದ್ರೆಗೆ ಜಾರಿದ್ದ. ಇನ್ನೂ ಕೈಮೇಲಿನ ಮೇಹಂದಿ ಆರದ ನವ ವಧು ಕೈಬಳೆ ಒಡೆದುಕೊಂಡು ಆಕ್ರಂದಿಸುತ್ತಿದ್ದರೆ..
ಇದ್ದ ಒಬ್ಬ ಮಗನನ್ನು ಕಳೆದುಕೊಂಡು ತಂದೆ ತಾಯಿಗಳು ರೋಧಿಸುತ್ತಿದ್ದರು.

ಸ್ನೇಹಿತರು, ಅವನ ಬಂಧು ಬಳಗ, ಅವನ ರೋಗಿಗಳು ಅಭಿಮಾನಿಗಳು ಎಲ್ಲ ಆಸರೆ ಕಳೆದುಕೊಂಡವರಂತೆ ದಿಕ್ಕೆಟ್ಟು ನಿಂತಿದ್ದರೂ. ವಿಷಾದ ಅಲ್ಲಿ ಮಡುಗಟ್ಟಿತ್ತು. ಸ್ವಂತ ಮಗನನ್ನೆ ಕಳೆದುಕೊಂಡ ವೇದನೆ ನಾವು ಅನುಭವಿಸುತ್ತಿರಬೇಕಾದರೆ ಇನ್ನೂ ಸ್ವಂತ ತಂದೆತಾಯಿಗಳ ಪಾಡೇನು?”.. ನಾನು ಹೇಗೋ ಸುಧಾರಿಸಿಕೊಂಡು ನನ್ನ ಸ್ನೇಹಿತನಿಗೆ ಅಪ್ಪಿಕೊಂಡು ಸಮಾಧಾನಿಸುವ ನೆಪದಲ್ಲಿ ಬೆನ್ನು ನೇವರಿಸುತ್ತ ಕೇಳಿದೆ-

” ಇದೆಲ್ಲ ಹೇಗಾಯ್ತು ಎನ್ ನಡಿಯಿತು” ಎಂದು ಪ್ರಶ್ನಿಸಿದಾಗ ” ಏನಿಲ್ಲ ಬೆಳಗಾವಿಗೆ ಸ್ನೇಹಿತರಿಗೆಲ್ಲ ಭೇಟಿಯಾಗಿ ಅವರಿಗೊಂದು ಪಾರ್ಟಿ ಕೊಟ್ಟು ಬರಬೇಕೆಂದು ಹೊರಟ್ಟಿದ್ದ. ಅವನ ತಾಯಿ ಇನ್ನು ಹಸಿ ಮೈ.. ಜೊತೆಗೆ ಕರೋನಾ ಬೇರೆ ಇದೆ.. ಎಲ್ಲೂ‌ ಹೋಗಬೇಡ ಅಂತಾ ತಡೆದಳು.. ಅಷ್ಟಕ್ಕೆ ಸಿಟ್ಟು ಮಾಡಿಕೊಂಡು.. ಬೆಡ್ ರೂಮಿಗೆ ಹೋಗಿ….” ಮುಂದೆ ಅವನಿಗೆ ಮಾತು ಬರಲಿಲ್ಲ.. ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದ…

ಮುಂದೆ ಹಲವರು ಹಲವು ತರಹ ಮಾತಾಡುತ್ತಿದ್ದರು..

ಅವನ ಸಾವಿನ ಸುತ್ತ ಹಲವು ಊಹಾಪೋಹಗಳು ಅಂತೆ ಕಂತೆಗಳು ಕತೆಗಳು ಹುಟ್ಟಿಕೊಂಡವು.

ಅದರಲ್ಲಿ ಆತ ತನ್ನ ಸಹಪಾಠಿಯೊಬ್ಬಳನ್ನು ಪ್ರೀತಿಸುತ್ತಿದ್ದ ಅನ್ನುವ ಕಥೆ ಕೂಡ ಇತ್ತು. ಆದರೆ ಯಾವುದಕ್ಕೂ ಸಾಕ್ಷ್ಯಾಧಾರಗಳು ಇರಲಿಲ್ಲ.

ಒಟ್ಟಿನಲ್ಲಿ ಅದೊಂದು ನಿಗೂಢ ಸಾವಾಗಿತ್ತು.

ಆದರೆ ಆತ ಸಾವಿಗೆ ಶರಣಾಗುವಂಥ ಯಾವುದೇ ಪ್ರಬಲವಾದ ಕಾರಣಗಳು ಅಲ್ಲಿ ನನಗೆ ಕಾಣಲಿಲ್ಲ. ಅವನಿಗೆ ಮದುವೆ ಬೇಡವಾಗಿದ್ದರೆ ಅಷ್ಟೊಂದು ಸಂತೋಷದಿಂದ ಒಪ್ಪಿಕೊಳ್ಳುತ್ತಿರಲಿಲ್ಲ. ಹಾಗೇನಾದರೂ ತನಗೆ ಇಷ್ಟ ಇರಲಿಲ್ಲವೆಂದರೆ ನನ್ನ ಮುಂದೆ ಖಂಡಿತವಾಗಿ ಹೇಳುತ್ತಿದ್ದ.

ಅದೊಂದು ದುರ್ಬಲ ಕ್ಷಣ!

ಸಿಟ್ಟಿನ ಕೈಗೆ ಬುದ್ದಿ ಕೊಟ್ಟನೋ ಹೇಗೇ?. ಅಂತಹ ಸಮಸ್ಯೆಗಳು ಏನಿದ್ದರೂ ನನ್ನ ಮುಂದೆ ನಿರ್ಭಯವಾಗಿ ಹೇಳ ಬಹುದಿತ್ತು. ಏಕೆಂದರೆ ನನಗೇ ಆತ ಒಬ್ಬ ಸ್ನೇಹಿತನೇ ಆಗಿದ್ದ. ನನ್ನ ಎಷ್ಟೋ ಸಮಸ್ಯೆಗಳಿಗೆ ಅವನು ಪರಿಹಾರ ಸೂಚಿಸಿದವನಾಗಿದ್ದ. ನನ್ನ ನೋವುಗಳಲ್ಲಿ ಭಾಗಿ ಧೈರ್ಯ ತುಂಬಿದವನಾಗಿದ್ದ. ಅವನು ನನಗೆ ತಂದೆ ತಾಯಿ ಬಂಧು ಬಳಗ ಆತ್ಮೀಯ ಸ್ನೇಹಿತ ಸರ್ವಸ್ವವೇ ಆಗಿದ್ದ. ನಾನು ಆ ಸಾವಿಗೆ ಕಾರಣ ಹುಡುಕುವ ಪ್ರಯತ್ನ ಮಾಡಲು ಹೋಗಲಿಲ್ಲ. ಆದರೆ ಅವನ ಸಾವಿನ ಬಗ್ಗೆ ಯೋಚಿಸುತ್ತಿರಬೇಕಾದರೆ, ಅವನೇ ನಾನಾಗಿ ಆಲೋಚಿಸುತ್ತಿರಬೇಕಾದರೆ.. ಅಂತೆ ಕಂತೆಗಳ ಕಾರಣ ಈ ಗಜಲ್ ನನ್ನ ಹೃದಯದಲ್ಲಿ ರೂಪ ತಾಳಿತು, ಹುಟ್ಟಿಕೊಂಡಿತು. ಬರುವ ಇದೇ ಜುಲೈ ೧೩ಕ್ಕೆ ಅವನನ್ನು ಕಳೆದುಕೊಂಡು ಒಂದು ವರ್ಷವಾಯ್ತು. ಅವನನ್ನು ಮರೆಯಲು ಆಗದೆ ನಾವು ನಿತ್ಯ ಕಣ್ಣೀರಲ್ಲಿ ಕೈತೊಳೆಯುತ್ತಿದೇವೆ. ಅವನ ಅಗಲಿಕೆ ನಮ್ಮಿಂದ ಭರಿಸಿಕೊಳ್ಳಲು ಆಗುತ್ತಿಲ್ಲ. ಅವನ ವ್ಯಕ್ತಿತ್ವವೇ ಅಂಥದ್ದು. ಕಾಲ ಎಲ್ಲವನ್ನು ಮರೆಸುತ್ತದೆ.. ಮುಂದೆ ಚಲಿಸುತ್ತದೆ ಎಂದು ಹೇಳುತ್ತಾರೆ.

ಆದರೆ ಕಾಲ ಅನ್ನುವುದು ನಮ್ಮ ಪಾಲಿಗೆ ಚಲಿಸದೆ ನಿಂತ ಗಡಿಯಾರ ಆಗಿದೆ.

-ಅಶ್ಫಾಕ್ ಪೀರಜಾದೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ವೇಣು ಜಾಲಿಬೆಂಚಿ
ವೇಣು ಜಾಲಿಬೆಂಚಿ
2 years ago

ಅನುಪಮವಾದ ಬರಹ….ಇದು ದುರ್ಬಲ ಮನಸಿನ ದುಡುಕು ನಿರ್ಧಾರ…ಇಂಥಹ‌ ಮನಸ್ಥಿತಿ ಯಾರಿಗೂ ಬರಬಾರದು ಎಂದು ಆಶಿಸೋಣ…

1
0
Would love your thoughts, please comment.x
()
x