ಕ್ಲಬ್ ಹೌಸ್ ನ ‘ಸಿನಿಮಾ ಓದು’ ಎಂಬ ಗುಂಪಿನಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಕುರಿತು ಕಳೆದ ಗುರುವಾರ ಮಾತುಕತೆ ನಡೆಯುತ್ತಿತ್ತು. ಕೆ ಫಣಿರಾಜ್ ಅವರ ಸಾರಥ್ಯದಲ್ಲಿ ಪ್ರತಿ ಗುರುವಾರ ನಡೆಯುವ ಕಾರ್ಯಕ್ರಮಕ್ಕೆ ನಮ್ಮ ನಡುವಿನ ಕವಿ, ಕತೆಗಾರ, ಅಂಕಣ ಬರಹಗಾರರಾದ ಚಂದ್ರಪ್ರಭ ಕಠಾರಿಯವರ ಆಮಂತ್ರಣದ ಮೇರೆಗೆ ಕಳೆದ ವಾರ ನಾನೂ ಕೂಡ ಕೂಡಿಕೊಂಡಿದ್ದೆ. ಕಾರ್ಯಕ್ರಮದಲ್ಲಿ ಸಿನಿಮಾ ಕುರಿತ ಚರ್ಚೆಯನ್ನು ಕೇಳುತ್ತಾ ಅಲ್ಲಿನ ಮಾತುಗಾರರ ಸಿನಿಮಾ ಕುರಿತ ಪಾಂಡಿತ್ಯಕ್ಕೆ ನಿಜಕ್ಕೂ ಬೆರಗಾಗಿ ಹೋದೆ. ಆ ಗುಂಪಿನಲ್ಲಿದ್ದ ಅರ್ಪಣ ಎಚ್ ಎಸ್ ಅವರ ಮಾತು ಕೇಳಿ ಎಲ್ಲಿಯೋ ಈ ಹೆಸರು ಕೇಳಿದ್ದೇನೆ ಎನಿಸಿ ಅವರ ಕುರಿತು ಎಫ್ ಬಿ ಯಲ್ಲಿ ನೋಡಿದಾಗ ಅವರೊಬ್ಬ ಕತೆಗಾರ್ತಿ ಎಂದು ತಿಳಿಯಿತು. ಅವರ ಚೊಚ್ಚಲ ಕೃತಿ “ಕೆಂಪು” ಕಳೆದ ವರ್ಷ ಪ್ರಕಟವಾಗಿತ್ತು. ಎಫ್ ಬಿಯ ಫ್ರೆಂಡ್ ಶ್ರೀ ಯವರು ಈ ಪುಸ್ತಕವನ್ನು ಮೊನ್ನೆ ಮೊನ್ನೆಯಷ್ಟೇ ಓದಲು ಸಜೆಸ್ಟ್ ಮಾಡಿದ್ದರು. ಕಳೆದೆರಡು ವಾರಗಳಿಂದ ಏನನ್ನೂ ಓದದ ನಾನು ೨೦೨೨ ವರ್ಷದ ಕೊನೆಯ ಓದಿಗೆ ಎಂದು ಅರ್ಪಣರವರ ಚೊಚ್ಚಲ ಕೃತಿಯನ್ನು ನನ್ನ ಅಕ್ಕನಿಂದ ಕಡ ತಂದು ಓದಲು ಶುರು ಮಾಡಿದೆ.
ಅರ್ಪಣರವರ ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ಕನ್ನಡದ ಜನಪ್ರಿಯ ಕವರ್ ಪೇಜ್ ಡಿಸೈನರ್ ರಘು ಅಪಾರ ಅವರು ಈ ಪುಸ್ತಕಕ್ಕೆ ಮುಖಪುಟ ರಚಿಸಿರುವುದು ಕಂಡಿತು. ಒಂದು ಸಮಯದಲ್ಲಿ ಹೆಚ್ಚಿನ ಪುಸ್ತಕಗಳಿಗೆ ಮುಖಪುಟ ರಚಿಸುತ್ತಿದ್ದ ರಘು ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪುಸ್ತಕಗಳಿಗೆ ಮುಖಪುಟ ರಚಿಸುತ್ತಿಲ್ಲ ಎನ್ನಬಹುದೇನೋ. ಸಾಂಪ್ರದಾಯಿಕವಾಗಿ ಪುಸ್ತಕಗಳಲ್ಲಿ ಮುನ್ನುಡಿ ಇರುತ್ತದೆಯಾದರೂ ಈ ಪುಸ್ತಕದಲ್ಲಿ ಯಾರ ಮುನ್ನುಡಿಯೂ ಇಲ್ಲ ಎಂಬುದು ಅಚ್ಚರಿಯ ವಿಷಯ. ಲೇಖಕಿಯೇ ‘ನಣ್ಮೆ’ ಎಂಬ ವಿಶಿಷ್ಟ ಶೀರ್ಷಿಕೆಯೊಂದಿಗೆ ಪುಸ್ತಕದಲ್ಲಿ ತಮ್ಮ ಕಥಾ ಪಯಣವನ್ನು, ಮತ್ತು ಪುಸ್ತಕ ರೂಪುಗೊಳ್ಳುವಲ್ಲಿ ನೆರವಾದವರನ್ನು ತಮ್ಮ ಮೊದಲ ಮಾತುಗಳಲ್ಲಿ ನೆನೆದಿದ್ದಾರೆ. ಮುಂದುವರೆದು ಮತ್ತೊಂದು ಲೇಖನದಲ್ಲಿ ‘ಅಣ್ಣ ತಿರುವು ಹಾಕದ ಪುಸ್ತಕ’ ಎಂದು ತನ್ನ ತಂದೆಯವರ ಬಗ್ಗೆ ತುಂಬಾ ಆತ್ಮೀಯವಾಗಿ ಬರೆದು ತಮ್ಮ ತಂದೆಯ ಕೊನೆಯ ದಿನಗಳನ್ನು ದಾಖಲಿಸಿದ್ದಾರೆ. ಜೊತೆಗೆ ಅವರು ಲೇಖಕಿಯಾಗಿ ಹೊರಹೊಮ್ಮುವಲ್ಲಿ ತನ್ನ ಅ ಅಣ್ಣ (ತಂದೆ) ವಹಿಸಿದ ಪಾತ್ರವನ್ನು ನೆನೆದಿದ್ದಾರೆ. “ಮನೆಗೆ ಬಂದವರು ಯಾರಾದರು ಮಗಳು ಏನು ಮಾಡುತ್ತಾಳೆ ಅಂತ ಕೇಳಿದರೆ ‘ಬರೀತಾಳೆ’ ಅಂತ ನನ್ನ ತಂದೆ ಹೆಮ್ಮೆಯಿಂದ ಹೇಳುತ್ತಿದ್ದರು” ಎನ್ನುವ ಸಾಲು ಮಕ್ಕಳನ್ನು ತಂದೆ ತಾಯಿಗಳು ಪ್ರೋತ್ಸಾಹಿಸಬೇಕು ಎನ್ನುವುದನ್ನು ಒತ್ತಿ ಹೇಳುತ್ತದೆ.
“ಕೆಂಪು” ಪುಸ್ತಕದ ತಾಂತ್ರಿಕ ಪುಟವನ್ನು ನೋಡಿದಾಗ ಗಮನ ಸೆಳೆದ ವಿಷಯ ಏನೆಂದರೆ ಸಾಮಾನ್ಯವಾಗಿ ಸಾಂಪ್ರಾದಾಯಿಕವಾಗಿ ಪುಸ್ತಕ ಪ್ರಕಟಿಸುವವರು ಪ್ರಕಾಶಕರ ಹೆಸರು ಮತ್ತು ಪ್ರತಿಗಳ ಸಂಖ್ಯೆಯನ್ನು ನಮೂದಿಸಿರುತ್ತಾರೆ. ಈ ಪುಸ್ತಕದಲ್ಲಿ ಲೇಖಕಿಯೇ ಟೆಕ್ ಫಿಜ಼್ ಇಂಕ್ ಬೆಂಗಳೂರು ಮೂಲಕ ಪ್ರಕಾಶಕರಾಗಿದ್ದಾರೆ. ಪ್ರತಿಗಳು ಎಷ್ಟು ಮುದ್ರಿತಗೊಂಡಿವೆ ಎಂಬ ಮಾಹಿತಿ ಪುಸ್ತಕದಲ್ಲಿಲ್ಲ. ಬಹುಶಃ ಪ್ರಿಂಟ್ ಆನ್ ಡಿಮ್ಯಾಂಡ್ concept ನಲ್ಲಿ ಪುಸ್ತಕ ಮುದ್ರಿತಗೊಂಡಿರಬಹುದು ಎಂದುಕೊಂಡು ಕುತೂಹಲಕ್ಕೆ, ಏನಿದು ಟೆಕ್ ಫಿಜ಼್ ಇಂಕ್ ಸಂಸ್ಥೆ ಎಂದು ಗೂಗಲ್ ಮಾಡಿದಾಗ
https://techfiz.com/ ವೆಬ್ ಲಿಂಕ್ ಸಿಕ್ಕಿತು. ಆ ವೆಬ್ ತಾಣಕ್ಕೆ ಭೇಟಿ ಕೊಟ್ಟಾಗ
Anybody Can Write, Publish and Print! ಎಂಬ ಮಂತ್ರದೊಂದಿಗೆ ಕನ್ನಡದ ಇಬ್ಬರು ಉತ್ಸಾಹಿಗಳು ಕನ್ನಡದ ಪುಸ್ತಕಗಳನ್ನು ಎಷ್ಟು ಬೇಕೋ ಅಷ್ಟು ಪುಸ್ತಕಗಳನ್ನು ಪ್ರಿಂಟ್ ಮಾಡಿ (print on demand) ಕೊಡುವುದರ ಜೊತೆಗೆ ಆ ಪುಸ್ತಕದ ಇ ಪುಸ್ತಕವನ್ನು (eBook) ಸಹ ಪ್ರಕಟಿಸಿ, ಪುಸ್ತಕವು print ಮತ್ತು eBook ನ ಎರಡೂ ಪ್ರಕಾರಗಳಲ್ಲೂ ಹೆಚ್ಚು ಜನರನ್ನು ತಲುಪಿಸಲು ನೆರವಾಗುವ ಸಂಕಲ್ಪ ತೊಟ್ಟಿರುವುದು ಕಂಡಿತು. ಈ ತರಹ print on demand ಪುಸ್ತಕ ಪ್ರಕಟಿಸಲು ಎಷ್ಟೊಂದು ಸಂಸ್ಥೆಗಳಿವೆಯಾದರೂ ಕನ್ನಡದ ಬರಹಗಾರರ ಮಟ್ಟಿಗೆ ಟೆಕ್ ಫಿಜ಼್ ಇಂಕ್ ಸಂಸ್ಥೆ ಒಂದು ಉತ್ತಮ ವೇದಿಕೆಯಾಗಬಹುದು.
ಅರ್ಪಣ ಅವರ ಈ ಚೊಚ್ಚಲ ಪುಸ್ತಕದಲ್ಲಿ ಒಟ್ಟು ಹತ್ತು ಕತೆಗಳಿವೆ. ಮೂರು ಕತೆಗಳು ದಾಂಪತ್ಯಕ್ಕೆ ಸಂಬಂಧಿಸಿದ ಕತೆಗಳನ್ನು ಹೇಳಿದರೆ, ಎರಡು ಕತೆಗಳು ಧರ್ಮ, ಪ್ರೇಮ ಮತ್ತು ಸಂಸಾರದ ಕತೆಗಳನ್ನು ಹೇಳುತ್ತವೆ. ಒಂದು ಕತೆ ಮಕ್ಕಳ ಲೈಂಗಿಕ ಶೋಷಣೆಯ ವಿಕಾರತೆಯನ್ನು ತೆರೆದಿಟ್ಟರೆ, ಒಂದು ಕತೆ ಹದಿಹರೆಯದ ಸಾಮಾಜಿಕ ಸಮಸ್ಯೆಯ ಮೇಲೆ ಬೆಳಕು ಚೆಲ್ಲುತ್ತದೆ. ಒಂದು ಕತೆ ಕೆಲಸ ಮಾಡುವ ಸ್ಥಳದಲ್ಲಿ ಉಂಟಾಗುವ ಈರ್ಷೆಯ ಕುರಿತು ಮಾತನಾಡಿದರೆ, ಒಂದು ಕತೆ ಗೆಳೆತನದಲ್ಲಿನ ಈರ್ಷೆಯ ಕುರಿತು ಮಾತನಾಡುತ್ತದೆ. ಕೊನೆಯ ಕತೆ ಯಾವುದರ ಕುರಿತು ಎಂಬುದೇ ತಿಳಿಯುವುದಿಲ್ಲ.
ಇತ್ತೀಚಿನ ದಿನಗಳಲ್ಲಿ “ನಾವು” ಎನ್ನುವ ಜಾಗದಲ್ಲಿ “ನಾನು” ಎನ್ನುವ ಅಹಂಗೆ ಜಾಗ ಕೊಡುವ ಕಾರಣಕ್ಕೆ ಅನೇಕ ಸಂಬಂಧಗಳು ಅದರಲ್ಲೂ ದಾಂಪತ್ಯಗಳು ಅವಸಾನದ ಅಂಚಿಗೆ ತಲುಪುತ್ತಿರುವುದು ವಿಪರ್ಯಾಸ. ಆ ಕಾರಣಕ್ಕೆ ದಾಂಪತ್ಯಗಳಲ್ಲಿ ವಿರಸ, ವಿಚ್ಛೇದನ, ಬೇರ್ಪಡುವಿಕೆ, ಮಾನಸಿಕ ಅಶಾಂತಿ ಮತ್ತು ಇವೆಲ್ಲದರ ಕಾರಣಕ್ಕೆ ದೈಹಿಕ ಹಾಗು ಮಾನಸಿಕ ಆರೋಗ್ಯದಲ್ಲಿನ ಏರುಪೇರುಗಳು ಸಾಮಾನ್ಯ ಸಾಮಾಜಿಕ ಸಮಸ್ಯೆಯಾಗತೊಡಗಿವೆ. ಇನ್ನು ವಿವಾಹೇತರ ಸಂಬಂಧಗಳ ಕಾರಣಕ್ಕೂ ಎಷ್ಟೋ ಸಂಸಾರಗಳಲ್ಲಿ ಆಗುವ ಅನಾಹುತಗಳು ನಿತ್ಯ ನಮಗೆ ನೋಡಲು ಸಿಗುತ್ತವೆ. ಇಂತಹ ವಿಷಯಗಳ ಕುರಿತು “ಪುನರಾರಂಭ”, “ನದಿಗಿಲ್ಲ ತೀರದ ಹಂಗು” ಮತ್ತು “ಫೀನಿಕ್ಸ್” ಕತೆಗಳಲ್ಲಿ ವೈವಾಹಿಕ, ವಿವಾಹೇತರ ಸಂಬಂಧಗಳ ಸಂಕೀರ್ಣಯನ್ನು ಲೇಖಕಿ ಕಟ್ಟಿಕೊಡುವುದಲ್ಲದೇ, ಆ ಸಂಬಂಧಗಳ ಕಾರಣಕ್ಕೆ ಉಂಟಾಗುವ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುವ ಪ್ರಯತ್ನ ಕೂಡ ಲೇಖಕಿ ಮಾಡಿದ್ದಾರೆ.
“ಶುದ್ಧಿ” ಕತೆಯಲ್ಲಿ ಹಿಂದು ಹುಡುಗನಿಗೆ ಕ್ರೈಸ್ತರ ಹುಡುಗಿಯ ಜೊತೆ ಪ್ರೇಮವಾದರೆ, “ಜಬ್ಬಾರ್” ಕತೆಯಲ್ಲಿ ಹಿಂದು ಹುಡುಗ ಮುಸ್ಲಿಂ ಹುಡುಗಿಯೊಂದಿಗೆ ನಿಖಾ ಮಾಡಿಕೊಳ್ಳುತ್ತಾನೆ. ಎರಡೂ ಕತೆಗಳಲ್ಲಿ ಹುಡುಗ ಹುಡುಗಿ ಪ್ರೀತಿಸಿ ಮದುವೆಯಾದರೂ ತಮ್ಮ ಪ್ರೀತಿಯ ಕಾರಣಕ್ಕೆ ಮನೆಯ ಸಂಪ್ರದಾಯಗಳ ವಿರುದ್ಧ ಅವರು ಮುಖಮಾಡುವುದನ್ನು ಕಾಣಬಹುದು. ಆ ಕಾರಣಗಳಿಗೆ ಕುಟುಂಬದಲ್ಲಿ ಉಂಟಾಗುವ ಸಮಸ್ಯೆಗಳನ್ನು ಲೇಖಕಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. “ಶುದ್ಧಿ” ಕತೆಯಲ್ಲಿ ಮುಂದುವರೆದು ವೃದ್ಧಾಪ್ಯದ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲಿದರೆ, “ಜಬ್ಬಾರ್” ಕತೆಯಲ್ಲಿ ಡ್ರಾಮಾಟಿಕ್ ಟಚ್ ನೀಡಲು ಹೋಗಿ ಕತೆ ಎಲ್ಲೆಲ್ಲಿಗೋ ಹೋಗಿಬಿಡುತ್ತದೆ. ಒಟ್ಟಾಗಿ ಈ ಎರಡೂ ಕತೆಗಳನ್ನು ಓದಿದಾಗ “ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?” ಎಂಬ ಕುವೆಂಪುರವರ ಸಾಲುಗಳು ನೆನಪಾಗುತ್ತವೆ.
ಲೇಖಕಿ ಸ್ವತಃ ಸುದ್ದಿವಾಹಿನಿಯಲ್ಲಿ ಅನುಭವ ಉಳ್ಳವರು ಅಲ್ಲಿನ ಕಾರ್ಯವೈಖರಿಯ ಝಲಕ್ ಒಂದನ್ನು ತಮ್ಮ ಕತೆ “ಕದನ ವಿರಾಮ” ದಲ್ಲಿ ಕಟ್ಟಿಕೊಟ್ಟಿದ್ದಾರೆ. ವಾಸ್ತವವಾಗಿ ಸುದ್ದಿವಾಹಿನಿಗಳ ಮುಖ್ಯಸ್ಥರ ಹುದ್ದೆಗಳಿಗೆ ಹೆಚ್ಚಾಗಿ ಪುರುಷರನ್ನೇ ನೇಮಕ ಮಾಡುವುದರಿಂದ, ಮಹಿಳೆಯೊಬ್ಬರು ಮುಖ್ಯಸ್ಥರಾಗಬಹುದಾದ ಸಾಧ್ಯತೆಯನ್ನು ಪ್ರಸ್ತುತಪಡಿಸುತ್ತಲೇ ಲೇಖಕಿ ಸುದ್ದಿವಾಹಿನಿಗಳ ಕೆಲಸದ ಸಂಸ್ಕೃತಿಗಳನ್ನು ಅನಾವರಣ ಮಾಡುವಲ್ಲಿ ಸಫಲರಾಗಿದ್ದಾರೆ. ಕತೆಯಲ್ಲಿನ ಮುಖ್ಯ ಭೂಮಿಕೆ ಈರ್ಷೆಯಾದರೂ ಪ್ರಾಬಲ್ಯ ಸ್ಥಾಪನೆಗೆ ಇಬ್ಬರು ವ್ಯಕ್ತಿಗಳು ಸಮರಕ್ಕೆ ನಿಲ್ಲುವುದು ಈ ಕತೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮತ್ತೊಂದು ಕತೆ “ಸಾಪೇಕ್ಷತೆ” ಕೂಡ ಇಬ್ಬರು ಹುಡುಗಿಯರ ನಡುವಿನ ಗೆಳೆತನದ ಮಾತನಾಡುತ್ತಾ, ಪ್ರೌಢಶಾಲೆಯವರೆಗೂ ಕನ್ನಡ ಮಾಧ್ಯಮದಲ್ಲೇ ಓದಿ ಕಾಲೇಜಿನಲ್ಲಿ ಇಂಗ್ಲೀಷ್ ನಲ್ಲಿ ವಿಜ್ಞಾನದ ವಿಷಯ ಓದಬೇಕಾದ ಅನಿವಾರ್ಯತೆ ಬಂದಾಗ ವಿದ್ಯಾರ್ಥಿಗಳು ಅನುಭವಿಸುವ ಸಂಕಷ್ಟಗಳನ್ನು ಲೇಖಕಿ ತಮ್ಮದೇ ಅನುಭವದಂತೆ ಬರೆದಿದ್ದಾರೆ. ಲೇಖಕಿಯು ಈ ಕತೆಯನ್ನು ದಕ್ಷಿಣ ಕನ್ನಡದಲ್ಲಿ ಒಂದು ಸುತ್ತು ಹೊಡೆಸಿ ಅಲ್ಲಿನ ಮತೀಯ ಸಂಘರ್ಷಗಳ ಮೇಲೆ ಚೂರೇ ಚೂರು ಮಾತನಾಡಿ ಕೊನೆಗೆ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ಅಮೇರಿಕಾ ತೋರಿಸಿ ಕತೆಗೊಂದು ಬೇರೆಯದೇ ತಿರುವು ನೀಡಿದ್ದಾರೆ.
“ಕೋಲಾ” ಮತ್ತು “ಕೆಂಪು” ಈ ಎರಡೂ ಕತೆಗಳು ಸ್ತ್ರೀ ಲೋಕದ ಅದರಲ್ಲೂ ಮಕ್ಕಳ ಮತ್ತು ಹದಿಹರೆಯದವರ ತಲ್ಲಣಗಳನ್ನು ಹೇಳುತ್ತಾ ಬೆಚ್ಚಿಬೀಳಿಸುವ ಅಂಶಗಳನ್ನು ಒಳಗೊಂಡಿವೆ. ಈ ಎರಡೂ ಕತೆಗಳನ್ನು ಓದಿದಾಗ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ಮನೆಗಳಲ್ಲೂ, ಶಾಲೆಗಳಲ್ಲೂ ಹೇಳಿಕೊಡಬೇಕಾದ ಅವಶ್ಯಕತೆ ಇದೆ ಎನ್ನುವುದು ತಿಳಿಯುತ್ತದೆ. ಮಕ್ಕಳಿಗೆ ಬ್ಯಾಡ್ ಟಚ್, ಗುಡ್ ಟಚ್ ಗಳ ಅರಿವು ಮೂಡಿಸುವುದು, ಮುಟ್ಟಿನಂತಹ ಸೂಕ್ಷ್ಮ ವಿಚಾರಗಳ ಕುರಿತು ಹದಿಹರೆಯದ ಮಕ್ಕಳಿಗೆ ತಿಳಿ ಹೇಳಬೇಕಾಗಿದೆ ಎನ್ನುವುದನ್ನು, ಜೊತೆಗೆ ಶಾಲೆಗಳಲ್ಲಿ ಉತ್ತಮವಾದ ಶೌಚಾಲಯಗಳು ಬೇಕು ಎನ್ನುವುದನ್ನು ಲೇಖಕಿ ಪ್ರತ್ಯಕ್ಷವಾಗಿ ಈ ಕತೆಗಳಲ್ಲಿ ಹೇಳದಿದ್ದರೂ ಈ ಸಮಸ್ಯೆಗಳ ಕುರಿತು ಬರೆದು ಓದುಗರ ಗಮನ ಸೆಳೆದಿದ್ದಾರೆ. ಆ ಕಾರಣಕ್ಕೆ ಲೇಖಕಿ ಅಭಿನಂದನಾರ್ಹರು.
ಅರ್ಪಣ ಅವರ ಇಷ್ಟೂ ಕತೆಗಳನ್ನು ಓದಿದ ಮೇಲೆ ಒಂದು ಸಾಮಾನ್ಯ ಅಂಶ ಕಣ್ಣಿಗೆ ಬಿದ್ದಿತು. ಅವರ ಹೆಚ್ಚಿನ ಕತೆಗಳಲ್ಲಿ ಇಬ್ಬರು ಅಥವಾ ಮೂವರು ಮುಖ್ಯಪಾತ್ರದಾರಿಗಳ ನಡುವಿನ ಮಾನಸಿಕ ಸಂಘರ್ಷಗಳು ಕಥಾವಸ್ತುಗಳಾಗಿವೆ. ಉದಾಹರಣೆಗೆ ಅವನು-ಅವಳು (ಪುನರಾರಂಭ), ಪ್ರಾಣೇಶ-ನರಸಿಂಹ ಆಚಾರ್ಯ (ಶುದ್ಧಿ), ಇವನು-ಅವಳು-ವಿಶ್ವಾಸ್ (ನದಿಗಿಲ್ಲ ತೀರದ ಹಂಗು), ಲಕ್ಷ್ಮಿ-ಮೋಹಿನಿ (ಕೆಂಪು), ಕೃಷ್ಣವೇಣಿ-ಸಮನ್ವಿತಾ (ಸಾಪೇಕ್ಷತೆ), ಅವನು-ಅವಳು (ಫೀನಿಕ್ಸ್), ಜಬ್ಬಾರ್ ಅಕಾ ಗಣಪತಿ ಹೆಗಡೆ-ಫಾತುಮಾ (ಜಬ್ಬಾರ್). ಹಾಗೆಯೇ ಸೂಕ್ಷ್ಮವಾಗಿ ಗಮನಿಸಿದರೆ ದಾಂಪತ್ಯದ ಕುರಿತು ಕತೆಗಳ ಬರೆಯುವಾಗ ಲೇಖಕಿ ಗಂಡ, ಹೆಂಡತಿಯ ಪಾತ್ರಗಳಿಗೆ ಹೆಸರನ್ನು ನೀಡದೆ ಅವನು-ಅವಳು ಎನ್ನುತ್ತಲೊ ಇವಳು-ಅವನು ಎನ್ನುತ್ತಲೋ ಬರೆದು ಕತೆಗಳನ್ನು ನಿರೂಪಿಸಿದ್ದಾರೆ. ಅರ್ಪಣ ಅವರ ಈ ತರಹದ ನಿರೂಪಣ ಶೈಲಿಯೂ ಸೇರಿದಂತೆ ಇತರ ಕತೆಗಳ ನಿರೂಪಣಾ ಶೈಲಿ ಓದುಗರನ್ನು ಹಿಡಿದಿಡುವಲ್ಲಿ ಕ್ರಮೇಣ ಯಶಸ್ಸು ಸಾಧಿಸುತ್ತದೆ ಎನ್ನಬಹುದು.
ಒಟ್ಟಾಗಿ ಕೆಂಪು ಪುಸ್ತಕ ಓದಿದಾಗ ಭಾಷೆ, ಸಂಭಾಷಣೆಗಳು, ನಿರೂಪಣೆ ಹಾಗು ಕತೆಗಳ ತಿರುಳು ಲೇಖಕಿಯೇ ಹೇಳುವಂತೆ
“ಈಗಾಗಲೇ ವಿಮರ್ಶೆಗೆ ಒಳಪಟ್ಟು ಪಾಸಾದ ಕತೆಗಳಾದ್ದರಿಂದ ಖರೀದಿಸಿ ಓದುವವರಿಗೆ ಮೋಸವಾಗದು ಎಂಬ ಆಶಯದಿಂದ” ಎನ್ನುವ ಮಾತಿಗೆ ನನ್ನ ಸಹಮತವಿದೆ. ಅರ್ಪಣ ಅವರಿಗೆ ಈ ಲೇಖನದ ಮೂಲಕ ಅವರ ಈ ಚೊಚ್ಚಲ ಕೃತಿಯನ್ನು ಕನ್ನಡದ ಓದುಗರಿಗೆ ನೀಡಿದ್ದಕ್ಕೆ ಅಭಿನಂದಿಸುತ್ತೇನೆ. ಹಾಗೆಯೇ ಈ ಪುಸ್ತಕದ ಪ್ರತಿ ಕತೆಗಳಿಗೆ ರೇಖಾಚಿತ್ರಗಳನ್ನು ಬರೆದಿರುವ ಚೇತನಾ ತೀರ್ಥಹಳ್ಳಿಯವರಿಗೂ ಅಭಿನಂದನೆಗಳು. ಅರ್ಪಣ ಅವರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೃತಿಗಳು ದಕ್ಕಲಿ ಎಂದು ಹಾರೈಸುತ್ತೇನೆ.
-ಡಾ. ನಟರಾಜು ಎಸ್ ಎಂ
ಕೃತಿ: ಕೆಂಪು
ಪ್ರಕಾರ: ಕಥಾಸಂಕಲನ
ಲೇಖಕರು: ಅರ್ಪಣ ಎಚ್ ಎಸ್
ಪ್ರಕಾಶಕರು: ಟೆಕ್ ಪಿಜ಼್ ಇಂಕ್
ಪ್ರತಿಗಳಿಗಾಗಿ: 9480035877