ಪ್ರೀತಿಯ ಪರಾಕಾಷ್ಠೆ- ಕಾತಲ್‌, ದಿ ಕೋರ್ : ಎಂ ನಾಗರಾಜ ಶೆಟ್ಟಿ

ಪ್ರತಿಯೊಬ್ಬ ಮನುಷ್ಯನಿಗೂ ಅವನಿಚ್ಛೆಯಂತೆ ಬದುಕುವ ಹಕ್ಕಿದೆ. ಆದರೆ ಆ ಹಕ್ಕನ್ನು ನಿರಾಕರಿಸಲಾಗುತ್ತದೆ. ಲಿಂಗ ತಾರತಮ್ಯ, ಶ್ರೇಣೀಕರಣಗಳ ಜೊತೆಯಲ್ಲಿ ದೈಹಿಕ ಬೇಡಿಕೆಗಳನ್ನೂ ಸಮಾಜ ಕಟ್ಟುಪಾಡಿಗೊಳಪಡಿಸಿದೆ. ಅನಾದಿ ಕಾಲದಿಂದಲೂ ಸಿದ್ಧ ಮಾದರಿಗಿಂತ ಭಿನ್ನವಾದ ಗಂಡು- ಹೆಣ್ಣಿನ ಲೈಂಗಿಕ ತುಡಿತಗಳಿವೆ. ಇವು ಪ್ರಕೃತಿ ದತ್ತವಾಗಿಯೇ ಇದ್ದರೂ ಸಾಮಾಜಿಕ ನಿಷೇಧದಿಂದಾಗಿ ಅವಹೇಳನೆ, ಬರ್ತ್ಸನೆ ಹಾಗೂ ದುರಂತಗಳಿಗೆ ಕಾರಣವಾಗಿವೆ. ಇತ್ತೀಚೆಗೆ- ಕೋರ್ಟ್‌ ತೀರ್ಪೂ ಕಾರಣವಾಗಿ- ಜನರಲ್ಲಿ ಕೆಲ ಮಟ್ಟಿಗೆ ಅರಿವು ಉಂಟಾಗಿ ಲೈಂಗಿಕ ಅಲ್ಪಸಂಖ್ಯಾತರ ಕುರಿತ ಸಿನಿಮಾ, ನಾಟಕ, ಮುಕ್ತ ಸಂವಾದಗಳಿಗೆ ಅವಕಾಶ ದೊರೆತಿದೆ.

ಕಾತಲ್- ದಿ ಕೋರ್‌ ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆಯ ಕುರಿತಾದ ಚಿತ್ರ. ಆದರೆ ಅದಷ್ಟೇ ಆಗಿಲ್ಲ. ಅಷ್ಟೇ ಆಗಿದ್ದರೆ ಅದು ಕೂಡಾ ಇತರೆಲ್ಲ ಸಿನಿಮಾಗಳಂತೆ ಹತ್ತರಲ್ಲಿ ಹನ್ನೊಂದಾಗಿ ಬಿಡುತ್ತಿತ್ತು. ಕಾತಲ್- ದಿ ಕೋರ್‌ ದೈಹಿಕ ವಾಂಛೆಯೊಂದಿಗೆ ವೈಯಕ್ತಿಕ ಘನತೆಯನ್ನೂ ಎತ್ತಿಹಿಡಿಯುವುದರಿಂದ ಅದೊಂದು ವಿಶಿಷ್ಟ ಚಿತ್ರವಾಗಿದೆ.

ಸಿನಿಮಾದ ನಿರ್ದೇಶಕ ಜಿಯೋ ಬೇಬಿ ʼ ದಿ ಗ್ರೇಟ್‌ ಇಂಡಿಯನ್‌ ಕಿಚನ್‌ʼ ಸಿನಿಮಾದ ಮೂಲಕ ಹೆಸರಾದವರು. ʼಫ್ರೀಡಂ ಫೈಟ್‌ʼ ಎನ್ನುವ ಅಂಥಾಲಜಿಯಲ್ಲೂ ಅವರ ʼ‌ ಓಲ್ಡ್‌ ಏಜ್ʼ ಕಿರು ಚಿತ್ರ ಗಮನ ಸೆಳೆದಿತ್ತು. LGBTQ+ ಗೆ ಸಂಬಂಧ ಪಟ್ಟ ಸೂಕ್ಷ್ಮ ವಿಷಯವನ್ನೆತ್ತಿಕೊಂಡು, ಮಮ್ಮುಟ್ಟಿಯಂತ ದೊಡ್ಡ ನಟನನ್ನು ಹಾಕಿಕೊಂಡು ಸಿನಿಮಾ ಮಾಡುವುದು ಸವಾಲಿನ ಕೆಲಸ. ಜಿಯೋ ಬೇಬಿ ಈ ಸವಾಲನ್ನು ಸ್ವೀಕರಿಸಿ, ಗೆದ್ದಿದ್ದಾರೆ.

ಕಾತಲ್- ದಿ ಕೋರ್‌ ಚಿತ್ರದಲ್ಲಿ ಜಿಯೋ ಬೇಬಿ ಸೃಷ್ಟಿಸುವ ವಾತಾವರಣ ವಾಸ್ತವಿಕತೆಯಿಂದ ಕೊಂಚ ದೂರವಿರುವಂತದ್ದು. ದರ್ಪವನ್ನು ತೋರಿಸದ- ದೈಹಿಕ ಹಿಂಸೆಯಲ್ಲಿ ತೊಡಗದ ಗಂಡ, ಮದುವೆಯಾಗಿ ಇಪ್ಪತ್ತು ವರ್ಷ ಮನಸ್ಸಿನಲ್ಲೇ ವೇದನೆ ಅನುಭವಿಸಿದ ಹೆಂಡತಿ, ಈ ಸಂಬಂಧದಲ್ಲಿ ಹುಟ್ಟಿದ ಪ್ರಾಯಕ್ಕೆ ಬಂದ ಮಗಳು ಮತ್ತು ಮಗನಿಗಿಂತ ಹೆಚ್ಚಾಗಿ ಸೊಸೆಯನ್ನು ಅವಲಂಬಿಸಿದ ಮಾವ….ಈ ರೀತಿಯ ಕುಟುಂಬವನ್ನು ಜಿಯೋ ಬೇಬಿ ಕಟ್ಟಿ ಕೊಟ್ಟಿದ್ದಾರೆ. ಈ ಅಪರೂಪದ ಕುಟುಂಬದ ಮೂಲಕ ಅವರಿಗೆ ಹೇಳಬೇಕಾದ್ದನ್ನು ಮನ ಮುಟ್ಟುವಂತೆ ಹೇಳಲು ಸಾಧ್ಯವಾಗಿದೆ.

ಮಲೆಯಾಳಂ ಚಿತ್ರಗಳ ವಿಶೇಷತೆ ಇರುವುದೇ ಚಿತ್ರಕತೆಯಲ್ಲಿ. ಸಾಮಾನ್ಯ ಎನ್ನಿಸುವ ಕತೆಯನ್ನೂ ಅವರು ಬಹಳ ಚೆನ್ನಾಗಿ ದೃಶ್ಯೀಕರಿಸುತ್ತಾರೆ. ಕಾತಲ್- ದಿ ಕೋರ್‌ಗೆ ಚಿತ್ರಕತೆ ಬರೆದ ಆದರ್ಶ್‌ ಸುಕುಮಾರನ್‌ ಮತ್ತು ಪೌಲ್ಸನ್‌ ಸ್ಕಾರಿಯರ ಕಥಾ ಹಂದರ ಬಹಳ ಸೊಗಸಾಗಿದೆ. ಚಿತ್ರದ ಮೊದಲಲ್ಲೇ ಮ್ಯಾಥ್ಯೂ (ಮಮ್ಮುಟ್ಟಿ) ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಗೆ ನೀಡುವುದು, ಬಳಿಕ ಹೆಂಡತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆಂದು ತಿಳಿದಾಗ ಉಂಟಾಗುವ ಗಲಿಬಿಲಿ ಆತಂಕಕ್ಕೆ ಕಾರಣವಾಗುತ್ತದೆ. ಎಷ್ಟು ಅಗತ್ಯವೋ ಅಷ್ಟೇ ಇರುವ ಕೋರ್ಟ್‌ ದೃಶ್ಯಗಳಲ್ಲಿ ಹೇಳಬೇಕಾದ್ದನ್ನು ಕ್ಲುಪ್ತವಾಗಿ ದಾಟಿಸಲಾಗುತ್ತದೆ. ಅದರೊಂದಿಗೆ ಲೈಂಗಿಕ ಅಲ್ಪಸಂಖ್ಯಾತರ ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ಪರಿಜ್ಞಾನವನ್ನೂ ಮೂಡಿಸಲಾಗುತ್ತದೆ.

ವೈಯಕ್ತಿಕ ಸ್ವಾತಂತ್ರ್ಯದ ಅಗತ್ಯವನ್ನು ಚಿತ್ರದಲ್ಲಿ ಸಣ್ಣ, ಪುಟ್ಟ ದೃಶ್ಯ ಕಟ್ಟುಗಳ ಮೂಲಕ ಮನದಟ್ಟು ಮಾಡಲಾಗಿದೆ. ತಂದೆ, ತಾಯಿ, ಅಜ್ಜನೊಂದಿಗೆ ಮಗಳು ಒಂದೇ ಟೇಬಲ್‌ನಲ್ಲಿ ವಿಸ್ಕಿ ಬಗ್ಗಿಸಿಕೊಳ್ಳುತ್ತಾಳೆ; ಅಪ್ಪ ಕಾಲೇಜಿಗೆ ಬಂದು ಅಭಿಪ್ರಾಯ ಕೇಳಿದಾಗ ಆಕೆ ʼ ನನಗೆ ಸಿಟ್ಟಿಲ್ಲ ಆದರೆ ಬೇಸರವಿದೆ ʼ ಎಂದು ನೇರವಾಗಿ ಹೇಳಿ ಆಟ ಮುಂದುವರಿಸುತ್ತಾಳೆ. ತಂದೆಯ ಬಗೆಗೆನ ಮ್ಯಾಥ್ಯೂನ ಧೋರಣೆಯನ್ನು ಪೇಪರ್‌ ಕುಕ್ಕುವ ದೃಶ್ಯದಲ್ಲಿ, ಹೆಂಡತಿಯ ಜೊತೆಯಲ್ಲಿ ಅವನ ಸಹಕಾರದ ಭಾವನೆಯನ್ನು ತೆಂಗಿನಕಾಯಿ ಹೋಳು ಮಾಡುವ ದೃಶ್ಯದಲ್ಲಿ ಕಣ್ಣಿನ ಕಟ್ಟುವಂತೆ ಚಿತ್ರಿಸಲಾಗಿದೆ. “ ಓ ನನ್ನ ದೇವರೇ” ಎನ್ನುವ ಉದ್ಗಾರ ಚಿತ್ರದ ಅಂತಃಸತ್ವವನ್ನು ಹಿಡಿದಿಟ್ಟಿದೆ!

ಮರುದಿನ ಬಿಡುಗಡೆ ಸಿಗುತ್ತದೆ ಎನ್ನುವಾಗ “ನನ್ನ ಜೊತೆಯಲ್ಲಿ ನಿಮಗೂ ಬಿಡುಗಡೆ ಸಿಗತ್ತದೆ” ಎನ್ನುವ ಓಮನಾ (ಜ್ಯೋತಿಕಾ) “ನನ್ನೊಂದಿಗೆ ಮಲಗಿ” ಎನ್ನುತ್ತಾಳೆ. ಇದೊಂದು ಅಪರೂಪದ ದೃಶ್ಯ. ಮತ್ತೊಬ್ಬರ ಸ್ವಾತಂತ್ರ್ಯವನ್ನು ಗೌರವಿಸುವ ಕಟ್ಟುಪಾಡುಗಳಿಲ್ಲದ ಪ್ರೀತಿ! ಅದೇ ರೀತಿ ಹೊರಡುವ ಮುಂಚೆ ಓಮನಾ ಅಪ್ಪನಂತೆ ಪ್ರೀತಿಸುವ ಮಾವನೊಂದಿಗೆ ಇದ್ದು ಬಿಡುತ್ತಾಳೆ. ಈ ದೃಶ್ಯಗಳಲ್ಲಿ ವ್ಯಕ್ತಿತ್ವದ ಘನತೆ ಅನಾವರಣಗೊಳ್ಳುತ್ತದೆ.

ಮ್ಯಾಥ್ಯೂ ದೇವಸ್ಸಿ ಕುಟುಂಬ ಕ್ರೈಸ್ತ ಮತಾವಲಂಬಿಗಳು. ಕ್ರೈಸ್ತರ ಓಟು ಸಿಗುತ್ತದೆಂಬ ಕಾರಣಕ್ಕೆ ಮ್ಯಾಥ್ಯೂವನ್ನು ಎಡಪಂಥದ ಸ್ವತಂತ್ರ ಅಭ್ಯರ್ಥಿಯನ್ನಾಗಿ ಆರಿಸಲಾಗುತ್ತದೆ. ಕ್ರಿಸ್ತನ ಆರಾಧನೆಯ ಮೆರವಣಿಗೆಯಲ್ಲಿ ವಿರೋಧ ಪಕ್ಷದವರು ಮುಂಚೂಣಿಯಲ್ಲಿರುತ್ತಾರೆ. ಮ್ಯಾಥ್ಯೂನ ಲೈಂಗಿಕ ನಡವಳಿಕೆಯನ್ನು ಬಳಸಿಕೊಂಡು ಧಾರ್ಮಿಕರನ್ನು ತಮ್ಮ ಪಕ್ಷಕ್ಕೆ ಮತ ನೀಡುವಂತೆ ಮಾಡುವ ಪ್ರಯತ್ನ ಅವರದು. ಸಿನಿಮಾದಲ್ಲಿ ಪ್ರಬುದ್ಧ ನಾಗರಿಕ ಸಮಾಜವನ್ನು ತೋರಿಸಿದ್ದಾರೆ. ಮೊದಲು ಲೇವಡಿ ಮಾಡುವ, ಸಂಶಯ ವ್ಯಕ್ತ ಪಡಿಸುವ ಜನರು ಕೊನೆಯಲ್ಲಿ ಬೇರೆಯೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಪ್ರಬುದ್ಧ ಮತದಾರನಿಗೆ ಧರ್ಮ ಮುಖ್ಯವಾಗುವುದಿಲ್ಲ ಎನ್ನುವುದನ್ನು ಸೂಚಿಸುವುದು ನಿರ್ದೇಶಕನ ಉದ್ದೇಶವಾಗಿರಬಹುದು.

ಮಮ್ಮುಟ್ಟಿ ಮತ್ತು ಜ್ಯೋತಿಕಾರವರ ಪಾತ್ರ ನಿರ್ವಹಣೆ ಈ ಚಿತ್ರದ ಪರಣಾಮಕಾರಿ ಅಂಶಗಳು. ದೇಹದ ಭಂಗಿಯಲ್ಲೇ ಹೆಣ್ಣಿನ ಘನತೆಯನ್ನು ವ್ಯಕ್ತ ಪಡಿಸುವ ಜ್ಯೋತಿಕಾ ಕಣ್ಣುಗಳಲ್ಲೇ ಭಾವನೆಗಳನ್ನು ದಾಟಿಸುತ್ತಾರೆ. ಕೆಲ ಸಂದರ್ಭಗಳಲ್ಲಿ ಮಮ್ಮುಟ್ಟಿ ಮುದುಡಿದಂತೆ ಕಂಡರೂ ಪಾತ್ರದ ಆಂತರಿಕ ತುಮುಲವನ್ನು ವ್ಯಕ್ತ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾರಾ ಮೌಲ್ಯವುಳ್ಳ ನಟನೊಬ್ಬ ತನ್ನ ಇಮೇಜನ್ನು ಪಕ್ಕಕ್ಕಿರಿಸಿ ಇಂತಹ ಪಾತ್ರದಲ್ಲಿ ನಟಿಸುವುದು ಅಚ್ಚರಿಯ ವಿಷಯವೇ. ಮಮ್ಮುಟ್ಟಿ ಇತ್ತೀಚೆಗೆ ನಟಿಸಿದ ಪುಳು (2022) ನಾನ್‌ ಪಾಕಲ್‌ ನೇರತ್ತು ಮಾಯಕಂ (2023) ಕಣ್ಣೂರು ಸ್ಕ್ವಾಡ್‌(2023) ಚಿತ್ರಗಳನ್ನು ಗಮನಿಸಿದರೆ ಆತ ತನ್ನನ್ನು ತಾನೇ ಪ್ರಯೋಗಕ್ಕೊಳಪಡಿಸಿರುವುದು ಕಾಣುತ್ತದೆ. ಅಷ್ಟು ಮಾತ್ರವಲ್ಲ ತಾನೇ ಚಿತ್ರವನ್ನು ನಿರ್ಮಿಸಿ, ಹೊಸಬರಿಗೆ, ಹೊಸ ಬಗೆಯ ಚಿತ್ರಗಳಿಗೆ ಅನುವು ಮಾಡಿ ಕೊಡುತ್ತಿರುವುದು ಶ್ಲಾಘನೀಯ.

ಮಮ್ಮುಟ್ಟಿ ಮತ್ತು ಜ್ಯೋತಿಕಾರಂತಹ ಪರಿಣತ ಕಲಾವಿದರ ಎದುರು ತಂಕನ್‌ ಪಾತ್ರ ಮಾಡಿದ ಸುಧಿ ಕೋಯಿಕೋಡ್ ಸಪ್ಪೆಯಾಗಿ ಕಾಣುತ್ತಾರೆ. ಆ ಪಾತ್ರದ ನಿರ್ವಹಣೆ ಸುಲಭವೂ ಅಲ್ಲ. ಹೆಸರು ಮಾಡಿದ ನಟರು ಅಂತಹ ಪಾತ್ರವನ್ನು ಒಪ್ಪುವುದು ಕಷ್ಟ. ಅಂತದ್ದರಲ್ಲಿ ಸುಧಿ ತಕ್ಕ ಮಟ್ಟಿಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿರಾಮದ ವೇಳೆಗೆ ಡ್ರೈವ್‌ ಮಾಡುತ್ತಾ ಹ್ಯಾಂಡ್‌ ಬಿಲ್‌ ನೋಡುವ ದೃಶ್ಯದಲ್ಲಿ ತಂಕನ್‌ನ ಮಾನಸಿಕ ತೊಳಲಾಟ ಮನ ಮುಟ್ಟುವಂತಿಲ್ಲ.

ಚಿತ್ರದ ಕೊನೆಯ ಭಾಗದಲ್ಲಿ ಓಮನಾ ಮ್ಯಾಥ್ಯೂ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಾರೆ. ಈ ದೃಶ್ಯ ಸಂಬಂಧಗಳ ಅರ್ಥಪೂರ್ಣತೆಯನ್ನು ಧ್ವನಿಸುವಂತಿದೆ. ಚಿತ್ರ ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಾ ಲೈಂಗಿಕತೆಯನ್ನು ಮೀರಿದ ಪರಿಪೂರ್ಣ ಪ್ರೀತಿಯನ್ನು ಕಾಣಿಸುವ ಪ್ರಯತ್ನ ಮಾಡುತ್ತದೆ.

ಹೆಚ್ಚು ಸವಾಲುಗಳಿಲ್ಲದ ಸಾಲು ಕೆ ಥೋಮಸ್‌ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ಮ್ಯಾಥ್ಯೂಸ್ ಪುಲಿಕ್ಕನ್‌ ಸಂಗೀತ ಚಿತ್ರದ ಧ್ವನಿಯನ್ನು ಹಿಡಿಯುವಲ್ಲಿ ಯಶಸ್ವಿಯಾದರೆ, ಹಿನ್ನೆಲೆ ಸಂಗೀತ ಸಂದರ್ಭಕ್ಕೆ ಪೂರಕವಾಗಿದೆ. ವರ್ಷದ ಕೊನೆಯ ಹೊತ್ತಿಗೆ ಬಿಡುಗಡೆಯಾದ ಕಾತಲ್- ದಿ ಕೋರ್‌, ಕೆಲವು ಗಂಟೆಗಳಲ್ಲಿ ನೆನಪಿಂದ ಮಾಸಿ ಹೋಗುವ ಡಿಶುಂ, ಡಿಶುಂಗಳ ಚಿತ್ರಗಳ ನಡುವೆ ಮಾಸದ ಅನುಭವ ನೀಡುತ್ತದೆ.

ಕೊ ಮಾ : ಸಿಂಗಲ್‌ ಥಿಯೇಟರ್‌ನಲ್ಲಿ ರಾತ್ರಿ 9.45 ರ ಕೊನೆಯ ಶೋಗೆ ಹೋದಾಗ ಅರ್ಧ ಥಿಯೇಟರ್‌ ತುಂಬಿತ್ತು. ಎಲ್ಲಾ ಮಲೆಯಾಳಿಗಳೇ! ಮಮ್ಮುಟ್ಟಿ ಹೆಸರು ಕಂಡಾಗ ಜೋರಾಗಿ ಶಿಳ್ಳೆಗಳು ಕೇಳಿಬಂದವು. ಮಮ್ಮುಟ್ಟಿಯನ್ನು ಕಂಡಾಗಲಂತೂ ಕಿವಿ ಗಡಚಿಕ್ಕುವ ಶಬ್ದ. ಕಥೆ ಮುಂದುವರಿದಂತೆ ಗಾಢ ಮೌನ. ಚಿತ್ರ ಬಿಡುಗಡೆಯಾದ ಮೂರನೇ ದಿನದಂದು ಸಿನಿಮಾಕ್ಕೆ ಬಂದವರು ಮಮ್ಮುಟ್ಟಿಯ ಅಭಿಮಾನಿಗಳಿರಬೇಕು. ಇವರ ಪ್ರತಿಕ್ರಿಯೆ ಗಮನಿಸಿದಾಗ ಇಂತಹ ಸಿನಿಮಾಗಳ ಮೂಲಕ ಜನರಲ್ಲಿ ಅರಿವು ಮೂಡಿಸಲು ತಾರಾ ಮೌಲ್ಯವಿರುವ ನಟರ ಅಗತ್ಯವಿದೆಯೆಂದು ತೋರಿತು.

-ಎಂ ನಾಗರಾಜ ಶೆಟ್ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಬಾಲು
ಬಾಲು
10 months ago

ಸರ್ ತಂಕನ್ ಪಾತ್ರದಾರಿ ಸುದಿ ಕೋಯ್ ಕುಡ್ ಸಹ ಒಳ್ಲೆಯ ಅಬಿನಯ ನೀಡಿದ್ದಾರೆ

1
0
Would love your thoughts, please comment.x
()
x