ಜೀವ ವೀಣೆಯ ಭಾವ ಲಹರಿ: ಡಾ. ಹೆಚ್ ಎನ್ ಮಂಜುರಾಜ್

ಹಿಂದೆ ಆಹಾರವೇ ಔಷಧವಾಗಿತ್ತು; ಈಗ ಔಷಧವೇ ಆಹಾರವಾಗಿದೆ ಎಂಬುದನ್ನು ಬಹಳ ಮಂದಿ ಹೇಳುತ್ತಿರುತ್ತಾರೆ. ಇದು ನಿಜವೇ. ಏಕೆಂದರೆ ಅಡುಗೆ ಮನೆಯು ಕೇವಲ ಆಹಾರ ಬೇಯಿಸುವ ಪಾಕಶಾಲೆಯಾಗಿರಲಿಲ್ಲ. ವೈದ್ಯಶಾಲೆಯೂ ಆಗಿತ್ತು. ನಮ್ಮ ಆಯುರ್ವೇದದ ಬಹಳಷ್ಟು ಮನೆಮದ್ದುಗಳು ರುಚಿಕರ ಆಹಾರವಾಗಿಯೇ ನಮ್ಮನ್ನು ಕಾಪಾಡುತ್ತಿದ್ದವು. ನಮಗೇ ಗೊತ್ತಿಲ್ಲದಂತೆ ಆಯಾ ಕಾಲಮಾನಕ್ಕೆ ತಕ್ಕುದಾಗಿ ಶರೀರಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಪೂರೈಸುತಿದ್ದವು. ನಮ್ಮ ಅಡುಗೆಯಲ್ಲಿ ಯಥೇಚ್ಛವಾಗಿ ಬಳಸುತ್ತಿದ್ದ ಕರಿಬೇವು, ನಿಂಬೆ, ಕೊತ್ತಂಬರಿ, ಮೆಣಸು, ಜೀರಿಗೆ, ಇಂಗು, ಸಾಸುವೆ, ಮೆಂತ್ಯ ಮೊದಲಾದ ಪದಾರ್ಥಗಳು ಏಕಕಾಲಕ್ಕೆ ಆಹಾರಕ್ಕೆ ರುಚಿಯನ್ನೂ ಶರೀರಕ್ಕೆ ಔಷಧವನ್ನೂ ಉಣಬಡಿಸುತ್ತಿದ್ದವು. ಎಂಥದೇ ಪುಷ್ಕಳ ಭೋಜನ ಮಾಡಿದರೂ ಆಗದ ತೃಪ್ತಿ ರುಚಿಕರವಾದ ಅನ್ನ ಮತ್ತು ತಿಳಿಸಾರಿನಲ್ಲಿ ಇದೆ ಎಂಬುದು ಊಟ ಮಾಡಿದ ಮನಸ್ಸುಗಳಿಗೆ ವೇದ್ಯ. ವಿಧ ವಿಧವಾದ ತಿಳಿಸಾರು, ಗೊಜ್ಜು, ಚಟ್ನಿ, ಪಲ್ಯ, ಪಳದ್ಯ, ತಂಬುಳಿ, ರಾಯಿತ, ಕೂಟು, ರಸವಾಂಗಿ, ಮೊಸರುಬಜ್ಜಿ ಹೀಗೆ ನಮ್ಮ ಸಾಂಪ್ರದಾಯಿಕ ಅಡುಗೆಯ ಪ್ರಕಾರವು ನಮ್ಮನ್ನು ಅಂದರೆ ನಮ್ಮ ಹಿಂದಿನವರ ಆರೋಗ್ಯವನ್ನು ಕಾಪಾಡಿದ ಅಂಶಗಳಲ್ಲಿ ಮುಖ್ಯವಾದುದು.

ಜಾಗತೀಕರಣವು ಜಗತ್ತನ್ನು ಹತ್ತಿರಕ್ಕೆ ತಂದಿದೆ. ಹಲವು ದೇಶಗಳ ಸಂಸ್ಕೃತಿ ಮತ್ತು ನಡವಳಿಕೆಗಳು ನಮ್ಮನ್ನು ಪ್ರಭಾವಿಸಿವೆ. ಇದು ಅನಿವಾರ್ಯ ಮತ್ತು ಸಹಜ. ಒಂದು ಕಾಲದಲ್ಲಿ ಮೈಸೂರು ಮತ್ತು ಧಾರವಾಡ ಊರುಗಳ ನಡುವೆ ಇದ್ದ ವ್ಯತ್ಯಾಸಗಳು ಈಗ ಉಳಿದಿಲ್ಲ. ‘ಕರ್ನಾಟಕದ ಉತ್ತರ ಭಾಗದ ಮಂದಿ ಮಾತಾಡುವುದು ನಮಗೆ ಅರ್ಥವೇ ಆಗುವುದಿಲ್ಲ. ಅವರದು ಕನ್ನಡವೇ?’ ಎಂದು ಹಿಂದಿನ ಕಾಲದಲ್ಲಿ ಹಿರಿಯರು ಪ್ರಶ್ನಿಸಿದ್ದೂ ಇದೆ. ನನಗೆ ತಿಳಿವಳಿಕೆ ಬಂದ ಮೇಲೆ ಗೊತ್ತಾಯಿತು: ನಿಜವಾದ ಕನ್ನಡ ಬದುಕಿರುವುದೇ ಅಲ್ಲಿ, ಮೈಸೂರು ಭಾಗದಲ್ಲಿ ಅಲ್ಲ, ಮೈಸೂರು ಭಾಗದ ಕನ್ನಡವು ಇಂಗ್ಲಿಷಿನ ಪ್ರಭಾವಕ್ಕೆ ಸಿಕ್ಕಿಕೊಂಡು ದೇಶೀಯತೆಯನ್ನು ಕಳೆದುಕೊಂಡಿದೆ ಎಂದು! ಯಾಕೆ ಈ ಮಾತು ಬಂದಿತೆಂದರೆ: ಈ ಹಿಂದೆ ಮೈಸೂರು ಮತ್ತು ಗುಲಬರ್ಗಾದ ನಡುವೆ ಇದ್ದ ಅಂತರದಂತೆ ಈಗ ಭಾರತ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವೆ ಇದೆ ಅಷ್ಟೇ. ಆ ಮಟ್ಟಿಗೆ ನಮ್ಮ ಮಾನಸಿಕತೆ ಒಗ್ಗಿ ಹೋಗಿದೆ. ನಗರದ ಮನೆಗಳಲ್ಲಿ ಒಬ್ಬರಲ್ಲಾ ಒಬ್ಬರು ವಿದೇಶದಲ್ಲಿ ಇರುವುದು ಈಗ ಮಾಮೂಲಾಗಿದೆ. ವಿದೇಶ ಎಂಬುದು ಈಗ ಆಕರ್ಷಕವಾಗಿ ಮತ್ತು ಕಣ್ಣರಳಿಸುವ ಚೋದ್ಯವಾಗಿ ಉಳಿದಿಲ್ಲ. ಹಿಂದೆ ಬಾಂಬೆಗೆ ಹೋದರು, ಕಲ್ಕತ್ತಾದಲ್ಲಿ ಇದ್ದಾರೆ ಎಂದಾಗ ನಾವು ಅಚ್ಚರಿಪಡುತಿದ್ದೆವು. ನಮ್ಮ ಪಕ್ಕದ ಮನೆಯವರ ನೆಂಟರು ಯಾವುದೋ ಬೇರೆ ರಾಜ್ಯದ ಊರಿನಲ್ಲಿ ನೆಲೆಸಿದ್ದಾರೆ ಎಂಬ ಕಾರಣಕ್ಕಾಗಿಯೇ ಒಂದು ಬಗೆಯ ಭಯಮಿಶ್ರಿತ ಗೌರವದಿಂದ ನೋಡುತಿದ್ದೆವು. ಈಗ ಆ ಜಾಗವನ್ನು ವಿದೇಶ ಪಡೆದಿದೆ.

ಮಹಾನಗರಗಳ ಮಂದಿಗೆ ಇದು ಕೂಡ ವಿಶೇಷ ಎನಿಸಿಲ್ಲ. ಪ್ರತಿಷ್ಠಿತ ಬಡಾವಣೆಯ ದೊಡ್ಡ ಮನೆಗಳು ಬಿಕೋ ಎನ್ನುತಿರುವಾಗ ನಮಗೆ ಖಾತ್ರಿಯಾಗುತ್ತದೆ: ಒಂದೋ ಜಾಗವು ವಿವಾದದಲ್ಲಿ ಇದ್ದು ಕೋರ್ಟಿನ ಮೆಟ್ಟಿಲೇರಿದೆ ಅಥವಾ ಮಕ್ಕಳು ವಿದೇಶದಲ್ಲಿ ನೆಲೆಸಿದ್ದು, ಇಲ್ಲಿ ವೃದ್ಧರಾದ ತಾಯ್ತಂದೆಗಳು ತಮ್ಮ ಕೊನೆಯ ದಿನಗಳನ್ನು ವಿಷಾದ ಮತ್ತು ವಿವಶತೆಗಳಿಂದ ಬರಮಾಡಿಕೊಳ್ಳುತ್ತಿದ್ದಾರೆ ಎಂದು! ಇದು ಸಹ ತಪ್ಪಲ್ಲ. ಎಲ್ಲವೂ ಕಾಲಮಹಿಮೆ. ತಂತಮ್ಮ ಆಸೆ, ಆಸಕ್ತಿ, ದುಡಿಮೆ ಮತ್ತು ಪ್ಲಾನುಗಳ ಪ್ರಕಾರ ಮಕ್ಕಳು ದೂರದ ದೇಶಕ್ಕೆ ಹೋಗಿ ಅಲ್ಲಿ ಹಣ, ಹೆಸರು ಮತ್ತು ಕೀರ್ತಿಯನ್ನು ಸಂಪಾದಿಸುವುದೂ ತಪ್ಪಲ್ಲ. ಇಲ್ಲೇ ಇದ್ದು, ತಾಯ್ತಂದೆಯರನ್ನು ನೋಡಿಕೊಂಡು, ತಮ್ಮ ಪ್ರತಿಭೆ ಮತ್ತು ಮಹತ್ವಾಕಾಂಕ್ಷೆಗಳನ್ನು ಮಣ್ಣುಪಾಲು ಮಾಡುವುದೂ ಸರಿಯಲ್ಲ. ಇದು ಆಗಲೇಬೇಕಾದ ಒಂದು ಕಾಲಮಾನದ ಪ್ರಕ್ರಿಯೆ ಅಷ್ಟೇ.

ಒಂದು ಕಾಲದ ಪೀಳಿಗೆಯು ಇದನ್ನು ಹೀಗೆಯೇ ಅನುಭವಿಸಿಯೇ ತೀರಬೇಕು; ಬೇರೆ ದಾರಿಯಿಲ್ಲ. ಪ್ರಾರಂಭದಲ್ಲಿ ವೃದ್ಧಾಶ್ರಮಗಳು ತಲೆ ಎತ್ತಿದಾಗ ಇದ್ದ ಅಪಸ್ವರಗಳು ಇದೀಗ ಕಡಮೆಯಾಗಿದೆ. ನಮ್ಮ ಸಂಸ್ಕೃತಿಗೆ ಹೊಂದುವುದಿಲ್ಲ ಎಂದುಕೊಂಡವರು ಸಹ ಕ್ರಮೇಣ ತಮ್ಮವರನ್ನು ಇಲ್ಲಿ ಸೇರಿಸಿದ್ದರೆ ಚೆನ್ನಿತ್ತು ಎನಿಸಿದ್ದಿದೆ. ಒಬ್ಬನೇ ಮಗ ಅಥವಾ ಒಬ್ಬಳೇ ಮಗಳು ಇದ್ದಾಗ ಅವರು ದೂರದೂರಿನಲ್ಲಿ ತಮ್ಮ ಗುರಿಯನ್ನು ಮುಟ್ಟಲು ಧಾವಿಸಿ ಹೋದಾಗ ಇವರಿಗೆ ವೃದ್ಧಾಶ್ರಮವೇ ಗತಿಯಾಗುವಂಥ ಪರಿಸ್ಥಿತಿ. ತಮಗೆ ಬರುವ ಪಿಂಚಣಿಯಲ್ಲಿ ಅಥವಾ ಕೂಡಿಟ್ಟ ದುಡ್ಡಿನಲ್ಲಿ ಉಳಿದ ದಿವಸಗಳನ್ನು ಕಳೆಯುವ ಪ್ಲಾನು ತಪ್ಪೇನಲ್ಲ. ತಮ್ಮಂಥವರೇ ಆದ ಸಮಾನ ಮನಸ್ಕರು ಅಥವಾ ಸಮಾನ ದುಃಖಿಗಳನ್ನು ಕಾಣುವ ಮತ್ತು ಅವರೊಂದಿಗೆ ಇರುವ ಅವಕಾಶ ಕೂಡ ಇದನ್ನು ಆಯ್ಕೆ ಮಾಡಿಕೊಂಡವರಿಗೆ ಸಿಗುವ ಅನುಕೂಲ. ಮೂರು ಮಂದಿ ಹೆಣ್ಣುಮಕ್ಕಳಿದ್ದರೂ ತಂತಮ್ಮ ಗಂಡಂದಿರ ಕಾರಣದಿಂದ ಮತ್ತು ಇನ್ನಿತರ ಟೆಕ್ನಿಕಲ್ ರೀಸನ್ನುಗಳಿಂದ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ ಘಟನೆಯೊಂದು ನಮ್ಮ ದೂರದ ಬಂಧುಗಳ ಮನೆಯಲ್ಲೇ ನಡೆಯಿತು. ಹೀಗೆ ವೃದ್ಧಾಶ್ರಮಕ್ಕೆ ಸೇರಿದ ಆರೇ ತಿಂಗಳಿಗೆ ಆರೋಗ್ಯವಾಗಿದ್ದ ಆತ ಚಿಂತೆಯಿಂದ ನವೆದೂ ನವೆದೂ ಜೀವಬಿಟ್ಟರು ಎಂಬುದೂ ಸತ್ಯ.

ಇಲ್ಲಿ ಯಾರನ್ನೂ ದೂರುವಂತಿಲ್ಲ. ಸಂಪಾದನೆ ಮಾಡಿದರೂ ಸ್ವಾತಂತ್ರ್ಯವಿಲ್ಲದ ಹೆಣ್ಣುಮಕ್ಕಳು ಈ ಕಾರಣಕ್ಕೋಸ್ಕರ ಗಂಡಂದಿರನ್ನು ಮತ್ತು ಮಕ್ಕಳನ್ನು ಎದುರು ಹಾಕಿಕೊಂಡು ಸ್ವಂತ ಬದುಕನ್ನು ನರಕ ಮಾಡಿಕೊಳ್ಳಲು ಇಷ್ಟಪಡಲಿಲ್ಲ; ಹಾಗಾಗಿ, ತಂದೆಯನ್ನು ಸುಳ್ಳು ಹೇಳಿ ಕರೆದುಕೊಂಡು ಹೋಗಿ ವೃದ್ಧಾಶ್ರಮಕ್ಕೆ ಸೇರಿಸಿದರಷ್ಟೇ. ಹಾಗಂತ ಅವರು ಅಮಾನವೀಯರಲ್ಲ. ಅವರಿಗೂ ಭಾವನೆಗಳಿವೆ. ಅಂದುಕೊಂಡದ್ದನ್ನು ಮಾಡಲಾಗದ ಅಸಹಾಯಕತೆ ಮತ್ತು ಅತಂತ್ರತೆ. ನಮ್ಮ ಪೀಳಿಗೆ ಇನ್ನೂ ಅಷ್ಟು ಕಠಿಣ ಆಗಲು ಸಾಧ್ಯವಾಗುತಿಲ್ಲ. ಇಲ್ಲಿ ಕಠಿಣ ಎಂಬ ಪದವೇ ಅರ್ಥವಿಲ್ಲದ್ದು. ಎಲ್ಲವೂ ವ್ಯಾವಹಾರಿಕವಾಗಿದೆ; ಭಾವನೆಗಳು ಸತ್ತಿವೆ ಅಥವಾ ಸತ್ತಂತೆ ನಟಿಸುತ್ತಿವೆ. ಈ ಡೋಲಾಯಮಾನ ಮತ್ತು ಸಂದಿಗ್ಧ ಪರಿಸ್ಥಿತಿಗಳು ಈಗೀಗ ಹೆಚ್ಚಾಗುತ್ತಿದೆ. ಮುಂದೊಮ್ಮೆ ಎಲ್ಲರ ಮನೆಯ ಕತೆಯೂ ಇದೇ ಆಗಬಹುದು.


ಬರೆಹದ ಪ್ರಾರಂಭದಲ್ಲಿ ಆಹಾರದಲ್ಲೇ ಇರುವ ಔಷಧವನ್ನು ಪ್ರಸ್ತಾಪಿಸಿ, ತದನಂತರ ದಿಢೀರನೆ ವೃದ್ಧಾಶ್ರಮದ ವಿಚಾರ ಮಾತಾಡುತ್ತಿದ್ದೇನೆ ಎಂದು ನೀವು ಗೊಂದಲಗೊಳ್ಳುವುದು ಬೇಡ. ಜಾಗತೀಕರಣದಿಂದಾಗಿ ಎಲ್ಲವೂ ಸುಖಮಯವಾಗಲು ಸಾಧ್ಯವಿಲ್ಲ. ಏಕೆಂದರೆ ಸಂಸ್ಕೃತಿ ಮತ್ತು ನಡವಳಿಕೆಗಳು ಪದಾರ್ಥಗಳಂತಲ್ಲ. ಕುಕ್ಕರು, ವಾಷಿಂಗ್ ಮಷೀನು, ಮಿಕ್ಸಿ, ಕೂಲರು, ಸೋಲಾರು ಬಳಸಿದಂತಲ್ಲ! ನಮಗೇ ಗೊತ್ತಿಲ್ಲದಂತೆ ನಮ್ಮ ಸಂಸ್ಕೃತಿ ಹಾಗೂ ನಮ್ಮ ಆಲೋಚನಾ ವಿಧಾನಗಳಲ್ಲಿ ಮಹತ್ತರ ಬದಲಾವಣೆಗಳು ಆಗಿ ಹೋಗಿವೆ. ವೃದ್ಧಾಶ್ರಮವು ನಮ್ಮ ಸಂಸ್ಕೃತಿಗೆ ಒಗ್ಗುವುದಿಲ್ಲ ಎಂದು ಮಾತಾಡುತಿದ್ದ ಕಾಲ ಹೊರಟು ಹೋಗಿದೆ. ಒಪ್ಪಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ತೀರಾ ಅನಾಥರಾಗುವ ಬದಲು ಇಂಥಲ್ಲಿ ಇರುವಷ್ಟು ದಿನಮಾನ ಚೆನ್ನಾಗಿರೋಣ ಎಂಬ ಮನೋಧರ್ಮ ಈಗ ಹಿರಿಯರಲ್ಲೂ ನೆಲೆಯೂರಿದೆ. ಒಂದು ವಾರ ಊರಿಗೆ ಹೋಗಬೇಕಾದಾಗ ಸಾಕುನಾಯಿಯನ್ನು ಅವರು ಮರಳುವ ತನಕ ನೋಡಿಕೊಳ್ಳುವ ಪೇಯ್ಡ್ ಸರ್ವೀಸು ಇದೆ. ಬೇಬಿ ಕೇರ್ ಇದ್ದ ಹಾಗೆ ಡಾಗ್ ಕೇರ್ ಅಷ್ಟೇ. ನೋಡಿಕೊಳ್ಳುವ ಜನ ಇಲ್ಲದಿದ್ದಾಗ ಇಂಥವೆಲ್ಲ ತಲೆ ಎತ್ತುತ್ತವೆ. ಕಮರ್ಷಿಯಲ್ ಆಗುತ್ತವೆ. ಬ್ಯುಸಿನೆಸ್ ಆಗುತ್ತವೆ. ದುಡ್ಡಿದ್ದರೆ ಎಂಥ ಸರ್ವೀಸೂ ಲಭಿಸುತ್ತದೆ. ಜನ ಈಗ ದುಡ್ಡಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ; ದುಡ್ಡು ಕೊಟ್ಟರೂ ಒಳ್ಳೆಯ ಸರ್ವೀಸು ಸಿಗುವುದಿಲ್ಲ ಎಂದು ಅಲವತ್ತುಕೊಳ್ಳುತ್ತಿದ್ದಾರೆ.

ಇದೂ ವಿದೇಶದ ಪ್ರಭಾವವೇ! ಸಣ್ಣ ಪುಟ್ಟ ಸರ್ವೀಸೂ ರಿಪೇರಿ, ದುರಸ್ತಿ ಕಾರ್ಯಗಳಿಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿಪರೀತ ಖರ್ಚು ಮತ್ತು ಬೆಲೆ! ಹಾಗಾಗಿ ಅಲ್ಲಿ ಜನರೇ ಚಿಕ್ಕ ಪುಟ್ಟ ರಿಪೇರಿಗಳನ್ನು ಸ್ವತಃ ಮಾಡಿಕೊಳ್ಳುತ್ತಾರೆ. ಲೇಬರ್ ಕ್ಲಾಸು ಅಂತ ಮಾತಾಡುತ್ತಾರಲ್ಲ! ಇದು ಈಗೀಗ ಭರಿಸುವ ಶುಲ್ಕ ನಮ್ಮಲ್ಲೂ ದುಬಾರಿಯಾಗಿದೆ. ಇದು ಸಹ ಸಹಜ. ಎಲ್ಲರೂ ಓದಿ ದೊಡ್ಡಾಫೀಸರಾದ್ರೆ ಚಿಕ್ಕ ಪುಟ್ಟ ಕಾರ್ಯಗಳನ್ನು ಮಾಡುವವರು ಕಡಮೆಯಾಗುತ್ತಾರೆ. ಆಗ ಅಂಥವಕ್ಕೆ ಬೇಡಿಕೆ, ಬೇಡಿಕೆ ಇದೆಯೆಂದ ಮೇಲೆ ಅದು ದುಬಾರಿ. ಹಬ್ಬಗಳ ಸಂದರ್ಭದಲ್ಲಿ ಹೂವು ಮಾರುವವರನ್ನು ಮಾತಾಡಿಸಲು ಸಾಧ್ಯವೇ? ರಜಾ ದಿವಸಗಳಲ್ಲಿ ಬಸ್ ಟಿಕೇಟು ದುಪ್ಪಟ್ಟು! ಈ ಹಗಲು ದರೋಡೆಯನ್ನು ಸಹಜವೆಂದು ಒಪ್ಪಿಕೊಂಡಿದ್ದೇವಲ್ಲ! ಇದೊಂಥರ ಆರ್ಥಿಕ ಚಕ್ರ. ಮೇಲಿದ್ದದ್ದು ಕೆಳಗಿಳಿಯಲೇಬೇಕು; ಕೆಳಗಿಳಿದದ್ದು ಮೇಲೇರಲೇಬೇಕು. ಈಗೇನಾದರೂ ಕಾರ್ಲ್‍ಮಾಕ್ರ್ಸ್ ಇದ್ದಿದ್ದರೆ ತನ್ನ ಥಿಯರಿಯನ್ನು ಉಲ್ಟಾ ಹೇಳುತ್ತಿದ್ದನೇನೋ? ಶೋಷಕರು ಯಾರು? ಶೋಷಿತರು ಯಾರು? ಎಂಬುದನ್ನು!!

ಆಹಾರ, ಔಷಧ, ವಿದೇಶ, ಜಾಗತೀಕರಣ, ವೃದ್ಧಾಶ್ರಮ ಹೀಗೆ ನಾನು ಸಂಬಂಧಪಡದಂಥ ವಿಚಾರಗಳನ್ನು ಪ್ರಸ್ತಾಪಿಸಿದ್ದಕ್ಕೆ ಕಾರಣವಿದೆ. ನಮ್ಮದಲ್ಲದ ಅನ್ಯ ಪ್ರಭಾವ ಪ್ರೇರಣೆಗಳನ್ನು ಒಪ್ಪಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರಾರಂಭದಲ್ಲಿ ಕಷ್ಟಕರ. ಸನ್ನಿವೇಶ ಹಾಗೆಯೇ ಇರುವುದಿಲ್ಲ. ನಿಧಾನವಾಗಿ ಹೊಸದು ಹಳತಾಗುತ್ತದೆ; ನಮ್ಮ ಸಂಸ್ಕೃತಿಯು ಒಪ್ಪಿಕೊಳ್ಳುತ್ತದೆ; ಸರಿಯೋ ತಪ್ಪೋ ಯಾವುದನ್ನೂ ವಿಚಾರ ಮಾಡಲು ಹೋಗದೇ ಅನುಕೂಲಸಿಂಧು ಎಂಬ ಮಾನದಂಡದಿಂದ ಅಳೆದು ಸದ್ಯದ ಸಮಸ್ಯೆಯಿಂದ ಪಾರಾಗಿ ಬಿಡುವ ಹುನ್ನಾರಕೆ ಮನಸು ಯಾವಾಗಲೂ ಹಾತೊರೆಯುತ್ತಿರುತ್ತದೆ. ಕಾಲದುದ್ದಕೂ ಇಂಥವೇ ಆಗಿರುವುದು. ಒಂದು ಪ್ರದೇಶಕ್ಕೆ ಇನ್ನೊಂದು ಪ್ರದೇಶದ ಜನರು ಆಗಮಿಸಿ, ಬೆರೆತು ಒಂದೇ ಆಗಿ ಹೋದ ದಿನದಿಂದಲೂ ಜಾಗತೀಕರಣ ಆಗಿರುತ್ತದೆ. ಒಂದು ಕಾಲಘಟ್ಟದಲ್ಲಿ ಜನರ ವಲಸೆ ಕಣ್ಣಿಗೆ ಕಾಣುತಿತ್ತು; ಆದರೆ ಸಂಸ್ಕೃತಿಯನ್ನು ಪ್ರಭಾವಿಸುವ ಅಂಶಗಳು ಬೇಗನೆ ಕಣ್ಣಿಗೆ ಕಾಣುವುದಿಲ್ಲ. ಅವು ನಮ್ಮ ಬದುಕಿನಲ್ಲಿ ಬೆರೆತು ಹೋದ ಮೇಲೆ ಗೊತ್ತಾಗುತ್ತದೆ. ನಾವು ಅದರ ವಶವರ್ತಿಗಳಾಗಿದ್ದೇವೆ ಎಂಬುದು. ಇದು ಆಹಾರದ ವಿಚಾರದಲ್ಲೂ ನಿಜ; ವೃದ್ಧಾಶ್ರಮದ ವಿಚಾರದಲ್ಲೂ ನಿಜ.


ನಮ್ಮ ಕೈಯಳತೆಯಲ್ಲಿ ಇಲ್ಲದುದನ್ನು ಚಿಂತಿಸಿ ಫಲವಿಲ್ಲ; ಹಾಗೆ ನೋಡಿದರೆ ಯಾವುದೂ ನಮ್ಮ ಕಂಟ್ರೋಲಿನಲ್ಲಿ ಇಲ್ಲ. ನಮ್ಮ ಮನಸ್ಸೇ ನಮ್ಮ ಮಾತನ್ನು ಕೇಳುವುದಿಲ್ಲ. ಸುಖಾ ಸುಮ್ಮನೆ ಎಲ್ಲವನೂ ನಿಯಂತ್ರಿಸಲು ಮತ್ತು ಮಂತ್ರಿಸಲು ಹೋಗುತ್ತೇವೆ; ಅಂತ್ಯದಲ್ಲಿ ಕಡು ದುಃಖ ಮತ್ತು ನಿರಾಸೆಗಳಲ್ಲಿ ಜೀವಿಸುತ್ತೇವೆ. ನಮ್ಮ ಲೆಕ್ಕಾಚಾರಗಳು ನಡೆದರೆ ಸಂತಸ; ನಡೆಯದಿದ್ದರೆ ವಿಷಾದ. ಜೀವನದ ಸ್ವರೂಪವೇ ಹೀಗೆ. ನದಿಯಲ್ಲಿ ತೇಲುವ ಮರದ ಕೊರಡಿನಂತಿದ್ದರೆ ಯಾವ ದುಗುಡವೂ ಇರದು. ಹಾಗೆ ಇರಲು ನಾವು ಮರದ ಕೊರಡಲ್ಲವಲ್ಲ!

ಒಂದಂತೂ ಸ್ಪಷ್ಟ: ಪ್ರಪಂಚದಲ್ಲಿ ಇರುವ ದುಃಖವನ್ನು ಇನ್ನಷ್ಟು ಹೆಚ್ಚು ಮಾಡುವುದರತ್ತ ನಮ್ಮ ಗಮನ ಮತ್ತು ಕಾಣಿಕೆ ಇರಬಾರದು; ಸಾಧ್ಯವಾದಷ್ಟೂ ಇನ್ನೊಬ್ಬರಿಗೆ ತೊಂದರೆ ಕೊಡದೇ ಜೀವಿಸಿದರೆ ಅದೇ ನಾವು ಮಾಡುವ ನಿಜ ದೇಶಸೇವೆ. ಸುಮ್ಮನಿರುವುದೇ ಸಮಾಜಕ್ಕೆ ಮಾಡುವ ಉಪಕಾರ. ಹೀಗೆ ಎಲ್ಲರೂ ಅಂದುಕೊಂಡರೆ ಆ ಮಟ್ಟಿಗೆ ನೆಮ್ಮದಿ. ನಾನೊಬ್ಬ ಹೀಗೆ ಇದ್ದರೆ ಆ ಮಟ್ಟಿಗೆ ಒಬ್ಬ ಕೆಡುಕ ಮತ್ತು ಉಪದ್ರವಜೀವಿ ಕಡಮೆಯಾದಂತೆ ಲೆಕ್ಕ ತಾನೇ. ನನ್ನ ಮಾತು, ವರ್ತನೆ ಮತ್ತು ಸ್ವಭಾವಗಳನ್ನು ಈ ದಿಕ್ಕಿನಲ್ಲಿ ಬದಲಿಸಿಕೊಂಡರೆ ವೈಯಕ್ತಿಕವಾಗಿ ನನಗೂ ಆರೋಗ್ಯ; ಸಮಾಜಕ್ಕೂ ಉಪಯೋಗ. ಎಲ್ಲಿಯವರೆಗೆ ಇನ್ನೊಬ್ಬರನ್ನೂ ಇನ್ನೊಂದನ್ನೂ ನನಗೆ ಒಗ್ಗದಿರುವುದನ್ನೂ ನನಗಾಗದವರನ್ನೂ ಟೀಕಿಸುತ್ತಾ, ಬೈದುಕೊಳ್ಳುತ್ತಾ, ಆಕ್ಷೇಪಿಸುತ್ತಾ ಬದುಕುವುದು? ಹೀಗೆಯೇ ನಾವು ಒಂದು ದಿನ ಬೈದಾಡುತ್ತಲೇ ಸತ್ತು ಹೋಗುತ್ತೇವೆ ಎಂಬುದನ್ನು ಮನನ ಮಾಡಿಕೊಂಡರೆ ಮನವು ಮೃದುವಾಗುತ್ತದೆ; ಹೃದಯದಲಿ ಕಾರುಣ್ಯ ರಸ ಮೈದಾಳುತ್ತದೆ; ಜಗತ್ತನ್ನು ನೋಡುವ ದೃಷ್ಟಿ ಬದಲಾಗುತ್ತದೆ. ಒಳ್ಳೆಯದು ಮತ್ತು ಒಳ್ಳೆಯವರು ನಮಗೆ ಕಾಣಿಸಲು ಶುರು ಆಗುತ್ತದೆ.

ಬರೆಹದ ಮೊದಲಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಮರಳುತ್ತೇನೆ: ಔಷಧಗಳೆಂದರೆ ನಮಗೆ ತಕ್ಷಣ ನೆನಪಾಗುವುದು ಬಣ್ಣಬಣ್ಣದ ಮಾತ್ರೆಗಳು, ಇಂಜೆಕ್ಷನ್‍ಗಳು, ಮೆಡಿಕಲ್ ಶಾಪು, ವೈದ್ಯರ ಪ್ರಿಸ್ಕ್ರಿಪ್‍ಶನ್ನು, ಬೆಳಗ್ಗೆ-ಮಧ್ಯಾಹ್ನ-ರಾತ್ರಿಗಳೆಂಬ ತ್ರಿವಿಧಗಳಲ್ಲಿ ನುಂಗಬೇಕಾದ ಕರ್ಮ, ಆಹಾರಕ್ಕೆ ಮುಂಚೆ ಮತ್ತು ಆಹಾರ ಸೇವನೆಯ ನಂತರ, ಪ್ರಮಾಣ….. ಹೀಗೆ ಅವುಷಧಗಳ ಜಗತ್ತು ನಮ್ಮ ದಿನನಿತ್ಯದ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಹೋಗಿದೆ. ಬೀಪಿ, ಶುಗರು ಇರುವವರಂತೂ ಸಾಯುವತನಕವೂ ಸೇವಿಸಬೇಕಾದ ಅನಿವಾರ್ಯ. ಇರುವ ರೋಗಗಳು ಸಾಲದು ಎಂದುಕೊಂಡು ಹೊಸ ಹೊಸ ರೀತಿಯ ಖಾಯಿಲೆಗಳು ನಮ್ಮನ್ನು ಅಪ್ಪಿಕೊಂಡು ಸಂತೋಷ ಪಡುತ್ತಿವೆ.

ಎಂಥದೇ ಖಾಯಿಲೆಗಳನ್ನು ಮೂರು ರೀತಿಯಲ್ಲಿ ವರ್ಗೀಕರಿಸಬಹುದು. ಮೊದಲನೆಯದು ವಂಶಪಾರಂಪರ್ಯ, ಇದನ್ನೇ ನಮ್ಮ ಹಿಂದಿನವರು ಪೂರ್ವಜನ್ಮದ ಕರ್ಮ ಎಂದು ಕರೆದದ್ದು. ಇವುಗಳನ್ನು ಸಂಪೂರ್ಣ ಗುಣ ಮಾಡಲು ಸಾಧ್ಯವೇ ಇಲ್ಲ. ಇವನ್ನು ಅನುಭವಿಸಿದವರಿಗೆ ಇದು ಗೊತ್ತಾಗುತ್ತದೆ. ತಾಯ್ತಂದೆಯರ ಬಳುವಳಿ ಇದು. ಒಂಥರಾ ತವರುಮನೆ ಉಡುಗೊರೆ. ಇನ್ನೊಂದು ರೀತಿಯವೆಂದರೆ, ನಾವು ವಾಸಿಸುತ್ತಿರುವ ಪರಿಸರ, ಸುತ್ತಮುತ್ತಲ ವಾತಾವರಣದಿಂದ ಬರುವಂಥದು. ಅಂಟುಜಾಡ್ಯಗಳನ್ನೂ ಈ ಕೆಟಗರಿಗೇ ಸೇರಿಸಬಹುದು. ನಮ್ಮ ವಾಸಸ್ಥಳ ಮತ್ತು ಕೆಲಸದ ಸ್ಥಳಗಳು ನಿರ್ಮಲವಾಗಿದ್ದರೆ ನಾವೂ ಆ ಮಟ್ಟಿಗೆ ಆರೋಗ್ಯವಾಗಿರುತ್ತೇವೆ. ಎಷ್ಟೊಂದು ರೀತಿಯ ಮಾಲಿನ್ಯಗಳಿಂದ ನಾವು ಸುತ್ತುವರೆದಿದ್ದೇವೆಂದರೆ, ಇವುಗಳಿಂದ ಈ ಜನುಮದಲ್ಲಿ ಬಿಡುಗಡೆ ಇಲ್ಲ ಎಂಬಷ್ಟರಮಟ್ಟಿಗೆ. ಮೂರನೆಯ ವಿಧದ ಖಾಯಿಲೆಗಳಿವೆ. ಇವು ನಮ್ಮ ಹವ್ಯಾಸ, ಜೀವನಕ್ರಮ ಮತ್ತು ಮನೋಧರ್ಮಗಳ ಮೂಲಕ ಬರುವಂಥದು. ಅಥವಾ ನಾವೇ ನಮ್ಮ ಕಯ್ಯಾರೆ ನಮ್ಮ ಜೀವನವನ್ನು ನರಕ ಮಾಡಿಕೊಂಡಿರುವಂಥದು. ಧೂಮಪಾನ ಮತ್ತು ಮಧ್ಯಪಾನಗಳನ್ನಷ್ಟೇ ಇಲ್ಲಿ ಹೆಸರಿಸುತ್ತಿಲ್ಲ. ಮಾನವೀಯ ಭಾವಗಳ ಕೊರತೆ, ಹೃದಯವೈಶಾಲ್ಯ ಇಲ್ಲದಿರುವುದು. ಆಹಾರ, ವ್ಯಾಯಾಮ, ಉಪವಾಸ, ನಗು, ನಿದ್ದೆ, ಧ್ಯಾನಗಳಿಲ್ಲದೇ ಸತ್ತಂತೆ ಬದುಕುವ, ಇರುವ ಒಂದು ಜೀವನವನ್ನು ತೀರಾ ಲಘುವಾಗಿ ತೆಗೆದುಕೊಂಡದ್ದರ ಅಥವಾ ತಿಳಿವಳಿಕೆ ಇಲ್ಲದೇ ಹೇಗೆ ಹೇಗೋ ಬದುಕುವ ವಿಷವರ್ತುಲವಿದು.

ಎಂದೋ ನಡೆದು ಹೋದ ಕಹಿ ಪ್ರಸಂಗಗಳನ್ನು ಮತ್ತೊಮ್ಮೆ ನೆನಪು ಮಾಡಿಕೊಂಡರೂ ಸಾಕು, ನಮ್ಮ ಶರೀರದಲ್ಲಿ ಅಂದು ಅನುಭವಿಸಿದ ಕೋಪ, ಅಸಹಾಯಕತೆ, ವ್ಯಥೆ, ಹತಾಶೆಗಳೆಂಬ ನೆಗಟೀವ್ ಭಾವಗಳು ಮರುಕಳಿಸಿ, ನಮ್ಮ ದೇಹದ ಆರೋಗ್ಯವನ್ನು ಹಾಳು ಮಾಡುತ್ತವೆ. ಮನಸ್ಸಿನಲ್ಲಿ ನೆನಪಾದರೂ ದೇಹಕ್ಕೆ ಮಾತ್ರ ಅದು ಹಿಂದೆ ನಡೆದದ್ದು, ನೆನಪಷ್ಟೇ ಎಂದು ಗೊತ್ತಾಗುವುದಿಲ್ಲ. ಈಗ ನಡೆಯುತ್ತಿರುವುದೇನೋ ಅಂತ ಅಂದುಕೊಂಡು ಅವು ಅದಕ್ಕೆ ತಕ್ಕಂತೆ ಹಾರ್ಮೋನುಗಳನ್ನು ಸ್ರವಿಸಿ, ಕೈ ತೊಳೆದುಕೊಳ್ಳುತ್ತವೆ. ಇದು ನಮ್ಮ ಮಿದುಳಿನಲ್ಲಿ ಉಂಟಾಗುವ ರಾಸಾಯನಿಕ ಕ್ರಿಯೆಯ ಪರಿಣಾಮ. ಮನದಲ್ಲಿ ನಡೆಯುವ ಆಲೋಚನೆಗಳಿಗೆ ತಕ್ಕಂತೆ ದೇಹವು ಸ್ಪಂದಿಸುತ್ತದೆ. ಮಿದುಳು ಅದಕ್ಕೆ ಅನುಗುಣವಾಗಿ ಚೋದಕಗಳ ಉತ್ಪತ್ತಿಗೆ ನಿರ್ದೇಶನ ನೀಡುತ್ತದೆ. ನಮ್ಮ ಶರೀರದಲ್ಲಿ ಅರುವತ್ತು ಟ್ರಿಲಿಯನ್‍ಗೂ ಅಧಿಕ ಜೀವಕೋಶಗಳಿವೆ. ಇವು ಆರೋಗ್ಯಕರವಾಗಿ ಇರಲು ಸ್ವಸ್ಥತೆ ಬೇಕು. ಜೀವಕೋಶಗಳಿಗೆ ಬೇಕಾದ ಪ್ರೋಟೀನು, ವಿಟಮಿನ್ನು, ಅಮೈನೋ ಆಸಿಡ್, ಮಿನರಲ್ಸ್‍ಗಳ ಜೊತೆಗೆ ಮನದ ಉಲ್ಲಾಸ ಕೂಡ ಮುಖ್ಯ. ಜೀವಕೋಶಗಳು ಸರಿಯಾದ ಆರೈಕೆ ಇಲ್ಲದೇ ಸೊರಗುವುದಕಿಂತಲೂ ನೆಗಟೀವ್ ಎಮೋಷನ್ನುಗಳಿಂದ ಹೆಚ್ಚು ಹಾಳಾಗುತ್ತವೆ. ‘ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು’ ಎಂದರು ಕವಿ ಕುವೆಂಪು. ಕಣ್ಣೀರಿನ ಜೊತೆ ತಣ್ಣೀರನ್ನೂ ಸುರಿಯಬೇಕು. ಸಿಟ್ಟು, ಸೆಡವುಗಳಿದ್ದಾಗ ನಮ್ಮ ಶರೀರ ವಿಪರೀತ ಯಾತನೆ ಅನುಭವಿಸುವುದು ಇದೇ ಕಾರಣಕ್ಕೆ. ದೇಹದ ಬೇರೆ ಬೇರೆ ಭಾಗಗಳು ಸೆಟೆದುಕೊಳ್ಳಲು ಮತ್ತು ಮುಖ ಕೆಂಪಾಗಲು ಅಲ್ಲಿಗೆ ರಕ್ತದ ಹರಿವು ಹೆಚ್ಚಾಗುವುದು. ಇದರಿಂದ ಮಿದುಳಿಗೆ ಆಗಬೇಕಾದ ರಕ್ತ ಪೂರೈಕೆ ಮತ್ತು ಆಕ್ಸಿಜನ್ನು ಕಡಮೆ. ಆಗಲೇ ಆಲೋಚನೆ ಮತ್ತು ವಿವೇಚನಾ ಶಕ್ತಿ ಕುಂಠಿತ. ‘ಯದ್ಭಾವಂ ತದ್ಭವತಿʼ ಅಂದರೆ ಏನು ಭಾವಗಳಿವೆಯೋ ಅದು ನಾವೇ ಆಗಿರುತ್ತೇವೆ. ‘ಯಥಾ ಪಿಂಡೆ ತಥಾ ಬ್ರಹ್ಮಾಂಡೇʼ ಅಂದರೆ ಅಣು ಹೇಗಿರುವುದೋ ಹಾಗೆಯೇ ಈ ಬ್ರಹ್ಮಾಂಡವೂ!

ನಾವು ಬೇರೆ, ನಮ್ಮ ಮನಸ್ಸು ಬೇರೆ, ನಮ್ಮ ದೇಹ ಬೇರೆ ಎಂದುಕೊಳ್ಳಲು ಸಾಧ್ಯವಿಲ್ಲ. ಈ ವಿಶ್ವದ ಒಂದು ಭಾಗ ನಾನು; ನಾನು ಎಂಬುದು ಈ ವಿಶ್ವದ ಒಂದಂಶ. ಇದನ್ನೇ ಆಧ್ಯಾತ್ಮಿಕ ದೃಷ್ಟಿ ಎನ್ನುವುದು. ನಮ್ಮ ಭಾವನೆಗಳು ಶುದ್ಧ ಮತ್ತು ಸ್ವಚ್ಛವಾಗಿದ್ದಷ್ಟೂ ನಮಗೆ ಆರೋಗ್ಯ. ಇದು ಹೇಗೆಂದರೆ ದೇಹದಲ್ಲಿ ಸ್ರವಿಸುವ ಚೋದಕಗಳು. ಭಾವಕೋಶಗಳಿಗೂ ಜೀವಕೋಶಗಳಿಗೂ ಪರಸ್ಪರ ಸಹ ಸಂಬಂಧವಿದೆ. ಭಾವ ಜೀವಗಳು ಸಮರಸವಾಗಿ ಕೂಡಿಯೇ ನಮ್ಮ ವ್ಯಕ್ತಿತ್ವ ಮತ್ತು ವರ್ತನೆ. ಹಾರ್ಮೋನುಗಳು ಸ್ರವಿಸಿದಾಗಲೇ ನಮ್ಮ ವರ್ತನೆಗಳು ನಿರ್ಧಾರವಾಗುವುದು. ಇದನ್ನೇ ಮನೋದೃಢತೆ ಅಥವಾ ಸಂಕಲ್ಪಶಕ್ತಿ ಎನ್ನುವುದು. ಮನಸ್ಸಿದ್ದರೆ ಮಾರ್ಗ ಎನ್ನುವುದೂ ಇದಕ್ಕೇ. ಮನಸಿನಿಂದ ದೇಹವನ್ನು ನಿಯಂತ್ರಣದಲಿಡಲು ಸಾಧ್ಯ.


ನಮ್ಮಲ್ಲಿ ತುಂಬಿರುವ ಎಲ್ಲವನ್ನೂ ನಾಲ್ಕು ವರ್ಗಗಳಲ್ಲಿ ಇಡಬಹುದು. ಸಂತೋಷ, ದುಃಖ, ಭಯ ಮತ್ತು ಕೋಪ. ಇವುಗಳಲ್ಲಿ ಮೊದಲನೆಯದು ಪಾಸಿಟಿವ್ ಗುಣಲಕ್ಷಣ. ಉಳಿದ ಮೂರೂ ನೆಗಟಿವ್ ಗುಣಲಕ್ಷಣ. ಈ ಇಪ್ಪತ್ತೈದು ಉಳಿದ ಎಪ್ಪತ್ತೈದನ್ನು ತನ್ನೊಳಗೆ ಮಿಳಿತಗೊಳಿಸಿ ನೂರಾಗಬೇಕು. ಈ ನಾಲ್ಕೂ ಮೂಲಭೂತ ಗುಣಲಕ್ಷಣಗಳು. ಅದರಲ್ಲಿ ಭಯವು ಸ್ಥಾಯಿ ಭಾವ. ಇನ್ನುಳಿದ ಎರಡು: ದುಃಖ ಮತ್ತು ಕೋಪಗಳು ಪರಸ್ಪರ ಸೋದರರು. ಕೋಪದ ಅಂತಿಮ ಪರಿಣಾಮವೇ ದುಃಖ. ದುಃಖವು ನೆಗಟೀವ್ ಭಾವಗಳ ದೊರೆ; ಜೀವ ಹಿಂಡುವ ಯಾತನೆ. ಕೋಪವನ್ನು ತ್ಯಜಿಸಿ ಅಥವಾ ಮ್ಯಾನೇಜಿಸಿ ದುಃಖದಿಂದ ಪಾರಾದರೆ ಆ ಮಟ್ಟಿಗೆ ನಾವು ಸೇಫು. ಆಗ ಇದರ ಇಪ್ಪತ್ತೈದು ಭಾಗವೂ ಸಂತಸವಾಗಿ ಪರಿಣಮಿಸುವುದು. ಕೋಪ ಮತ್ತು ದುಃಖದಿಂದ ಪಾರಾದರೆ ನಮ್ಮ ಪಾಸಿಟಿವ್ ಆಟಿಟ್ಯೂಡ್ ದುಪ್ಪಟ್ಟಾಗುವುದು. ಭಯವು ಯಾವಾಗಲೂ ಇದ್ದದ್ದೇ. ಹುಟ್ಟಿನಿಂದ ಸಾಯುವವರೆಗೂ ನಾವು ಇದರ ಬಂಧಿಯೇ. ಸಾವೆಂಬುದೇ ಅತ್ಯಂತ ಬೃಹತ್ ಭಯ! ಇದನ್ನು ಅರಿವು ಮತ್ತು ಆಲೋಚನೆಗಳ ಮೂಲಕ ನಿಭಾಯಿಸಿ ಸ್ವ ಸಾಂತ್ವನಗೊಳ್ಳಬೇಕು.
ಇಂಟಲಿಜೆಂಟ್ ಕೋಟೆಂಟ್ (ಐಕ್ಯು) ಇರುವ ಹಾಗೆಯೇ ಇಕ್ಯು ಎಂಬುದಿದೆ. ಎಮೋಷನಲ್ ಕೋಟೆಂಟ್ ಎಂದು ಕರೆಯುವರು. ಈ ಇಪ್ಪತ್ತೈದನ್ನು ಎಪ್ಪತ್ತೈದನ್ನಾಗಿಸುವ ಪಾಸಿಟಿವ್ ಮನೋಧರ್ಮವೇ ಇದು. ಐಕ್ಯು ಕಡಮೆ ಇದ್ದರೂ ಪರವಾಗಿಲ್ಲ; ಇಕ್ಯು ಹೆಚ್ಚಿರಬೇಕು. ಇದುವೇ ಸುಖ ಮತ್ತು ನೆಮ್ಮದಿಗೆ ರಾಜಮಾರ್ಗ. ಐಕ್ಯು ಅಥವಾ ಬುದ್ಧಿ ಸೂಚ್ಯಂಕ ಎಂಬುದು ಕೆಲವೊಮ್ಮೆ ವಂಶಪಾರಂಪರ್ಯದಿಂದ ನಿರ್ಧಾರವಾಗಿರುತ್ತದೆ. ಇದಕ್ಕೊಂದು ಲಿಮಿಟ್ಟು ಇರಲು ಸಾಧ್ಯ. ಆದರೆ ಇಕ್ಯು ಅಂದರೆ ಭಾವ ಸೂಚ್ಯಂಕವು ಹಾಗಲ್ಲ. ನಮ್ಮ ತಾಯ್ತಂದೆಯರು, ಮನೆತನ, ವಂಶದಿಂದ ಬಂದ ಕೆಲವೊಂದು ಸ್ವಭಾವ ಮತ್ತು ವರ್ತನೆಗಳನ್ನು ಬದಲಿಸಿಕೊಳ್ಳಬಹುದು. ‘ನಮ್ಮ ತಂದೆಯೂ ಕೋಪಿಷ್ಠ; ಹಾಗಾಗಿ ನಾನು ಕೂಡ’ ಎಂದು ಸಮರ್ಥನೆ ಮಾಡಿಕೊಳ್ಳುವುದೇ ಮೂರ್ಖತನ. ಗುರುತಿಸಿಕೊಂಡು ಕೈ ಬಿಡದೇ ಅದನ್ನೇ ಬಹು ದೊಡ್ಡ ಫ್ಯಾಮಿಲಿ ಐಡೆಂಟಿಟಿ ಅಂತ ವಿರಾಜಮಾನವಾಗಿರುವುದೇ ದಡ್ಡತನ. ಇದರಿಂದ ತನಗೂ ತನ್ನ ಕುಟುಂಬದ ಸದಸ್ಯರಿಗೂ ಕಂಟಕ ಎಂಬುದನ್ನು ಅರಿಯದ ಅವಿವೇಕಿಗಳಿವರು. ನೆಗಟಿವ್ ಮನೋಧರ್ಮಗಳು ನಮ್ಮ ಕುಟುಂಬದ ಆಸ್ತಿ ಆಗಿದ್ದರೆ ಅವನ್ನು ಗುರುತಿಸಿಕೊಂಡು ಕೈ ಬಿಡಬೇಕು. ಅವರಪ್ಪನೂ ಕಡು ಕೋಪಿಷ್ಠನಾಗಿ ಐವತ್ತಕ್ಕೇ ಹೃದಯ ಖಾಯಿಲೆಯಿಂದ ನರಳಿ ಪ್ರಾಣ ಬಿಟ್ಟ; ಮಗನೂ ಅದೇ ದಾರಿಯಲ್ಲಿ ಮುಂದುವರಿದ. ಇವನು ನಲವತ್ತಕ್ಕೇ ಪ್ರಾಣ ತ್ಯಜಿಸಿದ. ತನ್ನ ಸ್ವಭಾವ ಮತ್ತು ವರ್ತನೆಗಳನ್ನು ಬದಲಿಸಿಕೊಳ್ಳಲೇ ಇಲ್ಲ!

ಅಂದರೆ ನಮ್ಮ ದೈಹಿಕ ಅನಾರೋಗ್ಯವನ್ನು ಮಾನಸಿಕ ಆರೋಗ್ಯದಿಂದ ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳಬಹುದು. ಪೇರೆಂಟಲ್ ಬ್ಯಾಕ್ ಗ್ರೌಂಡಿಂದ ಬಂದಂಥ ಖಾಯಿಲೆಗಳನ್ನು ಸಹ ನಮ್ಮ ಸುಧಾರಿತ ವರ್ತನೆಗಳಿಂದ ಹೆಚ್ಚು ದುಗುಡಗಳಿಲ್ಲದೇ ನಿರ್ವಹಿಸಬಹುದು. ಇನ್ನು ನಮ್ಮ ಅಭ್ಯಾಸ, ವಾಸಿಸುವ ಪ್ರದೇಶಗಳಿಂದ ಬರಬಹುದಾದ ರೋಗಗಳಿಂದ ಮುಕ್ತಗೊಳ್ಳುವುದು ನಮ್ಮ ಕೈಯಲ್ಲೇ ಇದೆ. ದುರಭ್ಯಾಸ ಮತ್ತು ದುಶ್ಚಟಗಳಿಂದ ದೂರವಿದ್ದರೆ ನಮಗೂ ಕ್ಷೇಮ; ನಮ್ಮನ್ನು ನಂಬಿದವರಿಗೂ ಕ್ಷೇಮ. ಅದು ಬಿಟ್ಟು ‘ದುಡಿಯುವುದೇತಕ್ಕೇ? ಮಜಾ ಮಾಡುವುದಕ್ಕೇ! ಮೋಜು, ಮಸ್ತಿಗಳಿಲ್ಲದ ಜೀವನವದು ಬದುಕೇ?’ ಎಂದು ಪ್ರಶ್ನಿಸಿಕೊಳ್ಳುತ್ತಾ ದೇಹವನ್ನು ದರಿದ್ರ ಮಾಡಿಕೊಂಡರೆ ಆಗ ಯಾವ ಸಂಪತ್ತಿನಿಂದಲೂ ಅದು ದುರಸ್ತಿಯಾಗುವುದಿಲ್ಲ! ಧೂಮಪಾನ ಮತ್ತು ಮದ್ಯಪಾನಗಳೇ ಗಂಡಸರ ಐಡೆಂಟಿಟಿ; ಕುಡಿಯದವರು ಗಂಡಸರೇ ಅಲ್ಲ ಎಂದುಕೊಳ್ಳುವುದು ಹಾಗೂ ನಾವೇನು ಗಂಡಸರಿಗೆ ಕಡಮೆ; ಗಂಡಸರ ಹಕ್ಕು-ಸ್ವಾತಂತ್ರ್ಯಗಳು ನಮಗೂ ಇವೆ ಎಂದುಕೊಂಡು ಹೆಂಗಸರೂ ಧೂಮ-ಮದ್ಯಪಾನಿಗಳಾಗುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ತಪ್ಪು ಅಷ್ಟೇ. ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರಿಗಳಾಗುವುದು ತರವಲ್ಲ. ನಿಕೋಟಿನ್ ಮತ್ತು ಆಲ್ಕೋಹಾಲು ತರುವ ಅಂತಿಮ ಫಲಿತವೇ ಯಾತನೆ ಮತ್ತು ದುಃಖಗಳು. ದುಗುಡ ಮತ್ತು ಸ್ಟ್ರೆಸ್ಸು ಅಂತ ಧೂಮಲೀಲೆ; ಮೋಜು ಮತ್ತು ಮಸ್ತಿ ಅಂತ ಮದ್ಯಲೀಲೆ ನಡೆಸಿದಾಗ ಸಿಗುವ ಸುಖ, ಅದು ಸುಖವಲ್ಲ; ಸುಖದ ಭ್ರಮೆ! ಇದು ಗೊತ್ತಾಗುವುದರೊಳಗೆ ಚಟದಾಸರಾಗಿ, ವಿಟಬಾಸುಗಳಾಗಿ ಸ್ಮಶಾನ ವೈರಾಗ್ಯ ಮೈಗೂಡಿರುತ್ತದೆ. ‘ಇನ್ನೇನು ಸಾಯುತ್ತೇವೆ; ಮಜಾ ಮಾಡಿಯೇ ಸತ್ತು ಬಿಡೋಣ’ ಎಂಬ ಒಣವೇದಾಂತ.

‘ನಾವು ದುಡ್ಡು ಕೊಟ್ಟು ಸೇದುವುದಿಲ್ಲ; ಕುಡಿಯುವುದಿಲ್ಲ; ಯಾರಾದರೂ ಬಲವಂತ ಮಾಡಿದರೆ ಮತ್ತು ಅವರು ಕೊಡಿಸಿದರೆ ಮಾತ್ರ’ ಎನ್ನುವವರು ಈಗ ಹೆಚ್ಚಾಗುತ್ತಿದ್ದಾರೆ. ಇದೊಂಥರ ಆತ್ಮವಂಚನೆ! ಅತೀವ ಹೆಂಡಕುಡುಕನೊಬ್ಬ ಯಾವಾಗಲೂ ತನ್ನ ಜೊತೆಯಲ್ಲಿ ಒಬ್ಬ ಸ್ನೇಹಿತನನ್ನು ಗಂಟು ಹಾಕಿಕೊಂಡು ಓಡಾಡುತ್ತಿದ್ದನಂತೆ. ನಾನೀಗ ಕುಡಿಯುವುದನ್ನು ಬಿಟ್ಟು ಬಿಟ್ಟಿದ್ದೇನೆ. ಯಾರಾದರೂ ಫೋರ್ಸ್ ಮಾಡಿದರೆ ಮಾತ್ರ ತೆಗೆದುಕೊಳ್ಳುತ್ತೇನೆ ಅನ್ನುತ್ತಿದ್ದನಂತೆ. ನಿನ್ನ ಜೊತೆಗೆ ಇರುವ ಸ್ನೇಹಿತ ಯಾರು ಅಂತ ಕೇಳಿದಾಗ ಕುಡಿಯಲು ಫೋರ್ಸು ಮಾಡಲು ಅವನನ್ನು ನೇಮಿಸಿಕೊಂಡಿದ್ದೇನೆ ಎಂದನಂತೆ! ಇದು ನಮ್ಮ ವರ್ತನೆಯ ವಿಪರ್ಯಾಸ. ಸರ್ಕಾರ ನಡೆಸಲು ದುಡ್ಡು ಬೇಕು; ಅಬ್ಕಾರಿ ತೆರಿಗೆಯೇ ಸರ್ಕಾರದ ಬೊಕ್ಕಸದ ಸಿಂಹಪಾಲು. ಹಾಗಾಗಿ ನಾವೂ ಒಂಥರ ಸಮಾಜಸೇವೆ ಮತ್ತು ದೇಶಸೇವೆ ಮಾಡುತ್ತಿದ್ದೇವೆ ಎಂಬ ಬಡಾಯಿ ಬೇರೆ. ನನ್ನ ಆರೋಗ್ಯ ಮತ್ತು ನೆಮ್ಮದಿಗಳನ್ನು ಹಾಳು ಮಾಡಿಕೊಂಡು ಸಮಾಜವನ್ನು ಉದ್ಧಾರ ಮಾಡುತ್ತೇನೆನ್ನುವುದು ಇನ್ನೊಂದು ಬಗೆಯ ಮೂರ್ಖತನ. ಸುಮ್ಮನಿದ್ದರೇ ಬಂದು ಕಾಟ ಕೊಡುವ ಖಾಯಿಲೆಗಳು ಇರುವಾಗ ನಾವಾಗಿಯೇ ಹುಳ ಬಿಟ್ಟುಕೊಳ್ಳುವುದನ್ನು ಅವಿವೇಕ ಎನ್ನದೇ ಬೇರೆ ವಿಧಿಯಿಲ್ಲ.

ನಮ್ಮ ಶರೀರದಲ್ಲಿ ನಾಲ್ಕು ರೀತಿಯ ಹಾರ್ಮೋನುಗಳು ಸಂತೋಷ ಮತ್ತು ಹರ್ಷೋಲ್ಲಾಸಗಳನ್ನು ತರುವಂಥವು. ಎಂಡಾರ್ಫಿನ್, ಡೋಪಮಿನ್, ಸೆರೊಟೋನಿನ್ ಮತ್ತು ಆಕ್ಸಟೋಸಿನ್. ಶ್ರಮ ವಹಿಸಿದಾಗ, ವ್ಯಾಯಾಮ, ಯೋಗ ಮಾಡಿದಾಗ ಎಂಡಾರ್ಫಿನ್ ಉತ್ಪತ್ತಿಯಾಗುವುದು. ಕಸರತ್ತಿನ ನೋವು ಸಹ ಹಿತವೆನಿಸುವುದು ಈ ಕಾರಣಕ್ಕಾಗಿಯೇ. ಹೃದಯ ಮನಸುಗಳನ್ನು ಸಂತಸವಾಗಿಟ್ಟುಕೊಂಡು ಆರೋಗ್ಯಕರವಾಗಿ ನಗುತಿದ್ದರೆ ಕೂಡ ಇದು ಬಿಡುಗಡೆಯಾಗುತ್ತದೆ.

ನಮ್ಮಲ್ಲೊಂದು ಸ್ವ ಪ್ರತೀಕ ಇರುತ್ತದೆ. ಅಂದರೆ ನಾವೊಂದು ಸೆಲ್ಫ್ ಇಮೇಜನ್ನು ಬೆಳೆಸಿಕೊಂಡಿರುತ್ತೇವೆ. ಇದನ್ನು ಕುರಿತು ಮತ್ತು ನಾವು ಮಾಡಿದ ಜನೋಪಯೋಗಿ ಕೆಲಸಕಾರ್ಯಗಳನ್ನು ಕುರಿತು, ನಮ್ಮ ಸಾಧನೆ ಮತ್ತು ವ್ಯಕ್ತಿತ್ವಗಳನ್ನು ಕುರಿತು ಯೋಗ್ಯರು ಮೆಚ್ಚುಗೆ ವ್ಯಕ್ತಪಡಿಸಿದರೆ ಶರೀರದಲ್ಲಿ ಡೋಪಮಿನ್ ಬಿಡುಗಡೆಯಾಗುತ್ತದೆ. ರುಚಿಕರವಾಗಿ ಅಡುಗೆ ಮಾಡಿ ಬಡಿಸಿದವರಿಗೊಂದು ಮೆಚ್ಚುಗೆ ಮತ್ತು ತ್ಯಾಂಕ್ಸ್ ಹೇಳಿದರೂ ಇದು ಪ್ರತ್ಯಕ್ಷ. ಇದೊಂದು ಪಾಸಿಟೀವ್ ಸ್ಟ್ರೋಕ್. ಹೊಸ ವಸ್ತುವೊಂದನ್ನು ಕೊಂಡಾಗ ಮತ್ತು ಇಷ್ಟಪಟ್ಟ ಸಾಮಗ್ರಿ ನಮ್ಮದಾದಾಗ ಕೂಡ ಡೋಪಮಿನ್ ಉತ್ಪತ್ತಿಯಾಗುವುದು.

ಕಷ್ಟ ಸಂಕಷ್ಟಗಳಲ್ಲಿ ಇರುವವರಿಗೆ ನೆರವು ನೀಡಿದಾಗ ಅವರು ಕೃತಜ್ಞತೆ ಸೂಚಿಸಿದಾಗ ನಮ್ಮಲ್ಲಿ ಉಂಟಾಗುವ ಧನ್ಯತಾ ಭಾವಕ್ಕೆ ಕಾರಣ: ಸೆರೊಟೋನಿನ್. ಇದು ತರುವ ಮುದವೇ ವಿಶಿಷ್ಟವಾದುದು. ನಮ್ಮ ಜೀವಕೋಶಗಳನ್ನು ಉತ್ತೇಜಿಸುವ ಸಾಮಥ್ರ್ಯ ಹೊಂದಿದೆ. ನಮ್ಮಲ್ಲಿ ಮಾನವತಾ ಭಾವಗಳು ಮೂಡಿದಾಗ, ಮೃದು ಮಧುರವಾದಾಗ, ಪ್ರೀತಿ ವಿಶ್ವಾಸ, ಗೌರವ, ಆತ್ಮೀಯತೆ ಉಂಟಾದಾಗ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಮಗುವನ್ನು ಮುದ್ದಾಡುವಾಗಲೂ ಕೈ ಕುಲುಕಿ, ಅಪ್ಪಿಕೊಂಡು ಧನ್ಯರಾಗುವಾಗಲೂ ಇದು ನಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸುವುದು.

ಹೀಗೆ ನಾವು ಜೀವಕೋಶಗಳಿಂದ ಭಾವಕೋಶವನ್ನೂ ಭಾವಕೋಶದಿಂದ ಜೀವಕೋಶಗಳನ್ನೂ ಪರಸ್ಪರ ಪ್ರೇರಿಸಬಹುದು. ನಮ್ಮದೊಂದು ಸ್ವಭಾವ ಮತ್ತು ವರ್ತನೆಯ ಹಿಂದೆ ನೂರು ಸಾವಿರ ಕೆಮಿಕಲ್ ರಿಯಾಕ್ಷನ್ನುಗಳು ಅಡಗಿರುತ್ತವೆ. ಅವು ನಮ್ಮನ್ನು ಮಾತ್ರವಲ್ಲದೇ ನಾವಿರುವ ಪರಿಸರ, ವಾತಾವರಣ ಮತ್ತು ಸಮುದಾಯಗಳ ಮೇಲೆ ಪರಿಣಾಮ ಬೀರುತ್ತವೆ. ತರಗತಿಯಲ್ಲಿ ಪಾಠ ಮಾಡುವ ವೇಳೆಯಲ್ಲಿ ಎಲ್ಲರೂ ತದೇಕ ಚಿತ್ತದಿಂದ ಆಲಿಸುತ್ತಿರುವಾಗ ಯಾರೋ ಒಬ್ಬ ವಿದ್ಯಾರ್ಥಿಯು ಅನ್ಯಮನಸ್ಕನಾಗಿ ಪೆಚ್ಚುಮೋರೆ ಹಾಕಿಕೊಂಡು ವ್ಯಸನದಲ್ಲಿ ಇದ್ದರೆ ಅದರ ಪರಿಣಾಮ ಇಡೀ ತರಗತಿಯ ಮೇಲಾಗುವುದು. ಅಂದರೆ ಆತನ ನೆಗಟೀವ್ ಮೂಡು (ಆತನೇ ತಂದುಕೊಂಡದ್ದಿರಬಹುದು ಅಥವಾ ಆತನ ತಪ್ಪೇ ಇಲ್ಲದೆಯೂ ಆಗಿರಬಹುದು) ಸುತ್ತಣ ಪರಿಸರವನ್ನು ಪ್ರಚೋದಿಸುವುದು. ನಾವು ಆಗ ಆತನನ್ನು ಹೊರತುಪಡಿಸಿ ಉಳಿದವರಲ್ಲಿ ಉಲ್ಲಾಸದಿಂದ ಮಾತಾಡಲು ಸಾಧ್ಯವಾಗುವುದಿಲ್ಲ ಅಥವಾ ಆತನನ್ನು ನಿರ್ಲಕ್ಷಿಸಿ ಉಳಿದವರನ್ನು ಉದ್ದೇಶಿಸಿ ಜೋಕು ಹೇಳಿ ನಗಿಸಲು ಆಗುವುದಿಲ್ಲ. ನಮ್ಮವರು, ನಮ್ಮನ್ನು ನಂಬಿದವರು, ನಮ್ಮ ಪ್ರೀತಿಯನ್ನು ಹಂಚಿಕೊಂಡವರು ವ್ಯಸನದಲ್ಲಿದ್ದಾಗಲೂ ನಾವು ಅದರ ಪರಿಣಾಮವಾಗಿ ಚಿಂತಿತರಾಗುತ್ತೇವೆ. ಅವರು ಅನುಭವಿಸಿದ ಅಳಲನ್ನು ನಾವೂ ಅನುಭವಿಸುತ್ತೇವೆ. ಅಂದರೆ ನಮ್ಮ ಭಾವಕೋಶದಿಂದ ಜೀವಕೋಶವೂ ನರಳುತ್ತದೆ. ಅದೇ ಒಬ್ಬರು ಸಂತಸದಿಂದ ಇದ್ದಾಗ ಕೂಡ ಇಡೀ ಗುಂಪಿನ ಮೇಲೆ ಪರಿಣಾಮ ಬೀರುವುದು. ಇನ್ನೊಬ್ಬರ ಖುಷಿ ಮತ್ತು ಸಂತಸಗಳನ್ನು ನಾವು ಹಂಚಿಕೊಳ್ಳುವ ಮನೋಧರ್ಮ ಹೊಂದಿರಬೇಕು. ಅಸೂಯೆ ಪಟ್ಟರೆ ಮತ್ತದೇ ಕಹಿ ಭಾವ ಮೂಡಿ ನಮ್ಮ ಮೂಡು ಔಟಾಗುವುದು. ನಾವೇ ನಮ್ಮ ಕೈಯಾರೆ ಮೂಡು ಹಾಳು ಮಾಡಿಕೊಂಡು ಇನ್ನೊಬ್ಬರನ್ನೂ ಇನ್ನೊಂದನ್ನೂ ದೂರುವುದು ಸಹ ಅಪ್ರಬುದ್ಧತೆ.
ವಯಸಾಗುತ್ತಿದ್ದಂತೆ ಬಾಡಿ ತಂತಾನೇ ಮೆಚೂರಾಗುತ್ತದೆ; ಆದರೆ ಮನಸ್ಸಿನ ಮೆಚೂರಿಟಿ ಹಾಗಲ್ಲ! ಅದು ನಮ್ಮ ಕೈಯಳತೆಯಲ್ಲೇ ಇದೆ. ಅವರು ಬೈದರು ಎನ್ನಬಾರದು; ನಾನು ಬೈಸಿಕೊಂಡೆ ಎನ್ನಬೇಕು. ಹೊಣೆ ಹೊರುವುದನ್ನು ಮೊದಲು ಅಭ್ಯಾಸ ಮಾಡಿಕೊಳ್ಳಬೇಕು. ಇಷ್ಟಕೂ ನಾನು ಬಯ್ಯಿಸಿಕೊಳ್ಳಲು ಮುಖ್ಯ ಕಾರಣವೆಂದರೆ: ಬೈಗುಳದಿಂದ ನನ್ನ ಮನಸ್ಥಿತಿ ಮುದುಡುವ ಆದೇಶವನ್ನು ಕೊಟ್ಟಿದ್ದೂ ನಾನೇ ಅಲ್ಲವೇ? ನನ್ನ ಅನುಮತಿಯಿಲ್ಲದೇ ಮತಿಯೂ ಮುಂದಕ್ಕೆ ಚಲಿಸಲಾರದು! ನನ್ನ ಅನುಮತಿಯಿಲ್ಲದೇ ನನಗೆ ಯಾರೂ ದುಃಖವನ್ನೂ ಕೊಡಲು ಸಾಧ್ಯವಿಲ್ಲ; ಸುಖವನ್ನೂ ಕೊಡಲು ಸಾಧ್ಯವಿಲ್ಲ. ಇದನ್ನೇ ಮಾನಸಿಕ ಪ್ರಬುದ್ಧತೆ ಎನ್ನುವುದು. ಇದಕ್ಕಾಗಿ ಸೈಕಾಲಜಿ ಓದಬೇಕಾಗಿಲ್ಲ; ವಯಸ್ಸಾಗಬೇಕಾಗಿಲ್ಲ; ಮನಸಿನ ಮಹಿಮೆಗಳನ್ನು ಅರ್ಥ ಮಾಡಿಕೊಂಡರೆ ಸಾಕು.

ಒಟ್ಟಾರೆ ನನ್ನ ಆಲೋಚನೆಯ ತಾತ್ಪರ್ಯವಿಷ್ಟೇ: ಜೀವಕೋಶ ಮತ್ತು ಭಾವಕೋಶ – ಎರಡೂ ನಾವಿರುವ ತನಕ ನಮ್ಮವೇ! ನಮ್ಮ ಎಲ್ಲ ವರ್ತನೆಗಳಿಗೆ ಇವು ಕಾರಣ. ನಾನಲ್ಲ; ನನ್ನೊಳಗಿನ ಜೀವಕೋಶ ಎಂದು ಅದರ ಮೇಲೆ ಭಾರ ಹಾಕಿ ಪಲಾಯನ ಮಾಡಬಾರದು. ಜೀವಕೋಶವನ್ನು ಪ್ರೇರಿಸುವ ಶಕ್ತಿ ಮತ್ತು ಭಾವಕೋಶವನ್ನು ಉದ್ದೀಪಿಸುವ ಯುಕ್ತಿ ಎರಡೂ ಪರಸ್ಪರ ಒಂದಳತೆಯಲ್ಲಿ ಒಂದಾದರೆ ಮಾತ್ರ ನಾವು ಸಹಜತೆ ಮತ್ತು ಸಾಮಾನ್ಯಸ್ಥಿತಿಯಲ್ಲಿ ಇದ್ದು ಮಾನಸಿಕ ಸ್ವಸ್ಥತೆಯನ್ನು ಕಾಪಾಡಿಕೊಳ್ಳುತ್ತೇವೆ. ಇವೆರಡರ ನಡುವೆ ಏರುಪೇರಾದರೆ ನಮ್ಮ ಸ್ವಭಾವ, ವ್ಯಕ್ತಿತ್ವ ಮತ್ತು ವರ್ತನೆಗಳೂ ಹೆಂಡ ಕುಡಿದ ಕಪಿಯಂತಾಗುತ್ತದೆ. ಮೊದಲೇ ಕೋತಿ; ಇನ್ನು ಅದು ಹೆಂಡ ಕುಡಿದರೆ ದೇವರೇ ಗತಿ. ವಂಶಪಾರಂಪರ್ಯ, ಬೆಳೆದ ಮತ್ತು ಬೆಳೆಸಿದ ರೀತಿ ನೀತಿ, ವ್ಯಕ್ತಿತ್ವದ ಮೇಲಾಗುವ ಪ್ರಭಾವ ಪ್ರೇರಣೆಗಳು, ನಮ್ಮ ಆಹಾರ ವಿಹಾರ, ಸಹವಾಸ, ಅಭ್ಯಾಸ, ರುಚಿಯಭಿರುಚಿ, ದೇಶ ನೋಡಿದ, ಕೋಶ ಓದಿದ ಅನುಭವ, ಸೃಜನಾತ್ಮಕತೆಗಳೆಲ್ಲ ಇಂಥಲ್ಲಿ ಲೆಕ್ಕಕ್ಕೆ ಬರುತ್ತವೆ. ಕೈಯಲ್ಲಿ ಹಿಡಿದ ನೀರಿನ ಲೋಟದಲ್ಲಿ ಅರ್ಧ ಖಾಲಿಯಿದೆ ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ: ಇನ್ನರ್ಧ ತುಂಬಿದೆ ಎನ್ನುವುದು!

ಬದುಕಿನ ಗ್ರಹಿಕೆಗಳು ಕೂಡ ಈ ಜೀವಕೋಶ ಮತ್ತು ಭಾವಕೋಶವನ್ನು ಅವಲಂಬಿಸಿಯೇ ನಿರ್ಧಾರವಾಗುವುದು. ಪಾಸಿಟಿವಿಟಿಯನ್ನು ಗುರುತಿಸುವ, ಒಪ್ಪುವ ಮತ್ತು ಹರಡುವ ಗುಣ ನಮ್ಮದಾದಷ್ಟೂ ಲೋಕ ಚೆಂದ ಕಾಣುವುದು. ನೆಗೆಟಿವಿಟಿಯನ್ನು ಹುಡುಕುತ್ತಲೇ ಇರುವ ಮನೋಧರ್ಮಕ್ಕೆ ಯಾವತ್ತೂ ನೈರಾಶ್ಯ ಮತ್ತು ವೈಷಮ್ಯಗಳೇ ಕಟ್ಟಿಟ್ಟ ಬುತ್ತಿ. ದೇಹ ಮತ್ತು ಮನಸ್ಸುಗಳು ಬೇರೆ ಬೇರೆ ಎಂದುಕೊಳ್ಳುತ್ತ ಬದುಕಿದರೆ ಇವೆಲ್ಲ ಅರ್ಥವಾಗುವುದಿಲ್ಲ. ಎಲ್ಲವೂ ಮನೋದೈಹಿಕ ಎಂದು ಗುರುತಿಸಿಕೊಳ್ಳುತ್ತ ಹೋದ ಹಾಗೆಲ್ಲ ನಾವು ನಮ್ಮನ್ನೇ ಸಾಕ್ಷೀಪ್ರಜ್ಞೆಯಿಂದ ಅವಲೋಕಿಸ ತೊಡಗುತ್ತೇವೆ. ನಾವೇ ನಮಗೆ ಅಚ್ಚರಿಯ ಸಂಗತಿಯಾಗುತ್ತೇವೆ. ಯಾವ ಸಂದರ್ಭದಲ್ಲಿ ನನಗೆ ಏನಾಯಿತು? ಅದರ ಪರಿಣಾಮಗಳೇನು? ಆಗ ಏನು ತಿಂದಿದ್ದೆ? ಏನು ಅಂದಿದ್ದೆ? ಎಂದು ಪರಾಮರ್ಶಿಸಿಕೊಂಡರೆ ಅದು ಬೆಳವಣಿಗೆಗೆ ಪೂರಕವಾಗುತ್ತದೆ. ಜೀರ್ಣಿಸಿಕೊಳ್ಳಲು ಆಗದಿದ್ದರೆ ತಿನ್ನಬಾರದು; ಅಂದದ್ದರ ಬಗ್ಗೆ ಪಶ್ಚಾತ್ತಾಪ ಪಡುವಂತಾದರೆ ಅನ್ನಬಾರದು ಅಷ್ಟೇ. ಮಾತಾಡಬಾರದು; ಮಾತಾಡಿಕೊಳ್ಳುತಿರಬೇಕು. ಪ್ರಶ್ನಿಸಬಾರದು; ಪ್ರಶ್ನಿಸಿಕೊಳ್ಳುತ್ತಿರಬೇಕು ಎಂಬ ಪಂಥದವ ನಾನು. ಭಾವಕೂ ಜೀವಕೂ ಜಂಟಿ ಈ ಹೃದಯದ ಜೇನು. ಅರ್ಥಪೂರ್ಣ ಹಾಡೊಂದರ ಮೊದಲ ಸಾಲುಗಳಿವು: ‘ಜೀವ ವೀಣೆ ನೀಡು ಮಿಡಿತದ ಸಂಗೀತ; ಭಾವ ಗೀತೆ ಬಾಳಿನೊಲುಮೆಯ ಸಂಕೇತ……..’

-ಡಾ. ಹೆಚ್ ಎನ್ ಮಂಜುರಾಜ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x