ಆನಂದ್ ಗೋಪಾಲ್ ಅವರ ‘ಆಟಗಾಯಿ’ ಕಥಾ ಸಂಕಲನ ನನ್ನ ಕೈಸೇರಿ ಸುಮಾರು ದಿನಗಳಾದರು ಓದಲು ಆಗದೆ ತಡವಾಗಿ ನೆನ್ನೆ ಬಿಡುವು ಮಾಡಿಕೊಂಡು ಒಂದೇ ಗುಕ್ಕಿಗೆ ಓದಿ ಮುಗಿಸಿದೆ. ಇಲ್ಲಿನ ಹನ್ನೊಂದು ಕಥೆಗಳಲ್ಲಿ ಐದಾರು ಕಥೆಗಳು ನನ್ನನ್ನು ಇನ್ನಿಲ್ಲದಂತೆ ಕಾಡಿದವು ಎಂಬುದಕ್ಕೆ ಅವುಗಳಲ್ಲಿನ ವಿಭಿನ್ನ ನಿರೂಪಣೆಯ ಕಥಾಧಾಟಿ!
‘ಆಟಗಾಯಿ’ ಗ್ರಾಮ್ಯ ಸೊಗಡಿರುವ ಪದ. ಇದರ ಮೂಲ ಭಾಷಾ ನುಡಿಗಟ್ಟು ‘ಪಗಡೆ’! ನನ್ನ ಕಾದಂಬರಿಗೆ ನಾನಿಟ್ಟ ಮೊದಲ ಹೆಸರು ‘ಪಗಡೆ’. ಕಾದಂಬರಿಯ ವಸ್ತು ವಿಷಯ ಮಾಸಾಳಿಗ ಮಾದಿಗರ ಕುಟುಂಬವೊಂದರ ಕುಲಕಸುಬು, ಎಮ್ಮೆ ಕೊಂಬಿನಿಂದ ಪಗಡೆ ಕಾಯಿ ಮಾಡುವುದು. ಹಾಗಾಗಿ ‘ಪಗಡೆ’ ಸೂಕ್ತವೆನಿಸಿತ್ತು. ಆದರೆ ಕಾದಂಬರಿಯ ದಟ್ಟತೆ, ವೈಶಾಲ್ಯತೆ, ವಿವಿಧ ವೃತ್ತಿಪರ ಸಮುದಾಯಗಳ ಬದುಕಿನ ವಿವರವನ್ನು ಒಗ್ಗೂಡಿಸಿ ನೋಡಿದಾಗ ‘ಪಗಡೆ’ ಸೀಮಿತಾರ್ಥದಿಂದ ಧ್ವನಿಸುತ್ತಿತ್ತು. ಹಾಗಾಗಿ ನನ್ನ ಕಾದಂಬರಿಯ ಶೀರ್ಷಿಕೆ ‘ಪಗಡೆ’ ಹೋಗಿ ‘ಕಿಡಿ’ ಯಾಯ್ತು.
ಈಚೆಗೆ ಫೇಸ್ ಬುಕ್ ಪೇಜಲ್ಲಿ ಆನಂದ್ ಗೋಪಾಲ್ ಅವರ ‘ಆಟಗಾಯಿ’ ಕೃತಿ ಬಗ್ಗೆ ನೋಡಿದಾಗ ನನ್ನ ‘ಕಿಡಿ’ಕಾದಂಬರಿಯ ವಸ್ತು ವಿಷಯ ನೆನಪಾಯ್ತು. ಜೊತೆಗೆ ‘ಆಟಗಾಯಿ’ ಕೃತಿಯ ವಸ್ತು ವಿಷಯ ಏನಿರಬಹುದೆಂಬ ಕುತೂಹಲವು ನನ್ನಲ್ಲಿ ಹುಟ್ಟಿತು. ಈ ಕುತೂಹಲದಲ್ಲೆ ‘ಆಟಗಾಯಿ’ ಕೃತಿಯ ಪುಟ ತೆರೆದಾಗ ‘ಆಟಗಾಯಿ’ ಎಂಬ ಶೀರ್ಷಿಕೆ ಹೊತ್ತ ಕಥೆಯೇ ಇರದೆ ಇಲ್ಲಿರುವ ಒಟ್ಟು ಕಥೆಗಳಲ್ಲಿ ಬರುವ ಪಾತ್ರಗಳ ಜಂಜಾಟ, ಅವುಗಳು ಪಡುವ ಪಾಡು, ಇಲ್ಲಿನ ಪ್ರತಿ ಪಾತ್ರಗಳು ಕಟ್ಟಿಕೊಂಡು ಸಾಗುವ ಬದುಕಿನ ವಿವರಗಳು – ನೆಲಕ್ಕೆ ಬಿದ್ದ ಪಗಡೆಯ ಕಾಯಿಗಳ ಆಟದಂತೆ ಅವುಗಳ ದಿಕ್ಕುದೆಸೆಗಳು ಎಣಿಕೆಗೆ ಸಿಗಲಾರದಷ್ಟು ಸಂಕೀರ್ಣವಾಗಿ ನಿರೂಪಿತಗೊಂಡಿರುವುದು ನನ್ನ ಓದಿನ ಮಿತಿಗೆ ದಕ್ಕಿತು!
ಇಲ್ಲಿನ ಕಥೆಗಳ ‘ಋಣ’ ಏನೆಂದರೆ ‘ಭಾರ’ವಾಗಿರುವ ‘ಭಾವ’! ಅಂದರೆ, ಋಣ ಬಲಿತು ಭಾವ ತೀವ್ರವಾದಾಗ ಭಾರದಲ್ಲಿ ಹುಟ್ಟುವ ಸಂವೇದನೆ ವಿಶಿಷ್ಟ ರೂಪದ್ದು!
ನಾವಿಲ್ಲಿ ದಲಿತ ಸಂವೇದನೆ, ಸ್ತ್ರೀ ಸಂವೇದನೆ ಎಂಬುದನ್ನು ಪಕ್ಕಕ್ಕಿಟ್ಟು ಇಲ್ಲಿನ ಒಟ್ಟು ಕಥಾವಸ್ತುಗಳ ಆಳಕ್ಕಿಳಿದು ನೋಡಿದರೆ ಅವೆಲ್ಲವನ್ನು ಮೀರಿದಂಥ ಸೃಜನಶೀಲ ಸಂವೇದನೆ ಅನ್ನಬಹುದಾದಷ್ಟು ಸಂಕೀರ್ಣವಾದ ಸಂವೇದನಾಶೀಲ ಕಥಾ ಹಂದರ ಹದವಾಗಿ ನಿರೂಪಿಸಲ್ಪಟ್ಟಿದೆ. ಇಲ್ಲಿನ ಕಥೆಗಳ ವಸ್ತು ವಿಷಯ ಚಪಲತೆ, ಅನೈತಿಕತೆ, ಮುಖವಾಡ, ದಾರಿದ್ರ್ಯ, ಸೆಕ್ಸು, ಪ್ರೀತಿ, ಪ್ರೇಮ- ಕಾಮದೊಂದಿಗೆ ಬೆಸೆದುಕೊಂಡ ಜೀವ ಕಾರುಣ್ಯ!
ಹೆತ್ತವಳ ‘ಒಳಗನ್ನು’ ಹೇಳುವ ಸಮಸ್ಯಾತ್ಮಕ ಸನ್ನಿವೇಶಗಳು ಹೇಗೆ ತನ್ನ ರೂಪಗಳನ್ನು ತೋರ್ಪಡಿಸದೆಯೂ ವ್ಯಕ್ತಿಗತವಾಗಿ ಅಂತರಂಗದೊಳಗೆ ದುಮುಗುಡುವ ಭಾವಕೋಶದಲ್ಲಿ ಜೀವ ಪಡೆದು ಧ್ವನಿಸುವ ‘ರೂಪರೂಪಗಳನು ದಾಟಿ’ ನಾಲ್ಕು ಅಂಕಗಳಿಗೆ ಚಾಚಿಕೊಂಡು ತನ್ನ ವ್ಯಾಕುಲತೆಯನ್ನು ಹೊರ ಹಾಕುತ್ತದೆ. ಪಾತ್ರ ಪೋಷಣೆ ಪತ್ರಸಾರಗಳ ಕಥಾ ವಿಸೃತತೆಯೇ ಇದರ ಮೊದಲ ಸೊಗಸು; ಈ ಸೊಗಸು ಏಕರೂಪ ಸಾಮ್ಯತೆಯ ಧಾಟಿಯಲ್ಲಿ ನಿರೂಪಿತಗೊಂಡು ಬೆರಗು ಹುಟ್ಟಿಸುತ್ತದೆ.
‘ರಂಕುರಾಟ್ನ’ – ಪ್ಯಾಂಟ್ ರಾಮನ ಬದುಕಿನ ಚಿತ್ರವನ್ನು ತೆರೆದಿಡುತ್ತದೆ. ಇದರ ಪ್ರತಿ ಫ್ರೇಮ್ (ಸನ್ನಿವೇಶ) ಬ್ಲ್ಯಾಕ್ ಅಂಡ್ ವ್ಹೈಟ್ ಚಲನಚ್ಛಿತ್ರವೊಂದು ದೊಡ್ಡ ಪರದೆ ಮೇಲೆ ಮೂಡಿ ನೋಡುಗನನ್ನು ಸೆಳೆವ ರೀತಿಯಲ್ಲಿ ಬಿಳಿ ಹಾಳೆ ಮೇಲೆ ಗೀಚಿದ ಗೆರೆಗಳ ಕ್ಯಾನ್ವಾಸಿನಂತೆ ಚಿತ್ರಿತಗೊಂಡು ಓದುಗನ ಕಣ್ಮುಂದೆ ಸುಳಿದು ಬೆಚ್ಚಿ ಬೀಳಿಸುತ್ತದೆ. ಹಾಗೆ ಇಲ್ಲಿನ ಪ್ರತಿಪಾತ್ರಗಳು ಒಂದಕ್ಕೊಂದು ಒತ್ತರಿಸಿಕೊಂಡು ಕಥಾ ವಿವರಗಳು ವಿಭಿನ್ನ ಆಯಾಮ ಪಡೆಯುತ್ತ ತಲ್ಲಣದ ಅನುಭವ ಒದಸುವುದಲ್ಲದೆ ‘ಹೊಂದಿಕೊಂಡು ಹೋಗುವ’ ಮನಸ್ಥಿತಿಯಲ್ಲಿ ಅನೈತಿಕತೆಯನ್ನು ಪ್ರಶ್ನಿಸಲು, ಪ್ರತಿಭಟಿಸಲು ಆಗದ ಅಸ್ಸಹಾಯಕತೆಯಲ್ಲಿ ಎಲ್ಲವನ್ನು ಒಪ್ಪುವ ಪ್ರಧಾನ ಧ್ವನಿ ಮತ್ತು ಕಥಾ ನಿರೂಪಣಾ ಶೈಲಿ ದೇವನೂರ ಮಹಾದೇವ ಅವರ ‘ಮಾರಿಕೊಂಡವರು’ ಕಥೆಯನ್ನು ಭಾಗಶಃ ನೆನಪಿಗೆ ತರುತ್ತದೆ. ಇದಕ್ಕೆ ಪೂರಕವಾಗಿ ಸಮಾನ ಎಳೆ ಸಂತಾರಲ್ಲ ಅದು ‘ಬೇಬಿ’ ಯಲ್ಲಿನ ದ್ಯಾಮವ್ವಳ ನಡೆ, ಸಣ್ಣವೀರಪ್ಪನ ‘ಒಂದಾ..’ ಒದಗಿಸುವ ಗುಪ್ತತೆ ‘ಸಂಬಂಧ’ಗಳ ಲೆಕ್ಕದ ಜಮೆಯಲ್ಲಿ ಅರ್ಥಕ್ಕೆ ಸಿಗದ ನಮೂನೆಯ ನಗು ಕಥೆಗಾರನೊಬ್ಬನ ಸೃಜನಶೀಲ ಕಥನ ತಂತ್ರದ ಭಾಗವಾಗಿದೆ.
‘ಉಸುಬು’ ಶಿವರಾಮಕಾರಂತರ ‘ಅಳಿದ ಮೇಲೆ’ ಕಥೆಯ ರೂಪದ್ದಾಗಿದೆ. ಅಳಿದ ಮೇಲೆ ವ್ಯಕ್ತಿಯೊಬ್ಬನ ಆತ್ಮಕಥನದಂತಿದೆ. ಇಲ್ಲಿ ನಿರೂಪಕನೊಬ್ಬ ಸತ್ತವನ ಮೂಲ ಹುಡುಕುತ್ತಾ ಹೋಗುವ ಕಥೆಯದು. ಅದಕ್ಕೆ ಪುರಾವೆಯಾಗಿ ಆತ ಬಿಟ್ಟು ಹೋದ ಪತ್ರಗಳು, ಗೆರೆ ಎಳೆದು ಗೀಚಿದ ರೇಖಾಚಿತ್ರಗಳು. ಈ ಪುರಾವೆಗಳಿಡಿದು ಸಾಗುವ ಕಥೆ ನಿರೂಪಕನ ಆಸ್ಥೆಯೇ ಕುತೂಹಲಕಾರಿಯಾಗಿದೆ. ಅಂಥದ್ದೇ ಭಾಗಶಃ ಜಾಡಿನಲ್ಲಿ ನಿರೂಪಣೆಗೊಂಡಿರುವ ಆನಂದ್ ಗೋಪಾಲ್ ಅವರ ‘ಉಸುಬು’ ಕಥೆಯೊಳಗೂ ಒಬ್ಬ ನಿರೂಪಕನಿದ್ದಾನೆ. ಬಿಟ್ಟು ಹೋದವನ ಪುರಾವೆ ಇದೆ. ಇಲ್ಲಿನ ನಿರೂಪಕನಿಗೆ ಅಳಿದವನ ಬಗ್ಗೆ ತಿಳಿಯುವ ಕುತೂಹಲವಿರುತ್ತದೆ. ‘ಉಸುಬು’ ಎಂಬುದು ಅಳಿದವನು ಬರೆಯುತ್ತಿದ್ದ ಮ್ಯಾಗಝಿನ್ ಒಂದರ ದಾರಾವಾಹಿ. ಅದರ ಸಂಚಿಕೆಗಳ ಸಂಗ್ರಹದಲ್ಲಿ ಅವನಿಗೆ ಸಿಗುವ ಮಾಹಿತಿ ಪೂರಕವಾಗಿ ಅಳಿದವನ ಮಗಳೇ ಒದಗಿಸುವ ಪುರಾವೆ ಆ ಪುರಾವೆಯೊಳಗೆ ನಿರೂಪಗೊಂಡ ಕಥಾ ಹಂದರವು ಅಳಿದವನ ಬದುಕಿನ ಭಾಗವೇ ಎಂಬ ಕುತೂಹಲವು ಕುತೂಹಲವಾಗಿಯೇ ಉಳಿಯುತ್ತದೆ. ಈ ನಡುವೆ ಕಥೆಯೊಳಗೆ ಹಲವು ಪಾತ್ರಗಳು ಬಂದು ಹೋಗುತ್ತವೆ. ಸಂಬಂಧಗಳು ಬಿಗುಮಾನದಲ್ಲಿ ನಲುಗುತ್ತವೆ. ಅಳಿದವನ ತುಂಬು ವ್ಯಕ್ತಿತ್ವದೊಂದಿಗೆ ಅವನ ವೈಯಕ್ತಿಕ ದೌರ್ಬಲ್ಯಗಳೂ ಅನಾವರಣಗೊಳ್ಳುತ್ತವೆ. ಆದರು ಮಗಳಿಗೆ ತಂದೆಯ ಬಗ್ಗೆ ಅಪಾರತೆ, ಅಪರಿಮಿತತೆ! ಹಾಗು ನಿರೂಪಕನಿಗೆ ಪುರಾವೆ ಒದಗಿಸುವ ನೆಪದಲ್ಲೊಂದು ದೊಡ್ಡ ಆಸೆಯ ಮೂಟೆ. ವರ್ಚಸ್ವಿ ವೆಂಕಟರಾಂ ವೈಯಕ್ತಿಕ ಬದುಕಿನ ಗೌಪ್ಯತೆ, ಮಾಮಿಯ ಬಸಿರಿನ ಅಸ್ಪಷ್ಟತೆ, ಆ ಅಸ್ಪಷ್ಟತೆಯೇ ಸ್ಪಷ್ಟವೆಂದು ತಿಳಿದು ಮಾವನಲ್ಲಿ ಇಣುಕುವ ನವಿರುತನ, ಮಂದಾಕಿನಿಯ ಆಕರ್ಷಣೆ, ಒಳ ತುಮುಲ, ಮಾವನ ಮಾತಿಗೆ ಎದುರಾಡಲಾಗದ ನಿರೂಪಕನ ಅಸ್ಸಹಾಯಕತೆಯಲ್ಲಿ ಅಂತ್ಯ ಕಾಣುವ ‘ಉಸುಬು’ ತಾರ್ಕಿಕವಾಗಿ ನೀರಿನಲ್ಲಿ ಮೀನಿನ ಹೆಜ್ಜೆ ಗುರುತು ಕಾಣುವ ತವಕದಂತೆ ಓದುಗನ ಎದೆಯೊಳಗೇ ಆ ಹೆಜ್ಜೆ ಗುರುತುಗಳು ಮೂಡಿ ಆ ಹೆಜ್ಜೆ ಗುರುತನ್ನು ಸ್ಪರ್ಶಿಸಿ ವಿವರಿಸಲಾಗದ ಗುಟ್ಟೊಂದು ಉಳಿದು ಬಿಡುತ್ತದೆ. ಆ ಗುಟ್ಟು ಪಿ.ಲಂಕೇಶರ ‘ಒಂದು ಸಂಬಂಧದ ದಾಖಲೆ’ಯಂತಿದೆ. ಪಿ.ಲಂಕೇಶ್ ಈ ಕಥೆಯ ಹೆಣಿಗೆಯನ್ನು ಹೇಗೆ ನಿರೂಪಿಸುತ್ತಾರೆಂದರೆ ಕಥೆಯೊಳಗಿನ ಕಥಾ ನಾಯಕನು ದಾಖಲಿಸಿ ಬಿಟ್ಟು ಹೋದ ಪುಟಗಳನ್ನು ಆಧರಿಸಿರುತ್ತದೆ. ಈ ಕಥೆಯ ಕಥನ ತಂತ್ರವೂ ಬಿಟ್ಟು ಹೋದ ಪುಟಗಳಲ್ಲಿ ಇರಬಹುದಾದ ವಿಷಯದತ್ತಲೇ ಓದುಗನ ಚಿತ್ತ ಹರಿಯುವಂತಿರುವುದೆ. ಈ ಕಥೆ ಕೊನೆಗೆ ಪುಟಗಳೇ ಇಲ್ಲದಂತೆ ಕೊನೆಯಾಗುತ್ತದೆ. ಹಾಗೆ ‘ಉಸುಬು’ ಕಥೆ ‘ಅಳಿದ ಮೇಲೆ’ ‘ಒಂದು ಸಂಬಂಧದ ದಾಖಲೆ’ಯ ಕಥನತಂತ್ರದ ಎಲ್ಲ ಆಯಾಮಗಳನ್ನು ಒಗ್ಗೂಡಿಸಿಕೊಂಡಿರುವ ಒಂದು ಗಟ್ಟಿ ಕಥೆ.
‘ವ್ರಣ’ ಸಲೀಸಾಗಿ ಓದಿಸಿಕೊಳುವ ಕಥೆ. ಜೋಡಿ ಕೊಲೆಯ ಬಗ್ಗೆ ತನಿಖಾ ವರದಿ ಮಾಡಲು ಬಂದವನ ಮೂಲಕ ಕಥೆ ಬಿಚ್ಚಿಕೊಳ್ಳುತ್ತದೆ. ಈ ತನಿಖಾ ವರದಿಗಾರನಿಗೆ ಪ್ರಮುಖವಾಗಿ ಎರಡು ಪಾತ್ರಗಳು ಸಂದಿಸುತ್ತವೆ. ಇವೇ ಈ ಕಥೆಯನ್ನು ನಡೆಸುತ್ತ ಒಂದರೊಳಗೊಂದು ತಾಲೀಮು ನಡೆಸುತ್ತವೆ. ದೇವನೂರರ ‘ಕುಸುಮಬಾಲೆ’ ಯ ಕುಸುಮಳಿಗೆ ಮಾತೇ ಇಲ್ಲ. ಆದರೆ ಅವಳ ಸುತ್ತ ಒಂದು ಕಥೆ ಇದೆ. ಓದುಗನಿಗೆ ‘ಕುಸುಮ’ ದಕ್ಕುವ ರೀತಿಯೇ ಅಚ್ಚರಿ. ಅವಳು ಮಾತಾಡದೆಯೂ ಅವಳು ಅವಳ ಬಗ್ಗೆ ಹೇಳಿಕೊಳ್ಳದೆಯೂ ಕಾದಂಬರಿಯೊಳಗಿನ ಪಾತ್ರಗಳಿಗೆ ‘ಅವಳ ಮೂಲಕವೇ’ ಚಾಲನೆ ದೊರಕುತ್ತದೆ. ಆದರೆ ತಾಯಿ ಮಗಳ ಕೊಲೆಯ ಮಾತಿನಿಂದ ಆರಂಭವಾಗುವ ‘ವ್ರಣ’ ಕೊಲೆಯೇ ಕೇಂದ್ರವೇನೋ ಅನಿಸುವಾಗಲೆ ಅಲ್ಲಿಗೆ ಬರುವ ತನಿಖಾ ವರದಿಗಾರನೂ ಕಥಾ ಕೇಂದ್ರವಾಗುವಷ್ಟರ ಮಟ್ಟಿಗೆ ‘ವ್ರಣ’ ಕುತೂಹಲ ಉಳಿಸಿಕೊಳ್ಳುತ್ತ ಇನ್ನೊಂದು ಮಗ್ಗುಲಿಗೆ ಹೊರಳುತ್ತದೆ. ಕಥೆ ಪ್ರೇಮ ಕಾಮ ಜಾತಿ ನಡುವಣ ಸಂಬಂಧದೊಳಗೆ ಬೆಸೆದುಕೊಂಡಿರುವುದು ಸಾಧಾರಣ ಸಂಗತಿಯಾದರು ಬೇಸಿಕಲಿ ಕಥೆ ಚೌಕಟ್ಟು ಅದರಾಚೆಗೂ ಮೀರಿದ ಸತ್ಯವೊಂದನ್ನು ತೆರೆದಿಡುತ್ತದೆ. ಸಾಂಪ್ರದಾಯದ ಗೊಡ್ಡಿನಲ್ಲಿ ಮುಳುಗಿ ಜಾತಿಯೊಳಗೇ ಅಡ್ಡಾಡುವ ಮನಸ್ಸೊಂದು ಅದನ್ನೂ ಮೀರಿ ಹೊರ ಬರುವಲ್ಲಿ ಒಂದು ಪರಿವರ್ತನೆ ಮೊಳಕೆಯನ್ನಿಲ್ಲಿ ಕಾಣಬಹುದು. ಅಷ್ಟರ ಮಟ್ಟಿಗೆ ಆ ಪಾತ್ರದ ನಿರೂಪಣೆ ಕಥೆಗಾರನ ಜಾಣ್ಮೆಯಿಂದ ನೇಯಲ್ಪಟ್ಟಿದೆ. ಕಥೆಯಲ್ಲಿ ಎಲ್ಲೂ ಆ ಪಾತ್ರ ಪ್ರಧಾನವಾಗಿ ಕಾಣಿದಿದ್ದರು ತನಿಖಾ ವತದಿಗಾರನ ಎದುರು ಮಗಳು ವಿದ್ಯಾಲಕ್ಷ್ಮಿಯ ಮೂಲಕ ತೆರೆದುಕೊಳ್ಳುತ್ತದೆ. ಈ ಕೊಲೆಗಳ ನಿಗೂಢತೆ ಹೇಳುತ್ತ ಅವಳ ವೈಯಕ್ತಿಕ ವಿವರಗಳೂ ಕಾಣುತ್ತ ಈ ಮೂಲಕ ಆದ ಎದೆಯ ಮೇಲಿನ ಗಾಯದ ಗುರುತುಗಳು ನಿಚ್ಚಳವಾಗಿ ಗೋಚರಿಸಿ ದೇವನೂರರ ‘ಕುಸುಮಬಾಲೆ’ಯ ಕುಸುಮಳಂತೆ ‘ವ್ರಣ’ದ ಕೇಂದ್ರದಲ್ಲಿ ಕೇಂದ್ರವಾಗಿ ಅವಳು ಮತ್ತು ಅವಳ ಕಣ್ಣು ಎದೆಯ ಭಾಷೆಗಳು ಹೊರಡಿಸುವ ಸ್ಪೋರ್ಟಿವ್ ಆದಂಥಹ ಸೂಕ್ಷ್ಮ ಸಂವೇದನೆ ಭಿನ್ನ ಭಾಷ್ಯದವು.
ಮನುಷ್ಯ ಸಂಬಂಧಗಳನ್ನು ಅದರಲ್ಲು ರಕ್ತ ಸಂಬಂಧಗಳನ್ನು ಕಾದ ಸಲಾಕೆಗೆ ಅದ್ದಿ ನೋಡುವ ಕಥೆ ‘ದೀಪದ ಬುಡ’ ಮಾರ್ಮಿಕವಾಗಿದೆ.
ಇಲ್ಲಿ ಸಂಶೋಧನೆ, ಸಂಶೋಧಕ, ಪ್ರೊಫೆಸರ್, ವಿಶ್ವವಿದ್ಯಾನಿಯಗಳು, ಬೋಧಕ, ಬೋಧಕೇತರ ವಲಯದಲ್ಲಿ ಡಿಗ್ನಿಟಿಗಾಗಿ ‘ಡೀಲ್’ ಹೊಸದಲ್ಲ. ಅದರಲ್ಲು ಸಾಹಿತ್ಯದ ನೆಪದಲ್ಲಿ ಹಲವು ವಿಲೀನಗಳು ಯುನಿವರ್ಸಿಟಿ ಕ್ಯಾಂಪಸ್ ಅಂಗಳದಲ್ಲಿ ಮಾಮೂಲು. ಅದರಲ್ಲು ‘ಬೋಲ್ಡ್ ಹುಡುಗಿಯರ ವರ್ತನೆಗಳು’ ಕೆಲವು ಪ್ರೊಫೆಸರ್ ಗಳ ಎದೆಯಲ್ಲಿ ವಿಚಿತ್ರ ಕಲ್ಪನೆಗಳು ಚಿತ್ರಪಟಗಳು ಜೀವ ಪಡೆಯುತ್ತವೆ. ಇಲ್ಲಿ ಹುಡುಗಿಯೊಬ್ಬಳ ಸಾಹಿತ್ಯ ವಿಚಾರವಾಗಿ ಮೊದಲ ಭೇಟಿ ಮತ್ತು ಆಕಸ್ಮಿಕವಾಗಿ ಎದುರಾಗುವ ನಂತರದ ಸನ್ನಿವೇಶದ ಅದೇ ಹುಡುಗಿಯ ಜೊತೆಗಿನ ಸಂಬಂಧದ ಮೇಲೆ ಬೀರುವ ಗಾಢ ಪರಿಣಾಮದಲ್ಲಿ ವಿಚಲಿತವಾಗುವ ಮನಸ್ಸು ಕಾದ ಕಬ್ಬಿಣದ ಸಲಾಕೆಗೆ ಅದ್ದಿ ನೋಡುವ ಅನುಭವ ಜನ್ಯದ್ದು! ಹಾಗೆ ವ್ಯಕ್ತಿಯ ‘ವ್ಯಕ್ತಿತ್ವ’! ಈ ವ್ಯಕ್ತಿತ್ವದ ಪರೀಕ್ಷೆಯಲ್ಲಿ ಸಣ್ಣತನ ದೊಡ್ಡತನಗಳ ಅನಾವರಣವಾಗುವ ಪರಿ! ‘ದೀಪದ ಬುಡ’ ಯಾವತ್ತಿಗೂ ಕತ್ತಲೆ! ಆ ಸಂಬಂಧದ ಎಳೆ ಮನಸ್ಸು “ಭಯ ಪಡಬೇಡಿ ಚಿಕ್ಕಪ್ಪಾ, ನನಗೂ ಸಂಸಾರ ಇದೆ” ಎನುವಲ್ಲಿ ಬಲಿತ ಮನಸ್ಸಿನ ತಪ್ಪಿತಸ್ಥ ನಿಗೂಢ ಚಹರೆ ಹಾಗು ದೀಪದ ಬುಡದ ಕತ್ತಲೆಯಲ್ಲಿ ಅನಾವರಣವಾಗುವ ಸತ್ಯಗಳು ತೀವ್ರ ನಿಕಶಕ್ಕೆ ಒಳಪಡುತ್ತವೆ.
ಒಂದು ಕಥೆ ಕವಿತೆ ಕಾದಂಬರಿ ಅಥವ ಇನ್ಯಾವುದೇ ಸೃಜನಶೀಲ ಬರಹ ತಾನು ಹುಟ್ಟಿದ ಕಾಲದಿಂದ ಮುಂದಿನ ಎಲ್ಲ ತಲೆಮಾರುಗಳನ್ನು ತಾಕುತ್ತ ಏಕರೂಪವಾಗಿ ಧ್ವನಿಸಿ ಸ್ಪಂದಿಸಬೇಕು. ಇಲ್ಲಿನ ‘ಒಳತೋಟಿ’ ವರ್ತಮಾನದ ತಲ್ಲಣಗಳೊಂದಿಗೆ ಇದಿರಾಗುವ ಒಂದು ಚಿಕ್ಕ ಕಥೆ.
ನಿರೂಪಕನ ಅಣ್ಣನ ಸಾವಿನ ಸುದ್ದಿಯ ಬೆನ್ನೇರಿ ತೆರೆದುಕೊಳುವ ‘ಒಳತೋಟಿ’ ಈಗಲೂ ಗ್ರಾಮ ವ್ಯವಸ್ಥೆಯೊಳಗೆ ಬೇರೂರಿರುವ ಮೌಢ್ಯ ಮತ್ತು ಕಂದಾಚಾರ ತುಂಬಿರುವ ಶ್ರೇಣೀಕೃತ ಧರ್ಮ ಮತ್ತು ಜಾತಿ ವ್ಯವಸ್ಥೆಯೊಳಗೆ ಬೇರು ಬಿಟ್ಟ ಸಾಮಾಜಿಕ ಅನಿಷ್ಠಗಳನ್ನು ದಾಖಲಿಸುತ್ತದೆ. ಹಾಗೆ ಅನ್ಯಾಯದ ಪರಮಾವಧಿಯನ್ನು ಚಿತ್ರಿಸುತ್ತದೆ. ಮೇಲುಕೀಳಿನ ಕಂದಕವನ್ನು ವಿಶದಪಡಿಸುತ್ತದೆ.
ಒಂದು ಕಾಲದಲ್ಲಿ ತಾ ಮೇಲು ಎಂಬ ಗುಮ್ಮನೊಂದಿಗೆ ದಲಿತರಿಗೆ ಹಾಗೂ ಈಗಲೂ ಅಲ್ಲಲ್ಲಿ ಕಾಣ ಬರುವಂತೆ ಕ್ಷೌರಿಕ, ದಲಿತರಿಗೆ ಚೌರ ಮಾಡುವುದಿಲ್ಲ. ತಲೆ ಕೂದಲು ಕತ್ತರಿಸುವುದಿಲ್ಲ. ಅದೇನಿದ್ದರು ಮೇಲುವರ್ಗದವರಿಗೆ ಮಾತ್ರ ಎಂಬ ಅಘೋಷಿತ ನಿಲುವುಗಳು! ಅಂತ ಕ್ಷೌರಿಕ ಜಾತಿಯ ನರಸಯ್ಯ ಮತ್ತು ಆತನ ಮಗಳು ಶಕುಂತಳಿಗೆ ಊರ ನ್ಯಾಯ ಪಂಚಾಯ್ತಿ ಕೊಡುವ ತೀರ್ಪು, ತಳ ಸಮುದಾಯದೊಳಗೇ ಮಡುಗಟ್ಟಿದಂತಿರುವ ‘ಜಾತಿ’ ಒಂದು ಅಂಟು ಜಾಡ್ಯದಂತಿರುವುದನ್ನು ಒತ್ತಿ ಹೇಳುತ್ತದೆ. ಇದು ಬ್ರಾಹ್ಮಣ್ಯದ ಫಲಿತ ಗುಣದ ಮೊಳಕೆ ಶಕುಂತಲಾಳ ‘ಗರ್ಭ ಸಾಕ್ಷಿ’ ಇದ್ದರು ‘ಮೇಲಿನ ಹಲವು ಮನಸ್ಥಿತಿಗಳ ಹಿಕ್ಮತ್’ ಕ್ಷೌರಿಕ ನರಸಯ್ಯನ ಕರುಳ ಬಳ್ಳಿಯ ವಿರುದ್ದ ಗ್ರಾಮದ ಕುಲದೇವತೆ ದ್ರೌಪದಮ್ಮನ ಮುನಿಸಿನ ಮೌಢ್ಯದ ನೆಪದಲ್ಲಿ ಅನ್ಯಾಯದ ತೀರ್ಪು ನಿರೂಪಕನ ಎದೆಗೆ ತಾಕಿ ಕಳೆದ ತುಂಟ ದಿನಗಳತ್ತ ಚಿತ್ತವೃತ್ತವಾಗಿ ಮುಲುಕುತ್ತ ತೊಳಲಾಡುವ ‘ಒಳತೋಟಿ’ ವಿಚಿತ್ರ ಮತ್ತು ವಿಕ್ಷಿಪ್ತ! ಹಾಗು ಪರಿವರ್ತನೆಗೊಳ್ಳದ ವರ್ತಮಾನದ ಸಾಮಾಜಿಕ ವ್ಯವಸ್ಥೆಯ ಸ್ಥಿತಿಗತಿಯನ್ನು ಸಂಕ್ಷಿಪ್ತವಾಗಿ ಚರ್ಚಿಸುತ್ತದೆ.
ಮುಖವಾಡಗಳನ್ನು ತೆರೆದಿಡುವ ‘ಛದ್ಮ’ ದಲ್ಲಿ ‘ಕಳಕೊಂಡವರ’ ಒಳದನಿ ಇದೆ. ಅದಿಲ್ಲಿ ತೀರಾ ಗುಪ್ತವಾಗಿದೆ. ಕಿಚ್ಚು ಕಿಡಿ ಪ್ರೇಮ ಕಾಮದ ರೂಪದಲ್ಲಿದೆ. ಇಲ್ಲಿ ದಲಿತ ಯುವಕನೊಬ್ಬನ ಕೊಲೆಯೂ ಶಂಕಾಸ್ಪದ. ಇದರೊಟ್ಟಿಗೆ ತಳುಕು ಹಾಕಿಕೊಳ್ಳುವ ರಾಜಕೀಯ ಮತ್ತು ಸಾಮಾಜಿಕ ಹೋರಾಟದ ಮುಖವಾಡಗಳ ಸ್ಖಲಿತ ರೂಪಗಳು. ವೆಂಕಟರವಣ ಕುಲಕರ್ಣಿಯ ಎದೆಯೊಳಗೆ ಬೇಯುತ್ತಿದ್ದ ಬೇಗುದಿಯ ಅನಾವರಣ, ರಕ್ತಸಿಕ್ತವಾಗಿ ಸತ್ತ ಮಗನಿಗೆ ನ್ಯಾಯ ಕೊಡಿಸುವ ನಡೆಯ ಬದಲಿಗೆ ಕರಾಳ ಮುಖಗಳ ಎದುರು ಅಸ್ಸಹಾಯಕಳಾಗುವ ರುಕ್ಕವ್ವಳ ದೈನೇಸಿತನ, ಜಾತಿಯ ಲೇಪದೊಂದಿಗೆ ಮತಬ್ಯಾಂಕ್ ಲೆಕ್ಕಾಚಾರದಲ್ಲಿ ಕೊಲೆಗಡುತನವನ್ನು ಖಂಡಿಸದ ಶಾಸಕನ ಹಣದ ಲಾಲಸೆಯ ನಿಕೃಷ್ಟ ವರ್ತನೆ, ಪ್ರಾಮಾಣಿಕ ಅಪ್ರಮಾಣಿಕ ಗುಣಗಳ ಬೆನ್ನತ್ತುವ ಶೇಖರನ ಅಸಲೀತನದ ಮುಖವಾಡ ಕಳಚುವಲ್ಲಿ ಚಿತ್ತೂರಮ್ಮಳ ವಿಚಾರವಾಗಿ ಆತನ ತಂದೆಯ ಕಚ್ಚೆ ಹರಕುತನ ಹಿನ್ನೋಟದಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ಬಯಲುಗೊಳಿಸುವಲ್ಲಿ ‘ಒಳಗೇ ನೀವಿಸಿಕೊಂಡು’ ಬೆವರುವ ಪರಿ ಮತ್ತು ನಾಲ್ಕು ವರ್ಷದ ಮುಗ್ಧ ಕಂದ ಸೋನಿಯ ಮೂತ್ರ ವಿಸರ್ಜನೆ ಸಂದರ್ಭದ ಕಳ್ಳ ನೋಟದ ದೌರ್ಬಲ್ಯ ಹೀನತೆ ಆತನ ಆಳಕ್ಕು ಹೊಕ್ಕು ಮನಸಿಲ್ಲು ಕನಸಿನಲ್ಲು ಆವರಿಸುವ ‘ಛದ್ಮ’ದ ತರಹೇವಾರಿ ಕಥಾಪಾತ್ರಗಳ ವಿಷಮ ಮನಸ್ಥಿತಿಗಳನ್ನು ಹರಾಜು ಹಾಕಿದರೆ, ‘ನಾಲ್ವರು’- ಟೀಚರ್ ಗಳ ವೈಯಕ್ತಿಕ ಬದುಕಿನ ಚಿತ್ರವನ್ನು ಬರೆದಿಡುವ ಕಥೆ. ಇಲ್ಲಿ ಸಂಬಂಧಗಳು- ಅನೈತಿಕತೆ, ಪರಸ್ಪರ ಅಪನಂಬಿಕೆ, ಕೀಳರಿಮೆ, ಸಾಮಾಜಿಕ ಕಳಂಕದ ಅಳುಕಿನಲ್ಲಿ ನಲುಗಿ ತತ್ತರಿಸುತ್ತವೆ. ಇಲ್ಲಿ ಹೆಣ್ಣು ಗಂಡು ಎಂದು ಪ್ರತ್ಯೇಕಿಸಲಾರದಷ್ಟು ವೈಯಕ್ತಿಕ ತೆವಲುಗಳು, ಬಳಸಿ ಬಿಸಾಡುವ ನೀಚತನ, ಅನಾಯಾಸವಾಗಿ ದಕ್ಕುವ ಸುಖದ ಲಾಲಸೆ – ಇವು ಆಯಾ ಕಾಲಘಟ್ಟದ ಜೀವಪರ ಮೌಲ್ಯಗಳನ್ನೇ ಮೆಟ್ಟಿ ಬದುಕನ್ನೇ ಅಪಮೌಲ್ಯೀಕರಣಗೊಳಿಸಿಕೊಳುವ ಸ್ವಯಂಕೃತ ಅಪರಾಧಗಳು! ಈ ಎಲ್ಲವನ್ನು ವ್ಯಕ್ತಿ ನೆಲೆಯಲ್ಲಿ ಸೂಕ್ಷ್ಮವಾಗಿ ‘ನಾಲ್ವರು’ ಹಿಡಿದಿಟ್ಟಿದೆ.
‘ಅಕಾಲ ಹಣ್ಣು’ ಒಂದು ಒತ್ತಡದ ಕಥೆ! ತಾಂತ್ರಿಕವಾಗಿ ಹೊಸದೊಂದನ್ನು ಹೇಳುವ ತುಡಿತ! ತನ್ನ ಮಗ ಇಂಥದ್ದೇ ಓದಬೇಕು, ಹೀಗೇ ಆಗಬೇಕು, ತಗ್ಗಿಬಗ್ಗಿ ನಡೆಯಬೇಕು, ವ್ಯಸನ ಮುಕ್ತವಾಗಿರಬೇಕೆಂಬ ಸಂಪ್ರದಾಯ ಬದ್ಧ ಗುರುಕುಲ ಪದ್ಧತಿಯ ರೂಪದ ಸಂಕುಚಿತ ಮನಸ್ಥಿತಿಯಲ್ಲಿ ತನ್ನನ್ನು ತಾನು ಹೈರಾಣಾಗಿಸಿಕೊಳುವ ಕ್ರಿಯೆ; ಇಷ್ಟಾಗಿಯೂ ಕೇರ್ ಮಾಡದ ಬಂದುದನ್ನು ಬಂದ ಹಾಗೆ ಬದುಕನ್ನು ಎಂಜಾಯ್ ಮಾಡುವ, ತಂದೆಯ ಸಂಪ್ರದಾಯ ಬದ್ಧ ಬದುಕಿನ ಪಾಠವನ್ನು ಎದುರಾಡದೆಯೇ ಮೌನವಾಗಿ ತಿರಸ್ಕರಿಸಿ ಪ್ರಬುದ್ಧ ವೈಚಾರಿಕ ಜೀವನದ ತುಡಿತದಲ್ಲಿ ಆತ್ಮ ತೃಪ್ತಿ ಕಾಣುವ ಮಗ. ಈ ಎರಡು ಪಾತ್ರಗಳ ನಡುವೆ ವಕಾಲತ್ತು ವಹಿಸಿ ಎರಡು ಪಾತ್ರಗಳ ಗುಣ ಸ್ವಭಾವವನ್ನು ವಿವರಿಸುವ ಇನ್ನೊಂದು ಪಾತ್ರದ ನೇಯ್ಗೆ ಕಥೆಗಾರನ ಕಥನ ತಂತ್ರದ ಭಾಗವಾಗಿದೆ. ಈ ಕಥೆಯಲ್ಲಿ ಬರುವ ಮೂರು ಪ್ರಮುಖ ಪಸತ್ರಗಳು ಪ್ರೀತಿ, ಮೋಹ, ವೈರಾಗ್ಯ, ವ್ಯಥೆ, ಲವಲವಿಕೆ, ಜೀವನ ಪ್ರೀತಿಯನ್ನು ಒಟ್ಟಿಗೆ ಉಣಬಡಿಸುತ್ತದೆ. ಹಾಗೆ ಜಾಗತೀಕರಣದ ಹೆಜ್ಜೆ ಗುರುತುಗಳು ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ವಿಸ್ತೃತವಾದಂತೆಲ್ಲ ಭಾರತೀಯ ಭಾಷಾ ಶಿಕ್ಷಣ ಮತ್ತು ವ್ಯಕ್ತಿಗತ ಮನೋಸ್ಥಿತಿಯ ಸಾಕಷ್ಟು ಪರಿಣಾಮಗಳ ಬಲವಂತ ಹೇರಿಕೆಯ ಮಜಲುಗಳತ್ತ ಬೆಳಕು ಚೆಲ್ಲುತ್ತಲೆ ಮೂಲದಲ್ಲಿ ತಂದೆಯ ಸಂಪ್ರದಾಯ ನಡೆಗೆ ವಿರುದ್ದವಾಗಿ ಮಗನ ಬದಯಕಿನ ನಡೆಯ ಚಿತ್ರಣ ಬ್ರಾಹ್ಮಣ್ಯದ ಸಾಂಪ್ರದಾಯಿಕ ಬುಡಕ್ಕೆ ಕೈ ಹಾಕಿ ತಣ್ಣಗೆ ಪ್ರಶ್ನಿಸಿ ಎಚ್ಚರಿಸುವ ಮಹತ್ವದ ಕಥೆ.
ಆನಂದ್ ಗೋಪಾಲ್ ಅವರ ಕಥೆಗಳು ದೇವನೂರರ ಶೈಲಿ, ಲಂಕೇಶರ ಶೈಲಿ, ಅನಂತಮೂರ್ತಿ ಅವರ ಶೈಲಿ ಹೀಗೆ ಯಾವ ಶೈಲಿಗೂ/ ಅನುಕರಣೀಯವಾದುವಲ್ಲ ಎನ್ನುವುದು ಪ್ರತಿ ಕಥೆಗಳನ್ನು ಓದುವಾಗ ಗೋಚರಿಸುತ್ತದೆ. ಹೀಗೆ ಯಸರ ಶೈಲಿಗೂ ಸಿಗದ, ಅದು ಆನಂದ್ ಗೋಪಾಲ್ ಶೈಲಿ ಅನ್ನುವಷ್ಟರ ಮಟ್ಟಿಗೆ ಸೃಜನಶೀಲವಾದ/ ಹೊಸತನದಿಂದ ರಚಿತಗೊಂಡ ಕಥೆಗಳಾಗಿವೆ ಎಂಬುದನ್ನು ಯಾವ ತಕರಾರೂ ಇಲ್ಲದೆ ಸಮರ್ಥಿಸಿಕೊಳ್ಳಬಹುದು. ಹಾಗೆ ಇಲ್ಲಿನ ಒಂದೆರಡು ಕಥೆ ಹೊರತು ಪಡಿಸಿದರೆ ಉಳಿದವು ಉದ್ದದ/ ನೀಳ್ಗತಾ ಸ್ವರೂಪದವು. ಇಲ್ಲಿನ ಒಂದೊಂದು ಕಥೆಗಳು ಒಂದೊಂದು ಕಾದಂಬರಿಗಾಗುವಷ್ಟು ವಸ್ತುವೈವಿಧ್ಯೆವಿದೆ. ಇಷ್ಟಾಗಿಯೂ ಕಥೆಯ ಚೌಕಟ್ಟು ಮತ್ತು ಅದನ್ನು ಕಟ್ಟಿಕೊಟ್ಟಿರುವಲ್ಲಿನ ಗಂಭೀರತೆ, ಸ್ಪಷ್ಟತೆ, ಕಥೆಗಾರನ ಬಿಗಿ ನಿರೂಪಣೆಯಿಂದ ಇಲ್ಲಿನ ಕಥೆಗಳಿಗೆ ಗಟ್ಟಿತನ ಪ್ರಾಪ್ತವಾಗಿದೆ.
ಆನಂದ್ ಗೋಪಾಲ್ ಅವರ ಇಲ್ಲಿನ ಎಲ್ಲ ಕಥೆಗಳ ಕೇಂದ್ರ ಹೆಣ್ಣು. ಹೆಣ್ಣಿನ ಸುತ್ತಲೇ ಗಿರಕಿ ಹೊಡೆಯುವ ಕಥೆಗಳು ಮುಖ್ಯವಾಗಿ ಪ್ರಸ್ತಾಪಿಸುವುದು ಕೌಟುಂಬಿಕ ನೆಲೆಯಲ್ಲಿ ಅಥವಾ ಗಂಡಿನ ಸಂಗದಲ್ಲಿ ಆಕೆ ‘ಕಳಕೊಂಡ ಸಂಕಟ’ ವನ್ನು! ಎಲ್ಲಕ್ಕಿಂತ ಹೆಚ್ಚಾಗಿ ನಾನು ಮೇಲಿನ ಮೊದಲೆರಡು ಪ್ಯಾರಾದಲ್ಲೆ ಈಗಾಗಲೇ ಟಿಪ್ಪಣಿ ಕೊಟ್ಟು ಹೇಳಿರುವಂತೆ ಅನೈತಿಕ ಸಂಬಂಧದ/ ಪರಸ್ಪರ ಅನುಮಾನದ ನೆರಳಿನ ಮೇಲೇ ಕಥೆಗಳು ಕೇಂದ್ರೀಕರಿಸಿರುವುದು! ಜೊತೆಗೆ ಕೆಲ ಕಥಾ ನಿರೂಪಣಾ ಓಘ ಸಿನಿಮಾ ಸ್ಟೈಲಿನಲ್ಲಿವೆ. ಪಾತ್ರ ಮತ್ತು ಸನ್ನಿವೇಶಗಳು ಅಚಾನಕ್ ಸಂದಿಸುತ್ತವೆ. ಸನ್ನಿವೇಶ ಅದಕ್ಕೆ ಪೂರಕವೆಂಬಂತೆ ಕಥೆಯನ್ನು ಎಳೆದು ಅದಕ್ಕೆ ಸಮೀಪಿಸುವಂತೆ ಚಿತ್ರಿಸಿರುವುದು ಕಾಕತಾಳಿಯವೂ ಇರಬಹುದಾದ ಸಾಧ್ಯತೆ ಇದೆ. ಏಕೆಂದರೆ ಇಂಥ ಸನ್ನಿವೇಶದ ಕಥಾ ದೃಶ್ಯ ಬಿಳಿ ಪರದೆ ಮೇಲೆ ಚಲನಚಿತ್ರವೊಂದನ್ನು ನೋಡುವಂತೆ ಓದುಗನ ಚಿತ್ತ ಅದರತ್ತ ಕೊಂಡೊಯ್ದು ಪ್ರತ್ಯೇಕಿಸಿ ನೋಡುವಂತೆ ಮಾಡುತ್ತದೆ. ಈತರದ ನಿರೂಪಣೆ ಸಾಮಾನ್ಯವಾಗಿ ಜನಪ್ರಿಯ ಮಾದರಿಯದ್ದು ಎಂದು ಯಾರಿಗಾದರು ಅನಿಸದೆ ಇರದು. ಆದರೆ ಇದು ಕಥೆ ಕಟ್ಟಿರುವಲ್ಲಿನ ಸಣ್ಣ ಲೋಪ! ಈ ಲೋಪ ‘ದೀಪದ ಬುಡ’ದಲ್ಲಿ ತನ್ನ ಅಣ್ಷನ ಮಗಳ ಸಂದಿಸುವ ಸಂದರ್ಭ. ‘ಧರೆಗಿಳಿದ ನಕ್ಷತ್ರ’ ‘ನಾಲ್ವರು’ ‘ಅಕಾಲ ಹಣ್ಣು’ – ಹೀಗೆ ಇನ್ನು ಕೆಲ ಕಥೆಗಳು ಸಿನಿಮಾವೊಂದರಲ್ಲಿ ಅಚಾನಕ್ ಸಂದಿಸುವ, ಸ್ಪರ್ಶಿಸುವ, ಕಲ್ಪಿಸುವ, ಒಂದು ಪಾತ್ರ ಬರೆದ ಪತ್ರಗಳು ತಿಖಿಯಬೇಕಾದ ಕರಾರುವಾಕ್ ಪಾತ್ರದ ಕೈಗೆ ಸಿಗುವುದು ಆ ಮೂಲಕ ಕಥೆಯ ತಿರುವಿಗೆ ತಕ್ಕಂತೆ ಸನ್ನಿವೇಶಗಳನ್ನು ನೇಯ್ದಿರುವುದು!
ಹೀಗೆ ‘ಆಟಗಾಯಿ’ಯೊಳಗಿನ ಗುಣ ಅವಗುಣ ಪಕ್ಕಕ್ಕಿಟ್ಟು ತುಂಬಾ ಆಸ್ಥೆಯಿಂದ ಈ ಕಥೆಗಳನ್ನು ನೋಡುವುದಾರೆ ಗಂಭೀರವಾದ ನಿಪುಣ ನಿರೂಪಣೆಯ ರೂಪದ್ದು. ಹಾಗೆ ಕಲಾತ್ಮಕ ಅಂಶದೊಂದಿಗೆ ವರ್ತಮಾನದ ತಲ್ಲಣಗಳನ್ನು ತಾಕಿಕೊಂಡು ಮಿಸುಕಾಡುವ ಒಳಗುದಿ, ಅಂತರ್ ಬೇಗುದಿ, ನಿಕೃಷ್ಟ ಬದುಕಿನ ಅವಲೋಕನವಿದೆ. ಅಂತೆಯೆ ಪಗಡೆಯ ಪ್ರತಿ ಮನೆಯಲ್ಲಿ ‘ಆಟ’ ದ ಕಾಯಿಗಳಂತೆ ಪಾತ್ರಗಳು ತಮ್ಮ ‘ಇರುವಿಕೆ’ ಗಾಗಿ ಜಿಗಿದಾಡುವ ಪಡಿಪಾಟಲಿದೆ. ಈ ಪಡಿಪಾಟಲುಗಳು ಆಡಾಡುತಲೇ ಸೋಲು ಗೆಲುವುಗಳ ಲೆಕ್ಕಾಚಾರದಲ್ಲಿ ಮುಳುಗೇಳುತ್ತ ಸ್ವಯಂ ತಾವೇ ನೇಯ್ದ ಬಲೆಯೊಳಗೆ ಸಿಲುಕಿ ಆ ಬಲೆಯಿಂದ ಬಿಡಿಸಿಕೊಳುವ ಹಂಬಲಿಕೆಯಲ್ಲಿ ಧ್ಯಾನಸ್ಥ ಸ್ಥಿತಿಗೆ ಜಾರಿ ಒಳಗಣ್ಣಿಂದ ನೋಡುವ ಪರೀಕ್ಷಿತ ಗುಣ ರೂಪದ್ದು.
*
-ಎಂ.ಜವರಾಜ್
‘ಲೇಖಕರ ಪರಿಚಯ’
ಕ.ರಾ.ಮು.ವಿ.ವಿ.ಯಿಂದ ಇತಿಹಾಸದಲ್ಲಿ ಎಂ.ಎ. ಪದವೀಧರರಾದ ಎಂ.ಜವರಾಜ್ ಮೂಲತಃ ತಿರುಮಕೂಡಲು ನರಸೀಪುರದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಇವರು “ನವುಲೂರಮ್ಮನ ಕಥೆ” ಕಥಾಸಂಕಲನ(2009), “ಕಿಡಿ” ಕಾದಂಬರಿ (2013) ಪ್ರಕಟಿಸಿದ್ದಾರೆ. “ಮೆಟ್ಟು ಹೇಳಿದ ಕಥಾ ಪ್ರಸಂಗ” ದೀರ್ಘ ಕಥನಕಾವ್ಯ, “ಅವ್ವ ನನ್ಹೆತ್ತು ಮುದ್ದಾಡುವಾಗ” ಕವಿತೆಗಳ ಸಂಕಲನ ಹಾಗು ಒಂದು “ವಿಮರ್ಶಾ ಸಂಕಲನ” ಪ್ರಕಟಣೆಗೆ ಸಿದ್ದಗೊಂಡಿರುವ ಇವರ ಇತರ ಕೃತಿಗಳು.
..
ಆನಂದ್ ಗೋಪಾಲರ ಕೃತಿ ಆಟಗಾಯಿ ಬಗ್ಗೆ ಎಂ. ಜವರಾಜ್ ರ ವಿಮರ್ಶಾತ್ಮಕ ಬರಹ ಚೆನ್ನಾಗಿದೆ. ಕತೆಯ ಹಲವು ಸಂಕೀರ್ಣ ಮಗ್ಗಲುಗಳನ್ನು ಪರಿಚಯಿಸುತ್ತದೆ.
ಜವರಾಜ್ ಎಂ ಅವರು ಕ್ರಿಯಾಶೀಲ ಬರಹಗಾರರಾಗಿಯೂ ವಿಮರ್ಶೆ ಬರಹಗಾರರಾಗಿಯೂ ನೈಪುಣ್ಯ ಗಳಿಸುತ್ತಿರುವುದು ವಿಶೇಷ. ಪಂಜುವಿನಲ್ಲಿ ಅವರ ಬರಹಗಳನ್ನು ಓದುತ್ತಿದ್ದೇನೆ…..