ವಿಸ್ಮಯಭರಿತ ವಿರಾಟ ವಿಶ್ವ (ಭಾಗ 1): ನಾರಾಯಣ ಎಂ.ಎಸ್.

ನಿಮಗೆ ನೆನಪಿರಬಹುದೇನೋ? ಇಲ್ಲ, ಖಂಡಿತವಾಗಿಯೂ ನೆನಪಿದ್ದೇ ಇರುತ್ತದೆ. ಏಕೆಂದರೆ, ಬಾಲ್ಯದ ಉತ್ಕಟ ಅನುಭವಗಳ ನೆನಪು ಎಲ್ಲಕ್ಕಿಂತ ಸ್ಪಷ್ಟ ಮತ್ತು ನಿಚ್ಚಳವಾಗಿರುತ್ತದಂತೆ. ನಮ್ಮ ಕೈ ಸೋಕಿದೊಡನೆ ನಾಚಿ ಮುದುಡುವ ಆ ಮುಟ್ಟಿದರೆ ಮುನಿ ಗಿಡ, ಕತ್ತಲಲ್ಲಿ ಮಿಂಚುವ ಆ ಮಿಣಿಕೆ ಹುಳ, ಆ ಬಣ್ಣದ ಚಿತ್ತಾರದ ಪಾತರಗಿತ್ತಿ, ಪರಿಸರಕ್ಕೆ ತಕ್ಕಂತೆ ಬಣ್ಣ ಬದಲಿಸುವ ಆ ಊಸರವಳ್ಳಿ, ಕಾರ್ಮುಗಿಲಿನಲ್ಲಿ ಕಂಡ ಆ ಬೆಳ್ಳಿ ಮಿಂಚು ಮತ್ತು ಆಗಸದಲ್ಲಿನ ರಂಗು ರಂಗಾದ ಮಳೆಬಿಲ್ಲು ಇತ್ಯಾದಿಗಳನ್ನು ನಾವು ನಮ್ಮ ಬೆರಗು ಕಣ್ಗಳಿಂದ ಮನದಣಿಯೆ ನೋಡಿ ಆನಂದಿಸುತ್ತಿದ್ದ ಆ ಬಾಲ್ಯದ ದಿನಗಳು ನಿಮಗೆ ನೆನಪಿದೆಯಲ್ಲವೇ? ವಿಪರ್ಯಾಸವೆಂದರೆ, ಬಾಲ್ಯದಲ್ಲಿ ನಮ್ಮನ್ನು ಬೆರಗಿನಿಂದ ಮಂತ್ರಮುಗ್ಧರನ್ನಾಗಿಸಿದ ಅದೇ ಅದ್ಭುತಗಳು, ನಾವು ಬೆಳೆದು ಪ್ರೌಢರೆನಿಸಿಕೊಳ್ಳುವಷ್ಟರಲ್ಲಿ, ನಮ್ಮ ಗಮನಕ್ಕೇ ಬಾರದಂಥಾ ಸಾಮಾನ್ಯ ಸಂಗತಿಗಳೆನಿಸಿ ಬಿಡುತ್ತವೆ. ಹೆಚ್ಚಿನಂತೆ ಪ್ರೌಢಿಮೆಯೆನ್ನುವುದು ಅದೇಕೋ ನಮ್ಮ ಸಂವೇದನಾಶೀಲತೆಯನ್ನು ಜಡ್ಡುಗಟ್ಟಿಸಿಬಿಡುತ್ತದೆ. ಅಗಣಿತ ಜೀವರಾಶಿಗಳಿಗೆ ನೆಲೆಯಾಗಿರುವ ಈ ವಿಶಾಲ ವಿಶ್ವದಲ್ಲಿ ವಿಸ್ಮಯಗಳಿಗೇನೂ ಕೊರತೆಯಿಲ್ಲ. ಆದರೆ, ಅಂತಹ ವಿಸ್ಮಯಗಳನ್ನು ನೋಡುವ ಕಣ್ಗಳ, ನೋಡಿ ಆನಂದಿಸುವ ಮನಸ್ಸುಗಳ ಕೊರತೆಯಿರುವುದು ವಿಷಾದದ ಸಂಗತಿ. ತನ್ನ ಸುತ್ತಲ ನಿಸರ್ಗದಲ್ಲಿನ ವಿಸ್ಮಯಗಳಿಗೆ ಮಾನವನು ತೋರುವ ದಿವ್ಯ ಉಪೇಕ್ಷೆ, ಉದಾಸೀನತೆಯೂ ವಿಶ್ವದ ವಿಚಿತ್ರ ವಿಸ್ಮಯಗಳಲ್ಲೊಂದಿರಬೇಕು.

ನನ್ನ ಬಾಲ್ಯದಲ್ಲಿ ನಾವು ವರ್ಷಕ್ಕೊಮ್ಮೆಯೋ ಎರಡು ವರ್ಷಕ್ಕೊಮ್ಮೆಯೋ ಬೇಸಿಗೆ ರಜಕ್ಕೆ ಹಳ್ಳಿಯಲ್ಲಿದ್ದ ಅಜ್ಜನ ಮನೆಗೆ ಹೋಗುತ್ತಿದ್ದೆವು. ಆ ಕಾಲಕ್ಕೆ ಮಧ್ಯಮವರ್ಗದ ಜನ ಈಗಿನಂತೆ ಪದೇ ಪದೇ ಪ್ರವಾಸಗಳಿಗೆ ಹೋಗುವ  ಸಂಸ್ಕೃತಿ ಇರಲಿಲ್ಲ. ಹಾಗಾಗಿ ನಾವು ಈ ಅಪರೂಪದ ಅಜ್ಜನ ಮನೆಯ ಭೇಟಿಯನ್ನು ಬಹಳ ಸಡಗರದಿಂದಲೇ ಎದುರು ನೋಡುತ್ತಿದ್ದೆವು.  ಹಾಗೊಮ್ಮೆ ಹಳ್ಳಿಗೆ ಹೋಗಿದ್ದಾಗಿನ ಮಾತು, ನಮ್ಮ ಅಜ್ಜನ ಮನೆಯಲ್ಲಿ ಬಾತ್ ರೂಂ ಇರಲಿಲ್ಲ. ಆದ್ದರಿಂದ, ಅಜ್ಜನ ಮನೆಯ ಸಮೀಪದಲ್ಲಿಯೇ ಇದ್ದ ಕೊಳದಲ್ಲೇ ಎಲ್ಲರಿಗೂ ಸ್ನಾನ. ಅಜ್ಜನೊಂದಿಗೆ ಕೊಳಕ್ಕೆ ಸ್ನಾನಕ್ಕೆ ಹೋಗುವುದೆಂದರೆ ನನಗೆ ಎಲ್ಲಿಲ್ಲದ ಖುಷಿ. ಆ ದಿನಗಳಲ್ಲಿ ನಾನು ಏನೋ ಕಪಿಚೇಷ್ಟೆಮಾಡಲು ಹೋಗಿ, ಬಿದ್ದು ಮಾಡಿಕೊಂಡಿದ್ದ ತರಚುಗಾಯಗಳಿನ್ನೂ ಹಸಿಯಾಗೇ ಇದ್ದುವು. ಕೊಳಕ್ಕೆ ಹೋಗಿ ನೀರಿಗಿಳಿದೊಡನೆಯೇ, ಎಲ್ಲಿಯೋ ಇದ್ದ ನಾಲ್ಕೈದು ಚಿಕ್ಕ ಚಿಕ್ಕ ಮೀನುಗಳ ಗುಂಪೊಂದು ನನ್ನ ಹಸೀ ಗಾಯಗಳ ಮೇಲೆ ಹಠಾತ್ತನೆ ದಾಳಿಯಿಟ್ಟುಬಿಟ್ಟವು. ಕೊಳದಲ್ಲಿ ಸ್ನಾನ ಮಾಡಿ ಹೆಚ್ಚು ಅನುಭವವಿರದಿದ್ದ ನಾನು, ಆ ಮೀನುಗಳ ಅನಿರೀಕ್ಷಿತ ದಾಳಿಯಿಂದ ತುಂಬಾ ಹೆದರಿ ಅಳಲಾರಂಭಿಸಿದೆ. ಆಗ ಅಜ್ಜನು ಹತ್ತಿರ ಬಂದು ನನ್ನನ್ನು  ಸಂತೈಸುತ್ತಾ ಪ್ರೀತಿಯಿಂದ ಎತ್ತಿಕೊಂಡು, ‘ ಅದ್ಯಾಕ್ ಹಂಗಳ್ತೀ ಕಂದಾ, ಮೀನೇನ್ಮಾಡುತ್ತಪ್ಪಾ, ನಿಂಗೆ ಗಾಯ ಆಗಿದ್ಯಲ್ಲಾ ಅದಕ್ಹತ್ತಿರೋ ಕ್ರಿಮಿಗಿಮಿ ತಿಂದ್ಕೊಂಡ್ ಶುದ್ಧಾ ಮಾಡತ್ತಷ್ಟೇ ಕಣಪ್ಪಾ, ಅದ್ರಿಂದ ಮತ್ತೂ ನಿಂಗೊಳ್ಳೇದೇ ಅಲ್ವಾ, ಸೋಂಕೇನೂ ಆಗ್ದೆ ಗಾಯ ಬೇಗ್ವಾಸಿ ಆಗತ್ತೆ ಚಿನ್ನಾ’ ಎಂದು ರಮಿಸುತ್ತಾ ಅವರೇ ನನ್ನನ್ನು ಮತ್ತೆ ನೀರಿಗಿಳಿಸಿದರು. ಮೀನುಗಳು ಮತ್ತೆಬಂದು ನನ್ನ ಗಾಯಗಳಿಗೆ ಮುತ್ತಿಗೆ ಹಾಕಿ ಮೆಲ್ಲನೆ ಕಚ್ಚಲು ಶುರುಮಾಡಿದುವು. ಅದರಿಂದ ಒಂದು ರೀತಿಯ ‘ಚುಮು ಚುಮು’ ಎಂಬ ಅನುಭವವಾಗುವುದನ್ನು ಅನುಭವಿಸುತ್ತಾ ಕಣ್ಣೊರೆಸಿಕೊಂಡೆ. ಆದರೆ, ಆಗ ನನಗೆ ಆ ಮೀನುಗಳಿಗೆ ನನ್ನಿಂದ ಆಹಾರ ದೊರೆತದ್ದೂ, ಆ ಮೀನುಗಳಿಂದ ನನ್ನ ಗಾಯವು ಕ್ರಿಮಿರಹಿತವಾಗಿ ಗಾಯವು ಬೇಗ ಮಾಯಲು ಆನುಕೂಲವಾದದ್ದೂ, ಇವೆಲ್ಲವೂ ಸರಿಯಾಗಿ ಅರ್ಥವಾಗಿರಲಿಲ್ಲ. ಒಟ್ಟಿನಲ್ಲಿ ಅಂದು ನಾನು ನನಗರಿವಿಲ್ಲದೆಯೇ ಆ ಮೀನುಗಳೊಂದಿಗೆ  ಪಾಲುದಾರನಾಗಿ,  ಪರಸ್ಪರ ಲಾಭವಾಗುವಂತಹ, ವಿಸ್ಮಯಕಾರೀ ‘ಭಿನ್ನಜೀವಿಗಳ ನಡುವಿನ ಸಹಜೀವನ’ ಎಂಬ ಪ್ರಕ್ರಿಯೆಯಲ್ಲಿ ಅಂದರೆ, ಸಿಂಬಯೋಸಿಸ್ಸಿನಲ್ಲಿ ಭಾಗವಹಿಸಿಬಿಟ್ಟಿದ್ದೆ. 

ನಾವು ಅಜ್ಜನ ಹಳ್ಳಿಗೆ ಹೋಗುವಾಗ ಮತ್ತು ಹಿಂತಿರುಗುವಾಗ ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟಿಗಾಗಿ ಅಣ್ಣನೊಂದಿಗೆ ಜಗಳವಾಗುತ್ತಿದ್ದುದು ಸಾಮಾನ್ಯ. ಹಾಗೆ  ಜಗಳವಾಡಿ ಪಡೆದ ಸೀಟಿನಲ್ಲಿ ಕುಳಿತು, ಕಿಟಕಿಯಲ್ಲಿ  ಅದೆಷ್ಟೊ ಬಾರಿ ಬೆಳ್ಳಕ್ಕಿಗಳು ಹಸು, ಎತ್ತು, ಎಮ್ಮೆ ಇತ್ಯಾದಿಗಳ ಮೇಲೆ ಕುಳಿತು ಸವಾರಿ ಮಾಡುವುದನ್ನು ನೋಡುವಾಗ ಸೋಜಿಗವೆನಿಸುತ್ತಿತ್ತು. ಆದರೆ ಆ ವಯಸ್ಸಿನಲ್ಲಿ ನಮಗೆ ಆ ಬೆಳ್ಳಕ್ಕಿಯ ಎಮ್ಮೆ ಸವಾರಿಯೆಂಬುದು ಕೇವಲ ಒಂದು ಮೋಜಿನ ದೃಶ್ಯವಾಗಿತ್ತೇ ಹೊರತು, ಎಮ್ಮೆ ಹಾಗೂ ಬೆಳ್ಳಕ್ಕಿ ನಡುವಿನ ಸಿಂಬಯೋಟಿಕ್ ಸಂಬಂಧದ ಕುರಿತು ಕಿಂಚಿತ್ತೂ ಅರಿವಿರಲಿಲ್ಲ. ಆ ಸಂಬಂಧದಿಂದ ಎಮ್ಮೆ ಬೆಳ್ಳಕ್ಕಿಗಳೆರಡೂ ಉಪಕೃತರಾಗಿ, ಬೆಳ್ಳಕ್ಕಿಗೆ ಎಮ್ಮೆಯ ಮೇಲಿನ ಹೇನು, ಉಣ್ಣಿ ಇತ್ಯಾದಿ ಕ್ರಿಮಿಕೀಟಗಳ ಆಹಾರ ದೊರೆತರೆ, ಎಮ್ಮೆಗೆ ಈ ಪರಾವಲಂಬೀ ಕ್ರಿಮಿಗಳಿಂದಾಗುವ ಕಿರಿಕಿರಿಯಿಂದ ಮುಕ್ತಿ ದೊರೆಯುತ್ತದೆ ಎಂದು ನನಗೆ ತಿಳಿದು ಬಂದದ್ದು ಎಷ್ಟೋ ವರ್ಷಗಳ ನಂತರವಷ್ಟೆ. ಗಣಕ ಯಂತ್ರವಾಗಲೀ, ಅಂತರ್ಜಾಲವಾಗಲೀ ಇಲ್ಲದ ಆ ಕಾಲದಲ್ಲಿ ಈಗಿನ ಹಾಗೆ ಎಲ್ಲ ವಿಷಯಗಳ ಬಗೆಗಿನ ಮಾಹಿತಿಗಳು ಇಷ್ಟು ಸುಲಭವಾಗಿ ಲಭ್ಯವಾಗುತ್ತಿರಲಿಲ್ಲ.

 ಬೆಳ್ಳಕ್ಕಿ ಸವಾರಿ 

ಭಿನ್ನ ಜೀವಿಗಳ ನಡುವಿನ ಸಹಜೀವನದಬಗ್ಗೆ ನನಗೆ ಮೊದಮೊದಲು ಅರಿವುಂಟಾದಾಗ ನಾನು ಎಂಟನೆಯ ತರಗತಿಯಲ್ಲೋ ಒಂಭತ್ತರಲ್ಲೋ ಇದ್ದಿರಬೇಕು. ಆ ದಿನಗಳಲ್ಲಿ ‘ಸುಧಾ’ ವಾರಪತ್ರಿಕೆಯಲ್ಲಿ ‘ಅದ್ಭುತ ರಮ್ಯ’ ಎಂಬ ಪುಟ್ಟ ಅಂಕಣವೊಂದು ಪ್ರಕಟವಾಗುತ್ತಿತ್ತು. ಸಾಮಾನ್ಯವಾಗಿ ನಂಬಲಾರದ ಸೋಜಿಗದ ಸಂಗತಿಗಳ ಸಂಗ್ರಹಗಳಿರುತ್ತಿದ್ದ ಆ ಅಂಕಣ ನನಗೆ ಅಚ್ಚುಮೆಚ್ಚು. ಹೀಗಿರುವಾಗ ಒಮ್ಮೆ ಆ ಅಂಕಣದಲ್ಲಿ, ಮೊಸಳೆಯೊಂದರ ತೆರೆದ ಬಾಯಲ್ಲಿ ಪುಟ್ಟ ಹಕ್ಕಿಯೊಂದು ಕುಳಿತಿರುವ ಚಿತ್ರ ಪ್ರಕಟವಾಗಿತ್ತು. ಅದನ್ನು ನೋಡಿ ನನಗೆ ಮಹದಾಶ್ಚರ್ಯವಾಗಿ, ‘ಅರೆ, ಈ ಪುಟ್ಟ ಹಕ್ಕಿಗೆಷ್ಟು ಧೈರ್ಯ! ಮೊಸಳೆಯೇನಾದರೂ ಫಟ್ಟೆಂದು ಬಾಯಿ ಮುಚ್ಚಿಗಿಚ್ಚಿ ಬಿಟ್ಟರೆ ಹಕ್ಕಿಯ ಗತಿಯೇನಪ್ಪಾ?’, ಎಂದುಕೊಳ್ಳುತ್ತಾ ಕುತೂಹಲದಿಂದ ಚಿತ್ರದ ಕೆಳಗಿನ ಮಾಹಿತಿಯನ್ನು ಓದಲು ತೊಡಗಿದೆ. ಆ ಲೇಖನದಲ್ಲಿ, ಆಫ್ರಿಕಾದ ಕಾಡುಗಳಲ್ಲಿ ಮೊಸಳೆಯೂ ಮತ್ತು ಪ್ಲೋವರ್ ಎಂಬ ಒಂದು ಜಾತಿಯ ಹಕ್ಕಿಯೂ, ತಮ್ಮ  ನಡುವೆ ಸಹಜೀವನಾ ಸಂಬಂಧವನ್ನು ಹೊಂದಿರುವುದನ್ನು ಗುರುತಿಸಲಾಗಿದೆಯೆಂದು ಉಲ್ಲೇಖಿಸಿದ್ದರು. ಅದನ್ನು ವಿವರಿಸುತ್ತಾ, ಮೊಸಳೆಗಳು ಆಗಾಗ ತಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಬಯಸುವುದೆಂದೂ, ಅವು ಬಾಯಿ ತೆರೆದು ಕುಳಿತಾಗ, ಪ್ಲೋವರ್ ಹಕ್ಕಿಗಳು ಮೊಸಳೆಗಳ ಬಾಯನ್ನು ಪ್ರವೇಶಿಸಿ, ಅವುಗಳ ಹಲ್ಲಿನ ನಡುವೆ ಸಿಕ್ಕಿಕೊಂಡ ಮಾಂಸದ ತುಣುಕುಗಳನ್ನು ತಿಂದು ಸ್ವಚ್ಛಗೊಳಿಸುವುದೆಂದೂ ಬರೆದಿದ್ದರು. ಇಂತಹ ಭಿನ್ನಜೀವಿಗಳ ನಡುವಿನ ಪಾಲುಗಾರಿಕೆ, ಉಭಯ ಪಕ್ಷಗಳಿಗೂ ಲಾಭದಾಯಕವೆಂದೂ ತಿಳಿಸಿದ್ದರು. ಈ ಸಹಜೀವನಾ ಕ್ರಿಯೆಯಿಂದ ಮೊಸಳೆಗಳ ವಸಡು ಮತ್ತು ಹಲ್ಲುಗಳು ಸ್ವಚ್ಛವಾಗಿ ಹಲ್ಲುಗಳಿಗೆ ಸೋಂಕಾಗುವುದು ತಪ್ಪುವುದಾಗಿಯೂ, ಪ್ಲೋವರ್ ಹಕ್ಕಿಗಳಿಗೆ ಆಹಾರ ದೊರೆಯುವುದಾಗಿಯೂ ವಿವರಿಸಿದ್ದರು. ಈ ಲೇಖನವನ್ನೋದಿ ಅತ್ಯುತ್ತೇಜಿತನಾಗಿದ್ದ ನಾನು ಅದನ್ನು ಕಂಡಕಂಡವರಿಗೆ ತೋರಿಸಿಕೊಂಡು ಓಡಾಡಿದ್ದ ನೆನಪಿಂದು ನಗೆ ತರಿಸುತ್ತಿರುವುದು ಸುಳ್ಳಲ್ಲ.

ಪ್ಲೋವರ್ ಮತ್ತು ಮೊಸಳೆ 

ಹೆನ್ರಿಚ್ ಆನ್ತ್ಟನ್ ಡಿ ಬ್ಯಾರ್ರಿ ಎಂಬ ಜರ್ಮನ್ ವಿಜ್ಞಾನಿಯು ಎರಡು ಭಿನ್ನ ಜಾತಿಯ ಜೀವಿಗಳ ನಡುವಿನ ಪಾಲುಗಾರಿಕೆಯಿಂದ ಎರಡೂ ಜೀವಿಗಳೂ ಲಾಭ ಪಡೆಯುವ ಪ್ರಕ್ರಿಯೆಯನ್ನು ವಿವರಿಸುತ್ತಾ, ಮೊಟ್ಟಮೊದಲು ಕ್ರಿ.ಶ. ೧೮೭೯ರಲ್ಲಿ ‘ಸಿಂಬಯೋಸಿಸ್’ ಎಂಬ ಪದಪ್ರಯೋಗ ಮಾಡಿ, ಆ ಪದಕ್ಕೆ ‘ಭಿನ್ನಜೀವಿಗಳ ಸಹಜೀವನ’ ಎಂದು ವ್ಯಾಖ್ಯಾನ ಕೊಟ್ಟನು. ಸೃಷ್ಟಿಯಲ್ಲಿ ಭಿನ್ನಜೀವಿಗಳ ಸಹಜೀವನಕ್ಕೆ  ಬೆರಗು ಮೂಡಿಸುವಂಥಾ ಅಸಂಖ್ಯಾತ ಉದಾಹರಣೆಗಳು ದೊರೆಯುತ್ತವೆ. ಕೀನ್ಯಾ, ಉಗಾಂಡದ ಕಾಡುಗಳಲ್ಲಿ ವಾಸಿಸುವ ಒಂದು ಬಗೆಯ ಪಟ್ಟೆಯುಳ್ಳ ಮುಂಗುಸಿಯು ಕಾಡುಹಂದಿಗಳ ಮೈ ಮೇಲೆ ಗಂಟುಗಳಂತೆ ಏಳುವ ನರಹುಲಿಗಳನ್ನು ಕಿತ್ತು ತಿನ್ನುತ್ತದಂತೆ. ಇದರಿಂದ ಆ ಹಂದಿಗಳಿಗೆ ನರಹುಲಿ ಗಂಟುಗಳಿಂದ ಮುಕ್ತಿ ಸಿಕ್ಕರೆ, ಮುಂಗುಸಿಗೆ ಆಹಾರ ಸಿಕ್ಕಂತಾಗುತ್ತದೆ. ಭಾರತದಲ್ಲಿ ಎಲ್ಲೆಲ್ಲೂ ಕಾಣಸಿಗುವ ಬೆಳ್ಳಕ್ಕಿಗಳು ಕೇವಲ ಎಮ್ಮೆ, ಹಸು ಮಾತ್ರವಲ್ಲದೆ ಕುದುರೆ, ನೀರ್ಗುದುರೆ, ಕಾಡುಕೋಣ, ಒಂಟೆ, ಆನೆ ಇತ್ಯಾದಿಯಾಗಿ ಇನ್ನೂ ಅನೇಕ ಜೀವಿಗಳೊಂದಿಗೆ ಸಹಜೀವನ ನಡೆಸಿ, ಅವುಗಳ ಮೇಲೆ ಸವಾರಿ ಮಾಡುತ್ತಾ, ತಮ್ಮ ಅತಿಥೇಯರನ್ನು ಹೇನು, ಉಣ್ಣಿ ಮುಂತಾದ ಪರಾವಲಂಬೀ ಕ್ರಿಮಿಗಳಿಂದ ಮುಕ್ತಗೊಳಿಸಿ, ತಾನೂ ಆಹಾರ ಪಡೆಯುವುದನ್ನು ಕಾಣಬಹುದಾಗಿದೆ. ಪರಿಸರದಲ್ಲಿನ ಬದಲಾವಣೆಗಳಿಗೆ ಅತಿ ಸೂಕ್ಷ್ಮತೆಯಿಂದ ಜಾಗರೂಕವಾಗಿ ಸ್ಪಂದಿಸುವ ಬೆಳ್ಳಕ್ಕಿಗಳು, ಏನಾದರೂ ಅಪಾಯದ ಸೂಚನೆಗಳಿದ್ದಲ್ಲಿ, ಅದರ ಬಗ್ಗೆ ಸಂದೇಶಗಳನ್ನು ಕೊಡುವ ಮೂಲಕ ತಮ್ಮ ಅತಿಥೇಯ ಜೀವಿಗಳನ್ನು ಎಚ್ಚೆರಿಸಿ, ತಮಗೆ ಆಹಾರ ಒದಗಿಸಿದ್ದರ ಋಣಸಂದಾಯ ಮಾಡುತ್ತವೆ.

ವಿವಿಧ ಪ್ರಾಣಿಗಳ ಮೇಲೆ ಬೆಳ್ಳಕ್ಕಿಗಳು. 

ನಮ್ಮ ಬೆಳ್ಳಕ್ಕಿಗಳಿಗೆ ವಿದೇಶಗಳಲ್ಲಿ ಅನೇಕ ದಾಯಾದಿಗಳಿದ್ದಾರೆ. ಆ ಪಟ್ಟಿಯಲ್ಲಿ ಬರುವ ಟಿಕ್ ಬರ್ಡ್ ಎಂದು ಕರೆಯಲಾಗುವ ಹಕ್ಕಿಗಳು ಜಿರಾಫೆಗಳೊಂದಿಗೆ ಇದೇ ರೀತಿ ಸಹಜೀವನಾ ಸಂಬಂಧವನ್ನು ಹೊಂದಿವೆ. ಜಿರಾಫೆಗಳ ಮೇಲೆ ಸವಾರಿ ಮಾಡುತ್ತಾ ಅವುಗಳ ಮೇಲಿನ ಪರಾವಲಂಬೀ ಕ್ರಿಮಿಗಳನ್ನು ಆಹಾರವಾಗಿಸಿಕೊಳ್ಳುವ ಟಿಕ್ ಬರ್ಡ್, ಜಿರಾಫೆಗಳ ಬೇಟೆಗೆ ಬರುವ ಭಕ್ಷಕ ಪ್ರಾಣಿಗಳ ಸುಳಿವನ್ನು ದೂರದಿಂದಲೇ ಗುರುತಿಸಿ, ಜೋರಾಗಿ ಕೂಗಿ ಜಿರಾಫೆಗಳನ್ನು ಎಚ್ಚರಿಸಿ ಸಹಾಯ ಮಾಡುತ್ತವೆ.

ಜಿರಾಫೆ ಮೇಲೆ ಟಿಕ್ಬರ್ಡ್.

ಇಂಥದೇ ಜಾತಿಯ ಆಕ್ಸ್ ಪೆಕ್ಕರ್ ಹಕ್ಕಿಯು ಸಾಮಾನ್ಯವಾಗಿ ಆಫ್ರಿಕಾದ ಕಾಡುಗಳಲ್ಲಿ ಜ಼ೀಬ್ರಾಗಳ ಸವಾರಿ ಮಾಡುತ್ತಾ ಅದರ ಮೈ ಮೇಲಿನ ಕ್ರಿಮಿ ಕೀಟಗಳನ್ನು ತನ್ನ ಆಹಾರವಾಗಿಸಿಕೊಳ್ಳುತ್ತವೆ. ಈ ಹಕ್ಕಿಗಳು ಅಪಾಯದ ಸುಳಿವು ಕಂಡಾಗ ತಮ್ಮ ಎಚ್ಚರಿಕೆಯ ಚೀತ್ಕಾರದಂಥಾ ಕೂಗು ಹಾಕುವುದರ ಮೂಲಕ, ಪರಭಕ್ಷಕರಿಂದ ಜ಼ೀಬ್ರಾಗಳನ್ನು ರಕ್ಷಿಸುತ್ತವೆ.

ಜೀಬ್ರಾ – ಆಕ್ಸ್ ಪೆಕ್ಕರ್

ಉಷ್ಟ್ರಪಕ್ಷಿಗಳೊಂದಿಗೆ ಜೀಬ್ರಾಗಳು

ಆಕ್ಸ್ ಪೆಕ್ಕರ್ ಹಕ್ಕಿಗಳಲ್ಲದೇ, ಜ಼ೀಬ್ರಾಗಳು ಉಷ್ಟ್ರಪಕ್ಷಿಗಳೊಂದಿಗೂ ಸಹಜೀವನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದನ್ನು ಗುರುತಿಸಲಾಗಿದೆ. ಕಾಡುಗಳಲ್ಲಿ, ಜ಼ೀಬ್ರಾಗಳು ಸಾಮಾನ್ಯವಾಗಿ, ದೈತ್ಯಾಕಾರಾದ ಹಾರಲಾರದ ಉಷ್ಟ್ರಪಕ್ಷಿಗಳೊಂದಿಗೆ ವಿಹರಿಸುತ್ತಿರುವುದು ಕಾಣಸಿಗುತ್ತವೆ. ಇವುಗಳ ವಿಶೇಷ ಸ್ನೇಹಕ್ಕೆ ಕಾರಣವಿಷ್ಟೆ. ಉಷ್ಟ್ರಪಕ್ಷಿಗಳ ಶ್ರವಣಶಕ್ತಿ ಹಾಗೂ ವಾಸನೆ ಗ್ರಹಿಸುವ ಶಕ್ತಿ ತುಂಬಾ ಕ್ಷೀಣವಾಗಿದ್ದರೂ, ಅವುಗಳ ದೃಷ್ಟಿ ತುಂಬಾ ತೀಕ್ಷ್ಣವಾಗಿರುತ್ತದಂತೆ. ಆದರೆ ಒಳ್ಳೆಯ ಶ್ರವಣಶಕ್ತಿ ಹಾಗೂ ವಾಸನೆ ಗ್ರಹಿಸುವ ಶಕ್ತಿಯುಳ್ಳ ಜ಼ೀಬ್ರಾಗಳ ದೃಷ್ಟಿಯೇಕೋ ಮಂದವಂತೆ. ಕಾಡಿನ ಜೀವನದಲ್ಲಿ ಪ್ರತಿ ಕ್ಷಣದ ಅಳಿವು ಉಳಿವಿನ ಹೋರಾಟಕ್ಕೆ ದಕ್ಷ ಕಣ್ಣು, ಕಿವಿಗಳೊಂದಿಗೆ ಒಳ್ಳೆಯ ವಾಸನೆ ಗ್ರಹಿಸುವ ಶಕ್ತಿಯೂ ಅತ್ಯಗತ್ಯ.  ಈ ಎಲ್ಲ  ಸಾಮರ್ಥ್ಯಗಳನ್ನೂ ಸಹಜವಾಗಿ ಪಡೆಯದ ಈ ಎರಡೂ ಜೀವಿಗಳೂ, ಅರವತ್ತರ ದಶಕದ ಯಶಸ್ವೀ ಹಿಂದಿ ಸಿನಿಮಾ ‘ದೋಸ್ತಿ’ಯ ಕುರುಡಕುಂಟರ ಜೋಡಿಯಂತೆ ಯಾವಾಗಾಲೂ ಜೊತೆಯಾಗಿದ್ದು, ತನ್ಮೂಲಕ ತಮ್ಮ ತಮ್ಮ ವೈಯುಕ್ತಿಕ ನ್ಯೂನತೆಗಳನ್ನು ಮೀರುವುದು ಸೋಜಿಗವಲ್ಲವೇ? 

(ಮುಂದುವರೆಯುವುದು..)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

15 Comments
Oldest
Newest Most Voted
Inline Feedbacks
View all comments
muralidharan
muralidharan
10 years ago

Hi Nana good article, keep going, You started with childhood and diverted to the cleaning process in animal kingdom

narayana.M.S.
narayana.M.S.
10 years ago
Reply to  muralidharan

Thanks murali, But its no diversion rather its deliberate. 🙂

Vrajesh Kumar
Vrajesh Kumar
10 years ago

Hi Nana

A good article, good start, keep going  and keep me posted on the same.

narayana.M.S.
narayana.M.S.
10 years ago
Reply to  Vrajesh Kumar

sure,bijju.:)

Suman Desai
Suman Desai
10 years ago

Nisargada jeevigala chatuvatikegala vivarane bhal chand barediri…. ishta aatu.. mundina saranigalanna odalu kayuttiruve….

narayana.M.S.
narayana.M.S.
10 years ago
Reply to  Suman Desai

Thankyou so much sumanji.

 

Natesh
Natesh
10 years ago

Hey Naana !

the way you started off – i thought you will make me nostalgic about our childhood and chamundi hills and sterling theatre and so many many unforgettable simple joys that we all were a part of growing up in those amazing times of study and play and understanding life ahead…

i dont know if i have understood it yet !

i like your writing style… it has a distinct way of expressing your thoughts – to engage the reader imaginatively coming along with you… it has a flavour of innocence too !

am surprised at the Nat Geo channel being promoted here… !  jokes apart – its really a observant curious mind that we miss – to get closer to nature and watch its mysteries… and connect to our own nature too…

that was my inspiration reading your lovely article…

best wishes for your writings ahead…

🙂

narayana.M.S.
narayana.M.S.
10 years ago
Reply to  Natesh

Thanks a lot, natesh

Techa
Techa
10 years ago

Very well written Nana. Took me back to our days when we came once or twice a year to Mysore and once a yr to Kerala. You have captured the vismayas very nicely. The link between how we viewed these as kids and how we look at it today is very nice.

narayana.M.S.
narayana.M.S.
10 years ago
Reply to  Techa

Thanks techa.

Vindya Bopanna
Vindya Bopanna
10 years ago

Dear Sir,

Excellent article. The article is very naturalistic.  It kept me engrossed in nature till the end.  Am really delighted at your kannada article and sure that you will reach great heights.  Hope u pen many more of them.  God bless….

narayana.M.S.
narayana.M.S.
10 years ago

Thankyou madam

Ramanarasimha
Ramanarasimha
9 years ago

Nana  Your write up us interesting. I hope there is a writer in you.  Don't stop.  Keep writing.

Don't know what happened to PES MBA

Ramu Mysore

Ramanarasimha M L
Ramanarasimha M L
9 years ago

Dear Nana, 

Read your article Vismayabharitha Virat Viswa

I did't know there is a writer in you.  You have good control over the language.  With this level of language, you can think of creative writing.  Whatever one writes should not only be explanation of experiences, but it should affect others and make them think and look around and think.

All the best

 

Ramoo

15
0
Would love your thoughts, please comment.x
()
x