ನೀ ಬರುವ ದಾರಿ ತಿರುಗಾ ಮರುಗಾ!:ಹೃದಯಶಿವ ಅಂಕಣ


ಪ್ರೇಮಕವಿಯ ಪ್ರಸನ್ನ ಕಾವ್ಯ
 
ಏಳು ದಶಕಗಳ ಕಾಲ ಕಾವ್ಯಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಸಾಹಿತ್ಯ ಪ್ರಿಯರನ್ನು ಅಯಸ್ಕಾಂತದಂತೆ ಸೆಳೆದ ನವಿರುಕವಿ ಕೆ.ಎಸ್.ನರಸಿಂಹಸ್ವಾಮಿಯವರು ನಮ್ಮ  ನಡುವಿನ ಜೀವಂತ ಸೆಲೆ. ಇವರು ಜನಿಸಿದ್ದು ಮಂಡ್ಯ ಜಿಲ್ಲೆ ಯ ಕಿಕ್ಕೇರಿಯಲ್ಲಿ ೧೯೧೫ರ ಜನವರಿ ೨೬ ರಂದು, ನಿಧನರಾದದ್ದು ೨೦೦೩ರ ಡಿಸೆಂಬರ್ ೨೭ ರಂದು ಬೆಂಗಳೂರಿನಲ್ಲಿ.
ತಮ್ಮ ಸರಳ ಪದಗಳ ಮೂಲಕ ಪ್ರೀತಿಗೆ ಹೊಸ ವ್ಯಾಖ್ಯಾನ ಬರೆದು ಹೃದಯ ಹೃದಯಗಳ ನಡುವೆ ಸೇತುವೆಯಾದರು.  ವಾಸ್ತವದ ತಳಪಾಯದ ಮೇಲೆ ನಿಂತು ಕಲ್ಪನೆಯ ಬಾವುಟ ಹಾರಿಸಿದ ಖ್ಯಾತಿ ಇವರದು. ಮೈಸೂರು ಮಲ್ಲಿಗೆಯಿಂದ ಮನೆಮಾತಾದ ಕೆ.ಎಸ್.ನ. ಸಾಂಸಾರಿಕ ಬದುಕಿನ ಚಿತ್ರಣಕ್ಕೆ ಕನ್ನಡಿಯಾದರು.
 
ಶ್ರೀಮಂತ ಕವಿ, ಧೀಮಂತ ಕವಿ,ಸದಭಿರುಚಿಯ ಕವಿ,ಸೂಕ್ಷ್ಮ ಸಂವೇದನೆಯ ಕವಿ ಎಂದು ಏನೆಲ್ಲಾ ಬಿರುದುಗಳನ್ನು ನೀಡಿದರು ಕೆ.ಎಸ್.ನ.ಭಾಜನರಾಗುತ್ತಾರೆ. ಅವರೊಳಗಿನ ಮಗುವಿನಂತಹ ಮನಸು ಪ್ರೇಮದೇವತೆಯ ಜೋಗುಳ ಆಲಿಸುತ್ತಾ ನವನವೀನ ಪ್ರೇಮಗೀತೆಗಳಿಗೆ ನಾಂದಿ ಹಾಡುತ್ತದೆ. ಅಂದವರ ಬಾಯಿಗೆ ನಾನು ಬೇವಿನ ಚಕ್ಕೆ ಎನ್ನುವ ಮೂಲಕ ತಮ್ಮ ರಚನಾಶೈಲಿಯನ್ನು ಟೀಕಿಸಿದ ವಿಮರ್ಶಕರಿಗೆ ಕಾವ್ಯದಲ್ಲಿ ಉತ್ತರ ನೀಡುವ ಇವರ ಮನೋಧರ್ಮ ವಿಶೇಷವಾದದ್ದು. ಇಲ್ಲಿ ಗಮನಿಸಬೇಕಾದ ಮುಖ್ಯಾಂಶವೆಂದರೆ, ಅವರ ಬದುಕನ್ನು ಕಾವ್ಯ ಎಷ್ಟು ತೀವ್ರವಾಗಿ ಆವರಿಸಿಕೊಂಡಿತ್ತು ಎಂದು. ಯಾವ ಒಬ್ಬ ಕವಿ ತನ್ನ ನಿತ್ಯದ ಒಡನಾಟ, ಬಳಲಾಟ, ಪರದಾಟ,ಖುಷಿ, ದುಃಖ,ಕೋಪ,ಬೈಗುಳ,ಅಸಹನೆ,ಕಿರಿಕಿರಿ-ಹೀಗೆ ಎಲ್ಲವನ್ನು ತನ್ನ ಕಾವ್ಯದ ಮೂಲಕ ವ್ಯಕ್ತಪಡಿಸುತ್ತಾನೋ ಅವನು ಜನ್ಮತಃ ಕವಿಯಾಗಿರುತ್ತಾನೆ. ಜೀವನ ಕಲಿಸಿದ ಪಾಠಗಳನ್ನು ತಾನು ನೋಡಿದ, ಕೇಳಿದ, ಓದಿದ ಪ್ರಸಂಗಗಳು ತನ್ನ ಮನಸ್ಸಿನ ಮೇಲೆ ಬೀರಿದ ಪ್ರಭಾವವನ್ನು ಕಾವ್ಯವಾಗಿಸುವ ಯತ್ನದಲ್ಲಿ ತೊಡಗುತ್ತಾನೆ. ಇದಕ್ಕೊಂದು ನಿದರ್ಶನ ಕವಿ ಕೆ.ಎಸ್.ನರಸಿಂಹಸ್ವಾಮಿ.

 
ಮೈಸೂರುಮಲ್ಲಿಗೆ, ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ನವಪಲ್ಲವ, ದುಂಡು ಮಲ್ಲಿಗೆ, ನವಿಲದನಿ, ಮೌನದಲಿ ಮಾತ ಹುಡುಕುತ್ತಾ, ಸಂಜೆ ಹಾಡು,ಎದೆ ತುಂಬ ನಕ್ಷತ್ರ,ದೀಪಸಾಲಿನ ನಡುವೆ, ತೆರೆದ ಬಾಗಿಲು, ಮಾರಿಯಕಲ್ಲು, ಉಪವನ,ದಮಯಂತಿ, ಸಿರಿಮಲ್ಲಿಗೆ- ಹೀಗೆ ಹಲವು ರಸಪೂರ್ಣ ಕೃತಿಗಳನ್ನು ರಚಿಸಿ ತಮ್ಮೊಳಗಿನ ಅದ್ಭುತ ಪ್ರತಿಭೆಯನ್ನು ನಾಡಿಗೆಲ್ಲಾ ತೋರಿಸಿ ತಮ್ಮ ಸ್ವಂತಿಕೆ ಮೇರೆದಿದ್ದಾರೆ. ಜೊತೆಗೆ, ಮೀಡಿಯಾ, ರಾಬರ್ಟ್ ಬರ್ನ್ ಕವಿಯ ಕೆಲವು ಪ್ರೇಮಗೀತೆಗಳು,ಕೆಲವು ಚೀನಿ ಕವಿತೆಗಳು- ಇವರ ಅನುವಾದಿತ ಕೃತಿಗಳು.
 
ಒಬ್ಬ ಗಂಡನಾಗಿ, ಒಬ್ಬ ತಂದೆಯಾಗಿ,ಒಬ್ಬ ಪರಿಪೂರ್ಣ ಸಂಘಜೀವಿಯಾಗಿ ತಮ್ಮ ಜವಾಬ್ಧಾರಿಯನ್ನು ಸಮರ್ಥವಾಗಿ ನಿಭಾಯಿಸಿ ಮಾನವಸಂಕುಲದ ಪ್ರತಿನಿಧಿಯಾಗಿ ನಮ್ಮ ಮಧ್ಯೆ ಅಚ್ಚೆ ಮೂಡಿಸಿದ್ದಾರೆ. ಸಂಬಂಧಗಳ ಆಳಕ್ಕೆ ಇಳಿದು ಭಾವನೆಗಳ ಬೇರನ್ನು ಗಟ್ಟಿಯಾಗಿ ಜಗ್ಗಿ ಕೃತಿಯಾಗಿಸುವ ಮೂಲಕ ಕೆ.ಎಸ್.ನ. ಎಲ್ಲರಿಗೂ ಅಚ್ಚು ಮೆಚ್ಚು. ಇವರ ತೆರೆದ ಬಾಗಿಲು ಕವನ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿಯವರು ಗೌರವ ನೀಡಿ ಧನ್ಯರಾಗಿದ್ದಾರೆ. ಹಾಗೆಯೇ, ಇವರ ಸೇವೆಯನ್ನು ಮೆಚ್ಚಿ ಪಂಪಪ್ರಶಸ್ತಿ ಒದಗಿಬಂದಿದೆ. ಜೊತೆಗೆ ೧೯೯೧ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
 
ಇವರು ರಚಿಸಿದ ಬಹುತೇಕ ಭಾವಗೀತೆಗಳು ಕ್ಯಾಸೆಟ್,ಸಿಡಿಗಳಲ್ಲಿ ಹಾಡುಗಳಾಗುವ ಮುಖಾಂತರ ಕನ್ನಡನಾಡಿನ ಹಳ್ಳಿಹಳ್ಳಿಗಳಿಗೂ ಲಗ್ಗೆ ಹಾಕಿ ಜನಮನ್ನಣೆಗಳಿಸಿವೆ. ಸಿ.ಅಶ್ವತ್, ಮೈಸೂರು ಅಂನತಸ್ವಾಮಿರವರ ರಾಗಸಂಯೋಜನೆ, ಕಂಠಸಿರಿಯಲ್ಲಿ ಮೂಡಿಬಂದ ಇವರ ಗೀತೆಗಳಂತೂ ಸುಗಮ ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಠಿಸಿದ ವಿಚಾರ ಈಗ ಇತಿಹಾಸ.
 
ಕೆ.ಎಸ್.ನರಸಿಂಹಸ್ವಾಮಿರವರ 'ದೀಪದ ಮಲ್ಲಿ ಕವಿತಾ ಸಂಕಲನದ "ನೀ ಬರುವ ದಾರಿಯಲಿ "ಗೀತೆಯು ನಿರ್ದೇಶಕ ಎನ್.ಎಸ್.ಶಂಕರ್ ನಿರ್ದೇಶನದ ಉಲ್ಟಾ ಪಲ್ಟಾ ಚಿತ್ರದಲ್ಲಿ ವಿ.ಮನೋಹರ್ ಸಂಗೀತ ಸಂಯೋಜನೆಯೊಂದಿಗೆ ಎಸ್.ಪಿ.ಬಾಲಸುಬ್ರಮಣ್ಯಂ ಹಾಗೂ ಕೆ.ಎಸ್.ಚಿತ್ರಾರವರ ಗಾಯನದಲ್ಲಿ ಚಿತ್ರಗೀತೆಯಾಗಿದ್ದು ಸಂಗೀತ ಪ್ರಿಯರ ಪಾಲಿಗೆ ಸಂದ ಸೌಭಾಗ್ಯವೇ ಸರಿ. ಕೆ.ಎಸ್.ನ ಹೇಳುವಂತೆಯೇ ಚಿತ್ರ ಸಂಗೀತದ ಅಬ್ಬರದಲ್ಲಿ ಗೀತ ಸಾಹಿತ್ಯ ಮೂಲೆಗುಂಪಾಗುತ್ತದೆ ಎಂಬ ಮಾತನ್ನು ಹುಸಿಗೊಳಿಸಿ ವಿ.ಮನೋಹರ್ ಸಾಹಿತ್ಯಕ್ಕೆ ಮಹತ್ವ ನೀಡಿ ಸ್ವರ ಸಂಯೋಜನೆ ಮಾಡಿದ ಅಂಶ ಶ್ಲಾಘನೀಯ. 
 
ಕಾವ್ಯದ ಮೊರೆ ಹೋದ ಎನ್.ಎಸ್.ಶಂಕರ್
 
ಮೂಲತಃ ಲೇಖಕರಾಗಿರುವ ಚಿತ್ರ ನಿರ್ದೇಶಕ ಎನ್.ಎಸ್.ಶಂಕರ್‌ರವರು ತಾವು ನಿರ್ದೇಶಿಸಿದ್ದು ಕೆಲವೇ ಚಿತ್ರಗಳಾದರೂ ಗಮನೀಯ ಕ್ರೀಯಶೀಲರಾಗಿ ಕಾಣಿಸಿಕೊಳ್ಳುತ್ತಾರೆ. ಗಂಭೀರ ಕಥಾ ವಸ್ತುವಿಗೆ ಹಾಸ್ಯದ ಲೇಪ ಹೊದಿಸಿ
ಮನರಂಜನೆ ನೀಡುವ ಅವರ ಚಿತ್ರಕಥಾ ನಿರೂಪಣಾಶೈಲಿ ವಿಭಿನ್ನವಾದುದ್ದು. ಎಸ್.ಎಲ್. ಬೈರಪ್ಪನವರ ಆವರಣ ಕೃತಿಗೆ ತಮ್ಮದೇ ದೃಷ್ಟಿಕೋನದ ಮೂಲಕ ಅನಾವರಣಗೊಳಿಸಿ ಸಾಹಿತ್ಯವಲಯದಲ್ಲೂ ಚರ್ಚೆಗೆ ಆಹಾರವಾಗಿದ್ದರು. ಮಹತ್ವದ ಕೃತಿಗಳನ್ನೂ ಬರೆದವರು. ಪತ್ರಿಕಾ ಅಂಕಣಕಾರರು.
 
ತಮ್ಮ ನಿರ್ದೇಶನದ ಉಲ್ಟಾ ಪಲ್ಟಾ ಚಿತ್ರದಲ್ಲಿ ನಟ ರಮೇಶ್‌ಅರವಿಂದರ ಪ್ರತಿಭೆಯನ್ನು ಚೆನ್ನಾಗಿ ಬಳಸಿಕೊಂಡು ಕನ್ನಡ ಚಿತ್ರಪ್ರಿಯರಿಗೆ ನವೋಲ್ಲಾಸ ಒದಗಿಸಿಕೊಟ್ಟಿದ್ದಾರೆ. ಪ್ರತಿಭಾನ್ವಿತ ನಟ ಕಾಶಿಯವರೊಳಗಿನ ಹಾಸ್ಯಪ್ರಜ್ಞೆಯನ್ನು ಉತ್ತಮವಾಗಿ ಬಿಂಬಿಸಿದ್ದಾರೆ. ಒಂದೇ ರೂಪವುಳ್ಳ ಇಬ್ಬರು ವ್ಯಕ್ತಿಗಳಿಂದ ಉಂಟಾಗುವ ಗೊಂದಲ, ಕಥೆಯ ತಿರುವುಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಒಂದು ಸರಳ ಕತೆಯನ್ನು ಉತ್ತಮ ಚಿತ್ರಕತೆಯ ಮೂಲಕ ಎಷ್ಟು ಪರಿಣಾಮಕಾರಿಯಾಗಿ ಹೇಳಬಹುದೆಂದು ತೋರಿಸಿಕೊಟ್ಟ ಖ್ಯಾತಿ ಎನ್.ಎಸ್.ಶಂಕರ್ ಅವರಿಗೆ ಸಲ್ಲುತ್ತದೆ. ಪಾತ್ರಪೋಷಣೆಯ ವಿಚಾರದಲ್ಲಂತೂ ರಮೇಶ್ ಹಾಗೂ ಕಾಶಿಪರಸ್ಪರ ಪೈಪೋಟಿ ನೀಡಿದ್ದಾರೆ. ತಾವು ನಿರ್ವಯಿಸಬೇಕಾದ ಎರಡೂ ಪಾತ್ರಗಳಿಗೂ ಸಮಾನವಾದ ಜೀವ ತುಂಬಿದ್ದಾರೆ. ಯಾವುದೇ ಬಗೆ ಅಶ್ಲೀಲ ದೃಶ್ಯಗಳಾಗಲೀ, ಅವಾಚ್ಯ ಸಂಭಾಷಣೆಯಾಗಲೀ ಇಲ್ಲದ ಉಲ್ಟಾ ಪಲ್ಟಾ ಸಿನಿಮಾ ಒಂದು ಸದಭಿರುಚಿಯ ಚಿತ್ರ. ಇದರ ಗೌರವ ಎನ್.ಎಸ್.ಶಂಕರ್‌ರವರಿಗೆ ಸಂದಾಯವಾಗಬೇಕು. 
 
ಸಾಮಾನ್ಯವಾಗಿ ಹಾಸ್ಯಪ್ರಧಾನ ಚಿತ್ರಗಳಲ್ಲಿ ಹಾಡುಗಳು ಮೂಲೆಗುಂಪಾಗುತ್ತವೆ ಅರ್ಥಾತ್ ಹಾಡುಗಳ ಬಗ್ಗೆ ಪ್ರೇಕ್ಷಕ ಉತ್ಸಾಹ ತೋರುವುದಿಲ್ಲ. ಆದರೆ, ಶಂಕರ್‌ರವರು ಕಥೆಯ ಜೊತೆ ಜೊತೆಗೆ ಸಹಜವಾಗಿ ಹಾಡುಗಳು ಮೂಡಿಬರುವಂತೆ ನೋಡಿಕೊಂಡಿದ್ದಾರೆ. ಪ್ರೇಮಕಥೆಗಳಿಗೆ ಗೀತೆಗಳು ಅತ್ಯವಶ್ಯಕ. ಅಲ್ಲಿ ಸಂಗೀತ, ಸಾಹಿತ್ಯ ಪ್ರಧಾನವಾಗಿರುತ್ತದೆ. ಯಾವ ಚಿತ್ರದ ಹಾಡುಗಳು ಹಿಟ್ ಆಗುತ್ತವೋ ಆ ಚಿತ್ರ ಖಂಡಿತಾ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುತ್ತದೆ.ಅದರಲ್ಲೂ ಭಾರತೀಯ ಸಿನಿಮಾಗಳಲ್ಲಂತೂ ಹಾಡುಗಳು ಚಿತ್ರದ ಜೀವಾಳ ಹಾಗೂ ಬೆನ್ನೆಲುಬು. ಒಂದು ಹಾಸ್ಯಪ್ರಧಾನ ಚಿತ್ರಕ್ಕೂ ಗೀತೆಗಳ ಅವಶ್ಯಕತೆ ಎಷ್ಟಿರುತ್ತದೆಂದು ಉಲ್ಟಾ ಪಲ್ಟಾ ಸಿನಿಮಾ ತೋರಿಸಿಕೊಡುತ್ತದೆ.
 
ಮೊದಲೇ ಹೇಳಿದಂತೆ ನಿರ್ದೇಶಕ ಶಂಕರ್ ಅವರಿಗೆ ಸಾಹಿತ್ಯದ ಅಭಿರುಚಿ ಇದ್ದ ಕಾರಣದಿಂದಲೇ ಅವರು ಕೆ.ಎಸ್.ನರಸಿಂಹಸ್ವಾಮಿಯರವರ "ನೀ ಬರುವ ದಾರಿಯಲಿ" ಗೀತೆಯನ್ನು ತಮ್ಮ ಚಿತ್ರಕ್ಕೆ ಅಳವಡಿಸಿಕೊಂಡಿದ್ದಾರೆ. ಕವಿಗಳ ಗೀತೆಗಳು ಓದಿಕೊಳ್ಳುವಾಗಲೇ ಆನಂದ ನೀಡುತ್ತವೆ. ಅಂಥದ್ದರಲ್ಲಿ ಸಂಗೀತದೊಡನೆ ಚಿತ್ರವೊಂದರಲ್ಲಿ ಉತ್ತಮ ಗಾಯಕ ಗಾಯಕಿಯರ
ಕಂಠದಲ್ಲಿ ಕೇಳಿದರಂತೂ ಮುಗಿದೇ ಹೋಯಿತು. ಸಂಗೀತಪ್ರಿಯರ ನವಿರೇಳುವಂತೆ ಹಾಡು ಕಾಡುತ್ತದೆ. ಹಾಡಿನೊಳಗಿನ ಭಾವ ಕೇಳುವ ಜೀವದಾಳದಲ್ಲಿ ಜೋಮು ಹಿಡಿಸುತ್ತದೆ. ಆದರಲ್ಲೂ ಪ್ರೇಮ ಕವಿ ಕೆ.ಎಸ್.ನ.ಅವರ ಗೀತೆಯೊಂದನ್ನು ಚಿತ್ರ ಗೀತೆಯ ರೂಪದಲ್ಲಿ ಕೇಳುವ ಮಜವೇ ಬೇರೆ! ಇಂತಹ ಒಂದು ಸ್ಮರಣೀಯ ಕೈಂಕರ್ಯ ಕೈಗೊಂಡ ನಿರ್ದೇಶಕ ಎನ್.ಎಸ್. ಶಂಕರ್‌ರವರಿಗೆ ಅಭಿವಂದನೆ ಸಲ್ಲಿಸಲೇಬೇಕು. 
 
ಕೆ.ಎಸ್.ನ. ಕಂಡ ಕಾವ್ಯಾನುಭವ
 
ನವೋದಯ ಕಾಲಘಟ್ಟದಲ್ಲಿ ನವನಾವೀನ್ಯ ಕಾವ್ಯ ಬೇಸಾಯದಲ್ಲಿ ತೊಡಗಿಕೊಂಡು ಅವಿಸ್ಮರಣೀಯ ಕೃತಿಗಳನ್ನು ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ  ಕೆ.ಎಸ್.ನರಸಿಂಹಸ್ವಾಮಿಯವರ ಯೋಚನಾಲಹರಿ, ರಚನಾವೈಖರಿ ತೀರಾ ಹಸಿಹಸಿ ಅವರ ಭಾವ ಗೀತೆಗಳು ಕೇವಲ ಭಾವಗೀತೆಗಳು ಮಾತ್ರವಲ್ಲ ಬದಲಾಗಿ ಜೀವಗೀತೆಗಳು. 
 
ಇಲ್ಲಿ, ತಮ್ಮ "ನೀ ಬರುವ ದಾರಿಯಲಿ" ಗೀತೆಯಲ್ಲಿ ಗಂಭೀರವಾದ ಪ್ರೇಮದುತ್ತುಂಗದ ದರ್ಶನ ನೀಡುತ್ತಾರೆ. ತಮ್ಮ ಪ್ರೇಯಸಿ ಬರಲಿರುವ ದಾರಿಯಲಿ ಪ್ರಕೃತಿ ಹೇಗೆ ತನ್ನ ಕಾರ್ಯನಿರ್ವಹಿಸಬೇಕೆಂದು ತಮ್ಮದೇ ಶೈಲಿಯಲ್ಲಿ ಆರ್ದ್ರ ಹೃದಯದಲ್ಲಿ ಆಶಿಸುತ್ತಾರೆ. ಈ ಕವಿತೆಯ ಭಾವದಾಳಕ್ಕೆ ಇಳಿದಾಗ ಕೆ.ಎಸ್.ನ.ಅವರ ಹೃದಯ ಎಷ್ಟು ಕೋಮಲ ಅಂತ ತಿಳಿಯುತ್ತದೆ. 
 
ತನ್ನವಳು ಬರುವ ದಾರಿಯಲಿ ಸುಡುವ ಹಗಲೂ ಕೂಡ ತಂಪಾಗಬೇಕು, ಬೇಲಿಗಳ ಸಾಲಿನಲ್ಲಿ ಹಸಿರು ಕೆಂಪಾಗಬೇಕು, ಅವಳ ಪಯಣ ಮುಗಿಯುವ ತನಕ ಎಳೆಬಿಸಿಲ ಬಂಗಾರದಕಿರಣ ಸಾಲು ಮರಗಳ ಮೇಲೆ ಸೊಬಗನ್ನು ಸುರಿದಿರಲಿ ಎಂದು ವಿನಂತಿಸಿಕೊಳ್ಳುತ್ತಾರೆ. ಇಲ್ಲಿ, "ಹಸುರು ಕೆಂಪಾಗಿ" ಎಂಬ ಸಾಲಿನ ಪ್ರಯೋಗ ಕನ್ನಡ ಕಾವ್ಯಕ್ಕೆ ಹೊಸದು. ಹಸುರ ಗಿಡಗಳಲ್ಲಿ ಹೂ ಅರಳಲಿ ಎನ್ನುವ ಬದಲು "ಕೆಂಪಾಗಿ" ಎಂದು ತಮ್ಮದೇ ಆದ ವಿನೂತನ ಪ್ರಯೋಗ ಮಾಡುತ್ತಾರೆ ಕವಿ. 
 
ತನ್ನ ಪ್ರೇಯಸಿ ಬರುವ ದಾರಿಯಲ್ಲಿ ಹಕ್ಕಿಗಳು ಸದಾ ಹಾಡುತ್ತಿರಬೇಕು, ಆ ಬೆಳದಿಂಗಳ ನಿನಾದದಲ್ಲಿ ಚುಕ್ಕಿಗಳು ಮೂಡ ಬೇಕು,ತನ್ನವಳ ಕಣ್ಣ ಬಳಿ ಕನಸು ಹಬ್ಬಬೇಕು, ಹಾಗೆಯೇ, ಹತ್ತಾರು ಗಳಿಗೆಯಲಿ ಹಾದಿ ಹಾರಿರಲಿ! ಎಂದು ಕೋರುವ ಮುಖಾಂತರ ಯಾತ್ರೆ ಕೈಗೊಂಡ ಮನಸ್ಸಿಗೆ ಬೇಸರವಾಗದಂತೆ ದಾರಿಸಾಗಬೇಕು, ತನ್ನ ಹುಡುಗಿ ನಿರಾಯಾಸವಾಗಿ ನಡೆದು ಬರಬೇಕು ಎಂದು ಮನದುಂಬಿ ಬಯಸುತ್ತಾರೆ. ತನ್ನ ಗೆಳತಿ ಬರುವ ದಾರಿಯಲ್ಲಿ ವನದ ತಂಪಾದ ಗಾಳಿ ಸುಳಿಯಬೇಕು, ಸಂತೋಷದ ಸವಿಯುಂಡು ಮುಂಬರಲಿರುವ ಹರುಷಗಳು ಕರೆದು ಆನಂದ ಉಂಟುಮಾಡಲಿ. ಅಂತೆಯೇ, " ಪಯಣವೊ ,ನಿಲುಗಡೆಯೊ ನಿನರಿಯದಂತಿರಲಿ ! " ಎಂಬಸಾಲು ಅವರೊಳಗಿನ ಸೂಕ್ಷ್ಮಮನಸ್ವಿಯನ್ನು ತೋರಿಸುತ್ತದೆ. ಯಾವ ಯಾತ್ರೆ ಸುಖಕರವಾಗಿರುತ್ತದೋ ಅಲ್ಲಿ ಆಯಾಸ, ನಿತ್ರಾಣ, ಸುಸ್ತು, ಬೇಸರ ಸುಳಿಯುವುದಿಲ್ಲ ಅಂತಹ ಅಪರೂಪದ ಪಯಣ ತನ್ನವಳದಾಗಲಿ, ಅವಳ ಚೇತನ ಸದಾ ಉಲ್ಲಾಸದಿಂದಿರಲಿ ಎಂದು ಬಯಸುತ್ತಾರೆ. 
 
ಇಂತಹ ಒಂದು ಸುಂದರ ಗೀತೆಯನ್ನು ನಮಗಾಗಿ ನೀಡಿದ ಕೆ.ಎಸ್.ನ.ರವರಿಗೆ ಋಣಿಯಾಗಿರೋಣ. 


ನೀ ಬರುವ ದಾರಿಯಲಿ

 ನೀ ಬರುವ ದಾರಿಯಲಿ

ಹಗಲು ತಂಪಾಗಿ

ಬೇಲಿಗಳ ಸಾಲಿನಲಿ

ಹಸುರು ಕೆಂಪಾಗಿ

ಪಯಣ ಮುಗಿಯುವ ತನಕ

ಎಳೆಬಿಸಿಲ ಮಣಿ ಕನಕ

ಸಾಲುಮರಗಳ ಮೇಲೆ ಸೊಬಗ ಸುರಿದಿರಲಿ !

 

ನೀ ಬರುವ ದಾರಿಯಲಿ

ಹಕ್ಕಿಗಳ ಹಾಡಿ

ಬೆಳ್ದಿಂಗಳಿಂಪಿನಲಿ

ತಾರೆಗಳು ಮೂಡಿ

ಕನಸು ಹಬ್ಬಲಿ ನಿನ್ನ

ಕಣ್ಣಬಳಿ, ಚಿನ್ನ

ಹತ್ತಾರು ಗಳಿಗೆಯಲಿ ಹಾದಿ ಹಾರಿರಲಿ ! 

 

ನೀ ಬರುವ ದಾರಿಯಲಿ

ಬನದೆಲರು ಸುಳಿದು

ಸಂತಸದ ಇರುಳಿನಲಿ

ಆದುದನು ನುಡಿದು

ಮುಂದೆ ಕಾದಿಹ ನೂರು

ಹರುಷಗಳ ಕಣ್ತೆರೆದು

ಪಯಣವೋ ನಿಲುಗಡೆಯೊ ನೀನರಿಯದಂತಿರಲಿ !


ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
nagraj.harapanahalli
nagraj.harapanahalli
10 years ago

ಚೆನ್ನಾಗಿದೆ..ನರಸಿಂಹಸ್ವಾಮಿಗಳನ್ನ ನೆನಪಿಸಿದಕ್ಕೆ ಧನ್ಯವಾದ.

sharada.m
sharada.m
10 years ago

ಚೆನ್ನಾಗಿದೆ.

Santhoshkumar LM
10 years ago

Super Shiva!!

3
0
Would love your thoughts, please comment.x
()
x